ಸಾಂಸ್ಕೃತಿಕ ಕಲಾಸೃಷ್ಟಿಗೆ ಅವಕಾಶವನ್ನುಂಟುಮಾಡುವ ಸಾಮಾಜಿಕ ವ್ಯವಸ್ಥೆ ಯನ್ನೇ ನಾಗರಿಕತೆ ಎನ್ನುತ್ತಾರೆ. ಅದರ ಅಂಗಗಳು ನಾಲ್ಕು: ಆರ್ಥಿಕ ನೆಲೆ, ರಾಜಕೀಯ ಒಕ್ಕೂಟ, ನೈತಿಕ ಸಂಪ್ರದಾಯಗಳು ಮತ್ತು ಜ್ಞಾನ-ಕಲಾ ಜಗತ್ತಿನ ನಾನಾ ಪ್ರಕಾರಗಳ ಶೋಧ. ಎಲ್ಲಿ ಗೊಂದಲ ಮತ್ತು ಆತಂಕಗಳು ಕೊನೆಗೊಳ್ಳುತ್ತವೋ ಅಲ್ಲಿ ನಾಗರಿಕತೆ ಆರಂಭವಾಗುತ್ತದೆ.

ಜರ್ಮನ್ ಚಿಂತಕರಾದ ನೀಝೆ (Nietzsche) ಹೇಳುವಂತೆ, “ಬಣ್ಣದ ಹೊಂಗೂದಲಿನ ಬಲಿಪಶುಗಳ ಒಂದು ಹಿಂಡು, ವಿಜಯ ಪ್ರಭುಗಳಾದ ಒಂದು ಮನುಷ್ಯ ವರ್ಗದವರು ಮತ್ತು ಅವರ ಸಮರೋಪಾದಿ ಸಂಘಟನೆ, ಅದು ತನ್ನ ಸಂಯುಕ್ತ ಶಕ್ತಿಯೊಡನೆ ಇನ್ನೊಂದು ಜನಾಂಗದ ಮೇಲೆ ಪರಚುವಂತೆ ನೆಗೆಯುವುದು, ಸಂಖ್ಯೆಗಳಲ್ಲಿ ಎಷ್ಟೋ ಪ್ರಬಲರಾಗಿದ್ದರೂ, ನಿರ್ದಿಷ್ಟ ರೂಪವಿಲ್ಲದ ಒಂದು ಸೇನಾ ಸ್ಥಿತಿಯಲ್ಲಿರುವುದು ರಾಜ್ಯದ ಹುಟ್ಟು”, ಲೆಸ್ಟರ್ ವಾರ್ಡ್ ಎಂಬ ಸಂಶೋಧಕರು ಇದೇ ಮಾತನ್ನು “ಬುಡಕಟ್ಟಿನ ಜನಾಂಗ ವ್ಯವಸ್ಥೆಗಿಂತ ಭಿನ್ನವಾಗಿರುವ ಒಂದು ರಾಜ್ಯವನ್ನು ಕಟ್ಟುವ ಹಂತವು ಒಂದು ಮಾನವ ಜನಾಂಗವು ಇನ್ನೊಂದನ್ನು ಗೆದ್ದಾಗ ಮಾತ್ರ ಶುರುವಾಗುತ್ತದೆ” ಎಂದು ಹೇಳಿದ್ದಾರೆ. ಒಪನ್‌ಹೀಮರ್ ಎಂಬ ವಿಜ್ಞಾನಿ ಸೂಚಿಸುವಂತೆ, “ಎಲ್ಲೆಲ್ಲೂ ನಾವು ನೋಡುವುದೇನು-ಯಾವುದೋ ಒಂದು ಸಮರಕ್ಕೆಳಸುವ ಆದಿ ಜನಾಂಗವು ಇನ್ನೊಂದು ಮೆತ್ತಗಿನ ಜನಾಂಗದ ಹೊಸ್ತಿಲು ದಾಟಿ ಅವರನ್ನು ಬಗ್ಗಿಸಿ, ತಾನೇ ಘನತೆ-ಗಾಂಭೀರ‍್ಯ ಹೊಂದಿರುವಂತೆ ಆಢ್ಯತನ ತೋರ್ಪಡಿಸಿ, ಆಕ್ರಮಣದ ಮುಖಾಂತರ ಹೊಸ ರಾಜ್ಯವನ್ನು ಸ್ಥಾಪಿಸುತ್ತದೆ”. ಇನ್ನೊಬ್ಬ ಜರ್ಮನ್ ವಿಚಾರವಾದಿ ರತ್ಜೆನ್‌ಹೊಫರ್ ವಿವರಿಸುವ ಪ್ರಕಾರ, “ರಾಜ್ಯದ ನಿರ್ಮಾಣಕ್ಕೆ ಹಿಂಸಾಚಾರವೇ ಬುನಾದಿಯಾಗಿದೆ”. ಗಂಪ್ಪೊವಿಚ್ ತಿಳಿಸುವಂತೆ, “ರಾಜ್ಯದ ಸ್ಥಾಪನೆಗೆ ದಂಡಯಾತ್ರೆಯ ವಿಜಯವೇ ಅಡಿಗಲ್ಲು. ಆಲ್ಲಿಂದ ಮುಂದೆ ಆಳುವ ಜನಾಂಗವು ಸೋತವರ ಮೇಲೆ ಅಧಿಕಾರ ಸ್ಥಾಪನೆ ಮಾಡಿ ರಾಜ್ಯಭಾರ ನಡೆಸುತ್ತದೆ”. ಸಮ್ನರ್ ಎಂಬ ಇನ್ನೊಬ್ಬ ವಿಮರ್ಶಕನೆನ್ನುವಂತೆ, “ರಾಜ್ಯವು ಸೇನೆಯು ತಯಾರಿಸಿದ ಸಿದ್ಧವಸ್ತುವಾಗಿದೆ. ಅದನ್ನು ಸೇನಾಬಲವೇ ಉಳಿಸಿಕೊಂಡು ಹೋಗುತ್ತದೆ”.

ಜೀವಿಸಿದ್ದಾಗ ಬಲಿಷ್ಠರೆನಿಸಿದ ಹಿರಿಯರು ಆಗ ಇತರರಲ್ಲಿ ಭಯವನ್ನು ಮೂಡಿಸಿ ಮರಣಾನಂತರ ವಿಶೇಷವಾಗಿ ಆರಾಧಿಸಲ್ಪಡುತ್ತಾರೆ. ಭ್ರಾಂತಿ ಅಥವಾ ಅಂಧಶ್ರದ್ಧೆಯಿಂದಾಗಿ ಮಾಯೆ ಉಂಟಾಗಿ, ವಿಜ್ಞಾನದಲ್ಲಿ ಅಂತ್ಯಗೊಳಿಸುತ್ತದೆ.

ಆದಿಮಜನಾಂಗದ ಹಿರಿಯ ಅಥವಾ ಮುಖ್ಯಸ್ಥನು ಮಾನವ ಸ್ವಭಾವದಲ್ಲಿ ಪೂರಾ ನಂಬಿಕೆಯಿಟ್ಟಿದ್ದನು. ಆದರೆ ಆಧುನಿಕ ವಿದ್ಯೆಯು ಬೌದ್ದಿಕ ಚಾಕಚಕ್ಯತೆಯನ್ನು ಹೊಂದಿ ಕೊಂಡಿದೆ. ಆದಿಮಾನವ ಅಧಿಕಾರಿಯು ಪಂಡಿತರನ್ನು ತಯಾರುಮಾಡುವ ಕಡೆಗೆ ಬಾಗದೆ, ಗಂಡೆದೆಯುಳ್ಳವರನ್ನು ತಯಾರುಮಾಡುವ ಕಾಳಜಿ ಹೊಂದಿದ್ದನು.

ದಕ್ಷಿಣ ಪ್ರಾಂತ್ಯಗಳಲ್ಲಿ ಪ್ರಾಚೀನ ಕಾಲದಲ್ಲಿ, ದ್ರಾವಿಡರೆಂದು ನಾವೀಗ ಕರೆಯುವ ದಪ್ಪ ಚರ್ಮದ, ಅಗಲ ಮೂಗಿನ ಆದಿಮಜನಾಂಗದವರಿದ್ದರು. ಈ ದ್ರಾವಿಡರು ಉತ್ತರದ ಆರ‍್ಯಯೋಧರ ಮೇಲೆ ಆಕ್ರಮಣಮಾಡಿ ನೆಗೆದುಬೀಳುವ ಮುನ್ನ ತುಂಬಾ ಸಭ್ಯರಾಗಿದ್ದರು. ದ್ರಾವಿಡ ಜನಾಂಗದ ಸಾಹಸೀ ವರ್ತಕರು ದೂರದ ಸುಮೇರಿಯಾ ಮತ್ತು ಬೆಬಿಲೋನ್ ರಾಜ್ಯಗಳೊಂದಿಗೆ ಸಮುದ್ರಮಾರ್ಗದ ವ್ಯಾಪಾರಸಂಪರ್ಕ ಹೊಂದಿದ್ದರು. ಅಲ್ಲದೆ ಮರದ ಭಾರೀ ದೋಣಿಗಳಲ್ಲಿ ಅತ್ತ ಪ್ರಯಾಣ ಮಾಡಿ ಬಂದಿದ್ದರು. ಈ ದ್ರಾವಿಡರ ನಾನಾ ನೆಲೆಗಳು-ಪಟ್ಟಣಗಳು ಅನೇಕ ಸಂಸ್ಕಾರವುಳ್ಳ ಹಾಗೂ ಐಷಾರಾಮೀ ಬಗೆಯ ಜೀವನ ಯಾತ್ರೆಗಳ ಅನುಭವ ಪಡೆದಿವೆ. ಬಹುಶಃ ಈ ಕರಿಯ ಜನಾಂಗದವರಿಂದಲೇ ಉತ್ತರದಿಂದ ಬಂದ ಬಿಳಿಯ ಆರ‍್ಯರು ತಮ್ಮ ಗ್ರಾಮೀಣ ಸಮುದಾಯ ವ್ಯವಸ್ಥೆ, ಭೂಗುತ್ತಿಗೆ ಕ್ರಮ ಮತ್ತು ಕಂದಾಯವಿಧಿಗಳನ್ನೂ ಕಲಿತುಕೊಂಡರು.

ಭಾರತದ ಪ್ರಾಚೀನ ಇತಿಹಾಸವನ್ನು ಐಗುಪ್ತ (ಈಜಿಪ್ಟ್) ದೇಶದ ಚರಿತ್ರೆಯೊಂದಿಗೋ ಅಥವಾ ಬೆಬಿಲೋನಿಯಾ ನಾಗರಿಕತೆಯೊಂದಿಗೋ ಅಥವಾ ಅಸ್ಸೀರಿಯಾ ಸಭ್ಯತೆ ಯೊಂದಿಗೋ ತೂಗಿ ನೋಡಿ, ಅವುಗಳನ್ನು ಮುಗಿಸಿದಂತೆ ಇದನ್ನೂ ಮುಗಿಸಲು ಯಾರಿಗೂ ಸಾಧ್ಯವಿಲ್ಲ. ಭಾರತದ ಚರಿತ್ರೆ ಇನ್ನೂ ರಚನೆಯಾಗುತ್ತಿದೆ. ಈ ನಾಗರಿಕತೆಯು ಅರಳುತ್ತಿದೆ. ಆಧ್ಯಾತ್ಮಿಕಾಗಿ ಭಾರತವು ಮೂಢನಂಬಿಕೆ ಮತ್ತು ಅಧಿಕ ತತ್ವಪ್ರಧಾನ ಹೊರೆಗಳ ವಿರುದ್ಧ ಸೆಣಸಾಡುತ್ತಿದೆ.

ಹಿಮಾಲಯದ ಪ್ರಚಂಡ ಪರ್ವತಶ್ರೇಣಿಗಳಾಚೆಗೆ ವ್ಯಾಕರಣ ಮತ್ತು ತರ್ಕಶಾಸ್ತ್ರ, ದರ್ಶನ ಮತ್ತು ಪಂಚತಂತ್ರ ಕಥೆಗಳು, ಮೋಹಿನಿವಿದ್ಯೆ ಮತ್ತು ಚದುರಂಗ ಕ್ರೀಡೆ ಹಾಗೂ ಎಲ್ಲಕ್ಕಿಂತ ಮಿಗಿಲಾಗಿ, ಒಂದರಿಂದ ಹತ್ತರವರೆಗಿನ ಅಂಕೆಗಳು ಮತ್ತು ದಶಮಾಂಶ ಗಣಿತ ಪದ್ಧತಿಯಂತಹ ಪ್ರಶ್ನಾರ್ಥಕ ಕೊಡುಗೆಗಳನ್ನು ಭಾರತವು ರವಾನಿಸಿದ್ದು ಸುಳ್ಳಲ್ಲ. ಮುಂದೆ ಹೊಸ ಶತಮಾನದಲ್ಲಿ ಜಗತ್ತು ಭಾರತದಿಂದ ಕಲಿಯಬೇಕಾದುದನ್ನು ಯೋಚಿಸಿದರೆ, ಈವರೆಗಿನ ಅದರ ಕಾಣಿಕೆಗಳು ಅತ್ಯಲ್ಪವೆನ್ನಬಹುದು. ಹೊರಗಿನ ಆಕ್ರಮಣಗಳನ್ನು ಕಳೆದ ಸಾವಿರ ವರ್ಷಗಳಲ್ಲಿ ನುಂಗಿಕೊಂಡು ಅವುಗಳ ದರ್ಪ ಮತ್ತು ಸ್ವೇಚ್ಛಾಚಾರದ ಹಾವಳಿಗಳನ್ನು ಬದಿಗೊತ್ತಿದ ಭಾರತ, ಆಳವಾದ ತಾಳ್ಮೆ ಮತ್ತು ಪ್ರಬುದ್ಧ ಮನಸ್ಸಿನ ಮೃದುತ್ವಗಳನ್ನು ಜಗತ್ತಿಗೆ ಕಲಿಸುವಂತಿದೆ. ಇತರರ ಒಡವೆಗಳಿಗೆ ಆಸೆ ಪಡದೆ ಅಪರಿಗ್ರಾಹ್ಯ ಜೀವಾಳದ ತಿರುಳು, ಪರರನ್ನು ಅರ್ಥ ಮಾಡಿಕೊಳ್ಳಬಲ್ಲ ಆತ್ಮದ ಶಾಂತಸ್ಥಿತಿ ಮತ್ತು ಎಲ್ಲಾ ಜೀವಿಗಳ ಮೇಲೆ ಹಾಲೆರೆಯುವಂತಹ ಪ್ರೇಮವನ್ನೂ ಭಾರತ ಕ್ರಮೇಣ ಪರದೇಶಗಳಿಗೆ ಒಯ್ಯ ಬಹುದು.

ಭಾರತೀಯ ಸಂಸ್ಕೃತಿಗಳ ಬಾಹುಳ್ಯವನ್ನು ವಿವರಿಸುವಾಗ, ನಾವು ಕೆಲವು ಮಾಯ ವಾದುದನ್ನೂ, ಕೆಲವು ಪರಿವರ್ತನೆಯಾದುದನ್ನೂ ನೆನೆಯಬೇಕು. ಅವುಗಳನ್ನು ಅಮೀಬದಂತಹ ಕ್ರಿಮಿರೂಪಕ್ಕಿಳಿಸಬಾರದು. ಭಾರತೀಯ ಸಂಸ್ಕೃತಿಯಲ್ಲಿ ಆರ‍್ಯರು ಮಾತ್ರ ವಲ್ಲ, ಅದರಲ್ಲಿ ನಾನಾ ಸಂಸ್ಕೃತಿಗಳ ಮಿಶ್ರಣವಿದೆ. ನೀಲಗಿರಿಯ ತೋಡರು, ದಕ್ಷಿಣ ಕನ್ನಡದ ಕೊರಗರು, ಹೆಗ್ಗಡದೇವನಕೋಟೆಯ ಕುರುಬರು, ತಾಂಡಾಗಳ ಬಂಜಾರ ಜನಾಂಗದವರು ಮತ್ತು ಇಂತಹ ನೂರಾರು ಜನಸಾಮಾನ್ಯ (ದ್ರಾವಿಡರಾದಿ) ಇತರ ಸಂಸ್ಕೃತಿ ಗಳು ನೆಲೆಯಾಗಿ ಸಮರಸತೆಯಿಂದ ಬೆರತುಕೊಂಡಿವೆ. ಭಾರತೀಯ ಸಂಸ್ಕೃತಿಗಳಲ್ಲಿ ಈ ಆದಿವಾಸಿಗಳ ಸಂಸ್ಕೃತಿಗಳ ಉಲ್ಲೇಖವಿರದಿದ್ದರೆ ಅದು ಅಪೂರ್ಣವಾದ ಹೇಳಿಕೆಯಾದೀತು.

ಸರ್ವೇಸಾಧಾರಣವಾಗಿ, ಮುಖ್ಯವಾದ ಸಂಸ್ಕೃತಿಯನ್ನು ಒಂದು ಸುಖೀಸಂಸ್ಕೃತಿಯೆಂದು ಕರೆಯುವ ವಾಡಿಕೆಯಿದೆ. ಅದೇ ಧಾಟಿಯಲ್ಲಿ, ಬುಡಕಟ್ಟಿನ ಜನಾಂಗಗಳ ಶೂದ್ರ ಸಂಸ್ಕೃತಿಯನ್ನು ರೈತಾಪಿ ಸಂಸ್ಕೃತಿ ಅಥವಾ ಶ್ರಮ ಸಂಸ್ಕೃತಿಯೆಂದೂ ಹೇಳುವುದುಂಟು. ಆ ಶ್ರಮಸಂಸ್ಕೃತಿಯಲ್ಲಿ ಎಲ್ಲರಿಗೂ ಸಮಾನ ಸಾಮಾಜಿಕ ಸ್ಥಾನಮಾನವಿದ್ದು ಯಾರೊಬ್ಬನಿಗೆ ವಿಶೇಷ ಸೌಕರ‍್ಯ ಲಾಭಗಳಿಲ್ಲ.

ಸಮಾಜವಿಜ್ಞಾನಿಗಳು, ಇತಿಹಾಸಕಾರರು ಸಂಸ್ಕೃತಿಯನ್ನು ವಿವರಿಸುವಾಗ, ಅರ್ಥೈಸುವಾಗ ಎಡವುತ್ತಾರೆ. ಅವರು ಸಾಹಿತ್ಯ, ಸಂಗೀತ, ಕಲೆಗಳು, ಧರ್ಮಗ್ರಂಥಗಳು ಮತ್ತು ನೀತಿನೇಮ ಗಳು ಮುಂತಾದ ಭಾಗಗಳಿಗೆ ಮಾತ್ರ ಗಮನ ನೀಡುವುದರಿಂದ ಬುಡಕಟ್ಟಿನ ಜನಾಂಗಗಳಿಗೆ ನ್ಯಾಯ ದೊರಕಿಸಲು ಅಶಕ್ತರಾಗುತ್ತಾರೆ.

ಕಾವೇರಿ ನದಿಯ ಉಗಮವಾದುದು ಕೊಡಗು ಜಿಲ್ಲೆಯ ಬೆಟ್ಟದಲ್ಲಿ, ಭಾಗಮಂಡಲದ ಸಮೀಪ. ಅಲ್ಲೇ ನದಿಗೆ ನಿತ್ಯವೂ ಪೂಜಾ ಕ್ರಮಗಳು ನಡೆಯುತ್ತವೆ. ಹಾಗೆಯೇ ಮುಖ್ಯವಾದ ಜನಸಂಸ್ಕೃತಿಯ ಪಾಠ ಕಲಿಯುವಾಗ ಅದರ ಬೇರುಗಳು ಕಾಡಿನ ಆದಿವಾಸಿ ಜನಾಂಗಗಳ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುವುದನ್ನು ಕಂಡುಕೊಳ್ಳಲು ಮರೆಯಲಾಗದು. ಇದು ಪ್ರಸ್ತುತ ಹಾಗೂ ಭವಿಷ್ಯತ್ತಿನ ಮಾರ್ಗದರ್ಶನಕ್ಕೆ ಸಹಕಾರಿಯಾಗಿದೆ.

ನಗರವಾಸಿಗಳ ಸುಖೀಸಂಸ್ಕೃತಿಯ ಎದುರಿಗೆ ನಿಂತ ಶ್ರಮಿಕ ಸಂಸ್ಕೃತಿಯಲ್ಲಿ ಆದಿವಾಸಿ ಗಳಿಗೆ ಸಂಪೂರ್ಣ ಶ್ರದ್ಧೆಯಿದೆ. ಬುಡಕಟ್ಟಿನ ಜನಾಂಗಗಳ ಸಂಸ್ಕೃತಿಯ ಆಳಪ್ರವಾಹವು ಮನುಕುಲದ ಪಾಲಿನ ಅಮೃತಧಾರೆಯಾಗಿರಬಹುದು. ತಪ್ಪಿದರೆ ಭೂಗತ ಜ್ವಾಲೆಯ ಲಾವಾರಸವಾಗಿ ಕಿಚ್ಚೆದ್ದು ಹೊರಹೊಮ್ಮಿ ಜಗತ್ತಿನ ನಾಗರಿಕತೆಯನ್ನೇ ನಾಶ ಮಾಡಲೂ ಬಹುದು.