ಬಾಂಗ್ಲಾ ದೇಶದ ಗ್ರಾಮೀಣ ಬ್ಯಾಂಕ್‌ನ ಸ್ಥಾಪಕರಾದ ಮಹಮ್ಮದ್ ಯೂನಸ್ ರವರಿಗೆ ನಾರ್ವೆಯ ನೋಬೆಲ್ ಸಮಿತಿಯವರು ವಿಶ್ವಶಾಂತಿಗೆ ಮೀಸಲಾಗಿರಿಸಿದ ನೋಬೆಲ್ ಪ್ರಶಸ್ತಿಯನ್ನು ಘೋಷಣೆ ಮಾಡಿದಾಗ ಜಗತ್ತೇ ನಿಬ್ಬೆರಗಾಯಿತು. ವಾಸ್ತವಿಕವಾದ ಶಾಂತಿ ಸಮುದಾಯದ ಹೃದಯ ಬಡವನಲ್ಲಿದೆ ಎಂಬುದನ್ನು ಪ್ರಥಮವಾಗಿ ಗುರುತಿಸಲಾಯಿತು. ಬಡತನದ ನಿರ್ಮೂಲನ ಮತ್ತು ವಿಶ್ವಶಾಂತಿಯ ಮಧ್ಯೆ ಇರುವ ಸೇತುವೆಯನ್ನು ಗುರುತಿಸಿ ಬಲಪಡಿಸುವ ವಿಶ್ವಪ್ರಜ್ಞೆಯ ಜ್ಯೋತಿಯನ್ನು ಬೆಳಗಿಸಿತು. ಈ ಪ್ರಶಸ್ತಿಯನ್ನು ಸಮಿತಿಯವರು ಘೋಷಣೆ ಮಾಡಿ ಇಂತೆಂದರು: “ಜಗತ್ತಿನಲ್ಲಿ ಸಾಮಾಜಿಕ ಮತ್ತು ಆರ್ಥಿಕ ಪ್ರಗತಿಯನ್ನು ತಳಮಟ್ಟದಿಂದ ಬೆಳೆಸುವ ಸಾಹಸಕ್ಕೆ ಈ ಪ್ರಶಸ್ತಿಯನ್ನು ನೀಡಲಾಯಿತು’.

ಆರ್ಥಿಕ ತಜ್ಞರಾದ ಪ್ರೊ. ಮಹಮ್ಮದ್ ಯೂನಸ್ ಮೈಕ್ರೋ ಕ್ರೆಡಿಟ್ (Micro Credit) ಸಿದ್ಧಾಂತವನ್ನು ವಿಶ್ವದಲ್ಲೇ ಪ್ರಥಮವಾಗಿ ಗ್ರಾಮೀಣ ಬ್ಯಾಂಕ್‌ಗಳ ಮೂಲಕ ಸ್ಥಿರಗೊಳಿಸಿದರು. ಜಗತ್ತಿನ ಕೋಟ್ಯಂತರ ಬಡವರಿಗೆ ಯಾವುದೇ ಜಾಮೀನು ಇಲ್ಲದೆ ಸಾಲವನ್ನು ಒದಗಿಸಲು ಸಾಧ್ಯವೆಂದು ಎತ್ತಿತೋರಿಸಿದರು. ಬಾಂಗ್ಲಾ ದೇಶದ ಗ್ರಾಮೀಣ ಬ್ಯಾಂಕಿನಲ್ಲಿ ೬ ಮಿಲಿಯ ಸದಸ್ಯರಿದ್ದು, ಅದರಲ್ಲಿ ಶೇಕಡ ೯೬ರಷ್ಟು ಮಂದಿ ಮಹಿಳೆ ಯರಿದ್ದಾರೆ. ಈ ಬ್ಯಾಂಕಿನ ವ್ಯಾಪ್ತಿಯಲ್ಲಿ ಬಾಂಗ್ಲಾ ದೇಶದ ೩/೪ ಅಂಶದ ಗ್ರಾಮಗಳನ್ನು ಒಳಗೊಂಡಿದೆ. ವರ್ಷದಲ್ಲಿ ೫ ಬಿಲಿಯನ್ ಡಾಲರ್‌ಗಳನ್ನು ಮರು ವಸೂಲಾತಿ ಮಾಡ ಲಾಗುತ್ತದೆ. ಸುಮಾರು ಒಂದು ಲಕ್ಷ ಗ್ರಾಮೀಣ ಮಹಿಳೆಯರು ಮೊಬೈಲ್, ದೂರವಾಣಿಗಳ ಮೂಲಕ ಗ್ರಾಮಗಳಲ್ಲಿ ಸೇವಾನಿರತರಾಗಿದ್ದಾರೆ. ಈ ಬ್ಯಾಂಕ್‌ಗಳು ಲಕ್ಷಾಂತರ ಮನೆಗಳನ್ನು ನಿರ್ಮಾಣ ಮಾಡಲು ಸಹಕಾರಿಯಾಗುವುದರ ಜೊತೆಯಲ್ಲಿ ಲಕ್ಷಾಂತರ ಮಂದಿ ವಿದ್ಯಾರ್ಥಿ, ವಿದ್ಯಾರ್ಥಿನಿಯರುಗಳಿಗೆ ಶೈಕ್ಷಣಿಕ ಸಾಲವನ್ನು ನೀಡುತ್ತಿದೆ. ಗ್ರಾಮಾಂತರ ಪ್ರದೇಶದಲ್ಲಿ ಪೌಷ್ಟಿಕ ಆಹಾರವನ್ನು ಅವರಿಗೆ ರಿಯಾಯತಿ ದರದಲ್ಲಿ ನೀಡುವ ವ್ಯವಹಾರ ಮಾಡುತ್ತಿದೆ. ೩೦ ವರ್ಷಗಳ ಹಿಂದೆ ಜಗತ್ತಿನಲ್ಲೇ ಮೈಕ್ರೋ ಕ್ರೆಡಿಟ್ ಸಿದ್ಧಾಂತ ಅಸ್ತಿತ್ವದಲ್ಲಿರಲಿಲ್ಲ. ಅಲ್ಲದೆ ಜಗತ್ತಿನ ಅರ್ಥವ್ಯವಸ್ಥೆಯಲ್ಲಿ ಇದಕ್ಕೆ ಯಾವ ಸ್ಥಾನಮಾನ ಕೂಡ ಇರಲಿಲ್ಲ. ಆದರೆ ಪ್ರೊ. ಮಹಮ್ಮದ್ ಯೂನಸ್‌ರವರ ಪ್ರಗತಿಪರ ನಾಯಕತ್ವದಿಂದ ಜಗತ್ತಿನ ನೂರು ದೇಶಗಳಲ್ಲಿ ವ್ಯಾಪಕವಾಗಿ ಮೈಕ್ರೋ ಕ್ರೆಡಿಟ್ ಆಂದೋಲನ ಹರಡಿದೆ. ೨೦೦೫ನೇ ಇಸವಿಯಲ್ಲಿ ಸಿದ್ಧವಾದ ಮೈಕ್ರೋ ಕ್ರೆಡಿಟ್ ಜಗತ್ತಿನ ಆಂದೋಲನದ ವರದಿ ಪ್ರಕಾರ ಶೇಕಡ ೭೩ರಷ್ಟು ಜನರು ಪ್ರಥಮ ಸಾಲವನ್ನು ಅದರಲ್ಲೂ ಅತ್ಯಂತ ಕಡುಬಡವರು ಪಡೆದರು. ಇದೆಲ್ಲ ಪ್ರೊ. ಮಹಮ್ಮದ್ ಯೂನಸ್‌ರವರ ಸಾಧನೆಯಿಂದ ಸಾಧ್ಯವಾಯಿತು.

ಪ್ರೊ. ಮಹಮ್ಮದ್ ಯೂನಸ್‌ರವರು ಮೈಕ್ರೋ ಕ್ರೆಡಿಟ್‌ನ್ನು ಬಡತನದ ವಿರುದ್ಧ ನಡೆಸುವ ಸಮರದ ಪ್ರಧಾನ ಸಾಧನವಾಗಿ ಉಪಯೋಗಿಸಿದರು. ನೋಬೆಲ್ ಸಮಿತಿಯ ಅಧ್ಯಕ್ಷರಾದ ಡಾನ್ ಬೋಲ್ಟ್ ಮಜೋಯ್ಸ್ (Don Bolt Mjoes) ಪ್ರಶಸ್ತಿಯ ವಿಚಾರದಲ್ಲಿ ಹೀಗೆಂದರು: ಅತ್ಯಧಿಕವಾದ ಜನಸಮುದಾಯ ಬಡತನದಿಂದ ಹೊರ ಬರಲಾಗದಾಗ “ಶಾಶ್ವತವಾದ ಶಾಂತಿ” ಅಸಾಧ್ಯವಾಗುತ್ತದೆ. ಮೈಕ್ರೋ ಕ್ರೆಡಿಟ್ ಅಪರಾ ಜನಸಮುದಾಯವನ್ನು ಇಂತಹ ಬಡತನದ ಸುಳಿಯಿಂದ ಪಾರುಮಾಡುವ ಯಶಸ್ವೀ ಪ್ರಯೋಗ. ಮಹಮ್ಮದ್ ಯೂನಸ್‌ರವರು ಇಂತಹ ಕ್ರಿಯಾತ್ಮಕವಾದ ನಾಯಕತ್ವವನ್ನು ವಹಿಸಿ ಕನಸನ್ನು ನನಸು ಮಾಡಿದರು. ಬರೀ ಬಾಂಗ್ಲಾದೇಶದ ಲಕ್ಷಾಂತರ ಬಡಜನರು ಮಾತ್ರವಲ್ಲ ಅಸಂಖ್ಯಾತ ರಾಷ್ಟ್ರಗಳ ಬಡಜನರು ಕೂಡ ಈ ಲಾಭವನ್ನು ಪಡೆದರು. ಬಾಂಗ್ಲಾದೇಶದಲ್ಲಿ ಭೀಕರ ಬರಗಾಲ ೧೯೭೪ರಲ್ಲಿ ಸಂಭವಿಸಿದಾಗ ಸಾಲಗಾರರ ಬಾಧೆಯಿಂದ ಪಾರುಮಾಡಲು ಈ ಪ್ರಯೋಗ ಪ್ರಾರಂಭಿಸಿದ ಯೂನಸ್‌ರವರು ೨ ವರ್ಷದ ನಂತರ ಗ್ರಾಮೀಣ ಬ್ಯಾಂಕ್‌ನ್ನು ಸ್ಥಾಪಿಸಿ ೬.೫ ಮಿಲಿಯನ್ ಬಹುತೇಕ ಮಹಿಳೆಯರಿರುವ ಜನರಿಗೆ ಸಾಲ ನೀಡಿದರು. ತಮ್ಮ ಯೋಜನೆಯ ಬೀಜಮಂತ್ರವಾಗಿ ಅವರು ನೀಡಿದ ಘೋಷಣೆ ಈ ರೀತಿಯಿದೆ: “ಬಡವರ ಮರ್ಯಾದೆ ಮತ್ತು ಸ್ವಾಭಿಮಾನ ರಕ್ಷಿಸುವುದು ಮಾತ್ರವಲ್ಲದೆ ಅವರಿಗೆ ದಾನವನ್ನು ನೀಡದೆ ಸಾಲ (Credit)ವನ್ನೂ ನೀಡಲಾಗಿದೆ”. ಬಡವರು ಕೂಡ ಸಾಲವನ್ನು ಪಡೆಯಲು ಅರ್ಹರೆಂಬುದನ್ನು ಜಗತ್ತಿಗೆ ಸಾರಿದರು. ಜಗತ್ತಿನ ಹೊಸ ಅರ್ಥ ಮತ್ತು ಬ್ಯಾಂಕ್ ವ್ಯವಸ್ಥೆಯ ನವೀನ ಶಿಲ್ಪವನ್ನು ಮೂಡಿಸಿದರು. ಸಾಲದ ಬಲೆಯಲ್ಲಿ ಸಿಲುಕಿದ ಜನರಿಗೆ ಪ್ರಥಮವಾಗಿ ತಾವೇ ಸಾಲ ಪಡೆಯಲು ಜಾಮೀನು ನೀಡಿ ಸಾಲ ಪಡೆಯುವ ಹೊಸ ಸ್ವರೂಪ ಚಿತ್ರಿಸಿದ ಕಲಾವಿದರಾದರು. ಬಡವರಲ್ಲಿ ಕೂಡ ಸಾಲವನ್ನು ಮರಳಿಸುವ ಪ್ರಾಮಾಣಿಕತೆ ಮತ್ತು ಆರ್ಥಿಕ ಶಕ್ತಿ ಇದೆ ಎಂಬುದನ್ನು ಗುರುತಿಸಿದರು. ಪ್ರವಾಹ ಬಂದಾಗ ಅಪಾಯದಿಂದ ಸಂಪೂರ್ಣ ನಿರುಪಾಯರಾಗುವ ಜನಸಮುದಾಯಕ್ಕೆ ಅಂತಹ ದುರ್ಘಟನೆ ಮತ್ತು ಅಪಾಯ ಎದುರಿಸುವ ಶಕ್ತಿಯನ್ನು ನೀಡಿದರು. ಎಂತಹ ಅಪಾಯಗಳು ಬಂದರೂ ಕೂಡ ತಮ್ಮನ್ನು ತಾವು ಸಜ್ಜುಗೊಳಿಸಿ ತಮ್ಮ ಜೀವನದ ಅರ್ಥವ್ಯವಸ್ಥೆಯನ್ನು ಸಜ್ಜುಗೊಳಿಸುವ ಹೊಸ ಆರ್ಥಿಕ ನೀತಿಯ ಸೂತ್ರಧಾರರಾದರು. ದಾನ, ಧರ್ಮಗಳು ಮನುಷ್ಯನ ಮುನ್ನಡೆಯುವ ಶಕ್ತಿಯನ್ನು ಕಸಿಯುತ್ತದೆ. ಸ್ವಾಭಿಮಾನ ಮತ್ತು ಮರ್ಯಾದೆಯನ್ನು ಉಳಿಸಿಕೊಂಡಾಗ ಮಾತ್ರ ಜೀವನ ಸಂಪನ್ನವಾಗುತ್ತದೆ ಎಂಬ ಸ್ವಾವಲಂಬನೆಯ ಸೂತ್ರವನ್ನು ಸಮುದಾಯದ ಬೆಳವಣಿಗೆಯಲ್ಲಿ ಅಳವಡಿಸಿಕೊಂಡರು. ಸರ್ಕಾರ ಬ್ಯಾಂಕ್ ಯೂನಿಯನ್‌ಗಳ ವಿರುದ್ಧ ಹೋರಾಟ ಮಾಡಿ ೨೦೦೦ ಗ್ರಾಮೀಣ ಬ್ಯಾಂಕ್ ಶಾಖೆಗಳನ್ನು ತೆರೆದರು. ಜನತೆಯ ಮೂಲಕ ಬ್ಯಾಂಕ್, ಜನತೆಯನ್ನು ವಿಶ್ವಾಸಕ್ಕೆ ತೆಗೆದುಕೊಂಡಾಗ ಆಮೂಲಾಗ್ರವಾದ ಬದಲಾವಣೆ ಬಡಸಮುದಾಯದಲ್ಲಿ ಬರಲು ಸಾಧ್ಯವೆಂದು ಜಗತ್ತಿಗೆ ಜಾಹೀರುಮಾಡಿದರು.

ಭಾರತದಲ್ಲಿ ಕೂಡ ಗ್ರಾಮೀಣ ಬ್ಯಾಂಕ್‌ಗಳು ಪ್ರಾರಂಭವಾದುವು. ಆದರೆ ಸ್ವತಂತ್ರವಾಗಿ ತಮ್ಮ ಕಾಲ ಮೇಲೆ ತಾವು ನಿಂತು ಬದುಕಲು ಅವಕ್ಕೆ ಸಾಧ್ಯವಾಗಲಿಲ್ಲ. ಇದೊಂದು ಭಾರತದ ದುರಂತ ಕಥೆ. ಅದಕ್ಕೆ ಪರ್ಯಾಯವಾಗಿಯೇ ಮೈಕ್ರೋ ಬ್ಯಾಂಕುಗಳು ಸ್ವಸಹಾಯ ಗುಂಪುಗಳ ಮೂಲಕ ಭಾರತದಲ್ಲಿ ಪ್ರಾರಂಭವಾದುವು. ಆದರೆ ಶೇಕಡ ೭೦ರಷ್ಟು  ಪಾಲು ಗುಂಪುಗಳು ಕರ್ನಾಟಕ, ಆಂಧ್ರಪ್ರದೇಶ, ತಮಿಳುನಾಡು ಮತ್ತು ಕೇರಳದಲ್ಲಿ ಕೇಂದ್ರೀಕೃತ ವಾಗಿದೆ. ದೇಶದ ಉಳಿದೆಡೆ ಕೂಡ ಈ ಆಂದೋಲನ ಹರಡಲು ಸಾಧ್ಯವಾಗಲಿಲ್ಲ. ಈಗಾಗಲೇ ಸುಮಾರು ೭ ಸಾವಿರ ಕೋಟಿಗಳ ಸಾಲವನ್ನು ನೀಡದುದಲ್ಲದೆ, ಎರಡು ಕೋಟಿ ನಲವತ್ತೆರಡು ಲಕ್ಷ (೨,೪೨,೦೦,೦೦೦) ಕುಟುಂಬಗಳನ್ನು ಇದರೊಂದಿಗೆ ಅಳವಡಿಸಿಕೊಂಡಿದೆ. ಸುಮಾರು ಶೇಕಡ ೪೦ ಪಾಲು ಐಸಿಐಸಿಐ ಬ್ಯಾಂಕ್ ಈ ಕಾರ್ಯಕ್ರಮದಲ್ಲಿ ತನ್ನನ್ನು ಅಳವಡಿಸಿ ಕೊಂಡಿದೆ. ಇಡೀ ಜಗತ್ತಿನಲ್ಲಿ ಮೈಕ್ರೋ ಕ್ರೆಡಿಟ್‌ನಲ್ಲಿ ಸುಮಾರು ೯೨ ಮಿಲಿಯ ಜನರು ತಮ್ಮನ್ನು ಅಳವಡಿಸಿಕೊಂಡಿದ್ದಾರೆ. ಶೇಕಡ ೮೦ರಷ್ಟು ಮಹಿಳೆಯರಿದ್ದಾರೆ. ಇಡೀ ವಿಶ್ವ ದಲ್ಲಿಯೇ ಮಹಿಳೆಯರು ಹೆಚ್ಚು ಸಾಲ ಪಡೆದವರೆಂದು, ಸಾಮಾಜಿಕ ಬದ್ಧತೆ ಹೊಂದಿ ಕೊಂಡಿದ್ದಾರೆಂದು ಇದರಿಂದ ಸ್ಪಷ್ಟವಾಗುತ್ತದೆ.

ಪ್ರೊ. ಮಹಮ್ಮದ್ ಯೂನಸ್‌ರವರು ತಮ್ಮ ಮೈಕ್ರೋ ಫೈನಾನ್ಸ್ (Micro Finance) ವ್ಯವಸ್ಥೆಯಿಂದ ದೊಡ್ಡ ಆರ್ಥಿಕ ಕ್ರಾಂತಿಯನ್ನೇ ಸಾರಿದ್ದಾರೆ. ಸಣ್ಣವರಿಗೆ ಅಥವಾ ಬಡವರಿಗೆ ಸಾಲವನ್ನು ನೀಡುವುದು ಅರ್ಥವ್ಯವಸ್ಥೆಗೆ ದೊಡ್ಡ ಹೊರೆಯೆಂದು ತಿಳಿದುಕೊಂಡು ಮೌಢ್ಯ ತುಂಬಿದ ಅರ್ಥಶಾಸ್ತ್ರಜ್ಞರಿಗೆ ದೊಡ್ಡ ಸವಾಲನ್ನೇ ನೀಡಿತು. ಬಡವರ ಮತ್ತು ರೈತರನ್ನು ಕ್ರೂರ ಸಾಲಗಾರರಿಂದ ಬಿಡುಗಡೆ ಮಾಡಲು ರಾಮಬಾಣವನ್ನೇ ಸೃಜಿಸಿದರು. ಇಡೀ ವಿಶ್ವದ ಬ್ಯಾಂಕ್ ವ್ಯವಸ್ಥೆಗೆ ಬೃಹತ್ ಶಸ್ತ್ರಚಿಕಿತ್ಸೆ(Major Surgery)ಯನ್ನೇ ಮಾಡಿದರು. ಇವರ ಇಂತಹ ದೊಡ್ಡ ಯಶಸ್ಸಿನ ಪ್ರಯೋಗ ಮತ್ತು ಸಾಹಸಕ್ಕೆ ನೋಬೆಲ್ ಪ್ರಶಸ್ತಿ ವಿಶ್ವಮನ್ನಣೆ ನೀಡಿದೆ. ಬಡತನ, ಮಾನವೀಯ ಹಕ್ಕುಗಳ ಉಲ್ಲಂಘನೆ ಎಲ್ಲಾ ಶೋಷಣೆ ಮತ್ತು ಹಿಂಸೆ ಗಳಿಗೆ ಆಧಾರ. ಬಹುಶಃ ಎಲ್ಲಾ ಉಗ್ರಗಾಮಿ ಚಟುವಟಿಕೆಗಳಿಗೆ ಬುನಾದಿ. ಅಂತಹ ಜಗತ್ತಿನಲ್ಲಿ ಮಹಮ್ಮದ್ ಯೂನಸ್‌ರವರ ಪ್ರಯೋಗ ಹೊಸ ಯುಗದ ನಾಂದಿ ಹಾಡಿತು. ಶಾಶ್ವತವಾದ ಶಾಂತಿಯ ಮಹಾಶಂಖವನ್ನು ಊದಿತು. ಭಾರತದಲ್ಲಿ ಮತ್ತು ವಿಶ್ವದ ಅನೇಕ ಕಡೆ ನಡೆಯುವ ರೈತರ ಆತ್ಮಹತ್ಯೆಯ ಕೊಂಡಿಯ್ನು ಕಳಚುವ ಸಶಸ್ತ್ರರನ್ನಾಗಿಸಿತು.

ಭಾರತದಲ್ಲಿ ಬರೇ ಸಾಲ ಕೊಡುವುದಲ್ಲದೆ ಮೈಕ್ರೋ ಫೈನಾನ್ಸ್ (ಅತಿಸಣ್ಣ ಹಣಕಾಸು)ನ್ನು ಸೀಮಿತಗೊಳಿಸುವುದನ್ನು ತಪ್ಪಿಸಬೇಕು. ಠೇವಣಿಯನ್ನು ಕ್ರೋಡೀಕರಿಸುವ, ಇನ್ಸುರೆನ್ಸ್ ಮತ್ತು ಇನ್ನಿತರ ಸೌಲಭ್ಯ ನೀಡುವ ಪ್ರಮುಖ ವಾಹಿನಿಯನ್ನಾಗಿ ಪರಿವರ್ತಿಸ ಬೇಕಾಗಿದೆ. ಭಾರತದಲ್ಲಿ ಗ್ರಾಮೀಣ ಬ್ಯಾಂಕ್‌ಗಳ ವ್ಯವಸ್ಥೆಯಲ್ಲಿ ಕೂಡ ಶಸ್ತ್ರಚಿಕಿತ್ಸೆ ಯಾಗಬೇಕಾಗಿದೆ. ಮಹಮ್ಮದ್ ಯೂನಸ್‌ರವರಿಗೆ ನೀಡಿದ ನೋಬೆಲ್ ಪ್ರಶಸ್ತಿ ಬಡತನದ ವಿರುದ್ಧ ಘೋಷಿಸಿದ ಶಂಖನಾದವಾಗಿದೆ. ಜಗತ್ತಿನ ಎಲ್ಲಾ ಬಡವರಿಗೆ ಸಲ್ಲಿಸಿದ ವಿಶ್ವಸಮ್ಮಾನವಾಗಿದೆ. ಆಕಸ್ಮಿಕವೆಂದರೆ ಸಾಹಿತ್ಯಕ್ಕೆ ೨೦೦೬ರಲ್ಲಿ ನೀಡಿದ ಪ್ರಶಸ್ತಿ ಟರ್ಕಿಸ್ ಮುಸಲ್ಮಾನ ಜನಾಂಗಕ್ಕೆ ಸೇರಿದ ವೊರ‍್ಹಾನ್ ಪಮುಕ್ (Orhan Pamuk) ಮತ್ತು ವಿಶ್ವಶಾಂತಿಗೆ ನೀಡಿದ ಪ್ರೊ. ಮಹಮ್ಮದ್ ಯೂನಸ್‌ರವರಿಗೆ ನೀಡಿ ವೈಶಿಷ್ಟ್ಯಪೂರ್ಣ ಸಂದೇಶವನ್ನು ಜಗತ್ತಿಗೆ ಸಾರಲಾಗಿದೆ. ಅದೇನೆಂದರೆ ಜಗತ್ತು ಭಯೋತ್ಪಾದನೆಯ ವಿರುದ್ಧವಿದೆಯೇ ಹೊರತು ಇಸ್ಲಾಂ ಧರ್ಮದ ವಿರುದ್ಧವಲ್ಲ. ಜನಾಂಗ ಮತ್ತು ಮತಗಳ ಮೂಲಕ ನಾಗರಿಕತೆಗಳ ಮಧ್ಯೆ ಸಮರ ಮತ್ತು ಸಂಘರ್ಷವನ್ನು ಪ್ರಚೋದಿಸುವ ಮುಖ್ಯ ದುಶ್ಯಕ್ತಿಗಳಿಗೆ ಇದೊಂದು ದೊಡ್ಡ ಸಂದೇಶ. ಭಾರತ ಮತ್ತು ವಿಶ್ವದ ಮತಾಂಧರಿಗೆ ಅಥವಾ ಮತದ ನೆನಪನ್ನಿಟ್ಟು ಪ್ರಚೋದನೆ ನೀಡಿ ಹಿಂಸೆಗೆ ಕರೆನೀಡುವ ದುಃಶ್ಯಕ್ತಿಗಳಿಗೆ ಎರಡು ಪ್ರಶಸ್ತಿಗಳು ಅರಿವಿನ ವಿಶ್ವಪ್ರಜ್ಞೆಯನ್ನು ಪ್ರಚುರಪಡಿಸಿವೆ.