ಬೆಂಗಳೂರಿನಲ್ಲಿ ಮೊನ್ನೆ (ಜೂನ್ ೬) ಪ್ರಾರಂಭವಾಗಿ ಇಂದು ಮುಕ್ತಾಯಗೊಳ್ಳುತ್ತಿರುವ ಅಖಿಲ ಭಾರತ ಪೊಲೀಸ್ ವಿಜ್ಞಾನ ಕಾಂಗ್ರೆಸ್ಸಿನ ಸಮಾವೇಶದ ಸಂದರ್ಭದಲ್ಲಿ ರಾಷ್ಟ್ರದ ಪೊಲೀಸ್ ಆಡಳಿತೆಯ ಬಗ್ಗೆ ಒಂದು ಸಿಂಹಾವಲೋಕನ ಅಗತ್ಯ. ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪೊಲೀಸ್ ಕಾನೂನನ್ನು ಮತ್ತು ವ್ಯವಸ್ಥೆಯನ್ನು ಪುನಃ ಸಜ್ಜುಗೊಳಿಸುವ ವಿಚಾರ ಈಗ ಸೂಕ್ತವಾಗಿದೆ.

ಪೊಲೀಸ್ ವ್ಯವಸ್ಥೆ ೧೮೬೧ರ ಪೊಲೀಸ್ ಕಾಯ್ದೆಯ ಪ್ರಕಾರ ರಚಿಸಲಾಗಿದೆ. ೧೮೫೭ರಲ್ಲಿ ನಡೆದ ಪ್ರಥಮ ಸ್ವಾತಂತ್ರ್ಯ ಹೋರಾಟದ ಅಭಿಲಾಷೆ ಮರುಕಳಿಸಿದಂತೆ ದಮನಗೊಳಿಸುವ ಮತ್ತು ಬ್ರಿಟಿಷ್ ವಸಾಹತುಶಾಹಿ ದೊರೆಗಳ ಸಾಮ್ರಾಜ್ಯಶಾಹಿ ಕೈ ಬಲಪಡಿಸುವ ಉದ್ದೇಶದಿಂದ ಈ ಕಾನೂನನ್ನು ರಚಿಸಲಾಗಿತ್ತು. ಸ್ವಾತಂತ್ರ್ಯವನ್ನು ಪಡೆದ ನಂತರ ಅತ್ಯಂತ ಬಲಿಷ್ಠ ಹಕ್ಕುಬಾಧ್ಯತೆ, ಸಾಮಾಜಿಕ ನ್ಯಾಯ, ಜಾತ್ಯತೀತ ವ್ಯವಸ್ಥೆಯನ್ನೊಳಗೊಂಡ ಸಂವಿಧಾನವನ್ನು ಸಂರಕ್ಷಿಸುವ ಕಾನೂನು ವ್ಯವಸ್ಥೆ ರಾಷ್ಟ್ರಕ್ಕೆ ದೊರಕಬೇಕಿತ್ತು. ಈಗ ಕಾನೂನು ವ್ಯವಸ್ಥೆಯಲ್ಲಿ ಕಂಡುಬರುವ ಅನೇಕ ನ್ಯೂನತೆಗಳಿಗೆ ಶಿಥಿಲಗೊಂಡಿರುವ ಪೊಲೀಸ್ ಕಾಯ್ದೆಯೇ ಕಾರಣ. ಅದರ ಬದಲಾವಣೆ ಮತ್ತು ಪರಿವರ್ತನೆ ಇಂದಿನ ರಾಷ್ಟ್ರದ ಅವಶ್ಯಕತೆ.

ಪೊಲೀಸ್ ಆಡಳಿತ ಸುಧಾರಣೆಯ ಬಗ್ಗೆ ಅನೇಕ ಆಯೋಗಗಳು ರಚನೆಯಾಗಿವೆ. ಅದರಲ್ಲಿ ಧರ್ಮವೀರ ಆಯೋಗ ಪ್ರಮುಖವಾಗಿದೆ. ಯು.ಪಿ.ಎ. ಸರಕಾರ ಕೂಡ ಪೊಲೀಸ್ ಕಾಯ್ದೆಯನ್ನು ಪುನಾರಚಿಸುವ ಒಂದು ಸಮಿತಿಯನ್ನು ರಾಷ್ಟ್ರದ ಅತ್ಯಂತ ಪ್ರಮುಖ ನ್ಯಾಯವಾದಿಗಳಾದ ಸೋಲಿ ಸೊರಾಬ್ಜಿಯವರ ಅಧ್ಯಕ್ಷತೆಯಲ್ಲಿ ರಚಿಸಿದೆ. ಎರಡನೆ ಆಡಳಿತ ಸುಧಾರಣಾ ಆಯೋಗ ಕೂಡ ರಚನೆಯಾಗಿ ಸಾರ್ವಜನಿಕ ಕಾನೂನು ಸುವ್ಯವಸ್ಥೆ ಮತ್ತು ಸಂಘರ್ಷದ ಪರಿಹಾರದ ಬಗ್ಗೆ ಅಧ್ಯಯನವನ್ನು ಮಾಡುತ್ತಿದೆ.

ಪೊಲೀಸ್ ಕಾಯ್ದೆಯ ಮತ್ತು ಪೊಲೀಸ್ ವ್ಯವಸ್ಥೆಯ ಸುಧಾರಣೆ ರಾಷ್ಟ್ರದ ಆದ್ಯತೆಯ ವಿಚಾರವಾಗಿದೆ. ಸಾರ್ವಜನಿಕ ಆಡಳಿತೆ, ಪ್ರಜಾಸತ್ತೆ ಮತ್ತು ಪ್ರಗತಿಗೆ ಅಡ್ಡಿ ಆತಂಕವೆನಿಸಿರುವ ಪ್ರಸಕ್ತ ಪೊಲೀಸ್ ವ್ಯವಸ್ಥೆಗೆ ತೀವ್ರ ಶಸ್ತ್ರ ಚಿಕಿತ್ಸೆಯಾಗಬೇಕಾಗಿದೆ.

ಪ್ರಜಾಸತ್ತಾತ್ಮಕ ವ್ಯವಸ್ಥೆಯಲ್ಲಿ ಪೊಲೀಸ್ ವ್ಯವಸ್ಥೆ ಈ ತೆರನಾಗಿರಬೇಕು :

೧. ಕಾನೂನಿಗೆ ಬದ್ಧವಾಗಿರಬೇಕೇ ವಿನಾ ಕಾನೂನನ್ನು ಬಿಗಿಮುಷ್ಟಿಯಲ್ಲಿಟ್ಟು ದಮನಕಾರಿ ಯಾಗಬಾರದು. ಕಾನೂನು ಭಂಗವಾದಾಗ ಅದರ ಜವಾಬ್ದಾರಿಯನ್ನು ತಾನು ಹೊರುವ ಸ್ಪಂದನವಿರಬೇಕು.

೨. ಪ್ರಜಾಸತ್ತಾತ್ಮಕ ವ್ಯವಸ್ಥೆ ಮತ್ತು ಸಮುದಾಯಕ್ಕೆ ತಾನು ಜವಾಬ್ದಾರಿಯಾಗಬೇಕು.

೩. ಪಾರದರ್ಶಕವಿರಬೇಕು.

೪. ಮಾನವ ರಕ್ಷಣೆ, ಹಕ್ಕಿನ ನಿರ್ವಹಣೆಗೆ ಬದ್ಧವಾಗಿರಬೇಕು.

೫. ಮಾನವನ ಹಕ್ಕುಗಳನ್ನು ಸಂರಕ್ಷಿಸಬೇಕು.

೬. ತನ್ನ ವೃತ್ತಿಪರ ನಿರ್ವಹಣೆಯಲ್ಲಿ ಸಮಾಜಕ್ಕೆ ಸ್ಪಂದಿಸಬೇಕು.

೭. ತಾನು ಸಲ್ಲಿಸುತ್ತಿರುವ ಸಮುದಾಯದ ಸೇವೆಗೆ ಪ್ರಾತಿನಿಧಿಕವಾಗಿರಬೇಕು.

ಪೊಲೀಸ್ ಸಮುದಾಯದ ಜೊತೆಯಲ್ಲಿ ಪಾಲುಗೊಳ್ಳದೆ ಇದ್ದರೆ ಸಾರ್ವಜನಿಕ ಭಾವನೆ ಗಳನ್ನು ಅರ್ಥೈಸಲಾಗುವುದಿಲ್ಲ. ಅದರ ಬದಲು ತನ್ನ ಸ್ವಂತ, ಸ್ವಹಿತ ಆಸಕ್ತಿಯಿಂದ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿ ನಡೆದುಕೊಂಡು ಸಮಾಜದ ವಿಶ್ವಾಸ ಕಳೆದು ಕೊಳ್ಳುತ್ತದೆ, ಕ್ಲೇಶ ವರ್ಧಿಸುತ್ತದೆ ಮತ್ತು ಇದೇ ಪೊಲೀಸ್ ವ್ಯವಸ್ಥೆ ಸಮಾಜದಿಂದ ಪ್ರತ್ಯೇಕವಾಗುತ್ತದೆ.

ಮತ್ತೊಬ್ಬರ ಮೇಲೆ ಪೊಲೀಸ್ ಕೆಲಸ ಮಾಡುವುದಲ್ಲ. ಪೊಲೀಸ್ ಪ್ರಜಾಸತ್ತಾತ್ಮಕ ಮತ್ತು ಜನಶಕ್ತಿಯನ್ನು ಹೆಚ್ಚಿಸುವಂತಿರಬೇಕು. ಸಮಾಜದ ಮತ್ತು ಅಧಿಕಾರಶಾಹಿಯ ಮಧ್ಯೆ ಸಂಘರ್ಷ ಉಂಟಾದಾಗ ಉಳ್ಳವರು ಮತ್ತು ಬಡವರ ಮಧ್ಯೆ ಕ್ಲೇಶ ಉದ್ಭವಿಸಿದಾಗ ಇಲ್ಲದವರ ಮತ್ತು ಸಮಾಜದ ಪರವಾಗಿ ಕಾರ್ಯಾಚರಣೆ ಮಾಡಬೇಕಾಗಿದೆ.

ಇಂದು ಕಾನೂನು ವ್ಯವಸ್ಥೆಯನ್ನು ಕಡೆಗಣಿಸುವ ಅನೇಕ ಜಾತೀಯ, ಮತೀಯ ಮತ್ತು ಇನ್ನಿತರ ಶಕ್ತಿಗಳು ಹೊಂಚು ಹಾಕುತ್ತಿರುವಾಗ ಪೊಲೀಸ್ ಇನ್ನಷ್ಟು ಜಾಗೃತವಾಗಬೇಕಾಗಿದೆ. ದಲಿತ, ಹಿಂದುಳಿದ, ಬಡ ಮತ್ತು ಸಾಮಾನ್ಯ ವರ್ಗ ಎಚ್ಚೆತ್ತಾಗ ಅವರ ಆಶಯಗಳಿಗೆ ಸ್ಪಂದಿಸುವ ವ್ಯವಸ್ಥೆಯಿರಬೇಕಾಗುತ್ತದೆ.

ವ್ಯವಸ್ಥಿತ ಕ್ರಿಮಿನಲ್ ಅಪರಾಧಗಳು, ಉಗ್ರಗಾಮಿ ಚಟುವಟಿಕೆಗಳು ಮತ್ತು ಆತಂಕಕಾರೀ ಚಟುವಟಿಕೆಗಳು ಹೆಚ್ಚುತ್ತಿರುವ ಈ ಕಾಲದಲ್ಲಿ ರಾಷ್ಟ್ರದ ಮತ್ತು ಮಾನವೀಯ ಭದ್ರತೆಗಳು ಆತಂತ್ರವಾಗಬಹುದು.

ಅಂತಹ ಸಂದರ್ಭದಲ್ಲಿ ಇಡೀ ಪೊಲೀಸ್ ವ್ಯವಸ್ಥೆಯನ್ನು ತೀವ್ರವಾಗಿ ಪುನರ್‌ರೂಪಿಸ ಬೇಕಾಗಿದೆ. ಸಮಾಜದ ಕ್ರಿಯಾತ್ಮಕ ಪ್ರತಿಸ್ಪಂದನ ಕೂಡ ಅನಿವಾರ‍್ಯ. ಅಂತಾರಾಜ್ಯ ಅಪರಾಧಗಳ ಕಾನೂನನ್ನು ಮತ್ತೆ ಸಜ್ಜುಗೊಳಿಸುವ ಪ್ರಯತ್ನ ಇಂದಿನ ಅವಶ್ಯಕತೆಯಾಗಿದೆ.

ನ್ಯಾಯಾಂಗ ಮತ್ತು ಕಾರ್ಯಾಂಗದ ಮಧ್ಯೆ ಸೇತುವೆಗಳು ಕುಸಿಯುತ್ತಿರುವ ಸಂದರ್ಭ ದಲ್ಲಿ ಪರಸ್ಪರ ಪೂರಕವಾಗಿ ಮತ್ತೆ ಸಜ್ಜುಗೊಳಿಸುವ ಪ್ರಯತ್ನ ಸತತವಾಗಿ ನಡೆಸಬೇಕು. ಕ್ರಿಮಿನಲ್ ಅನಾಹುತಗಳನ್ನು ತಡೆಹಿಡಿಯುವ ವಿಧಿ ವಿಧಾನಗಳ ಸಂಯೋಜನೆಯಾಗ ಬೇಕಾಗಿದೆ. ಅನೇಕ ಸಾರ್ವಜನಿಕ ವ್ಯವಸ್ಥೆಯ ಸಮಸ್ಯೆಗಳು ಇಂದು ಬರೀ ರಾಜ್ಯ-ರಾಜ್ಯ ಸಮಸ್ಯೆಗಳಾಗಿ ಉಳಿದಿಲ್ಲ. ಇದೊಂದು ವ್ಯಾಪಕ ಕ್ರಿಮಿನಲ್ ಜಾಲವಾಗಿ ಬೆಳೆಯುತ್ತಿದೆ. ನಗರೀಕರಣ ಹೆಚ್ಚಿದಂತೆ ಅಪರಾಧಗಳು ಕೂಡ ಅದೇ ದಾಮಾಶಯದಲ್ಲಿ ಹೆಚ್ಚುತ್ತಿವೆ. ನಗರ ಪೊಲೀಸ್ ವ್ಯವಸ್ಥೆಯೇ ಒಂದು ವ್ಯಾಪಕ ಕಾನೂನು ವ್ಯವಸ್ಥೆಯ ಸವಾಲಾಗಿ ನಮ್ಮ ಮುಂದಿದೆ.

ಪೊಲೀಸ್ ಸ್ಟೇಶನ್‌ಗಳನ್ನು ಬಲಪಡಿಸಬೇಕು. ಆಡಳಿತದ ವೇಗದಿಂದ ಅತಿ ಹೆಚ್ಚಿನ ವಾಯುವೇಗದಿಂದ ಅಪರಾಧಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಅತ್ಯಂತ ಆಧುನಿಕ ಉಪಕರಣಗಳು ಮತ್ತು ನವನವೀನ ತಂತ್ರಗಳನ್ನು ಅಳವಡಿಸುವುದು ಅನಿವಾರ‍್ಯ.

ಕ್ರಿಮಿನಲ್ ನ್ಯಾಯ ವ್ಯವಸ್ಥೆಯ ಪರಿವರ್ತನೆ ಅತಿ ಕ್ಷಿಪ್ರವಾಗಿ ಆಗಬೇಕಾಗಿದೆ. ನ್ಯಾಯಾಲ ದಲ್ಲಿ ಅತ್ಯಂತ ಪರಿಣಾಮಕಾರಿಯಾಗಿ ವ್ಯಾಜ್ಯಗಳನ್ನು ಎದುರಿಸುವ ನ್ಯಾಯಮಂಡನೆ (prosecution)ಯನ್ನು ಬಲಪಡಿಸಬೇಕಾಗಿದೆ. ಅಪರಾಧಗಳನ್ನು ಅಂತಾರಾಜ್ಯ, ರಾಷ್ಟ್ರೀಯ ರಕ್ಷಣೆ, ಅಂತಾರಾಜ್ಯ ಅಪರಾಧಗಳು ಮತ್ತಿನ್ನಿತರ ಪ್ರಕಾರಗಳಾಗಿ ವಿಂಗಡಿಸುವ ಸಂದರ್ಭ ಬಂದಿದೆ. ಸಾರ್ವಜನಿಕ ಕಾನೂನು ವ್ಯವಸ್ಥೆಯ ಉಲ್ಬಣ ಸ್ಥಿತಿಯನ್ನು ನಿಭಾಯಿಸುವ ಕಾನೂನು ಮತ್ತು ಆಡಳಿತೆಯ ಪುನರ್‌ವ್ಯವಸ್ಥೆಯನ್ನು ರಾಷ್ಟ್ರದ ಎಲ್ಲೆಡೆಯಲ್ಲಿಯೂ ಸಿದ್ಧಪಡಿಸ ಬೇಕಾಗಿದೆ.

ಪ್ರಸಕ್ತ ಕಾಲದಲ್ಲಿ ನ್ಯಾಯವಾದಿಗಳು ಕೂಡ ವಿಶೇಷ ತರಬೇತಿ, ಪ್ರಗತಿಪರ ಮನೋ ಭೂಮಿಕೆ ಮತ್ತು ಅನುಭಾವದ ಆಧಾರದ ಮೇಲೆ ಕಾನೂನಿನ ಸುವ್ಯವಸ್ಥೆಯಲ್ಲಿ ಪ್ರಧಾನ ಪಾತ್ರವಹಿಸಬೇಕಾಗಿದೆ.

ರಾಷ್ಟ್ರದ ನೈತಿಕ ಸ್ತರ ನುಚ್ಚು ನೂರಾಗುತ್ತಿರುವ ಈ ಕಾಲದಲ್ಲಿ, ಕಾನೂನು ಮತ್ತು ಸುವ್ಯವಸ್ಥೆ ಮಾನ್ಯತೆಯನ್ನು ಕಳೆದುಕೊಳ್ಳುವ ಸಂದಿಗ್ಧ ಕಾಲದಲ್ಲಿ ಪ್ರಜಾಸತ್ತೆಯ ಸಂಸ್ಥೆಗಳ ಮೇಲೆ ಜನತೆಯ ವಿಶ್ವಾಸ, ಕುಸಿಯುತ್ತಿರುವಲ್ಲಿ ಕಾನೂನಿನ ಉಲ್ಲಂಘನೆಯೇ ವ್ಯವಸ್ಥೆ ಯಾಗಿರುವ ಸಂದರ್ಭದಲ್ಲಿ ಕಾನೂನು ಮತ್ತು ವ್ಯವಸ್ಥೆಯ ವಿಶ್ವಾಸದ ಕ್ಷೇತ್ರವನ್ನು ಪುನರುತ್ಥಾನ ಮಾಡುವ ಜವಾಬ್ದಾರಿ ನ್ಯಾಯವಾದಿ, ಪೊಲೀಸ್ ಮತ್ತು ನ್ಯಾಯಾಂಗದ ಮೇಲಿದೆ.

ಅಧಿಕಾರಿ-ರಾಜಕಾರಣಿ-ಪೊಲೀಸ್-ಕ್ರಿಮಿನಲ್‌ಗಳ ಸಂಬಂಧ ಹೆಚ್ಚೆಚ್ಚು ಕುದುರುತ್ತಿರುವ ಅಪಾಯಕರ ಬೆಳವಣಿಗೆಯನ್ನು ದಮನಿಸೇಕು. ಅಪರಾಧದ ಕಾನೂನುಗಳ ಹಿಂದೆ ಸತ್ಯದ ಹತೋಟಿಯನ್ನು ಪುನರ್‌ಸ್ಥಾಪಿಸುವ ಮಹಾತ್ಮಾಗಾಂಧೀಜಿಯವರ ಉನ್ನತ ಆದರ್ಶಗಳು ಮೆಕಾಲೆಯ ಒಣ ಕಾನೂನಿನ ಭಾಷೆಯನ್ನು ಮೆಟ್ಟಿ ಮೇಲೇರಿ ವಿಜಯಿಯಾಗುವ ಪರಿಸ್ಥಿತಿ ಉಂಟಾಗಬೇಕು.

ಅಪರಾಧವನ್ನು ನಿಗ್ರಹಿಸುವ ಕಾನೂನಿನ ತೊಡಕು, ಸಂದಿಗ್ಧತೆ, ಭಾಷೆಗಳ ಮಾಂತ್ರಿಕತೆ ಅದ್ವಿತೀಯವಾಗಿದ್ದರೂ ನ್ಯಾಯ ಬೇರೊಂದು ಹೆದ್ದಾರಿಯಲ್ಲಿ ಪಯಣಿಸುವ ಪ್ರವೃತ್ತಿ ನಿಲ್ಲಬೇಕಾಗಿದೆ. ಕಾನೂನಿನ ಹೆದ್ದಾರಿಯಲ್ಲಿ ಸತ್ಯ ನ್ಯಾಯಗಳ ರಥ ಸಂಚಲಿಸುವ ಪರಿಸ್ಥಿತಿ ಭಾರತದಲ್ಲಿ ಪುನರುತ್ಥಾನವಾಗಬೇಕು.