ಅಂತಾರಾಷ್ಟ್ರೀಯ ಸಂಸ್ಥೆಯ ಮಾನವ ಸಂಪನ್ಮೂಲ ಸೂಚ್ಯಂಕದ ಪ್ರಕಾರ ಭಾರತ ಕೆಳಗಿನ ಹಂತದಿಂದ ಏಳನೇ ಸ್ಥಾನದಲ್ಲಿದೆ. ಬಡತನ ಮತ್ತು ನಿರಕ್ಷರತೆಯ ಜೊತೆಗೆ ಜಗತ್ತಿನಲ್ಲಿಯೇ ಅತ್ಯಂತ ಭ್ರಷ್ಟ ರಾಷ್ಟ್ರಗಳಲ್ಲೊಂದಾಗಿ ಪರಿಗಣಿಸಲ್ಪಟ್ಟಿದೆ. ಗರಿಷ್ಠ ಪ್ರಮಾಣದ ಭೌತಿಕ ಸಂಪನ್ಮೂಲ, ಮಾನವ ಸಂಪನ್ಮೂಲ ಮತ್ತು ತಾಂತ್ರಿಕ ಸಾಮರ್ಥ್ಯ ವಿದ್ದರೂ ಕಡುಬಡತನ ವ್ಯಾಪ್ತಿಯಲ್ಲಿರುವ ಜನಸಂಖ್ಯೆ ಅತ್ಯಧಿಕವಾಗಿದೆ.

ಇಂತಹ ನಕಾರಾತ್ಮಕ ಸ್ವರೂಪ ರಾಷ್ಟ್ರದ ಬೃಹತ್ ಸಮಸ್ಯೆಗಳಲ್ಲೂ ಉತ್ತಮ ಆಡಳಿತದ ಮಾಂತ್ರಿಕ ಶಕ್ತಿಯಿಂದ ಈ ಗಂಡಾಂತರದಿಂದ ಪಾರಾಗಬಹುದೆಂಬ ಆಶಾವಾದ ಸಾಧ್ಯವಿದೆ. ಸಾರ್ವಜನಿಕ ಹಿತಾಸಕ್ತಿಯೊಂದೇ ಉದ್ದೇಶವಾಗಿರುವಾಗ ಒಳ್ಳೆಯ ಆಡಳಿತ ನಮ್ಮದಾಗಲು ಸಾಧ್ಯವಿದೆ. ರಾಷ್ಟ್ರದ ಸಮಗ್ರತೆ, ಆಹಾರ ಭದ್ರತೆ, ಕಾನೂನು ಸುವ್ಯವಸ್ಥೆ ಮತ್ತು ಸಾಕ್ಷರತೆ ಯನ್ನು ಉತ್ತೇಜಿಸುವುದು, ಬಡತನದ ರೇಖೆಯಿಂದ ಪಾರು ಮಾಡುವುದು, ಆರೋಗ್ಯ ಕಾಪಾಡಿಕೊಳ್ಳುವುದು, ಪ್ರದೇಶದ ಸಮತೋಲನ ಸರಿದೂಗಿಸುವುದು, ಯಾಂತ್ರಿಕತೆಯ ಅಭಿವೃದ್ದಿ ಹಾಗೂ ಶಾಸನಾತ್ಮಕ ವ್ಯವಸ್ಥೆಯಿಂದ ಸಾಮಾಜಿಕ ಬದಲಾವಣೆ ಮಾಡುವ ಪ್ರಕ್ರಿಯೆಗೆ ತೊಡಗುವುದರಿಂದ ಮಾತ್ರ ರಾಷ್ಟ್ರದಲ್ಲಿ ಉತ್ತಮ ಆಡಳಿತ ಜಾರಿಗೊಳಿಸಲು ಸಾಧ್ಯವಿದೆ. ಸಾರ್ವಜನಿಕ ಸೇವೆಯ ಸ್ಫೂರ್ತಿ ಆಡಳಿತದ ಮನೋಭೂಮಿಕೆಯಲ್ಲಿ ಸೇರಿರ ಬೇಕು.

ಯಾವುದೇ ಆರ್ಥಿಕ ಸುಧಾರಣೆ ದುರ್ಬಲ ವರ್ಗದವರನ್ನು ಘಾತಿಸದಂತೆ ಅಥವಾ ಪ್ರತಿಕೂಲವಾಗದಂತೆ ನೋಡಿಕೊಳ್ಳಬೇಕು. ಆಡಳಿತಗಾರ ನಾಗರಿಕರಿಗೆ ಅನುಕೂಲ ಉಂಟು ಮಾಡುವಂತವನಾಗಿರಬೇಕು, ಕ್ರಿಯಾತ್ಮಕ ಉದ್ಯೋಗಶೀಲನಾಗಿರಬೇಕು, ತನ್ನ ಸಾಹಸ ಗುಣ ಮತ್ತು ದೂರದರ್ಶಿತ್ವದಿಂದ ಸಾಮಾಜಿಕ ನ್ಯಾಯ ಮತ್ತು ಕ್ಷಿಪ್ತ ಪ್ರಗತಿಯನ್ನು ಸಾಧಿಸಬೇಕು. ಯಾವುದೇ ಸಾರ್ವಜನಿಕ ನಿರ್ಣಯವನ್ನು ನಿರ್ದಿಷ್ಟ ಕಾಲಮಿತಿಯೊಳಗೆ ಅನುಷ್ಠಾನಗೊಳಿಸಲು ಸಂಕಲ್ಪ ಬಲಬೇಕು. ವಿಳಂಬದಿಂದಾಗುವ ನಷ್ಟವನ್ನು ನಾಗರಿಕರಿಗೆ ಅಥವಾ ಗ್ರಾಹಕರಿಗೆ ಭರ್ತಿ ಮಾಡಿಕೊಡುವಂತಿರಬೇಕು. ಉದಾಹರಣೆಗೆ ಸಾರ್ವಜನಿಕ ಬಸ್ಸಿನ ಗ್ರಾಹಕ ನಿಗದಿತ ಸಮಯಕ್ಕೆ ಸರಿಯಾಗಿ ತನ್ನ ನಿಗದಿತ ಸ್ಥಳಕ್ಕೆ ತಲುಪಲು ಸಾಧ್ಯ ವಾಗದಿದ್ದಲ್ಲಿ ಪೂರ್ವನಿಗದಿತ ದಂಡ ಸಿಗುವಂತೆ ಶಾಸನವಿರಬೇಕು. ದೂರುಗಳನ್ನು ಪರಿಹರಿಸುವ ಮತ್ತು ಪರಿಹಾರವನ್ನು ನೀಡುವ ವ್ಯವಸ್ಥೆ ಕ್ರಮಬದ್ಧವಾಗಬೇಕು. ಒಂದು ವೇಳೆ ಯಾವುದೇ ದೂರನ್ನು ಪರಿಹರಿಸಲು ಅಸಾಧ್ಯವಾದಲ್ಲಿ ಅಂತಹ ನಿರ್ಣಯವನ್ನು ಜನರಿಗೆ ಕ್ಲುಪ್ತ ಕಾಲದಲ್ಲಿ ತಿಳಿಯ ಹೇಳಬೇಕು.

ಇಂದಿನ ಮಾರುಕಟ್ಟೆಯ ಸ್ಪರ್ಧಾತ್ಮಕ ಯುಗದಲ್ಲಿ ಖಾಸಗಿ ಸಂಸ್ಥೆಗಳ ವ್ಯವಹಾರಕ್ಕೆ ಸಮನಾದ ಜವಾಬ್ದಾರಿಯಿಂದ ಸರಕಾರಿ ನೌಕರರು ವರ್ತಿಸಬೇಕಾಗಿದೆ. ಏಕೆಂದರೆ ಯಾವುದೇ ಖಾಸಗಿ ಸಂಸ್ಥೆಯಲ್ಲಿ ನಷ್ಟ ಉಂಟಾದಾಗ ಆ ಸಂಸ್ಥೆಯನ್ನು ಮುಚ್ಚಲಾಗುತ್ತದೆ ಮತ್ತು ಅಲ್ಲಿ ಕೆಲಸ ಮಾಡುತ್ತಿರುವ ನೌಕರರು ತಮ್ಮ ಉದ್ಯೋಗವನ್ನು ಕಳೆದುಕೊಳ್ಳಬೇಕಾಗುತ್ತದೆ. ಆದರೆ ಒಂದು ಸಾರ್ವಜನಿಕ ಆಸ್ಪತ್ರೆಯಲ್ಲಿ ವೈದ್ಯರು ಇಲ್ಲದಿದ್ದರೆ ಅಥವಾ ಚಿಕಿತ್ಸೆಯಲ್ಲಿ ಲೋಪವಾಗಿದ್ದರೆ ಆ ವೈದ್ಯನ ನಿರ್ಲಕ್ಷ್ಯಕ್ಕೆ ಅಥವಾ ಅವನ ಗೈರುಹಾಜರಿಗೆ ಯಾರೂ ಜವಾಬ್ದಾರರಾಗಿರುವುದಿಲ್ಲ. ಅವನು ಕೆಲಸ ಕಳೆದುಕೊಳ್ಳುವುದಿಲ್ಲ. ಆ ಸಂಸ್ಥೆಗೆ ನೀಡಲಾಗುವ ಅನುದಾನದಲ್ಲಿ ಕಡಿತವಾಗುವುದಿಲ್ಲ. ಅದರ ಬದಲು ಅವನ ದುರ್ವರ್ತನೆಯಲ್ಲಿ ಯಾವುದೇ ಬದಲಾವಣೆ ಆಗುವುದಿಲ್ಲ. ಆದುದರಿಂದ ಸಾರ್ವಜನಿಕ ಸೇವೆಯನ್ನು ಕೂಡ ಖಾಸಗಿ ಸಂಸ್ಥೆಗಳಲ್ಲಿ ನಿರ್ವಹಿಸುತ್ತಿರುವ ಬದ್ಧತೆಗೆ ಸಮನಾಗಿ ಸರಿಪಡಿಸಿದಾಗ ಮಾತ್ರ ತನ್ನ ಕರ್ತವ್ಯದ ಪ್ರಜ್ಞಾಭಾವ ಮೂಡಿಬರಲು ಸಾಧ್ಯವಿದೆ.

ಫಿಲಿಫ್ಸ್ ಮ್ಯಾಸನ್ ಎಂಬುವವನು ತನ್ನ ಸುಪ್ರಸಿದ್ಧ “ಭಾರತವನ್ನು ಆಳಿದ ಜನರು” (ದಿ ಮೆನ್ ಹೂ ರೂಲ್ಡ್ ಇಂಡಿಯಾ) ಪುಸ್ತಕದಲ್ಲಿ ಸರಕಾರಿ ನೌಕರ ಅತಿ ಸೂಕ್ಷ್ಮವಾದ ನ್ಯಾಯ ದೃಷ್ಟಿ ಮತ್ತು ಕಾರ್ಯತತ್ಪರತೆಯಿಂದ ಕೂಡಿರಬೇಕು. ತನ್ನ ಆತ್ಮಸಾಕ್ಷಿಗೆ  ಅನುಸಾರವಾಗಿ ಕರ್ತವ್ಯವನ್ನು ನಿರ್ವಹಿಸಬೇಕೇ ಹೊರತು ಸ್ವಾರ್ಥಪರನಾಗಿರಬಾರದು ಎಂದಿದ್ದಾನೆ. ಆಡಳಿತೆಯ ಪಂಡಿತನೆಂದೇ ಪ್ರಸಿದ್ಧನಾಗಿರುವ ಪೀಟರ್ ಟಕ್ಕರ್ ‘ಶೀಲದ ಮೌಲ್ಯವೇ ಸಾರ್ವಜನಿಕ ನೌಕರರ ಪ್ರಧಾನ ಗುಣವಾಗಿರಬೇಕೆಂದು’ ಹೇಳಿದ್ದಾರೆ.

ವಾರನ್ ಹೆಸ್ಟಿಂಗ್ಸ್ ತನ್ನ ಹೇಳಿಕೆಯಲ್ಲಿ ‘ಆಡಳಿತ ಮೌಲಿಕವಾಗಿರಬೇಕೇ ಹೊರತು ಒಬ್ಬ ಅಧಿಕಾರಿಯ ಸಾಮರ್ಥ್ಯದ ಆಧಾರದ ಮೇಲೆಯೇ ಅಳೆಯಲಾಗುವುದಿಲ್ಲ. ಒಬ್ಬ ಸಾರ್ವಜನಿಕ ನೌಕರನಿಗೆ ದಕ್ಷತೆಯೇ ‘ಯೋಗ’ವಾಗಿರಬೇಕು. ಒಬ್ಬ ಅಧಿಕಾರಿಗೆ ಕರ್ತವ್ಯ ನಿರ್ವಹಣೆಯೇ ಪ್ರಮುಖರಾಗಿರಬೇಕೇ ಹೊರತು ಕೀರ್ತಿ ಕಾಮನೆಯ ಫಲಾಕಾಂಕ್ಷೆಯಲ್ಲ. ಸ್ವಯಂ ಪ್ರತಿಷ್ಠೆಯ ಘೋಷಣೆಯೇ ಅವನ ಪತನಕ್ಕೆ ಕಾರಣವಾಗುತ್ತದೆ. ಒಬ್ಬ ಹಿರಿಯರು ಒಮ್ಮೆ ಚೀನಕ್ಕೆ ಹೋಗಿ ಒಬ್ಬ ಸಚಿವರ ಕಚೇರಿಯಲ್ಲಿ ಸಮಾಲೋಚನೆಯಲ್ಲಿ ಮಗ್ನರಾಗಿರು ವಾಗ ಮದ್ದು ಗುಂಡಿನ ಸದ್ದು ಕೇಳಿತು. ಗಾಬರಿಯಿಂದ ಆ ಹಿರಿಯರು ಏನೆಂದು ಪ್ರಶ್ನಿಸಿದಾಗ ಸಚಿವರೊಂದಿಗೆ ‘ಭ್ರಷ್ಟ ಅಧಿಕಾರಿಗಳನ್ನು ಸಾರ್ವಜನಿಕವಾಗಿ ಗುಂಡಿಟ್ಟು ಕೊಂದ ಸದ್ದಾಗಿದೆ’ ಎಂದು ಹೇಳಿದರು. ಆದರೆ ‘ವಿಚಾರಣೆ ಮತ್ತು ಸಾಕ್ಷ್ಯಾಧಾರಗಳಿಲ್ಲದೆ ಹೇಗೆ ಗುಂಡಿಟ್ಟು ಕೊಂದ ಸದ್ದಾಗಿದೆ ಎಂದು ಕೇಳಿದರು. ಆದರೆ ‘ವಿಚಾರಣೆ ಮತ್ತು ಸಾಕ್ಷ್ಯಾಧಾರಗಳಿಲ್ಲದೆ ಹೇಗೆ ಗುಂಡಿಟ್ಟು ಕೊಲ್ಲಲು ಸಾಧ್ಯವೆಂದು’ ಎಂದು ಮತ್ತೆ ಕೇಳಿದಾಗ ‘ಭ್ರಷ್ಟಾಚಾರದ ಸಾರ್ವಜನಿಕ ಅಭಿಪ್ರಾಯವೇ ಅಂತಿಮ ಸಾಕ್ಷಿ’ ಎಂದು ಸಚಿವರು ಪುನರುಚ್ಚಾರ ಮಾಡಿದಾಗ ಆ ಹಿರಿಯರು ನಿಬ್ಬೆರಗಾದರು! ಇದೊಂದು ಉತ್ಪ್ರೇಕ್ಷೆಯ ಮತ್ತು ಕಾನೂನಿಗೆ ಅತೀತವಾದ ಘಟನೆಯೆಂದು ಹೇಳಬಹುದಾದರೂ ಭ್ರಷ್ಟಾಚಾರದ ಬಗ್ಗೆ ಒಬ್ಬ ಅಧಿಕಾರಿಯ ಅಥವಾ ರಾಜಕಾರಣಿಯ ವಿಚಾರದಲ್ಲಿ ಸಾರ್ವಜನಿಕರಿಗೆ ಇರುವ ಒಟ್ಟು ಅಭಿಪ್ರಾಯದ ಮಹತ್ವಕ್ಕೆ ಒಂದು ಸಾಕ್ಷಿಯಾಗಿದೆ. ಅಂದರೆ ಸಾರ್ವಜನಿಕ ಅಭಿಮತ ಎಲ್ಲಾ ದಾಖಲೆ ಮತ್ತು ತರ್ಕಕ್ಕೂ ಮಿಗಿಲಾಗಿದೆ ಎಂಬುದಕ್ಕೆ ಇದೊಂದು ಸೂಚನೆ. ಗುಜರಾತಿನ ಸೂರತ್ ನಗರಕ್ಕೆ ಪ್ಲೇಗ್ ಸಾಂಕ್ರಾಮಿಕ ರೋಗ ಆಕ್ರಮಿಸಿದಾಗ ಅದರ ವಿರುದ್ಧ ಹೋರಾಟ ಮಾಡಿದ ಒಬ್ಬ ಮುನ್ಸಿಪಲ್ ಆಯುಕ್ತರ ಉತ್ಕೃಷ್ಟ ಸೇವೆ, ಬಿಹಾರದಲ್ಲಿ ಒಬ್ಬ ಚುನಾವಣಾಧಿಕಾರಿ ತೋರಿಸಿದ ದಿಟ್ಟತನ, ತಮಿಳುನಾಡಿನ ನಾಗಪಟ್ಟಿನಂ ಜಿಲ್ಲೆಯಲ್ಲಿ ಒಬ್ಬ ಕಲೆಕ್ಟರ್ ಸುನಾಮಿ ಪರಿಹಾರ ಕ್ರಮವನ್ನು ಸಮಾರೋಪಾದಿಯಲ್ಲಿ ಕೈಗೊಂಡ ಕಾರ್ಯಗಳು ಅಧಿಕಾರಿ ಸಮುದಾಯದ ವರ್ಚಸ್ಸನ್ನು ಏರಿಸಿವೆ. ಅದೇ ಪ್ರಕಾರ ಭ್ರಷ್ಟಾಚಾರಿಯಾದ ಒಬ್ಬ ಅಧಿಕಾರಿಯ ಅಪಕೀರ್ತಿ ಇಡೀ ಅಧಿಕಾರಿ ಸಮುದಾಯಕ್ಕೆ ಕಳಂಕಪ್ರಾಯವಾಗುತ್ತದೆ. ಅಧಿಕಾರಿಗಳು ಬರುತ್ತಾರೆ, ಹೋಗುತ್ತಾರೆ ಕ್ಲಿಸ್ಟರ್ ತೋರೋ ಎಂಬುವವನ ಪ್ರಕಾರ ಜಗತ್ತು ಒಬ್ಬ “ನಿಮಾರ್ಪಕನನ್ನು ಗುರುತಿಸಿ ಕೊಂಡಾ ಡುತ್ತದೆ. ಅಂದರೆ ಸಾರ್ವಜನಿಕ ಅಧಿಕಾರಿಗಳು ಸಮಾಜ/ದೇಶದ ನಿರ್ಮಾಪಕರಾಗಬೇಕೇ ಹೊರತು ಕೊರೆಯುವ ಕುರುವಾಯಿಗಳಾಗಬಾರದು”.

ಇತ್ತೀಚೆಗೆ ‘ಸಾರ್ವಜನಿಕ ಸೇವಾ ದಿನ’ವನ್ನು ಆಚರಿಸುವಾಗ ಪ್ರಧಾನಮಂತ್ರಿ ಮನಮೋಹನ್‌ಸಿಂಗ್‌ರವರು ಈ ರೀತಿ ಹೇಳಿದರು. “ಸರಕಾರಿ ಸೇವೆಯನ್ನು ಸಾರ್ವಜನಿಕ ಸೇವೆಯೆಂದು ದಕ್ಷತೆಯಿಂದ ನಿರ್ವಹಿಸಬೇಕು. ನೀವು ಬರೀ ಆಡಳಿತಗಾರರಲ್ಲ; ಬದಲಾವಣೆಯ ಪ್ರೇರಕ ಶಕ್ತಿಯಾಗಬೇಕು ಮತ್ತು ನಿರ್ವಾಹಕರಾಗಬೇಕು. ಮುಂದಿನ ದಿನಗಳ ಬಗ್ಗೆ ಮತ್ತು ಭವಿಷ್ಯದ ಬಗ್ಗೆ ಯೋಚಿಸುವ ಚಿಂತಕರಾಗಬೇಕು. ಸ್ಪರ್ಧಾತ್ಮಕ ಯುಗದಲ್ಲಿ ನಾಗಾಲೋಟದಿಂದ ಚಲಿಸುವ ಸಾಹಸಿಗಳಾಗಬೇಕು. ನೀವು ಒಂದು ರಾಷ್ಟ್ರೀಯ ವ್ಯವಸ್ಥೆಯ ಉಕ್ಕಿನ ಚೌಕಟ್ಟನ್ನು ಭಾರತದ ಪ್ರಜಾಪ್ರಭುತ್ವಕ್ಕೆ ನೀಡಬೇಕು. ಅಧಿಕಾರ ಮತ್ತು ಜವಾಬ್ದಾರಿಯನ್ನು ಸರಿದೂಗಿಸಬೇಕು. ಚುನಾವಣಾ ಚಕ್ರದ ಚಲನೆಯಲ್ಲಿ ರಾಜಕೀಯ ಮುಖಂಡತ್ವ ಬದಲಾವಣೆಯಾಗಬಹುದು. ಸರಕಾರ ಬರಬಹುದು ಅಥವಾ ಹೋಗಬಹುದು. ಆದರೆ ಆಡಳಿತ ಮಾತ್ರ ತನ್ನ ಪಾತ್ರವನ್ನು ನಿರ್ವಹಿಸಬೇಕಾಗುತ್ತದೆ. ಆರ್ಥಿಕ ಆಧುನಿಕತೆ ಮತ್ತು ಸುಧಾರಣೆಯನ್ನು ಸಮಾಜ ಬಯಸುತ್ತದೆ. ಆಗ ಸರಕಾರಗಳು ತಮ್ಮ ಪಾತ್ರವನ್ನು ಅದಕ್ಕನುಗುಣವಾಗಿ ಸಜ್ಜುಗೊಳಿಸಬೇಕು, ಆಡಳಿತ ಪರಿಕ್ರಮ ಪಾರದರ್ಶಕವಾಗಬೇಕು. ಜ್ಞಾನ ಸ್ಫೋಟದಿಂದಾಗುವ ಪರಿಣಾಮವನ್ನು ನಿಭಾಯಿಸುವ ಶಕ್ತಿ ಪಡೆಯಬೇಕು. ಆದುದ ರಿಂದ ತನ್ನ ಜವಾಬ್ದಾರಿಯನ್ನು ಮತ್ತು ನಾಗರಿಕ ಸೇವೆಯನ್ನು ಒಂದು ತಾಳ್ಮೆಯಿಂದ ನಿರ್ವಹಿಸುವುದರಲ್ಲಿ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು”.