೨೦೦೧ರ ಭಾರತದ ಜನಸಂಖ್ಯೆ ೧೦೨ ಕೋಟಿಯ ಮೇಲಿದ್ದು. ಅದರಲ್ಲಿ ೧೫ ವರ್ಷ ವಯಸ್ಸಿನ ಕೆಳಗಿರುವ ಅಪ್ರಾಪ್ತ ಮಟ್ಟದ ಬಾಲಕ ಬಾಲಕಿಯರು ಈಗ ಶೇ. ೩೬ರಷ್ಟಿದ್ದಾರನ್ನಲಾಗಿದೆ. ಐದನೇ ಎರಡು ಪಾಲು ಮಕ್ಕಳಿರುವ ಈ ಸಂಖ್ಯೆ ಭಾರತದಲ್ಲಿ ಸುಮಾರು ೩೫ ಕೋಟಿಯಷ್ಟಿದ್ದು, ಅದು ಹಲವಾರು ವಿದೇಶಗಳ ಇಡೀ ಜನಸಂಖ್ಯೆ ನುಂಗುವಷ್ಟು ವಿಶಾಲವಾಗಿದೆ.

೨೦ನೇ ಶತಮಾನದ ಆದಿಯಲ್ಲಿ ಸಾವಿರಕ್ಕೆ ನಲ್ವತ್ತು ಮಕ್ಕಳು ಸಾಯುತ್ತಿದ್ದರು. ಈಗ (೨೦೦೧ರಲ್ಲಿ) ಹತ್ತಾಗಿದೆ. ದೇಶದ ಆರೋಗ್ಯ ಪಾಲನೆ, ಶೌಚಸೌಲಭ್ಯ,  ನೀರು ಸರಬರಾಜು ಮುಂತಾದ ಕಾರ್ಯವಲಯಗಳು ವಿಸ್ತರಿಸಿ, ಈ ಶಿಶುಗಳ ಸಾವಿನ ಗತಿ ತಡೆಯಲಾಗಿದೆ.

ಜನಸಾಮಾನ್ಯರ ಬದುಕು ೧೯೦೧ರಲ್ಲಿ ೨೩ ವರ್ಷಗಳಿದ್ದರೆ, ಈಗ ಬೆಳೆದು ೨೦೦೧ರಲ್ಲಿ ಅದು ೬೦ ವರ್ಷಕ್ಕೆ ಮೇಲ್ಪಟ್ಟಿದೆ. ಸ್ವಾತಂತ್ರ್ಯಾನಂತರ, ಹೊಸ ಬೆಳವಣಿಗೆಯ ಯುಗ ಪ್ರಾರಂಭವಾಗಿ, ಮಕ್ಕಳ ಯೋಗ ಕ್ಷೇಮ-ಅಭಿವೃದ್ದಿಗಳಿಗೆ ವಿಶೆಷ ಗಮನ ಎಲ್ಲೆಡೆಗಳಿಂದ ಹರಿದು ಬಂದಿದೆ.

ಸಂವಿಧಾನದಲ್ಲಿ ಮಕ್ಕಳನ್ನು ಹೊರಗಿಟ್ಟಿಲ್ಲ, ಅವರ ಪಾಲನೆ ಪೋಷಣೆಗಳಿಗೆ ಹಲವು ಉಪವಿಧಿಗಳು ಸಮೇತ ಮೀಸಲಾಗಿವೆ. ವಿಧಿ ೩೯(ಇ) ಮತ್ತು (ಎಫ್) ಹೇಳುವಂತೆ ರಾಜ್ಯ ಸರ್ಕಾರವು ಮಕ್ಕಳ ಎಳೆ ವಯಸ್ಸಿನ ದುರ್ಬಳಕೆಯಾಗದಂತೆ ಅವರ ಸಂರಕ್ಷಣೆ, ಯೋಗಕ್ಷೇಮ ಹಾಗೂ ಬೆಳವಣಿಗೆಗಳಿಗೆ ಅಲ್ಲಲ್ಲಿ ಬಾಧ್ಯವಾಗಿದೆ. ಮಕ್ಕಳು ಅನುಕೂಲ ವಾತಾವರಣದಲ್ಲಿ ಗಿಡ ಬೆಳೆದು ಮರವಾಗುವಂತೆ ಅವಕಾಶ-ಸೌಲಭ್ಯಗಳನ್ನು ಹೊಂದಬೇಕೆಂದು, ಆಡಳಿತಕ್ಕೆ ಸಂವಿಧಾನ-ವಿಧಿಯು ಸೂಚನೆಯಿತ್ತಿದೆ. ಅವುಗಳ ಬಾಲ್ಯಕಾಲವು ಶೋಷಣಾರಹಿತವಾಗಿರಲಿ ಎಂದು ಹಾರೈಸಿ, ಈ ಮಕ್ಕಳಿಗೆ ವಿದ್ಯಾಭ್ಯಾಸದಿಂದಲೇ ಅರಳುವ, ಬೆಳೆಯುವ ಪರಿಕಲ್ಪನೆ ನೀಡಲಾಗಿದೆ. ವಿಧಿ ೪೫ರಲ್ಲಿ ರಾಜ್ಯಾಡಳಿತವು ೧೪ರ ವಯಸ್ಸಿನವರೆಗಿನ ಮಕ್ಕಳಿಗೆ ಕಡ್ಡಾಯ ಹಾಗೂ ನಿಶ್ಶುಲ್ಕ ವಿದ್ಯಾಭ್ಯಾಸ ದೊರೆಯುವಂತೆ ಮಾಡಲು ಹೊಣೆಯಾಗಿದೆ. ಮಕ್ಕಳ ಹಕ್ಕುಗಳು-ಅರ್ಹತೆಗಳು ನಾಡಿನ ಸಂವಿಧಾನದಲ್ಲೇ ಮಾತ್ರವಲ್ಲ ವಿಶ್ವಸಂಸ್ಥೆಯ ದಾಖಲೆ ಗಳಲ್ಲೂ ಮಂಜೂರಾಗಿದೆ.

ಮಕ್ಕಳನ್ನು ಕಾಪಾಡುವ ಕಾನೂನುಗಳಿವೆ. ಅಲ್ಲಿ ದಂಡಾಪರಾಧ ಮತ್ತು ಸರ್ವತೋಮುಖ ಕಲ್ಯಾಣಗಳನ್ನು ಗುರುತಿಸಲಾಗಿದೆ. ವಾಣಿಜ್ಯ-ವ್ಯವಹಾರ-ಕೈಗಾರಿಕೆಗಳ ವಲಯಗಳಲ್ಲೂ ಮಕ್ಕಳಿಗೆ ಅನ್ಯಾಯವಾಗದಂತೆ, ನಾನಾ ಕಾನೂನುಗಳ ರಚನೆಯಾಗಿದೆ. ೧೯೭೪ರಲ್ಲಿ ಮಕ್ಕಳ ರಾಷ್ಟ್ರೀಯ ಧೋರಣೆಯನ್ನು ಅಂಗೀಕರಿಸಲಾಗಿದೆ. ಅದು ಸೂಚಿಸುವಂತೆ, ಮಕ್ಕಳು ಹುಟ್ಟುವ ಮುನ್ನ ಹಾಗೂ ಜನಿಸಿದ ಮೇಲೆ, ಅವಕ್ಕೆ ಬೇಕಾದ ಸೇವೆಗಳನ್ನು ಒದಗಿಸವುದು ಸರ್ಕಾರದ ಹೊಣೆಗಾರಿಕೆ. ಅಷ್ಟೇ ಅಲ್ಲ, ಬೆಳವಣಿಗೆಯ ಹಲವು ಹಂತಗಳಲ್ಲಿ ಅವುಗಳ ದೈಹಿಕ, ಮಾನಸಿಕ ಮತ್ತು ಸಾಮಾಜಿಕ ಮಟ್ಟದ ತುಂಬು ಅರಳುವಿಕೆಗೆ ಆಡಳಿತ ಜವಾಬ್ದಾರಿ ಹೊತ್ತಿದೆ.

ರಾಷ್ಟ್ರಕ್ಕೂ ಮಕ್ಕಳು ಬೇಕು

ಕೆಲವು ಬಾಧೆಗಳನ್ನು ಮುಂದಾಗಿ ತಡೆಯುವ ಮತ್ತು ಕೆಲವು ಸ್ಥಿತಿಗತಿಗಳನ್ನು ಊರ್ಜಿತ ಗೊಳಿಸುವ ಕಾರ್ಯಕ್ರಮಗಳ ಪಟ್ಟಿಯಲ್ಲಿ, ಆರು ವರ್ಷದ ಕೆಳಗಿನ ಕೂಸುಗಳನ್ನು ಆರೋಗ್ಯ ಮತ್ತು ಪರಿಪೋಷಣೆಗಳ ವಲಯದಲ್ಲಿ ಕಾಪಾಡುವುದು, ಅನಾಥ ಶಿಶುಗಳ ಪಾಲನೆ, ಹಗಲಿನ ಉದ್ದಕ್ಕೂ ಪೋಷಕ ಸೌಲಭ್ಯಗಳು, ಅಂಗವಿಕಲ-ಬುದ್ದಿಮಾಂದ್ಯ ದುರ್ಬಲ ಮಕ್ಕಳ ಪುನರ್‌ವಸತಿ ಮುಂತಾದ ಕ್ರಿಯಾಚರಣೆಗಳಿಗೆ ಆದ್ಯತೆ ನೀಡಲಾಗಿದೆ.

ಈ ರಾಷ್ಟ್ರನೀತಿಯು ಮಕ್ಕಳ ಮಂಡಲಿಯೊಂದನ್ನು ೧೯೭೪ರಲ್ಲಿ ರಚಿಸಿ ಅದು ಮಕ್ಕಳ ಕುರಿತಾದ ವಿವಿಧ ಸೇವೆಗಳನ್ನು ಯೋಜಿಸುವ, ಪರಾಂಬರಿಸುವ ಹಾಗೂ ಸಮನ್ವಯ ಗೊಳಿಸುವ ಮಹಾವೇದಿಕೆಯಾಗಿ ವರ್ತಿಸಬೇಕೆಂದು ಹೇಳಿದೆ. ಭಾರತ ಸರ್ಕಾರವು ರಾಷ್ಟ್ರೀಯ ಮಕ್ಕಳ ನಿಧಿಯನ್ನು ಪ್ರಾರಂಭಿಸಿ ಮಕ್ಕಳ ಯೋಗಕ್ಷೇಮಕ್ಕಾಗಿ ಸುಧಾರಿತ ಕಾರ್ಯಕ್ರಮಗಳುಳ್ಳ ಹಲವಾರು ಸ್ವಯಂಸೇವಾ ಸಂಸ್ಥೆಗಳನ್ನು ಉತ್ತೇಜಿಸಲು ಹಣಕಾಸು ನೆರವು ನೀಡುತ್ತ ಬಂದಿದೆ.

ಭಾರತ ಮಕ್ಕಳಿಗಾಗಿ ಹಾಕಿಕೊಂಡ ಕಾರ್ಯಪಟ್ಟಿಗನುಗುಣವಾಗಿ ೩೦ ಕೋಟಿ ಮಕ್ಕಳ ದೈನಂದಿನ ಆವಶ್ಯಕತೆ, ಹಕ್ಕುಗಳು ಹಾರೈಕೆಗಳನ್ನು ಈಡೇರಿಸುವ ಸಲುವಾಗಿ ಕಾರ್ಯ ಯೋಜನೆಯೊಂದನ್ನು ತಯಾರಿಸಲಾಗಿದೆ. ೧೯೯೨ರ ಕೊನೆಯಲ್ಲಿ ಕೇಂದ್ರ ಆಡಳಿತವು ಮಕ್ಕಳ ಹಕ್ಕುಗಳ ಕುರಿತಾದ ಸಮಾವೇಶದ ಬೇಡಿಕೆಗಳನ್ನು ಅಧಿಕೃತ ರೂಪ ನೀಡಿ ಅಂಗೀಕರಿಸಿತು.

ನಾಡಿನ ಕೋಟ್ಯಂತರ ಮಕ್ಕಳು ಬಡತನದಲ್ಲಿ ಶೌಚಾನುಕೂಲತೆಗಳಿಲ್ಲದ ದಯನೀಯ ಪರಿಸರದಲ್ಲಿ, ರೋಗರುಜಿನಗಳಲ್ಲಿ, ಪ್ರಾಥಮಿಕ ಆರೋಗ್ಯ ಸೌಲಭ್ಯ ದೊರೆಯದ ಸ್ಥಳಗಳಲ್ಲಿ ಮತ್ತು ಎದೆ ಹಾಲು ಮತ್ತಿತರ ಪೌಷ್ಠಿಕ ರಕ್ಷಣೆಗಳ ಅಭಾವದಲ್ಲಿ ನರಳುತ್ತಿವೆ.

ಅವು ೬ ವರ್ಷಕ್ಕೂ ಕಿರಿಯ ಮಕ್ಕಳೆಂದರೆ ತಬ್ಬಿಬ್ಬಾಗಬೇಕಿಲ್ಲ. ಅವಕ್ಕೆ ದೈಹಿಕ-ಮಾನಸಿಕ ಬೆಳವಣಿಗೆ ಅತ್ಯಾವಶ್ಯಕ. ಅವುಗಳು ನಾನಾ ಅಪರಾಧಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವ ನಿಷ್ಠೆ ಹಿರಿಯರಲ್ಲಿರಬೇಕು.

ಆಗಸ್ಟ್ ೧೯೭೪ರ ಕೇಂದ್ರಿಯ ರಾಷ್ಟ್ರನೀತಿಯಲ್ಲಿ ಮಕ್ಕಳು ‘ಅತ್ಯುಚ್ಚ ಆಸ್ತಿ-ಪ್ರಮುಖ ಆದಾಯ’ಗಳೆಂದು ಹೇಳಲಾಗಿದೆ. ಈ ನೀತಿಯ ಚೌಕಟ್ಟಿನಲ್ಲಿ ಮಕ್ಕಳ ನಾನಾ ಅಗತ್ಯಗಳ ಆದ್ಯತೆಗಳಿಗೆ ಎಲ್ಲಿಲ್ಲದ ಗಮನಹರಿಸಲಾಗಿದೆ. ಒಂದು ವರ್ಷದ ಬಳಿಕ ಸಮಗ್ರ ಶಿಶು ಸಂವರ್ಧನಾ ಸೇವೆಗಳ ವಿಕಾಸ ಕಾರ್ಯಕ್ರಮ (೧೯೭೫) ತಯಾರಾಗಿ, ಕಾರ್ಯಕ್ಕಿಳಿಯಿತು. ಮಗುವನ್ನೇ ಕೇಂದ್ರವಾಗಿರಿಸಿ ಅದರ ಸಮಗ್ರ ಅಭ್ಯುದಯಕ್ಕೆ ಅದು (ಕಾರ್ಯಕ್ರಮ) ನಾಂದಿ ಹಾಡಿದೆ.

ಕಡೆಗಣಿಸಲ್ಪಟ್ಟ, ಮಕ್ಕಳ ಪೋಷಣೆಯ ನ್ಯೂನತೆಗಳು ೧೯೭೬-೮೭ರಲ್ಲಿ ಶೇ. ೧೫.೩ ಇದ್ದರೆ, ೧೯೮೮-೯೦ರ ಹೊತ್ತಿಗೆ ಅವು ಶೇ. ೮.೭ಕ್ಕೆ ಜಾರಿವೆ. ಹಾಗೆಯೇ ಶಿಶುಗಳ ಸಾವಿನ ಸಂಖ್ಯೆ ಇಳಿದಿದೆ. ಹೆಣ್ಣು ಮಕ್ಕಳ ಹತ್ಯೆಯ ಸಮಸ್ಯೆ ಅಲ್ಲಲ್ಲಿ ಕ್ರಮೇಣ ಬಗೆಹರಿಸಲಾಗುತ್ತಿದೆ. ಮಕ್ಕಳ ಬಾಲ್ಯವಿವಾಹದ ವಿರುದ್ಧ ಪ್ರಚಾಯ ಕಾರ್ಯ ನಡೆದಿದೆ. ಅನಾಥ ಮಕ್ಕಳನ್ನು ದತ್ತು ತೆಗೆದುಕೊಳ್ಳುವ ದಂಪತಿಗಳಿಗೆ ಉತ್ತೇಜನವಿದೆ. ಪ್ರಾಥಮಿಕ ಶಾಲಾ ಪ್ರವೇಶಗಳು ಹೆಚ್ಚಿವೆ. ಕುಡಿಯುವ ನೀರಿನ ವ್ಯವಸ್ಥೆ ಗ್ರಾಮೀಣ ವಲಯಗಳಲ್ಲಿನ ಶಾಲೆಗಳಲ್ಲಿ ಹೆಚ್ಚಿ ಸಲಾಗಿದೆ. ಶೌಚಾಲಯಗಳ ವ್ಯವಸ್ಥೆಗೂ ನಿಗಾ ಇರಿಸಲಾಗಿದೆ. ತೃಣಮೂಲ ವಿದ್ಯಾಭ್ಯಾಸವನ್ನು ೧೩ ಕೋಟಿ ಮಕ್ಕಳು (೧೯೫೧ ರಿಂದೀಚೆಗೆ ೧೯೮೯ರಲ್ಲಿ) ಪಡೆದಿವೆ. ಆದರೆ ಸಾರ್ವತ್ರಿಕ ವಿದ್ಯಾಭ್ಯಾಸ ಈಗಲೂ ಸಾಧ್ಯವಾಗಿಲ್ಲ. ಆಗಬೇಕಾದ ಕೆಲಸ ಬಹಳವಿದೆ.