ಹಾಂಗ್‌ಕಾಂಗ್‌ನಲ್ಲಿ ಜರುಗಿದ ವಿಶ್ವವಾಣಿಜ್ಯ ಸಂಸ್ಥೆಯ (ಡಬ್ಲ್ಯೂ.ಟಿ.ಒ) ಸಭೆ ಹಿಂದುಳಿದ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳ ಜೀವನದಲ್ಲಿ ಒಂದು ಐತಿಹಾಸಿಕ ಘಟನೆ. ಕಳೆದ ಬಾರಿ ದೋಹಾ-೨೦೦೧ರಲ್ಲಿ ಪ್ರಾರಂಭವಾದ ಭಾರತದ ಪ್ರತಿಭಟನೆ ಇಂದು ೧೧೦  ಹಿಂದುಳಿದ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳಲ್ಲಿ ಪ್ರತಿಧ್ವನಿಸಿದೆ. ಡಬ್ಲ್ಯೂ.ಟಿ.ಒ ಮೂಲಕ ಇನ್ನೊಂದು ವಸಾಹತುಶಾಹಿ ಸಾಮ್ರಾಜ್ಯದ ಕಬಂಧ ಬಾಹುವಿನಲ್ಲಿ ಬಡರಾಷ್ಟ್ರ ಗಳನ್ನು ಬಂಧಿಸುವ ಮುಂದುವರಿದ ರಾಷ್ಟ್ರಗಳ ಹುನ್ನಾರವನ್ನು ಭಾರತದ ನೇತೃತ್ವದ ಕೂಟ ವಿಫಲಗೊಳಿಸಿದೆ. ಸಂಸ್ಥೆಯನ್ನು ಮುಕ್ತ ವಾಣಿಜ್ಯ ಮತ್ತು ಎಲ್ಲರಿಗೆ ನ್ಯಾಯವನ್ನು ಒದಗಿಸುವ ಸಂಘಟನೆಯಾಗಿ ಪರಿವರ್ತಿಸುವ ಭಾರತದ ಪ್ರಯತ್ನಕ್ಕೆ ಮನ್ನಣೆ ದೊರೆತಿದೆ. ಭಾರತ ಸರ್ಕಾರದ ವಾಣಿಜ್ಯ ಸಚಿವರಾದ ಕಮಲನಾಥ್ ರಾಷ್ಟ್ರದ ೬೦೦ ದಶಲಕ್ಷ ರೈತರಿಗೆ ಧ್ವನಿ ನೀಡಿ ಉಸಿರಾಡುವ ಅವಕಾಶ ನೀಡಿದ್ದಾರೆ. ವಿಶ್ವ ವಾಣಿಜ್ಯದಲ್ಲಿ ಕಡೆಗಣಿಸಲ್ಪಟ್ಟ ಬಡರಾಷ್ಟ್ರಗಳ ಕೃಷಿಕ್ಷೇತ್ರ ಇಂದು ಪುನಃ ತನ್ನ ಪ್ರಾಧಾನ್ಯವನ್ನು ಪಡೆದಿದೆ. ಅಮೆರಿಕ, ಯುರೋಪಿಯನ್ ಯೂನಿಯನ್ ಮತ್ತು ಜಪಾನಿನ ರೈತರಿಗೆ ನೀಡುತ್ತಿರುವ ಅಪಾರ ಮೊತ್ತದ ಸಬ್ಸಿಡಿಗಳಿಂದಾಗಿ ಬಡ ರಾಷ್ಟ್ರಗಳ ಕೃಷಿ ಉತ್ಪನ್ನಗಳಿಗೆ ಬೆಲೆಯಿಲ್ಲದಾಗಿದೆ. ಭಾರತದಂತಹ ರಾಷ್ಟ್ರದಲ್ಲಿ ಸಾವಿರಾರು ಸಂಖ್ಯೆಯಲ್ಲಿ ರೈತರು ಆತ್ಮಹತ್ಯೆ ಮಾಡಿ ಕೊಳ್ಳುವಂತಾಯಿತು. ಅಭಿವೃದ್ದಿ ಹೊಂದಿದ ರಾಷ್ಟ್ರಗಳು ಭಾರತದಂತಹ ರಾಷ್ಟ್ರಗಳನ್ನು ತಮ್ಮ ರಫ್ತು ವ್ಯಾಪಾರದ ಕಣಜಗಳಾಗಿ ಉಪಯೋಗ ಮಾಡುವ ಪರಿಸ್ಥಿತಿಗೆ ದೂಡಲಾಯಿತು. ಇದರಿಂದ ರಕ್ಷಿಸಿಕೊಳ್ಳುವ ಒಂದೇ ಒಂದೇ ಉಪಾಯ ಆಯಾ ರಾಷ್ಟ್ರಗಳ ಆಮದು ಶುಲ್ಕ. ಅದರ ಬಗ್ಗೆಯೂ ಸಾಕಷ್ಟು ಪ್ರತಿಬಂಧಕವನ್ನು ಹೇರಿದ ಕಾರಣ ವಿಶ್ವದ ಮುಕ್ತಮಾರುಕಟ್ಟೆ ಬಲಿಷ್ಠ ರಾಷ್ಟ್ರಗಳ ಪಾಲಾಗುವ ದುಸ್ಥಿತಿ ಒದಗಿಬಂತು.

ಬಲಿಷ್ಠ ರಾಷ್ಟ್ರಗಳು ತಮ್ಮ ರಫ್ತಿನ ಉತ್ಪನ್ನಗಳಿಗೆ ಸಬ್ಸಿಡಿಗಳನ್ನು ಭಾರೀ ಮಟ್ಟದಲ್ಲಿ ಏರಿಸಿದ್ದು ಮಾತ್ರವಲ್ಲದೆ ಆಂತರಿಕ ಬೆಂಬಲವನ್ನು ಕೂಡ ನೀಡಿವೆ. ಇಂತಹ ವಿಕಲ್ಪವನ್ನು ಹೋಗಲಾಡಿಸುವ ಭಾರತದಂತಹ ರಾಷ್ಟ್ರಗಳ ಬೇಡಿಕೆಗೆ ಮನ್ನಣೆ ಸಿಗದಂತಾಗಿತ್ತು. ಭಾರತದ ಕೃಷಿಕರ ಉತ್ಪನ್ನ ರಫ್ತುನ್ನು ಸಂರಕ್ಷಿಸುವುದು ಆದ್ಯ ಕರ್ತವ್ಯವಾಗಿರುತ್ತದೆ. ಸದ್ಯ ಹಲವು ರಾಷ್ಟ್ರಗಳಿಗೆ ನಾವು ೭ ಶತಕೋಟಿ ಡಾಲರ್‌ಗಳಷ್ಟು ಕೃಷಿ ಉತ್ಪನ್ನಗಳನ್ನು ರಫ್ತು ಮಾಡುತ್ತಿದ್ದೇವೆ. ಆದರೆ ಈ ರಫ್ತು ವಿಶ್ವದ ಒಟ್ಟು ರಫ್ತಿನಲ್ಲಿ ಸಂಪೂರ್ಣ ನಗಣ್ಯ. ಭಾರತ ಹಾಂಗ್‌ಕಾಂಗ್‌ನಲ್ಲಿ ರೈತರ ಪರವಾಗಿ ತನ್ನ ವಿಚಾರವನ್ನು ಮುಂದಿಟ್ಟಾಗ ೧೧೦ ಬಡರಾಷ್ಟ್ರಗಳ ಆಸಕ್ತಿಯನ್ನು ಮನಸ್ಸಿನಲ್ಲಿಟ್ಟೇ ವಾದ ಮಾಡಿತ್ತು.

ಕೈಗಾರಿಕೆ ಮತ್ತು ಕೃಷಿ ಕ್ಷೇತ್ರದ ರಫ್ತು ವ್ಯಾಪಾರವನ್ನು ಸಂರಕ್ಷಿಸುವುದು ಭಾರತ ಸರ್ಕಾರದ ಕರ್ತವ್ಯ. ಆದರೆ, ವಿಶ್ವದ ಬಲಿಷ್ಠ ರಾಷ್ಟ್ರಗಳು ಅಬಕಾರಿ ತೆರಿಗೆಯೇತರ (ಎನ್‌ಬಿಟಿಎಸ್) ಮತ್ತು ಡಂಪಿಂಗ್ ವಿರೋಧಿ ಕಾನೂನಿನ ವಿಕಲ್ಪತೆ ಮತ್ತು ದುರುಪಯೋಗದ ಮೂಲಕ ೧೧೦ ಬಡರಾಷ್ಟ್ರಗಳನ್ನು ವಂಚಿಸುವ ಕುಟಿಲ ಮಾರ್ಗಗಳನ್ನು ಕೈಗೊಂಡಿವೆ. ಭಾರತದ ಬಾಸ್ಮತಿ ಮತ್ತು ಇನ್ನೂ ಹಲವು ವಿಧದ ವೈಶಿಷ್ಟ್ಯಪೂರ್ಣ ಅಕ್ಕಿ ರಫ್ತನ್ನು ಕೂಡ ಅಮೆರಿಕ, ಐರೋಪ್ಯ, ಒಕ್ಕೂಟ ಮತ್ತು ಜಪಾನ್ ತಮ್ಮ ಅಕ್ಕಿಯ ಮಾರುಕಟ್ಟೆಯ ದೃಷ್ಟಿಯಿಂದ ಪ್ರತಿಬಂಧಿಸುವ ಕೆಲಸ ಮಾಡುತ್ತಿವೆ. ಕೋಟ್ಯಂತರ ದಶಲಕ್ಷ ಡಾಲರ್‌ಗಳನ್ನು ಅವರವರ ದೇಶದ ಕೃಷಿಕರಿಗೆ ನೀಡಿ, ದಿನಕ್ಕೆ ಒಂದು ಡಾಲರ್ ಕೂಡ ಗಳಿಸಲಾಗದ ಭಾರತ ಮತ್ತು ಉಳಿದ ಬಡರಾಷ್ಟ್ರಗಳ ಜೀವಿತವನ್ನು ಅಪಾಯಕ್ಕೆ ಒಳಪಡಿಸುವ ಪಿತೂರಿ ಇಂದು ನಡೆಯುತ್ತಿದೆ. ಆದರೆ ಭಾರತ ಕ್ಲಪ್ತಕಾಲದಲ್ಲಿ ಎಚ್ಚತ್ತಿದೆ.

ಅಭಿವೃದ್ದಿಶೀಲ ಮತ್ತು ಹಿಂದುಳಿದ ರಾಷ್ಟ್ರಗಳು ಭಾರತದ ಬೆಂಬಲ, ಸಲಹೆ ಮತ್ತು ಮಾರ್ಗದರ್ಶನಕ್ಕಾಗಿ ಎದುರು ನೋಡುತ್ತಿವೆ. ಮುಂಬರುವ ದಿನಗಳಲ್ಲಿ ವಿಶ್ವವ್ಯಾಪಾರದಲ್ಲಿ ತಲೆದೋರುವ ವಿಕಲ್ಪತೆಯನ್ನು ಹೋಗಲಾಡಿಸುವ ಸಂಕಲ್ಪ ಶಕ್ತಿಯನ್ನು ಕಂಡು ಮುಂದು ವರಿದ ಬಲಿಷ್ಠ ರಾಷ್ಟ್ರಗಳು ದಿಗ್ಭ್ರಮೆಗೊಂಡಿವೆ. ಅದಕ್ಕಾಗಿಯೇ ಹಾಂಗ್‌ಕಾಂಗ್ ಅಧಿವೇಶನ ಹಿಂದುಳಿದ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳ ರಾಜಕೀಯ ಇಚ್ಛಾಶಕ್ತಿಯನ್ನು ಪ್ರಬಲವಾಗಿ ಪ್ರತಿಪಾದಿಸಿದೆ.

ಭಾರತ ತನ್ನ ಮೂಲಭೂತ ಸೌಲಭ್ಯ ಮತ್ತು ತಂತ್ರಗಾರಿಕೆಯನ್ನು ಅಭಿವೃದ್ದಿಪಡಿಸಿದಾಗ, ಚೀನಾದೊಂದಿಗೆ ಸರಿಸಮಾನವಾಗಿ ವಿಶ್ವ ಮಾರುಕಟ್ಟೆಯಲ್ಲಿ ಪ್ರಧಾನ ಸ್ಥಾನಗಳಿಸಲು ಸಾಧ್ಯವಿದೆ. ಚೀನಾ ಈಗ ವಿಶ್ವದ ಆರ್ಥಿಕ ಕ್ಷಿತಿಜದಲ್ಲಿ ೬ನೇ ಸ್ಥಾನ ಪಡೆದಿದ್ದರೆ, ಭಾರತ ೧೦ನೇ ಸ್ಥಾನ ಪಡೆದಿದೆ. ವಿದೇಶಿ ಬಂಡವಾಳವನ್ನು ಆಕರ್ಷಿಸುವುದರಲ್ಲಿ ಇತ್ತೀಚಿನ ಸಮೀಕ್ಷೆ ಪ್ರಕಾರ ಭಾರತ ವಿಶ್ವದ ೨ನೇ ಸ್ಥಾನದಲ್ಲಿದೆ. ಆದುದರಿಂದ ಈಗಿನ ಪ್ರಧಾನಿ ಡಾ. ಮನಮೋಹನ್‌ಸಿಂಗ್ ನೇತೃತ್ವದಲ್ಲಿ ಅನುಸರಿಸುತ್ತಿರುವ ಪುರೋಗಾಮಿ, ರೈತಪರ ಆರ್ಥಿಕ ನೀತಿಯಿಂದ ಭಾರತ ತನ್ನನ್ನು ತಾನು ಬಲಪಡಿಸಿ ನಾಗಾಲೋಟದಿಂದ ಸಾಗಲು ಸಾಧ್ಯವಾಗಿದೆ. ಕೃಷಿ ಆಧಾರಿತ ಜೀವನವನ್ನು ಸಾಗಿಸುತ್ತಿರುವ ೬೫೦ ದಶಲಕ್ಷ ಭಾರತೀಯರು ಮತ್ತು ಅವರ ಪೈಕಿ ೧೦೭ ದಶಲಕ್ಷ ಕೃಷಿ ಕಾರ್ಮಿಕರು ಅನಾಥ ಭಾವನೆಯಿಂದ ಬದುಕದೆ ಸ್ವಾವಲಂಬನೆಯ ಜೀವನ ನಡೆಸುವ ದಾರಿಯಲ್ಲಿ ಡಬ್ಲ್ಯೂ.ಟಿ.ಒ ವ್ಯವಸ್ಥೆಯನ್ನು ಸರಿ ಹೊಂದಿಸಬೇಕಾಗಿದೆ. ಆದುದರಿಂದ ನಮ್ಮ ರೈತರ ಮತ್ತು ಕೃಷಿ ಕಾರ್ಮಿಕರ ಆದಾಯ ಮಟ್ಟವನ್ನು ಏರಿಸಲು ಕೃಷಿ ಉತ್ಪನ್ನಗಳಿಗೆ ರಫ್ತು ಅವಕಾಶ ಒದಗಿಸುವುದು ಅನಿವಾರ್ಯ ವಾಗಿದೆ.

ಆದುದರಿಂದ ಅಮೆರಿಕ ಮತ್ತು ಐರೋಪ್ಯ ಒಕ್ಕೂಟದ ರೈತರ ಜೊತೆಯಲ್ಲಿ ನಮ್ಮ ರೈತರು ಪೈಪೋಟಿ ನಡೆಸಬೇಕಾದರೆ ಅದೇ ಪ್ರಮಾಣದಲ್ಲಿ ಸಬ್ಸಿಡಿ ಒದಗಿಸಬೇಕಾಗಿದೆ. ಅಲ್ಲದೆ ಕಡಿಮೆ ಬೆಲೆಯಲ್ಲಿ ಬರುತ್ತಿರುವ ಆಮದು ದಾಳಿಯಿಂದ ಅವರನ್ನು ರಕ್ಷಿಸಬೇಕಾಗಿದೆ. ಜಗತ್ತಿನ ಹೊಸ ಮಾರುಕಟ್ಟೆಗೆ ನಮ್ಮ ರೈತರು ಪ್ರವೇಶಿಸಲಾಗದಿದ್ದರೆ ವಿಶ್ವವಾಣಿಜ್ಯ ಸಂಸ್ಥೆಯಿಂದ ಭಾರತಕ್ಕೆ ಪ್ರಯೋಜನ ಆಗಲಾರದು. ಈಗಾಗಲೇ ಉದಾರೀಕರಣ ನೀತಿಯಿಂದ ಸೇವಾಕ್ಷೇತ್ರದಲ್ಲಿ ಭಾರತಕ್ಕೆ ಹೆಚ್ಚು ಪ್ರಾಧಾನ್ಯ ದೊರಕಿರುವ ಕಾರಣ, ಅದರ ಲಾಭ ವರ್ಧಿಸುವ ರೀತಿಯಲ್ಲಿ ಭಾರತ ಸರ್ಕಾರ ಸೂಕ್ತ ನೀತಿಯನ್ನು ಅನುಸರಿಸಬೇಕಾಗಿದೆ. ಜೀವಮೂಲ ಆವಶ್ಯಕ ಮದ್ದಿನ ಬೆಲೆ ಮತ್ತು ಹೊಸ ಪೇಟೆಂಟ್‌ಗಳಿಂದ ಭಾರತೀಯರಿಗೆ ಆಘಾತವಾಗದ ರೀತಿಯಲ್ಲಿ ನಮ್ಮ ಗ್ರಾಹಕರನ್ನು ಸಂರಕ್ಷಿಸುವ ಅಗತ್ಯವಿದೆ. ಡಬ್ಸ್ಯೂಟಿಒ ದಾಳಿಯಲ್ಲಿ ಜೀವನಾವಶ್ಯಕ ಮದ್ದುಗಳ ಬೆಲೆ ಏರಿಕೆ ಕೂಡ ಜನರನ್ನು ಬಾಧಿಸುವ ಒಂದು ದೊಡ್ಡ ಪ್ರಶ್ನೆಯಾಗಿದೆ. ಇಷ್ಟು ಮಾತ್ರವಲ್ಲದೆ ಡಬ್ಲ್ಯೂ.ಟಿ.ಒ ಆಘಾತದಿಂದ ಭಾರತದ ಜೈವಿಕ ವೈವಿಧ್ಯ ಮತ್ತು ಭೌಗೋಳಿಕ ಮತ್ತು ಸಸ್ಯ ತಳಿಯ ರಕ್ಷಣೆ ಬಗ್ಗೆ ಎಚ್ಚರಿಕೆ ವಹಿಸಬೇಕಾದ ಆವಶ್ಯಕತೆಯಿದೆ. ಭಾರತದ ಹಲವು ವೈವಿಧ್ಯ ಮತ್ತು ಸೂಕ್ಷ್ಮ ವಿಚಾರಗಳನ್ನು ಗಮನಿಸಿ, ಭಾರತ ಸರ್ಕಾರ ಎಚ್ಚರಿಕೆಯ ಹೆಜ್ಜೆಗಳನ್ನು ಹಾಕಬೇಕಾಗಿದೆ.

ಹಾಂಗ್‌ಕಾಂಗ್‌ನಲ್ಲಿ ನಡೆದ ಡಬ್ಲ್ಯೂಟಿಒ ಸಮಾವೇಶ ಭಾರತ ಸರ್ಕಾರದ ಜಾಗೃತ ಮನೋಭೂಮಿಕೆಯನ್ನು ಸ್ಪಷ್ಟವಾಗಿ ಪ್ರದರ್ಶಿಸಿದೆ. ಇದರಿಂದಾಗಿ ಹಿಂದುಳಿದ ಮತ್ತು ಅಭಿವೃದ್ದಿಶೀಲ ರಾಷ್ಟ್ರಗಳ ಮೇಲೆ ವಸಾಹತುಶಾಹಿ ಮನೋಭೂಮಿಕೆಯಿಂದ ಮುಕ್ತ ಸವಾರಿ ಮಾಡುತ್ತಿದ್ದ ಬಲಿಷ್ಠ ರಾಷ್ಟ್ರಗಳ ಮುನ್ನಡೆಗೆ ಕಡಿವಾಣ ಹಾಕಿದಂತಾಗಿದೆ. ಹಾಂಗ್‌ಕಾಂಗ್‌ನಲ್ಲಿ ಒದಗಿದ ಸದವಕಾಶವನ್ನು ೧೧೦ ರಾಷ್ಟ್ರಗಳ ನೇತೃತ್ವ ವಹಿಸಿದ ಭಾರತ ಮುಂದುವರಿಸಿಕೊಂಡು ಹೋಗಬೇಕು.