೧೯೨೦ರಲ್ಲಿ ಸೂರತ್‌ನಲ್ಲಿ ನಡೆದ ಬೃಹತ್ ಸಾರ್ವಜನಿಕ ಸಭೆಯಲ್ಲಿ ಡಾ. ಬಿ.ಆರ್. ಅಂಬೇಡ್ಕರ್‌ರವರು ಈ ರೀತಿಯ ಉದ್ಗಾರ ತೆಗೆದರು. “ಭಾರತೀಯ ಸಮಾಜ ಹಲವಾರು ಹಂತದಲ್ಲಿ ಅಸಂಬದ್ಧ ಅಸಮಾನತೆಯನ್ನು ಹುಟ್ಟು ಹಾಕುವ ಕೇಂದ್ರವಾಗಿದೆ. ಸಾಮಾಜಿಕ ವ್ಯವಸ್ಥೆಯನ್ನು ಯಾವುದೇ ಬಾಗಿಲು ಮತ್ತು ಮೆಟ್ಟಿಲುಗಳಿಲ್ಲದ ಸೌಧಕ್ಕೆ ಹೋಲಿಸಬಹುದು. ಈ ರೀತಿ ಜನಾಂಗ ಜನಾಂಗಗಳು ಹುಟ್ಟಿ ಹೊರ ಪ್ರಪಂಚದ ಸಂಪರ್ಕವಿಲ್ಲದೆ ಸಾಯುವ ಪರಿಸ್ಥಿತಿಯನ್ನು ಕಾಣುತ್ತಿದ್ದೇವೆ. ಎಲ್ಲಿಯವರೆಗೆ ಅಸ್ಪೃಶ್ಯರು ಮೌನವಾಗಿ, ಹೇಡಿಗಳಾಗಿ ಈ ವ್ಯವಸ್ಥೆಯಲ್ಲಿರುತ್ತಾರೋ ಅಲ್ಲಿಯವರೆಗೆ ಬೆಳಕನ್ನು ಕಾಣ ಲಾರರು”.

“ಭಯೋತ್ಪಾದನೆಯ ವಿರುದ್ಧ ನಡೆಯುವ ಸಮರ, ಬಡತನದ ವಿರುದ್ಧ ನಡೆಸಬೇಕಾದ ಸಮರದ ಜೊತೆಯಲ್ಲಿ ಹೆಣೆದುಕೊಂಡಿದೆ”. ಇದನ್ನು ಹೇಳಿರುವವರು ಯಾವುದೇ ಶಾಂತಿ ಮಂತ್ರವನ್ನು ಉಚ್ಚರಿಸುತ್ತಿರುವ ಸಂಸ್ಥೆಗಳಲ್ಲ. ಇದನ್ನು ಹೇಳಿದವರು ಅಮೆರಿಕದ ವಿದೇಶಾಂಗ ಸಚಿವರಾಗಿದ್ದ ಕಾಲಿನ್ ಪಾವೆಲ್‌ರವರು.

ಜಗತ್ತಿನಲ್ಲಿ ಪ್ರತಿವರ್ಷ ೮ ಮಿಲಿಯಕ್ಕಿಂತಲೂ ಹೆಚ್ಚು ಜನರು ಅತ್ಯಂತ ಬಡತನದ ಪರಿಸ್ಥಿತಿಯಲ್ಲಿ ಬದುಕಲಾರದೆ ಸಾಯುತ್ತಿರುವ ದಾರುಣ ಚಿತ್ರವಿದೆ. ಪ್ರತಿದಿನ ‘೨೦ ಸಾವಿರ ಕ್ಕಿಂತಲೂ ಹೆಚ್ಚು ಮಂದಿ ಕಠಿಣವಾದ ಬಡತನದಿಂದ ಸತ್ತಿದ್ದಾರೆ; ೮ ಸಾವಿರ ಮಕ್ಕಳು, ೫ ಸಾವಿರ ತಾಯಿ ಮತ್ತು ತಂದೆಯಂದಿರು ಕಾಯಿಲೆಯಿಂದ, ೭೫೦೦ ಯುವಕ-ಯುವತಿಯರು ಏಡ್ಸ್ ಮಹಾರೋಗದಿಂದ, ಉಸಿರಾಟದ ಮಾಲಿನ್ಯದಿಂದ, ಸಾವಿರಾರು ಮಂದಿ ಅಸ್ಪತ್ರೆಯ ವಾರ್ಡುಗಳಲ್ಲಿ ಔಷಧಿಗಳಿಲ್ಲದೆ ಕೊನೆಯುಸಿರೆಳೆದಿದ್ದಾರೆ’ ಎಂಬ ವರ್ತಮಾನಗಳು ಹೊರ ಬರುತ್ತಿವೆ. ಗಮನಕ್ಕೇ ಬಾರದೆ ಸಾಯುವವರು ಸಹಸ್ರ ಸಹಸ್ರ ಮಂದಿ! ಅಮೆರಿಕ ಸೆಪ್ಟೆಂಬರ್ ೨೦೦೧ ರಿಂದ ಅಂದರೆ World Trade Centre ಕಟ್ಟಡ ಉಗ್ರಗಾಮಿಗಳಿಗೆ ಬಲಿಯಾದಂದಿ ನಿಂದ ಭಯೋತ್ಪಾದಕರ ವಿರುದ್ಧ ಸಮರ ಸಾರಿದೆ. ಆದರೆ ಜಗತ್ತಿನ ಅಸ್ಥಿರತೆಗೆ ಕಾರಣವಾದ ಮೂಲ ಕಾರಣಗಳ ಬಗ್ಗೆ ಗಮನವನ್ನು ಹರಿಸಿಲ್ಲ. ಪ್ರತಿವರ್ಷ ಅಮೇರಿಕ ೪೫೦ ಬಿಲಿಯನ್ ಡಾಲರ್ ಹಣವನ್ನು ರಕ್ಷಣಾ ವ್ಯವಸ್ಥೆಗೆ ಖರ್ಚು ಮಾಡುತ್ತಿದೆ. ಆದರೆ ಅದರಿಂದ ಶಾಂತಿ ಮತ್ತು ನೆಮ್ಮದಿ ಖರೀದಿಸಲು ಅಸಮರ್ಥವಾಗಿದೆ. ಬಹುಶಃ ಅವರು ರಕ್ಷಣಾ ವ್ಯವಸ್ಥೆಗೆ ಖರ್ಚು ಮಾಡುವ ೧/೩೦ ಅಂಶದ ಮೊತ್ತವನ್ನು ಅಂದರೆ ೧೫ ಬಿಲಿಯನ್ ಡಾಲರ್ ಖರ್ಚು ಮಾಡಿದರೆ ಜಗತ್ತಿನ ಕಡುಬಡತನವನ್ನು ಹೋಗಲಾಡಿಸಿ ಜಾಗತಿಕ ಸಮುದಾಯವನ್ನು ಅಲುಗಾಡಿಸುವ ತೀವ್ರ ಬಡತನ ಮತ್ತು ಅದರಿಂದ ಉಂಟಾಗುವ ಅಶಾಂತಿ, ಹಿಂಸೆ ಮತ್ತು ಜಾಗತಿಕ ಭಯೋತ್ಪಾದನೆಯ ಮೂಲೋತ್ಪಾಟನೆ ಮಾಡಬಹುದಿತ್ತು. ಈ ೧೫ ಬಿಲಿಯನ್ ಡಾಲರ್ ಇಡೀ ಅಮೇರಿಕದ ಉತ್ಪನ್ನದ ೧೦೦ ಡಾಲರ್‌ಗಳ ಶೇಕಡ ೧೫ ಮಾತ್ರ ಆಗುತ್ತದೆ. ಪ್ರತಿ ರಾಷ್ಟ್ರಗಳ ಸಮುದಾಯಗಳ ಮಧ್ಯೆ ಮತ್ತು ರಾಷ್ಟ್ರ ರಾಷ್ಟ್ರಗಳ ಮಧ್ಯೆ ಒಂದು ಕಡೆ ಜೀರ್ಣಿಸಲಾಗದ ಶ್ರೀಮಂತಿಕೆ; ಮತ್ತೊಂದು ಕಡೆ ಕಠಿಣ ಬಡತನ. ಮಾನವ ಜನಾಂಗದ ಅತ್ಯಂತ ದೊಡ್ಡ ದುರಂತವೆಂದರೆ ಒಟ್ಟು ಜನಸಂಖ್ಯೆಯ ೧/೬ ಅಂಶ ಪ್ರಗತಿಯ ಏಣಿಯ ಮೊದಲ ಮೆಟ್ಟಿಲೂ ಎಟಕದ ರೀತಿಯಲ್ಲಿದೆ.

ಜಗತ್ತಿನ ಆರ್ಥಿಕ ಬೆಳವಣಿಗೆಯ ವಿಪರ್ಯಾಸವೆಂದರೆ ೧/೬ ಅಂಶ ಜನಸಂಖ್ಯೆ ಅತ್ಯಂತ ಶ್ರೀಮಂತ ಹಂತದಲ್ಲಿದ್ದರೆ ೨/೩ ಜನಸಂಖ್ಯೆ ಮಧ್ಯಮವರ್ಗದಲ್ಲಿದ್ದು, ಶ್ರೀಮಂತ ರಾಷ್ಟ್ರಗಳು ಸಾಮಾಜಿಕ ವ್ಯತ್ಯಾಸಗಳನ್ನು ಮೆಟ್ಟಿ ಚಲನಶೀಲವಾಗಿ ರಾಜಕೀಯ ಸ್ವಾತಂತ್ರ್ಯ, ವೈಜ್ಞಾನಿಕ ಕ್ರಾಂತಿ, ಕೈಗಾರಿಕಾ ಕ್ರಾಂತಿ, ನಗರೀಕರಣದ ತೀವ್ರತೆ, ತಂತ್ರಜ್ಞಾನದ ಪರಿವರ್ತನೆ, ಜಾಗತಿಕ ಆರ್ಥಿಕ ಹೊಂದಾಣಿಕೆಯಿಂದ, ವಸಾಹತುಶಾಹಿಯ ಆಡಳಿತೆಯ ನಿರಾಕರಣೆಯಿಂದ ಮೇಲ್ ಸ್ತರದ ಪ್ರಗತಿಯನ್ನು ಸಾಧಿಸಿವೆ.

ಭಾರತದಲ್ಲಿ ಮೂಲಭೂತ ಸೌಕರ್ಯಗಳನ್ನು ಕೂಡ ಬಡವರಿಗೆ ನಿರಾಕರಿಸಲಾಗಿರುತ್ತದೆ. ಸರ್ಕಾರದ ಸಾರ್ವಜನಿಕ ಸಂಸ್ಥೆಗಳು ಅವರ ನೆರವಿಗೆ ಬಾರದ ರೀತಿಯಲ್ಲಿ ಅದಕ್ಷ ಮತ್ತು ಭ್ರಷ್ಟಾಚಾರ ಭರಿತ ಸಂಸ್ಥೆಗಳನ್ನು ಬೆಳೆಸಿದ್ದೇವೆ. ಉದಾಹರಣೆಗೆ ಸಾರ್ವಜನಿಕ ಆರೋಗ್ಯ ಸಂಸ್ಥೆಗಳ ಒಟ್ಟು ಬಂಡವಾಳದ ಶೇಕಡ ೭೦ ರಿಂದ ೮೦ ಸಿಬ್ಬಂದಿಗಳಿಗೆ ಖರ್ಚಾಗುತ್ತಿದ್ದು, ಉಳಿದ ಶೇ. ೧೦ರಷ್ಟು ವ್ಯವಸ್ಥೆಯಲ್ಲಿ ಅಡಗಿರುವ ಭ್ರಷ್ಟಾಚಾರದಲ್ಲಿ ಕರಗಿ ಹೋಗುತ್ತದೆ. ಬಡವರು ಯಾಕೆ ಸಾರ್ವಜನಿಕ ವ್ಯವಸ್ಥೆಯಲ್ಲಿ ಸೋಲನ್ನು ಅನುಭವಿಸಿ ಸರ್ಕಾರದ ವ್ಯವಸ್ಥೆ ಯನ್ನು ನಿರ್ವಹಿಸಿದವರು ಮಾತ್ರ ನಿಜವಾದ ಲಾಭದ ಪಾಲುದಾರರಾಗುತ್ತಾರೆ ಎಂಬುದರ ಬಗ್ಗೆ ಆತ್ಮ ವಿಮರ್ಶೆ ಇಂದು ಬೇಕಾಗಿದೆ. ಭ್ರಷ್ಟ ಚುನಾವಣೆ ವ್ಯವಸ್ಥೆ ಕೂಡ ಈ ರೀತಿಯ ಶೋಷಣೆಗೆ ಕಾರಣವಾಗುತ್ತದೆ.

ಶ್ರೇಷ್ಠ ವಿಜ್ಞಾನಿ ಅಲ್ಬರ್ಟ್ ಐನ್‌ಸ್ಟೀನ್‌ರವರು “ನಾನು ನನ್ನ ಮಕ್ಕಳಿಗೆ ಕಲಿಸುವುದಿಲ್ಲ, ಬದಲಾಗಿ ಕಲಿಯುವ ವಾತಾವರಣವನ್ನು ಸೃಜಿಸುತ್ತೇನೆ” ಇದು ನಮ್ಮ ರಾಷ್ಟ್ರದ ಬಡವರ  ಸಬಲೀಕರಣದ ಮೂಲಮಂತ್ರವಾಗಬೇಕು. ಹಲವು ಸುಭದ್ರತಾ ಕಾರ್ಯಕ್ರಮಗಳಲ್ಲಿ ಶುದ್ಧ ಕುಡಿಯುವ ನೀರು, ಆರೋಗ್ಯ, ಪೋಷಕ ಆಹಾರ, ಸ್ತ್ರೀ ಸಮಾನತೆ, ಸಾರ್ವಜನಿಕ ಮತ್ತು ಖಾಸಗಿ ಕ್ಷೇತ್ರದಲ್ಲಿ ಮೀಸಲಾತಿ, ವಸತಿ ಮತ್ತು ಶಿಕ್ಷಣ ಒಳಗೊಂಡಿರಬೇಕು. ನವೀನ ಮತ್ತು ರಚನಾತ್ಮಕ ವಿಧಾನಗಳಿಂದ ಬಡತನವನ್ನು ಜೀವನದ ಅವಕಾಶಗಳನ್ನಾಗಿ ಉಪಯೋಗಿಸುವ ಪರಿವರ್ತನಾ ಮನೋವೇದಿಕೆ ಸಿದ್ಧವಾಗಬೇಕು. ಈ ಪ್ರಕ್ರಿಯೆ ಸಮಾಜದ ಕಟ್ಟ ಕಡೆಯ ಮನುಷ್ಯನಿಂದ ಪ್ರಾರಂಭವಾಗಬೇಕು. ಬಡವರನ್ನು ಆರ್ಥಿಕ, ಸಾಮಾಜಿಕ  ಸಮಸ್ಯೆಗಳನ್ನು ಪರಿಹಾರ ಮಾಡುವ ಪಾಲುದಾರರನ್ನಾಗಿ, ಆ ದಾರಿಯ ಅನ್ವೇಷಕರನ್ನಾಗಿ ಮತ್ತು ಐಶ್ವರ್ಯ ಸೃಷ್ಟಿಯ ಜೊತೆಗಾರರನ್ನಾಗಿ ಉಪಯೋಗಿಸಿದಾಗ ಮಾತ್ರ ಆಯಾಯ ರಾಷ್ಟ್ರದ ಆರ್ಥಿಕ ಪ್ರಗತಿಯ ಜೊತೆಯಲ್ಲಿ ಬಡವರು ಕೂಡ ಹೆಗಲಿಗೆ ಹೆಗೆಲೆಣೆಯಾಗಿ ನಡೆಯಲು ಸಾಧ್ಯ. ಇಲ್ಲದಿದ್ದರೆ ಸಬಲೀಕರಣದ ವ್ಯವಸ್ಥೆ ಮರೀಚಿಕೆಯಾಗುತ್ತದೆ.

ಆದುದರಿಂದ ಆಡಳಿತದ ಪರಿಕ್ರಮದ ಬಗ್ಗೆ ಗಂಭೀರ ಕಾರ್ಯಾಚರಣೆಯ ಮೂಲಕ ಬಡತನದ ವಿರುದ್ಧ ಸಮರ ಸಾರಬೇಕಾದುದು ಅನಿವಾರ‍್ಯ. ಬಡವರ ಸಬಲೀಕರಣವೇ ಭಾರತದ ವಿಕಾಸ. ಅದು ಆಡಳಿತದ ದಕ್ಷತೆಯನ್ನು ಹೊಂದಿಕೊಂಡಿರುತ್ತದೆ. ಹೊರಗಿನ ಉಗ್ರಗಾಮಿಗಳ ವಿರುದ್ಧ ನಡೆಯುವ ಸಮರದ ಜತೆಯಲ್ಲಿ ನಮ್ಮ ದೇಶದ ಒಳಗಿರುವ ಭ್ರಷ್ಟಾಚಾರದ ಮತ್ತು ಅದಕ್ಷತೆಯ ದೈತ್ಯ ಪ್ರವೃತ್ತಿಯ ವಿರುದ್ಧ ಸಮರ ಹೂಡಬೇಕು. ದೇಶದ ಆಂತರಿಕ ನೆಮ್ಮದಿ, ಆಡಳಿತೆಯ ಒಟ್ಟು ನಿರ್ವಹಣೆ ಮತ್ತು ಸಾಮಾಜಿಕ ನ್ಯಾಯದ ಭದ್ರತೆಯ ಕೋಟೆಯನ್ನು ಸುಭದ್ರಗೊಳಿಸಿದರೆ ಮಾತ್ರ ಭಯೋತ್ಪಾದಕರ ಧಾಳಿಗಳನ್ನು ಯಶಸ್ವಿಯಾಗಿ ಎದುರಿಸಬಹುದು.