‘ಪಕ್ಷಿಜನ್ಯ ಫ್ಲೂ ಸಾಂಕ್ರಾಮಿಕ ರೋಗ (Bird Flu) ಅತ್ಯಂತ ಭಯಾನಕವೆಂದು’ ಜಾಜ್ ಬುಷ್ ಆಡಳಿತೆಯ ಒಳಾಡಳಿತ ಭದ್ರತಾ ಸಲಹೆಗಾರರಾದ ರಿಚರ್ಡ್ ಫೇಕ್‌ಪ್ರಾಥ್ ಇತ್ತೀಚೆಗೆ  ಹೇಳಿಕೆ ನೀಡಿರುತ್ತಾರೆ. ತಮ್ಮ ಹೇಳಿಕೆಯನ್ನು ಮುಂದುವರಿಸುತ್ತ ‘ಇದು ಅಂತಾರಾಷ್ಟ್ರೀಯ ಭಯೋತ್ಪಾದನೆಗಿಂತಲೂ ದೊಡ್ಡ ಗಾತ್ರದ ಭೀತಿ’ ಎಂದು ಹೇಳುವುದರ ಜೊತೆಯಲ್ಲಿ ತಮ್ಮ ಅನುಭವದ ಪ್ರಕಾರ ಸರ್ಕಾರದಲ್ಲಿ ದೇಶಕ್ಕೆ ಇದಕ್ಕಿಂತ ದೊಡ್ಡ ಅಪಾಯವಿಲ್ಲವೆಂದು ಹೇಳಿರುತ್ತಾರೆ. ಇಂತಹ ಪಕ್ಷಿಜನ್ಯ ಸಾಂಕ್ರಾಮಿಕ ರೋಗದ ಧಾಳಿಯಿಂದ ಸಹಸ್ರಾರು ಮಂದಿ ಪ್ರಾಣವನ್ನು ಕಳೆದುಕೊಳ್ಳುವ ಸಂಭವವಿದೆ. ಅಣುಬಾಂಬ್‌ಗಿಂತಲೂ ಹೆಚ್ಚು ಸಮೂಹ ನಾಶವನ್ನು ಮಾಡುವ ಅಪಾಯ ಈ ಧಾಳಿಯ ಗರ್ಭದಲ್ಲಿ ಅಡಗಿದೆ. ಮನುಷ್ಯ ಮನುಷ್ಯರ ಮಧ್ಯೆ ನಾಶ ಜೀವಧಾತುಗಳನ್ನು ಹರಡುವ ಶಕ್ತಿ ಈ ಭಯಾನಕ ರೋಗಕ್ಕಿದೆ. ಚೈನಾ ನಿರಾತಂಕ ಮತ್ತು ಸ್ವೇಚ್ಛಾಚಾರದ ಅಭಿವೃದ್ದಿಯಿಂದಾಗಿ ಇಂದು ಇಂತಹ ರೋಗಗಳ ತವರಾಗಿದೆ. ನಗೀರಕರಣದ, ಅರಣ್ಯನಾಶದ ಮತ್ತು ತರಿಭೂಮಿಗಳ ಪ್ರಮಾಣದ ಕುಸಿತ ಇದರ ಮೂಲವಾಗಿದೆ. ಇದರಿಂದಾಗಿ ದೇಶದಿಂದ ದೇಶಕ್ಕೆ ಸಂಚರಿಸುವ ಹಕ್ಕಿಗಳು ಒಂದೆಡೆ ಸೇರಿದಾಗ, ಮನುಷ್ಯ ವಾಸಿಸುವ ಸ್ಥಳಕ್ಕೆ ಪಲಾಯನ ಮಾಡಿದಾಗ ರೋಗದ ಜೀವಕಣಗಳು ಒಂದು ಹಕ್ಕಿಯಿಂದ ಮತ್ತೊಂದು ಹಕ್ಕಿಗೆ ಹರಡಿ ಅನಂತರ ಮನುಷ್ಯನಿಗೆ ತಗಲುತ್ತವೆ. ಅತಿ ಹೆಚ್ಚು ಕೋಳಿ ಮಾಂಸವನ್ನು ಭಕ್ಷಿಸುವ ಹವ್ಯಾಸದಿಂದ ರೋಗ ಪ್ರಸರಣಗೊಳ್ಳಲು ಕಾರಣವಾಗುತ್ತದೆ. ಚೈನಾದಲ್ಲಿ ಸಾವಿರಾರು ಮನೆಗಳಲ್ಲಿ ಪ್ರತಿ ದಿವಸ ಕೋಳಿಯನ್ನು ಅತ್ಯಂತ ಅನಾರೋಗ್ಯಕರ ಸ್ಥಳದಲ್ಲಿ ಕೊಂದು ಸಿದ್ಧಪಡಿಸುತ್ತಾರೆ. ಪ್ಲೇಗ್‌ಗೆ ಸರಿ ಸಮಾನವಾದ ಈ ರೋಗ ಮನುಷ್ಯ ಮನುಷ್ಯನಿಂದ ದೇಶ ವಿದೇಶದಿಂದ ಅತಿ ವೇಗವಾಗಿ ಹರಡುತ್ತದೆ. ಒಮ್ಮೆ ಅದು ಹರಡಲು ಪ್ರಾರಂಭವಾದಾಗ ಸುನಾಮಿಯಂತೆ ಮನುಷ್ಯನನ್ನು ಆಕ್ರಮಿಸಿ ಕೆಡವುತ್ತದೆ. ಸುನಾಮಿ ಯಾವ ರೀತಿಯಲ್ಲಿ ಮುನ್ಸೂಚನೆ ನೀಡುವುದಿಲ್ಲವೋ ಮನುಷ್ಯ ಮೂಕ ಪ್ರೇಕ್ಷಕನಾಗಿ ನಿಬ್ಬೆರಗಾಗಿ ನೋಡ ನೋಡುತ್ತಲೇ ಅವನನ್ನೂ ಕಬಳಿಸುತ್ತದೋ ಅದೇ ರೀತಿಯಲ್ಲಿ ಪಕ್ಷಿಜನ್ಯ ರೋಗ ಕೂಡ ಮನುಷ್ಯನನ್ನು ನಿಸ್ಸಹಾಯಕಗೊಳಿಸುತ್ತದೆ.

ಶೀತಲ ಯುದ್ಧದ ಭೀತಿಯ ಸಂದರ್ಭದಲ್ಲಿ ಯಾವ ರೀತಿಯಲ್ಲಿ ಅಣು ಸಮರದ ಭೀತಿಯಿಂದ ಅಥವಾ ಆಕಸ್ಮಿಕ ಧಾಳಿಯ ಹೆದರಿಕೆಯಿಂದ ಮಾಡುವ ಸಿದ್ಧತೆಯ ರೀತಿಯಲ್ಲಿ ಇಂದು ಪಕ್ಷಿಜನ್ಯ ರೋಗದ ಭೀಕರ ಧಾಳಿಯನ್ನು ತಡೆಯುವ ವಿಚಾರದಲ್ಲಿ ಯೋಜನೆ ಮಾಡಬೇಕು. ಇವುಗಳನ್ನು ಎದುರಿಸುವ ವಿಶ್ವಾಸಾರ್ಹ ಕ್ರಮವೆಂದರೆ ಅದನ್ನು ಎದುರಿಸುವ ಸೂಕ್ತ ಪರಿಸರವನ್ನು ಸಿದ್ಧಗೊಳಿಸುವುದು. ಇಂತಹ ಫ್ಲೂವನ್ನು ತಡೆಗಟ್ಟುವ ದಾಕು ಹಾಕುವ ಪ್ರಕ್ರಿಯೆಗೆ ಕೂಡ ನಾವು ಸಿದ್ಧರಿಲ್ಲ. ಪ್ರತಿಯೊಂದು ದೇಶ ಕೂಡ ಇಂತಹ ಅನಾಹುತ ತಡೆಹಿಡಿಯಲು ಬೃಹತ್ ಬಯೋಮೆಡಿಕಲ್ ಪ್ರಾಜೆಕ್ಟ್‌ನ ಮೂಲಕ ಕಾರ್ಯಾಚರಣೆ ಮಾಡಬೇಕು. ಅದಕ್ಕೆ ಅಪಾರ ಹಣಕಾಸಿನ ವ್ಯವಸ್ಥೆಯಾಗಬೇಕಾಗಿದೆ. ಈಗಿನ ಅಂದಾಜು ಪ್ರಕಾರ ಇದರ ಸಂಶೋಧನೆಗೆ ೧೧೯ ಮಿಲಿಯನ್ ಡಾಲರ್ ಪ್ರತಿವರ್ಷ ಬೇಕಾಗುತ್ತದೆ. ಈ ಸಂಶೋಧನೆಯ ಪ್ರಯೋಗಗಳನ್ನು ಕಾರ್ಯಗತಗೊಳಿಸಲು ಸುಮಾರು ೧೦ ಬಿಲಿಯನ್ ಡಾಲರ್ ಬೇಕಾಗುತ್ತದೆ. ಈಗಿನ ಸಮರದ ಆಧುನಿಕ ಆಯುಧಗಳನ್ನು ಸಿದ್ಧಪಡಿಸಲು ಅಮೆರಿಕದ ಪೆಂಟಗಾನ್ ಮೂಲಕ ಸಂಶೋಧನೆ ಮತ್ತು ಅಭಿವೃದ್ದಿಗೆ ಪ್ರತಿವರ್ಷ ೪.೫. ಬಿಲಿಯನ್ ಡಾಲರ್ ಖರ್ಚು ಮಾಡುತ್ತದೆ. ಅಂದರೆ ಪಕ್ಷಿಜನ್ಯ ರೋಗದ ಅಪಾರ ಹಾನಿಯ ಆಳ ಮತ್ತು ವಿಸ್ತಾರದ ಸ್ಥೂಲ ನೋಟವನ್ನು ನಾವು ಗಮನಿಸಬಹುದು.

ವಿಷಾದದ ಸಂಗತಿಯೆಂದರೆ ಇಂತಹ ಭಯಾನಕ ರೋಗ ಎದುರಿಸಲು ಅಂತಾರಾಷ್ಟ್ರೀಯ ಸಂಸ್ಥೆಗಳು ಅಸಮರ್ಥವಾಗಿದೆ ಮತ್ತು ಪೂರಾ ಅಸಹಾಯಕವಾಗಿವೆ. ಈ ಪಕ್ಷಿಜನ್ಯ ಫ್ಲೂ ಸಮಸ್ಯೆ ಚೈನಾದ ಗಾಂಗಡಾಂಗ್ (Guangdong)ನಲ್ಲಿ ಪ್ರಾರಂಭವಾಯಿತು. ಅನಂತರ ಇಂಡೋನೇಷ್ಯಾ, ರಷ್ಯಾ, ಟರ್ಕಿ, ರೊಮೇನಿಯಾ ಮತ್ತು ಇರಾನ್‌ಗೆ ಹರಡಿತು. ಬಹುಶಃ ಅದರ ಧಾಳಿಯ ನಂತರದ ಗುರಿ ಅಫ್ರಿಕಾವಿರಬಹುದು. ಇವುಗಳಲ್ಲಿ ಕೆಲವು ರಾಷ್ಟ್ರಗಳು ಎದುರಿಸುವ ಪರಿಣತಿಯನ್ನು ಪಡೆದಿದ್ದರೆ ಕೆಲವು ರಾಷ್ಟ್ರಗಳು ಸತ್ಯಸಂಗತಿ ಮುಚ್ಚುವ ಪ್ರಯತ್ನ ಮಾಡುತ್ತಿದ್ದರೆ, ಕೆಲವು ರಾಷ್ಟ್ರಗಳು ತಮ್ಮ ಅನುಭವಗಳನ್ನು ಅಮೆರಿಕ ರಾಷ್ಟ್ರದ ಜೊತೆಯಲ್ಲಿ ಹಂಚಿಕೊಳ್ಳಲು ಸಿದ್ಧವಿಲ್ಲ. ಇಂತಹ ಅಂತಾರಾಷ್ಟ್ರೀಯ ಭಯಾನಕ ಧಾಳಿಯ ವಿಚಾರಗಳನ್ನು ವಿಶ್ವದಲ್ಲಿ ಎಲ್ಲಾ ರಾಷ್ಟ್ರಗಳು ಪರಸ್ಪರ ಹಂಚಿಕೊಳ್ಳುವುದು ಮಾನವೀಯ ದೃಷ್ಟಿಯಿಂದ ಸೂಕ್ತವಾಗಿದೆ. ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ (World Health Organisation) ತಾನು ಕ್ರಿಯಾಶೀಲವಾಗಿ ಇದರ ಸ್ಯಾಂಪಲ್‌ಗಳನ್ನು ಪರಿಶೋಧಿಸಿ ರೋಗ ಹರಡುವ ವಿಧಾನವನ್ನು ಗಮನಿಸಿ ಯಾವುದೇ ರಾಷ್ಟ್ರದ ಸಂಶೋಧನೆಯ ಫಲಗಳನ್ನು ರೋಗ ನಿವಾರಣೆ ಮಾಡಲು ಅಥವಾ ಪ್ರತಿಬಿಂಬಿಸಲು ಉಪಯೋಗಿಸುವ ಮತ್ತು ಯಾವುದೇ ರಾಷ್ಟ್ರದ ಉತ್ತಮ ಪರಿಹಾರೋಪಾಯಗಳನ್ನು ಎಲ್ಲರ ಜೊತೆಯಲ್ಲಿ ಹಂಚಿಕೊಳ್ಳುವ ಪ್ರಕ್ರಿಯೆ ನಡೆಸಬೇಕಾಗಿದೆ. ಆದರೆ ಕೆಲವು ಬಲಿಷ್ಠ ರಾಷ್ಟ್ರಗಳ ಧನಸಹಾಯಕ್ಕಾಗಿ ದಿನನಿತ್ಯ ವೆಂಬಂತೆ ಚಾತಕ ಪಕ್ಷಿಯಂತೆ ಕಾದು ನಿಂತಿರುವ ಅಂತಾರಾಷ್ಟ್ರೀಯ ಆರೋಗ್ಯ ಸಂಸ್ಥೆ (WHO) ಇಂತಹ ದೈತ್ಯರೂಪದ ಸಮಸ್ಯೆಯನ್ನು ಬಗೆಹರಿಸುವ ಆರ್ಥಿಕ ಮತ್ತು ಭೌತಿಕ ಶಕ್ತಿಯನ್ನು ಹೊಂದಿದೆಯೋ ಇಲ್ಲವೊ ಇದೊಂದು ಯಕ್ಷಪ್ರಶ್ನೆ! ಒಂದು ವರ್ಷದ ಹಿಂದೆ ಅಂತಾರಾಷ್ಟ್ರೀಯ ಸಂಸ್ಥೆಯ (WHO) ಪಕ್ಷಿಜನ್ಯ ಫ್ಲೂನ ಶಾಖೆಯಲ್ಲಿ ಕೇವಲ ೫ ಮಂದಿ ಇದ್ದರು. ಈಗ ೧೨ ಮಂದಿ ಇದ್ದಾರೆ. ಇಂತಹ ದಿವ್ಯ ನಿರ್ಲಕ್ಷ್ಯ ಭಯಾನಕ ಪೈಶಾಚಿಕ ರೋಗವನ್ನು ನಿಯಂತ್ರಿಸಲಾರದು. ಇದಕ್ಕೆ ವಿಶ್ವವಿಡೀ ಅನೇಕಾನೇಕ ಪ್ರಯೋಗ ಶಾಲೆಗಳು ಮತ್ತು ಅದಕ್ಕನುಗುಣವಾದ ಸಂಶೋಧಕರು, ವಿಜ್ಞಾನಿಗಳು ಮತ್ತು ಸಿಬ್ಬಂದಿಗಳ ಅಗತ್ಯವಿದೆ. ಅಷ್ಟು ಮಾತ್ರವಲ್ಲದೆ ಅಂತಾರಾಷ್ಟ್ರೀಯ ಮಟ್ಟದ ಹೊಸ ಕಟ್ಟುಪಾಡುಗಳ ನಿಯಮಗಳನ್ನು ರೂಪಿಸಿ ಎಲ್ಲಾ ರಾಷ್ಟ್ರಗಳನ್ನು ಈ ನಿಯಮ ಮತ್ತು ಕಟ್ಟುಪಾಡುಗಳಲ್ಲಿ ಬೆಸೆಯುವುದು ಅನಿವಾರ‍್ಯವಾಗಿದೆ. ಅಂತಾರಾಷ್ಟ್ರೀಯ ಸಂಸ್ಥೆ (UNO)ಯ ಪ್ರಧಾನ ಕಾರ್ಯದರ್ಶಿ ಕೋಫಿ ಅನ್ನಾನ್ ಹರಸಾಹಸ ಪ್ರಯತ್ನದಿಂದ ಒಬ್ಬರನ್ನು ಸಂಯೋಜಕರನ್ನಾಗಿ ಈಗಾಗಲೇ ನೇಮಕ ಮಾಡಿದ್ದಾರೆ. ಆದರೆ ಇಂತಹ ಸಣ್ಣಪುಟ್ಟ ವ್ಯವಸ್ಥೆಯಿಂದ ವಿಶ್ವವ್ಯಾಪೀ ಭಯಾನಕ ಪರಿಸ್ಥಿತಿಯನ್ನು ನಿಭಾಯಿಸಲು ಸಾಧ್ಯವಾಗುವುದಿಲ್ಲ. ಇದನ್ನು ಎದುರಿಸಲು ವಿಶ್ವದ ಎಲ್ಲಾ ರಾಷ್ಟ್ರಗಳು ಕೂಡ ಸಿದ್ಧತೆಯನ್ನು, ಸಮಾರೋಪಾದಿಯಲ್ಲಿ ತಮ್ಮ ಆಡಳಿತದ ಪರಿಕ್ರಮವನ್ನು ಸಜ್ಜುಗೊಳಿಸುವ ಜೊತೆಯಲ್ಲಿ ತಮ್ಮ ರಾಷ್ಟ್ರದ ನಾಗರಿಕರಿಗೆ ಸೂಕ್ತ ಮತ್ತು ಕ್ರಿಯಾಶೀಲ ಸಲಹೆಗಳನ್ನು ಕೊಟ್ಟು ಸಮಷ್ಟಿಯಾದ ರಾಷ್ಟ್ರ ಮತ್ತು ನಾಗರಿಕ ಸಬಲೀಕರಣ ಬೆಳೆಸಿಕೊಳ್ಳ ಬೇಕಾದುದು ಇಂದಿನ ಅನಿವಾರ‍್ಯತೆಯಾಗಿದೆ.

ಸುನಾಮಿ ಅನೇಕ ಶತಮಾನಗಳ ನಂತರ ಬರಬಹುದು. ಆದರೆ ವಿಶ್ವದ ಹವಾಮಾನ, ಪರಿಸರ ಮತ್ತು ಜನಜೀವನ ಬದಲಾಗುತ್ತಿರುವ ಈ ಕಾಲದಲ್ಲಿ ಮನುಷ್ಯಸಹಜವಾದ ಸ್ವಾರ್ಥ, ಲೋಭಿತನ ಮನುಷ್ಯನ ಮನಸ್ಸನ್ನು ಆಕ್ರಮಿಸಿರುವ ಒಂದು ರಾಷ್ಟ್ರ ಅಥವಾ ಪ್ರದೇಶದ ಹವಾಮಾನ ಸಮತೋಲನ ಮತ್ತೊಂದು ರಾಷ್ಟ್ರ ಮತ್ತು ಪ್ರದೇಶದ ಹವಾಮಾನದ ಜೊತೆಯಲ್ಲಿ ಹೊಂದಿಕೊಂಡಿರುವಾಗ ಪಕ್ಷಿಜನ್ಯ ಸಾಂಕ್ರಾಮಿಕ ರೋಗ ಆಯಾಯ ರಾಷ್ಟ್ರಗಳ ಬಾಗಿಲಲ್ಲೇ ಪಿಶಾಚಿಯಂತೆ ಕಾದು ನಿಂತಿರಲು ಹವಾಮಾನ ಸಮತೋಲನವನ್ನು ಸಂರಕ್ಷಿಸಲು ಪ್ರತಿಯೊಂದು ರಾಷ್ಟ್ರ ಸಂಕಲ್ಪಬದ್ಧವಾಗಬೇಕು. ಇಂತಹ ಅನಾಹುತಗಳು ಭಾರತವನ್ನು ಬಾಧಿಸುವಷ್ಟು ಬಹುಶಃ ಯಾವ ರಾಷ್ಟ್ರವನ್ನು ಕೂಡ ಬಾಧಿಸುತ್ತಿಲ್ಲ. ಅಂತಹ ನಾಜೂಕಾದ ಪರಿಸ್ಥಿತಿಯಲ್ಲಿ ನಾವಿದ್ದೇವೆ. ಒಂದು ಶತಮಾನದ ಭಾರತದ ಇತಿಹಾಸದಲ್ಲಿ ಪ್ರಾಕೃತಿಕ ಮತ್ತು ಮಾನವೀಯ ಆಕಸ್ಮಿಕಗಳಿಂದ ಅತ್ಯಧಿಕ ಸಾವು ನೋವುಗಳನ್ನು ಅನುಭವಿಸಿದ ರಾಷ್ಟ್ರಗಳಲ್ಲಿ ಭಾರತ ಪ್ರಥಮ ಪಂಕ್ತಿಯಲ್ಲಿದೆ. ಸುನಾಮಿ, ಭೂಕಂಪ, ಬಿರುಗಾಳಿ ಇತ್ಯಾದಿ ಭಯಂಕರ ದುರ್ಘಟನೆಗಳಿಂದ ತತ್ತರಿಸಿದೆ. ರೈಲ್ವೆ ಅವಘಡಗಳಲ್ಲಿ ವಿಶ್ವದಲ್ಲಿ ೧೦ನೇ ಸ್ಥಾನ, ವಿಮಾನ ಅವಘಡಗಳಲ್ಲಿ ೬ನೇ ಸ್ಥಾನ, ಬೆಂಕಿ ಮತ್ತು ಭೂಕುಸಿತದಿಂದ ೭ನೇ ಸ್ಥಾನ ಮತ್ತು ಸುಳಿಗಾಳಿ ಮತ್ತು ಬಿರುಗಾಳಿಯಿಂದ ೫ನೇ ಸ್ಥಾನವನ್ನು ಪಡೆದ ರಾಷ್ಟ್ರ ನಮ್ಮದಾಗಿದೆ. ಮುನ್ಸೂಚನೆಯ ಬಗ್ಗೆ ಎಚ್ಚರಿಕೆಯನ್ನು ತೆಗೆದುಕೊಳ್ಳಲಾಗದ ಮತ್ತು ಅನಾಹುತವಾದ ಮೇಲೆ ಸಮಪರ್ಕವಾದ ಪರಿಹಾರ ಕಾರ್ಯಕ್ರಮವನ್ನು ಕೈಗೊಳ್ಳದ ಸೂಕ್ತ ಗ್ರಹಿಕೆಯಿಲ್ಲದ ದೇಶ ನಮ್ಮದಾಗಿದೆ. ಇಂತಹ ಭಾವನೆಗಳು ಕೂಡ ನಮ್ಮ ದೇಶದ ದುರ್ಘಟನೆಗಳಾಗಿವೆ.