ವಿವಿಧ ಧರ್ಮೀಯರು ವಾಸಿಸುತ್ತಾರೆ ಎಂದ ಮಾತ್ರಕ್ಕೆ ಭಾರತ ಒಂದು ರಾಷ್ಟ್ರ ಅಲ್ಲ ಎನ್ನಲಾಗದು. ಬೇರೆ ದೇಶಗಳಿಂದ ಹೊಸಬರು ಬಂದರೆ ರಾಷ್ಟ್ರೀಯತೆ ನಷ್ಟವಾಗದು; ಬಂದವರು ಇವರಲ್ಲಿ ಬೆರೆತು ಹೋಗುತ್ತಾರೆ. ಆ ಸ್ಥಿತಿ ಬಂದಾಗಲೇ ಒಂದು ದೇಶ ರಾಷ್ಟ್ರ ವಾಗುತ್ತದೆ. ಆ ದೇಶಕ್ಕೆ ಹೊರಗಿನದನ್ನು ಜೀರ್ಣಿಸಿಕೊಳ್ಳುವ ಶಕ್ತಿ ಬೇಕು. ಭಾರತ ಯಾವಾಗಲೂ ಹೀಗೆಯೇ ಇದೆ. ಎಷ್ಟೋ ಧರ್ಮಗಳಿವೆ; ಆದರೆ ರಾಷ್ಟ್ರೀಯತೆಯ ಭಾವನೆಯುಳ್ಳವರು ಪರಸ್ಪರ ಧರ್ಮದಲ್ಲಿ ಕೈಹಾಕರು. ಹಾಗಲ್ಲದಿದರೆ ಅದೊಂದು ರಾಷ್ಟ್ರ ವಾಗಲು ಅರ್ಹವಲ್ಲ. ಭಾರತದಲ್ಲಿ ಬರೀ ಹಿಂದೂಗಳೇ ಇರಬೇಕು ಎಂದು ಯೋಚಿಸುವ ಹಿಂದೂಗಳು ಕನಸಿನ ರಾಜ್ಯದಲ್ಲಿದ್ದಾರೆ. ಈ ದೇಶವನ್ನು ತಮ್ಮದಾಗಿ ಮಾಡಿಕೊಂಡ ಹಿಂದೂ, ಮುಸಲ್ಮಾನ ಈಸಾಯಿ ಎಲ್ಲರೂ ದೇಶಬಾಂಧವರು. ತಮ್ಮ ತಮ್ಮ ಹಿತಕ್ಕಾಗಿ ಯಾದರೂ ಅವರು ಐಕ್ಯಮತ್ಯದಿಂದ ಬಾಳಬೇಕು. ಒಂದೇ ಧರ್ಮದ್ದೇ ಒಂದು ರಾಷ್ಟ್ರ ಎಂಬುದು ಲೋಕದಲ್ಲಿ ಎಲ್ಲಿಯೂ ಇಲ್ಲ; ಭಾರದಲ್ಲಿಯಂತೂ ಎಂದೂ ಹಾಗೆ ತಿಳಿದಿಲ್ಲ.

ಅನೇಕ ಕ್ರೌರ್ಯಗಳೆಲ್ಲಾ ಧರ್ಮದ ಹೆಸರಿನಲ್ಲಿಯೆ ಮಾಡಿದವುಗಳಾಗಿದ್ದರೂ ಅವಕ್ಕೂ ಧರ್ಮಕ್ಕೂ ಏನೂ ಸಂಬಂಧವಿಲ್ಲವೆಂಬುದು ಎಲ್ಲರಿಗೂ ಗೊತ್ತು. ಅಜ್ಞಾನಿಗಳೂ, ಭೋಳೆ ಜನರೂ ಇರುವವರೆಗೆ ಹೀಗೆಯೇ ಮುಂದುವರಿಯುತ್ತದೆ.

ಮನುಷ್ಯನಿಗೆ ಕರ್ತವ್ಯದ ದಾರಿ ತೋರಿಸುವ ಆಚಾರ-ವ್ಯವಹಾರವೇ ನಾಗರಿಕತೆ. ಕರ್ತವ್ಯ ಪಾಲನೆ ಮತ್ತು ನೀತಿಪಾಲನೆ ಒಂದೇ. ನೀತಿಪಾಲನೆಯೆಂದರೆ ಇಂದ್ರಿಯ ನಿಗ್ರಹ, ರಾಗದ್ವೇಷ ರಹಿತ ಸಂಯಮ. ಹಾಗೆ ನಡೆದರೆ ನಮ್ಮನ್ನು ನಾವು ಅರಿತುಕೊಳ್ಳುತ್ತೇವೆ. ಗುಜರಾತಿ ಭಾಷೆಯಲ್ಲಿ ನಾಗರಿಕತೆ ಎಂದರೆ ಒಳ್ಳೆಯ ನಡತೆ.

ಸಮಸ್ತ ಮಾನವ ಕಲ್ಯಾಣ ಮತ್ತು ಮಾನವ ಪ್ರಗತಿಗಳನ್ನು ಹೊತ್ತಿರುವ ಎರಡು ದೊಡ್ಡ ಆಧಾರಸ್ತಂಭಗಳೆಂದರೆ ಮೊದಲನೆಯದು ಧರ್ಮ ದೃಷ್ಟಿ, ಎರಡನೆಯದು ವೈಜ್ಞಾನಿಕ ದೃಷ್ಟಿ ಒಂದು ಮತ್ತೊಂದರ ನೆರವನ್ನು ಪಡೆಯದೆ ಪ್ರತ್ಯೇಕವಾಗಿ ವಿಶೇಷ ಪರಿಣಾಮ ಬೀರಲಾರದು. ಎರಡನೆಯದರ ಅಭಿವೃದ್ದಿಗಾಗಿ ವಿಶ್ವವಿದ್ಯಾನಿಲಯಗಳಿವೆ, ಸಂಶೋಧನ ಸಂಸ್ಥೆಗಳಿವೆ. ಆದರೆ ಯಾವುದೇ ವಿನಾಯತಿಲ್ಲದೆ ಪ್ರತಿಯೊಬ್ಬರಿಗೂ ಪರಮಾವಕಾಶ ಇರುವುದು ಮೊದಲನೆಯದರಲ್ಲಿ.

ಭಾರತೀಯ ಸಂಸ್ಕೃತಿ ಸಂಘರ್ಷ ಮತ್ತು ಸಮಾವೇಶಗಳ ಒಂದು ಅಪೂರ್ವ ಪ್ರಕ್ರಿಯೆ. ಇಲ್ಲಿ ಧರ್ಮವೂ ಒಂದು ಸೃಜನಾತ್ಮಕ ಕ್ರಿಯೆ. ಚಲನಶೀಲತೆ, ಅದರ ಮೂಲ ತಿರುಳು. ಪರಮತ ಸಹಿಷ್ಣುತೆ ಮತ್ತು ಸಹಬಾಳ್ವೆಯೇ ನಮ್ಮ ಧರ್ಮದ ಎರಡು ಗಾಲಿಗಳು. ವೈಚಾರಿಕ ಸ್ವಾತಂತ್ರ್ಯ, ಉಪಾಸನಾ ಸ್ವಾತಂತ್ರ್ಯ ದೇವರ ಅಸ್ತಿತ್ವನ್ನು ಕೂಡ ಪ್ರಶ್ನಿಸುವ, ತಿರಸ್ಕರಿಸುವ ಸ್ವಾತಂತ್ರ್ಯ, ದೈವನಿಂದನ ಸ್ವಾತಂತ್ರ್ಯ, ಆಸ್ತಿಕತೆ ಮತ್ತು ನಾಸ್ತಿಕತೆ ಸಮಾನಾಂತರವಾಗಿ ನಡೆದುಕೊಂಡು ಬಂದ ಗತಿವಿಧಾನ. ಇಂತಹ ವೈಶಾಲ್ಯ ಮತ್ತು ಹರವು ಆಗಿನಿಂದಲೇ ನಡೆದುಕೊಂಡು ಬಂದು ಭಾರತೀಯರ ವಿಕಾಸವಾದದ ದಾರಿಯಲ್ಲಿ ಮುನ್ನಡೆಸಿದೆ.

ಕೆಲವೊಮ್ಮೆ ‘ವಿಶ್ವವ್ಯಾಪಕವಾದದ್ದನ್ನು ಸಾಧಿಸಬೇಕು’ ಎಂಬ ಹೃದಯದ ಹಂಬಲವನ್ನು ಸಂಕುಚಿತವಾದ ಹಿಸುಕುತ್ತದೆ. ಈ ಸಮಸ್ಯೆಯನ್ನು ಉಪೇಕ್ಷಿಸಿದರೆ ಅಥವಾ ಪರಿಹರಿಸದೆ ಬಿಟ್ಟರೆ ಮಾನವನೇ ತನ್ನ ನಾಗರಿಕತೆ ಮತ್ತು ವಿಕಾಸದ ಫಲಗಳನ್ನು ತಾನೇ ನಾಶ ಮಾಡಿದಂತಾ ಗುತ್ತದೆ. ಈ ಮಧ್ಯೆ ಒಂದು ಮಾನಸಿಕ ತುಮುಲದಿಂದ ಮತ್ತೊಂದಕ್ಕೆ, ಒಂದು ದುಃಖದಿಂದ ಮತ್ತೊಂದಕ್ಕೆ ಚಲಿಸಬೇಕಾದ ಸ್ಥಿತಿ ಅವನದು. ಅವನ ನೈತಿಕ, ಆಧ್ಯಾತ್ಮಿಕ ಎಚ್ಚರವನ್ನು ತೀವ್ರಗೊಳಿಸುವುದೇ ಏಕೈಕ ಪರಿಹಾರ. ಪ್ರಾಚೀನ ಮಾನವನು ತನ್ನದೇ ರೀತಿಯಲ್ಲಿ ಜ್ಞಾನ ಪಡೆದುಕೊಂಡಾಗ ಭೌತಿಕ ಅಥವಾ ಜೈವಿಕ ವ್ಯಕ್ತಿತ್ವವೆಂಬುದು ಸಾಮಾಜಿಕ ವ್ಯಕ್ತಿತ್ವಕ್ಕೆ ಅವಕಾಶ ಮಾಡಿಕೊಟ್ಟಿತು. ಮಾನವನು ಸ್ವಾರ್ಥವನ್ನು ಮೀರುವವರೆಗೂ, ಜ್ಞಾನದಿಂದ ವಿವೇಕಕ್ಕೆ ಏರುವವರೆಗೂ, ಕ್ರಿಯಾತ್ಮಕವಾದ ವಿಕಾಸ ಅಸಾಧ್ಯ. ಪ್ರಕೃತಿಯನ್ನು ಮೀರಿ ಮೇಲೇಳಲು ಪ್ರಯತ್ನಿಸಿದಾಗ ಅವನು ಮಾನವನಾಗುತ್ತಾನೆ. ವಿಕಾಸವೇ ಬದುಕು; ಸಂಕೋಚವೇ ಮೃತ್ಯು.

ವಿಶ್ವದ ಅನೇಕ ನಾಗರಿಕತೆಗಳಿಗೂ ಭಾರತೀಯ ನಾಗರಿಕತೆಗೂ ಒಂದು ದೊಡ್ಡ ವ್ಯತ್ಯಾಸವಿದೆ. ಭಾರತೀಯ ನಾಗರಿಕತೆಯನ್ನು ಬಿಟ್ಟು ಉಳಿದವೆಲ್ಲಾ ಎಂದೋ ನಶಿಸಿ ಹೋಗಿವೆ. ಆಯಾ ಸ್ಥಳಗಳಲ್ಲಿ ವಾಸಿಸುವ ಜನರೂ ಅಲ್ಲಿನ ಸಂಸ್ಕೃತಿಗಳನ್ನು ಪಾಲಿಸುವುದಿಲ್ಲ ಮಾತ್ರವಲ್ಲ, ಆ ಸಂಸ್ಕೃತಿಗೂ ತಮಗೂ ಯಾವ ಸಂಬಂಧವೂ ಇಲ್ಲದವರಂತಿರುತ್ತಾರೆ. ಆದರೆ ಭಾರತದಲ್ಲಿ ಹಾಗಲ್ಲ. ಸಿಂಧೂ ಕಣಿವೆಯ ಪ್ರದೇಶದಲ್ಲಿ ದೊರಕಿದ ದೇವತಾ ಮೂರ್ತಿಗಳು ಇಂದೂ ಪೂಜಿಸಲ್ಪಡುತ್ತಿವೆ. ಐದು ಸಾವಿರ ವರ್ಷಗಳ ಹಿಂದೆ ಋಷಿಗಳು ಉಚ್ಚರಿಸಿಹೋದ ವೇದ ಮಂತ್ರಗಳನ್ನು ಇಲ್ಲಿಯ ಜನರು ಇಂದೂ ಪುನರುಚ್ಚರಿಸುತ್ತಾರೆ. ಅಂದರೆ ಇಲ್ಲಿಯ ನಾಗರಿಕತೆಗೆ ಭಂಗ ಬಂದಿಲ್ಲ. ಹಳೆಯ ಕಾಲದ ಪಾಂಡಿತ್ಯ ಅಭಿವ್ಯಕ್ತಿಯ ಹೊಸ ಮಾರ್ಗವನ್ನು ಆಯ್ದುಕೊಂಡದ್ದಕ್ಕೆ ಇದೊಂದು ನಿದರ್ಶನವಾಗಿದೆ.

ಇಂಗ್ಲಿಷ್ ಭಾಷೆಯ ಮಹಾನ್ ನಿಘಂಟುಕಾರ ಜಾನ್‌ಸನ್ ಕಟ್ಟುಪಾಡುಗಳನ್ನು ಸೂಚಿಸುವ ಸಂಸ್ಥೆಗಳು ನಿರುಪಯುಕ್ತವೆಂದು ತಿಳಿದಿದ್ದನು. ಬದಲಾಗದ ಭಾಷೆಗಳಿಲ್ಲ. ಹಾಗಾಗಿ ನಿಘಂಟುಕಾರನೊಬ್ಬ ತನ್ನ ಭಾಷೆಯನ್ನು ಮಲಿನಗೊಳಿಸುವುದನ್ನು ತಡೆಯು ತ್ತೇನೆನ್ನುವುದು, ಭಾಷೆಯ ಅಂತರ್ಗತ ಗುಣಗಳನ್ನು ಬದಲಾಯಿಸುತ್ತೇನೆನ್ನುವುದು, ಎಲ್ಲ ದೋಷಗಳಿಂದ ಮುಕ್ತಗೊಳಿಸುವೆನೆನ್ನುವುದು ಹುಚ್ಚುತನ. ಹಾಗಾಗಿ ಇಂಗ್ಲೆಂಡ್‌ನಲ್ಲಿ ಇಂಗ್ಲಿಷ್ ಭಾಷೆಗಾಗಿ ಯಾವುದೇ ಭಾಷಾ ಪರಿಷತ್ತು ಸ್ಥಾಪನೆಯಾಗಲಿಲ್ಲ. ಅನಂತರದ ಪ್ರಯತ್ನಗಳೂ ನೆಲೆಗಾಣಲಿಲ್ಲ. ಜನ ಭಾಷೆಯಲ್ಲಾಗುವ ಪರಿವರ್ತನೆಗಳನ್ನು ಎಷ್ಟೇ ವಿರೋಧಿಸಿದರೂ ಅವು ಸಂಭವಿಸುತ್ತಲೇ ಇರುತ್ತವೆ.

ಭಾಷೆಗೆ ಸಾಮಾಜಿಕ ಆಯಾಮವಿದೆ. ಸಮಾಜದಲ್ಲಿ ಸಂಭವಿಸುವ ಹಲವು ಪರಿವರ್ತನೆ ಗಳು ಭಾಷೆಯ ಮೇಲೂ ಪರಿಣಾಮ ಬೀರುತ್ತವೆ; ಭಾಷೆಯಲ್ಲಿ ಪರಿವರ್ತನೆಗಳನ್ನು ಉಂಟು ಮಾಡುತ್ತವೆ. ಸಮಾಜದ ಬದಲಾವಣೆಯನ್ನು ತಡೆಯುವುದು ಸಾಧ್ಯವಿಲ್ಲ. ತಡೆಯುವ ಯತ್ನಗಳು ನಿರರ್ಥಕ. ಆದರೆ ಬದಲಾವಣೆಗಳನ್ನು ಯೋಜಿತ ರೀತಿಯಲ್ಲಿ ನಿಯಂತ್ರಿಸ ಬಹುದು. ಅಂದರೆ ಪರೋಕ್ಷವಾಗಿ ಭಾಷಾ ಪರಿವರ್ತನೆಗೂ ನಿರ್ದಿಷ್ಟ ದಿಕ್ಕು ಒದಗಿ ಬಂದಂತಾಗುತ್ತದೆ. ಪ್ರತಿ ಭಾಷೆಯೂ ಆಯಾ ಭಾಷಿಕರ ಅಭಿವ್ಯಕ್ತಿಯ ಆವಶ್ಯಕತೆಗಳನ್ನು ಪೂರೈಸಲೆಂದೇ ರೂಪುಗೊಂಡಿದೆ. ಹಾಗಾಗಿ ಎಲ್ಲಾ ಭಾಷೆಗಳೂ ಈ ನಿಟ್ಟಿನಲ್ಲಿ ಸಮಾನ. ಅವುಗಳ ನಡುವೆ ತಾರತಮ್ಯ ಭಾವ ಸಲ್ಲದು.

ತಂತ್ರಜ್ಞಾನದ ಬೆಳವಣಿಗೆಯಲ್ಲಿ ಕೆಲವು ಭಾಷೆಗಳ ಬಳಕೆ ಹಾಗೂ ಅಳವಡಿಕೆಗೆ ವಿಶೇಷ ಅವಕಾಶ ಒದಗಿ ಬಂದುದರಿಂದ ಅವು ಹೆಚ್ಚು ಮುಂದುವರೆದಂತೆ ತೋರುತ್ತಿವೆ. ಉಳಿದ ಭಾಷೆಗಳು ಅವಕಾಶ ವಂಚಿತ ಸ್ಥಿತಿಯಲ್ಲಿವೆ. ಈ ವಿಪರ‍್ಯಾಸಕ್ಕೆ ಪರಿಹಾರ ಸುಲಭವಲ್ಲ, ತಂತ್ರಜ್ಞಾನದ ವಿಕಾಸವೇ ಒಂದು ನಿರ್ದಿಷ್ಟ ಭಾಷೆಯ ಲಕ್ಷಣಗಳೊಡನೆ ನಿಕಟ ಹೊಂದಾಣಿಕೆ ಪಡೆದಿದ್ದರೆ ಪರ‍್ಯಾಯ ತಂತ್ರಜ್ಞಾನವನ್ನು ರೂಪಿಸುವ ಮೂಲಕ ಮಾತ್ರ ಇತರ ಭಾಷೆಗಳಿಗೂ ಅವಕಾಶ ಕಲ್ಪಿಸಲು ಸಾಧ್ಯ.

ಸಂಸ್ಕೃತವನ್ನು ಗೀರ್ವಾಣ ಭಾಷೆಯೆಂದೂ, ದೇವಭಾಷೆಯೆಂದೂ ವಾದಿಸುವವರಿದ್ದಾರೆ. ಅದರಿಂದಾಗಿ ಭಾಷೆಗೆ ಪಾವಿತ್ರ್ಯ ಸಂದಿದೆಯೆಂದು ತಿಳಿಯುವರು. ಕ್ರೈಸ್ತರು ಲ್ಯಾಟಿನನ್ನು, ಮುಸ್ಲಿಮರು ಅರಾಬಿಕ್‌ನ್ನು, ಯಹೂದಿಗಳು ಹಿಬ್ರೂವನ್ನು ಧಾರ್ಮಿಕ ವಲಯದ ಉನ್ನತೀಕರಣ ಮತ್ತು ಪಾವಿತ್ರ್ಯವನ್ನು ಕಾಯ್ದುಕೊಳ್ಳಲು ಬಳಸುತ್ತಾರೆ. ಈ ಉನ್ನತ ಭಾಷೆಗಳನ್ನು ಕಲಿಯುವುದು, ಬರೆಯುವುದು, ಓದುವುದು, ಮಾತಾಡುವುದು ಸಮಾಜದ ಆಯ್ದ ಕೆಲವರ ಸ್ವತ್ತಾಗಿತ್ತು. ಈಗ ಇಂಥ ಕಟ್ಟುಪಾಡುಗಳಿಲ್ಲವಾದರೂ ಈ ಭಾಷೆಗಳಿಗೆ ಲಗತ್ತಾಗಿರುವ ಮಾನ್ಯತೆ, ಶ್ರೇಷ್ಠತೆಯ ಚೀಟಿ ಮಾತ್ರ ಇನ್ನೂ ಉಳಿದಿದೆ. ಸಂಸ್ಕೃತ ನಾಟಕಗಳನ್ನು ಓದಿದಾಗ ಅಲ್ಲಿ ರಾಜರು, ಬ್ರಾಹ್ಮಣರು ಮಾತ್ರ ಸಂಸ್ಕೃತದಲ್ಲಿ ಮಾತನಾಡು ವುದನ್ನು ನೋಡುತ್ತೇವೆ. ಉಳಿದ ಎಲ್ಲಾ ಸ್ತ್ರೀ ಪುರುಷರೂ ಪ್ರಾಕೃತದಲ್ಲಿ ಮಾತನಾಡಬೇಕು. ಮಂತ್ರಗಳ ಪಠಣದ ಹಕ್ಕು ಕೆಲವರಿಗೆ ಮಾತ್ರ. ಅಲ್ಲದೆ ಅದನ್ನು ಕೇಳುವ ಹಕ್ಕು ಎಲ್ಲರಿಗೂ ಇಲ್ಲ. ಇಂಥ ಪಾವಿತ್ರ್ಯದ ಕಟ್ಟುನಿಟ್ಟಿನ ಸ್ಥಿತಿ ಈಗ ಇಲ್ಲ.

ಭಾಷೆಗಳಲ್ಲಿ ಮೇಲು-ಕೀಳು ಎಂಬ ಭಾವನೆ ಸಾಮಾಜಿಕ-ರಾಜಕೀಯ ಪರಿಸ್ಥಿತಿಯ ಪರಿಣಾಮವಷ್ಟೆ. ಜರ‍್ಮನಿಯ ರಾಜ ಐದನೆಯ ಚಾರ್ಲ್ಸ್ (೧೫೧೯-೧೫೫೮) ಗಂಡಸರೊಡನೆ ಫ್ರೆಂಚ್, ಮಹಿಳೆಯರೊಂದಿಗೆ ಇಟಾಲಿಯನ್ ಬಳಸಿ ಸಂಭಾಷಿಸಿದರೆ, ದೇವರೊಡನೆ ಸ್ಪಾನಿಶ್‌ನಲ್ಲೂ ಕುದುರೆಗಳೊಡನೆ ಜರ‍್ಮನ್ ಭಾಷೆಯಲ್ಲೂ ಮಾತನಾಡುತ್ತಿದ್ದನಂತೆ. ಸ್ವರ್ಗದಲ್ಲಿ ಆದಮನು ಡೇನಿಶ್‌ನಲ್ಲೂ, ದೇವರು ಸ್ಪೀಡಿಶ್‌ನಲ್ಲೂ, ಸರ್ಪವು ಫ್ರೆಂಚ್‌ನಲ್ಲೂ ಮಾತನಾಡಿರುವುದಾಗಿ ಸ್ಪೀಡಿಶ್ ಲೇಖಕನೊಬ್ಬ ಬರೆದಿದ್ದಾನೆ. ಇಂಥ ಎಲ್ಲಾ ದಂತಕತೆಗಳೂ ಸಾಮಾಜಿಕ ಸಂದರ್ಭದ ಸೂಚನೆಗಳನ್ನು ನೀಡುತ್ತವೆಯೇ ಹೊರತು ಭಾಷೆಗಳಲ್ಲಿನ ಮೇಲು ಕೀಳನ್ನು ಸಾಬೀತುಪಡಿಸುವುದಿಲ್ಲ. ಚಾರಿತ್ರಿಕ ಕಾರಣಗಳಿಂದ ಕೆಲವು ಭಾಷೆಗಳು ವಿಶೇಷ ಅವಕಾಶ, ಸೌಲಭ್ಯಗಳನ್ನು ಪಡೆದು ಉಳಿದ ಭಾಷೆಗಳಿಗಿಂತ ಶ್ರೇಷ್ಠವೆಂಬ ಜನನಂಬಿಕೆಯ ಮನ್ನಣೆಯನ್ನು ಪಡೆದಿವೆ. ಆದರೆ ಈ ಶ್ರೇಷ್ಠತೆಯನ್ನು ನಿರ್ಧರಿಸಲು, ಗ್ರಹಿಸಲು ಭಾಷಾಶಾಸ್ತ್ರೀಯವಾದ ಯಾವ ಮಾನದಂಡವೂ ಲಭ್ಯವಿಲ್ಲ. ಆ ಕಾಲವನ್ನು ಮೆಟ್ಟಿ ನಾವು ಮುಂದೆ ಬಂದಿದ್ದೇವೆ ಎಂಬುದನ್ನು ಮರೆತಾಗ ಭಾಷೆ ಮೃತ ಪ್ರಾಯವಾಗುತ್ತದೆ. ಸಮಾಜ ಬಹುದೂರ ಸಾಗಿರುತ್ತದೆ.