ಭಾರತದ ಹೃದಯ ಹಳ್ಳಿಗಾಡಿನಲ್ಲಿದೆ, ಆರು ಲಕ್ಷ ಹಳ್ಳಿಗಳಲ್ಲಿ ಶೇಕಡ ೬೫ರಷ್ಟು ಜನರು ವಾಸಿಸುತ್ತಾರೆ. ಇದು ೬೫ ಕೋಟಿ ಗ್ರಾಮೀಣ ಜನರ ಸಂಘರ್ಷಮಯ ಬಾಳಿನ ಚಿತ್ರಣ. ಅಲ್ಲಿ ಶೇಕಡ ೬೫ರ ಕಾರ್ಮಿಕ ಶಕ್ತಿಯಿಂದ ಸಮಸ್ತ ದೇಶೋತ್ಪನ್ನ (GDP)ದ  ಮೂರನೇ ಒಂದು ಪಾಲಿನ ಉತ್ಪತ್ತಿ ಮಾಡಿ, ನಾಡಿನ ರಫ್ತುಗಳ ಶೇಕಡ ೯ರಷ್ಟು ವ್ಯಾಪಾರವನ್ನೂ ಸಾಧಿಸಿದೆ.

ಆರು ಲಕ್ಷ ಹಳ್ಳಿಗಳಿರುವ ಭಾರತದಲ್ಲಿ ಕೃಷಿ ಭೂಮಿ ಜಗತ್ತಿನಲ್ಲೇ ಅತಿ ದೊಡ್ಡದು. ಶೇಕಡ ೬೫ರ ಗ್ರಾಮೀಣ ಜನತೆ ವ್ಯವಸಾಯವನ್ನಾಧರಿಸಿ ಮಳೆ ನೀರನ್ನು ಉಪಯೋಗಿಸಿ ಹೊಲಗಳಲ್ಲಿ ವಿವಿಧ ಬೆಳೆ ತೆಗೆಯುತ್ತಿದೆ. ದೇಶೀಯ ಉತ್ಪನ್ನದ ಮೂರನೇ ಒಂದು ಪಾಲು ಕೃಷಿಯಲ್ಲಿದೆ. ಗೊಬ್ಬರ ಬಳಕೆಯ ಪ್ರಮಾಣದಲ್ಲಿ ಭಾರತವು ಅಮೆರಿಕ, ರಷ್ಯಾ ಮತ್ತು ಚೀನಾ ಬಳಿಕ ನಾಲ್ಕನೇ ಸ್ಥಾನದಲ್ಲಿದೆ. ಹತ್ತಿಯ ಮಿಶ್ರತಳಿ ಕಂಡುಹಿಡಿದ ಮೊದಲನೇ ದೇಶ ಭಾರತವೇ. ನಾಡಿನ ಶೇಕಡ ೪೩ರ ಭೂಭಾಗದಲ್ಲಿ. ಹಿರಿಯ ವೃತ್ತಿಯಾಗಿ ಕೃಷಿ ಚಟುವಟಿಕೆಯಿದೆ.

ಕೃಷಿಗೆ ಪೂರಕವಾಗಿ ಪಶುಸಂಗೋಪನೆ ಮತ್ತು ಹಾಲು ಉತ್ಪನ್ನಗಳಿವೆ. ಭೂಮಿಹೀನ ಕಾರ್ಮಿಕರಿಗೂ ಚಿಕ್ಕಪುಟ್ಟ ರೈತರಿಗೂ ಆರ್ಥಿಕ ಸಬಲತೆ ನೀಡುವ ಹಾಗೂ ಲಾಭದಾಯಕ ಪಾರ್ಶ್ವ-ಉದ್ಯೋಗ ದೊರಕಿಸುವ ವಲಯವಿದು. ಶೀತೋಷ್ಣ ಹವಾಮಾನಗಳ ನಡುವೆ ಆಹಾರ ಧಾನ್ಯಗಳು, ತೋಟಗಾರಿಕೆ, ಹಣಕಾಸಿನ ಬೆಳೆಗಳು ಭಾರತದಲ್ಲೇ ಸಾಧ್ಯ.

ಶೇಕಡ ೭೦ರಷ್ಟು ಒಣಭೂಮಿಯಲ್ಲಿ ರೈತ ಹೋರಾಟದ ಜೀವನವನ್ನು ಸದಾ ನಡೆಸುತ್ತಿದ್ದಾನೆ. ದೇಶದ ಶೇಕಡ ೪೨ ಪಾಲು ಆಹಾರ ಧಾನ್ಯಗಳು ಈ ಭೂಮಿಗಳಿಂದಲೇ ಉತ್ಪಾದನೆಯಾಗಬೇಕು. ಅಂದರೆ ಕೃಷಿಯ ಭವಿಷ್ಯ ಇಂತಹ ಒಣಭೂಮಿಗಳನ್ನು ಅವಲಂಬಿಸಿರುತ್ತದೆ. ಸುಮಾರು ಶೇ. ೮೩ ಪಾಲು ಜೋಳ, ಶೇ. ೮೧ ಪಾಲು ದ್ವಿದಳ ಧಾನ್ಯಗಳು ಮತ್ತು ಶೇ. ೯೦ ಪಾಲು ಎಣ್ಣೆಬೀಜಗಳು ಈ ಒಣಭೂಮಿಗಳಲ್ಲಿ ಉತ್ಪಾದನೆ ಯಾಗಬೇಕು. ಒಂದು ವರ್ಷದ ಬರಗಾಲ ೨-೩ ವರ್ಷಗಳ ಕಾಲ ರೈತನನ್ನು ಬಡತನದ ಕೂಪದಲ್ಲಿ ತಳ್ಳಲು ಶಕ್ತವಾಗಿದೆ.

ಭಾರತದ ನಾನಾ ಬೇಸಾಯ ರಫ್ತುಗಳಿಂದ ೭೦೫ ಕೋಟಿ ರೂಪಾಯಿ ವರಮಾನವು ಒಂದೇ ವರ್ಷ ೧೯೯೪-೯೫ರಲ್ಲಿ ಲಭ್ಯವಾಗಿದೆ. ಅದನ್ನು ಮೀರಿಸುವ ಶಕ್ತಿ ನಮಗಿದೆ.

ಭಾರತದ ಪಾಲಿನ ಜಾಗತಿಕ ಬೇಸಾಯ ವಸ್ತುಗಳ ವ್ಯಾಪಾರವು ಶೇಕಡ ೧ರಷ್ಟಿಲ್ಲ. ಕೈಗಾರಿಕೆ ಉದ್ಯಮಗಳಿಗೆ ನೇರವಾದ ಭಾರತೀಯ ಕೃಷಿ ವಲಯವು ಅಗ್ಗದ ಕಚ್ಚಾವಸ್ತುಗಳನ್ನು ಆ ಕಾರ್ಖಾನೆಗಳಿಗೆ ಒದಗಿಸಿದೆ.

ಅಮೆರಿಕ ಮತ್ತು ಯುರೋಪು ಖಂಡದ ಕೃಷಿಕರಿಗೆ ಭಾರೀ ಮೊತ್ತದ ನೆರವು ಹಣ ನೀಡಿ ಆಯಾ ಸರಕಾರಗಳು ಅವರ ವ್ಯವಸಾಯ-ವ್ಯಾಪಾರ ಕಾಪಾಡಿಕೊಂಡಿರುವ ಪರಿಣಾಮವಾಗಿ, ಜಾಗತಿಕ ಮಾರುಕಟ್ಟೆಗಳಲ್ಲಿ ಭಾರತದ ಬೆಳೆಗಳಿಗೆ ಪ್ರಾಧಾನ್ಯ ಸಿಕ್ಕಿಲ್ಲ.

ವಿಶ್ವ ವ್ಯಾಪಾರ ಕೇಂದ್ರದಲ್ಲೂ (WHO) ಕೃಷಿ ವಲಯವು ಇತರ ಆರ್ಥಿಕ ವಲಯ ಗಳೊಂದಿಗೆ ಸೇರುವಂತಿಲ್ಲ (ಉದ್ಯಮ, ಸೇವೆ ಇತ್ಯಾದಿ). ಇತ್ತೀಚಿನ ಜಿನೇವಾ ಸಭೆಯಲ್ಲಿ ವಾದಿಸಿದ ಭಾರತೀಯ ಪ್ರತಿನಿಧಿ ಸೂಚಿಸುವಂತೆ, ಬೆಳೆಯುವ ದೇಶಗಳ ಬೇಸಾಯವೆಂದರೆ ಮಾರುಕಟ್ಟೆಯಲ್ಲಿ ನಿರ್ಧರಿಸುವ ವಸ್ತುವಲ್ಲ. ಅದು ಗಂಭೀರವಾದ ವಿಷಯ. ವಿಶೇಷ ಸಂರಕ್ಷಣಾಕ್ರಮಗಳಿದ್ದರೇನೇ ಕೃಷಿ ಅಭಿವೃದ್ದಿ ಸಾಧ್ಯ.

ಕೆಲವು ಆಹಾರ ಧಾನ್ಯಗಳ ಆಯಾತ ಪ್ರಮಾಣ ನಿರ್ಬಂಧಗಳನ್ನು ಕಿತ್ತು ಹಾಕಲಾಗಿದ್ದು, ಅದು ದೇಶದ ರೈತರಿಗೆ ಮಾರಕವಾಗಿದೆಯೆ? ವಿದೇಶೀ ಆಹಾರ ಧಾನ್ಯಗಳು ಭಾರತದೊಳಗೆ ನುಗ್ಗಿ ಮಾರುಕಟ್ಟೆ ಆಕ್ರಮಿಸಿದಂತೆ, ಸರಕಾರವು ಆಮದು ಸೀಮಾ ಶುಲ್ಕವನ್ನು ಏರಿಸಿದೆ. ಅಕ್ಕಿ, ಗೋಧಿ, ಜೋಳ, ಮೆಕ್ಕೆಜೋಳ ಮುಂತಾದ ಆಹಾರ ಧಾನ್ಯಗಳು, ಕೋಳಿಮಾಂಸ-ಕಾಲುಗಳು, ಹಾಲಿನಪುಡಿ, ಹಣ್ಣುಗಳು, ಅಡಿಕೆ, ತಾಳೆಯೆಣ್ಣೆ, ಖಾದ್ಯತೈಲಗಳು, ಸಕ್ಕರೆ ಮುಂತಾದ ಸರಕುಗಳ ಆಮದು ಸುಂಕವನ್ನು ಏರಿಸಲಾಗಿದೆ.

ಯುರೋಪಿನಲ್ಲಿ ಹಾಲು ತಯಾರಿಕೆಗೆ ಸರಕಾರೀ ಸಹಾಯಧನ ಶೇಕಡ ೫೫ರಷ್ಟಿದೆ. ಅಮೆರಿಕದಲ್ಲಿ ಶೇಕಡ ೫೨ ಇದೆ. ಇಷ್ಟೊಂದು ಅಗ್ಗದ ಪರದೇಶಿ ಹಾಲಿನೊಂದಿಗೆ ಭಾರತದ ಹಾಲುಮಾರುವ ರೈತವರ್ಗ ಸ್ಪರ್ಧಿಸಲು ಭಾರತ ಸರಕಾರ ನೆರವಾಗಿಲ್ಲ.

ವಿಶ್ವವ್ಯಾಪಾರ ಕೇಂದ್ರದ (WTO) ವಿಧಿನಿಯಮಗಳನ್ನು ಅನುಸರಿಸಿದ ಕೇಂದ್ರ ಸರಕಾರವು ಭಾರತದ ರೈತರ ಏಳಿಗೆ ಬಯಸಿಲ್ಲವೆಂದು ಕಂಡುಬಂದಿದೆ. ಕೆಲವು ರೈತರು ಹಲವು ರಾಜ್ಯಗಳಲ್ಲಿ ಜುಗುಪ್ಸೆ-ನಿರಾಸೆಗಳಿಂದ ಒದ್ದಾಡಿ ಪ್ರಾಣತ್ಯಾಗ ಮಾಡಿದ್ದಾರೆ.

ಜಗತ್ತಿನ ಎರಡನೇ ಅತಿದೊಡ್ಡ ಕೃಷಿ-ಆರ್ಥಿಕ ವ್ಯವಸ್ಥೆ ಆತ್ಮವಿಶ್ವಾಸ ಕಳೆದುಕೊಂಡಿದೆ. ಭಾರತದ ಪರದೇಶಗಳ ಆಧಾರ-ಅವಲಂಬನೆ ಸಾಧಿಸುವಂತಾಗಿದೆ. ಅಮೆರಿಕದ ಕೃಷಿವಸ್ತುಗಳಿಗೆ ಭಾರತದ ವಿಸ್ತಾರ ಮಾರುಕಟ್ಟೆ ಆಕ್ರಮಿಸಲು ಕೃತಕ ಉಪಾಯಗಳಿಂದ ಸಾಧ್ಯವಾಗಿರುವುದನ್ನು ಅಮೆರಿಕದ ಕೃಷಿ ಸಚಿವ ಡಾನ್, ಗ್ಲಿಕ್ಮನ್ ಹಿರಿಹಿಗ್ಗಿ ಒಪ್ಪಿದ್ದಾರೆ.

ಸುಮಾರು ೫ ಸಾವಿರ ಟನ್ ಕಾಫಿಯನ್ನು ವಿಯಟ್ನಾಂನಿಂದ ಆಮದು ಮಾಡಿದ ಅನಧಿಕೃತ ವರದಿಯಿದೆ.

ಕೃಷಿ ಬೆಳೆಗಳಿಗೆ ಸಮಗ್ರ ಮತ್ತು ವ್ಯಾಪಕವಾದ ವಿಮೆಯನ್ನು ಜಾರಿಗೊಳಿಸುವುದು ಅನಿವಾರ‍್ಯವಾಗಿದೆ. ಅಲ್ಲದೆ ಕೃಷಿಕರ ಉತ್ಪನ್ನಗಳಿಗೆ ರಫ್ತು ಕ್ಷೇತ್ರವನ್ನು ನಿರ್ಮಿಸುವುದು ಮಾತ್ರವಲ್ಲದೆ ಕೈಗಾರಿಕಾ ನೀತಿಯನ್ನು ಪುನರ್‌ರಚಿಸಿ ಕೃಷಿ ಆಧಾರಿತ ಕೈಗಾರಿಕೆಗಳಿಗೆ ಪ್ರೋನೀಡಲೇಬೇಕಾಗಿದೆ. ಎಣ್ಣೆಕಾಳುಗಳ ಆಮದನ್ನು ಹುಚ್ಚಾಪಟ್ಟೆ ಮಾಡುವುದನ್ನು ತಡೆಯಲು ಆಮದು ಶುಲ್ಕವನ್ನು ಶೇ. ೩೦೦ರಷ್ಟು ಏರಿಸಬೇಕು.

ಭಾರತದ ರೈತರನ್ನು ವಿಶ್ವಮಾರುಕಟ್ಟೆ ವ್ಯವಸ್ಥೆಗೆ ಸಜ್ಜುಗೊಳಿಸುವ ಕೆಲಸದಲ್ಲಿ ರಾಜ್ಯ ಸರ್ಕಾರಗಳು ವಿಫಲವಾಗಿದೆ. ಅಲ್ಲದೆ ಅಂತಾರಾಷ್ಟ್ರೀಯ ಮಾರುಕಟ್ಟೆಯ ವೇದಿಕೆಯಲ್ಲಿ ಭಾರತದ ಕೃಷಿಕರ ಪರವಾದ ವಾದದಲ್ಲಿ ಭಾರತ ಸೋಲನ್ನೊಪ್ಪಿದೆ.

ಅಮೆರಿಕದ ಆಹಾರ ತಯಾರಿಕೆಯ ಮೇಲೆ ತಳಿವಿಜ್ಞಾನ (ಬಯೋಟೆಕ್ನಾಲಜಿ) ಹೊಸ ಪರಿಣಾಮ ಬೀರಿದೆ. ಅದು ೨೦೧೦ರಲ್ಲಿ ಜಗತ್ತಿನ ಅತಿದೊಡ್ಡ ಆಹಾರ ತಯಾರಿಕ ದೇಶವಾಗಿ ಮೂಡಿಬರಲಿದೆ. ಆಹಾರಧಾನ್ಯಗಳ ತಳಿಗಳಲ್ಲಿ ಬದಲಾವಣೆ ಮಾಡಿ ಗೋಧಿ, ಅಕ್ಕಿ, ಸೋಯಾಬೀನ್ಸ್ ಮುಂತಾದ ಬೆಳೆಗಳನ್ನು ದುಪ್ಪಟ್ಟು ಮಾಡುವ ವೈಜ್ಞಾನಿಕ ಸಂಶೋಧನೆ ಅಲ್ಲಿ ನಡೆದಿದೆ, ರೈತರೂ ಕಾದಿದ್ದಾರೆ. ಇತರ ದೇಶಗಳಲ್ಲಿ (ಮುಖ್ಯವಾಗಿ ಭಾರತದಲ್ಲಿ) ಕೃಷಿ-ಗೊಬ್ಬರಗಳ ಸಹಾಯಧನ ಕಿತ್ತುಹಾಕುವಂತೆ ಸಲಹೆ ಮಾಡುವ ಅಮೆರಿಕಾ, ತನ್ನ ರೈತರಿಗಾಗಿ ೧೫೦ ಕೋಟಿ ಡಾಲರ್ ಸಬ್ಸಿಡಿ ಪೂರೈಸುತ್ತಿದೆ.

ಭಾರತದಲ್ಲಿ ಖಾಸಗಿ ಉದ್ಯಮಿಗಳು ರೈತರ ಹಳೆಯ ಕೃಷಿ ಪದ್ಧತಿಗಳನ್ನು ಕೆಡಿಸಿದ್ದಾರೆ. ರಾಸಾಯನಿಕ ಗೊಬ್ಬರದಿಂದ ಹೊಲಗಳಿಗೆ ಹಾನಿಯಾಗಿದೆ. ಅವು ಜೈವಿಕಗೊಬ್ಬರ ಬಯಸಿವೆ. ಬಹುರಂಗೀ ಕ್ರಾಂತಿಯ ಬೆಳೆಗಾರಿಕೆಯಿಂದ ದೇಶದ ನಾಶ ಸಮೀಪಿಸಿದೆ.

ಭಾರತದ ರೈತರ ಸಹಾಯಧನ ಕಿತ್ತುಕೊಂಡರೆ, ಅವರ ಆಧಾರಸ್ಥಂಭ ಉರುಳಿದಂತೆ. ಇತರ ವಲಯಗಳಲ್ಲಿ ಸರಕಾರಗಳು ಅವರನ್ನು ಕಾಪಾಡಿಲ್ಲ. ಶೇಕಡ ೬೫ರಷ್ಟು ನೀರಾವರಿ ಭೂಮಿ ಕೇವಲ ಶೇಕಡ ೧೦ ಶ್ರೀಮಂತ ರೈತರ ಕೈಯಲ್ಲಿದೆ. ಉಳಿದವರ ಗತಿಯೇನು? ಭಾರತದ ಗೊಬ್ಬರ ನಿಗಮವು ಸ್ವದೇಶೀ ರೈತರಿಗೆ ಮಾರುವ ಗೊಬ್ಬರ ೮,೦೦೦ ರೂಪಾಯಿ ಪ್ರತಿ ಟನ್ ಆದರೆ, ವಿದೇಶಗಳಿಗೆ ಅದನ್ನೇ ಅರೆವಾಸಿ ಬೆಲೆಗೆ ರವಾನಿಸಿದೆ. ವಿಶ್ವವ್ಯಾಪಾರ ಕೇಂದ್ರದ ಸಹವಾಸ ಐದು ವರ್ಷ ಗತಿಸಿದ ಮೇಲೆ, ಅದರಿಂದ ಭಾರತದ ಕೃಷಿಕರಿಗಾದ ಲಾಭ ಬರೇ ಸೊನ್ನೆ. ಜಾಗತೀಕರಣದಿಂದ ಯಾರು ಪ್ರಯೋಜನ ಹೊಂದಿರಬಹುದು?