ದೇಶದ ಪುರೋಗತಿಯ ಹೆಬ್ಬಾಗಿಲು ತೆರೆದಿದೆ. ಪ್ರಗತಿ ಹೊಂದಿದ ರಾಷ್ಟ್ರಗಳ ಜನಸಂಖ್ಯೆ ಅತಿ ಬೇಗನೆ ಮುಪ್ಪನ್ನು ಅಡರುತ್ತಿದೆ. ಚೈನಾ ಕೂಡ ಇದಕ್ಕೆ ಅಪವಾದವಾಗಿಲ್ಲ. ಆದರೆ ಜನಸಂಖ್ಯೆಯ ನಕಾಶೆ ತಾರುಣ್ಯದಿಂದ ಅರಳುತ್ತಿದೆ. ಅದಕ್ಕಾಗಿಯೇ ಮಾನವ ಸಂಪನ್ಮೂಲದ ಕ್ಷೇತ್ರಕ್ಕೆ ಅತ್ಯಧಿಕ ಬಂಡವಾಳ ಹಾಕಬೇಕಾದುದು ಅನಿವಾರ‍್ಯ. ಆಗ ಮಾತ್ರ ಅವಕಾಶ ಮುದುಡದೇ ಅರಳುತ್ತದೆ. ಜಗತ್ತಿನಲ್ಲಿ ಆರ್ಥಿಕ ಸ್ಪರ್ಧೆಯ ಸುಳಿಯಲ್ಲಿ ಸಿಲುಕಿ ಬವಣೆ ಪಡೆಯುತ್ತಿದೆ. ಆದರೆ ಇಂದು ಬೇಕಾದುದು ಅದಕ್ಕೆ ಸರಿಸಮನಾದ ವೈಜ್ಞಾನಿಕ ಸ್ಪರ್ಧೆ. ಅದನ್ನು ಮರೆತಾಗ ಭವಿಷ್ಯ ಮಸುಕಾಗುತ್ತದೆ. ಇಂದು ದೇಶಕ್ಕೆ ಬೇಕಾದುದು ಜಾಗತಿಕ ಸ್ಪರ್ಧೆಯನ್ನು ನೀಡುವ ಮಾನವ ಸಂಪನ್ಮೂಲ ಕೇಂದ್ರಗಳು. ಇಂದು ಶಿಕ್ಷಣ ದಲ್ಲಿಯೂ ಮತ್ತು ಐಶ್ವರ್ಯವನ್ನು ಸೃಜಿಸುವ ಕ್ಷೇತ್ರದಲ್ಲಿ ಜೊತೆ ಜೊತೆಯಾಗಿ ನಡೆಯಬೇಕಾಗಿದೆ. ಕರ್ನಾಟಕದಲ್ಲಿ ಐಶ್ವರ್ಯವನ್ನು ಸೃಜಿಸುವ ಬೆಂಗಳೂರು-ಹೊಸೂರು ರಸ್ತೆಯಿದೆ. ಅಲ್ಲಿ Infosys, Wipro ಮತ್ತು ಜಗತ್ತಿನಲ್ಲೇ ಸುಪ್ರಸಿದ್ಧವಾದ ದೈತ್ಯ Software ಕಂಪನಿಗಳಿವೆ. ಜಗತ್ತಿನ ಯಾವುದೇ ಚಿಕಿತ್ಸಾಲಯಗಳಿಗೆ ಸರಿ ಸಮಾನವಾಗಿ ನಿಲ್ಲುವ ನಾರಾಯಣ ಹೃದಯಾಲಯವಿದೆ. ೧೯೭೦ರ ದಶಕದಲ್ಲಿ ಈ ಲೇಖನದ ಕರ್ತೃ ಸಣ್ಣ ಕೈಗಾರಿಕಾ ಮಂತ್ರಿಗಳಾಗಿದ್ದಾಗ Electronic  City ಸ್ಥಾಪನೆಯಾಯಿತು. ಇಂದು ಸುಮಾರು ವರ್ಷಕ್ಕೆ ರೂ. ೩೦,೦೦೦ ಕೋಟಿಗಿಂತಲೂ ಹೆಚ್ಚು ರಫ್ತು ಮಾಡುವ ಸಂಪನ್ನತೆಯನ್ನು ಪಡೆದಿದೆ. ಬಹುಶಃ ಕರ್ನಾಟಕ ಅಥವಾ ಬೆಂಗಳೂರು ಜಗತ್ತಿನ ಪರ್ಯಾಯ ಸಿಲಿಕಾನ್ ವ್ಯಾಲಿ ಎಂದು ಕರೆಯಲ್ಪಡಲು Electronic Cityಯೇ ಪ್ರಧಾನ ಚಾಲಕ ಶಕ್ತಿಯಾಗಿದೆ. ಬೆಂಗಳೂರಿನ ವೈಟ್‌ಫಿಲ್ಡ್‌ನಲ್ಲಿರುವ International Technological Park ಕೂಡ ಜಗತ್ತಿನ ಪರಂಪರೆಯ ಒಂದು ಶ್ರೇಷ್ಠ ಸಂಸ್ಥೆ. ಅದನ್ನು ಕೂಡ ಈ ಲೇಖನದ ಕರ್ತೃರ ಮುಖ್ಯಮಂತ್ರಿಗಳಾಗಿದ್ದಾಗ ಸ್ಥಾಪಿಸಲಾಯಿತು. ಬೆಂಗಳೂರಿನಲ್ಲಿರುವ National Law School ಜಗತ್ತಿನ ಅತ್ಯಂತ ಶ್ರೇಷ್ಠ ಕಾನೂನು ತಜ್ಞರನ್ನು ಸಿದ್ಧಪಡಿಸುವ ಸಂಸ್ಥೆಯಾಗಿದೆ. ಇದನ್ನು ಕೂಡ ಈ ಲೇಖನದ ಕರ್ತೃ ಪ್ರಾರಂಭಿಸಲು ಪ್ರೇರೇಪಣೆ ನೀಡಿದರು. ಅಂದರೆ ಜಗತ್ತಿನ ಉತ್ಕೃಷ್ಟ ಸಂಸ್ಥೆಯನ್ನು (World Class Institution) ಸ್ಥಾಪಿಸಿದಾಗ ಜಗತ್ಪ್ರಸಿದ್ಧ ಉದ್ಯಮಿಗಳು ಅಥವಾ ವಿದ್ವಾಂಸರು ಹೊರಬರಲು ಸಾಧ್ಯವಿದೆ ಎಂಬುದಕ್ಕೆ ಮೇಲ್ಕಾಣಿಸಿದ ಸಂಸ್ಥೆಗಳೇ ಬೃಹತ್ ಸಾಕ್ಷಿ. ನಮ್ಮ ರಾಷ್ಟ್ರದ ಜನರ ಮನೋಭೂಮಿಕೆ ಕೂಡ ಇಂತಹ ವಿಕ್ರಮ ಸಂಸ್ಥೆಗಳನ್ನು ಉಳಿಸುವ ಮತ್ತು ಸೃಜಿಸುವ ದಿಕ್ಕಿನಲ್ಲಿ ಚಿಂತನೆ ನಡೆಸಬೇಕು. ಅದಕ್ಕಾಗಿಯೇ ದೊಡ್ಡ ಚಿಂತನೆಯಿರಬೇಕು. ಬೃಹತ್ ಯೋಜನೆಯ ನಿರ್ಮಾರ್ತೃಗಳಾಗ ಬೇಕು. ಬೃಹತ್ತಾಗಿ ದುಡಿಯುವ ಶಿಲ್ಪಿಗಳಾಗಬೇಕು. ವೈಜ್ಞಾನಿಕ ಸ್ಪರ್ಧೆಯನ್ನು ಮರೆತು ಆರ್ಥಿಕ ಸ್ಪರ್ಧೆಯನ್ನು ನೆಚ್ಚಿಕೊಂಡರೆ  ಭವಿಷ್ಯ ಮಂಕಾಗುತ್ತದೆ.

ಇಂದಿನ ಪ್ರವೃತ್ತಿಯ ಪ್ರಕಾರ ದುರ್ಬಲರನ್ನು ಕೂಡ ದೊಡ್ಡ ದೊಡ್ಡ ಕಂಪನಿಗಳು ತಮ್ಮ ಜೊತೆಯಲ್ಲಿಕೊಂಡೊಯ್ಯುವ ವಾತಾವರಣ ಪರಿಪಾಠವಾಗುತ್ತಿದೆ. ಜಗತ್ತಿನ ೪ ಬಿಲಿಯನ್ ಜನಸಂಖ್ಯೆಯ ಜೀವನ ಗತಿಯನ್ನು ಬದಲಾಯಿಸುವ ಸಾಮುದಾಯಿಕ ಪ್ರಜ್ಞೆ ಇಂದು ಎಲ್ಲೆಡೆ ಹರಡುತ್ತಿದೆ. ಸಂಯುಕ್ತ ರಾಷ್ಟ್ರ ಸಂಸ್ಥೆ (UNO) ಕೂಡ ಬಡತನದ ನಿರ್ಮೂಲನ ಮತ್ತು ಜೀವನಮಟ್ಟವನ್ನು ಸುಧಾರಿಸುವ ದೃಷ್ಟಿಯಲ್ಲಿ ಮಿಲೇನಿಯಂ ಅಭಿವೃದ್ದಿ ಗುರಿ(Millennium Development Goals)ಯನ್ನು ರೂಪಿಸಿ ಖಾಸಗಿ ಕಂಪನಿಗಳು ಗುರಿಯನ್ನು ತಲುಪಲು ಯಾವ ಪಾತ್ರವನ್ನು ವಹಿಸಬೇಕೆಂದು ಸ್ಪಷ್ಟವಾದ ಜಾಗತಿಕ ನೀತಿ ಹೊರತಂದಿದ್ದಾರೆ. ವ್ಯವಹಾರಗಳು ಇದರಲ್ಲಿ ಪ್ರಮುಖ ಪಾತ್ರವನ್ನು ವಹಿಸುವುದು ಮಾತ್ರವಲ್ಲದೆ ಬಡತನ ನಿವಾರಣೆ ಮತ್ತು ಜೀವನಮಟ್ಟದ ಸುಧಾರಣೆ ಈ ಅವಳಿ ಉದ್ದೇಶಗಳ ಸಾಧನೆಗೆ ಜಗತ್ತಿನ ದುರ್ಬಲ ವರ್ಗದವರಿಗೆ ನೀಲಿ ನಕಾಶೆಯನ್ನು ತೋರಿಸುತ್ತಿದೆ. ಅನೇಕ ಕಂಪನಿಗಳು ಜಗತ್ತಿನ ೧/೩ ಅಂಶದ ಜನಸಂಖ್ಯೆಯನ್ನು ಆವರಿಸಿದ್ದು ಅನೇಕ ಬಿಲಿಯನ್ ಬಡವರನ್ನು ಅನುಲಕ್ಷಿಸಿ ಈಗಾಗಲೇ ಬತ್ತಿ ಹೋಗುತ್ತಿರುವ ಮಾರುಕಟ್ಟೆಯಲ್ಲಿ ಶುಷ್ಕ ಸ್ಪರ್ಧೆಯಲ್ಲಿ ತೊಡಗಿದ್ದಾರೆ. ಈ ಪ್ರವೃತ್ತಿ ಬದಲಾವಣೆ ಯಾಗಬೇಕಾಗಿದೆ.

ಭೂಮಂಡಲದ ೨/೩ ಪ್ರಮಾಣದ ಜನರು ಬಡವರಾಗಿದ್ದು ಕುಡಿಯುವ ನೀರಿಲ್ಲದೆ, ಆರೋಗ್ಯದ ಸೌಕರ‍್ಯವಿಲ್ಲದೆ, ವಿದ್ಯುಚ್ಛಕ್ತಿಯ ಪೂರೈಕೆಯಿಲ್ಲದೇ, ಪ್ರಾಥಮಿಕ ಆವಶ್ಯಕತೆ ನಿರಾಕರಿಸಲ್ಪಟ್ಟು ಆರ್ಥಿಕ ಮತ್ತು ಸಾಮಾಜಿಕ ಮಟ್ಟ ಸುಧಾರಿಸಲು ಅವಕಾಶವಿಲ್ಲದೆ ತೊಳಲಾಡುತ್ತಿದ್ದಾರೆ. ಬಹುಶಃ ಜಗತ್ತಿನ ಸೌಲಭ್ಯ ಸವಲತ್ತುಗಳನ್ನು ನ್ಯಾಯಯುತ ರೀತಿಯಲ್ಲಿ ಹಂಚಿಕೊಂಡು ಬದುಕುವ ಯುಗ ಪ್ರಾರಂಭವಾಗಲೇಬೇಕು. ಇಲ್ಲದಿದ್ದರೆ ಸಾಮಾಜಿಕ ಜ್ವಾಲಾಮುಖಿಯನ್ನು ಎದುರಿಸುವ ಜನಾಂಗ ಜನಾಂಗಗಳು ಸಿದ್ಧವಾಗಬೇಕಾಗಿದೆ. ದುರ್ಬಲ ವರ್ಗದವರು ಕೂಡಾ ಇಂದಿನ ಕಾಲದಲ್ಲಿ ಧ್ವನಿಯೆತ್ತಿ ತಮ್ಮ ತಮ್ಮ ಅಸ್ತಿತ್ವಕ್ಕಾಗಿ ಪ್ರಧಾನ ಭೂಮಿಕೆಗೆ ಪ್ರವೇಶಿಸಬೇಕೆಂಬ ತವಕದಲ್ಲಿರುವಾಗ ಅದನ್ನು ನಿರಾಕರಿಸುವುದು ಮಹಾಕ್ಷೋಭೆಗೆ ಕಾರಣವಾಗಬಹುದು. ಅಂತಹ ಮಹಾಕ್ಷೋಭೆಯ ಸ್ಫೋಟನವನ್ನು ಈಗಲೇ ತಣ್ಣಗಾಗಿಸುವ ಮನೋಭೂಮಿಕೆಯನ್ನು ಇಂದು ಬೆಳೆಸಬೇಕಾದುದು ಅನಿವಾರ‍್ಯ. ಪ್ರತಿ ಯೊಬ್ಬ ಉದ್ಯಮಿ ಆರ್ಥಿಕ ಚಟುವಟಿಕೆಗಳನ್ನು ವಿಸ್ತರಿಸಬೇಕಾದರೆ ಕಡಿಮೆ ಆದಾಯವಿರುವ ಸಮುದಾಯ ಮತ್ತು ಕುಟುಂಬದಲ್ಲಿ ಸುಭದ್ರತೆಯ ಜೀವನೋಪಾಯ ಬೆಳೆಸಬೇಕು ಆಗ ಮಾತ್ರ ಆಯಾಯ ಕಾರ್ಪೊರೇಟ್ ಅಥವಾ ಕಂಪನಿಗಳು ಪ್ರಧಾನ ವಿಚಾರ ಲಹರಿಯನ್ನು ಮತ್ತು ಚಟುವಟಿಕೆಗಳಲ್ಲಿ ದುರ್ಬಲ ವರ್ಗದವರನ್ನು ತೊಡಗಿಸಿಕೊಳ್ಳಲು ಸಾಧ್ಯವಿದೆ. ಅದಕ್ಕನುಗುಣವಾದ ಬಂಡವಾಳವನ್ನು ತೊಡಗಿಸಬೇಕಾದುದು ಅನಿವಾರ‍್ಯ. ದುರ್ಬಲ ವರ್ಗದವರನ್ನು ತಮ್ಮ ಗ್ರಾಹಕರನ್ನಾಗಿ ಅಥವಾ ಉದ್ಯಮಿಗಳನ್ನಾಗಿ ತೊಡಗಿಸುವ ಸ್ಥಳೀಯ ಮಾರುಕಟ್ಟೆಯ ಉದ್ದೀಪನದ ಕಾರ್ಯವನ್ನು ಕೈಗೊಳ್ಳಬೇಕಾಗಿದೆ. ಅದಕ್ಕಾಗಿಯೇ ಅತ್ಯಂತ ಜಾಣ್ಮೆಯ ವ್ಯಾವಹಾರಿಕ ಮಾದರಿಗಳು ಸಜ್ಜುಗೊಳಿಸುವತ್ತ ಮನ ಮಾಡಬೇಕು.

ಭಾರತದ ಭವಿಷ್ಯ ಕೂಡ ಮೇಲೆ ನಮೂದಿಸಿದ ಸಕ್ರಿಯ ಆರ್ಥಿಕ ಮತ್ತು ಸಾಮಾಜಿಕ ನೀತಿಯನ್ನು ಹೊಂದಿಕೊಂಡಿರುತ್ತದೆ. ಭಾರತ ಉದ್ಯಮಶೀಲತೆಯನ್ನು, ಉದ್ಯೋಗ ನಿರ್ಮಿತಿ ಮತ್ತು ತನ್ಮೂಲಕ ಐಶ್ವರ್ಯವನ್ನು ಸೃಜಿಸುವ ಕೆಲಸದಲ್ಲಿ ತೊಡಗಬೇಕಾಗಿದೆ. ಆಗ ಮಾತ್ರ ನಮ್ಮ ಕಂಪನಿ ಅಥವಾ ಕಾರ್ಪೊರೇಟ್ ಸಂಸ್ಥೆಗಳು ಕೂಡ ನವೀನ ಪ್ರವೃತ್ತಿಯಿಂದ ವಿಸ್ತೃತ ಮಾರುಕಟ್ಟೆಗಳ ಜೊತೆ ಜೊತೆಯಲ್ಲಿ ಬೆಳೆಯಲು ಸಾಧ್ಯವಿದೆ. ಸಮುದಾಯದ ಜೊತೆಯಲ್ಲಿ ಐಶ್ವರ್ಯವನ್ನು ಹಂಚಿ ಬದುಕುವುದೆಂದರೆ ಕೆಲವು ಆರ್ಥಿಕ ಸಂಸ್ಥೆಗಳನ್ನು ಕಟ್ಟಿ ಬೆಳೆಸಿದಾಗ ಸಾಧ್ಯವಾಗುವುದಿಲ್ಲ. ಆಯಾಯ ಕಂಪನಿಯ ಉದ್ಯೋಗಿಗಳಿಗೆ ಷೇರು ಪಡೆದುಕೊಳ್ಳುವ ಹಕ್ಕನ್ನು ನೀಡಿದಾಗ ಅಥವಾ ಆಯಾಯ ಕಂಪನಿಗಳ ಸ್ಥಾಪಕ ಸದಸ್ಯರಿಗೆ ಹಂಚಿಕೊಂಡಾಗ ಆಯಾಯ ರಾಷ್ಟ್ರದ ಆರ್ಥಿಕ ಸಾಮಾಜಿಕ ಸಮಸ್ಯೆ ಪರಿಹಾರವಾಗಲು ಸಾಧ್ಯವಿಲ್ಲ. ಸಂಸ್ಥೆಗಳ ಅಥವಾ ಕಂಪನಿಗಳ ಆದಾಯದ ಅಥವಾ ಉತ್ಪತ್ತಿಗಳ ಅಥವಾ ಸೇವೆಗಳನ್ನು ಅಭಿವೃದ್ದಿ ಹೊಂದಿದ ರಾಷ್ಟ್ರಗಳಿಗೆ ಶೇಕಡ ೯೮ರಷ್ಟು ಪ್ರಮಾಣವನ್ನು ಬಿಟ್ಟುಕೊಟ್ಟಾಗ ಭಾರತದ ಉತ್ಪತ್ತಿ ಜಾಸ್ತಿಯಾಗುವುದಿಲ್ಲ. ಅದಕ್ಕಾಗಿಯೇ ಆಯಾಯ ರಾಷ್ಟ್ರಗಳಲ್ಲಿ ಆರ್ಥಿಕ ಮತ್ತು ಸಾಮಾಜಿಕ ಕ್ರಾಂತಿಗಳು ಆಗಾಗ ನಡೆಯಲೇಬೇಕು. ಆಯಾಯ ರಾಷ್ಟ್ರದ ಮನೋಭೂಮಿಕೆ, ಪ್ರವೃತ್ತಿ ಕ್ಷಿಪ್ರವಾಗಿ ಇಂತಹ ಕ್ರಾಂತಿಗಳಿಗೆ ಸ್ಪಂದಿಸಬೇಕು. ನಾವು ಸ್ಪರ್ಧೆಯ ವಾತಾವರಣಕ್ಕೆ ಸೇರಿಕೊಳ್ಳದೆ ಇದ್ದರೆ ನಮ್ಮ ಪ್ರಗತಿ ಸ್ಥಗಿತವಾಗುತ್ತದೆ ಮತ್ತು ಕ್ರಮೇಣ ಅವನತಿ ಹೊಂದುತ್ತದೆ. ಸ್ಪರ್ಧೆಗೆ ಪ್ರವೇಶ ಮಾಡಿದಾಗ ನಾವು ಅನೇಕ ಕಷ್ಟಗಳನ್ನು ಎದುರಿಸಬೇಕಾಗುತ್ತದೆ. ಆದರೆ ಸ್ಪರ್ಧೆಯಲ್ಲಿ ಹೋರಾಟ ಮಾಡಿದಾಗ ನಾವು ಜಯಶೀಲರಾಗುತ್ತೇವೆ ಅಥವಾ ಸ್ಪರ್ಧೆಯಲ್ಲಿ ಉಳಿಯುತ್ತೇವೆ ಅಥವಾ ಉತ್ಕೃಷ್ಟವಾದ ಫಲಿತಾಂಶವನ್ನು ಪಡೆಯುತ್ತೇವೆ.

ವಿಶ್ವದ ಪ್ರತಿಷ್ಠಿತ ಆರ್ಥಿಕ ತಜ್ಞನಾದ ಜಾನ್ ಮೈನಾರ್ಡ್ ಕೇನ್ಸ್ (John Maynard Keynes) ಎಂಬುವವನು ಈ ರೀತಿ ಹೇಳುತ್ತಾನೆ: ‘ನಮ್ಮ ಸಮಸ್ಯೆ ಹೊಸ ಚಿಂತನೆಗಳಲ್ಲಿಲ್ಲ ಬದಲಾಗಿ, ಹಳೆಯ ಹೆಪ್ಪುಗಟ್ಟಿಸುವ ಹಳೆಯ ಚಿಂತನೆಗಳಿಂದ ಪಾರಾಗುವುದೇ ದೊಡ್ಡ ಸಮಸ್ಯೆಯಾಗಿದೆ. ನಮ್ಮ ಮನಸ್ಸನ್ನು ಆಕ್ರಮಿಸಿದ ಈ ಹಳೆ ಚಿಂತನೆಗಳು ನಮ್ಮನ್ನು ಹಿಂದಕ್ಕೆ ದಬ್ಬುತ್ತವೆ’ ಭಾರತದಂತಹ ಅಭಿವೃದ್ದಿಶೀಲ ಅಥವಾ ಅನೇಕ ಹಿಂದುಳಿದ ರಾಷ್ಟ್ರಗಳ ಹಿನ್ನಡೆಗೆ ಹಳೆಯ ಚಿಂತನೆಗಳ ಪರೆಗಳೇ ಕಾರಣ. ಆ ಪರಿಧಿಗಳನ್ನು ದಾಟಿ ನಾವು ದಿಟ್ಟತನದಿಂದ ಮುಂದೆ ಸಾಗಬೇಕಾಗಿದೆ. ಬಾಂಗ್ಲಾ ದೇಶದ ಗ್ರಾಮೀಣ ಬ್ಯಾಂಕುಗಳ ಸ್ಥಾಪಕ ಮಹಮ್ಮದ್ ಯೂನಸ್ (Muhammad Yunus) ಈ ರೀತಿ ಹೇಳುತ್ತಾನೆ: ‘ಬಡತನ ಅನಿವಾರ‍್ಯವಲ್ಲ, ಜನತೆ ಬಡತನದಿಂದ ಪಾರಾಗಲು ಸಾಧ್ಯವಿದೆ. ಅವರಿಗೆ ಬೇಕಾದುದು ವಿಪುಲ ಅವಕಾಶ. ಅವರು ಬರೀ ದಾನಕ್ಕಾಗಿ ಅಥವಾ ಭಿಕ್ಷೆಗಾಗಿ ಕಾಯುತ್ತಿಲ್ಲ. ದಾನಪ್ರವೃತ್ತಿ ಒಳ್ಳೆಯದು. ಆದರೆ ಅದು ಒಬ್ಬನ ಜೀವನವನ್ನು ಮುನ್ನಡೆಸುವುದಿಲ್ಲ. ಆದರೆ ಅದನ್ನೇ ವ್ಯಾವಹಾರಿಕ ಪ್ರಸ್ತಾವನೆಯಾಗಿ ಸ್ವೀಕಾರ ಮಾಡಿದಾಗ ಅತ್ಯಂತ ಶಕ್ತಿಯುತ ವಾಗಿ ಮನುಷ್ಯ ಬೆಳೆಯುತ್ತಾನೆ. ರಾಷ್ಟ್ರವೂ ಪ್ರಗತಿಯ ನಭದತ್ತ ನೆಗೆಯುತ್ತದೆ. ಯಾಕೆಂದರೆ ಅದು ತನ್ನ ಝರಿಯಲ್ಲೇ ಪ್ರವಹಿಸುವ ಶಕ್ತಿಯನ್ನು ಪಡೆಯುತ್ತದೆ.