ಜಾಗತೀಕರಣದ ಕೆಲವು ಆಯಾಮಗಳ ಮೇಲೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸುವುದು ಇದೀಗ ರಾಜಕೀಯ ನಾಯಕರ, ಸರ್ಕಾರದ ಮುಖ್ಯಸ್ಥರ ಒಂದು ಸಂಪ್ರದಾಯವಾಗಿಬಿಟ್ಟಿದೆ. ಭಾರತದ ಸಾಂಸ್ಕೃತಿಕ, ಆರ್ಥಿಕ ಇತಿಹಾಸವನ್ನು ಅವಲೋಕಿಸಿದರೆ ಜಾಗತೀಕರಣ ನಮ್ಮ ದೇಶಕ್ಕೆ ಹೊಸತಲ್ಲ. ಜಾಗತೀಕರಣ ಎಸೆದ ಸವಾಲನ್ನು ಸ್ವೀಕರಿಸಲು ಸಕಾರಾತ್ಮಕವಾಗಿ ಸ್ಪಂದಿಸುವಲ್ಲಿ ನಾವು ಹಿಂಜರಿಯಬಾರದು.

ಜಾಗತೀಕರಣದ ಪರಿಣಾಮವೆಂದರೆ ಹಿರಿಯ ಮ್ಯಾನೇಜರುಗಳು, ಅಕೌಂಟೆಂಟ್‌ಗಳು, ವಕೀಲರು, ಸಾರ್ವಜನಿಕ ಸಂಪರ್ಕಾಧಿಕಾರಿಗಳು ಮೊದಲಾದವರ ಸಂಬಳದಲ್ಲಿ ಭಾರಿ ಹೆಚ್ಚಳ. ತಂತ್ರಜ್ಞಾನ ಬಲ್ಲವರಿಗೆ ವಿಪುಲ ಉದ್ಯೋಗಾವಕಾಶಗಳಿದ್ದು ಅವರು ವಿದೇಶಗಳಿಗೂ ಹೋಗಿ ಹಣ ಸಂಪಾದಿಸಬಹುದಾಗಿದೆ. ಇಂಗ್ಲಿಷ್ ಮಾತನಾಡುವ ಮೇಲುವರ್ಗದ ಜನರಿಗೆ ಇದರಿಂದ ಸುಗ್ಗಿಯಾಗಿದೆ. ಈ ಅಪಾರ ಆದಾಯದಿಂದ ಕೊಳ್ಳುಬಾಕ ಸಂಸ್ಕೃತಿಯನ್ನು ತಡೆಯುವುದೇ ಕಠಿಣವಾಗಿದೆ. ಅತ್ಯಾಧುನಿಕ ಗ್ರಾಹಕ ವಸ್ತುಗಳು ಆಕರ್ಷಣೆಯ ವಸ್ತುಗಳಾಗಿವೆ. ನವ ಹಾಗೂ ಸಿರಿವಂತ  ಭಾರತೀಯ ಗ್ರಾಹಕರು ಭಾರತದ ಪ್ರಗತಿಯನ್ನು ಅತ್ಯಾಧುನಿಕ ಕಾರು ಹಾಗೂ ಗ್ರಾಹಕ ವಸ್ತುಗಳೊಂದಿಗೆ ಸಮೀಕರಿಸುತ್ತಾರೆ. ಕೈತುಂಬ ಹಣ ತುಂಬಿರುವ ಇಂತಹ ಜನರು ಸ್ಥಳೀಯವಾಗಿ ಲಭ್ಯವಿರುವ ಯುರೋಪಿನ ಸೌಂದರ್ಯ ಸಾಧನಗಳು, ವಸ್ತುಗಳು, ವಿದೇಶಿ ಪಾನೀಯ ಇತ್ಯಾದಿಗಳನ್ನು ಕೊಳ್ಳುವಂತಾಗಿದೆ.

ಉಳಿದ ವರ್ಗಕ್ಕೆ ಇದರಿಂದ ಆಗಬಹುದಾದ ಲಾಭವೆಂದರೆ ಈ ಐಭೋಗದ ಯಾವುದೋ ತುಣುಕು ಅವರಿಗೆ ದೊರಕುವುದು. ಕೆಲವರಿಗೆ ಇದರಿಂದ ಲಾಭವೇ ಆಗದಿರಬಹುದು. ಇನ್ನು ಕೆಲವರಿಗೆ ಇದರಿಂದ ವ್ಯತಿರಿಕ್ತ ಪರಿಣಾಮಗಳಾಗಬಹುದು. ಜಾಗತೀಕರಣವು ತನ್ನೊಳಗೇ ಪರಿಣಾಮಗಳಾಗಬಹುದು. ಜಾಗತೀಕರಣ ತನ್ನೊಳಗೇ ನೇತ್ಯಾತ್ಮಕ ಅಂಶಗಳನ್ನು ಮುಚ್ಚಿಟ್ಟುಕೊಂಡಿದ್ದು ಅದರಿಂದ ಲಾಭ ಪಡೆದವರ ಬದುಕಿನ ಗುಣಮಟ್ಟದ ಮೇಲೂ ಅದು ಪರಿಣಾಮ ಬೀರಬಹುದಾಗಿದೆ.

ಈ ಅನಿರ್ಬಂಧಿತ ಜಾಗತೀಕರಣದ ಅತಿ ಅಪಾಯಕರ ಅಂಶವೆಂದರೆ ಅದು ಬಡತನವನ್ನು ಇನ್ನಷ್ಟು ಹೆಚ್ಚಿಸುವುದು, ಅಸಂಬದ್ಧ ಬೆಳವಣಿಗೆಗೆ ಹಾಗೂ ಮೂಲಭೂತ ಸೌಕರ‍್ಯದಲ್ಲಿ ಪ್ರಖರ ಏರು-ಪೇರು. ಈಗಾಗಲೇ ತಿಳಿದಿರುವಂತೆ ಭಾರತದ ಆರ್ಥಿಕತೆ ಆಮದು ನೀತಿಯ ಮೇಲೆ ಅವಲಂಬಿತವಾಗಿದ್ದು ಅದರಿಂದ ನಮ್ಮ ರೂಪಾಯಿಯ ಮೌಲ್ಯ ಒತ್ತಡಕ್ಕೆ ಸಿಲುಕುತ್ತಿದೆ.

ಇದರಿಂದ ಹಣದುಬ್ಬರ ಬೆಳೆದು ನಮ್ಮ ಉತ್ಪಾದನಾ ಸಾಮರ್ಥ್ಯದ ಮೇಲೆ ತಂತ್ರಜ್ಞಾನ ಕ್ಷೇತ್ರದಲ್ಲಿ ಹೊಸ ಬೆಳವಣಿಗೆ ಬೆಳೆಸುವಲ್ಲಿ ಅಡ್ಡಗೋಡೆಯಂತಾಗಿದೆ. ಹಾಗೆ ನೋಡಿದರೆ ಈ ಜಾಗತೀಕರಣವು ಮಹತ್ವದ ನಮ್ಮ ಆಧುನಿಕ ಉದ್ಯಮಗಳಿಗೆ ಮಾರಕವಾಗಿ ಈಗಾಗಲೇ ಬೇರೆ ರಾಷ್ಟ್ರಗಳಲ್ಲಿ ಘಟಿಸುವ ವೈಜ್ಞಾನಿಕ ಮತ್ತು ತಾಂತ್ರಿಕ ಅಭಿವೃದ್ದಿಯನ್ನು ನಮ್ಮ ದೇಶದ ಬೆನ್ನು ಹತ್ತುವಂತೆ ಮಾಡಬಹುದು.

ಒಂದರ್ಥದಲ್ಲಿ ಆಟೋಮೊಬೈಲ್ ಕ್ಷೇತ್ರದಲ್ಲಿ ಹಾಗೂ ಗ್ರಾಹಕ ಉತ್ಪನ್ನಗಳಲ್ಲಿ ವಿಪುಲವಾದ ಬಂಡವಾಳ ಹೂಡಿಕೆಯಾಗಿದ್ದರೂ ಈ ಕ್ಷೇತ್ರದ ಮೂಲ ಉಪಕರಣ, ಜೋಡಣಾ ವಸ್ತುಗಳು ಸಂಪೂರ್ಣವಾಗಿ ಆಮದು ಮಾಡಿಕೊಂಡದ್ದಾಗಿವೆ. ವಿನ್ಯಾಸ ಮತ್ತು ಅಭಿವೃದ್ದಿ ನಮ್ಮ ದೇಶದಲ್ಲಿ ನಡೆಯುವುದೇ ಕಡಿಮೆ. ಆ ಅರ್ಥದಲ್ಲಿ ಜಾಗತೀಕರಣವು ನಮ್ಮ ದೇಶದ ವಿನ್ಯಾಸ ಉತ್ಪಾದನೆಯನ್ನಾಗಲೀ, ತಾಂತ್ರಿಕ ಬೆಳವಣಿಗೆಯನ್ನಾಗಲೀ ಬೆಂಬಲಿಸಿ  ಸರಿದೂಗಿಸುವ ಯಾವುದೇ ಸಹಾಯವನ್ನೂ ಮಾಡಿಲ್ಲ.

ಜಾಗತೀಕರಣವು ಭಾರತ ಹಣಕಾಸು ವ್ಯವಸ್ಥೆಯನ್ನು ನಾಶ ಮಾಡುವುದಿಲ್ಲ; ಬದಲಿಗೆ, ಅದನ್ನು ಬಲಪಡಿಸುತ್ತದೆ. ಆ ಮೂಲಕ ಭಾರತದಲ್ಲಿ ಹೊಸ ಕೈಗಾರಿಕೋದ್ಯಮ ಬೆಳೆಯುತ್ತದೆ ಎಂಬುದು ಜಾಗತೀಕರಣದ ಸಮರ್ಥಕರ ಅಂಬೋಣ. ಆದರೆ ಕಳೆದ ಕೆಲವು ವರ್ಷಗಳಲ್ಲಿ ವಿದೇಶಿ ನೇರ ಬಂಡವಾಳ ಹೂಡಿಕೆಯ ಅಧ್ಯಯನ ಮಾಡಿರುವ ಅಂಕಿಅಂಶಗಳು ಹೇಳುವುದೇನೆಂದರೆ, ಇಂತಹ ಹೂಡಿಕೆ ಮುಖ್ಯಪಾಲು ಹೊಸ ಉತ್ಪಾದನೆಯ ಸಾಮರ್ಥ್ಯ ಗಳತ್ತ ಹೋಗಿಲ್ಲ ಎಂದು. ಬಹುಪಾಲು ಹೂಡಿಕೆ ಭಾರತೀಯ ಉದ್ಯಮವನ್ನು ತಮ್ಮ ತೆಕ್ಕೆಗೆ ಹಾಕಿಕೊಳ್ಳುವಲ್ಲಿ, ಷೇರು ಮಾರುಕಟ್ಟೆಯಲ್ಲಿ ಅಷ್ಟೇ ಕಾಣಸಿಗುತ್ತದೆ. ಅಷ್ಟಕ್ಕೂ ಇಂಥ ಆವಿಯಾಗಿ ಹೋಗಬಲ್ಲ, ನೇರ ವಿದೇಶಿ ಬಂಡವಾಳ ಹೂಡಿಕೆಯ ಲಾಭ ಪಡೆದಿ ರುವುದು ಭಾರತದ ಅತಿ ಪ್ರತಿಷ್ಠಿತ ತಂತ್ರಜ್ಞಾನ ಸಂಸ್ಥೆಗಳು ಹಾಗೂ ಆಯ್ದ ಬಹುರಾಷ್ಟ್ರೀಯ ಸಂಸ್ಥೆಗಳು.

ಜಾಗತೀಕರಣದ ಪರವಾಗಿ ಮತ್ತೆ ಮತ್ತೆ ಕೇಳಿಬರುವ ಮಾತೆಂದರೆ – ಬಹುರಾಷ್ಟ್ರೀಯ ಕಂಪನಿಗಳು ಅತ್ಯಂತ ‘ಸಮರ್ಥ’ ಎನ್ನುವುದು. ಈ ಸಾಮರ್ಥ್ಯವು ಲಾಭವನ್ನು ಹೆಚ್ಚಿಸುತ್ತದೆ ಎಂದು ಊಹಿಸೋಣ. ಒಂದು ಬಹುರಾಷ್ಟ್ರೀಯ ಸಂಸ್ಥೆ ಒಂದು ಸಾವಿರ ಕೋಟಿ ರೂ. ಬಂಡವಾಳ ಹೂಡಿದರೆ ಇನ್ನೂರು ಕೋಟಿಯಷ್ಟು ಲಾಭಗಳಿಸುತ್ತದೆ ಅಂದುಕೊಳ್ಳುವ. ಇನ್ನೊಂದೆಡೆ ದೇಸೀಯ ಸಂಸ್ಥೆಯೊಂದು ಸಾವಿರ ಕೋಟಿ ಬಂಡವಾಳ ಹೂಡಿ ನೂರು ಕೋಟಿ ಲಾಭಗಳಿಸುತ್ತದೆ ಎಂದು ಇಟ್ಟುಕೊಳ್ಳೋಣ.

ಇದರಿಂದ ಬಹುರಾಷ್ಟ್ರೀಯ ಸಂಸ್ಥೆ ಭಾರತೀಯ ಸಂಸ್ಥೆಗಿಂತ ‘ದುಪ್ಪಟ್ಟು’ ‘ಸಮರ್ಥ’ವಾಗಿದೆ ಎಂದು ಕಾಣಬರುತ್ತದೆ. ಆದರೆ ತನ್ನ ಲಾಭಾಂಶದಲ್ಲಿ ಅರ್ಧ ಅಥವಾ ಇದಕ್ಕಿಂತ ಹೆಚ್ಚಿನ ಪಾಲನ್ನು ವಿದೇಶಿ ಸಂಸ್ಥೆ ತನ್ನ ವಿದೇಶಿ ಮಾತೃಸಂಸ್ಥೆಗೆ ಅಥವಾ ಪಾಲುದಾರರಿಗೆ ನೀಡಿದರೆ ಇದರಿಂದ ಭಾರತಕ್ಕೆ ದೊರೆಯುವ ಲಾಭ ಮಾತ್ರ ಸೊನ್ನೆ! ಲಾಭಾಂಶದಲ್ಲಿ ನೂರು ಕೋಟಿ ಹೆಚ್ಚಾಗಿರುವುದು ವಿಶೇಷವಾಗಿ ನೀಡಿರುವ ತೆರಿಗೆ ವಿನಾಯಿತಿ ಹಾಗೂ ಇತರ ವಿಶೇಷ ಸವಲತ್ತುಗಳಿಂದಾಗಿದ್ದರೆ ಅಂಥ ಸಂಸ್ಥೆಗಳ ‘ಸಾಮರ್ಥ್ಯ’ ಕೇವಲ ಕಥೆಯಾಗಿರಬೇಕು.

ಆಯಕಟ್ಟಿನ ಮೂಲಭೂತ ಸೌಕರ‍್ಯಗಳ ಅಭಿವೃದ್ದಿಗೆ ಜಾಗತೀಕರಣದಿಂದಾಗಿರುವ ಲಾಭ ಅತ್ಯಲ್ಪ. ಇದು ಉತ್ಪಾದನೆ ಹಾಗೂ ತೈಲ ಕ್ಷೇತ್ರದಲ್ಲಿ ಎದ್ದು ಕಾಣುವಂತಿದೆ. ತೈಲ ನಿಕ್ಷೇಪ ವಲಯದಲ್ಲಿ ಸರ್ಕಾರದ ಒಟ್ಟಾಗಿ ದೇಶಿಯ ಉತ್ಪನ್ನ ಹೂಡಿಕೆಯ ಪ್ರಮಾಣ ಗಮನಾರ್ಹವಾಗಿ ಕಡಿಮೆಯಾಗಿದೆ. ತೈಲ ನಿಕ್ಷೇಪ ವಲಯದಲ್ಲಿ ಬಹುರಾಷ್ಟ್ರೀಯ ಸಂಸ್ಥೆಗಳಿಗೆ ನೀಡಿರುವ ಪರವಾನಗಿ ಹಾಗೂ ಕಚ್ಚಾತೈಲ ಉತ್ಪಾದನೆ ವಲಯದಲ್ಲಿ ಒದಗಿಸಿರುವ ಅವಕಾಶಗಳ ನಂತರವೂ ಆ ಕ್ಷೇತ್ರದ ಒಟ್ಟಾರೆ ಸಾಧನೆ ಕಳಪೆಯಾಗಿದೆ. ಜಾಗತೀಕರಣ ದಿಂದಾಗಿ ಆಯಕಟ್ಟಿನ ಕೆಲವು ವಲಯಗಳಾದ ಗ್ರಾಹಕ ಸಾಮಗ್ರಿ, ಆಟೋಮೊಬೈಲ್ ಹಾಗೂ ತಂತ್ರಜ್ಞಾನ ಕ್ಷೇತ್ರದಲ್ಲಿ ಶೇಕಡ ೯೦ರಷ್ಟು ವಿದೇಶಿ ಹೂಡಿಕೆ ಬಂದಿದೆ.

ತಂತ್ರಜ್ಞಾನ ಹಾಗೂ ಆಧುನೀಕರಣದಿಂದ ದೂರವುಳಿಯುವಂತೆ ಭಾರತವನ್ನು ಯಾರೂ ಕೇಳಿಕೊಂಡಿಲ್ಲವಾದರೂ, ಎಲ್ಲಿಯವರೆಗೆ ವಿಶ್ವದ ದೊಡ್ಡ ಶಕ್ತಿಯುತ ದೇಶವಾದ ಭಾರತವು ಕಠಿಣ ನಿಲುವು ತಳೆದು ಜಾಗತೀಕರಣ ನಿಲುವನ್ನು ತೆಗೆದುಕೊಳ್ಳುವುದಿಲ್ಲವೋ ಅಲ್ಲಿಯವರೆಗೆ ಜಾಗತೀಕರಣದ ನಿಜವಾದ ಲಾಭ ದೇಶದ ಜನಕ್ಕೆ ಆಗುವುದು ದುರ್ಲಭವೇ.

ವಿಶ್ವಬ್ಯಾಂಕ್ ೨೦೦೦ ಇಸ್ವಿಯಲ್ಲಿ ಪ್ರಕಟಿಸಿದ ತನ್ನ ವರದಿ ‘ಭಾರತ – ತಗ್ಗಿಸುತ್ತಿರುವ ಬಡತನ’. ಹೆಚ್ಚಿಸುತ್ತಿರುವ  ಅಭಿವೃದ್ದಿಯಲ್ಲಿ ಆಡಳಿತದ ಕುರಿತು ಐದು ಸ್ಥೂಲ ಸೂಚಕಗಳನ್ನು ಗುರುತಿಸಿದೆ. ಅ. ಸರ್ಕಾರದ ಸ್ಥಿರತೆ ಹಾಗೂ ಸಾಮರ್ಥ್ಯ, ಆ. ಕಾನೂನು ಮತ್ತು ಉದ್ಯಮಶೀಲ ವಾತಾವರಣ, ಇ. ಅಧಿಕಾರಶಾಹಿಯ ಗುಣಾತ್ಮಕತೆಯ ಮೇಲೆ ನಿರ್ಧಾರವಾಗುವ ಸಾರ್ವಜನಿಕ ಹಣಕಾಸು ಈ. ಪರಿಣಾಮ/ಫಲಿತಾಂಶಗಳು. ಜತೆಗೆ ಬಡತನ, ಆಕ್ಷರತೆ ಮರಣ ಪ್ರಮಾಣಗಳಂಥ ಸಾಮಾಜಿಕ ಅಂಶಗಳನ್ನು ಗುರುತಿಸಲಾಗಿದೆ.

ಚೀನಾ ದೇಶವು, ಭಾರತದಂತೆ ಅಲ್ಲದೆ, ವಿಶ್ವವಾಣಿಜ್ಯ ಸಂಸ್ಥೆಯನ್ನು ತನ್ನ ಕೈಗಾರಿಕೆಯ ಪುನಾರಚನೆಯ ಉಪಕರಣವಾಗಿ ಕಂಡುಕೊಂಡಿದೆ. ಹಾಗಾಗಿ, ಅದನ್ನೇ ಸಂಯೋಜಕ ಅಂಶವನ್ನಾಗಿ ಮಾಡಿಕೊಂಡು ತನ್ನ ಉತ್ಪಾದನೆಯ ಮೇಲೆ ನವೀನ ದೃಷ್ಟಿಯನ್ನು ಇಟ್ಟು ಕೊಂಡಿದೆ. ಭಾರತದಲ್ಲಿ ಕಳೆದುಕೊಂಡವರ ಸಂಖ್ಯೆಯೇ ಹೆಚ್ಚು. ವಾಸ್ತವವನ್ನು ಅರಿತುಕೊಳ್ಳುವಲ್ಲಿ ಇನ್ನೂ ಉದಾಸೀನ ಮಾಡಿದರೆ ಭಾರತದ ಪ್ರಜಾತಂತ್ರ ವ್ಯವಸ್ಥೆಗೆ, ಶಾಂತಿಗೆ ಧಕ್ಕೆಯುಂಟಾಗುತ್ತದೆ. ಇತ್ತೀಚಿನ ದಿವಸಗಳಲ್ಲಿ ಭಾರತ ವಿಶ್ವವ್ಯಾಪಾರೀ ಕ್ಷೇತ್ರದಲ್ಲಿ ತನ್ನ ನೆಲೆಯತ್ತ ಜಾಗತೀಕರಣದ ಧಾಳಿಯನ್ನು ಎದುರಿಸುತ್ತಿದೆ. ೧೧೦ ರಾಷ್ಟ್ರಗಳ ನಾಯಕತ್ವ ವನ್ನು ವಹಿಸಿ ಹಿಂದುಳಿದ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ಬಲಿಷ್ಠ ರಾಷ್ಟ್ರಗಳು ಪ್ರಭುತ್ವ ಸ್ಥಾಪಿಸದಂತೆ ತಡೆಯನ್ನೊಡ್ಡಿದ ಇದೊಂದು ಆಶಾದಾಯಕವಾದ ಮುನ್ಸೂಚನೆ.