ಭಾರತದ ಸಂವಿಧಾನ ಪರಿಷತ್ತು (Constitution Assembly) ಜಗತ್ತಿನ ಅತ್ಯಂತ ಬೃಹತ್ ಪ್ರಜಾಪ್ರಭುತ್ವ ಸಂವಿಧಾನದ ಪ್ರಕ್ರಿಯೆಯನ್ನು ೧೯೪೬ರಲ್ಲಿ ಪ್ರಾರಂಭಿಸಿ ೧೯೫೦ರಲ್ಲಿ ಸಮಗ್ರವಾದ ಸಂವಿಧಾನ ರೂಪಿಸಿತ್ತು. ಅಂದು ಬ್ರಿಟಿಷರಿಂದ ಅಧಿಕಾರ ಹಸ್ತಾಂತರದ ಸಂಕ್ರಾತಿ ಕಾಲದಲ್ಲಿ ಕಾಂಗ್ರೆಸ್ ಪಕ್ಷ ಮತ್ತು ಮುಸ್ಲಿಂಲೀಗ್ ಮಧ್ಯೆ ಭಿನ್ನಾಭಿಪ್ರಾಯ ಏರ್ಪಟ್ಟು ೧೯೪೭ ಆಗಸ್ಟ್ ೧೫ ರಂದು ರಾಷ್ಟ್ರ ಇಬ್ಭಾಗವಾಯಿತು. ಬಹುಶಃ ಸಂವಿಧಾನದ ಮೇಲೆ ರಾಷ್ಟ್ರ ವಿಭಜನೆ ಸಾಕಷ್ಟು ಪ್ರಭಾವ ಬೀರಿದೆ. ರಾಜ್ಯಗಳ ಸ್ವಾಯತ್ತತೆಯ ಭದ್ರಬುನಾದಿಯಲ್ಲಿ ಪ್ರಾರಂಭವಾದ ಸಂವಿಧಾನ ಸ್ವರೂಪ ಕೇಂದ್ರ ಸರ್ಕಾರಕ್ಕೆ ಹೆಚ್ಚಿನ ಅಧಿಕಾರವನ್ನು ನೀಡುವ ನಿರ್ಧಾರದಿಂದ ಅಂತ್ಯಗೊಂಡಿತು. ಭಾಷಾವಾರು ಪ್ರಾಂತ್ಯಗಳ ರಚನೆಯ ಮೂಲ ಉದ್ದೇಶ ತಡೆಹಿಡಿಯಲ್ಪಟ್ಟು ಯಥಾಸ್ಥಿತಿಯಲ್ಲಿ ರಾಷ್ಟ್ರ ರೂಪುಗೊಂಡಿತು. ೧೯೩೫ರ ಭಾರತ ಸರ್ಕಾರದ ಕಾಯಿದೆಯ ಆಧಾರದ ಯಥಾಸ್ಥಿತಿ ಅನುಸರಿಸಲಾಯಿತು. ಹಲವು ಸಂವಿಧಾನ ರಚನಾ ಸಮಿತಿಯ ಸದಸ್ಯರ ಪ್ರಕಾರ ಅದರಲ್ಲಿಯೂ ಕೆಂಗಲ್ ಹನುಮಂತಯ್ಯನವರ ಉದ್ಗಾರದ ಪ್ರಕಾರ “ನಮಗೆ ವೀಣೆಯ ಸಂಗೀತ ಬೇಕಿತ್ತು. ಆದರೆ ಇಂಗ್ಲಿಷ್ ಬ್ಯಾಂಡಿನ ಸಂಗೀತದಲ್ಲಿ ತೃಪ್ತಿಪಡಬೇಕಾಯಿತು. ಸರ್ವಪಳ್ಳಿ ರಾಧಾಕೃಷ್ಣನ್‌ರವರ ಪ್ರಕಾರ “ಭಾರತ ತನ್ನ ಸಾಮಾಜಿಕ ಮತ್ತು ಆರ್ಥಿಕ ಕ್ರಾಂತಿಯನ್ನು ಜನಸಾಮಾನ್ಯರ ಮೂಲಭೂತ ಆವಶ್ಯಕತೆಗಳ ಪೂರೈಕೆಯೊಂದಿಗೆ ಅನುಷ್ಠಾನಗೊಳಿಸಬೇಕಾಗಿದೆ. ಮೂಲ ಭೂತ ಬದಲಾವಣೆ ಭಾರತೀಯ ಸಮಾಜದಲ್ಲಿ ರೂಪುಗೊಳ್ಳಬೇಕಾಗಿದೆ”.

ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗದ ಒಟ್ಟು ರೂಪುರೇಷೆ ಸಾಮಾನ್ಯವಾಗಿ ಬ್ರಿಟಿಷ್ ಪಾರ್ಲಿಮೆಂಟ್ ಮತ್ತು ಆಡಳಿತ ಪರಿಕ್ರಮದ ನೆರಳಿನಲ್ಲಿಯೇ ರೂಪಿಸಲಾಗಿದೆ. ಜವಾಹರಲಾಲ್ ನೆಹರೂರವರು ಕಾರ್ಯಾಂಗದ ಬಗ್ಗೆ ಹೇಳುತ್ತಾ “ಕಾರ್ಯಾಂಗದ ದಂತಗೋಪುರದಲ್ಲಿರದೆ ಸಾಧನೆಯ ವಾಸ್ತವ ಪಥದಲ್ಲಿ ಸಂಚಲಿಸಬೇಕು. ನಿಯಮಗಳ ಜಂಜಾಟ ಮತ್ತು ತನ್ನ ವ್ಯವಸ್ಥೆಯ ಆತ್ಮರತಿಯಲ್ಲಿ ಮಗ್ನರಾಗದೆ ತನ್ನ ಉದ್ದೇಶಿತ ಸಾಧನೆಯ ಮುಖವಾಗಿ ಸಾಗಬೇಕು. ಜನಸಾಮಾನ್ಯರ ಕಲ್ಯಾಣದ ಬಗ್ಗೆ ತನ್ನನ್ನು ತಾನು ತೊಡಗಿಸಿಕೊಳ್ಳಬೇಕು”.

೧೯೩೧ರಲ್ಲಿ ಬ್ರಿಟಿಷರು ಕಾರ್ಯಾಂಗದ ಬಗ್ಗೆ ರೂಪಿಸಿದ ಮೂಲಭೂತ ನಿಯಮಗಳು ಇಂದಿಗೂ ಬದಲಾಗದೇ ಉಳಿದಿದೆ. ೮೪ ವರ್ಷ ಕಳೆದರೂ ೧೯೨೧ರ ನಿಯಮಗಳ ಭದ್ರಮುಷ್ಟಿಯಿಂದ ದೇಶದ ಆಡಳಿತ ವ್ಯವಸ್ಥೆ ಹೊರಬರಲಾಗಲಿಲ್ಲ. ಇದೊಂದು ವಸಾಹತುಶಾಹೀ ಬಿಗಿ ಮತ್ತು ನಿರಂಕುಶ ಪ್ರಭುತ್ವದ ಪೂರಕವಾಗಿ ಮಾಡಿದ ಸಿದ್ಧ ಭೂಮಿಕೆಯಾಗಿದೆ. ಅವರ ಆಡಳಿತದ ಕೊಂಡಿ ನಿರಂತರತೆಯನ್ನು ಉಳಿಸಿಕೊಂಡು ಬರುವುದೇ ಮೂಲ ಉದ್ದೇಶವಾಗಿತ್ತು. ದೇಶದಲ್ಲಿರುವ ಜಾತಿ, ವರ್ಣ, ಸಂಘರ್ಷದ ಇನ್ನೊಂದು ಸ್ವರೂಪ ಬ್ರಿಟಿಷರು ಬಿಟ್ಟುಹೋದ ಭೇದಪ್ರಭೇದಗಳನ್ನು ಹುಟ್ಟುಹಾಕಿದ ಕಾರ್ಯಾಂಗ ಕ್ಷೇತ್ರವಾಗಿದೆ. ಇದೊಂದು ಊಳಿಗಮಾನ್ಯ ಪದ್ಧತಿಯ ಮೇಲೆ ನಿಂತ ವ್ಯವಸ್ಥೆಯಾಗಿದೆ. ಕೆಳಗಿನಿಂದ ಮೇಲಿನ ತನಕ ಒಂದು ರೀತಿಯ ತಾರತಮ್ಯ ಮತ್ತು ವ್ಯತ್ಯಾಸದ ಪಿರಾಮಿಡ್‌ನಂತೆ ಕಾರ್ಯಾಂಗ ರಚಿಸಲಾಗಿತ್ತು. ಸಿವಿಲ್ ಸರ್ವಿಸಸ್ ಅಂದರೆ IAS, IPS, IFS ಕೇಂದ್ರೀಯ ಸೇವೆಯ ಶೇ. ೧.೫ರಷ್ಟು ಇದ್ದರೂ ಗ್ರೂಪ್-A ಸರ್ವಿಸರ್ಸ್‌ನ ಶೇ. ೧೦ರಷ್ಟು IAS ಹುದ್ದೆ ಕಡಿಮೆಯಿದ್ದರೂ ವಸಾಹತುಶಾಹಿ ಪ್ರತಿನಿಧಿಗಳಂತೆ ಜನಸಂವಹನ ಮತ್ತು ಸ್ಪಂದನದಿಂದ ಹೊರತಾದ ವ್ಯವಸ್ಥೆಯ ಪಳೆಯುಳಿಕೆಗಳು ಮುಂದುವರಿದುಕೊಂಡು ಬಂದಿದೆ. ಈ ವ್ಯವಸ್ಥೆಯ ಆಮೂಲಾಗ್ರವಾದ ಬದಲಾವಣೆ ಆಗದೇ ಇದ್ದರೆ, ದಕ್ಷತೆ ಮಾನದಂಡ ವಾಗದೇ ಇದ್ದರೆ, ಪಾರದರ್ಶಕತೆ ಮತ್ತು ನೈಜವಾದ ಗುರಿ ಅದರ ಅವಿಭಾಜ್ಯ ಅಂಗ ವಾಗದಿದ್ದರೆ ಕಾರ್ಯಾಂಗ, ಶಾಸಕಾಂಗ ಮತ್ತು ನ್ಯಾಯಾಂಗದ ಭಿನ್ನಾಭಿಪ್ರಾಯ ಮತ್ತು ಸಂಘರ್ಷಕ್ಕೆ ಪ್ರಧಾನ ಕಾರಣವಾಗುತ್ತದೆ. ಶಾಸಕಾಂಗ ಮತ್ತು ಕಾರ್ಯಾಂಗ ನಿರ್ವಹಿಸಬೇಕಾದ ಕರ್ತವ್ಯವನ್ನು ನ್ಯಾಯಾಂಗವೇ ನಿರ್ವಹಿಸಿದ ಪ್ರಸಂಗಗಳು ಅನೇಕ ಬಾರಿ ಬಂದಿದೆ. ಅದರಲ್ಲಿ ಮುಖ್ಯವಾಗಿ – ವೃತ್ತಿಪರ ಮತ್ತು ಉನ್ನತ ಶಿಕ್ಷಣದ ಬಗ್ಗೆ ನ್ಯಾಯಾಂಗ ರೂಪಿಸುತ್ತಿರುವ ನೀತಿ-ಬದಲಾಗುತ್ತಿರುವ ವಿಧಾನಗಳು, ಪರಸ್ಪರ ಪ್ರಧಾನ ನದಿಗಳ ಜೋಡಣೆ, ಏಕರೂಪದ ಸಾಮಾಜಿಕ ಮತ್ತು ಕೌಟುಂಬಿಕ ನ್ಯಾಯ ವಿಧಾನಗಳು ಇತ್ಯಾದಿ ಇತ್ಯಾದಿ.

ಒಳ್ಳೆಯ ಆಡಳಿತ ಪರಿಕ್ರಮ ಮತ್ತು ಸಮಾಧಾನಕರವಾದ ನೀತಿ ನಿರೂಪಣೆಯಿಂದ ಮಾತ್ರ ರಾಷ್ಟ್ರ ವಿಕಸನವಾಗಲು ಮತ್ತು ಪ್ರಗತಿಯನ್ನು ಕಾಣಲು ಸಾಧ್ಯವಿಲ್ಲ. ನವೀನ ಮತ್ತು ಆಧುನಿಕ ಹೊಸ ತಂತ್ರ ವಿಧಾನಗಳಿಂದ ಆಡಳಿತ ಚುರುಕುಗೊಂಡಾಗ ಮಾತ್ರ ತನ್ನ ಗುರಿ ಸಾಧಿಸಲು ಸಾಧ್ಯವಿದೆ.

ಜಾಗತಿಕ ಸ್ವರೂಪವನ್ನು ಪಡೆದ ಜಾಗತಿಕ ಹೆದ್ದಾರಿಯಲ್ಲಿರುವ ಭಾರತ, ಜಾಗತಿಕ ಔನ್ನತ್ಯದ ಆಡಳಿತ ಪರಿಕ್ರಮವನ್ನು ಅನುಸರಿಸುವುದು ಅನಿವಾರ‍್ಯ. ಬ್ರಿಟಿಷ್ ಕಾಲದ ಪ್ರಜಾಪ್ರಭುತ್ವ ವಿರೋಧಿ ಆಡಳಿತ ಪರಿಕ್ರಮದ ಪಳೆಯುಳಿಕೆಗಳನ್ನು ಉಳಿಸಿ ಅದರ ಪ್ರಭಾವ ದಿಂದ ಉಂಟಾದ ಶೋಷಣೆಯ ನೆರಳಿನಿಂದ ಆಡಳಿತ ಮುಂದುವರಿದರೆ ಭಾರತ ತನ್ನ ಜಾಗತಿಕ ಓಟದಲ್ಲಿ ಸೋಲನ್ನು ಅನುಭವಿಸಬೇಕಾಗುತ್ತದೆ. ವಸಾಹತುಶಾಹಿ ಆಡಳಿತೆಯ ಪ್ರಭುತ್ವದ, ‘ಆಳುವವರು ಮತ್ತು ಆಳಲ್ಪಡುವವರು, ಸರ್ಕಾರ ಮತ್ತು ಜನತೆ, ನಮ್ಮವರು ತಮ್ಮ ಇತರರು’ ಎಂಬ ಮನೋಭೂಮಿಕೆ ಬದಲಾವಣೆಯಾಗದಿದ್ದರೆ ಆಡಳಿತ ಪ್ರಜಾ ಪ್ರಭುತ್ವವಾದೀ ಮತ್ತು ಜನಪರ ಆಡಳಿತವಾಗಿ ಪರಿವರ್ತನೆಯಾಗುವುದಿಲ್ಲ. ಪಾರದರ್ಶಕತೆ ಮತ್ತು ಮುಕ್ತ ಮನೋಭೂಮಿಕೆಯ ಆಡಳಿತ ಪರಿಕ್ರಮ ನಾಗರಿಕ ಸಂವಹನ ಮತ್ತು ಜವಾಬ್ದಾರಿ ನಿರ್ವಹಣೆಯಿಂದ ಸ್ಪಂದಿಸಬೇಕು. ವಿಜ್ಞಾನ ಮತ್ತು ಆಧುನಿಕ ತಂತ್ರ  ಆಡಳಿತದ ಆಯುಧವಾಗಬೇಕು. ಇಂದಿನ ಜಗತ್ತು ಸಿದ್ಧಾಂತಗಳಿಂದಲ್ಲ ತಂತ್ರ ಮತ್ತು ವಿಜ್ಞಾನದಿಂದ ವರ್ಗೀಕರಿಸಲ್ಪಟ್ಟಿದೆ. ಅದಕ್ಕಾಗಿಯೇ ಅತಿಸಣ್ಣ ಪ್ರಮಾಣದ ಕೆಲವು ರಾಷ್ಟ್ರಗಳು ಅಂದರೆ ಜಗತ್ತಿನ ಶೇ. ೧೫ರಷ್ಟು ಜನಸಂಖ್ಯೆಯ ರಾಷ್ಟ್ರಗಳು ಜಗತ್ತಿನ ವಿಜ್ಞಾನ ಮತ್ತು ತಂತ್ರಗಾರಿಕೆಯ ನವವಿಧಾನಗಳ ಹತೋಟಿಯನ್ನು ಕೈವಶಪಡಿಸಿದೆ. ಭಾರತದಂತಹ ರಾಷ್ಟ್ರ ಇಂತಹ ಜಾಗತಿಕ ಓಟದಲ್ಲಿ ಸಮನಾದ ಸ್ಥಾನ ಪಡೆಯದಿದ್ದರೆ ಪ್ರಗತಿ ಕುಂಠಿತವಾಗುತ್ತದೆ.

ಸರ್ಕಾರ ಆಡಳಿತದಲ್ಲಿ ಮಹಿಳೆಯ ಸ್ಥಾನ ಅತ್ಯಂತ ಕನಿಷ್ಠ ಮಟ್ಟವನ್ನು ಪಡೆದಿದೆ. ರಾಷ್ಟ್ರಮಟ್ಟದಲ್ಲಿ ಶೇ. ೮ರಷ್ಟು ಕೂಡ ಮಹಿಳೆಯರು ಪ್ರಾತಿನಿಧ್ಯ ಪಡೆದಿಲ್ಲ. ರಾಷ್ಟ್ರಮಟ್ಟ ದಲ್ಲಿ ಇವರು ಶೇ. ೧೪.೪೭ರಷ್ಟು ಪ್ರಾತಿನಿಧ್ಯ ಪಡೆದಿದ್ದಾರೆ. ಆ ಮಟ್ಟಿಗೆ ದಕ್ಷಿಣ ಭಾರತದ ರಾಜ್ಯಗಳಲ್ಲಿ ಅಂದರೆ ಕೇರಳದಲ್ಲಿ ಶೇ. ೬೨ರಷ್ಟು ಮತ್ತು ಕರ್ನಾಟಕದಲ್ಲಿ ಶೇ. ೩೭ರಷ್ಟು ಪ್ರಾತಿನಿಧ್ಯ ಸರ್ಕಾರಿ ಸೇವೆಯಲ್ಲಿ ಮಹಿಳೆಯರು ಪಡೆದಿದ್ದಾರೆ. ಅತ್ಯಂತ ದುರಂತದ ವಿಚಾರವೆಂದರೆ ಉತ್ತರಪ್ರದೇಶದ ಕಾರ್ಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. ೨.೪೪ ರಷ್ಟು ಮಾತ್ರ. ಕೇಂದ್ರ ಸರ್ಕಾರಿ ಉದ್ಯಮಗಳಲ್ಲಿ ಮಹಿಳೆಯರ ಪ್ರಾತಿನಿಧ್ಯ ಶೇ. ೭.೬ರಷ್ಟು ಮಾತ್ರವಿದೆ. ಇಂತಹ ಅಸಮತೋಲನ ರಾಷ್ಟ್ರದ ಒಟ್ಟು ಕಾರ್ಯಾಂಗದ ವ್ಯವಸ್ಥೆಯನ್ನು ಅಸ್ತವ್ಯಸ್ತ ಮಾಡುತ್ತದೆ.

ಶಾಸಕಾಂಗ ಎಷ್ಟೇ ಜನಪರ ಧೋರಣೆಗಳನ್ನು ಕೈಗೊಂಡರೂ ಕಾರ್ಯಾಂಗ ಅದನ್ನು ಅನುಷ್ಠಾನ ಮಾಡದಿದ್ದರೆ ಅಥವಾ ವಿಳಂಬವಾದಲ್ಲಿ ವಿವಿಧ ರೀತಿಯ ಪೀಡನೆ, ಭ್ರಷ್ಟಾಚಾರ ತಲೆಹಾಕುತ್ತದೆ. Transparency International India ಮಾಡಿದ ಅಧ್ಯಯನ ಪ್ರಕಾರ ಪ್ರತಿವರ್ಷ ಸುಮಾರು ೨೧,೦೬೮ ಕೋಟಿ ರೂಪಾಯಿಗಳು ಭ್ರಷ್ಟಾಚಾರದ ಮೂಲಕ ಜನ ಕಷ್ಟ ನಷ್ಟವನ್ನು ಅನುಭವಿಸುತ್ತಿದ್ದಾರೆ. ಕರ್ನಾಟಕ ಕೂಡ ಭ್ರಷ್ಟಾಚಾರದಲ್ಲಿ ದೇಶದಲ್ಲೇ ನಾಲ್ಕನೇ ಸ್ಥಾನ ಪಡೆದಿರುವ ವಿಪರ್ಯಾಸದ ಪರಿಸ್ಥಿತಿ ಉದ್ಭವಿಸಿದೆ.

ಜಾಗತಿಕ ಸಾರ್ವಜನಿಕ Global Public Goods ಎಂಬ UNO ಸಂಸ್ಥೆಯ ವರದಿ ಪ್ರಕಾರ “೨೧ನೇ ಶತಮಾನದ ಬದುಕು ಹೊಸ ಪರಿವರ್ತನೆಯನ್ನು ತಮ್ಮ ಜೀವನದಲ್ಲಿ ಅಳವಡಿಸುವುದರಲ್ಲಿ ಪರಸ್ಪರ ಅಹಿತಕರ ಸ್ಪರ್ಧೆಯನ್ನು ಬಿಟ್ಟು ತಿಳುವಳಿಕೆ ಮತ್ತು ಮಾನವೀಯ ಸೌಹಾರ್ದ, ಸಹಕಾರಗಳಲ್ಲಿ ಬದುಕುವುದೇ ಆಗಿದೆ. ಪ್ರಮುಖ ಮಾನವೀಯ ಅನುಭವದ ಪ್ರಕಾರ ನಿರ್ಲಕ್ಷಿಸಲ್ಪಟ್ಟ ಸಹಬಾಳ್ವೆಯ ಸಿದ್ಧಾಂತ ಕಲಿಯುವುದೇ ಇಂದಿನ ಜಾಗತಿಕ ಬದುಕಿನ ಸಿದ್ಧಾಂತವಾಗಬೇಕು. ಆಯಾಯ ರಾಷ್ಟ್ರಗಳ ಸಮುದಾಯದ ಬದುಕಿನಲ್ಲಿ ಕೂಡ ಈ ಸೂತ್ರ ಅನುಸರಿಸಿದಾಗ ಅನೇಕ ಸಂಘರ್ಷ ಮತ್ತು ಕ್ಷೋಭೆರಹಿತ ಜೀವನ ನಡೆಸಲು ಸಾಧ್ಯವಿದೆ”. ಶಾಸಕಾಂಗ, ಕಾರ್ಯಾಂಗ ಮತ್ತು ನ್ಯಾಯಾಂಗ ತನ್ನ ತನ್ನ ಕಾರ್ಯ ಕ್ಷೇತ್ರಗಳಿಗೆ ಸೀಮಿತಗೊಳಿಸಿಕೊಂಡಾಗ ಸಮಾಜದ ನೆಮ್ಮದಿ ಸ್ಥಿರಪಡಿಸಲು ಸಾಧ್ಯವಿದೆ. ಈ ಮೂರೂ ಪ್ರಜಾಪ್ರಭುತ್ವದ ಸಂವಿಧಾನದ ಪ್ರಮುಖ ಅಂಗಗಳು ಶಿಥಿಲವಾದಾಗ ಪ್ರಜಾಪ್ರಭುತ್ವ ಅಸ್ಥಿರವಾಗುತ್ತದೆ. ಸಮುದಾಯದ ನೆಮ್ಮದಿ ಕೂಡ ಕೆಡುತ್ತದೆ. ಕಾರ್ಯಾಂಗದ ಜಡತ್ವ ಶಾಸಕಾಂಗದ ಮೇಲಿನ ಜನರ ವಿಶ್ವಾಸವನ್ನು ಶಿಥಿಲಗೊಳಿಸಬಹುದು. ಅದೇ ಪ್ರಕಾರ ನ್ಯಾಯಾಂಗದ ಜವಾಬ್ದಾರಿ ಮತ್ತು ಪಾತ್ರವನ್ನು ಹೆಚ್ಚಿಸಿ ಶಾಸಕಾಂಗ ಮತ್ತು ನ್ಯಾಯಾಂಗದ ಸಂಘರ್ಷದಲ್ಲಿ ಕೊನೆಗಾಣಬಹುದು. ಇದನ್ನು ತಪ್ಪಿಸುವ ಜವಾಬ್ದಾರಿ ಕಾರ್ಯಾಂಗದ ಕಾರ್ಯಕ್ಷಮತೆ, ದಕ್ಷತೆ, ಸಂವಹನ, ಸ್ಪಂದನ, ಪಾರದರ್ಶಕತೆಯನ್ನು ಹೊಂದಿರುತ್ತದೆ.