೧೧ನೇ ಸೆಪ್ಟೆಂಬರ್ ೧೯೦೬ ಭಾರತ, ಅಮೇರಿಕ ಜಗತ್ತಿನ ಇತಿಹಾಸದಲ್ಲಿ ಎಂದೂ ಮರೆಯಲಾಗದ ದಿವಸ. ೧೧ನೇ ಸೆಪ್ಟೆಂಬರ್ ೧೯೦೬ರಲ್ಲಿ ಸುಮಾರು ಸಾವಿರ ಮಂದಿ ದಕ್ಷಿಣ ಆಫ್ರಿಕಾದ ಜೊಹಾನ್ಸ್‌ಬರ್ಗ್‌ನ ಇಂಪೀರಿಯಲ್ ಥಿಯೇಟರ್‌ನಲ್ಲಿ ಸಭೆ ಸೇರಿದರು. ಸೇಠ್ ಹಾಜಿ ಅಬೀಬ್ ಆ ಸಭೆಯನ್ನು ಉದ್ದೇಶಿಸಿ ಮಾತನಾಡಿದರು. ಮೋಹನ್‌ದಾಸ್ ಕರಮಚಂದ ಗಾಂಧಿ ವೇದಿಕೆಯ ಮೇಲಿದ್ದರು. ಆ ಸಭೆಯನ್ನು ಗಾಂಧೀಜಿ ಯವರು ಕರೆದಿದ್ದರು. ಈ ಸಭೆಯಲ್ಲಿ ಬ್ರಿಟಿಷ್ ಸರ್ಕಾರ ಆಗಸ್ಟ್ ೨೨, ೧೯೦೬ ರಂದು ಒಂದು ಸುಗ್ರೀವಾಜ್ಞೆಯನ್ನು ಹೊರಡಿಸುವ ಧೋರಣೆಯನ್ನು ಪ್ರಕಟಿಸಿದ್ದರು. ಅದರ ಪ್ರಕಾರ ಭಾರತೀಯರು ಸೇರಿ ಬ್ರಿಟಿಷ್ ಆಡಳಿತೆಯಲ್ಲಿ ತಮ್ಮ ಹೆಸರನ್ನು ನೊಂದಾಯಿಸಬೇಕೆಂದು ಹೆಬ್ಬೆಟ್ಟಿನ ಗುರುತು ಮತ್ತು ಬ್ರಿಟಿಷ್ ಅಧಿಕಾರಿಗಳು ಕೊಟ್ಟ ಸರ್ಟಿಫಿಕೇಟನ್ನು ದಕ್ಷಿಣ ಆಫ್ರಿಕಾದಲ್ಲಿ ತಿರುಗಾಡುವಾಗ ತಮ್ಮ ಜೊತೆಯಲ್ಲಿ ಒಯ್ಯಬೇಕೆಂದು ಆಜ್ಞಾಪಿಸಿದ್ದರು. ಯಾರು ಈ ನಿಯಮಗಳನ್ನು ಪಾಲಿಸುವುದಿಲ್ಲವೋ ದೇಶದಲ್ಲಿರುವ, ವಾಸ ಮಾಡುವ ಅಧಿಕಾರವನ್ನು ಕಳೆದುಕೊಳ್ಳಬೇಕಾಗುತ್ತದೆ ಮತ್ತು ಸೆರೆಮನೆ ವಾಸವನ್ನು ಅನುಭವಿಸಬೇಕಾಗುವುದು ಅಥವಾ ಗಡಿಪಾರು ಆಜ್ಞೆಯನ್ನು ಎದುರಿಸಬೇಕಾಗುತ್ತದೆ. ಇದರಿಂದ ಟ್ರಾನ್ಸ್ ವಾಲ್ ಭಾರತೀಯ ಹಿಂದೂ ಮತ್ತು ಮುಸ್ಲಿಂ ಜನಾಂಗ ಕೆಣಕಲ್ಪಟ್ಟಿತು.  ಮೋಹನದಾಸ್ ಕರಮಚಂದ ಗಾಂಧಿಯವರು ಈ ಬಗ್ಗೆ ವಿರೋಧಿಸಬೇಕೆಂದು ಆಗ್ರಹ ಪಡಿಸಿದರು.

ಮೋಹನ್‌ದಾಸ್ ಕರಮಚಂದ ಗಾಂಧಿಯವರ ಹತ್ತಿರದ ಸಂಬಂಧಿಯಾದ ಮದನಲಾಲ್ ಗಾಂಧಿಯವರು ಇಂತಹ ಜನವಿರೋಧಿ ನೀತಿಗೆ ‘ಸದಾಗ್ರಹ’ ಚಳುವಳಿಯಾಗುತ್ತದೆಂದು ವ್ಯಾಖ್ಯಾನ ನೀಡಿದರು. ಆದರೆ ಮೋಹನದಾಸ್ ಕರಮಚಂದ ಗಾಂಧಿಯವರು ಇದನ್ನು ‘ಸತ್ಯಾಗ್ರಹ’ವೆಂದು ಕರೆದರು. ಒಂದು ಉದ್ದೇಶದ ಸಾಧನೆಗೆ ಸ್ಥಿರವಾದ ಧೋರಣೆಯನ್ನು ವಿರೋಧಿಸಿ ಸಮುದಾಯದ ವಿರೋಧವನ್ನು ಅನ್ಯಾಯದ ವಿರುದ್ಧ ಮಾಡುವುದೇ ಸತ್ಯಾಗ್ರಹದ ಮುಖ್ಯ ಧೋರಣೆ ಎಂದರು. ಸತ್ಯ ಮತ್ತು ಅದನ್ನು ಆಗ್ರಹಪಡಿಸುವುದೇ ಒಂದು ಶಕ್ತಿ. ಸತ್ಯಾಗ್ರಹವೆಂದರೆ ಸತ್ಯದ ಆಗ್ರಹ ಮತ್ತು ಸತ್ಯ ಮತ್ತು ಪ್ರೀತಿಯೇ ಆತ್ಮದ ಸಂಕೇತ. ಮೋಹನದಾಸ್ ಕರಮಚಂದ ಗಾಂಧಿಯವರ ಗುರಿಯೇ ಸತ್ಯಾಗ್ರಹವಾಗಿತ್ತು. ಈ ಬಗ್ಗೆ ಸುಭದ್ರವಾದ ಧೋರಣೆ ಮಾತ್ರವಲ್ಲದೆ ಒಬ್ಬ ಕ್ರೂರಿಯ ಧೋರಣೆಯಲ್ಲ, ಬದಲಾಗಿ ದೇವರ ಸೂರ್ಯಕಿರಣದಂತಹ ಸತ್ಯ. ಸತ್ಯವನ್ನು ಸಾಧಿಸುವುದು ವೈರಿಗೆ ನೋವನ್ನುಂಟು ಮಾಡಿ ಅಲ್ಲ, ಆದರೆ ತಾನೇ ಆ ನೋವನ್ನು ಅನುಭವಿಸಿ ಸ್ವಯಂ ಆಯುಧದಿಂದ ಸಜ್ಜುಗೊಳ್ಳುವುದೇ ಸತ್ಯಾಗ್ರಹಿಯ ಅಂತಃಶಕ್ತಿಯ ಬಲ.

ಸತ್ಯಾಗ್ರಹ ಶಾಂತಿಯುತ. ವಿರೋಧಿಯ ಮನಸ್ಸನ್ನು ಪ್ರಾಮಾಣಿಕತೆ, ಸರಳತೆ ಮತ್ತು ಪಾವಿತ್ರ್ಯದಿಂದ ಗೆಲ್ಲುವುದೇ ಇದರ ಗುರಿ. ವಿರೋಧಿಯನ್ನು ತಪ್ಪು ಹಾದಿಯಿಂದ ತಪ್ಪಿಸಿ ಸಹನೆ ಮತ್ತು ಅನುಕಂಪದಿಂದ ಗೆಲ್ಲುವುದೇ ಇದರ ಒಳಮರ್ಮ. ಒಬ್ಬನನ್ನು ದಮನಿಸಿ ಅಲ್ಲ, ಬದಲಾಗಿ ಪರಿವರ್ತನೆಯಿಂದ. ಕಣ್ಣಿಗೆ ಕಣ್ಣು ಅಥವಾ ಎಲ್ಲರನ್ನೂ ಅಂಧರನ್ನಾಗಿ ಮಾಡುವ ತತ್ವಕ್ಕೆ ಬದ್ಧ ವಿರೋಧ.

ಒಬ್ಬನ ಮನಸ್ಸನ್ನು ಹೊಸ ಚಿಂತನೆಯ ಮೂಲಕ ಬದಲಾಯಿಸುವುದೇ ಹೊರತು ತಲೆ ಕಡಿದು ಅಥವಾ ಚೂರಿಯಿಂದ ಇರಿದು ಹೊಸ ಸ್ಫೂರ್ತಿಯನ್ನು ತಡೆಯುವದಲ್ಲ – ಹಿಂಸಾ ಕೃತ್ಯಗಳ ಮೂಲಕ ಕ್ರೌರ್ಯ ವರ್ಧಿಸುತ್ತದೆಯೇ ಹೊರತು ಕಡಿಮೆಯಾಗುವುದಿಲ್ಲ. ಸತ್ಯಾಗ್ರಹ ಇದನ್ನು ಸಮಚಿತ್ತತೆ ಮತ್ತು ಸಮಾಧಾನದಿಂದ ಬಗೆ ಹರಿಸುತ್ತದೆ.

ಮೋಹನದಾಸ್ ಕರಮಚಂದ ಗಾಂಧಿಯವರು ಸತ್ಯ ಮತ್ತು ಅಹಿಂಸೆಗಳ ಮೂಲಕ ಪ್ರಯೋಗಿಸಿದ ಸತ್ಯಾಗ್ರಹ ತತ್ವದ ಮೂಲಕವೇ ಮಹಾತ್ಮಾಗಾಂಧೀಜಿ ಎನಿಸಿದರು. ಸೆಪ್ಟೆಂಬರ್ ೧೧, ೧೯೦೬ರಿಂದ ತನ್ನ ಕೊನೆಯುಸಿರು ಬಿಡುವವರೆಗೂ ಅಂದರೆ ಒಬ್ಬ ಮತಾಂಧ ಹಂತಕನ ಗುಂಡಿಗೆ ಬಲಿಯಾದಾಗಲೂ ತನ್ನ ಅಹಿಂಸೆಯನ್ನು ಕೈಬಿಡಲಿಲ್ಲ. ಮಹಾತ್ಮಾ ಗಾಂಧೀಜಿಯವರಂದಂತೆ: ‘ಸತ್ಯಾಗ್ರಹಿಯೊಬ್ಬ ಭಯಕ್ಕೆ ವಿದಾಯವನ್ನು ಕೋರುತ್ತಾನೆ, ವಿರೋಧಿಯನ್ನು ನಂಬುವುದರಲ್ಲಿ ಅವನಿಗೆ ಒಬ್ಬ ವೈರಿ ತನಗೆ ಇಪ್ಪತ್ತು ಸಾರಿ ಸುಳ್ಳು ಹೇಳಿದರೂ ಸತ್ಯಾಗ್ರಹಿ ಇಪ್ಪತ್ತೊಂದನೇ ಬಾರಿಯೂ ಅವನನ್ನು ನಂಬುತ್ತಾನೆ. ಮಾನವನ ಸ್ವಭಾವದಲ್ಲಿ ಪೂರ್ತಿ ನಂಬಿಕೆಯಿಡುವುದೇ ಸತ್ಯಾಗ್ರಹ ಸಿದ್ಧಾಂತದ ಪ್ರಮುಖ ತಿರುಳು’. ಇಂತಹ ಸತ್ಯಾಗ್ರಹದ ದಿವ್ಯ ಮತ್ತು ಮಹಾನ್ ತತ್ವವನ್ನು ಭವಿಷ್ಯಕ್ಕೆ ಗಾಂಧೀಜಿ ಯವರು ನೀಡಿದರು.

ಮಹಾತ್ಮಾಗಾಂಧೀಜಿಯವರು ತಾನುಚ್ಚರಿಸುವ ಶಬ್ದ ಮತ್ತು ಚಿಂತನೆಗಳನ್ನು ಗಂಭೀರವಾಗಿಯೇ ತೆಗೆದುಕೊಳ್ಳುತ್ತಿದ್ದರು. ಅವರ ಅಭಿಪ್ರಾಯ ವಿರೋಧಗೊಂಡಾಗ ಅಥವಾ ಒಂದು ಚಿಂತನೆಯನ್ನು ತತ್ವವನ್ನು ಸ್ವೀಕರಿಸಿದ ಮೇಲೆ ಅದನ್ನು ಕ್ರಿಯಾತ್ಮಕವಾಗಿ ಪ್ರಯೋಗಿಸದಿರುವುದೇ ಅಪ್ರಾಮಾಣಿಕತೆ. ಗಾಂಧೀಜಿಯವರು ಸದಾ ತನ್ನನ್ನು ತಾನೇ ಪ್ರಶ್ನಿಸುತ್ತಿದ್ದರು. ‘ನೈತಿಕ ಮತ್ತು ಮತೀಯ ಸಿದ್ಧಾಂತಗಳನ್ನು ತನ್ನ ದಿನನಿತ್ಯದ ಜೀವನದಲ್ಲಿ ಪ್ರಯೋಗಿಸದೆ ಆ ತತ್ವವನ್ನು ನಂಬುವುದೆಂದರೆ ಹೇಗೆ? ಶಬ್ದ ಅಥವಾ ಚಿಂತನೆ ಮತ್ತು ನಂಬಿಕೆಯ ಮಧ್ಯೆ ಅಂತರವಿರುವುದು ಅಸತ್ಯದ ಪ್ರತೀಕ’. ಜಗತ್ತಿನ ನಾಗರಿಕತೆಗಳ ದೊಡ್ಡ ಲೋಪವೆಂದರೆ ನಂಬಿಕೆ ಮತ್ತು ತನ್ನ ದಿನನಿತ್ಯದ ಕೃತ್ಯಗಳ ಮಧ್ಯೆ ಇರುವ ತಾರತಮ್ಯಗಳನ್ನು ಹೋಗಲಾಡಿಸದಿರುವುದೇ ಆಗಿದೆ. ೧೧ನೇ ತಾರೀಖು ಸೆಪ್ಟೆಂಬರ್ ೨೦೦೬ ರಂದು ಮಹಾತ್ಮಾಗಾಂಧೀಜಿಯವರು ಜಗತ್ತಿಗೆ ನೀಡಿದ ಸತ್ಯಾಗ್ರಹದ ಸಿದ್ಧಾಂತವನ್ನು ಪ್ರಚುರ ಪಡಿಸುವುದು ಮಾತ್ರವಲ್ಲ, ಅವುಗಳನ್ನು ರಾಷ್ಟ್ರದ, ಸಾರ್ವಜನಿಕ ಮತ್ತು ವೈಯಕ್ತಿಕ ಜೀವನದಲ್ಲಿ ಅಳವಡಿಸಿದಾಗ ಮಾತ್ರ ಇಂತಹ ಶತಾಬ್ದಿಯ ಆಚರಣೆ ಅರ್ಥಯುತವಾಗುತ್ತದೆ. ಸತ್ಯಾಗ್ರಹ ಎಂಬ ಶಬ್ದ ಭಾರತೀಯರನ್ನು ಮಾತ್ರವಲ್ಲ ಇಡೀ ಜಗತ್ತಿನಲ್ಲಿ ವಿದ್ಯುತ್ ಸಂಚಾರ ಗೈದಿದೆ.

ಅಮೇರಿಕದ ಮಾರ್ಟಿನ ಲೂಥರ್ ಕಿಂಗ್ ಇಂತಹ ಸೈದ್ಧಾಂತಿಕ ಹಿನ್ನೆಲೆಯಿಂದಲೇ ಮಹಾತ್ಮಾ ಗಾಂಧೀಜಿಯವರನ್ನು ತನ್ನ ಗುರುವೆಂದು ಆರಾಧಿಸಿದ. ಅಂತಹ ತತ್ವ ಜಗತ್ತಿನ ಕೋಟ್ಯಂತರ ಅಭಿವೃದ್ದಿಶೀಲ ಮತ್ತು ಅಭಿವೃದ್ದಿ ಪಡೆದ ರಾಷ್ಟ್ರಗಳಲ್ಲಿ ಸಮಾನತೆಯ ಮನೋಭೂಮಿಕೆಯನ್ನು ಹರಡಿತು. ದಕ್ಷಿಣ ಆಫ್ರಿಕಾದ ಡಾ. ನೆಲ್ಸನ್ ಮಂಡೇಲಾ ಮತ್ತು ಅನೇಕ ಆಫ್ರಿಕಾ, ಅಮೇರಿಕ ಮತ್ತು ಏಷ್ಯಾದ ರಾಷ್ಟ್ರ ಮತ್ತು ರಾಷ್ಟ್ರದ ಜನರು ಸಮಾನತೆಯ ಸಿದ್ಧಾಂತವನ್ನು ಶಾಂತಿ ಮತ್ತು ಅಹಿಂಸೆಯಿಂದ ಸಾಧಿಸುವ ದಿಶೆಯಲ್ಲಿ ಕಾರ್ಯೋನ್ಮುಖ ರಾದರು. ಭಾರತದಲ್ಲಿ ಮಾತ್ರವಲ್ಲ ಅನೇಕ ಹಿಂದುಳಿದ ರಾಷ್ಟ್ರಗಳಲ್ಲಿ ಸ್ವಾತಂತ್ರ್ಯ ಹೋರಾಟಕ್ಕೆ ಮಹಾತ್ಮಾ ಗಾಂಧೀಜಿಯವರ ತತ್ವ ನಾಂದಿ ಹಾಡಿತು. ಜಗತ್ತಿನ ಪ್ರಸಕ್ತ ಯಾವುದೇ ಪ್ರಗಲ್ಭ ಸಮಸ್ಯೆಗಳಿಗೆ ಇಂದು ಮತ್ತು ಮುಂದೆ ಮಹಾತ್ಮಾ ಗಾಂಧೀಜಿಯವರ ಸಮರ್ಥ ಸತ್ಯಾಗ್ರಹ ಮಾಂತ್ರಿಕ ಕೆಲಸ ಮಾಡಬಲ್ಲುದು. ಬಹುಶಃ ಜಗತ್ತಿನ ಭವಿಷ್ಯದ ವಿಜ್ಞಾನವೇ ಶಾಂತಿ ಎನ್ನಬಹುದು.

ನ್ಯೂಯಾರ್ಕಿನ World Trade Centre (WTC) ಗೋಪುರ ೧೧ನೇ ಸೆಪ್ಟೆಂಬರ್ ೨೦೦೧ ರಂದು ಉರುಳಿತು. ಇದರಿಂದ ಜಗತ್ತಿನ ಅತ್ಯಂತ ಬಲಿಷ್ಠ ರಾಷ್ಟ್ರವಾದ ಅಮೇರಿಕ ತಲ್ಲಣಗೊಂಡಿತು. ಅಲ್‌ಖೈದಾದ ಬಿನ್‌ಲಾಡೆನ್‌ನಂತಹ ಮತಾಂಧನ ಈ ದುಷ್ಕೃತ್ಯದಿಂದ ಜಗತ್ತೇ ಒಮ್ಮೆ ಸ್ತಬ್ಧವಾಯಿತು. ಆ ಸಂದರ್ಭದಲ್ಲಿ ನ್ಯೂಯಾರ್ಕಿನಿಂದ ಸಾವಿರಾರು ಮೈಲಿ ದೂರವಿರುವ ಇಟಲಿಯ ಟಸ್ಕನಿ ಎಂಬ ಊರಿನ ತನ್ನ ಮನೆಯಲ್ಲಿ ನೂರಾರು ಗೆಳೆಯರ ಮತ್ತು ತನ್ನ ಹಿತೈಷಿಗಳ ಮಧ್ಯೆ ಸಂಗೀತ ಕಛೇರಿಯನ್ನು ನಡೆಸುತ್ತಿದ್ದ ಒಬ್ಬ ಸುಪ್ರಸಿದ್ಧ ಗಾಯಕ ಸ್ಟಿಂಗ್ (Sting) ತನ್ನ ಕಛೇರಿಯನ್ನು ನಿಲ್ಲಿಸಿ ಹೀಗೆಂದ: ‘ಯಾವುದು ಅತ್ಯಂತ ಸಂತೋಷದಾಯಕ ಕಛೇರಿಯಾಗಬೇಕಿತ್ತೋ WTC ಗೋಪುರದ ಸ್ಫೋಟನದಿಂದ ಇದೊಂದು ಅತ್ಯಂತ ದುರಂತ ದಿನವಾಗಿ ಪರಿಣಮಿಸಿದೆ. ಸಾವಿರಾರು ಜನರು ಆ ಗೋಪುರದ ಕುಸಿತದಿಂದ ಮತ್ತು ಸ್ಫೋಟನದಿಂದ ಮರಣ ಹೊಂದಿದರೋ ಅವರ ನೆನಪಿಗಾಗಿ ಫ್ರಾಜೈಲ್ (Frajile) ಎಂಬ ದುರಂತ ಗೀತೆ ಹಾಡಿದನು. ಆ ದುರಂತ ಗೀತೆಯ ಸಾರಾಂಶ ಹೀಗಿದೆ :

ರಕ್ತ ಹರಿದಾಗ ಮಾಂಸ ಮತ್ತು ಉಕ್ಕು ಮಿಳಿತವಾಗಿ ಕಂತುವ ರವಿ ಬೀರುವ ವರ್ಣ,
ನಾಳೆ ಬೀಳುವ ಮಳೆ ರಕ್ತದ ಕಲೆಗಳನ್ನು ತೊಳೆಯಬಹುದು
ಆದರೆ ನಮ್ಮ ಮನಸ್ಸಿನಲ್ಲಿರುವ ಕಲೆಯಂತು ಸ್ಥಿರವಾಗಿ ನಿಲ್ಲುತ್ತದೆ
ಬಹುಶಃ ಅಂತಿಮ ದಮನ ಕಾರ್ಯ
ಜೀವಮಾನದ ನಿರಂತರ ಚರ್ಚೆಯಲ್ಲಿ ಉಳಿಯುತ್ತದೆ.
ಹಿಂಸೆಯಿಂದ ಯಾವುದೂ ಸಾಧನೆಯಲ್ಲ ಮುಂದೆಯೂ ಆಗುವುದಿಲ್ಲ.
ಮರೆಯಲಾಗದ ದುರ್ಬಲ ಮನಸ್ಸು ನಮ್ಮದು

ಮಹಾತ್ಮಾ ಗಾಂಧೀಜಿಯವರ ಟ್ರಾನ್ಸ್‌ವಾಲ್ (Transwal) ಸಂದೇಶ ನ್ಯೂಯಾರ್ಕಿನ  ಸ್ಫೋಟದ ಮುಂದಿನ ಉಲ್ಬಣ ಸಮಸ್ಯೆಗೆ ಪರಿಹಾರ ಮಾರ್ಗವಾಗಬಹುದು.

‘ದುಷ್ಟತನದ ಒಕ್ಕೂಟ’ ಎಂದು ಜಾರ್ಜ್ ಬುಷ್ ೨೦೦೨ನೇ ಇಸವಿಯಲ್ಲಿ ನೀಡಿದ ಭಾಷಣದಿಂದ ಸಮರ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಅಂತಿಮ ವಿಜಯವನ್ನು ಪಡೆಯ ಲಾಗುವುದಿಲ್ಲ. ಜಗತ್ತಿನಲ್ಲಿ ಪರಸ್ಪರ ವಿಶ್ವಾಸದಿಂದ ಒಮ್ಮುಖವಾಗಿ ಅಲ್‌ಖೈದಾ ಶಕ್ತಿಯನ್ನು ಬಗ್ಗು ಬಡಿಯುವುದರಿಂದ ಮಾತ್ರ ಸಮಸ್ಯೆ ಪರಿಹಾರವಾಗಬಹುದು. ಜನಾಂಗ ಜನಾಂಗದ ದ್ವೇಷದಿಂದ ಪರಿಸ್ಥಿತಿ ಮತ್ತಷ್ಟು ಉಲ್ಬಣವಾಗುತ್ತದೆ. ಸಾವಿರಾರು ವರ್ಷ ಕಳೆದರೂ ಇಂತಹ ಸಮರ ನಿಲ್ಲಿಸಲು ಸಾಧ್ಯವಾಗುವುದಿಲ್ಲ. ಉಗ್ರಗಾಮಿಗಳ ಹುಟ್ಟಡಗಿಸಬೇಕೇ ಹೊರತು ಜನಾಂಗ ಜನಾಂಗಗಳಲ್ಲಿ ದ್ವೇಷವನ್ನು ಹಬ್ಬಿಸಿ ಜನಾಂಗ ದ್ವೇಷದ ದಳ್ಳುರಿಯನ್ನು ಮಾತ್ರ ಉಲ್ಬಣಗೊಳಿಸುವುದಲ್ಲ. ಇದಕ್ಕೆ ಜಗತ್ತಿನ ಎಲ್ಲಾ ಜನಾಂಗಗಳ ಸಹಕಾರ ಅನಿವಾರ‍್ಯ.

ಮಹಾತ್ಮಾ ಗಾಂಧೀಜಿಯವರ ಸತ್ಯಾಗ್ರಹ ಅವತರಣಿಕೆ ಜಗತ್ತಿನ ಮಾನವ ಹೃದಯ ಗಳನ್ನು ಒಂದುಗೂಡಿಸುವ ಮಾಂತ್ರಿಕ ವಿದ್ಯೆಯಾಗಿದೆ. ಅದರ ಮಹಾನ್‌ಶಕ್ತಿಯನ್ನು ಗುರುತಿಸಿ ಜಗತ್ತಿನ ಜನಜೀವನದಲ್ಲಿ ಪ್ರಯೋಗಿಸುವ ಜಾಗತಿಕ ಚಿಂತನೆ ನಡೆಯಬೇಕಾಗಿದೆ.