ನಿರುದ್ಯೋಗ ಸಮಸ್ಯೆಯನ್ನು ಹೋಗಲಾಡಿಸಲು ಸಾಕಷ್ಟು ಸಂಖ್ಯೆಯ ಉದ್ಯೋಗ ಗಳನ್ನು ಸೃಷ್ಟಿಸುವ ಅಗತ್ಯವಿದೆ. ಗುರಿಯುಳ್ಳ ಉದ್ಯೋಗ ಮತ್ತು ಸ್ವಯಂ ಉದ್ಯೋಗವನ್ನು ಪಡೆಯಲು ವಿದ್ಯಾರ್ಥಿಗಳಿಗೆ ನೆರವಾಗುವ ಶಿಕ್ಷಣ ನೀಡುವುದರ ಕಡೆಗೆ ಗಮನ ನೀಡಬೇಕು.

ಶೇಕಡ ೭೦ಕ್ಕೂ ಹೆಚ್ಚು ಜನ ಈಗ ಕೃಷಿಯನ್ನು ಅವಲಂಬಿಸಿದ್ದಾರೆ. ಪ್ರಪಂಚದ ಹೆಚ್ಚಿನ ಪ್ರದೇಶಕ್ಕೆ ಅಗತ್ಯವಾದ ಸರಕುಗಳನ್ನು ಉತ್ಪಾದಿಸುವುದಕ್ಕೆ ಕೃಷಿಯು ಒಂದು ಪ್ರಮುಖ ಉತ್ಪಾದನಾ ವಲಯ. ರಾಜ್ಯದಲ್ಲಿ ಕೃಷಿ ಪ್ರಮುಖ ಜೀವನಾಧಾರ. ಶೇ. ೫೫.೯ರಷ್ಟು ಕೆಲಸಗಾರರು ಇದರಲ್ಲಿ ತೊಡಗಿಸಿಕೊಂಡಿದ್ದಾರೆ ಎಂಬುದು ಅಧಿಕೃತ ಏಜನ್ಸಿಗಳು ನಡೆಸಿದ ಅಧ್ಯಯನದಿಂದ ತಿಳಿದುಬಂದಿದೆ. ಈ ಕ್ಷೇತ್ರದಲ್ಲಿ ಅಂದಾಜು ಶೇ. ೨೯.೫ ಕೆಲಗಾರರು ಕೃಷಿಕರು ಮತ್ತು ಶೇ. ೨೬.೫ ಕೃಷಿ ಕಾರ್ಮಿಕರು. ನಮ್ಮ ಆರ್ಥಿಕತೆ ಪ್ರಗತಿ ಹೊಂದಬೇಕಾದರೆ, ಕೃಷಿ ಅವಲಂಬಿತ ಜನರಲ್ಲಿ ಶೇ. ೨೫-೩೦ರಷ್ಟು ಜನರನ್ನು ಕೈಗಾರಿಕೆ ಮತ್ತು ಸೇವಾ ಕ್ಷೇತ್ರಕ್ಕೆ ವರ್ಗಾಯಿಸೇಕು. ಹೆಚ್ಚುವರಿ ಶೇ. ೩೦ರಷ್ಟು ಜನರನ್ನು ಉಪಯೋಗಿಸಿಕೊಳ್ಳುವ ಸಾಮರ್ಥ್ಯ ಸೇವಾ ಕ್ಷೇತ್ರಕ್ಕೆ ಇಲ್ಲ. ಆದ್ದರಿಂದ ಹೆಚ್ಚಿನವರನ್ನು ಉತ್ಪಾದನಾ ಕ್ಷೇತ್ರಕ್ಕೆ ಕ್ರಮೇಣ ವರ್ಗಾವಣೆ ಮಾಡಬೇಕಾಗುತ್ತದೆ. ಇದರಲ್ಲಿರುವ ದೊಡ್ಡ ಸವಾಲೆಂದರೆ ೧೦ ಕೋಟಿ ಜನರಿಗೆ ಕೈಗಾರಿಕಾ ವಲಯದಲ್ಲಿ ಹೇಗೆ ಉದ್ಯೋಗ ಸೃಷ್ಟಿಸುವುದು ಎಂಬುದು. ಉತ್ಪಾದನಾ ವೆಚ್ಚ ಮತ್ತು ಕೌಶಲಗಳಲ್ಲಿ ಭಾರತ ಹೆಚ್ಚಿನ ಅನುಕೂಲವನ್ನು ಹೊಂದಿದೆ.

ಸುಧಾರಣೆಗಳನ್ನು ಜಾರಿಗೊಳಿಸಲು, ತಂತ್ರಜ್ಞಾನ ಮತ್ತು ಉತ್ಪಾದಕತೆಯಲ್ಲಿ ಭಾರತ ಚೀನಾಕ್ಕಿಂತ ಹಿಂದೆ ಬಿದ್ದಿದೆ. ಭಾರತದಲ್ಲಿ ಸೇವಾ ಕ್ಷೇತ್ರದ ಹೆಚ್ಚುವರಿ ಮಾನವ ಸಂಪತ್ತು ಉತ್ಪಾದನಾ ಕ್ಷೇತ್ರದ ಸವಾಲಿಗೆ ಸ್ಪಂದಿಸುವುದಿಲ್ಲ. ಏಕೆಂದರೆ ಶಿಕ್ಷಣದ ಮಟ್ಟವು ಇನ್ನು ಕಳಪೆಯಾಗಿದೆ. ಉತ್ಪಾದನಾ ಕ್ಷೇತ್ರವು ಬೆಳೆಯದಿದ್ದರೆ ಬಡವರು ಹೆಚ್ಚಿನ ಸಂಖ್ಯೆಯಲ್ಲಿ ಉದ್ಯೋಗ ಪಡೆಯಲಾಗುವುದಿಲ್ಲ.

ಕೇಂದ್ರ ಮತ್ತು ಸ್ಥಳೀಯ ಪ್ರಾಧಿಕಾರಗಳು, ದೊಡ್ಡ ಕಂಪನಿ, ಮಧ್ಯಮ ಮತ್ತು ಸಣ್ಣ ಉದ್ಯಮಗಳು ಹೆಚ್ಚು ಉದ್ಯೋಗ ಕಲ್ಪಿಸುವಂತಾಗಲು ಹೊಸ ಕೈಗಾರಿಕಾ ನೀತಿ ಅಗತ್ಯವಿದೆ. ಜನತೆಯ ಶೇ. ೧೦ರಷ್ಟು ಶ್ರೀಮಂತರು ರಾಷ್ಟ್ರೀಯ ಆದಾಯದ ಶೇ. ೪೬ರಷ್ಟನ್ನು ಹೊಂದಿದ್ದಾರೆ. ಬಡತನದಲ್ಲಿರುವವರು ಶೇ. ೪೪ರಷ್ಟು ಇದ್ದಾರೆ. ಭಾರತ ಸರ್ಕಾರದ ಸೂಚಿಯಲ್ಲಿ ಶೇ. ೩೫ರಷ್ಟು ಬಡತನ ರೇಖೆಯ ಕೆಳಗಿದ್ದಾರೆ ಎಂದು ಹೇಳಲಾಗಿದೆ. ಪಾಕಿಸ್ತಾನ ಮತ್ತು ಬಾಂಗ್ಲಾ ದೇಶಗಳೂ ಸಹ ವರಮಾನ ಸಮಾನತೆಯಲ್ಲಿ ಮುಂದಿವೆ.

ಭಾರತ ಸೇವಾ ಕ್ಷೇತ್ರವನ್ನು ಅವಲಂಬಿಸಿರುವುದರಿಂದ ಜಿಡಿಪಿ ಬೆಳವಣಿಗೆಗೆ ಪ್ರೇರಣೆ ಸಿಗುವುದಿಲ್ಲ. ಉದ್ಯೋಗ ಕೌಶಲಕ್ಕೆ ಅವಕಾಶವಿರುವ ಮತ್ತು ಆದಾಯದ ಅನುಕೂಲವಿರುವ ಅವಕಾಶಗಳನ್ನು ಹೆಚ್ಚಿಸಿಕೊಳ್ಳುವ ಅಗತ್ಯವಿದೆ. ಮಾರುಕಟ್ಟೆ ವರ್ತನೆಯನ್ನು ತಂತ್ರಜ್ಞಾನದಿಂದ ಬದಲಾಯಿಸಿಕೊಂಡರೆ ಉತ್ಪಾದನೆಯನ್ನು ಹೆಚ್ಚಿಸಿಕೊಳ್ಳಬಹುದು.

ಕಂಪನಿ, ಕೈಗಾರಿಕಾ ಸಂಘ ಮತ್ತು ಸಹಕಾರ ಸಂಸ್ಥೆಗಳು ಸರ್ಕಾರದ ನೆರವಿಲ್ಲದೇ ತಮಷ್ಟಕ್ಕೆ ತಾವೇ ಮಾಡಬಹುದಾದದ್ದು ಬೇಕಾದಷ್ಟಿದೆ. ಸಾಂಪ್ರದಾಯಿಕವಾಗಿ ಉತ್ಪಾದನೆಯ ಬಗ್ಗೆ ಭಾರತದ ಸಂಸ್ಥೆಗಳು ಹೊಂದಿರುವ ಕಲ್ಪನೆ ಕೇವಲ ಭ್ರಮೆ. ಉತ್ಪಾದಕತೆ ಕುರಿತ ತಮ್ಮ ಮನೋಭಾವನೆಯನ್ನು ಭಾರತೀಯ ಸಂಸ್ಥೆಗಳು ಅದಲು-ಬದಲು ಮಾಡಿಕೊಳ್ಳಬೇಕಾಗಿದೆ. ಉತ್ಪಾದನೆ ಕುರಿತ ಭ್ರಮೆಯಿಂದ ಹೊಸ ವಿಷಯ ಕ್ಷೇತ್ರಗಳ ಕಡೆಗೆ ಗಮನಹರಿಸಲಾಗಿದೆ. ಹೊಸ ವಿಷಯ ಕ್ಷೇತ್ರಗಳು ಮಾರುಕಟ್ಟೆ ಸೃಷ್ಟಿಸುವ ಮನೋಭಾವನೆ ಎಂದರ್ಥ. ರಫ್ತು ಮಾರುಕಟ್ಟೆಗಳು, ಬೃಹತ್ ಗಾತ್ರದ ಮಾರುಕಟ್ಟೆಗಳು, ಮೌಲ್ಯ ಉತ್ಪನ್ನಗಳು ಮುಂತಾದುವುಗಳ ಮಾರುಕಟ್ಟೆಗಳಲ್ಲಿರುವ ಅವಕಾಶಗಳನ್ನು ಹಿಡಿದುಕೊಳ್ಳಬೇಕು.

ಹೊಸ ಉದ್ಯೋಗ ಅವಕಾಶಗಳ ಕಡೆ ನಾವು ನೋಡಬೇಕು. ವರಮಾನಗಳ ಹೊಸ ಮೂಲಗಳು ಹಾಗೂ ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗಾವಕಾಶ ಹೆಚ್ಚಿಸುವುದರ ಕಡೆಗೆ ಗಮನಕೊಡಬೇಕು. ಗ್ರಾಮೀಣ ಜನತೆಯ ಕೊಳ್ಳುವ ಶಕ್ತಿಯು ಹೆಚ್ಚಾದಾಗ ಮಾರುಕಟ್ಟೆಯ ದೃಶ್ಯವು ಬದಲಾಗುತ್ತದೆ. ೧೯೯೦­-೯೧ ರಿಂದ ೧೯೯೭ರ ಅವಧಿಯಲ್ಲಿ ಗ್ರಾಮೀಣ ಪ್ರದೇಶದ ಜನತೆಯ ಕೊಳ್ಳುವ ಶಕ್ತಿ ಇಳಿಮುಖವಾಯಿತಲ್ಲದೆ, ಗ್ರಾಮೀಣ ಕೃಷಿಯೇತರ ಉದ್ಯೋಗಗಳಾಗಿ ನಿರ್ಮಾಣ, ಸಾರಿಗೆ ಮತ್ತು ವ್ಯಾಪಾರಗಳಲ್ಲಿ ಹಿನ್ನಡೆಯಾಯಿತು. ಆದರೂ ಗ್ರಾಮೀಣ ಕಾರ್ಮಿಕರ ಗ್ರಾಹಕ ಬೆಲೆಸೂಚಿ ಮತ್ತು ನೈಜ ಮಜೂರಿ ದರಗಳು ಏರಿವೆ.

ದಕ್ಷಿಣ ಏಷ್ಯಾದ ವಿಷಯದಲ್ಲಿ ನಿರುತ್ಸಾಹದ ವಿಷಯವೆಂದರೆ ಉದ್ಯೋಗ ಮತ್ತು ನಿರುದ್ಯೋಗ ಪ್ರಮಾಣಗಳು ಜನಸಂಖ್ಯಾ ಪ್ರಮಾಣಕ್ಕನುಗುಣವಾಗಿ ಕಳೆದ ೧೦ ವರ್ಷಗಳಲ್ಲಿ ಬದಲಾಗಿಲ್ಲ. ಆದರೆ ಜಿಡಿಪಿ ಬೆಳವಣಿಗೆ ದರಗಳು ೯.೧ ಹೆಚ್ಚಾಗಿದೆ. ಅಂತಾರಾಷ್ಟ್ರೀಯ ಕಾರ್ಮಿಕ ಸಂಸ್ಥೆಯ ಪ್ರಕಾರ ನಿರುದ್ಯೋಗ ದರವು ಶೇಕಡ ೫.೧ಕ್ಕಿಂತ ಕಡಿಮೆ ಇದೆ. ದೇಶದ ಜನಸಂಖ್ಯೆಗೆ ಉದ್ಯೋಗ ಪ್ರಮಾಣವು ಈಗ ಇರುವುದು ಶೇಕಡಾ ೫೭ ಮಾತ್ರ. ೧೯೯೩ರಲ್ಲಿಯೂ ಇದೆ ಪ್ರಮಾಣದ ಉದ್ಯೋಗಾವಕಾಶಗಳಿದ್ದವು. ಈ ಅಂಕಿ ಅಂಶಗಳು ತೋರಿಸುವುದೇನೆಂದರೆ ಉದ್ಯೋಗ ಸೃಷ್ಟಿಯಾಗಿದೆ, ಆದರೆ ವಾರ್ಷಿಕ ಶೇ. ೨.೩ ದರದಲ್ಲಿ ಬೆಳೆಯುತ್ತಿರುವ ಕಾರ್ಮಿಕ ಬಲಕ್ಕೆ ಅನುಗುಣವಾಗಿ ಉದ್ಯೋಗ ಪ್ರಮಾಣದಲ್ಲಿ ಸಾಕಷ್ಟು ಬೆಳವಣಿಗೆಯಾಗಿಲ್ಲ.

ಈಗ ಚೀನ ಹೂಡಿಕೆ ವಲಯಗಳಿಂದ ತುಂಬಿಹೋಗಿದೆ. ಅಲ್ಲದೆ ವಿಶೇಷ ಆರ್ಥಿಕ ನೀತಿಗಳು ಅನ್ವಯವಾಗುವ ಪ್ರದೇಶಗಳೂ ಇವೆ. ಐದು ವಿಶೇಷ ಆರ್ಥಿಕ ವಲಯಗಳಲ್ಲದೆ ಈಗ ೧೪ ತೀರಪ್ರದೇಶದ ನಗರಗಳಿದ್ದು, ೫೬ ರಾಷ್ಟ್ರೀಯ ಆರ್ಥಿಕ ಮತ್ತು ತಾಂತ್ರಿಕ ಅಭಿವೃದ್ದಿ ವಲಯಗಳು ಮತ್ತು ಅನೇಕ ರಫ್ತು ಸಂಸ್ಕರಣ ವಲಯಗಳಿವೆ. ಹೆಸರು ಮತ್ತು ಸ್ಥಾನ ಏನೇ ಇರಲಿ ಅವುಗಳಲ್ಲಿ ಒಂದು ಅಂಶ ಸಾಮಾನ್ಯವಾಗಿದೆ. ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಈ ವಲಯಗಳನ್ನು ರಚಿಸಲಾಗಿದೆ. ಇವುಗಳೆಲ್ಲ ವಿವರವಾದ ಆದ್ಯತೆಯ ನೀತಿಗಳನ್ನು ಹೊಂದಿದ್ದು, ವ್ಯಾಪಾರಕ್ಕೆ ತಮ್ಮ ಆವರಣದೊಳಗೆ ಮಳಿಗೆಗಳನ್ನು ತೆರೆದಿವೆ. ಜಾಗತಿಕ ರಫ್ತಿನಲ್ಲಿ ಈಗ ಚೀನಾದ ಪಾಲು ಭಾರತದ ಪಾಲಿನ ಆರರಷ್ಟಿದೆ. ಇದರ ಪಾಲು ವಿಶ್ವದ ವಿದೇಶಿ ನೇರ ಬಂಡವಾಳದ ಶೇ. ೧೨ರಷ್ಟಿದ್ದು ಭಾರತದ್ದು ಶೇ. ೧ರಷ್ಟು ಇದೆ.

ಚೀನಾದ ಜತೆ ಭಾರತ ಪೈಪೋಟಿ ನಡೆಸಬೇಕಾದರೆ ವಿಸ್ತಾರವಾದ ಸುಧಾರಣೆಗಳು ಅನೇಕ ಕ್ಷೇತ್ರಗಳಲ್ಲಿ ಅಗತ್ಯವಾಗಿದೆ. ಇದರಲ್ಲಿ ಮಾನವ ಸಂಪನ್ಮೂಲ ಅಭಿವೃದ್ದಿ ದರವನ್ನು ಹೆಚ್ಚಿಸುವುದು; ಬಂಡವಾಳ ಸಂಗ್ರಹಣೆಯನ್ನೂ ಹೆಚ್ಚಿಸುವುದು; ತೆರಿಗೆ ರಚನೆಯನ್ನು ಪುನಾರಚಿಸುವುದು; ಮತ್ತು ಮೂಲ ಸೌಕರ್ಯ ಅಭಿವೃದ್ದಿಗೆ ಬಂಡವಾಳ ಹೂಡುವುದು, ಇಂತಹ ದೀರ್ಘಾವಧಿಯಲ್ಲಿ ಸುಧಾರಣೆಗಳು ರಾಷ್ಟ್ರಾದ್ಯಂತ ಆಗಬೇಕು. ಮಧ್ಯಮಾವಧಿಯಲ್ಲಿ ಸಂಶೋಧನೆಗೆ ವಿಶೇಷ ಆರ್ಥಿಕ ವಲಯಗಳನ್ನು ಅಭಿವೃದ್ದಿ ಪಡಿಸುವುದು ಮತ್ತು ಅಲ್ಪಾವಧಿಯ ಯೋಜನೆಗಳನ್ನು ಮುಂದುವರಿಸುವುದು ಅತ್ಯುತ್ತಮವಾದ ವಿಧಾನ.

ಆರ್ಥಿಕ ಬೆಳವಣಿಗೆಯೊಂದೇ ಉದ್ಯೋಗ ಸೃಷ್ಟಿ ಮಾಡುವುದಿಲ್ಲ, ಮಾರುಕಟ್ಟೆಯ ಲಗಾಮಿಲ್ಲದ ಕುದುರೆಯಂತೆ. ಅದಕ್ಕೆ ಲಗಾಮು ಹಾಕಲೇಬೇಕು. ಹೆಚ್ಚಿನ ಲಾಭವನ್ನು ಪಡೆಯಲು ವ್ಯಾಪಾರಿಗಳು ಪ್ರಯತ್ನಿಸುತ್ತಾರೆ. ಹೆಚ್ಚಿನ ಲಾಭ ದೊರೆಯಬೇಕಾದರೆ, ಕಡಿಮೆ ವೆಚ್ಚಗಳಲ್ಲಿ ಸರಕುಗಳನ್ನು ಉತ್ಪಾದಿಸುವಂತಹ ತಂತ್ರಜ್ಞಾನಗಳನ್ನು ಪ್ರೋಹುದ್ದೆಗಳು ಹೆಚ್ಚಾಗಿ ಬೇಕಾಗುವ ತಂತ್ರಜ್ಞಾನಗಳಿಗೆ ಕಡಿವಾಣ ಹಾಕುವುದು. ಅಂದರೆ ಕಟಾವು ಮಾಡುವ ಯಂತ್ರಗಳ ನೀರು ಮೇಲೆತ್ತುವ ಯಂತ್ರಗಳ ಉತ್ಪಾದನೆ ಹೆಚ್ಚಿನ ವೆಚ್ಚ ಕುಗ್ಗಿ ಉಂಟಾಗುವ ಆರ್ಥಿಕ ಬೆಳವಣಿಗೆಯನ್ನು ಒಪ್ಪಿಕೊಳ್ಳಬೇಕು. ಆಗ ನಿರುದ್ಯೋಗವು ಖಂಡಿತವಾಗಿ ಕಡಿಮೆಯಾಗುತ್ತದೆ.

ನಮ್ಮ ದೇಶದಲ್ಲಿ ಶೇ. ೫ರಷ್ಟು ದುಡಿಮೆಯ ಸಂಖ್ಯೆ ಕೌಶಲ್ಯತೆಯ ತರಬೇತಿಯನ್ನು  ಹೊಂದಿದೆ. ಆದರೆ ಕೈಗಾರಿಕೆ ದೇಶಗಳಲ್ಲಿ ಇದು ಶೇ. ೬೦ ರಿಂದ ೮೦ ಇದ್ದು ನಮ್ಮ ಶೇ. ೮೦ರಷ್ಟು ಶ್ರಮಶಕ್ತಿಯನ್ನು ತರಬೇತುಗೊಳಿಸಬೇಕು.

ವಿಶ್ವಕ್ಕೆ ನಾವು ತೋರಿಸುವುದೇನೆಂದರೆ ಶ್ರೀಮಂತರಿಗೆ ಮಾರುಕಟ್ಟೆಯನ್ನು ರಚಿಸಿದರೆ  ಬಡವರು ಭಾಗವಹಿಸುವುದಿಲ್ಲ. ಬಡವರಿಗೆ ರಚಿಸಿದರೆ ಶ್ರೀಮಂತರು ಧಾರಾಳವಾಗಿ ಭಾಗವಹಿಸುತ್ತಾರೆ.

ಜನಸಂಖ್ಯಾ ರೀತ್ಯಾ ವರ್ಷಕ್ಕೆ ೧೦ ಕೋಟಿ ಉದ್ಯೋಗಗಳನ್ನಾದರೂ ಹೊಂದಿರದಿದ್ದರೆ ಆಗ ದೇಶ ಸಮಸ್ಯೆಯನ್ನು ಎದುರಿಸಬೇಕಾಗುತ್ತದೆ. ನೂರು ಕೋಟಿಗೆ ಹೆಚ್ಚಿನ ಜನಸಂಖ್ಯೆ ಹೊಂದಿರುವ ದೇಶವು ಉತ್ಪಾದನೆಯನ್ನು ನಿರ್ಲಕ್ಷಿಸಲಾಗುವುದಿಲ್ಲ ಎಂಬುದು ಸ್ಪಷ್ಟ. ಕೇವಲ  ತಂತ್ರಾಂಶ ಮತ್ತು ಸೇವೆಗಳಿಂದ ಮಾತ್ರ ಉದ್ಯೋಗವನ್ನು ಸೃಷ್ಟಿಸಲಾಗುವುದಿಲ್ಲ. ಎಲ್ಲಾ ತರಹದ ಸರಕುಗಳನ್ನು ತಯಾರಿಸಬೇಕು. ಬಟ್ಟೆಗಳು, ವಾಹನಗಳ ಬಿಡಿ ಭಾಗಗಳು ಬೃಹತ್ ಪ್ರಮಾಣದಲ್ಲಿ ರಫ್ತಾಗಬೇಕು.

ಚೀನಾ ಇಂದು ವಿಶ್ವದ ಅತಿ ದೊಡ್ಡ ಆಂತರಿಕ ಮಾರುಕಟ್ಟೆ ಹೊಂದಿದೆ. ಏಕೆಂದರೆ ಅವರು ಸಂಪತ್ತನ್ನು ಸೃಷ್ಟಿಸುತ್ತಿದ್ದಾರೆ. ೬೦೦-೭೦೦ ಡಾಲರ್ ತಲಾ ಆದಾಯವನ್ನು ಸೃಷ್ಟಿಸುವುದರಲ್ಲಿ ಒಂದು ಮಾಂತ್ರಿಕತೆ ಇದೆ. ಅದು ದೊರೆತರೆ ಆಂತರಿಕ ಬೆಳವಣಿಗೆಯು ಹೆಚ್ಚುತ್ತದೆ.