ಜಗತ್ತಿನಲ್ಲಿ ಭಾರತ ಮಿಲಿಯಾಧಿಪತಿಗಳ ಸಂಖ್ಯೆಯಲ್ಲಿ ೮ನೇ ಸ್ಥಾನವನ್ನು ಪಡೆದಿದೆ. ಆದರೆ ಮಾನವ ಸಂಪನ್ಮೂಲ ಸೂಚ್ಯಂಕದ ಪ್ರಕಾರ (Human Development Index) ೧೨೮ನೇ ಸ್ಥಾನದಲ್ಲಿದ್ದು ಅತ್ಯಂತ ಕನಿಷ್ಠ ಹಂತದಲ್ಲಿದೆ. ಇದೊಂದು ವಿಪರ್ಯಾಸ. ಒಂದು ಕಡೆ ಅತ್ಯಂತ ಶ್ರೀಮಂತ ಜನಾಂಗ ತನ್ನ ಸಂಖ್ಯೆಯನ್ನು ವರ್ಧಿಸುತ್ತಿರುವಂತೆಯೇ ಕಡುಬಡವರ ಸಂಖ್ಯೆ ಕೂಡ ಅದಕ್ಕಿಂತಲೂ ಹೆಚ್ಚಿನ ದಾಮಾಶಯದಲ್ಲಿ ವರ್ಧಿಸುತ್ತಿದೆ. ಆ ಮೂಲಕ ಅತ್ಯಂತ ಸಂಕಷ್ಟದ ಸುಳಿಯಲ್ಲಿ ಸಿಲುಕಿಕೊಂಡಿದೆ.

ಭಾರತ ಮಾನವೀಯತೆಯ ಮತ್ತು ಸಾಮಾಜಿಕ ನ್ಯಾಯದಲ್ಲಿ ಪರಂಪರಾಗತವಾಗಿ ಉನ್ನತ ಸ್ಥಾನ ಪಡೆದಿದ್ದರೂ ಇಂದಿನ ಶ್ರೀಮಂತವರ್ಗ ಆ ಪರಂಪರೆಯನ್ನು ತುಳಿಯದೇ ನೈತಿಕವಾಗಿ ವಿಮುಖತೆಯನ್ನು ಪಡೆದಿರುವುದನ್ನು ಕಾಣುತ್ತೇವೆ. TATA HOUSEನ್ನು ಬಿಟ್ಟರೆ ಅತ್ಯಧಿಕ ಮಟ್ಟದಲ್ಲಿ ಔದಾರ್ಯದ ಸಹಾಯ ಹಸ್ತವನ್ನು (Charitable) ಚಾಚು ವುದು ಕಂಡುಬರುವುದಿಲ್ಲ.

ಹಲವು ವರ್ಷಗಳ ಹಿಂದೆ Ted Turner ಎಂಬ ಅಮೇರಿಕದ ಶ್ರೀಮಂತರೊಬ್ಬರು ಸಂಯುಕ್ತರಾಷ್ಟ್ರ ಸಂಸ್ಥೆಗೆ ಒಂದು ಬಿಲಿಯನ್ ಡಾಲರ್ ದೇಣಿಗೆಯನ್ನು ನೀಡಿವರು. ಅಂದು ಟರ್ನರ್, ಬಿಲ್‌ಗೇಟ್ ಐಶ್ವರ್ಯಕ್ಕೆ ಅಂಟಿಕೊಂಡು ತನ್ನ ದೇಣಿಗೆಯನ್ನು ನೀಡದ ಪ್ರವೃತ್ತಿಯನ್ನು ವ್ಯಂಗ್ಯವಾಗಿ ಟೀಕಿಸಿದ್ದ. ಈಗ ಬಿಲ್ ಮತ್ತು ಮಿಲಿಂದ ಫೌಂಡೇಶನ್ ಸುಮಾರು ೨೯.೨ ಬಿಲಿಯನ್ ಡಾಲರ್‌ಗಳನ್ನು ದೇಣಿಗೆ ನೀಡಲು ಮೀಸಲಾಗಿರಿಸಿದ್ದಾರೆ. ಪ್ರಪಂಚದ ಎರಡನೇ ಅತ್ಯಂತ ಶ್ರೀಮಂತ ವಾರನ್ ಬಫೆಟ್ ತನ್ನ ೩೭.೪ ಬಿಲಿಯನ್ ಡಾಲರ್‌ಗಳನ್ನು ದೇಣಿಗೆಯನ್ನಾಗಿ ನೀಡಲು ಮುಂದೆ ಬಂದಿರುತ್ತಾನೆ. ಅದರಲ್ಲಿ ೩೧ ಬಿಲಿಯನ್ ಡಾಲರ್‌ಗಳನ್ನು ಗೇಟ್ಸ್ ಫೌಂಡೇಶನ್‌ಗೂ, ೧೨ ಬಿಲಿಯನ್ ಡಾಲರ್‌ಗಳನ್ನು ಸಂಯುಕ್ತ ರಾಷ್ಟ್ರ ಸಂಸ್ಥೆಯ ವಾರ್ಷಿಕ ಬಂಡವಾಳಕ್ಕೂ ನೀಡಿರುತ್ತಾರೆ. ಬಹುಶಃ ಬಫೆಟ್ ನೀಡಿದ ದೇಣಿಗೆ ಜಗತ್ತಿನ ಇತಿಹಾಸದಲ್ಲಿ ಅದ್ವಿತೀಯ ಮತ್ತು ಅಭೂತಪೂರ್ವ.

ಅನೇಕ ಸಂದರ್ಭದಲ್ಲಿ ಶ್ರೀಮಂತರು ತಮ್ಮ ವೈಭವಕ್ಕಾಗಿ ತೆರಿಗೆ ತಪ್ಪಿಸಲು ವ್ಯವಹಾರ ದಲ್ಲಿ ಅಪ್ರತ್ಯಕ್ಷವಾದ ಲಾಭ ಪಡೆಯುವ ಅಥವಾ ರಾಜಕೀಯ ಪ್ರಯೋಜನವನ್ನು ಪಡೆಯಲು ದೇಣಿಗೆಯನ್ನು ನೀಡುತ್ತಾರೆ. ಆದರೆ ಅಮೇರಿಕದ ಟರ್ನರ್, ಗೇಟ್ಸ್ ಮತ್ತು  ಬಫೆಟ್ ನೀಡಿದ ಅದ್ಭುತ ದೇಣಿಗೆ ಸೀಮಾತೀತ, ಅಪರಿಮಿತ ಮತ್ತು ಊಹಾತೀತ. ಆಂಡ್ರೂ ಕರ್ನೆಜಿ ಎಂಬಾತ ಅಮೇರಿಕದ ಗ್ರಂಥಾಲಯ ವ್ಯವಸ್ಥೆ ಪ್ರಾರಂಭಿಸಲು ಮತ್ತು ರಾಕ್ ಫೆಲ್ಲರ್ ಫೌಂಡೇಶನ್ ಮಾನವ ಜನಾಂಗಕ್ಕೆ ಆಂಟಿಬ್ಯಾಟಿಕ್ ವ್ಯವಸ್ಥೆ ಒದಗಿಸಲು ಮತ್ತು ಹಸಿರು ಕ್ರಾಂತಿಯನ್ನು ಜಗತ್ತಿನಲ್ಲಿ ಸ್ಥಾಪಿಸಲು ಪ್ರೇರೇಪಣೆ ನೀಡಿತು.

ದಾನ ಮತ್ತು ದೇಣಿಗೆ ನೀಡುವ ಸಂಸ್ಕೃತಿ ಯಾವುದೇ ಮತ ಸಿದ್ಧಾಂತಗಳಿಗೆ ಅಥವಾ ಜಗತ್ತಿನ ಸಾಂಸ್ಕೃತಿಕ, ಐತಿಹಾಸಿಕ ಮತ್ತು ಸಾಮಾಜಿಕ ಇತಿಹಾಸಕ್ಕೆ ಅಪರಿಚಿತವಲ್ಲ. ಭಾರತ ದಲ್ಲಿ ಬಲಿಚಕ್ರವರ್ತಿ ತನ್ನ ಇಡೀ ಸಾಮ್ರಾಜ್ಯ ಮಾತ್ರವಲ್ಲ ತನ್ನನ್ನೇ ಸಮರ್ಪಿಸಿದ ಇತಿಹಾಸ ವಿದೆ. ಅದೇ ರೀತಿಯಲ್ಲಿ ಕ್ರಿಶ್ಚಿಯನ್ ಮತದಲ್ಲಿ ಕೂಡ ೧/೧೦ ಅಂಶದ ಆದಾಯ ವನ್ನು ದಾನಕ್ಕೆ ವಿನಿಯೋಗಿಸುವ ಪರಂಪರೆಯಿದೆ. ಇಸ್ಲಾಂ ಮತದಲ್ಲಿ ತನ್ನ ಆದಾಯದ ಶೇಕಡ ೨.೫ನ್ನು ಝಕತ್ ರೂಪದಲ್ಲಿ ದೇಣಿಗೆ ನೀಡುವ ಸಿದ್ಧಾಂತವಿದೆ. ಆದುದರಿಂದ ಮತ್ತೊಬ್ಬರಿಗೆ ನೀಡುವ ಮತ್ತು ದಾನವನ್ನು ಕೊಡುವ ತ್ಯಾಗದ ಪರಂಪರೆ ಜಗತ್ತಿನ ಅತ್ಯಂತ ಸನಾತನ ಮತ್ತು ಪ್ರಾಚೀನ ಪರಂಪರೆಗಳಲ್ಲೊಂದು.

ಜಗತ್ತಿನಲ್ಲಿ ೧೯ನೇ ಶತಮಾನ ಬಂಡವಾಳಶಾಹಿ ಶತಮಾನವಾದರೆ ೨೦ನೇ ಶತಮಾನ ಸಮಾಜವಾದಿ ಯುಗ. ೨೧ನೇ ಶತಮಾನ ದಾನ ಅಥವಾ ದೇಣಿಗೆ ನೀಡುವ ನವಶತಮಾನ. ಅದಕ್ಕೆ ಅನುಗುಣವಾಗಿಯೇ ಟರ್ನರ್, ಬಿಲ್‌ಗೇಟ್ ಮತ್ತು ಬಫೆಟ್ ಅಂತವರು ಜಗತ್ತಿನ ಭವ್ಯ ಇತಿಹಾಸವನ್ನು ಮರುಕಳಿಸುತ್ತಿದ್ದಾರೆ. ಇತ್ತೀಚೆಗೆ ನಡೆದ Chronical Philosophy ಸಂಸ್ಥೆ ನಡೆಸಿದ ಸಮೀಕ್ಷೆಯ ಪ್ರಕಾರ ಶೇಕಡ ೩೦ರಷ್ಟು ಪ್ರಮಾಣದ ತಮ್ಮ ಆಡಳಿತ ವೆಚ್ಚದ ಉತ್ಪತ್ತಿಯನ್ನು ದೊಡ್ಡ ದೊಡ್ಡ ಫೌಂಡೇಶನ್‌ಗಳಲ್ಲಿ ದೇಣಿಗೆಗಾಗಿ ಉಪಯೋಗ ಮಾಡುತ್ತಿದ್ದಾರೆ. Berkshire Hatway ಎಂಬ ಸಂಸ್ಥೆ ಕೂಡ ಇಂತಹ ಕೊಡುಗೈ ದಾನಿಗಳ ಪರಂಪರೆಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಿದ್ದಾರೆ. ಆದುದರಿಂದ ಇಂತಹ ದಾನ ಮತ್ತು ದೇಣಿಗೆಯ ಭವ್ಯ ಪರಂಪರೆ ೨೧ನೇ ಶತಮಾನದ ಹವಾಮಾನ ಜಗತ್ತಿನ ಪರಿಸರದಲ್ಲಿ ಪ್ರಜ್ವಲವಾಗಿ ಬೆಳೆಯುತ್ತಿದೆ. ಪ್ರಾಚೀನ ನಾಗರಿಕತೆಯ ಭಾರತದ ಶ್ರೀಮಂತರು ಇದರಲ್ಲಿ ಹಿಂದೆ ಉಳಿಯಬಾರದು. ಜಗತ್ತಿನ ದಾನ ಅಥವಾ ದೇಣಿಗೆಯ ಮುಖ್ಯ ಪ್ರವಾಹದಲ್ಲಿ ಅವರು ಕೂಡ ಸೇರಿಕೊಳ್ಳುವ ಹೊಸ ಪರಂಪರೆಗೆ ತಮ್ಮನ್ನು ತಾವು ಸಜ್ಜುಗೊಳಿಸಬೇಕಾದ ಅನಿವಾರ‍್ಯತೆಯಿದೆ.

ಸಾಮಾಜಿಕ ಸಮಾನತೆ ಮತ್ತು ಶೈಕ್ಷಣಿಕ ಅಭಿವೃದ್ದಿಯಂತಹ ಉದಾತ್ತ ಉದ್ದೇಶಗಳಿಗೆ ಅಪರಿಮಿತವಾದ ದೇಣಿಗೆಯ ಅನಿವಾರ‍್ಯತೆಯಿದೆ. ಈ ದೇಣಿಗೆಯಲ್ಲಿ ಸರ್ವರನ್ನು ಕೂಡ ಜತೆಗೂಡಿಸಿ ಜಗತ್ತಿನ ಸಮಾನತೆಯ ಹೆದ್ದಾರಿಗೆ ಕೊಂಡೊಯ್ಯುವ ಘನ ಉದ್ದೇಶವಿದೆ. ತಾರತಮ್ಯ, ವ್ಯತ್ಯಾಸಗಳಿಂದ ರಾಷ್ಟ್ರ-ಸಮಾಜದ ಕಣಿವೆಗಳು ಬಿರುಕು ಬೀಳುವ ಇಂದಿನ ಸಂದಿಗ್ಧ ಸಮಯದಲ್ಲಿ ಸಮರೂಪದ ಸಮಭಾವ ಮತ್ತು ಉದಾತ್ತತೆಯ ಸಮಭೂಮಿಯನ್ನು ನಿರ್ಮಿಸುವ ಜಗತ್ತಿನ ಪ್ರಯತ್ನ ಅಮೆಜೊನ್ ನದಿಯಂತೆ ಹರಿಯಬೇಕು. ಇದೊಂದು ರಾಷ್ಟ್ರ ರಾಷ್ಟ್ರಗಳ ಮತ್ತು ಮಾನವ ಜನಾಂಗಗಳ ಬದುಕುವ ದಾರಿ ಮಾತ್ರವಲ್ಲ ಸರ್ವರ ನೆಮ್ಮದಿಯನ್ನು ಕಾಪಾಡಿಕೊಂಡು ವಿಶ್ವಶಾಂತಿಯನ್ನು ನೆಲೆಗೊಳಿಸುವ ಸಮರ ವಿಮುಖ ನೀತಿಯೂ ಹೌದು. ಜಗತ್ತನ್ನು ಸಂಘರ್ಷಗಳ ಜ್ವಾಲಾಮುಖಿಯಿಂದ ಉಳಿಸುವ ಅವಕಾಶ ವನ್ನು ಇಂದು ಯೋಚಿಸಬೇಕಾಗಿದೆ. ಆರ್ಥಿಕ ಮತ್ತು ಸಾಮಾಜಿಕ ಉತ್ಪಾತಗಳೇ ರಾಜಕೀಯ ಸ್ಥಿತ್ಯಂತರಗಳಿಗೆ ಕಾರಣವಾಗುವ ಇಂದಿನ ಕಾಲದಲ್ಲಿ ರಾಕ್ ಫೆಲ್ಲರ್, ಟರ್ನರ್, ಬಿಲ್‌ಗೇಟ್ಸ್, ಮಿಲಿಂದ್ ಗೇಟ್ಸ್ ಮತ್ತು ಬಫೆಟ್ ಪ್ರಮುಖ ಶಾಂತಿದೂತರಾಗುತ್ತಾರೆ. ಇಂತಹವರು ತಮ್ಮ ಉದ್ಯಮ ಅಥವಾ ಕೈಗಾರಿಕೆಗಳಿಗಾಗಿ ಇತಿಹಾಸದಲ್ಲಿ ಚಿರಂತನ ಸ್ಥಾನ ಪಡೆಯುವುದಿಲ್ಲ. ಆದರೆ ಅವರ ದಾನ, ದೇಣಿಗೆ ಮತ್ತು ತ್ಯಾಗಕ್ಕಾಗಿ ಅಜರಾಮರರಾಗುತ್ತಾರೆ. ಮುಂದೆ ನೀಡುವ ನೋಬಲ್ ಪ್ರಶಸ್ತಿಗಳಿಗೆ ಇವರಷ್ಟು ಅರ್ಹರು ಮತ್ತೊಬ್ಬರಿರುವುದಿಲ್ಲ. ಇಂತಹ ಕೊಡುಗೆಯಲ್ಲಿ ವಿಶ್ವ ಜನಾಂಗವನ್ನು ಜಾತ್ಯತೀತವಾಗಿ ಒಂದುಗೂಡಿಸುವ ಅಪಾರ ಶಕ್ತಿಯಿದೆ.

ಇತ್ತೀಚಿನ ದಿವಸಗಳಲ್ಲಿ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ (Corporate Social Responsibility) ಎಂಬ ಹೊಸ ವ್ಯಾಖ್ಯಾನ ಜಗತ್ತಿನ ಆರ್ಥಿಕ ಸಿದ್ಧಾಂತಗಳಲ್ಲಿ ರೂಪು ಗೊಂಡು ದಾನ ಅಥವಾ ದೇಣಿಗೆಯ ಒಂದು ಹೊಸ ಯುಗ ಕೂಡ ಪ್ರಾರಂಭವಾಗಿದೆ. ಆದರೆ ಭಾರತ ದೇಶದ ಬಹುತೇಕ ಶ್ರೀಮಂತ ಕಂಪನಿಗಳು ಇದಕ್ಕೆ ಅನುಗುಣವಾಗಿ ಸ್ಪಂದಿಸದಿರುವುದು ದುರದೃಷ್ಟಕರ ಮತ್ತು  ಶೋಚನೀಯ. ಬಹುಶಃ ಇದೊಂದು ಭಾರತೀಯ ಸಂಸ್ಕೃತಿಗೆ ಕಳಂಕಪ್ರಾಯವೆನ್ನಬೇಕು. ಜಗತ್ತಿನಲ್ಲಿ ನಾಗಾಲೋಟದಲ್ಲಿರುವ ಕೊಡುಗೆಯ ಪ್ರವರ್ತನಶೀಲ ಓಟದಲ್ಲಿ ಭಾರತೀಯರು ಯಾಕೆ ಹಿಂದುಳಿಯಬೇಕು? ಮುಂದಿನ ದಿವಸ ಗಳಲ್ಲಿ ಇದಕ್ಕೆ ಸಮರ್ಪಕವಾದ ಸಾಮಾಜಿಕ ಸ್ಪಂದನ ದೊರಕುತ್ತದೆ ಎಂಬ ವಿಶ್ವಾಸವಿದೆ. ಅತ್ಯಂತ ಕಡುಬಡವರುಳ್ಳ ಮತ್ತು ಅನಾರೋಗ್ಯ ಹಾಗೂ ನಿರಕ್ಷರತೆಯಿದ ಬಳಲುತ್ತಿರುವ ಈ ದೇಶದಲ್ಲಿ ಜಗತ್ತಿನ ಮತ್ತು ಭಾರತೀಯ ಶ್ರೀಮಂತವರ್ಗ ತನ್ನ ಸಾಮಾಜಿಕ ಜವಾಬ್ದಾರಿ ಯಿಂದ ನುಸುಳಿಕೊಳ್ಳದ ಜಾಗೃತ ಸಮಾಜ ಪ್ರವರ್ತಕರಾಗಬೇಕು. ಈ ಭವ್ಯ ದಿವ್ಯ ದಿವಸಗಳನ್ನು ಕಾದುನೋಡೋಣ.