ಭಾರತದ ಪ್ರಧಾನಿ ಡಾ. ಮನಮೋಹನ್ ಸಿಂಗ್ ಅವರ ಅಮೇರಿಕ ಭೇಟಿಯ ಪರಿಣಾಮವಾಗಿ ಭಾರತದ ಅಣುಶಕ್ತಿಯ ಇತಿಹಾಸದಲ್ಲಿ ಹೊಸ ಆಯಾಮ ಪ್ರಾರಂಭವಾಯಿತು. ಮೊನ್ನೆ ತಾನೇ ಅಮೇರಿಕದ ಅಧ್ಯಕ್ಷರಾದ ಬುಷ್‌ರವರ ಭೇಟಿ ಭಾರತದ, ಏಕೆ ಇಡೀ ವಿಶ್ವದ ಇತಿಹಾಸದಲ್ಲಿ ಹೊಸ ಅಧ್ಯಾಯವನ್ನು ತೆರೆಯಿತು. ಭಾರತದ ಮೇಲೆ ೩೧ ವರ್ಷ ಅಣುಶಕ್ತಿಯ ವಿಚಾರದಲ್ಲಿ ಹೇರಲಾದ ಬಹಿಷ್ಕಾರವನ್ನು ಕಿತ್ತು ಹಾಕಲಾಯಿತು.

ರಕ್ಷಣೆ ಮತ್ತು ಸಾಮಾನ್ಯ (Civil) ಉಪಯೋಗದ ಬಗ್ಗೆ ವಿಶ್ವದಲ್ಲೇ ಪ್ರಥಮಬಾರಿ ಅಣುಶಕ್ತಿಯ ಬಗ್ಗೆ ಸ್ಪಷ್ಟವಾದ ಬೇರ್ಪಡಿಸುವ ವಿಶ್ವನೀತಿಯನ್ನು ಸ್ವೀಕರಿಸಲಾಯಿತು. ವಿಶ್ವದ ಯುರೇನಿಯಂ ಭಾರತಕ್ಕೆ ದಕ್ಕಲಾರದೆ ಅಣುಶಕ್ತಿಯ ವಿದ್ಯುತ್ ರಕ್ಷಣೆ (Energy Security) ವಿದ್ಯುತ್ತಿನ ಉತ್ಪಾದನೆಗೆ ಹೊಸ ಚಾಲನೆ ದೊರಕಿತು. ಮೂರು ದಶಕಗಳಿಂದ ಪ್ರಥಮಬಾರಿಗೆ ಅಮೇರಿಕದ ತನ್ನ ಸ್ವೀಕೃತವಾದ ಅಣುಶಕ್ತಿ ನೀತಿಯಿಂದ ಭಾರತದಲ್ಲಿ ಪರಿವರ್ತನೆ ತಂದಿತು. ಬಹುಶಃ ಭಾರತದ ಆರ್ಥಿಕ ಪ್ರಗತಿಗೆ ಮತ್ತು ಕರ್ತೃತ್ವ ಶಕ್ತಿಗೆ ವಿಶೇಷವಾದ ಚಾಲನೆ ದೊರಕಿತು. ಬಹುಶಃ ಮರೀಚಿಕೆಯಾದ ಸದ್ದರ್ಶನ ಭಾರತದ ಪಾಲಿಗೆ ಅತೀ ಸನಿಹಕ್ಕೆ ತರುವ ಕ್ಷಿತಿಜ ಧೋರಣೆ ಇದಾಗಿದೆ. ಇಡೀ ಅಣುಶಕ್ತಿಯ ಕಾನೂನನ್ನೇ ತಿದ್ದುಪಡಿ ಮಾಡುವ ಧೈರ್ಯವನ್ನು ಬುಷ್ ವ್ಯಕ್ತಪಡಿಸಿದ್ದಾರೆ. ಭಾರತ ಅಣುಶಕ್ತಿಯನ್ನು ರಚನಾತ್ಮಕವಾಗಿ ಉಪಯೋಗಿಸುವ ಕ್ರಾಂತಿಕಾರಕ ಹೊಸ ಹೆದ್ದಾರಿಯಲ್ಲಿ ತನ್ನನ್ನು ತೊಡಗಿಸಿಕೊಂಡಿದೆ.

ಭಾರತವು ಹೆಚ್ಚಿನ ಶಕ್ತಿಮೂಲಗಳ ಹುಡುಕಾಟದಲ್ಲಿದ್ದಂತಹ ಸಂದರ್ಭದಲ್ಲಿ ಇದೊಂದು ಒಳ್ಳೆಯ ಆಗರವೆನಿಸಿದೆ; ಅಂತಾರಾಷ್ಟ್ರೀಯ ಅಣು-ಶಾಖೋತ್ಪನ್ನ ಪ್ರಾಯೋಗಿಕ ರಿಯಾಕ್ಟರ್ (ITER) ಒಂದು ಪರಿಹಾರವೆನಿಸಬಹುದು. ಹಲವಾರು ಮುಂದುವರಿದ ರಾಷ್ಟ್ರಗಳಲ್ಲಿ ಅಣುಶಕ್ತಿಯ ೭೦% ಶಕ್ತಿಯನ್ನು ಪೂರೈಸಿದರೆ, ಭಾರತದಲ್ಲಿ ಅದು ಕೇವಲ ೩% ಮಾತ್ರ ವಾಗಿದೆ.

ಭಾರತದ ೧೦ನೇ ಪಂಚವಾರ್ಷಿಕ ಯೋಜನೆಯ (೨೦೦೨-೦೭) ಅವಲೋಕನವು ಅಣುಶಕ್ತಿಯ ಉತ್ಪಾದನೆಯ ಹೆಚ್ಚಳದ ಬಗ್ಗೆ ನಿರಾಶಾದಾಯಕ ಚಿತ್ರವನ್ನು ನೀಡಿದೆ. ಈಗಿನ ಸಾಮರ್ಥ್ಯವು ಕೇವಲ ೩೩೧೦ ಮೆ. ವ್ಯಾಟ್ ಆಗಿದ್ದು ೨೦೦೦ನೇ ಇಸವಿಗೆ ಸಾಧಿಸಬೇಕಾಗಿದ್ದ ೧೦,೦೦೦ ಮೆ. ವ್ಯಾಟ್‌ಗಳಿಗಿಂತ ಬಹಳ ಕಡಿಮೆಯಾಯಿತು. ೨೦೨೦ನೇ ಇಸವಿಯ ಹೊತ್ತಿಗೆ ೨೦,೦೦೦ ಮೆ.ವ್ಯಾಟ್‌ಗಳಷ್ಟು ಉತ್ಪಾದನಾ ಗುರಿಯಿದೆ. ಇದನ್ನು ಸಾಧಿಸಬೇಕಾದರೆ, ಪೂರೈಕೆಯ ರಾಷ್ಟ್ರಗಳು ಶರತ್ತುಗಳನ್ನು ಸಡಿಲಿಸಬೇಕಿದೆ. ತಾರಾಪುರ ಅಣುಶಕ್ತಿ ಕೇಂದ್ರವು ವಾಣಿಜ್ಯ ಪೂರೈಕೆಗಾಗಿ ಉತ್ಪಾದನೆಯನ್ನು ಮಾಡುತ್ತಿದ್ದು ಪ್ರಾರಂಭಿಕ ಹಂತದಿಂದಲೂ ಅದು ಕೇವಲ ೫೮% ಸಾಮರ್ಥ್ಯದಲ್ಲಿ ಕಾರ್ಯನಿರ್ವಹಿಸುತ್ತಿದೆ. ಭಾರತ-ಅಮೇರಿಕ ಸಹಕಾರ ಒಪ್ಪಂದವು ೧೯೯೩ರವರೆಗೂ ಚಾಲ್ತಿಯಲ್ಲಿರಬೇಕಾಗಿದ್ದು, ವಾಷಿಂಗ್‌ಟನ್ ಅದನ್ನು ೧೯೭೯ರಲ್ಲೇ ಕೊನೆಗಾಣಿಸಿತು.

ಭಾರತದಲ್ಲಿ ಯುರೇನಿಯಂ ದೊರಕುವುದು ಕಡಿಮೆಯೆನಿಸಿದರೂ, ತೋರಿಯಂ ಗಣಿಯು ವಿಶ್ವದ ೧/೪ರಷ್ಟಿದೆ. ಅಮೇರಿಕಾ, ರಷ್ಯಾ ಹಾಗೂ ಫ್ರಾನ್ಸ್ ರಾಷ್ಟ್ರಗಳು ತಮ್ಮ ಲಘು ಜಲ ರಿಯಾಕ್ಟರ್ (LWR)ಗಳನ್ನು ಭಾರತವು NSG ಪ್ರಕಾರ ತನ್ನೆಲ್ಲ ರಿಯಾಕ್ಟರ್‌ಗಳನ್ನೂ IAEA ತಪಾಸಣಾ ಕಕ್ಷೆಯಲ್ಲಿರಿಸಿಲ್ಲವೆಂಬ ಕಾರಣಕ್ಕಾಗಿ ಭಾರತಕ್ಕೆ ಮಾರಲಾಗಿರಲಿಲ್ಲ. ಆದರೆ ರಷ್ಯಾ, ಫ್ರಾನ್ಸ್‌ಗಳೆರಡೂ ಭಾರತವು ಸದಾ ಶಿಸ್ತಿನಲ್ಲಿದ್ದು ಅಣುಸ್ಥಾವರಗಳ ಪರೀಕ್ಷೆಗೆ ಸ್ವಯಂ ಸಿದ್ಧವಾಗಿರುವ ಕಾರಣ, ಭಾರತಕ್ಕೆ ಯುರೇನಿಯಂ ಪೂರೈಕೆಗೆ ಮುಂದಾಗಿದ್ದವು.

ಭಾರತವು ತನ್ನ ಸ್ವ-ಸಾಮರ್ಥ್ಯದಿಂದ ಸಿದ್ಧಗೊಳಿಸಿದ, ಯುರೇನಿಯಂನ್ನು ಅನಿಲವಾಗಿ ಉಪಯೋಗಿಸುವ PHWRS ರಿಯಾಕ್ಟರಿನಿಂದ ಕೇವಲ ೧೦,೦೦೦ ಮೆ.ವ್ಯಾಟ್‌ಗಳ ಸಾಮರ್ಥ್ಯದವರೆಗೂ ಅಭಿವೃದ್ದಿಗೊಳಿಸಿಕೊಳ್ಳಬಹುದು.

ಡಾ. ಮನಮೋಹನ್ ಸಿಂಗ್‌ರವರಿಂದಾಗಿ ಇಂದು ಭಾರತವು ಆರ್ಥಿಕವಾಗಿ ‘ಸೂಪರ್ ಪವರ್’ ಆಗಿ ಹೊರಹೊಮ್ಮಲು ಸಿದ್ಧವಾಗಿದೆ. ಇದರಿಂದಾಗಿ ೩೦ ವರ್ಷಗಳ ಬಂಧನದಿಂದ ಬಿಡುಗಡೆ ದೊರೆತಂತಾಗಿದೆ. ಆದರೆ ಇದಷ್ಟರಿಂದಲೇ ಭಾರತವು ಸಂತಸಪಡುವಂತಿಲ್ಲ. ಸರ್ಕಾರವು ಅಣುಶಕ್ತಿ ರಾಷ್ಟ್ರಗಳ ಗುಂಪು ಹಾಗೂ ಅಮೇರಿಕ ರಾಷ್ಟ್ರಗಳ ಜೊತೆ ರಾಯಭಾರ ಸಂಬಂಧಗಳನ್ನು ವೃದ್ದಿಪಡಿಸಿಕೊಳ್ಳಬೇಕಾಗಿದೆ. ಇತ್ತೀಚಿನವರಿಗೂ ಅಣುವಿಕಿರಣ ಕೇಂದ್ರ ಗಳು, ರಿಯಾಕ್ಟರ್‌ಗಳಿಂದ ಆರ್ಥಿಕ ಅಭಿವೃದ್ದಿಯ ಕುರಿತು ಹೆಚ್ಚು ಅವಲಂಬಿತವಾಗದಿ ರುವುದನ್ನು ಬದಲಿಸಿ, ವಾಣಿಜ್ಯ ಲಾಭಗಳ ಕುರಿತೂ ಚಿಂತನೆ ನಡೆಸಿ, ಒಟ್ಟು ೪೦,೦೦೦ ಮೆ.ವ್ಯಾಟ್ ಸಾಮರ್ಥ್ಯವನ್ನು ಹೊಂದುವ ಪ್ರಯತ್ನ ಮಾಡಬೇಕಾಗಿದೆ. ಇದರಿಂದಾಗಿ UPA ಸರ್ಕಾರವು ಭಾರತವನ್ನು ಅಭಿವೃದ್ದಿಶೀಲ ರಾಷ್ಟ್ರದ ಗುಂಪಿನಿಂದ ಮುಂದುವರಿದ ರಾಷ್ಟ್ರವನ್ನಾಗಿಸುವಲ್ಲಿ ಮಹತ್ವದ ನಿರ್ಣಯ ತೆಗೆದುಕೊಂಡಂತಾಗಿದೆ.

ಇತ್ತೀಚೆಗೆ ಅಮೇರಿಕದ ಅಧ್ಯಕ್ಷರಾದ ಜಾರ್ಜ್ ಬುಷ್‌ರವರು ಭಾರತಕ್ಕೆ ಭೇಟಿಕೊಟ್ಟ ಸಂದರ್ಭದಲ್ಲಿ ಶಾಂತಿಗಾಗಿ ಅಣುಬಳಕೆಯ ಒಪ್ಪಂದ ಜರುಗಿತು. ಭಾರತದಂತಹ ಅಭಿವೃದ್ದಿ ಶೀಲ ರಾಷ್ಟ್ರಗಳು ಜಾಗತೀಕರಣದ ಸವಾಲನ್ನು ಸಮರ್ಥವಾಗಿ ಎದುರಿಸುವ ಸಂದರ್ಭದಲ್ಲಿ ಕೋಟೆಗಳನ್ನು ಕಟ್ಟಿಕೊಂಡು ಕುಳಿತುಕೊಳ್ಳುವಂತಿಲ್ಲ. ೨೦೨೦ರ ವೇಳೆಗೆ ಭಾರತ ವಿಶ್ವದಲ್ಲಿ ಸೂಪರ್‌ಪವರ್ ರಾಷ್ಟ್ರವೆಂದು ಮಾನ್ಯತೆ ಪಡೆದುಕೊಳ್ಳಲು ಈಗ ಸಿದ್ಧತೆ ನಡೆಸಿದೆ. ಅಂತಹ ಸಂದರ್ಭದಲ್ಲಿ ಅಣುಶಕ್ತಿಯನ್ನು ಅಭಿವೃದ್ದಿಗೆ ಬಳಸಿಕೊಳ್ಳಬೇಕಾಗಿದೆ. ಆ ದಿಸೆಯಲ್ಲಿ ಪ್ರಧಾನಿ ಡಾ. ಮನಮೋಹನ್ ಸಿಂಗ್‌ರವರು ದೂರದೃಷ್ಟಿಯ ತೀರ್ಮಾನವೊಂದನ್ನು ಕೈಗೊಂಡಿದ್ದಾರೆ. ಕೆಲವರು ಅವರನ್ನು ಒಪ್ಪದೇ ಹೋಗಬಹುದು. ಪ್ರತಿಭಟನೆ ಮಾಡಬಹುದು. ಆದರೆ, ಸತ್ಯವನ್ನು ಮುಚ್ಚುವಂತಿಲ್ಲ. ಭಾರತದ ಅಭಿವೃದ್ದಿ ಚರಿತ್ರೆಯಲ್ಲಿ ಡಾ. ಮನಮೋಹನ್ ಸಿಂಗ್ ಅವರ ಪ್ರಯತ್ನ ದೀರ್ಘಕಾಲ ಪ್ರಶಂಸೆಗೆ ಒಳಗಾಗುತ್ತದೆ. ಅಲ್ಲಿ ದೇಶದ ಸರ್ವಾಂಗೀಣ ಅಭಿವೃದ್ದಿ ಮುಖ್ಯವಾಗಿದೆ. ಜೊತೆಗೆ ವಿಜ್ಞಾನವನ್ನು ಕೇವಲ ನಾಶದ ಮುಖವೆಂದು ಭಾವಿಸದೆ, ಜನಕಲ್ಯಾಣದ ಮುಖವೆಂದು ಭಾವಿಸುವ ಸಕಾರಾತ್ಮಕ ಧೋರಣೆ ಕಾರಣವಾಗಿದೆ. ಇದಕ್ಕೆ ಭಾರತದ ಮೊದಲ ಪ್ರಧಾನಿ ಪಂಡಿತ್ ಜವಾಹರಲಾಲ್ ನೆಹರು ಅವರ ಮಾತುಗಳು ಪ್ರೇರಣೆ ನೀಡಿದ್ದರೆ ಆಶ್ಚರ್ಯವಿಲ್ಲ.

ಜವಾಹರಲಾಲ್ ನೆಹರೂ ಅವರು “ನಾವಿಂದು ಜೀವಿಸಿರುವುದು ವಿಜ್ಞಾನ ಮತ್ತು ತಂತ್ರಜ್ಞಾನವು ನೀಡಿರುವ ಅತ್ಯಮೂಲ್ಯ ಬೆಳವಣಿಗೆಯಿಂದಾಗಿ. ನೆಮ್ಮದಿಯಿಂದ ಬದುಕುವ ಶಕ್ತಿ ಹಾಗೂ ಅದರ ದುರ್ಬಳಕೆಯಿಂದ ಹಠಾತ್ ವಿನಾಶವೂ ಸಹ ಅದರಲ್ಲೇ ಅಡಗಿದೆ. ಶಾಂತಿಯನ್ನು ಪಡೆಯಲು ಶಾಂತಿ ಮತ್ತು ಸಹನೆಯ ವಾತಾವರಣವನ್ನು ನಿರ್ಮಿಸಬೇಕಾಗಿದೆ” ಎಂದು ಹೇಳಿರುವುದು ಅತ್ಯಂತ ಪ್ರಸ್ತುತವೆನಿಸುವುದು.