ಲೆಬೆನಾನ್ ಮತ್ತು ಇಸ್ರೇಲಿನ ಸಂಘರ್ಷ ಪಶ್ಚಿಮ ಏಷ್ಯಾ ಮತ್ತು ಮಧ್ಯಪೂರ್ವ  ರಾಜ್ಯಗಳಲ್ಲಿ ಉಲ್ಬಣ ಪರಿಸ್ಥಿತಿಯನ್ನು ಉಂಟುಮಾಡಿದೆ. ಈ ಸಮರದ ಮೂಲಕ ಇತಿಹಾಸದಲ್ಲಿ ಎಂದೂ ಕಾಣದ ಸುನ್ನಿ ಮತ್ತು ಸಿಯಾಸ್‌ರವರ ಐಕ್ಯತೆ ತಲೆದೋರಿದೆ. ಬಹುಶಃ ಈ ರೀತಿಯ ಸಂಘರ್ಷ ಮತ್ತೆ ಬೆಳೆದರೆ ಹೊಸ ಅರಬ್ ಜಗತ್ತಿನ ಉದಯವಾಗಲೂ ಬಹುದು. ಅಮೇರಿಕ ರಾಷ್ಟ್ರ ಸೆಪ್ಟೆಂಬರ್ ೧೧, ೨೦೦೧ ರ ಮಾನಸಿಕ ಕ್ಷೋಭೆಯಿಂದ ಹೊರಬರಲಾರದೆ ಅರಬ್ ರಾಷ್ಟ್ರಗಳ ಅಧಿಕಾರ ಬದಲಾವಣೆ ಮಾಡುವ ರಾಜಕೀಯ ಸುಳಿಯಲ್ಲಿ ಸಿಲುಕಿಕೊಂಡಿದೆ. ಇಂತಹ ರಾಷ್ಟ್ರಗಳಲ್ಲಿ ಪ್ರಜಾಪ್ರಭುತ್ವ ಬಲಗೊಳಿಸುವ ಆಡಳಿತ ಸೂತ್ರದ ಮುಖೇನ ಇರಾನ್, ಇರಾಕ್, ಲೆಬೆನಾನ್ ಮತ್ತು ಅಫಘಾನಿಸ್ತಾನದ ಅಧಿಕಾರ ಪೀಠಗಳನ್ನು ಬದಲಾಯಿಸುವ ಪರಿವರ್ತನೆಯಲ್ಲಿ ತೊಡಗಿದ್ದಾರೆ ಈ ರೀತಿಯಲ್ಲಿ ಉಂಟುಮಾಡಿದ ಭಯಾನಕ ಮತ್ತು ಅಭದ್ರತಾ ಸ್ಥಿತಿ ಅರಬ್ ರಾಷ್ಟ್ರಗಳ ದೌರ್ಬಲ್ಯಕ್ಕೆ ಕಾರಣವಾಗಬೇಕಿತ್ತು. ಅದರ ಬದಲು ಈ ರೀತಿಯ ಭಯಾನಕ ಮನೋಸ್ಥಿತಿ ಇಸ್ಲಾಂ ರಾಷ್ಟ್ರಗಳ ಕೆಲವು ಪ್ರತಿಗಾಮಿ ಶಕ್ತಿಗಳು ಉಗ್ರಗಾಮಿಗಳನ್ನು ಸೃಜಿಸಿ ಭಾರತದಂತಹ ಶಾಂತಿಪ್ರಿಯ ರಾಷ್ಟ್ರಗಳನ್ನು ಕೂಡ ಘಾತಿಸುತ್ತದೆ. ಒಂದು ಕೋಟಿಗಿಂತಲೂ ಅಧಿಕ ಜನಸಂಖ್ಯೆ ಇರುವ ಜಾತಿ, ಜನಾಂಗ ಕೂಡಿಕೊಂಡು ಬದುಕುತ್ತಿರುವ ಭಾರತದ ಸುಭದ್ರತೆ ಕೂಡ ಇಂದು ಕಲಕಿದೆ. ಭಾರತದ ಮನೋಭೂಮಿಕೆಯಲ್ಲಿ ಪ್ರಜಾಪ್ರಭುತ್ವದ ಪದರು ಗಟ್ಟಿ ಯಾಗಿರುವ ಕಾಲದಲ್ಲಿಯೂ ಎಲ್ಲಾ ಜನಾಂಗಗಳು ಕೂಡ ಐಕ್ಯತೆಯ ವಾತಾವರಣದಲ್ಲಿ ಬದುಕಿರುವಾಗ ಒಂದು ರೀತಿಯ ಅಭದ್ರತೆ ತಲೆದೋರಿದೆ.

ಮಧ್ಯ ಏಷ್ಯಾದಲ್ಲಿ ಮತ್ತು ಪಶ್ಚಿಮ ಏಷ್ಯಾದಲ್ಲಿ ನಡೆಯುವ ಯಾವುದೇ ಸಂಘರ್ಷದ ಪರಿಣಾಮ ಭಾರತದಲ್ಲಿ ಕೂಡ ಇಂದು ಕಂಡುಬರುತ್ತಿದೆ. ಡಾ. ಮನಮೋಹನ್‌ಸಿಂಗ್ ಮತ್ತು ಅಮೇರಿಕದ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್‌ರವರ ಮಧ್ಯೆ ನಡೆದ ಅದ್ಭುತ ಮತ್ತು ಅಭೂತಪೂರ್ವವಾದ ಅಣುಶಕ್ತಿ ಒಪ್ಪಂದ ಕೂಡ ಅಮೇರಿಕದ ಸಾಮ್ರಾಜ್ಯಶಾಹಿಯ ವಿಸ್ತರಣೆ ಎಂಬ ಭಾವನೆಯನ್ನು ಕೂಡ ತಪ್ಪಾಗಿ ಹರಡಲಾಯಿತು. ಬಹುಶಃ ೧೯೯೨ರಲ್ಲಿ ನಡೆದ ಬಾಬ್ರಿ ಮಸೀದಿ ನೆಲಸಮ ಮತ್ತು ಗುಜರಾತಿನಲ್ಲಿ ನಡೆದ ಹತ್ಯಾಕಾಂಡ ಈ ಭಾವನೆಗಳಿಗೆ ಪ್ರಚೋದನೆ ನೀಡಲು ಕಾರಣವಾಯಿತು. ಬಹುಶಃ ಈ ದೇಶದ ಬೀಜ ಅಂದು ಹಾಕಲಾಗಿ ಅನಂತರ ಆ ವಿಷಬೀಜದ ಬೆಳೆ ಬೆಳೆದು ಮತೀಯ ಸಮನ್ವಯದ ಧಮನಿಯೊಳಗೆ ಸೇರಿ ವಾತಾವರಣ ಕಲುಷಿತವಾಯಿತು. ೧೯೯೨ರ ಬಾಬ್ರಿ ಮಸೀದಿಯ ಒಂದು ದುರಂತ ಪ್ರಕರಣದಿಂದಾಗಿ ಒಂದರ ಮೇಲೊಂದು ಉಗ್ರಗಾಮಿ ಚಟುವಟಿಕೆಗಳು ಮತ್ತು ಆಗಾಗ ಬಾಂಬುಗಳ ಧಾಳಿ ಪ್ರಾರಂಭವಾಯಿತು. ಬಹುಶಃ ಭಾರತದಲ್ಲಿ ೧೯೯೨ರ ಮೊದಲಿನ ಜಾತ್ಯತೀತ ಪರಿಸರದ ಪುನರುತ್ಥಾನವಾಗಲು ಭಯಾನಕವಾದ ಪರಸ್ಪರ ಸಂಶಯಗಳ ಹೆಮ್ಮರವನ್ನು ಕಿತ್ತುಹಾಕಲು ಒಂದು ಹೊಸ ಯುಗ ಪ್ರಾರಂಭವಾಗಬೇಕಾಗಿದೆ. ಜಗತ್ತಿನ ಇತಿಹಾಸದಲ್ಲಿ ಕೂಡ ಇಂತಹ ಭಯಾನಕ ಸಂಶಯಾತ್ಮಕ ಹೆಮ್ಮರ ಬುಡಸಮೇತ ಕಿತ್ತು ಹಾಕಲು ಅಫಘಾನಿಸ್ತಾನದ ಸಂಘರ್ಷಪೂರ್ವ ದಿನಗಳನ್ನು ಮರುಕಳಿಸಲು ಜಗತ್ತಿನಲ್ಲಿ ಒಂದು ಶಾಂತಿಯ ಹೊಸ ಪರ್ವ ಪ್ರಾರಂಭವಾಗಬೇಕಾಗಿದೆ.

ಒಂದು ಕಾಲದಲ್ಲಿ ಇಸ್ಲಾಂ ಪಂಥದ ಸಿಯಾಸ್ ಮತ್ತು ಸುನ್ನಿಗಳು ಪರಸ್ಪರ ಕಾದಾಟ ಮಾಡುವುದನ್ನು ಮೋಜಿನಿಂದ ನೋಡುತ್ತಿದ್ದ ಪಾಶ್ಚಾತ್ಯ ರಾಷ್ಟ್ರಗಳಿಗೆ ಆ ಎರಡು ಪಂಥಗಳ ಒಗ್ಗಟ್ಟು ಬಿಡಿಸಲಾಗದ ಕಗ್ಗಂಟಾಗಿದೆ. ಲೆಬೆನಾನ್, ಇಸ್ರೇಲ್ ಸಮರ ಸಿಯಾಸ್ ಮತ್ತು ಸುನ್ನಿಗಳನ್ನು ಒಂದುಗೂಡಿಸಿದ ಸಂಕಲ್ಪ ಬಹುಶಃ ಜಗತ್ತಿನ ಮಹಾಸಮರಕ್ಕೆ ನಾಂದಿಯಾಗ ಬಹುದು. ಸಮಚಿತ್ತತೆಯುಳ್ಳ ಜಗತ್ತು ಮಾತ್ರ ಎಲ್ಲರಿಗೂ ಸಮಾನವಾದ ರಾಜಕೀಯ ಅವಕಾಶ ಮತ್ತು ಸ್ಥಾನವನ್ನು ನಿರ್ಮಿಸಿ ಇಸ್ಲಾಮಿಕ್ ಜಗತ್ತಿನಲ್ಲಿರುವ ಪ್ರತ್ಯೇಕತಾ ಅಸಹಾಯಕತೆಯನ್ನು ಪರಿಹರಿಸಲು ಸಾಧ್ಯವಿದೆ. ಇಲ್ಲದಿದ್ದರೆ ಜಗತ್ತನ್ನು ನಾಶಪಡಿಸತಕ್ಕ ಜಗತ್ತಿನ ಇತಿಹಾಸ ಮರುನಿರ್ಮಾಣವಾಗುವ ಭಯಾನಕ ಪರಿಸ್ಥಿತಿ ಉತ್ಪತ್ತಿಯಾಗಬಹುದು. ಅಮೇರಿಕದ ವಿದೇಶಾಂಗ ನೀತಿಯ ಮುಖವೇ ಇಸ್ರೇಲ್ ಎಂದು ಪರಿಗಣಿಸಲ್ಪಡುತ್ತಿರುವ ಈ ಸಂದರ್ಭದಲ್ಲಿ ತಮ್ಮ ವಿದೇಶಾಂಗ ನೀತಿಯನ್ನು ಮರುವ್ಯಾಖ್ಯಾನ ಮಾಡುವ ಅನಿವಾರ‍್ಯತೆ ಅಮೇರಿಕಕ್ಕೆ ಬಂದಿದೆ. ಶಾಂತಿಯ ವಿಧಾನಗಳಿಂದ ಅಂತರಾಷ್ಟ್ರೀಯ ಸಂಸ್ಥೆ ಇಂದು ಸಮರ ವಿಮುಖ ಮಾಡುವ ದಿಕ್ಕಿನಲ್ಲಿ ಕ್ರಿಯಾಶೀಲವಾಗಿ ಕೆಲಸ ಮಾಡಬೇಕಾಗಿದೆ. ಆದರೆ ಇಂದು ನಡೆಯುವ ಜಗತ್ತಿನ ವಿದ್ಯಮಾನ ಕಂಡರೆ ಇಸ್ರೇಲ್ ಪುನಃ ತನ್ನ ಅಸ್ತಿತ್ವವನ್ನು ಕಳೆದು ಕೊಳ್ಳುವುದೋ ಎಂಬ ಭಯದ ವಾತಾವರಣ ನಿರ್ಮಾಣವಾಗುತ್ತಿದೆ. ಮಾನವತೆಯನ್ನು ಬದುಕಿಸುವ ತನ್ನ ಕಾರ್ಯಭಾರದಲ್ಲಿ ಸಂಯುಕ್ತ ರಾಷ್ಟ್ರಸಂಸ್ಥೆ (UNO) ತನ್ನನ್ನು ತಾನು ಕೂಡಲೇ ಅಣಿಗೊಳಿಸದಿದ್ದರೆ ವಿನಾಶದ ತಪ್ಪಲಿಗೆ ದೂಡಲ್ಪಡಬಹುದು. ಇಂದು ನಡೆಯುವ ಕಾನೂನು ಸಮರ ಸಂಘರ್ಷ ನೋಡಿದರೆ ಸಾವಿರಾರು ಜನ ನಾಗರಿಕರು ಪಡುವ ಬವಣೆಯನ್ನು ಕಂಡಾಗ ಜಗತ್ತಿನ ನಾಯಕತ್ವ ಕುಸಿದಿದೆ ಎಂಬ ಭಾವನೆ ಉಂಟಾಗುತ್ತದೆ. ಇಂದಿನ ಇಂತಹ ದಾರುಣ ಮತ್ತು ಅಸಹಾಯಕ ಪರಿಸ್ಥಿತಿಯಲ್ಲಿ ಜವಾಹರಲಾಲ್ ನೆಹರೂರವರ ವಿದೇಶಾಂಗ ನೀತಿಯ ಮುತ್ಸದ್ದಿತನದ ಬಗ್ಗೆ ನೆನಪು ಬರುತ್ತದೆ. ಬಹುಶಃ ಭಾರತದಂತಹ ಶಾಂತಿದೂತನ ಪಾತ್ರವನ್ನು ಮತ್ತು ಜಗತ್ತನ್ನು ಸರಿಯಾದ ದಿಕ್ಕಿನಲ್ಲಿ ಕೊಂಡೊಯ್ಯತಕ್ಕ ವಿಶೇಷ ಪಾತ್ರವನ್ನು ಮತ್ತೆ ನಿರ್ವಹಿಸಬೇಕಾಗುತ್ತದೆ. ಇಸ್ಲಾಂ ರಾಷ್ಟ್ರಗಳಲ್ಲಿ ಭಾರತದ ಬಗ್ಗೆ ಇರುವ ಈ ಶಾಂತಿ ಪುನರುತ್ಥಾನದ ಬಗ್ಗೆ ಇರುವ ಪರಮ ವಿಶ್ವಾಸ ಇಂದು ಕೂಡ ಅಳಿದಿಲ್ಲ. ರಾಜ್ಯರಾಜ್ಯಗಳ ಆಡಳಿತವನ್ನೇ ಬದಲಾಯಿಸುವ ಅಮೇರಿಕದ ಹುನ್ನಾರದ ವಿರುದ್ಧ ಇಂದು ಎದ್ದುನಿಂತ ಜಾಗೃತ ಅರಬ್ ರಾಷ್ಟ್ರಗಳು ಪ್ರತಿಭಟನೆಯ ಸಮರಾಂಗಣದಲ್ಲಿ ನಿಂತಾಗ ಬಹುಶಃ ಭಾರತದ ಮಧ್ಯಸ್ಥಿಕೆ ಅನಿವಾರ‍್ಯ. ಹಸುಳೆಗಳು, ಮಹಿಳೆಯರು ಮತ್ತು ನಾಗರಿಕರು ಅಧಿಕಾರದ ಮತ್ತು ರಾಜಕೀಯದ ಮೇಲುಗಾರಿಕೆಯ ಮತ್ತಿನಲ್ಲಿ ಮಾನವೀಯತೆ ಮರೆತಿರುವ ಸಂದರ್ಭದಲ್ಲಿ ಶಾಂತಿಯನ್ನು ಕಾಪಾಡತಕ್ಕ ಅಂತಾರಾಷ್ಟ್ರೀಯ ಸಂಸ್ಥೆಗಳ ಅಸ್ತಿತ್ವಕ್ಕೆ ಸವಾಲಾಗಿ ನಿಂತಿದೆ. ಬಹುಶಃ ಸಮರದ ಗಾಯಗಳು ಮಾಸಲು ಬಹಳ ಸಮಯ ಬೇಕಾಗುತ್ತದೆ.

ಲೆಬೆನಾನ್ ಸಂಘರ್ಷ ಉಳಿದ ಎಲ್ಲಾ ಸಂಘರ್ಷಗಳಿಗಿಂತಲೂ ಹೊಸ ರೂಪ ಮತ್ತು ಹೊಸ ವಿಧಾನ ಮತ್ತು ನಾವಿನ್ಯತೆಯನ್ನು ಕಂಡಾಗ ಮಾನವೀಯತೆಯ ಪರ್ವತವೇ ಹೋಳಾಗಿ ಬಾಯ್ತೆರೆದು ನಿಂತಂತೆ ಆಗಿದೆ. ಬಹುಶಃ ಇಂತಹ ಸಮರದಲ್ಲಿ ಮಾನವತೆ ಸೋಲುತ್ತದೆ. ಅಮೇರಿಕ ಮತ್ತು ಪಾಶ್ಚಾತ್ಯ ರಾಷ್ಟ್ರಗಳು ಇಂದು ಮಾನವಿಕ ಮೌಲ್ಯಗಳ ಬದಲಾವಣೆಯ ಪರವಾಗಿ ನಿಲ್ಲಬೇಕೇ ಹೊರತು ಆಡಳಿತದ ಪರಿವರ್ತನೆ ಮಾಡುವ ದುಸ್ಸಾಹಸಕ್ಕೆ ಕೈ ಹಾಕಿದರೆ ಪರಿಸ್ಥಿತಿ ಮತ್ತಷ್ಟು ವಿಕೋಪದಲ್ಲಿ ಸ್ಫೋಟನಗೊಳ್ಳುತ್ತದೆ. ಹಲವು ರಾಷ್ಟ್ರಗಳಲ್ಲಿ ಅಧಿಕಾರೇತರ ಶಕ್ತಿಗಳು ಮತ ಮತ್ತು ಕೋಮಿನ ನೆವನದಲ್ಲಿ ಪ್ರಜಾಪ್ರಭುತ್ವದ ರೂಪುರೇಷೆ ಗಳನ್ನು ನಾಶಮಾಡಲು ತೊಡಗಿವೆ. ಭಾರತ ಕೂಡ ಇಂತಹ ಪ್ರವೃತ್ತಿಗೆ ಅಪವಾದವಾಗಿಲ್ಲ. ಇಂತಹ ಅಧಿಕಾರೇತರ ಶಕ್ತಿಗಳು ದುರ್ಬಲವಾದ ರಾಷ್ಟ್ರ ಅಥವಾ ರಾಜ್ಯಗಳ ಅಧಿಕಾರದ ಜಾಗವನ್ನು ಆಕ್ರಮಿಸಿಕೊಳ್ಳುತ್ತಿದೆ. ಕಾನೂನು ಸುವ್ಯವಸ್ಥೆಯ ಮತ್ತು ಆಡಳಿತದ ದಾರಿಯೇ ಇಂತಹ ಪ್ರವೃತ್ತಿಗಳನ್ನು ತಡೆಯಲು ಏಕೈಕ ಮಾರ್ಗ. ಇಲ್ಲಿಯವರೆಗಿನ ಒಡೆದು ಆಳುವ ನೀತಿಯನ್ನು ಅನುಸರಿಸುತ್ತಿರುವ ಪಾಶ್ಚಾತ್ಯ ರಾಷ್ಟ್ರಗಳು ಇಂದು ಆಡಳಿತ ಸೂತ್ರ ಬದಲಾವಣೆ ಮಾಡುವ ಕೆಟ್ಟ ಪರಂಪರೆಗೆ ಕೈ ಹಾಕುತ್ತಿದ್ದಾರೆ. ಅಫಘಾನ್‌ನಲ್ಲಿ ಪ್ರಾರಂಭವಾದ ಈ ಸಮರ ಇಂದು ಲೆಬೆನಾನ್‌ನಲ್ಲಿ ಅಂತ್ಯವಾಗಬಹುದು. ಈ ಸೂಚನೆ ಸ್ಪಷ್ಟವಾಗಿದೆ ಮತ್ತು ಎಲ್ಲಾ ದಿಕ್ಕುಗಳಲ್ಲಿ ಪ್ರತಿಧ್ವನಿಸುತ್ತಿದೆ. ಬಹುಶಃ ಸಹನೆಯ ಅಥವಾ ಪವಿತ್ರವಾದ ಭಾವನೆಯ ವಿರುದ್ಧ ಅಮಾನುಷ ಧಾಳಿಯನ್ನು ಮಾಡುತ್ತಿದೆ. ಒಂದು ಮತೀಯ ವಿಶ್ವಾಸ ಕುರುಡು, ಕಿವುಡು ಮತ್ತು ಅತಾರ್ಕಿಕವಾಗಿ ಮಾನವೀಯ ನೆಲೆಯನ್ನು ಶಿಥಿಲಗೊಳಿಸುತ್ತಿದೆ. ಮಾನವೀಯತೆ ಅನಾಥವಾಗುತ್ತಿರುವ ಈ ಸಂದರ್ಭದಲ್ಲಿ ತಾರ್ಕಿಕ ಅಸ್ತಿತ್ವ ಮತ್ತೆ ನೆಲೆ ಗೊಳ್ಳುವ ಎಚ್ಚರಿಕೆಯ ಜಾಗಟೆ ಎಲ್ಲೆಡೆ ಕೇಳಬೇಕಾಗಿದೆ.

ಯಾವುದೇ ರಾಷ್ಟ್ರಗಳ ಆಡಳಿತ ಸೂತ್ರ ಬದಲಾವಣೆ ಮಾಡುವ ಪೂರ್ತಿ ಅಧಿಕಾರ ಆಯಾಯ ರಾಷ್ಟ್ರಗಳ ಪ್ರಜಾಪ್ರಭುತ್ವ ಮತ್ತು ಜಾತ್ಯತೀತ ವಿಧಾನಗಳ ಮೂಲಕವೇ ನಡೆಯಬೇಕು. ಹೊರಗಿನ ಶಕ್ತಿಗಳು ಉಗ್ರಗಾಮಿಗಳ ಚಟುವಟಿಕೆಗಳ ಮೂಲಕ ಅಥವಾ ಬೇರೆ ಬೇರೆ ನೆಪದಲ್ಲಿ ಹಸ್ತಕ್ಷೇಪ ಮಾಡುವ ಅಥವಾ ಪ್ರಜಾಪ್ರಭುತ್ವವನ್ನು ನಾವು ನೆಲೆಗೊಳಿಸುತ್ತೇವೆ ಎಂಬ ನೆಪದಲ್ಲಿ ಪ್ರಜಾಪ್ರಭುತ್ವವನ್ನು ಸಮಾಧಿಗೊಳಿಸುವ ದುಷ್ಟ ಪ್ರವೃತ್ತಿಯನ್ನು ನಿಲ್ಲಿಸಬೇಕು. ಇಂತಹ ಪ್ರವೃತ್ತಿಗಳು ಪ್ರಜಾಪ್ರಭುತ್ವದ ನೆಲೆಯಲ್ಲಿ ಪರಿಹಾರ ವನ್ನು ಕೈಗೊಳ್ಳಲು ಅವಕಾಶ ನೀಡುವುದಿಲ್ಲ. ಮಾರ್ಟಿನ್ ರಸ್ ಎಂಬ ಒಬ್ಬ ಭೌತಿಕ ವಿಜ್ಞಾನಿ ಹೀಗೆಂದು ಹೇಳುತ್ತಾನೆ: “ಇಂದು ನಾವು ಓರ್ವ ತನ್ನ ದುಷ್ಟ ಕೃತ್ಯದಿಂದ ಕೋಟ್ಯಂತರ ಜನರ ಸಾವಿಗೆ ಕಾರಣವಾಗಿ ಪಟ್ಟಣ ಪಟ್ಟಣಗಳೇ ವಾಸಕ್ಕೆ ಯೋಗ್ಯವಿರದ  ರೀತಿಯಲ್ಲಿ ಪರಿವರ್ತಿಸಲು ಹೊರಟಿದ್ದಾನೆ”. ಇಂತಹ ತಂತ್ರಜ್ಞಾನ ಪಡೆದಿರುವ ಈ ಕಾಲದಲ್ಲಿ ಅತ್ಯಂತ ಎಚ್ಚರಿಕೆಯಿಂದ ರಾಷ್ಟ್ರರಾಷ್ಟ್ರಗಳು ನಡೆದುಕೊಳ್ಳಬೇಕಾಗಿದೆ. ಇಂದಿನ ಕೃತ್ಯಗಳಿಂದ ಯಾವುದೇ ರಾಷ್ಟ್ರ ಹುತಾತ್ಮ ಸ್ಥಾನಗಳನ್ನು ಪಡೆಯಲು ಸಾಧ್ಯವಿಲ್ಲ. ಸಂವಾದ, ತಾರ್ಕಿಕ ವಿಧಾನಗಳು ಪರಸ್ಪರ ವಿವೇಚನೆ ಮಾತ್ರ ಮಾನವೀಯತೆಯನ್ನು ಬದುಕಿಸಲು ಸಾಧ್ಯವಿದೆ. ಮತ್ತೋರ್ವರು ಮತದ ವಿರುದ್ಧ ಸಾಧಿಸುವ ದ್ವೇಷ ಯಾವುದೇ ಮತದ ಸಿದ್ಧಾಂತಕ್ಕೆ ವಿರುದ್ಧವಾಗುತ್ತದೆ. “ತಾಯಂದಿರನ್ನು ಖಡ್ಗಗಳ ಮುಖಾಂತರ ತಿವಿಯುವ, ತರುಣಿಯರನ್ನು ಬೆತ್ತಲೆಗೊಳಿಸಿ ಹಗಲಿನಲ್ಲಿ ಮಾನಭಂಗ ಮಾಡಿ ಸುಡುವ, ಗರ್ಭಿಣಿಯರ ಹೊಟ್ಟೆ ಬಸಿದು ಮಗುವನ್ನು ಖಡ್ಗದ ತುದಿಯಲ್ಲಿ ಆಕಾಶಕ್ಕೆಸೆಯುವ ಮತ್ತು ಬೆಂಕಿಗೆ ಆಹುತಿ ಕೊಡುವ ಪ್ರಸಂಗಗಳು ಭಗವಾನ್ ಬುದ್ಧ, ಶ್ರೀರಾಮಚಂದ್ರ ಮತ್ತು ಮಹಾತ್ಮಾಗಾಂಧೀಜಿಯವರು ಹುಟ್ಟಿ ನಲಿದಾಡಿದ ಭಾರತದ ಭೂಮಿಯಲ್ಲಿ ಜೀವಂತ ಕಥನಗಳಾಗುವುದು ದುರಂತವೇ ಸರಿ. ಮೇಲ್ಕಾಣಿಸಿದ ಘಟನೆ ೨೦೦೨ರಲ್ಲಿ ಗುಜರಾತಿನಲ್ಲಿ ನಡೆದ ಮತೀಯ ಗಲಭೆಗಳ ಒಂದು ವಿಶ್ಲೇಷಣೆ. ಅಂದು ಒಂದು ತಿಂಗಳಲ್ಲಿ ಮರಣ ಹೊಂದಿದ ಒಂದು ಸಾವಿರಕ್ಕೂ ಹೆಚ್ಚು ಮಂದಿ ಒಂದು ದಶಕದಲ್ಲಿ ಇಸ್ರೇಲ್ ಮತ್ತು ಪ್ಯಾಲೆಸ್ತೇನ್‌ನಲ್ಲಿ ನಡೆದ ಸಂಘರ್ಷಕ್ಕಿಂತಲೂ ಅಧಿಕ. ಲೆಬೆನಾನ್ ಮತ್ತು ಇಸ್ರೇಲ್ ಸಮರ ಸಂಘರ್ಷ ಮತ್ತು ಅದರಿಂದ ಉಂಟಾದ ಹಾನಿಯನ್ನು ಭಾರತದಂತ ಶಾಂತಿ ಪ್ರಧಾನ ರಾಷ್ಟ್ರದ ನಾಯಕತ್ವದಿಂದ ಮಾತ್ರ ಪರಿಹರಿಸಲು ಸಾಧ್ಯ. ಆದರೆ ಅದನ್ನು ಭಾರತ ಇಂದೇ ಮಾಡಬೇಕು, ಮುಂದೆ ಈ ಅವಕಾಶ ಬರಲಾರದು. ಜಾತ್ಯತೀತ ಮತ್ತು ಮಾನವೀಯ ವಿಧಾನಗಳು ಮಾತ್ರ ಇಂತಹ ಮಿಸಾಯಿಲ್‌ಗಳು ಸ್ಫೋಟನ ಗೊಳ್ಳದಂತೆ ಅಥವಾ ಬಾನೆತ್ತರಕ್ಕೆ ಹಾರದಂತೆ ತರುವ ಮಾರ್ಗೋಪಾಯಗಳು. ಆಗ ಮಾತ್ರ ಈ ಸಂಘರ್ಷಗಳ ಮೂಲಭೂತ ಕಾರಣಗಳನ್ನು ಕಿತ್ತೆಸೆಯಲು ಸಾದ್ಯ.