ಡಿಸೆಂಬರ್ ೨೬, ೨೦೦೪ ರಂದು ಏಷ್ಯಾಖಂಡವನ್ನು ಅಪ್ಪಳಿಸಿದ ಸುನಾಮಿ ಪ್ರಳಯಾಂತಕ ಭಾವನೆ ಹಾಗೂ ಎದೆ ನಡುಕ ಉಂಟುಮಾಡಿದೆ. ಭೂಮಿಗೆ ನುಗ್ಗಿದ ಜಲರಾಶಿ ೪೦-೫೦ ಅಡಿ ಎತ್ತರದ ಅಲೆಗಳಾಗಿ ತೀರಕ್ಕೆ ಅಪ್ಪಳಿಸಿ, ಕಡಲನ್ನು ನಂಬಿದ್ದ ಮೀನುಗಾರರ ಬದುಕನ್ನು ಛಿದ್ರಛಿದ್ರಗೊಳಿಸಿತ್ತು. ರಿಕ್ಟರ್ ಮಾಪಕದಲ್ಲಿ ೮.೯ರಷ್ಟು ತೀವ್ರತೆ ದಾಖಲಾಗಿತ್ತು. ಇದರಿಂದಾದ ಅನಾಹುತ ಅಸಾಧಾರಣ. ಏಷ್ಯಾಖಂಡದಲ್ಲಿ ಆದ ಸಾವು ಮೂರು ಲಕ್ಷ. ಭಾರತದಲ್ಲಿ ೧೬,೪೧೩ ಮಂದಿ ಸಾವನ್ನಪ್ಪಿದರು. ತಮಿಳುನಾಡು ಮತ್ತು ಅಂಡಮಾನ್ ನಿಕೋಬಾರ್‌ನಲ್ಲಿ ಅತ್ಯಧಿಕ ಸಂಖ್ಯೆಯಲ್ಲಿ ಸಾವು ಸಂಭವಿಸಿತು.

ಇಂಡೋನೇಷ್ಯಾದಲ್ಲಿ ೨,೪೪,೬೬೧, ಶ್ರೀಲಂಕಾದಲ್ಲಿ ೩೨,೯೫೭, ಥಾಯ್ಲೆಂಡ್‌ನಲ್ಲಿ ೬, ೧೯೦ ಮಂದಿ ಸಾವನ್ನಪ್ಪಿದರು. ಸುಮಾರು ೨,೩೫,೩೭೭ ಮಂದಿ ಭಾರತೀಯರು ಮನೆಗಳನ್ನು ಕಳೆದುಕೊಂಡರು. ೨೭.೯೨ ಲಕ್ಷ ಮಂದಿ ಜನಸಂಖ್ಯೆ ಈ ಸುನಾಮಿಯಿಂದ ಬವಣೆಪಟ್ಟರು. ೧,೦೭೯ ಗ್ರಾಮಗಳು ಸುನಾಮಿಯಿಂದ ತತ್ತರಿಸಿದವು. ಸುಮಾರು ೩೯,೦೩೫ ಹೆಕ್ಟೇರ್ ಬೆಳೆ ನಾಶವಾಯಿತು. ೮೩,೭೮೮ ಬೋಟುಗಳು ನಾಶವಾದವು. ೩೧,೭೫೫ ಜಾನುವಾರುಗಳು ಸತ್ತು, ಸುಮಾರು ೧೧,೫೪೪.೯೧ ಕೋಟಿ ಮೊತ್ತದ ಆಸ್ತಿಪಾಸ್ತಿ ನಷ್ಟ ವಾಯಿತು. ಇಷ್ಟು ಬೃಹತ್ ಪ್ರಮಾಣದ ಅನಾಹುತವಾದರೂ, ಭಾರತ ಧೃತಿಗೆಡದೆ ತಲೆ ಎತ್ತಿನಿಂತು, ತನ್ನ ರಾಜಕೀಯ ಇಚ್ಛಾಶಕ್ತಿಯನ್ನು ಪ್ರದರ್ಶಿಸಿತು. ಭಾರತದ ಪ್ರಧಾನಿ ಪರದೇಶಗಳ ಸಹಾಯ ಹಸ್ತವನ್ನು ನಿರಾಕರಿಸಿ, ಭಾರತ ಇಂತಹ ಅಪಾಯಗಳನ್ನು ತನ್ನ ಸ್ವಶಕ್ತಿಯಲ್ಲಿ ಎದುರಿಸುತ್ತದೆಂದು ಜಗತ್ತಿಗೆ ಸಾರಿದರು. ಭಾರತದ ಸ್ವಾವಲಂಬನೆಯ ಸಾಕ್ಷಾತ್ಕಾರ ಸುನಾಮಿ ಪ್ರಸಂಗದಿಂದ ವಿಶ್ವಕ್ಕೆ ಪರಿಚಯವಾಯಿತು. ಸುನಾಮಿ ಪ್ರದೇಶಕ್ಕೆ ಹರಿದುಬಂದ ನೆರವ ಅದ್ವಿತೀಯ ಮತ್ತು ಅದ್ಭುತ. ಅಖಿಲ ಭಾರತ ಕಾಂಗ್ರೆಸ್ ಸಮಿತಿಯ ಅಧ್ಯಕ್ಷರಾದ ಸೋನಿಯಾ ಗಾಂಧಿಯವರ ನೇತೃತ್ವದಲ್ಲಿ ರಾಜೀವ್‌ಗಾಂಧಿ ಪುನರ್ವಸತಿ ಪ್ಯಾಕೇಜ್ ಮೂಲಕ ಹರಿದುಬಂದ ಧನಸಹಾಯ ೩,೬೪೪.೦೫ ಕೋಟಿ. ಒಂದು ರಾಜಕೀಯ ಪಕ್ಷದ ನಾಯಕತ್ವದ ಕರ್ತೃತ್ವಶಕ್ತಿಗೆ ವಿಶ್ವದಾಖಲೆಯಿದು. ಸಾರ್ವಜನಿಕರಿಂದ ನೇರವಾಗಿ ಹರಿದುಬಂದ ಹಣ ೧,೦೦೦ ಕೋಟಿ. ಕೇಂದ್ರ ಸರ್ಕಾರವಂತೂ ಎಂದೂ ಕಂಡರಿಯದ ಅಧಿಕ ಪ್ರಮಾಣದಲ್ಲಿ ಧನಸಹಾಯ ನೀಡಿದುದು ಮಾತ್ರವಲ್ಲದೆ, ರಾಷ್ಟ್ರದ ಇಡೀ ಶಕ್ತಿಯನ್ನು ಧಾರೆಯೆರೆದಿದೆ. ಮಾನಸಿಕವಾಗಿ ಕಂಗಾಲಾದ ಮಕ್ಕಳನ್ನು ಮತ್ತು ಜನರನ್ನು ಸಾಂತ್ವನಗೊಳಿಸಿ ಭೀತಿಗೊಂಡ ಮನಸ್ಸಿನಲ್ಲಿ ಸ್ಥಿರತೆಯನ್ನು ನೆಲೆಸುವಂತೆ ಮಾಡಲು ಮನಃಶಾಸ್ತ್ರಜ್ಞರನ್ನು ನಿಯೋಜಿಸಿದೆ.

ಸುನಾಮಿಯಂತಹ ಭೀಕರ ದುರಂತದಿಂದ ಚೇತರಿಸಲು ೩-೪ ವರ್ಷ ಬೇಕೆಂದಿದ್ದರೂ ಒಂದು ರಾಷ್ಟ್ರದ ಇಚ್ಛಾಶಕ್ತಿ ಮತ್ತು ಜನರ ಮನೋಬಲ ಒಂದು ವರ್ಷದಲ್ಲಿ ಮತ್ತಷ್ಟು ಚೇತರಿಸಲು ಸಾಧ್ಯವಿದೆಯೆಂದು ಸುನಾಮಿ ದುರಂತದ ನಂತರ ನಡೆದ ವಿದ್ಯಮಾನಗಳಿಂದ ಸ್ಪಷ್ಟವಾಗಿದೆ. ಇದೊಂದು ರಾಷ್ಟ್ರದ ಆಂತರಿಕ ಶಕ್ತಿಯ ವಿಕ್ರಮ ಸ್ವರೂಪವೆಂದರೆ ಅತಿಶಯೋಕ್ತಿಯಾಗಲಾರದು. ಪ್ರಮುಖವಾಗಿ ಸುನಾಮಿ ಅತ್ಯಂತ ಭೀಕರವಾಗಿ ಅಪ್ಪಳಿಸಿದ ನಾಗಪಟ್ಟಣಂ ಜಿಲ್ಲೆಯ ಜನತೆ ಒಂದು ವರ್ಷದ ಒಳಗಡೆ ಮತ್ತೆ ಚೇತರಿಸಿಕೊಂಡು, ತಮ್ಮ ಎಂದಿನ ಚಟುವಟಿಕೆಗಳಲ್ಲಿ ತೊಡಗಿ, ಸಾಮಾಜಿಕ ಮತ್ತು ಆರ್ಥಿಕ ಜೀವನ ಪ್ರಾರಂಭಿಸಿದ್ದು ಜಗತ್ತಿನಲ್ಲಿಯೇ ದಾಖಲೆ. ಪ್ರಮುಖವಾಗಿ ನಾಗಪಟ್ಟಣಂ ಜಿಲ್ಲೆಯ ಜಿಲ್ಲಾಧಿಕಾರಿಯಾಗಿ ಕಾರ್ಯನಿರ್ವಹಿಸಿದ ರಾಧಾಕೃಷ್ಣನ್‌ರವರ ಕಾರ್ಯಕ್ಷಮತೆ ಮತ್ತು ಸ್ಪಂದನ ಇದಕ್ಕೆ ಸಾಕ್ಷೀಭೂತವಾಗಿ ನಿಂತಿದೆ.

ಸುನಾಮಿಯಂತಹ ಭೀಕರ ಅಲೆಯ ತಾಂಡವ ನೃತ್ಯಕ್ಕೆ ದೇಶ-ಭಾಷೆಯ ಸೀಮೆಯಿಲ್ಲ. ಆದುದರಿಂದಲೇ ಇಂತಹ ಅನಾಹುತವನ್ನು ಎದುರಿಸುವಲ್ಲಿ ಇಡೀ ವಿಶ್ವವೇ ತನ್ನ ಶಕ್ತಿಯನ್ನು ಪ್ರಯೋಗಿಸಬೇಕಾಗಿದೆ. ಈ ಸುನಾಮಿ ಅಪ್ಪಳಿಸಿದ ನಂತರ ಜಗತ್ತಿನ ಸುಮಾರು ೨೭ ಭೂಕಂಪ ತಜ್ಞರು, ಭೂಗರ್ಭಶಾಸ್ತ್ರಜ್ಞರು, ಜೀವಶಾಸ್ತ್ರಜ್ಞರು, ಸಾಗರ ತಜ್ಞರು, ಇಂಡೋ ನೇಷ್ಯಾದ ಸುಮಾತ್ರ ತೀರದಲ್ಲಿ ಸಂಶೋಧನೆ ನಡೆಸಿದ ಫಲವಾಗಿ ಇಂದು ಮುನ್ಸೂಚನೆ ಬಗ್ಗೆ ಸಾಕಷ್ಟು ಪ್ರಯೋಗಗಳು ನಡೆದಿವೆ. ಈ ಹಿಂದೆ ಅಟ್ಲಾಂಟಿಕ್, ಫೆಸಿಫಿಕ್ ಸಾಗರದಲ್ಲಿ ಮಾತ್ರ ಸುನಾಮಿ ಮುನ್ಸೂಚನಾ ವ್ಯವಸ್ಥೆ ಇತ್ತು. ಈಗ ಹಿಂದೂ ಮಹಾಸಾಗರ ಮತ್ತು ಅರಬ್ಬಿ ಸಮುದ್ರದಲ್ಲಿಯೂ ಮುನ್ಸೂಚನಾ ವ್ಯವಸ್ಥೆ ಮಾಡಲು ಕ್ರಮಕೈಗೊಳ್ಳಲಾಗಿದೆ. ಹೈದರಾಬಾದ್‌ನಲ್ಲಿ ಕೂಡ ಮುನ್ಸೂಚನಾ ಕೇಂದ್ರವನ್ನು ಸ್ಥಾಪಿಸಲಾಗುತ್ತಿದೆ.

ಭಾರತ ಸರ್ಕಾರದ ಹವಾಮಾನ ಇಲಾಖೆ ಕೂಡ ಭೂಕಂಪ ಮುನ್ಸೂಚನಾ ಕೇಂದ್ರಗಳನ್ನು ತೆರೆದಿದೆ. ಸಾಗರ ಇಲಾಖೆ ಸುನಾಮಿ ಮುನ್ನೆಚ್ಚರಿಕೆ ವ್ಯವಸ್ಥೆಯನ್ನು ಬಂಗಾಳ ಅಥವಾ ಅರೆಬ್ಬಿ ಸಮುದ್ರದಲ್ಲಿ ಸ್ಥಾಪಿಸುವ ಯೋಜನೆಯಲ್ಲಿ ಸಾಕಷ್ಟು ಕಾರ್ಯತತ್ಪರವಾಗಿದೆ. ವಿಜ್ಞಾನ ಮತ್ತು ತಂತ್ರಜ್ಞಾನ, ನಾಗರಿಕರ ಸ್ಪಂದನಕ್ಕೆ ಅನುಗುಣವಾಗಿ ಸ್ಪಂದಿಸುವುದು ಮಾತ್ರವಲ್ಲದೆ ಸುದ್ದಿ ಮತ್ತು ಇನ್ನಿತರ ಮಾಧ್ಯಮಗಳು ಕೂಡ ತಕ್ಷಣ ಮುನ್ಸೂಚನೆಯ ಪ್ರಸರಣವನ್ನು ಮಾಡುವ ಕಾರ್ಯವನ್ನು ಕೈಗೊಳ್ಳಲು ಆಡಳಿತಾತ್ಮಕ ಮತ್ತು ವೈಜ್ಞಾನಿಕ ಕ್ರಮವನ್ನು ಅಳವಡಿಸಲಾಗುತ್ತಿದೆ. ಸುನಾಮಿ ಇಂದು ಆಡಳಿತ ಮತ್ತು ವೈಜ್ಞಾನಿಕವಾದ ಹಲವು ಸವಾಲುಗಳನ್ನು ಎಸೆದಿದೆ. ಸಾರ್ವಜನಿಕರನ್ನು ಮತ್ತು ಆಡಳಿತಗಾರರನ್ನು ಇಂತಹ ಅನಾಹುತಗಳನ್ನು ಎದುರಿಸಲು ತರಬೇತಿಯನ್ನು ನೀಡುವ ಬಗ್ಗೆ ಇಂದು ರಾಷ್ಟ್ರೀಯ ಆಡಳಿತಾ ಸುಧಾರಣಾ ಆಯೋಗ ಮತ್ತು ರಾಷ್ಟ್ರೀಯ ಪ್ರಕೃತಿ ವಿಕೋಪ ನಿರ್ವಹಣಾ ಸಂಸ್ಥೆ ತನ್ನನ್ನು ತೊಡಗಿಸಿ ಸೂಕ್ತ ಕ್ರಮಗಳನ್ನು ಕೈಗೊಳ್ಳಲು ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ಪಂಚಾಯತ್ ಆಡಳಿತ ವ್ಯವಸ್ಥೆಯನ್ನು ಸುಸಜ್ಜಿತಗೊಳಿಸುತ್ತಿದೆ. ಪ್ರಧಾನಿ ಡಾ. ಮನಮೋಹನ್‌ಸಿಂಗ್ ಇಡೀ ರಾಷ್ಟ್ರದ ಆಡಳಿತವನ್ನು ಈ ಬಗ್ಗೆ ವ್ಯವಸ್ಥೆಗೊಳಿಸುವುದರ ಜೊತೆಗೆ, ಪ್ರಕೃತಿ ವಿಕೋಪ ನಿರ್ವಹಣಾ ಪ್ರಾಧಿಕಾರವನ್ನು ಕೂಡ ಸ್ಥಾಪಿಸುತ್ತಿದ್ದಾರೆ. ಸುನಾಮಿ, ಬೂಕಂಪ, ಜ್ವಾಲಾಮುಖಿ, ನೆರೆ ಮತ್ತು ಇನ್ನಿತರ ಪ್ರಕೃತಿದತ್ತ ಮತ್ತು ಮನುಷ್ಯ ನಿರ್ಮಿತ ಅನಾಹುತಗಳನ್ನು ಎದುರಿಸುವ ಬಗ್ಗೆ ವಿಶೆಷವಾಗಿ ಆಡಳಿತವನ್ನು ಅಣಿಗೊಳಿಸಲಾಗುತ್ತಿದೆ. ಸುನಾಮಿಯಂತಹ ಅಪಾಯಗಳಿಂದ ಇಡೀ ರಾಷ್ಟ್ರವನ್ನು ಪಾರುಗೊಳಿಸಲು ಮತ್ತು ಇಂತಹ ಅನಾಹುತ ಬಂದ ಮೇಲೆ ಜನರನ್ನು ಹಾಗೂ ಆಡಳಿತಗಾರರನ್ನು ಚುರುಕುಗೊಳಿಸುವ ವಿಚಾರದಲ್ಲಿ ವೈಜ್ಞಾನಿಕ ಮತ್ತು ಆಡಳಿತಾತ್ಮಕವಾಗಿ ಸಿದ್ಧಗೊಳಿಸುವ ಎಚ್ಚರಿಕೆಯ ಗಂಟೆ ಯಾಗಿದೆ!

ಇಂದು ಭಾರತ ಮತ್ತು ಏಷ್ಯಾಖಂಡದ ಹಲವು ರಾಷ್ಟ್ರಗಳು ಸುನಾಮಿ ಜಾಗೃತ ವ್ಯವಸ್ಥೆಯ ಪಾಲುದಾರರಾಗಿ ಕರ್ತವ್ಯ ನಿರ್ವಹಿಸಬೇಕಾದ ಅಗತ್ಯ ಕಂಡಿದೆ. ವಿಶ್ವದ ಯಾವ ಮೂಲೆಯಲ್ಲಾಗಲೀ ಇಂತಹ ಅನಾಹುತ ಬಂದಾಗ ಎದುರಿಸುವ ಹೊಸ ವ್ಯವಸ್ಥೆ ಸಿದ್ಧವಾಗುತ್ತಿದೆ.

ಆದುದರಿಂದ ಸುನಾಮಿಯಂತಹ ದುರಂತವನ್ನು ಮುಂದೆ ಬರುವ ಆಡಳಿತ ಪರಿಕ್ರಮ ಬಡತನ ನಿರ್ಮೂಲನ ಹಾಗೂ ಸಾಮಾಜಿಕ ನ್ಯಾಯಗಳಿಗೆ ಸ್ಪಂದಿಸುವ ಅವಕಾಶವಾಗ ಬಹುದು. ಸಮುದ್ರ ತೀರದಲ್ಲಿ ರಚಿಸಬೇಕಾದ ಮನೆಗಳ ರೂಪುರೇಷೆ ಮತ್ತು ಪರಿಸರ ರಕ್ಷಣೆಯ ಬಗ್ಗೆ ಮತ್ತಷ್ಟು ಎಚ್ಚರಿಕೆ ಕ್ರಮ ತೆಗೆದುಕೊಳ್ಳಬೇಕಾಗಿದೆ. ಈ ಕುರಿತು ಪಂಚಾಯತ್ ಆಡಳಿತ ಹಾಗೂ ಕಾನೂನಿನ ವ್ಯವಸ್ಥೆಯಲ್ಲಿ ಬದಲಾವಣೆ ಮಾಡಬೇಕಾದ ಆವಶ್ಯಕತೆಯಿದೆ. ಸುರಕ್ಷಿತ ಭಾರತದ ನಿರ್ಮಾಣದ ಹೊಸ ರೂಪುರೇಷೆ ಬಹುಶಃ ಸುನಾಮಿ ದುರಂತದ ವರದಾನವಾಗಿ ಪರಿಣಮಿಸಬಹುದು.

ಸುನಾಮಿ ಮತ್ತು ಇನ್ನಿತರ ದುರಂತದ ಪುನರ್ವಸತಿಯ ಬಗ್ಗೆ ರಾಷ್ಟ್ರ, ರಾಜ್ಯ, ಜಿಲ್ಲೆ ಮತ್ತು ಪಂಚಾಯತ್ ಆಡಳಿತಕ್ಕೆ ಒಂದು ಹೊಸ ಸಾಂಸ್ಥಿಕ ಸ್ವರೂಪ ನೀಡುವ ಬಗ್ಗೆ ಚಿಂತನೆ ನಡೆಯಬೇಕು.