ಕರ್ನಾಟಕ ತನ್ನ ನ್ಯಾಯವಾದ ಪಾಲನ್ನು ರೇಲ್ವೆ ಕ್ಷೇತ್ರದಲ್ಲಿ ಪಡೆಯಲು ಅನೇಕ ದಶಕಗಳಿಂದ ಚಾತಕ ಪಕ್ಷಿಯಂತೆ ಕಾದಿದೆ. ಆದರೆ ಮರೀಚಿಕೆಯಂತೆ ಕಣ್ಣುಮುಚ್ಚಾಲೆಯ ಆಟ ನಡೆಯುತ್ತಿದೆ.

೧. ೨೦೦೫-೦೬ ರೈಲ್ವೆ ಬಜೆಟ್‌ನಲ್ಲಿ ಮಡಗಾಂವ-ಮಂಗಳೂರು ಶತಾಬ್ದಿ ಎಕ್ಸಪ್ರೆಸ್, ಚೆನ್ನೈ-ಬೆಂಗಳೂರು ಶತಾಬ್ದಿ ಎಕ್ಸ್‌ಪ್ರೆಸ್ (ವಾರದಲ್ಲಿ ಆರು ದಿವಸ), ಮಂಗಳೂರು-ಶ್ರವಣಬೆಳಗೊಳ ಪ್ಯಾಸೆಂಜರ್ (ಬ್ರಾಡ್ಗೇಜ್ ಪರಿವರ್ತನೆಯಾದ ನಂತರ), ಯಶವಂತಪುರ-ಮಂಗಳೂರು ಎಕ್ಸಪ್ರೆಸ್ (ಮೈಸೂರು ಮುಖಾಂತರ-ಬ್ರಾಡ್ಗೇಜ್ ಪರಿವರ್ತನೆಯಾದ ನಂತರ), ಯಶವಂತಪುರ-ಮಂಗಳೂರು (ಅರಸೀಕೆರೆ ಮುಖಾಂತರ ಗೇಜ್ ಪರಿವರ್ತನೆಯಾದ ನಂತರ), ಹುಬ್ಬಳ್ಳಿ-ಚಿಕ್ಕಜಾಜೂರು ಪ್ಯಾಸೆಂಜರ್ (ದಿನವಹಿ), ಬೆಳಗಾಂವ-ಮೀರಜ್ ಪ್ಯಾಸೆಂಜರ್ ಎರಡು ಜೊತೆ ವಾರದಲ್ಲಿ ಐದು ದಿವಸ.

೨. ರೈಲಿನ ವಿಸ್ತರಣೆ : ಮೈಸೂರು-ತಂಜಾವೂರು ಎಕ್ಸಪ್ರೆಸ್ ಕುಂಬಕೋಣಂ ತನಕ (ಗೇಜ್ ಪರಿವರ್ತನೆಯಾದ ನಂತರ), ಕಾಚಿಗುಡ-ಶ್ರೀ ಸತ್ಯಸಾಯಿ ಪ್ರಶಾಂತಿ ನಿಲಯಂ ಎಕ್ಸಪ್ರೆಸ್ ಯಶವಂತಪುರ ತನಕ, ಸಂಗಮಿತ್ರ ಎಕ್ಸ್‌ಪ್ರೆಸ್, ರಾಜೇಂದ್ರನಗರ-ಪಟ್ನಾ ಬೆಂಗಳೂರಿಗೆ.

೩. ಈ ವರ್ಷ ಪೂರ್ತಿಗೊಳ್ಳಲಿರುವ ರೈಲ್ವೆ ಲೈನುಗಳು :

೧. ಹಾಸನ-ಶ್ರವಣಬೆಳಗೊಳ (ಬೆಂಗಳೂರು-ಹಾಸನ)

೨. ಬೆಂಗಳೂರು-ನೆಲಮಂಗಲ (ಬೆಂಗಳೂರು-ಹಾಸನ)

ಈ ಹಣಕಾಸಿನ ವರ್ಷದ ಪ್ರಸ್ತಾವನೆಗಳು ಹಿಂದಿನ ವರ್ಷಕ್ಕಿಂತ ಆಶಾದಾಯಕವಾಗಿದ್ದರೂ ಕರ್ನಾಟಕಕ್ಕೆ ರೈಲ್ವೆ ಬಜೆಟ್‌ನಲ್ಲಿ ನೀಡಿದ ೧೮೬.೭೯ ಕೋಟಿ ರೂ. ಉದ್ದೇಶಿತ ಯೋಜನೆ ಗಳನ್ನು ಪೂರ್ತಿಮಾಡಲು ಏನೇನೂ ಸಾಲದು. ಆದರೆ ಹಿಂದಿನ ವರ್ಷದ ೧೧೩ ಕೋಟಿ ರೂ.ಗೆ ಹೋಲಿಸಿದರೆ ಇದು ಸ್ವಲ್ಪ ಹೆಚ್ಚಳವೆಂದು ಕಂಡರೂ ಕಾಸಿನ ಮಜ್ಜಿಗೆಯಂತಾಗಿದೆ.

ಕರ್ನಾಟಕಕ್ಕೆ ಅನಿವಾರ‍್ಯವಾಗಿರುವ ಹುಬ್ಬಳ್ಳಿ-ಅಂಕೋಲ, ಸೋಲಾಪುರ-ಗದಗ, ಹೊಸಪೇಟೆ-ತೋರಣಗಲ್-ಗುಂತಕಲ್ ಇತ್ಯಾದಿ ಪ್ರಮುಖ ಯೋಜನೆಗಳ ವಿಚಾರ ಯಾವ ಪ್ರಸ್ತಾಪವೂ ಇಲ್ಲ. ಕರ್ನಾಟಕದ ೧೫ ಯೋಜನೆಗಳಲ್ಲಿ ೧೮೬೨.೭೬ ಕಿ.ಮೀ. ಯೋಜನೆ ಗಳಿಗೆ ಬಾಕಿ ೩೪೪೭.೭೨ ಕೋಟಿ ರೂ. ಬೇಕಾಗಿದೆ. ಇದನ್ನು ನಿಗದಿತ ಸಮಯಕ್ಕೆ ಸರಿಯಾಗಿ ಪೂರ್ತಿಮಾಡಬೇಕಾದರೆ ಈ ವರ್ಷ ನೀಡಿದ ಅನುದಾನದಿಂದ ಯಾವ ಉಪಯುಕ್ತ ಯೋಜನೆ ಗಳು ಕಾರ್ಯಗತವಾಗಲು ಸಾಧ್ಯವಾಗುವುದಿಲ್ಲ. ಬಹಳ ವರ್ಷಗಳಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳು ಪೂರ್ತಿಯಾಗಬೇಕಾದರೆ ಹುಬ್ಬಳ್ಳಿ ನೈರುತ್ಯ ವಲಯವನ್ನು ಆಡಳಿತಾತ್ಮಕವಾಗಿ ಮತ್ತು ಆರ್ಥಿಕ ದೃಷ್ಟಿಯಿಂದ ಸದೃಢಗೊಳಿಸಬೇಕಾಗಿದೆ.

ಹುಬ್ಬಳ್ಳಿ-ಅಂಕೋಲ ಹೊಸ ಬ್ರಾಡ್‌ಗೇಜ್ ಲೈನು ೧೬೭ ಕಿ.ಮೀ.ಗಳಾಗಿದ್ದು ೯೯೭.೫ ಕೋಟಿ ರೂ.ಗಳು ಬೇಕಾಗುತ್ತವೆ. ಕೊಟ್ಟೂರು-ಹರಿಹರ ಹೊಸ ಬ್ರಾಡ್‌ಗೇಜ್ ಲೈನು ೬೫ ಕಿ.ಮೀ. ದೂರವಿದ್ದು ರೂ. ೧೨೪.೧೨ ಕೋಟಿ, ವೆಚ್ಚ ತಗಲುತ್ತದೆ. ಸೋಲಾಪುರ-ಬಿಜಾಪುರ ಗೇಜ್ ಪರಿವರ್ತನೆ ೯೪ ಕಿ.ಮೀ. ಪೂರ್ತಿಯಾಗಿದೆ. ಅದರ ವೆಚ್ಚ ಒಟ್ಟು ರೂ. ೩೧೮.೬೬ ಕೋಟಿಗಳಾಗಿದ್ದು, ಅದರಲ್ಲಿ ೨೦೦.೩೮ ಕೋಟಿ ಖರ್ಚಾಗಿದ್ದು, ಇನ್ನು ೧೯೦ ಕಿ.ಮೀ. ಕಾಮಗಾರಿಯನ್ನು ಮುಗಿಸಬೇಕಾಗಿದೆ. ಆದರೆ ಕಳೆದ ವರ್ಷದಂತೆ ಈ ವರ್ಷವೂ ಕೂಡ ಅನುದಾನ ನೀಡದೆ ಕಾಮಗಾರಿ ಆಮೆಯ ವೇಗದಲ್ಲಿ ಸಾಗುತ್ತಿದೆ. ಬೆಂಗಳೂರು-ಕೆಂಗೇರಿ ಜೋಡಿ ಮಾರ್ಗ ೧೨.೪೫ ಕಿ.ಮೀ.ಗೆ ರೂ. ೨೭.೮೯ ಕೋಟಿ ಮತ್ತು ಕೆಂಗೇರಿ-ರಾಮನಗರ ಜೋಡಿಮಾರ್ಗ ೩೭.೪೩ ಕಿ.ಮೀ.ಗಳಿದ್ದು, ೫೮.೮೪ ಕೋಟಿ ರೂ. ಬೇಕಾಗುತ್ತದೆ. ಆದರೆ ಈಗಿರುವ ಅನುದಾನದಲ್ಲಿ ಈ ಕಾಮಗಾರಿಗಳು ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ. ಅದೇ ಪ್ರಕಾರ ಹೊಸ ರೈಲ್ವೆ ಲೈನುಗಳಾದ ಕೊಟ್ಟೂರು-ಹರಿಹರ, ಕಡೂರು-ಚಿಕ್ಕಮಗಳೂರು-ಸಕಲೇಶಪುರ, ಬೆಂಗಳೂರು-ಸತ್ಯಮಂಗಲಂ (ತಮಿಳುನಾಡು) ಕನಕಪುರ ಮೂಲಕ ಈ ರೀತಿ ಒಟ್ಟು ೪೩೪ ಕಿ.ಮೀಗಳಿದ್ದು ಅದರ ಒಟ್ಟು ಅನುದಾನ ರೂ. ೧,೦೯೬ ಕೋಟಿ ಬೇಕಾಗುತ್ತದೆ. ಒಟ್ಟಿನಲ್ಲಿ ಕರ್ನಾಟಕ ರೈಲ್ವೆ ನಿಗಮ ಅಥವಾ ಕೇಂದ್ರ ರೈಲ್ವೆ ಇಲಾಖೆ ಹಮ್ಮಿಕೊಂಡ ಮತ್ತು ಮಂಜೂರಾದ ಪ್ರಮುಖವಾದ ಮತ್ತು ಆದ್ಯತೆಯ ಜೋಡಿಮಾರ್ಗ, ಗೇಜ್ ಪರಿವರ್ತನೆ, ಹೊಸ ಲೈನು, ಸಮೀಕ್ಷೆಗಳಿಗೆ ನೀಡಲಾದ ಅನುದಾನದಿಂದ ಕರ್ನಾಟಕದ ಹಿತರಕ್ಷಣೆ ಸಾಧ್ಯವಿಲ್ಲ. ಈ ಬಗ್ಗೆ ಪರಿಣಾಮಕಾರಿಯಾದ ಕ್ರಮವನ್ನು ರಾಜ್ಯಸರ್ಕಾರ ಮತ್ತು ರಾಜ್ಯದ ಪ್ರತಿನಿಧಿಗಳು ಕೇಂದ್ರ ರೈಲ್ವೆ ಇಲಾಖೆಗೆ ಒತ್ತಡ ತರದಿದ್ದರೆ ಕರ್ನಾಟಕದ ಪ್ರಗತಿ ಸಂಪೂರ್ಣ ಕುಂಠಿತವಾಗುತ್ತದೆ. ಒಂದು ಕಡೆ ನೀರಾವರಿ ಸೌಲಭ್ಯ ಹೆಚ್ಚುತ್ತಿರುವ ಸಂಕ್ರಾಂತಿ ಕಾಲದಲ್ಲಿ, ದೇಶದಲ್ಲಿ ಕರ್ನಾಟಕ ಬಂಡವಾಳ ಹೂಡಿಕೆಯಲ್ಲಿ ಪ್ರಥಮ ಪಂಕ್ತಿಯ ಸಾಲಿನಲ್ಲಿ ಸೇರಿಕೊಳ್ಳುತ್ತಿರುವಾಗ, ಬೆಂಗಳೂರು, ಮಂಗಳೂರು, ಹುಬ್ಬಳ್ಳಿ, ಮೈಸೂರು, ಗುಲ್ಬರ್ಗ, ಬೆಳಗಾಂವ, ರಾಯಚೂರು ಮತ್ತು ಬಿಜಾಪುರದಂತಹ ಆಯಕಟ್ಟಿನ ಪ್ರದೇಶಗಳು ಕೃಷಿ ಮತ್ತು ಔದ್ಯಮಿಕ ಕ್ಷೇತ್ರದಲ್ಲಿ ವಿಶೇಷವಾದ ಜಿಗಿತವನ್ನು ಕಾಣಬೇಕಾದರೆ ಮೂರು ವರ್ಷದ ಒಳಗಡೆ ಹೊಸ ಮತ್ತು ಬಾಕಿಯಿರುವ ಎಲ್ಲಾ ರೈಲ್ವೆ ಯೋಜನೆಗಳು ಕಾರ್ಯಗತವಾಗಬೇಕು. ಈ ರೀತಿಯ ಕಾಲ ನಿಯಮಿತ ರೈಲ್ವೆ ಯೋಜನೆಗಳನ್ನು ಪೂರ್ತಿ ಗೊಳಿಸುವ ವಿಶೇಷ ಪ್ಯಾಕೇಜನ್ನು ಕೇಂದ್ರ ಸರ್ಕಾರದ ಮುಂದಿಟ್ಟು ಮನವರಿಕೆ ಮಾಡಿ ಕೊಡುವುದು ಅನಿವಾರ‍್ಯವಾಗಿದೆ. ಈ ಬಗ್ಗೆ ನಮ್ಮ ಜನಪ್ರತಿನಿಧಿಗಳು, ಸರ್ಕಾರ ಮತ್ತು ಜನತೆ ಜಾಗ್ರತರಾಗಬೇಕಾಗಿದೆ. ಅನೇಕ ಶತಮಾನ ಮತ್ತು ದಶಕಗಳಿಂದ ಪ್ರಾದೇಶಿಕ ಅಸಮಾನತೆ ಹೋಗಲಾಡಿಸುವ ಸಮರ್ಪಕವಾದ ರೈಲ್ವೆ ಸಂಪರ್ಕಗಳಿಂದ ಮಾತ್ರ ಸಾಧ್ಯ. ಅನ್ಯಥಾ ಶ್ರೀಮಂತ ಕರ್ನಾಟಕದ ಜನತೆ ಸಂಪನ್ನರಾಗಲು ಸಾಧ್ಯವಿಲ್ಲ.

ಈಗ ಸದ್ಯ ಹುಬ್ಬಳ್ಳಿ, ಬೆಂಗಳೂರು ಮತ್ತು ಮೈಸೂರು ವಿಭಾಗಗಳು ಮತ್ತು ಕೊಂಕಣ ರೈಲ್ವೆಯ ಕಾರವಾರ ವಿಭಾಗಗಳು ಅಸ್ತಿತ್ವದಲ್ಲಿದೆ. ಕೊಂಕಣ್ ರೈಲ್ವೆ ನಿಗಮದ ಯೋಜನೆಯ ಪ್ರಕಾರ ಕೊಂಕಣ ರೈಲ್ವೆಯನ್ನು ಅದು ಪ್ರಾರಂಭವಾದ ೧೦ ವರ್ಷದ ನಂತರ ರೈಲ್ವೆ ವಿಭಾಗದಲ್ಲಿ ಸೇರ್ಪಡೆಗೊಳಿಸುವ ಕಾಲ ಈಗ ಸನ್ನಿಹಿತವಾಗಿದೆ. ಸದ್ಯ ಮಂಗಳೂರು ಮತ್ತು ಕಂಕನಾಡಿ ರೈಲ್ವೆ ಸ್ಟೇಶನ್‌ಗಳನ್ನು ಪಾಲ್‌ಘಾಟ್ ವಿಭಾಗಕ್ಕೆ ಸೇರಿಸಲಾಗಿದೆ. ಮಂಗಳೂರು ಪಾಲ್‌ಘಾಟ್ ವಿಭಾಗದ ತುತ್ತತುದಿಗಿದೆ. ಯಾವ ತಾಂತ್ರಿಕ ಅಥವಾ ಪ್ರಾದೇಶಿಕ ಕಾರಣಗಳಿಂದಲೂ ಈ ಸ್ಟೇಶನ್‌ಗಳನ್ನು ಪಾಲ್‌ಘಾಟ್‌ಕ್ಕೆ ಸೇರಿಸಲಾಗುವುದಿಲ್ಲ. ಕರ್ನಾಟಕದ ಏಕೈಕ ಬಂದರು ಮಂಗಳೂರಿನಲ್ಲಿರುವ ಕಾರಣ ಕರ್ನಾಟಕದ ವ್ಯಾಪಾರ ಮತ್ತು ಕೈಗಾರಿಕೆಗೆ ಸರಿಯಾದ ರೈಲ್ವೆ ಸಂಪರ್ಕ ಇಲ್ಲದಿದ್ದರೆ ಕರ್ನಾಟಕದ ಸಮಗ್ರ ಅಭಿವೃದ್ದಿ ಸಾಧ್ಯವಾಗು ವುದಿಲ್ಲ. ಮಂಗಳೂರಿನ ಬಂದರಿಗೆ ವಿಸ್ತಾರವಾದ ಕರ್ನಾಟಕದ ಹಿನ್ನಾಡು ಸೇರುವ ಕಾರಣ ಕರ್ನಾಟಕದ ಪ್ರಗತಿ ರೈಲ್ವೆ ಸಂಪರ್ಕದ ಕೊರತೆಯಿಂದ ಹಿಮ್ಮುಖವಾಗಿದೆ. ಹಾಸನ ಮತ್ತು ಮಂಗಳೂರಿಗೆ ಕೇಂದ್ರ ಸರ್ಕಾರ ಈಗಾಗಲೇ ಎರಡು ವಿಶೇಷ ಆರ್ಥಿಕ ವಲಯಗಳು ಮಂಜೂರು ಮಾಡಿದ ಕಾರಣ ವಿಪುಲವಾದ ವ್ಯಾಪಾರ ಮತ್ತು ಕೈಗಾರಿಕೆಯ ಅಭಿವೃದ್ದಿಗೆ ಕರ್ನಾಟಕದ ಎಲ್ಲಾ ರೈಲ್ವೆ ಸಂಪರ್ಕ ಬಲಪಡಿಸಬೇಕಾಗಿದೆ. ONGC ಇಪ್ಪತ್ತೈದು ಸಾವಿರ ಕೋಟಿ ರೂ.ಗಳ ಬಂಡವಾಳ ಹೂಡಲು ನಿರ್ಣಯಿಸಿದೆ. ಅದಕ್ಕೆ ಪೂರಕವಾಗಿ ನಾಗಾರ್ಜುನ ವಿದ್ಯುತ್ ಯೋಜನೆ ಮತ್ತು ಅನೇಕ ಬೃಹತ್ ಕೈಗಾರಿಕಾ ಯೋಜನೆಗಳು ಕರ್ನಾಟಕದ ಹಲವೆಡೆ ಮತ್ತು ಪಶ್ಚಿಮ ಕರಾವಳಿಯಲ್ಲಿ ತಲೆಎತ್ತುತ್ತಿವೆ.

ಹುಬ್ಬಳ್ಳಿ ನೈರುತ್ಯ ವಲಯಕ್ಕೆ ಈಗಿರುವ ಹುಬ್ಬಳ್ಳಿ, ಬೆಂಗಳೂರು, ಮೈಸೂರು ಮತ್ತು ಕೊಂಕಣ ರೈಲ್ವೆಯ ಕಾರವಾರ ವಿಭಾಗ ಸೇರಿಸುವುದರ ಜೊತೆಯಲ್ಲಿ ಮುಂದೆ ನ್ಯಾಯವಾಗಿ ಮಂಜೂರಾಗಬೇಕಾದ ಮಂಗಳೂರು ಮತ್ತು ಗುಲ್ಬರ್ಗ ವಿಭಾಗ ಕೂಡ ಹುಬ್ಬಳ್ಳಿ ನೈರುತ್ಯ ವಲಯಕ್ಕೆ ಸೇರಿಸುವುದು ಅನಿವಾರ‍್ಯ. ಮುಂಬಯಿ ಮತ್ತು ಮಂಗಳೂರು, ಹಾಸನ-ಬೆಂಗಳೂರು ರೈಲ್ವೆ ಲೈನುಗಳು ಪೂರ್ತಿ ಸಿದ್ಧವಾದಾಗ ಕಾರವಾರ ಮತ್ತು ಮಂಗಳೂರು ವಿಭಾಗಗಳು ಅತ್ಯಂತ ಲಾಭದಾಯಕ ಮತ್ತು ಭೌಗೋಲಿಕವಾಗಿಯೂ ಉಪಯುಕ್ತ ವಿಭಾಗಗಳಾಗುತ್ತವೆ. ಮಂಗಳೂರು ವಿಭಾಗಕ್ಕೆ ಉಡುಪಿಯವರೆಗೆ ಇರುವ ಕೊಂಕಣ ರೈಲ್ವೆಯನ್ನು ಬಂಟ್ವಾಳ-ಪುತ್ತೂರು-ಕಬಕ-ಸುಬ್ರಹ್ಮಣ್ಯ-ಸಕಲೇಶಪುರ ಮತ್ತು ಹಾಸನ ಸ್ಟೇಶನ್‌ಗಳನ್ನು ಸಹಜವಾಗಿ ಸೇರಿಸಬಹುದಾಗಿದೆ.