ಹವಾಮಾನ ಬದಲಾವಣೆಯನ್ನು ನಿಯಂತ್ರಣಕ್ಕೆ ತರುವ ಕ್ಯೋಟೊ (Kyoto) ಒಪ್ಪಂದ ಜಗತ್ತಿನ ಗಮನವನ್ನು ವಿಶೇಷವಾಗಿ ಸೆಳೆದಿದೆ. ಆದರೆ ಒಪ್ಪಂದವಾದಂದಿನಿಂದ ಒಪ್ಪಂದ ಮಾಡಿದ ರಾಷ್ಟ್ರಗಳು ತಮ್ಮ ಕರ್ತವ್ಯವನ್ನು ಸರಿಯಾಗಿ ನಿರ್ವಹಣೆ ಮಾಡಿಲ್ಲವೆಂಬುದು ಒಂದು ದುರಂತ ಕಥೆ. ಕ್ಯೋಟೊ ಒಪ್ಪಂದ ಮಾಡಿದ ನಂತರ ಜಗತ್ತು ಮತ್ತಷ್ಟು ಹವಾಮಾನ ಅಸಮತೋಲನ ಅನುಭವಿಸಿದೆ. ಜಗತ್ತಿನ ಅರ್ಧ ಭಾಗದ ರಾಷ್ಟ್ರಗಳು ಮಾತ್ರ ಈ ಒಪ್ಪಂದದಲ್ಲಿ ಪಾಲುಗೊಂಡು ಭೀಕರ ಅನಿಲ ಮತ್ತು ವಾತಾವರಣದ ಮಲಿನದಿಂದ ಜಾಗತಿಕ ಶಾಖೋತ್ಪನ್ನ ಮತ್ತಷ್ಟು ಬಿಗಡಾಯಿಸಿದೆ. ಕೈಗಾರೀಕರಣದಲ್ಲಿ ಅತ್ಯಂತ ವೇಗದಿಂದ ಸಾಗುತ್ತಿರುವ ರಾಷ್ಟ್ರಗಳು ಕ್ಯೋಟೊ ಒಪ್ಪಂದದಿಂದ ನುಣುಚಿಕೊಳ್ಳಲು ಅನೇಕ ತಂತ್ರಗಾರಿಕೆಯಿಂದ ಪಲಾಯನ ಸೂತ್ರವನ್ನು ಅನುಸರಿಸುತ್ತಿದ್ದಾರೆ. ಆದುದರಿಂದಲೇ ಅಮೇರಿಕ, ಯುರೋಪ್ ರಾಷ್ಟ್ರಗಳು ಮತ್ತು ಜಪಾನ್ ಆರ್ಥಿಕ ಭಾರವನ್ನು ಹೊರಿಸುವ ಎಚ್ಚರಿಕೆಯ ಮಾತುಗಳು ಇಂದು ಕೇಳಿ ಬರುತ್ತಿವೆ. ಹೊರನೋಟಕ್ಕೆ ಉದಾರೀಕರಣ ಮತ್ತು ಆರ್ಥಿಕ ವಸಾಹತುಶಾಹಿ ಹೊಸ ಸಾಮ್ರಾಜ್ಯದ ಗರಿಷ್ಠ ಲಾಭವನ್ನು ಪಡೆಯಲಿಚ್ಛಿಸುವ ಹುಚ್ಚು ನಾಗಾಲೋಟ ಸ್ಪರ್ಧಾತ್ಮಕ ಸ್ಪರ್ಧೆಯಲ್ಲಿ ಮುಂದುವರಿದ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳು ಸೆಣಸಾಡುತ್ತಿರುವಾಗ ಜಾಗತಿಕ ಮಾಲಿನ್ಯದ ಕ್ಯಾನ್ಸರ್ ಪಿಡುಗು ಮಾನವ ಜನಾಂಗವನ್ನು ವಿನಾಶದ ಪ್ರಪಾತದತ್ತ ದಬ್ಬುತ್ತಿದೆ. ಅಲ್ಲಿ ಲಾಭಕೋರತನ ಸಂಪತ್ತಿನ ಬಾಚುವಿಕೆ ಮತ್ತು ನೈಸರ್ಗಿಕ ಸಂಪನ್ಮೂಲಗಳ ಅಧಿಕ ಶೋಷಣೆ ನಿರಂತರವಾಗಿ ಸಾಗುತ್ತಿದೆ.

ಯುರೋಪಿಯನ್ ಯೂನಿಯನ್ ಮತ್ತು ಅಮೆರಿಕದ ಆರ್ಥಿಕ ತಜ್ಞರು ಕ್ಯೋಟೊ ಒಪ್ಪಂದದ ಪರ‍್ಯಾಯವಾದ ಕೆಲವು ಉಪಾಯ ಮತ್ತು ಸೂಚನೆಗಳನ್ನು, ಅದರ ಪ್ರಕಾರ ಅಭಿವೃದ್ದಿಶೀಲ ರಾಷ್ಟ್ರಗಳು ಕ್ಯೋಟೊ ಒಪ್ಪಂದದ ಪರಿಧಿಯಲ್ಲಿ ಸೇರಿ ಅಮೇರಿಕ ಮತ್ತು ಯುರೋಪ್ ಒಮ್ಮತಕ್ಕೆ ಬಂದು ಅಭಿವೃದ್ದಿ ಅನುದಾನ ಪಡೆಯುವ ಆಶ್ವಾಸನೆ ನೀಡುತ್ತಿದ್ದಾರೆ. ಅಭಿವೃದ್ದಿ ಅನುದಾನ ಇದಕ್ಕೆ ಸರಿಯಾದ ಮಾರ್ಗೋಪಾಯವಲ್ಲ. ವೈಜ್ಞಾನಿಕವಾದ ಶಾಶ್ವತ ಪರಿಹಾರವನ್ನು ಕಂಡು ಗುರುತಿಸದ್ದಿರೆ ಪರಿಸ್ಥಿತಿ ಮತ್ತಷ್ಟು ಉಲ್ಬಣ ವಾಗುತ್ತದೆ. ಪ್ರಚಲಿತ ವಿದ್ಯಾಮಾನವೇ ಸಾಕ್ಷಿ. ಆದರೆ ಕ್ಯೋಟೊ ಒಪ್ಪಂದದ ಬಗ್ಗೆ ಜಾಗತಿಕವಾದ ಸಮಗ್ರನೀತಿ ಅಭಿವೃದ್ದಿ ಹೊಂದಿದ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳು ರೂಪಿಸದಿದ್ದರೆ ಈಗ ನಡೆಯುತ್ತಿರುವ ತಾತ್ಕಾಲಿಕ ವಿದ್ಯಮಾನಗಳ ಜಾಗತಿಕ ಹವಾಮಾನ ಎಚ್ಚರಿಕೆಗೆ ಸ್ಪಂದಿಸಲು ಸಾಧ್ಯವಾಗುವುದಿಲ್ಲ. ಇಂತಹ ಭಯಾನಕ ಸಮಸ್ಯೆಗೆ ಈಗ ಕಂಡು ಕೊಳ್ಳುವ ಉಪಾಯಗಳು ಮತ್ತು ಪರಿಹಾರಗಳು ಸಹಕಾರಿಯಾಗುವುದಿಲ್ಲ. ಅಮೇರಿಕದ ಅಧ್ಯಕ್ಷರಾದ ಜಾರ್ಜ್ ಬುಷ್ ಮತ್ತು ಅದರ ಉಪಾಧ್ಯಕ್ಷರಾದ ಡಿಕ್ ಚೆನಿಯವರು ಅಮೇರಿಕ ಇಂತಹ ಜಾಗತಿಕ ಹವಾಮಾನ ಉಲ್ಪಣಕ್ಕೆ ತನ್ನ ಕೊಡುಗೆಯೇನೂ ಇಲ್ಲವೆಂಬ ರೀತಿಯಲ್ಲಿ ವಾದಿಸುತ್ತಿದ್ದಾರೆ. ಬಹುಶಃ ಬುಷ್ ಆಡಳಿತ ಅವಧಿ ಅಂತ್ಯವಾಗದೆ ಜಾಗತಿಕ ಹವಾಮಾನ ನಿಯಂತ್ರಣ ಕ್ಷೇತ್ರದಲ್ಲಿ ಯಾವುದೇ ಪುರೋಗಾಮಿ ಕ್ರಿಯಾಶೀಲ ನೀತಿ ಅಮೇರಿಕದಿಂದ ಹೊರಬರುವುದು ಅಸಾಧ್ಯವಾಗಬಹುದು. ಅಮೇರಿಕದ ನೀತಿಯನ್ನೇ ಯುರೋಪಿಯನ್ ಯೂನಿಯನ್ ಅನುಸರಿಸುವುದರಲ್ಲಿ ಯಾವ ಅನುಮಾನ ಕೂಡ ಇಲ್ಲ. ಅಂದರೆ ೨೦೦೯ರವರೆಗೆ ಅಮೇರಿಕ ತನ್ನ ಧೋರಣೆಯಲ್ಲಿ ಬದಲಾವಣೆ ಮಾಡುವ ಸಾಧ್ಯತೆಯಿಲ್ಲ.

ಜಾಗತಿಕ ಹವಾಮಾನ ನಿಯಂತ್ರಣದ ಬಗ್ಗೆ ಎಲ್ಲಾ ರಾಷ್ಟ್ರಗಳು ತನ್ನ ನೀತಿಯನ್ನು ರೂಪಿಸುವಾಗ ಎರಡು ವಿಚಾರಗಳನ್ನು ವಿಶೇಷವಾಗಿ ಗಮನಿಸಬೇಕು. ೧. ಜಗತ್ತಿನ ಕೈಗಾರಿಕಾ ತಂಡ ಪರಿಸರ ಪ್ರೇಮಿ ನೀತಿಯನ್ನು ಅನುಸರಿಸುವ ಪರಿಪಾಠವನ್ನು ಸ್ವೀಕರಿಸಬೇಕಾಗಿದೆ. ಅತ್ಯಂತ ವೇಗವಾಗಿ ದಾಪುಗಾಲಿನಿಂದ ಪ್ರತಿಯೊಂದು ರಾಷ್ಟ್ರ ಅದರಲ್ಲಿಯೂ ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಜಾಗತಿಕ ಕೈಗಾರಿಕಾ ಪ್ರಭುಗಳು ಆಕ್ರಮಿಸುತ್ತಿರುವ ಈ ಕಾಲದಲ್ಲಿ ಶಿಕ್ಷಣ, ಆರೋಗ್ಯ ಮತ್ತು ಇನ್ನಿತರ ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ವಿಶೇಷ ಕಾಳಜಿವಹಿಸಬೇಕಾಗಿದೆ. ಚೀನಾ, ಭಾರತ, ಮೆಕ್ಸಿಕೋ, ಬ್ರೆಜಿಲ್ ಮತ್ತು ಇನ್ನಿತರ ಅಭಿವೃದ್ದಿ ಶೀಲ ರಾಷ್ಟ್ರಗಳು ಜಾಗತಿಕ ಕೈಗಾರಿಕಾ ಪ್ರಭುಗಳ ಧನದಾಹಿ ದವಡೆಯೊಳಗೆ ಸೇರದಂತೆ ವಿಶೇಷವಾದ ಎಚ್ಚರಿಕೆ ವಹಿಸಿಕೊಳ್ಳಬೇಕಾದ ಅವಶ್ಯಕತೆಯಿದೆ. ೨. ಕೈಗಾರಿಕೆಗಳು, ಪ್ರಮುಖ ವಾಗಿ ವಿದ್ಯುತ್ ಕ್ಷೇತ್ರದಲ್ಲಿ ಬಂಡವಾಳ ಹೂಡುವಾಗ ಹೊಸ ತಂತ್ರಗಾರಿಕೆಯ ಮೂಲಕ ಕಾರ್ಬನ್ ಅನಿಲದಿಂದ ವಾತಾವರಣ ಮಲಿನಗೊಳಿಸದ ರೀತಿಯಲ್ಲಿ ವಿಶೇಷ ಎಚ್ಚರಿಕೆ ವಹಿಸಬೇಕಾಗಿದೆ. ಈ ಬಗ್ಗೆ ವಿಶೇಷ ಸಂಶೋಧನೆ ಮತ್ತು ಅದಕ್ಕೆ ಪೂರಕವಾದ ಪ್ರಯೋಗ ಶೀಲತೆಯ ಅಗತ್ಯವಿದೆ. ಈ ಬಗ್ಗೆ ಬೇಕಾದ ಅಪಾರವಾದ ಧನಸಹಾಯ ಅಭಿವೃದ್ದಿಶೀಲ ರಾಷ್ಟ್ರಗಳಿಗೆ ಮುಂದುವರಿದ ರಾಷ್ಟ್ರಗಳಿಂದ ಹರಿದು ಬರಬೇಕಾಗಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆ ಕೂಡ ತನ್ನ ಪಾತ್ರವನ್ನು ಸಮರ್ಪಕವಾಗಿ ನಿರ್ವಹಿಸುವುದು ಅನಿವಾರ‍್ಯವಾಗಿದೆ. ಗ್ಲೋಬಲ್ ವಾರ‍್ಮಿಂಗ್ ಫಂಡ್(Global Warming Fund)ನ್ನು ನಿರ್ಮಿಸಿ ಸಮರೋಪಾದಿ ಯಲ್ಲಿ ಸವಾಲನ್ನು ಎದುರಿಸಬೇಕಾಗಿದೆ.

ವಿಜ್ಞಾನಿಗಳ ಅಂದಾಜು ಪ್ರಕಾರ ಈಗಿನ ದಾಮಾಶಯದಲ್ಲಿ ಆಗುತ್ತಿರುವ ಅನಿಲ ಪ್ರಸರಣದಿಂದ ೨೦೧೨ರ ನಂತರ ಕ್ಯೋಟೊ ಒಪ್ಪಂದ ಸಂಪೂರ್ಣ ಅಪ್ರಸ್ತುತವಾಗಲಿದೆ. ಅಭಿವೃದ್ದಿಶೀಲ ರಾಷ್ಟ್ರಗಳ ಮೊದಲ ಪಂಕ್ತಿಯಲ್ಲಿರುವ ಚೈನಾ, ಅನಿಲ ಮಾಲಿನ್ಯದಲ್ಲಿ ಜಗತ್ತಿನಲ್ಲಿ ಅಮೇರಿಕ ಬಿಟ್ಟರೆ ೨ನೇ ಸ್ಥಾನದಲ್ಲಿದೆ. ಅನಿಲ ಮಾಲಿನ್ಯ ತಡೆಯ ಕ್ರಮಗಳು ಪರಿಸರ ರಕ್ಷಣೆಗೆ ಪರಿಣಾಮಕಾರಿಯೂ, ಆರ್ಥಿಕವಾಗಿ ಸಾಧು ನ್ಯಾಯಯುತವೂ, ಮೌಲ್ಯಮಾಪನಕ್ಕೆ ಸಾಧ್ಯವೂ ಆಗಿರುವಂತಿರಬೇಕು. ಆದರೆ ಕಾರ್ಬನ್ ವಹಿವಾಟು ಪಾರದರ್ಶಕ ಮತ್ತು ಸುಲಭವಾಗಿರಬೇಕು. ಆದರೆ ಅಮೇರಿಕ ಇಂತಹ ತಡೆಗಳ ಕ್ರಮಗಳು ಆರ್ಥಿಕವಾಗಿ ಅಸಾಧ್ಯವೆಂದು ವಾದಿಸುತ್ತಿದೆ. ಇದೊಂದು ಬೀಜ-ವೃಕ್ಷ ನ್ಯಾಯದಂತೆ ಬಗೆಹರಿಯಲಾರದ ಸಮಸ್ಯೆಯಾಗಿದೆ. ಕೆನಡಾದ ಅನಿಲ ಪ್ರಕರಣ ೯೦ರ ದಶಕದಲ್ಲಿ ಶೇಕಡ ೬ರಷ್ಟು ಇದ್ದರೆ ಈಗ ಶೇಕಡ ೨೦ಕ್ಕೆ ಏರಿದೆ. ಡಿಸೆಂಬರ್ ೧೩ಕ್ಕೆ ಮಾಂಟ್ರಿಯಲ್‌ನಲ್ಲಿ ನಡೆಯುವ ಕ್ಯೋಟೊ ಒಪ್ಪಂದದ ವಿಶ್ವರಾಷ್ಟ್ರಗಳ ಸಚಿವರ ಶಿಖರ ಸಮ್ಮೇಳನದಲ್ಲಿ ಕೆನಡಾದ ಸಂಯುಕ್ತರಾಷ್ಟ್ರ ಸಂಸ್ಥೆಯ ಉನ್ನತ ಸಮ್ಮೇಳನದ ಪ್ರಸ್ತಾವನೆಗೆ ಅಮೇರಿಕ ಈಗಾಗಲೇ ತಣ್ಣೀರೆರಚಿದೆ. ಮುಂದೆ ಬರುವ ದಿವಸಗಳಲ್ಲಿ ಏನಾಗುವುದೋ ಕಾದು ನೋಡೋಣ.

ಜಗತ್ತು ಹವಾಮಾನ ನಿಯಂತ್ರಣದ ಮಾನವತೆಗೆ ಪೂರಕವಾದ ವಿಚಾರದಲ್ಲಿ ಕ್ರಿಯಾಶೀಲ ವಾಗಿ ವರ್ತಿಸಬೇಕಾಗಿದೆ. ಇಂದು ಧಾಳಿಯಿಡುತ್ತಿರುವ ಸುನಾಮಿ, ಪ್ರವಾಹ ಮತ್ತು ಇನ್ನಿತರ ನೈಸರ್ಗಿಕ ಅನಾಹುತಗಳು ಹವಾಮಾನದ ಅರಾಜಕತೆಯ ಸ್ಪಷ್ಟ ಸೂಚನೆಗಳು. ಕಾಲಕಾಲದ ಹವಾಮಾನದ ಪರಿಸ್ಥಿತಿಗಳ ಬದಲಾವಣೆ ಮತ್ತು ಅಕಾಲಿಕ ಉಷ್ಣ, ಚಳಿ ಇವೆಲ್ಲ ನಮ್ಮ ಮುಂದೆ ಕಂಡುಬರುತ್ತಿರುವ ಅಪಾಯದ ಮುನ್ಸೂಚನೆಗಳು. ಈ ವಸ್ತು ಸ್ಥಿತಿಯನ್ನು ಕಂಡೂ ಜಗತ್ತು ಇಂದಿನ ವೈಜ್ಞಾನಿಕ ಯುಗದಲ್ಲೂ ಮೂಕಪ್ರೇಕ್ಷಕವಾಗಿರುವುದು ಅತ್ಯಂತ ಶೋಚನೀಯ. ಮುಂದುವರಿದ ರಾಷ್ಟ್ರಗಳು ಮತ್ತು ಅದರಿಂದ ಪ್ರೇರೇಪಿಸಲ್ಪಟ್ಟ ದೊಡ್ಡ ದೊಡ್ಡ ಕೈಗಾರಿಕಾ ಪ್ರಭುಗಳು ಒಂದು ರೀತಿಯಲ್ಲಿ ಜಗತ್ತು ಮತ್ತು ಮಾನವೀಯತೆಯನ್ನೆ ಒತ್ತೆಯಾಳಾಗಿ ಇಡುವ ಹಂತಕ್ಕೆ ನಾವಿಂದು ತಲುಪಿದ್ದೇವೆ. ಕಳೆದ ದಶಕದಲ್ಲಿ ಅಮೇರಿಕ ದಂತಹ ರಾಷ್ಟ್ರಗಳು ಕೈಗೊಂಡ ಸ್ವಾರ್ಥಪರ ಮತ್ತು ತಾತ್ಕಾಲಿಕ ನೀತಿಗಳಿಂದ ಜಗತ್ತಿನ ಸಮತೋಲನವನ್ನು ಅಲಕ್ಷಿಸಿ ಲಾಭದ ಸಂಕುಚಿತ ದಿಕ್ಕಿನಲ್ಲಿ ಸಾಗಿರುವುದೇ ಇಂದು ಮತ್ತು ಮುಂದು ಮಾನವ ಅನುಭವಿಸುತ್ತಿರುವ ಅನಾಹುತಗಳಿಗೆ ಕಾರಣ. ಬಹುಶಃ ೬೦ರ ದಶಕದ ಶೀತಲ ಸಮರಕ್ಕಿಂತಲೂ ಮುಂದುವರಿದ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳ ನಡುವೆ ನಡೆಯುತ್ತಿರುವ ಹವಾಮಾನ ಉಲ್ಪಣತೆಯ ‘ಉಷ್ಣ ಸಮರ’ ಜಗತ್ತಿನ ನೆಮ್ಮದಿಯನ್ನು ಕದಡುವುದರಲ್ಲಿ ಅನುಮಾನವಿಲ್ಲ. ಆದುದರಿಂದ ಕ್ಯೋಟೊ ಒಪ್ಪಂದ ಇಂದು ಪರಸ್ಪರ ಪ್ರಭಾವ ವಲಯಗಳ ಸೀಮಿತ ಕಾರ್ಯಕ್ರಮವಾಗದೇ ಜಗತ್ತಿನ ಮಾನವೀಯತೆಯ ರಕ್ಷಣೆಯ ಅತಿದೊಡ್ಡ ರಕ್ಷಾಕವಚವಾಗಿರಬೇಕು. ನಿಶ್ಶಸ್ತ್ರೀಕರಣ, ಅಣ್ವಸ್ತ್ರಗಳ ನಿಷೇಧದಂತೆ ಜಗತ್ತಿನ ಆದ್ಯತೆಯ ಪರಿಕ್ರಮವಾಗಿರಬೇಕು. ಇಂತಹ ಮಹತ್ತಾದ ನಿರ್ಣಯವನ್ನು ಪ್ರಬಲ ರಾಷ್ಟ್ರಗಳು ತೆಗೆದುಕೊಳ್ಳಲಾರವು. ಇಂತಹ ಪ್ರಭಾವ ವಲಯ ಭಾರತದಂತಹ ಶಾಂತಿಪ್ರಿಯ ರಾಷ್ಟ್ರಗಳ ನೇತೃತ್ವದಿಂದ ಮಾತ್ರ ಸಾಧ್ಯವಾಗಬಹುದು. ಅಹಿಂಸೆ, ನಿಶಸ್ತ್ರೀಕರಣ ಮತ್ತು ಅಣ್ವಸ್ತ್ರ ನಿರ್ಬಂಧದ ಬಗ್ಗೆ ಅನೇಕ ವರ್ಷಗಳಿಂದ ಮಹತ್ತರ ಮೇಲ್ಪಂಕ್ತಿ ಮತ್ತು ಪರಂಪರೆ ಹಾಕಿಕೊಟ್ಟ ಭಾರತ ಮತ್ತೊಮ್ಮೆ ಜಗತ್ತಿನ ಹವಾಮಾನ ನಿಯಂತ್ರಣದ ನೆಮ್ಮದಿಯ ಜಗತ್ತನ್ನು ಕಟ್ಟುವ ದೀಕ್ಷೆಯನ್ನು ತೊಡಬೇಕಾಗಿದೆ. ಇಂತಹ ನಾಯಕತ್ವ ಭಾರತದಿಂದ ಸಾಧ್ಯವೇ ಹೊರತು ಚೀನಾ, ಅಮೇರಿಕ, ಜಪಾನ್ ಅಥವಾ ಯುರೋಪ್ ಯೂನಿಯನ್‌ಗಳಿಂದ ಬರಲು ಸಾಧ್ಯವಿಲ್ಲ. ಇದರ ಬಗ್ಗೆ ಮುಂದುವರಿದ ರಾಷ್ಟ್ರಗಳಲ್ಲಿ ಅಲ್ಲಲ್ಲಿ ಧ್ವನಿ ಕೇಳಿಬಂದರೂ ಕೈಗಾರಿಕಾ ಬಹುರಾಷ್ಟ್ರೀಯ ಪ್ರಭುಗಳ (Multi National) ಧ್ವನಿಗಳನ್ನು ಮೌನವಾಗಿರಿಸುವ ಶಕ್ತಿಯನ್ನು ಹೊಂದಿದೆ. ಒಟ್ಟಿನಲ್ಲಿ ಈಗ ಪ್ರಚಲಿತವಿರುವ ಕ್ಯೋಟೊ ಒಪ್ಪಂದದ ಮಾತುಕತೆ ಕಣ್ಣೊರೆಸುವ ತಂತ್ರವಾಗಿದೆ. ಇದರಲ್ಲಿ ಯಾವ ರೀತಿಯ ಪ್ರಾಮಾಣಿಕತೆಯೂ ಬದ್ಧತೆಯೂ ಕಂಡುಬರುವುದಿಲ್ಲ.

ಗ್ರೀನ್‌ಹೌಸ್ ಅನಿಲ ಪ್ರಸರಣದ ಬಗ್ಗೆ ಕೆನಡಾ ಮುಂದಿಟ್ಟ ಪ್ರಸ್ತಾವನೆಯನ್ನು ಅಮೆರಿಕ ತಿರಸ್ಕರಿಸಿ ಕ್ಯೋಟೊ ಪ್ರೋವಿಶ್ವಸಮ್ಮೇಳನ ತ್ರಿಶಂಕು ಪರಿಸ್ಥಿತಿಯನ್ನು ತಲುಪಿದೆ. ಮಾಂಟ್ರಿಯಲ್-೨೦೦೫, ಲೋಕದರ್ಶನ-೨೦೧೨ (vision)ವನ್ನು ಸ್ಥಿರಪಡಿಸಲು ಅಸಹಾಯಕ, ದುರ್ಬಲ ಹಂತವನ್ನು ತಲುಪಿದೆ. ಅಂದರೆ ಪ್ರಸ್ತುತ ಜಾಗತಿಕ ಪರಿಸರ ಅತಂತ್ರವಾಗಿದೆ. ಸಮತೋಲನವನ್ನು ಕಾಪಾಡುವ ಪ್ರಯತ್ನ ಅಸಫಲವಾಗಿದೆ. ಮೂಕ ಪ್ರೇಕ್ಷಕರಂತಿದ್ದ ೧೮೯ ರಾಷ್ಟ್ರಗಳು ಸಮಾವೇಶದಿಂದ ನಿರ್ಗಮಿಸಿವೆ. ಐತಿಹಾಸಿಕ ಘಟನೆ ಯೆಂದು ಪ್ರಸಿದ್ದಿಯಾಗಬೇಕಾಗಿದ್ದ ಶೃಂಗ ಸಮ್ಮೇಳನ ಅಸಂಗತ ಪ್ರಸಂಗವಾಗಿ ನಿಷ್ಫಲ ವಾಯಿತು. ೧೯೯೨ರ ವಿಶ್ವಸಂಸ್ಥೆಯ ಈ ಸಮಾವೇಶದ ಯಾವ ವಿಚಾರಗಳನ್ನು ಚರ್ಚಿಸ ಲಾರಂದೆಂಬ ಅಮೆರಿಕದ ಹಠಮಾರಿ ನಿಲುವಿನಿಂದ ಜಗತ್ತು ದಿಗ್ಭ್ರಮೆಗೊಂಡಿದೆ.

ಚೀಣಾ ಮತ್ತು ಭಾರತದ ಪುರೋಭಿವೃದ್ದಿಯ ಬಗ್ಗೆ ವಿಶೇಷವಾದ ಆತಂಕ ಹೊಂದಿದ ಅಮೆರಿಕ ಕ್ಯೋಟೊ ಪ್ರೋಒಪ್ಪುವುದಿಲ್ಲವೆಂದು, ಅವರೆಡು ರಾಷ್ಟ್ರಗಳು ಎಲ್ಲಿಯವರೆಗೆ ಕ್ಯೋಟೊ ಪ್ರೋಸಹಿ ಹಾಕುವುದಿಲ್ಲವೋ ಅಲ್ಲಿಯವರೆಗೆ ಸಹಕರಿಸಲಾಗುವುದಿಲ್ಲವೆಂದು ಅವು ವಾದಿಸುತ್ತಿದೆ. ಅಮೆರಿಕದ ಈ ನಿಲುವು ಒಟ್ಟು ಪರಿಸರ ಸಮತೋಲನ ಮತ್ತು ಗ್ರೀನ್‌ಹೌಸ್ ಅನಿಲ ಪ್ರಸರಣದ ಕ್ಷೇತ್ರದಲ್ಲಿ ವಿಶೇಷವಾದ ಗೊಂದಲ ವನ್ನು ಉಂಟುಮಾಡಿದೆ. ಅಭಿವೃದ್ದಿಶೀಲ ರಾಷ್ಟ್ರಗಳು ಒಂದು ಕಡೆಯಾದರೆ ಅಭಿವೃದ್ದಿ ಹೊಂದುತ್ತಿರುವ ರಾಷ್ಟ್ರಗಳು ಮತ್ತೊಂದೆಡೆ ನಿಂತು ವಿಶೇಷವಾದ ಅನಿಲ ಪ್ರಸರಣ ಶೀತಲ ಸಮರ ಜಾಗತಿಕವಾಗಿ ನಡೆಯುತ್ತಿದೆ.

ಅಮೆರಿಕದ ಅನೇಕ ಸೆನೆಟರ್ಸ್‌ಗಳು ಜಾರ್ಜ್ ಬುಷ್‌ರನ್ನು ಭೇಟಿಯಾಗಿ ಈ ಬಗ್ಗೆ ಅಮೆರಿಕ ಪ್ರಮುಖ ನಾಯಕತ್ವವನ್ನು ಈ ಜಾಗತಿಕ ಸಂವಾದದಲ್ಲಿ ಕೈಗೊಳ್ಳಬೇಕೆಂದು ಜಾಗತಿಕ ಸಮ್ಮೇಳನದ ಪ್ರಮುಖವಾದ ಚರ್ಚೆಯಲ್ಲಿ ಸ್ಥಗಿತಗೊಳಿಸುವ ಯಾವ ಪ್ರಯತ್ನ ವನ್ನು ಕೂಡ ಮಾಡಬಾರದೆಂದು ಆಗ್ರಹಪಡಿಸಿರುತ್ತಾರೆ. ಆದರೆ ಸೆನೆಟರ್ಸ್‌ಗಳ ಈ ಪ್ರಯತ್ನದಲ್ಲಿ ಯಾವ ಯಶಸ್ಸೂ ಆದಂತೆ ಕಾಣುವುದಿಲ್ಲ. ಇದರ ಒಟ್ಟು ಪರಿಣಾಮ ೨೦೧೨ರ ಹೊತ್ತಿಗೆ ಪರಿಸರದ ಸಮತೋಲನ ಅತ್ಯಂತ ದಾರುಣ ಪರಿಸ್ಥಿತಿಗೆ ತಲುಪುವ ಸಂಭವವಿದೆ. ಪರಿಸರವನ್ನು ಹತೋಟಿಗೆ ತರಲು ಅಸಾಧ್ಯವಾದಲ್ಲಿ ಅನೇಕ ಯುದ್ಧಗಳಿ ಗಿಂತಲೂ ವಿಷಮ ಪರಿಸ್ಥಿತಿಯನ್ನು ಜಗತ್ತು ಎದುರಿಸುವ ಪ್ರಸಂಗ ಬರಬಹುದು.

ಜಾಗತಿಕ ಹವಾಮಾನದ ಒತ್ತಡದಿಂದ ಈಗಾಗಲೇ ಗ್ಲೇಷಿಯರ್ಸ್‌(Glaciers)ಗಳು ಒಳಹರಿವನ್ನು ವಿಜ್ಞಾನಿಗಳು ಗಮನಿಸಿದ್ದಾರೆ. ಪ್ರತಿವರ್ಷ ಸಾಮಾನ್ಯವಾಗಿ ೯ ಮೈಲಿ ಒಳಕ್ಕೆ ಹರಿಯುತ್ತಿದೆ. ೨೦೦೧ ರಂದು ಇದು ೩ ಮೈಲಿಯಾಗಿತ್ತು. ಇನ್ನು ಮುಂದೆ ಇದರ ಹರಿವು ಒತ್ತಡ ಮತ್ತಷ್ಟು ಹೆಚ್ಚಿನ ಪ್ರಮಾಣದಲ್ಲಿ ನಡೆಯುವ ಸಾಧ್ಯತೆಯಿದೆ. ಇದರ ಪರಿಣಾಮವಾಗಿ ಜಾಗತಿಕವಾಗಿ ಸಮುದ್ರ ಪ್ರತಿವರ್ಷ ಶೇಕಡ ೭ರಷ್ಟು ಏರುವ ಸಂಭವವಿರುತ್ತದೆ. ಇದಕ್ಕಾಗಿಯೆ ಸಮುದ್ರದ ಅಲೆಗಳ ತೀವ್ರತೆ, ಬಿರುಗಾಳಿ ಮತ್ತು ಸುನಾಮಿಯಂತಹ ಅಪರೂಪದ ಅನಾಹುತಗಳು ಆಗಾಗ ಸಂಭವಿಸುವ ಸಾಧ್ಯತೆಗಳಿವೆ. ಗ್ಲೇಷಿಯರ‍್ಸ್‌ಗಳು ಪ್ರತಿದಿವಸ ೮೦ ಅಡಿ ತನ್ನನ್ನು ತಾನು ಒಳಗೆ ಸೆಳೆದುಕೊಂಡು ಅನಾಹುತದ ಸೂಚನೆಯನ್ನು ಸಾರುತ್ತಿದೆ. ಇಂತಹ ಅಪಾಯಗಳ ಮುನ್ಸೂಚನೆ ಅಭಿವೃದ್ದಿ ಹೊಂದಿದ ರಾಷ್ಟ್ರಗಳ ಅಜಾಗ್ರತೆಯಿಂದ ಉಂಟಾಗಿದೆ ಎಂಬುದು ಶತಸ್ಸಿದ್ಧ. ಈ ರಾಷ್ಟ್ರಗಳಲ್ಲಿ ಸ್ಪಷ್ಟವಾದಂತಹ ಪ್ರಜ್ಞೆಯ ಉದಯ ವಾಗದಿದ್ದಲ್ಲಿ, ತಮ್ಮ ಜವಾಬ್ದಾರಿಯನ್ನು ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಹೇರಿ ಪಲಾಯನವಾದಿಗಳಾಗುವ ಸ್ಪಷ್ಟ ಚಿತ್ರಣ ವಿಶ್ವದ ಮುಂದಿದೆ. ಮಾನವೀಯತೆಯ ಪತನದ ಹಾದಿಯಲ್ಲಿರುವ ಜಗತ್ತನ್ನು ಸಂರಕ್ಷಿಸಲು ಎಲ್ಲ ರಾಷ್ಟ್ರಗಳು ಕೂಡ ಒಗ್ಗಟ್ಟಾಗದಿದ್ದಲ್ಲಿ ವಿಶ್ವ ಅನಾಹುತದ ಜ್ವಾಲಾಮುಖಿಯಿಂದ ತಪ್ಪಿಸಿಕೊಳ್ಳಲು ಸಾಧ್ಯವಿಲ್ಲ.

ಗ್ರೀನ್‌ಹೌಸ್ ಅನಿಲ ಪ್ರಸರಣವೇ ಹವಾಮಾನ ಪರಿವರ್ತನೆಗೆ ಕಾರಣವೆಂಬ ವಿಚಾರ ದಲ್ಲಿಯೂ ಹಲವು ವಿವಾದಗಳು ತಲೆಎತ್ತಿವೆ. ರೈಟರ್ಸ್‌ (Reuters) ಸುದ್ದಿ ಮಾಧ್ಯಮದ ಪ್ರಮುಖ ವರದಿಗಾರರಾದ ಡಂಕನ ಶೀಲ್ಸ್ (Duncan Shiels) ಅಣುವಿದ್ಯುತ್ತಿನ ತ್ಯಾಜ್ಯ ವಸ್ತುಗಳ ನಿರ್ಮೂಲನೆ ಸಹ ಅಷ್ಟೇ ಗಂಭೀರ ಸ್ವರೂಪದ್ದೆಂದು ವಾದಿಸುತ್ತಾರೆ. ಬಹುಶಃ ಈ ಬಗ್ಗೆ ಸ್ಪಷ್ಟವಾದ ಶಾಸ್ತ್ರೀಯ ನಿಲುವು ಇನ್ನೂ ಪ್ರಕಟವಾಗಿಲ್ಲ. ಇಂತಹ ಜಾಗತಿಕ ಹವಾಮಾನದ ಮೇಲೆ ದುಷ್ಪರಿಣಾಮ ಮಾಡುವ ಇಂತಹ ವಿಚಾರಗಳ ಬಗ್ಗೆ ಅಸಡ್ಡೆ ಎಂದಿಗೂ ಸಲ್ಲದು. ಆದರೆ ಕೆಲವು ಪಟ್ಟಭದ್ರ ಹಿತಾಸಕ್ತಿಗಳನ್ನು ಕಾಯ್ದುಕೊಳ್ಳುವ ಪ್ರಬಲ ವಲಯಗಳಿಂದ ವೈಜ್ಞಾನಿಕ ಶೋಧಗಳಿಗೆ ಬಾಧಕ ಬರುತ್ತದೆ. ಒಂದೊಂದು ಪ್ರಭಾವಿತ ರಾಷ್ಟ್ರಗಳಿಗೆ ಅನುಕೂಲವಾದ ವಾದವನ್ನು ಸಮರ್ಥಿಸುವ ಸ್ವಾರ್ಥ ನಿಲುವಿನಿಂದ ಮಾನವ ಜನಾಂಗ ಅನಾಹುತಕ್ಕೆ ಒಳಗಾಗುತ್ತದೆ. ವಿಶ್ವಸಂಸ್ಥೆ ಈ ಬಗ್ಗೆ ಗಂಭೀರ ಮತ್ತು ಸ್ಪಷ್ಟವಾದ ಸಂವಾದವನ್ನು ನಡೆಸಿ ತೀರ್ಮಾನಕ್ಕೆ ಬರಬೇಕಾಗುತ್ತದೆ. ಈ ಬಗ್ಗೆ ರಾಷ್ಟ್ರಗಳ ರಾಜಕೀಯ ವ್ಯಕ್ತಿಗಳ ಅಥವಾ ಅಧಿಕಾರಿಗಳ ಸಮಾವೇಶವನ್ನು ನಡೆಸಿ ಸತ್ಯ ಮತ್ತು ಸ್ಪಷ್ಟವಾದ ಸಂಶೋಧನಾತ್ಮಕ ನಿರ್ಣಯಕ್ಕೆ ಬರುವುದು ಜಾಗತಿಕ ನೆಮ್ಮದಿ ಮತ್ತು ಶಾಂತಿಯ ದೃಷ್ಟಿಯಿಂದ ಅನಿವಾರ‍್ಯ. ಅನಗತ್ಯವಾದ ವಿಳಂಬದಿಂದ ಜಾಗತಿಕ ನೆಮ್ಮದಿ ಕೆಡುವುದರಲ್ಲಿ ಅನುಮಾನವಿಲ್ಲ. ಆರೋಗ್ಯದ ದೃಷ್ಟಿಯಿಂದ ಮತ್ತು ಮುಂದೆ ಬರುವ ಪ್ರಾಕೃತಿಕ ಅಪಾಯಗಳ ಸುಳಿಯಿಂದ ತಪ್ಪಿಸಿಕೊಳ್ಳಬೇಕಾದರೆ ವೈಜ್ಞಾನಿಕವಾದ ಜಾಗತಿಕ ನಿರ್ಣಯ ಅತಿಬೇಗನೆ ಆಗುವುದು ಅಗತ್ಯವಿದೆ. ಇಲ್ಲದಿದ್ದರೆ ೨೦೧೨ರ ಹೊತ್ತಿಗೆ ಮತ್ತೆ ಪರಿಹಾರವನ್ನು ಕಂಡು ಕೊಳ್ಳಲಾಗದ ಮತ್ತೆ ಹಿಂದಿರುಗಲಾಗದ ಭಯಾನಕ ಹಂತವನ್ನು ನಾವು ತಲುಪಬಹುದು.

ಜಾಗತಿಕ ಹವಾಮಾನದ ಒತ್ತಡ ಪ್ರಮುಖವಾಗಿ ಗ್ರೀನ್‌ಲ್ಯಾಂಡ್ ಮಂಜು ಕರಗುವಿಕೆಯಿಂದ ಉಲ್ಬಣವಾಗುತ್ತದೆ. ಈ ವಿಚಾರದಲ್ಲಿ ಉತ್ತರ ಅಮೆರಿಕದಲ್ಲಿ ಈಗಾಗಲೇ ಮಂಜು ತೀವ್ರ ರೀತಿಯಲ್ಲಿ ಕರಗುವುದು ಮಾತ್ರವಲ್ಲದೆ ಇನ್ನೆರಡು ದಶಕದಲ್ಲಿ ಅಪಾಯದ ಅಂಚನ್ನು ತಲುಪಬಹುದು. ಅಲೆಕ್ಸಾದ ಕೊಲಂಬಿಯ ಗ್ಲೇಷಿಯರ್ ಕೂಡ ೧೯೮೦ರಿಂದ ಸುಮಾರು ೯ ಮೈಲು ಮಂಜು ಮತ್ತು ಗ್ಲೇಷಿಯರ್ ಕರಗಿದ ಪ್ರಸಂಗವಿದೆ. ಇನ್ನೂ ೧೫-೨೦ ವರ್ಷಗಳಲ್ಲಿ ಪುನಃ ೯ ಮೈಲಿಗಳಷ್ಟು ಕರಗಿದಾಗ ಸಮುದ್ರದ ಮಟ್ಟ ಭಯಾನಕ ವೈಪರೀತ್ಯಕ್ಕೆ ತಲುಪುವ ಹಂತವಿದೆ. ಆದುದರಿಂದ ಇಂತಹ ಜಾಗತಿಕ ಬದಲಾವಣೆಯನ್ನು ಅಮೇರಿಕ ಕಂಡೂ ಕಾಣದ ರೀತಿಯಲ್ಲಿ ವರ್ತಿಸುವುದನ್ನು ಕಂಡರೆ ಅವರ ಚಿಂತನೆ ವೈಜ್ಞಾನಿಕವಾಗಿ ಸಮರ್ಥನೀಯವಲ್ಲ. ದಿನದಿಂದ ದಿನಕ್ಕೆ ಹವಾಮಾನದ ಒತ್ತಡ ಇಡೀ ಪ್ರಪಂಚವನ್ನು ನಡುಗಿಸುವ ರೀತಿಯಲ್ಲಿ ವರ್ತಿಸುವಾಗ ವಿಶ್ವದ ಪ್ರಬಲ ರಾಷ್ಟ್ರಗಳು ಈ ಬಗ್ಗೆ ಸಂಪೂರ್ಣ ನಿರ್ಲಕ್ಷ್ಯತೆ ತೋರಿಸುವುದರಿಂದ ಅದರ ನೀತಿ ಇಡೀ ಜಗತ್ತಿಗೆ ಪ್ರಾಣಾಪಾಯವಾಗಿ ಪರಿಣಮಿಸುತ್ತದೆ. ಅಮೆರಿಕದ Geo Physical Unionನ ಹ್ಯಾಮಿಲ್ಟನ್ ಕೂಡಾ ಈ ಅಪಾಯದ ಬಗ್ಗೆ ಎಚ್ಚರಿಕೆಯ ಗಂಟೆಯನ್ನು ಬಾರಿಸಿರುತ್ತಾರೆ.

ಆದರೆ ಸಮುದ್ರದ ಈ ಹವಾಮಾನದ ಒತ್ತಡದಿಂದಾಗಿ ಉಂಟಾದ ಸಮುದ್ರಮಟ್ಟದ ಏರಿಕೆಯಿಂದ ೨೦ನೇ ಶತಮಾನದ ಅಂತ್ಯಕ್ಕೆ ೪ ಇಂಚಿನಿಂದ ೮ ಇಂಚಿನವರೆಗೆ ಸಮುದ್ರದ ಮಟ್ಟ ಮೇಲೇರಿದೆ. ಅದರ ಪ್ರಮಾಣ ಮತ್ತಷ್ಟು ತೀವ್ರವಾಗುತ್ತದೆ. ಇದರಿಂದಾಗಿ ಭೀಕರ ಬಿರುಗಾಳಿ ಬಂದು ಜನಜೀವನಕ್ಕೆ ಆತಂಕಕಾರಿಯಾಗುತ್ತದೆ. ಆದುದರಿಂದ ಹವಾಮಾನದ ಒತ್ತಡದ ಈ ಪರಿಸರ ಪ್ರಜ್ಞಾಭಾವದ ಬಗ್ಗೆ ಜಾಗತಿಕ ಜಾಗೃತಿಯ ಆಂದೋಲನದ ಆವಶ್ಯಕತೆಯಿದೆ. ವಿಶ್ವಸಂಸ್ಥೆ ಈ ಬಗ್ಗೆ ನಾಯಕತ್ವವನ್ನು ವಹಿಸಲು ಪ್ರಬಲ ಒತ್ತಡದಿಂದ ಸಾಧ್ಯವಾಗದಿದ್ದರೆ ಭಾರತ ಮತ್ತು ಚೀಣಾದಂತಹ ರಾಷ್ಟ್ರಗಳು, ತಮ್ಮ ಪ್ರಭಾವವನ್ನು ಉಪಯೋಗಿಸಿ ವಿಶ್ವಸಂಸ್ಥೆಯ ಮೇಲೆ ಒತ್ತಡವನ್ನು ಹೇರಬೇಕಾಗಿದೆ.