ಜಾಗತಿಕ ಅರ್ಥ ವ್ಯವಸ್ಥೆ. ಜ್ಞಾನ ಅರ್ಥ ವ್ಯವಸ್ಥೆಯಾಗಿ ಪರಿವರ್ತನೆಯಾಗುವ ಕಾಲದಲ್ಲಿ ಸ್ಪರ್ಧಾತ್ಮಕ ಯುಗಕ್ಕೆ ಭಾರತ ಕಾಲಿಡಬೇಕಾದರೆ ಸಮಗ್ರ ಮಾನವ ಸಂಪನ್ಮೂಲ ನೀತಿ ಅನಿವಾರ‍್ಯವಾಗುತ್ತದೆ. ಆದರೆ ಶಿಕ್ಷಣದಲ್ಲಿ ಅಸಮಾನತೆ ಅತ್ಯಂತ ತುತ್ತತುದಿಯಲ್ಲಿ ಇರುವ ರಾಷ್ಟ್ರಗಳಲ್ಲಿ ಭಾರತ, ಪಾಕಿಸ್ತಾನ, ಮಾಲಿ, ಟ್ಯುನೇಶಿಯಗಳಾಗಿವೆ. ಅತ್ಯಂತ ಕಡಿಮೆ ಅಸಮಾನತೆಯಲ್ಲಿ ಪೋಲೆಂಡ್ ಮತ್ತು ಅಮೇರಿಕ ಪ್ರಥಮ ಪಂಕ್ತಿಯಲ್ಲಿದೆ. ರಾಷ್ಟ್ರಗಳ ಬಡತನ ನಿವಾರಣೆ ಮತ್ತು ಪ್ರಗತಿ ಸೂಚ್ಯಂಕ ನಾಗರಿಕರ ಮೇಲೆ ಹೂಡುವ ಬಂಡವಾಳ ನೀತಿಯನ್ನು ಹೊಂದಿರುತ್ತದೆ. ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರ ವಿತರಣೆಯಲ್ಲಿ ಆಗುವ ತಾರತಮ್ಯದಿಂದ ಬಡಜನತೆಗೆ ಅವಕಾಶ ನಿರಾಕರಿಸಲ್ಪಡುತ್ತದೆ. ಕ್ರಮೇಣ ಹೊಸ ತಂತ್ರಜ್ಞಾನದಿಂದ ಬಡತನದ ರೇಖೆಯಿಂದ ಆ ವರ್ಗಗಳನ್ನು ಮೇಲಕ್ಕೆತ್ತಲು ಅಸಾಧ್ಯ ವಾಗುತ್ತದೆ. ನೊಬೆಲ್ ಪ್ರಶಸ್ತಿ ಪಡೆದ ಆರ್ಥಿಕ ತಜ್ಞ ಸೈಮನ್ ಕ್ಯೂನೆಟ್ಸ್ (Simon Kuznets) ಎಂಬಾತ ತನ್ನ ಹೊಸ ಪರಂಪರೆಯನ್ನು ಹಾಕಿಕೊಟ್ಟ ಕಾರ್ಯತಂತ್ರದಲ್ಲಿ ಆರ್ಥಿಕ ಅಸಮಾನತೆ ಆರ್ಥಿಕ ಪ್ರಗತಿಯ ಪ್ರವಾಹದಲ್ಲಿ ಕರಗಿಹೋಗುತ್ತದೆ. ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಅಸಮಾನತೆ ಪ್ರಗತಿ ಹೊಂದಿದ ರಾಷ್ಟ್ರಕ್ಕಿಂತ ಹೆಚ್ಚಾಗಿರುತ್ತದೆ. ಅಲ್ಲದೆ ಅತ್ಯಧಿಕ ಸೂಚ್ಯಂಕದ ಮಾಪನಕ್ಕಿಂತಲೂ ಅತ್ಯಂತ ದಕ್ಷ ಆಡಳಿತ ಬಡತನ ನಿವಾರಿಸಲು ಹೆಚ್ಚು ಸಹಕಾರಿಯಾಗುತ್ತದೆ.

ಅತ್ಯಂತ ಕಡಿಮೆ ಪ್ರಾಯದ ನೊಬೆಲ್ ಪ್ರಶಸ್ತಿ ಪಡೆದ ಆರ್ಥಿಕ ತಜ್ಞರಾದ ಕೆನೆತ್ ಆರೋ (Kenneth Arrow) ಆಡುವ ಪ್ರಕಾರ ‘ಮಾರುಕಟ್ಟೆ ಪರಿಪೂರ್ಣವಾದಂತೆ ಅದರಿಂದಾದ ಫಲಶ್ರುತಿ ಕೂಡ ಚುರುಕಾಗಿರುತ್ತದೆ. ಆದರೆ ಪ್ರಾರಂಭದ ಏರು ತಗ್ಗು ಮತ್ತು ತಾರತಮ್ಯಗಳನ್ನು ಸ್ವಲ್ಪ ಸಮನ್ವಯಗೊಳಿಸಿದಾಗ ಮಾತ್ರ ಉತ್ತಮ ಫಲಿತಾಂಶ ಬರಲು ಸಾಧ್ಯವಿದೆ’.

ಶಿಕ್ಷಣ ಸಾರ್ವಜನಿಕ ಅಥವಾ ಖಾಸಗಿ ಸ್ವತ್ತು ಎಂಬುದರ ವಿಚಾರದಲ್ಲಿ ಸಾಕಷ್ಟು ಚರ್ಚೆ ರಾಷ್ಟ್ರ ರಾಷ್ಟ್ರಗಳಲ್ಲಿ ನಡೆಯುತ್ತಿದೆ. ಫ್ರಾಂಕ್ ನ್ಯೂಮನ್ (Frank Newman) ಮತ್ತು ಲಾರಾ ಕೆ. ಕಾವುಟುರಿಯರ್ (Lara K. Couturier)ರವರ ವರದಿ ಪ್ರಕಾರ ‘ಅರಣ್ಯ ಅನೇಕ ಕಳೆ ಮತ್ತು ಅನಾವಶ್ಯಕವಾದ ಪೊದೆಗಳನ್ನು ಹೊಂದಿಕೊಂಡಿರುತ್ತದೆ. ಅವುಗಳನ್ನು ಹಾಗೆಯೇ ಬಿಟ್ಟರೆ ಅರಣ್ಯ ಹುಲುಸಾಗಿ ಬೆಳೆಯಲು ಸಾಧ್ಯವಿಲ್ಲ. ಅದಕ್ಕಾಗಿ ಆಗಾಗ ಪೊದೆಗಳನ್ನು ಸುಡುವ ಕ್ರಮವನ್ನು ಕೈಗೊಳ್ಳಲಾಗುತ್ತದೆ. ಆದರೆ ಆ ಬೆಂಕಿಯನ್ನು ಸರಿಯಾಗಿ ನಿಯಂತ್ರಿಸದಿದ್ದರೆ ಇಡೀ ಅರಣ್ಯವನ್ನು ನಾಶಮಾಡಬಹುದು. ಈ ಉದಾಹರಣೆ ಯನ್ನು ಉನ್ನತ ಶಿಕ್ಷಣ ಕ್ಷೇತ್ರಕ್ಕೆ ಹೋಲಿಸಿದರೆ ಕೀಳುಮಟ್ಟದ ಪಾಠಗಳು ಮತ್ತು ಸ್ಪಂದನ ರಹಿತ ಮತ್ತು ಹೊಸ ವಿಧಾನಗಳಿಲ್ಲದ ಶಿಕ್ಷಣ ಆ ಕ್ಷೇತ್ರವನ್ನು ಹಾಳುಗೆಡವುತ್ತದೆ. ಆದುದರಿಂದ ಸ್ವಚ್ಛಂದವಾದ ಸ್ಪರ್ಧೆಯನ್ನು ಇಂತಹ ಹತೋಟಿಯಿಲ್ಲದ ಕಾಡಿಗೆ ಹೋಲಿಸಬಹುದು. ಆದುದರಿಂದ ಈ ಬಗ್ಗೆ ಒಂದು ರೀತಿಯ ಸಮನ್ವಯತೆಯ ಅಗತ್ಯವಿದೆ. ಉನ್ನತ ಶಿಕ್ಷಣವನ್ನು ಸ್ವಚ್ಛಂದ ಮಾರುಕಟ್ಟೆಗೆ ಬಿಟ್ಟರೆ ಉನ್ನತ ಶಿಕ್ಷಣ ಎಟುಕಲಾರದ ದುಬಾರಿಯಾದ ಶಿಕ್ಷಣವಾಗಿ ಸಮಾಜದ ಬಹುಭಾಗ ಶಿಕ್ಷಣದಿಂದ ವಿವಂಚಿತರಾಗಬಹುದು. ಈ ಸಮಸ್ಯೆ ಉದ್ಭವವಾಗದಂತೆ ನೋಡುವುದು ಸುಲಭ. ಆದರೆ ಈ ಸಮಸ್ಯೆ ಉಲ್ಬಣವಾದ ಮೇಲೆ ಅದನ್ನು ತಡೆಗಟ್ಟುವುದು ಅಸಾಧ್ಯವಾಗಬಹುದು. ಇಂದು ಉನ್ನತ ಶಿಕ್ಷಣಗಳಿಗೆ ಸಮಾಜದ ಎಲ್ಲಾ ವರ್ಗಗಳಿಂದ ಬೇಡಿಕೆಯಿರುವ ಸಂದರ್ಭದಲ್ಲಿ ವಿವಂಚಿತ ಜನಾಂಗವನ್ನು ಕೂಡ ಅವಕಾಶದ ಕಕ್ಷೆಯಲ್ಲಿ ತೆಗೆದುಕೊಂಡು ಹೋಗಬೇಕಾದ ಅವಶ್ಯಕತೆಯಿದೆ. ಇಲ್ಲದಿದ್ದರೆ ಶಿಕ್ಷಣದ ಕ್ಷೇತ್ರದಿಂದಲೇ ಹೊರದಬ್ಬಲ್ಪಡುತ್ತಾರೆ. ಇಂದು ಶಿಕ್ಷಣದ ದುಬಾರಿ ವೆಚ್ಚದ ಸಮರ ಕಣದಲ್ಲಿರುವಾಗ ಬಹುಭಾಗದ ಜನರನ್ನು ಶಿಕ್ಷಣದಿಂದ ಹೊರಗಿಡುವುದು ಪ್ರಜಾಪ್ರಭುತ್ವಕ್ಕೆ ವಿರೋಧವಾದ ಪ್ರಕ್ರಿಯೆಯಾಗುತ್ತದೆ’.

ಭಾರತದಲ್ಲಿ IIM (Indian Institute of Management)ಗೆ ಪ್ರವೇಶ ಕೋರಿ ಸುಮಾರು ೫ ಲಕ್ಷ ವಿದ್ಯಾರ್ಥಿಗಳು ಅರ್ಜಿಯನ್ನು ಹಾಕುತ್ತಾರೆ. ಆದರೆ ಸುಮಾರು ೧೨೦೦ ಮಂದಿಗೆ ಮಾತ್ರ ಪ್ರವೇಶವನ್ನು ಪಡೆಯಲು ಸಾಧ್ಯವಿದೆ. ಇದೇ ಸಮಸ್ಯೆ IIT (Indian Institute of Technology)ಯಲ್ಲಿ ಕೂಡ ಇದೆ. ಪ್ರವೇಶ ಪಡೆಯದ ವಿದ್ಯಾರ್ಥಿಗಳು ಹತಾಶರಾಗುತ್ತಾರೆ. ಹಲವರು ಅಮೇರಿಕದಂತಹ ರಾಷ್ಟ್ರಗಳಿಗೆ ದುಬಾರಿ ಬೆಲೆಕೊಟ್ಟು ಪ್ರವೇಶವನ್ನು ಪಡೆಯುತ್ತಾರೆ. ಪ್ರತಿಭಾನ್ವಿತ ಅನೇಕ ವಿದ್ಯಾರ್ಥಿಗಳು ಪ್ರವೇಶವನ್ನು  ಪಡೆಯದೇ ಅತಂತ್ರರಾಗುತ್ತಾರೆ. ಬಹುಶಃ ಇಂತಹ ಹತಾಶ ಯುವ ತಂಡವನ್ನು ಸಿದ್ಧಪಡಿಸುವುದು ರಾಷ್ಟ್ರ ಹಿತಕ್ಕೆ ಅನುಗುಣವಾಗುವುದಿಲ್ಲ.

ಜಗತ್ತಿನ ವಿಜ್ಞಾನಿ ಮತ್ತು ತಂತ್ರಜ್ಞಾನ ಸಮುದಾಯದಲ್ಲಿ ಭಾರತಕ್ಕೆ ೩ನೇ ಸ್ಥಾನವಿದೆ. ಇದೊಂದು ಅತ್ಯಂತ ಹೆಮ್ಮೆಯ ಪರಂಪರೆ. ಆದರೆ ಅದೇ ಪ್ರಮಾಣದಲ್ಲಿ ಜ್ಞಾನ ಸಮುದಾಯ ವಿಸ್ತರಣೆಯಲ್ಲಿ ನಾವು ಹಿಂಜರಿತವನ್ನು ಕಾಣುತ್ತೇವೆ. ನಮ್ಮ ಉನ್ನತ ಶಿಕ್ಷಣದ ಅದರಲ್ಲೂ ಕೂಡ ರಾಷ್ಟ್ರದ ಪ್ರತಿಷ್ಠಿತ ವಿದ್ಯಾಸಂಸ್ಥೆಗಳಲ್ಲಿ ಹೆಚ್ಚು ವಿದ್ಯಾರ್ಥಿಗಳೆಂದರೆ ಗುಣಮಟ್ಟ ಕಡಿಮೆಯಾಗುತ್ತದೆ ಎಂಬ ಮನೋಭೂಮಿಕೆಯಿದೆ. ಆದರೆ ಅಮೇರಿಕದಂತಹ ಮುಂದು ವರಿದ ರಾಷ್ಟ್ರಗಳಲ್ಲಿ ಹೆಚ್ಚು ವಿದ್ಯಾರ್ಥಿಗಳೆಂದರೆ ಹೆಚ್ಚೆಚ್ಚು ಪ್ರತಿಭಾನ್ವಿತರನ್ನು ಸಿದ್ಧಪಡಿಸುವ ವೇದಿಕೆಯಾಗುತ್ತದೆ ಎಂಬ ಮನೋಭೂಮಿಕೆಯಿದೆ. ಈ ರೀತಿಯ ತದ್ವಿರುದ್ಧ ಧೋರಣೆ ಅರ್ಥಹೀನವಾಗುತ್ತದೆ. ಭಾರತ ಜ್ಞಾನ ಸಮುದಾಯದಿಂದ ಪ್ರತ್ಯೇಕಿಸಲ್ಪಟ್ಟ ಒಂದು ದ್ವೀಪ ವಾಗಿರುವುದು ಸರಿಯಲ್ಲ. ಅವಕಾಶ ನೀಡಿ ಗುಣಮಟ್ಟವನ್ನು ಕಾಪಾಡಿಕೊಂಡು ಹೋಗುವುದೇ ನ್ಯಾಯವಾದ ವಿಧಾನ. ಭಾರತ ಚಿಂತನೆ ಈ ದಿಶೆಯಲ್ಲಿ ಬದಲಾವಣೆಯಾಗಬೇಕು. ಇಂಗ್ಲೆಂಡ್‌ನಂತಹ ರಾಷ್ಟ್ರದಲ್ಲಿ FRCS ಪರೀಕ್ಷೆಗೆ ಸುಮಾರು ೫೦೦೦ ರಿಂದ ೭೦೦೦ ವಿದ್ಯಾರ್ಥಿಗಳು ಪರೀಕ್ಷೆಗೆ ಹಾಜರಾಗುತ್ತಾರೆ. ಪ್ರವೇಶದಲ್ಲಿ ವಿಪರೀತ ಹತೋಟಿಯಿರ ಬಾರದು. ಯಾರು ಒಳಗೆ ಸೇರಿ ಇಂತಹ ಸ್ಪರ್ಧಾ ವಾತಾವರಣದಲ್ಲಿ ಭಾಗವಹಿಸಿ ಉತ್ತೀರ್ಣರಾಗುತ್ತಾರೋ ಅವರವರ ಸಾಮರ್ಥ್ಯಕ್ಕೆ ಬಿಡಬೇಕು. ನಮ್ಮ ದೇಶದಲ್ಲಿ ನಾವೊಂದು ರೀತಿಯ ಕೃತಕ ಕೊರತೆಯನ್ನು ಉಂಟುಮಾಡುವುದರಲ್ಲಿ ಪ್ರವೀಣರಾಗಿದ್ದೇವೆ. ಅದರಲ್ಲೂ ಮಾನವ ಸಂಪನ್ಮೂಲ ದೊರಕಿಸುವ ವಿಧಿ ವಿಧಾನದಲ್ಲಿ ನಾವು ಕೃತಕ ಕೊರತೆಯ ಸೃಷ್ಟಿಕರ್ತರು, ನಮ್ಮ ದೇಶಕ್ಕೆ ಒಂದು ವರ್ಷಕ್ಕೆ ೨೦೦ ಹೃದಯ ತಜ್ಞರು ಬೇಕಾಗುತ್ತದೆ. ಆದರೆ ನಮ್ಮ ದೇಶದಲ್ಲಿ ೮೦ ಹೃದಯ ತಜ್ಞರನ್ನು ಮಾತ್ರ ಸಿದ್ಧಪಡಿಸುವ ತರಬೇತಿ ಕೇಂದ್ರಗಳಿವೆ. ಅಮೇರಿಕದಲ್ಲಿ ೮೦೦ ಕೇಂದ್ರಗಳಿವೆ. ನಾವು ವರ್ಷಕ್ಕೆ ೧೮,೦೦೦ ವೈದ್ಯರನ್ನು ಕಾಲೇಜುಗಳಿಂದ ಹೊರತರುವುದಿದ್ದರೆ ನಮ್ಮ ಬೇಡಿಕೆ ವರ್ಷಕ್ಕೆ ೧ ಲಕ್ಷ ವೈದ್ಯರು.

ಅಮೇರಿಕ ೭೦,೦೦೦ ಇಂಜಿನಿಯರ್‌ಗಳನ್ನು ವರ್ಷಕ್ಕೆ ಹೊರತರುವುದಿದ್ದರೆ ಯುರೋಪ್ ರಾಷ್ಟ್ರ ೧೦,೦೦೦ ಇಂಜಿನಿಯರ್‌ಗಳನ್ನು ಹೊರತರುತ್ತದೆ. ಭಾರತ ೫೦೦,೦೦೦ ಇಂಜಿನಿಯರ್‌ಗಳನ್ನು ಪ್ರತಿವರ್ಷ ಹೊರತರುತ್ತದೆ. ಅದರಲ್ಲಿ ಶೇಕಡ ೩೦ರಷ್ಟು ಕಂಪ್ಯೂಟರ್ ಇಂಜಿನಿಯರ್‌ಗಳಾಗಿರುತ್ತಾರೆ. ಆದರೆ ಮೆಕೆಂಜಿ ವರದಿ ಪ್ರಕಾರ ಶೇಕಡ ೨೫ರಷ್ಟು ಇಂಜಿನಿಯರ್‌ಗಳು ಮಾತ್ರ ಉದ್ಯೋಗಕ್ಕೆ ಅರ್ಹರಾಗಿರುತ್ತಾರೆ. ಇದರ ಬಗ್ಗೆ ಶೈಕ್ಷಣಿಕ ತಜ್ಞರು ವಿಶೇಷವಾದ ಚಿಂತನೆ ನಡೆಸಬೇಕು. ಹೊರಬರುವ ಎಲ್ಲಾ ಇಂಜಿನಿಯರ್ ಅಥವಾ ಪದವೀಧರರು ಕೂಡ ಉದ್ಯೋಗಕ್ಕೆ ಅರ್ಹರಿರುವ ಗುಂಪನ್ನು ನಿರ್ಮಿಸಬೇಕಾಗಿದೆ. ಇಲ್ಲದಿದ್ದರೆ ಮಾನವ ಸಂಪನ್ಮೂಲ ನಿರ್ಮಿತಿ ವಿಫಲವಾಗುತ್ತದೆ. ೨೦೧೦ರ ಹೊತ್ತಿಗೆ ಅಂದಾಜು ಪ್ರಕಾರ ಭಾರತಕ್ಕೆ ೫೦೦,೦೦ ಇಂಜಿನಿಯರ್‌ಗಳ ಹೆಚ್ಚುವರಿ ಅವಶ್ಯಕತೆಯಿದೆ. ಇದರ ಬಗ್ಗೆ ವಿಶೇಷವಾದ ಕಾರ್ಯಾಚರಣೆಯಾಗಬೇಕು.

ಯು.ಆರ್. ರಾವ್ ವರದಿ ಪ್ರಕಾರ ಭಾರತದಲ್ಲಿ ಪಿಎಚ್.ಡಿ.ಗಳ ಬೇಡಿಕೆ ೧೦,೦೦೦ ಮತ್ತು ಎಂ.ಟಿಸಿಚ್ ಸ್ನಾತಕೋತ್ತರ ಪದವೀಧರರ ಬೇಡಿಕೆ ೨೦,೦೦೦. ಭಾರತದ ಬಹುದೊಡ್ಡ ಸಂಶೋಧನೆ ಮತ್ತು ಅಭಿವೃದ್ದಿ ಕ್ಷೇತ್ರಕ್ಕೆ ಇಷ್ಟು ದೊಡ್ಡ ಪ್ರಮಾಣದ ಪಿಎಚ್.ಡಿ. ಎಂ.ಟಿಸಿಎಚ್., ಸ್ನಾತಕೋತ್ತರ ಪದವೀಧರರು ಬೇಕಾಗುತ್ತದೆ. ಆದರೆ ಭಾರತದ ೧೧೫ ವಿಶ್ವವಿದ್ಯಾನಿಲಯಗಳು ಮತ್ತು ೨೧೦೦ ಕಾಲೇಜುಗಳು ವರ್ಷಕ್ಕೆ ೪೦೦ ಇಂಜಿನಿಯರ್ ಪಿಎಚ್.ಡಿ.ಗಳನ್ನು ಮಾತ್ರ ನಿರ್ಮಾಣ ಮಾಡುತ್ತದೆ. ಇದರಿಂದ ದೇಶದ ಪ್ರಗತಿಯ ಬೃಹತ್ ನಿರ್ಮಾಣದ ಪ್ರಕ್ರಿಯೆಗೆ ತೊಡಕಾಗುತ್ತದೆ.

ವೇದ ಉಪನಿಷತ್ತುಗಳ ಕಾಲದಿಂದಲೂ ಭಾರತ ಹೊಸ ಚಿಂತನೆಗಳಿಗೆ ಹೆಸರುವಾಸಿ ಯಾಗಿದೆ. ಆದರೆ ಹೊಸ ಚಿಂತನೆಯ ಅನುಷ್ಠಾನದಲ್ಲಿ ಪುರಾತನ ಕಾಲದಿಂದ ಇಂದಿನವರೆಗೂ ಭಾರತದಲ್ಲಿ ವಿಶೇಷ ಹಿಂಜರಿತ. ನಾವು ಒಳ್ಳೆಯ ಉಪದೇಶಕರು. ಆದರೆ ಅನುಷ್ಠಾನಕ್ಕೆ ತರುವುದರಲ್ಲಿ ಅತ್ಯಂತ ಕನಿಷ್ಠ ದರ್ಜೆಯವರು. ಭಾರತದ ಈ ಪ್ರಕೃತಿಯಲ್ಲಿ ಕ್ರಾಂತಿಕಾರಿ ಬದಲಾವಣೆ ಅನಿವಾರ‍್ಯ.