ಮನುಷ್ಯನ ದುಃಖಗಳಿಗೆಲ್ಲ ಅಜ್ಞಾನವೇ ಕಾರಣವೆಂದು ಗೀತೆ ಸಾರುತ್ತದೆ. ಶ್ರೀಕೃಷ್ಣ ಕೈಗೊಂಡ ದೊಡ್ಡ ಕಾರ್ಯಗಳಲ್ಲಿ ಒಂದು ಇದು; ತನ್ನ ಕಾಲದಲ್ಲಿ ಭಾರತದಲ್ಲಿ ಇದ್ದ ವಿವಿಧ ಜನಾಂಗಗಳನ್ನೂ ನಾಗರಿಕತೆಯನ್ನೂ ಸಕಲ ಭಾರತ ಸ್ವರೂಪದ ಒಂದು ಪರಿಪೂರ್ಣ ಸಮಾಜವಾಗಿ ಬೆಸೆಯುವುದು; ಅದರ ಉದ್ದೇಶ ಈ ದೇಶದಲ್ಲಿ ಶಾಂತಿ ಸಾಮರಸ್ಯಗಳು ನೆಲೆಸಲಿ ಎಂದು. ಈ ಸಾಮಾಜಿಕ ಸಮನ್ವಯವನ್ನು ತರಲು ಜನರಿಗೆ ಒಂದು ಸಮಾನ ಆದರ್ಶವನ್ನು ನೀಡಿದನು. ಈ ಜಗತ್ತಿನ ಜೀವನ ನಿಸ್ಸಾರ, ಪರಮಾತ್ಮನೊಡನೆ ಒಂದಾಗುವುದೇ ಬದುಕಿನ ಗುರಿ. “ಅನಿತ್ಯವು ಅಸುಖವೂ ಆದ ಈ ಜಗತ್ತನ್ನು (ಎಂದರೆ ಮಾನವ ದೇಹವನ್ನು) ಪಡೆದ ಮೇಲೆ ನನ್ನನ್ನು ಪೂಜಿಸು”. ಇದು ಅರ್ಜುನನನಿಗೆ ಕೊಟ್ಟ ಕರೆ. ಅವನ ಮೂಲಕ ಅಂದಿನ ಸಮರಪ್ರಿಯ ದೇಶಗಳಿಗೆಲ್ಲ ನೀಡಿದ ಕರೆ ಎಂದೇ ಭಾವಿಸ ಬೇಕು. ಇದೇ ಏಕತೆಯ ಕೊಂಡಿಯಾಯಿತು. ಈ ಮುಖ್ಯ ಸಿದ್ಧಾಂತದ ಉಪಸಿದ್ಧಾಂತಗಳಾಗಿ ಧಾರ್ಮಿಕ ಆದರ್ಶಗಳ ಸಾಮರಸ್ಯವನ್ನೂ ಬೋಧಿಸಿದ. ಬೇರೆ ಬೇರೆ ಧಾರ್ಮಿಕ ಆದರ್ಶಗಳೂ ಮಾನವನನ್ನು ಪರಮ ಗುರಿಗೆ ಒಯ್ಯಲು ಸಮಾನವಾಗಿ ಶಕ್ತವಾಗಿವೆ ಎಂಬುದನ್ನು ತೋರಿಸಿದನು. ತನ್ನ ನಾಲ್ಕೂ ಯೋಗಗಳ ವರ್ಣನೆಯಲ್ಲಿ ಆಧ್ಯಾತ್ಮಿಕ ಜೀವನದ ಅಸ್ತಿಭಾರ ತತ್ವಗಳನ್ನು ನಿರೂಪಿಸಿದನು. ಹಾಗೆ ಮಾಡಿದ್ದರಿಂದ ಆರ್ಯ ಧರ್ಮ ವಿದೇಶದ ಧರ್ಮ-ಸಂಸ್ಕೃತಿಗಳನ್ನು ತನ್ನಲ್ಲಿ ಸಮನ್ವಯಗೊಳಿಸಲು ಸಮರ್ಥವಾಯಿತು. ಎಲ್ಲ ಆದರ್ಶಗಳೂ ಒಂದು ಸಮಗ್ರ ಪರಿಪೂರ್ಣದ ಸಂಯೋಜಿತ ಭಾಗಗಳು ಅಥವಾ ಮುಖಗಳಾಗಿದ್ದರಿಂದ ವೈವಿಧ್ಯದಲ್ಲಿ ಏಕತೆಯನ್ನು ತರಲು ಸಾಧ್ಯವಾಯಿತು. ಶಂಕರಾಚಾರ್ಯರು ಧರ್ಮದಲ್ಲಿರುವ ಧರ್ಮ ನಿರಪೇಕ್ಷತೆಯ ಮೂಲ ತಿರುಳನ್ನು ಸ್ಫುಟಗೊಳಿಸಿದರು. ಹಾಗೆಂದ ಮಾತ್ರಕ್ಕೆ ಇಂದು ಕಾಣುವ ಅಸಮಾನತೆ, ಮೇಲುಕೀಳು, ಅಸಹನೆ, ಧರ್ಮ ಸಂಜಾತ ಸೃಷ್ಟಿ ವಿಶೇಷಗಳಲ್ಲ.

ಭಾರತವನ್ನು ಏಕವಾಗಿ ದರ್ಶಿಸಿದ ಶ್ರೀ ಶಂಕರಾಚಾರ್ಯರು ಭಾರತದ ಚಿಕ್ಕಚಿಕ್ಕ ರಾಜ್ಯಗಳು ಪರಸ್ಪರ ಯಾವಾಗಲೂ ಸ್ವಾರ್ಥಮತಿಗಳಾಗಿ ವಿಘಟನೆ ಹೊಂದಿದ ಈ ಕಾಲಘಟ್ಟದಲ್ಲಿ, ವರ್ಣ, ಭಾಷೆ ಮೊದಲಾದ ನೆಪದಲ್ಲಿ, ಶಿಥಿಲೀಕರಣದ ಕೂಪದಲ್ಲಿದ್ದ ದಶಾಬ್ದದಲ್ಲಿ ಇಲ್ಲಿನ ಭಾಷೆ ಒಂದೆಂದು, ಭಾರತದ ಸಂಸ್ಕೃತಿಗೂ ಬದುಕಿಗೂ ಸರ್ವತ್ರ ಏಕೀಭಾವ ಮಾತ್ರವೇ ಇರುವುದೆಂದೂ ಕಾಶ್ಮೀರದಿಂದ ಕನ್ಯಾಕುಮಾರಿ ವರೆಗೆ ಸಂಚರಿಸಿ ಉದ್ದೇಶಿಸಿದರು. ‘ಏಕಂ ಸತ್ ವಿಪ್ರಾಃ ಬಹುಧಾ ವದಂತಿ’ ಸತ್ಯವೆನ್ನುವ ವಸ್ತು ಒಂದೇ. ಜ್ಞಾನಿಗಳು ಹಲವು ವಿಧದಲ್ಲಿ ಕರೆಯುತ್ತಾರೆ ಎಂಬ ಋಗ್ವೇದ ವಾಕ್ಯದ ಪ್ರತಿಧ್ವನಿಯನ್ನು ಶಂಕರಾಚಾರ್ಯರಲ್ಲಿ ಸರ್ವತ್ರ ದರ್ಶಿಸಲು ಸಾಧ್ಯ. ಶಂಕರಾಚಾರ್ಯರ ಪ್ರವರ್ತನ ಪದ್ಧತಿಯ ಲೋಕದಲ್ಲಿ ನಾವೊಂದು ತೀರ್ಥಯಾತ್ರೆ ನಡೆಸಬೇಕು.

‘ಅವತಾರಗಳು ಬಂದದ್ದು ಹಳೆಯದನ್ನು ರಚನಾತ್ಮಕವಾಗಿ ಬಿಡೆದು ಪುನಃ ನಿರ್ಮಾಣಕ್ಕಾಗಿ’. ಇಂದು ಶ್ರೀ ಕೃಷ್ಣನ ವಿಷಯವಾಗಿ ವಿಶೇಷ ಸತ್ಯ. ಜನ ಒಪ್ಪಿದ ಸಂಪ್ರದಾಯಗಳನ್ನು ಅವನು ಕಿತ್ತೆಸೆಯಲಿಲ್ಲ. ಅವುಗಳ ಅರ್ಥ ಪ್ರಭಾವಗಳನ್ನು ಅವನು ಪೂರ್ಣವಾಗಿ ಬದಲಾಯಿಸಿದರೂ ಹಳೆಯ ತತ್ವಗಳಿಗೆ, ಸಮಾಜದ ಸ್ಥಿತಿಗತಿಗಳಿಗೆ ಹೊಂದು ವಂತೆ ಮತ್ತೆ ಪ್ರಗತಿಪೂರ್ಣತೆಗಳ ಕಡೆಗೆ ಅವುಗಳನ್ನು ಚಲಿಸುವಂತೆ, ಆತ ಹೊಸ ಬೆಳಕಿನಲ್ಲಿ ವ್ಯಾಖ್ಯಾನ ನೀಡಿದ. ಆದರ್ಶಗಳ ನಡುವಣ ವಿರೋಧ ಸಾಮರಸ್ಯದಲ್ಲಿ ಲೀನವಾಗುವಂತೆ, ವ್ಯಕ್ತಿಗೂ ಸಮಾಜಕ್ಕೂ ಜೀವನ ಸುಗಮವಾಗುವಂತೆ ಆತ ಮಾಡಿದ. ಗೀತೆಯ ಸಂದೇಶದ ಮುಖ್ಯ ಧ್ವನಿಯೇ ಇದು. ಸಾಮರಸ್ಯದ ದೃಷ್ಟಿ ವೈವಿಧ್ಯದಲ್ಲಿ ಏಕತೆಯ ಸಾಧನೆ. ಈ ದೃಷ್ಟಿಯಿಂದ ಅಲ್ಲಿನ ತೋರಿಕೆಯ ವಿರೋಧಗಳೆಲ್ಲಾ ಮಾಯವಾಗುತ್ತವೆ.

‘ಅನುಭವಕ್ಕೆ ಅನುಕೂಲವಲ್ಲದ ಶ್ರುತಿಭಾಗ ಸ್ವೀಕಾರ್ಯವಲ್ಲ’ವೆಂಬುದು ಸಿದ್ಧಾಂತಗಳ ಸಂದೇಶ. ಇಂತಹ ವ್ಯಾವಹಾರಿಕತೆಯ ನಿಜ ಸತ್ಯವನ್ನು ಮರೆಮಾಡಿ ಭ್ರಮಾಲೋಕಕ್ಕೆ ಕೊಂಡೊಯ್ಯುವ ಮೌಢ್ಯಶಿಖಾಮಣಿಗಳನ್ನು ಬಟ್ಟಬಯಲುಗೊಳಿಸಬೇಕು. ಅಂಥವರೇ ಶಂಕರ ಸಿದ್ಧಾಂತಗಳ ವಿರೋಧಿಗಳು. ಭಾರತೀಯ ದರ್ಶನಗಳ ಎಲ್ಲಾ ಶಾಖೆಗಳ ಪೈಕಿ ಶಂಕರಾಚಾರ್ಯರ ಸಿದ್ಧಾಂತಗಳು ಆಧುನಿಕ ಮನೋಧರ್ಮಕ್ಕೆ ಹೆಚ್ಚು ಸ್ವೀಕಾರ್ಯವೆಂಬುದರ ಬಗ್ಗೆ ಸಂಶಯವಿಲ್ಲ’. – ಸೀತಾನಾಥನ ತತ್ತ್ವಭಾಷ್ಯ.

ಸರ್ವಧರ್ಮ ಸಮನ್ವಯವೆಂಬ ಸುಂದರ ತತ್ತ್ವವು ಅದ್ವೈತ ಸಿದ್ಧಾಂತದಲ್ಲಿ  ಮತದೊಳಗಿನ ವಿಪುಲವಾದ ವೈವಿಧ್ಯತೆಯ ಎಡೆಯಲ್ಲಿಯೂ ಸ್ಥಿರವಾಗಿ ನೆಲೆನಿಂತ ಏಕತ್ವವು ಅದ್ವೈತ ಸಿದ್ಧಾಂತದ ಮಹತ್ತಾದ ಸಾಧನೆ. ಉದಾರತೆ ಮತ್ತು ಸಹಿಷ್ಣುತೆಗಳೇ ಇವುಗಳ ತಿರುಳು.

ಸರ್ ಡಾ. ಎಸ್. ರಾಧಾಕೃಷ್ಣನ್: ‘ಭಾರತೀಯ ಚಿಂತನೆಯ ಬಗ್ಗೆ ನಮಗಿರುವ ಆಧಾರಗಳು ಸಾರುವುದು ಮನುಷ್ಯ ಮನಸ್ಸಿನ ಸ್ವತಂತ್ರ ವಿಚಾರಧಾರೆಯನ್ನು’.

ಶಂಕರಾಚಾರ್ಯರ ಭಾಷ್ಯದ ಪ್ರಕಾರ ಗೀತೆ, ಕರ್ಮದ ಅನೇಕ ಘಟ್ಟಗಳನ್ನು ಅಥವಾ ಅಭಿವ್ಯಕ್ತಿಗಳನ್ನು ಹೀಗೆ ಗಮನಕ್ಕೆ ತೆರೆದುಕೊಂಡಿದೆ: ೧. ಸಾಮಾಜಿಕ ವ್ಯವಸ್ಥೆಯ ಒಂದು ಶಿಸ್ತು, ಮರಣಾನಂತರ ಜೀವನದ ಒಂದು ಸುಖದ ಮೂಲ; ೨. ನಿರುಪಾಧಿಕ ವಿಧಿಯನ್ನೇ ಆಧಾರವಾಗಿ ಉಳ್ಳ ಕರ್ತವ್ಯ ನಿಯಮ; ೩. ಅಂತರಂಗದ ಆಧ್ಯಾತ್ಮ ಸಾಧನೆ; ೪. ನಮ್ಮಲ್ಲಿ ರುವ ವಿಶ್ವ ಇಚ್ಛಾಶಕ್ತಿಯನ್ನು ಎಚ್ಚರಗೊಳಿಸಿ ಅದನ್ನು ಜಗತ್ತಿನ ಸೇವೆಯ ಕಡೆಗೆ ತಿರುಗಿಸುವುದು. ಬದುಕಿನ ಕ್ರಿಯಾಪೂರ್ಣ ಮುಖವನ್ನು ಪ್ರತಿನಿಧಿಸುವ ಗೀತೆಗೆ ವ್ಯಾಖ್ಯಾನ ಬರೆಯುತ್ತಾ ಅವರು ಅದರ ಎಲ್ಲಾ ಮುಖಗಳನ್ನೂ ವಿಸ್ತರಿಸಿ, ಕ್ರಿಯಾಪೂರ್ಣ ಶಕ್ತಿಯೊಂದಿಗೆ ಐಕ್ಯವಾಗಿದೆ ಎಂಬುದನ್ನು ನಿರೂಪಿಸಿದ್ದಾರೆ. ಅಲ್ಲದೆ ಈ ಭೂಮಿಯಲ್ಲಿ ಅದೊಂದು ಆಧ್ಯಾತ್ಮಿಕ ಅಭಿವ್ಯಕ್ತಿ. ಆಧ್ಯಾತ್ಮಿಕ ಉತ್ಕರ್ಷ ಪರಿಣಾಮಕಾರಿಯಾದ ಆಧ್ಯಾತ್ಮಿಕ ಸ್ಫೂರ್ತಿ ಎಂಬಂತೆ ಅದಕ್ಕೆ ಬೆಲೆ ಕಟ್ಟಿದ್ದಾರೆ. ಮೊದಲು ಹೇಳಿದ ಮೂರು ಸಾಧನಾ ಮಾರ್ಗಗಳು ಕರ್ಮವನ್ನು ಅದರ ಮೊದಲನೆಯ ಅರ್ಥದಲ್ಲೂ, ಕೊನೆಯದು ಅದರ ಎರಡನೆಯ ಅರ್ಥದಲ್ಲೂ ನಿರೂಪಿಸುತ್ತವೆ.

‘ಕರ್ತವ್ಯಕ್ಕಾಗಿ ಕರ್ತವ್ಯ’ ಎಂಬ ಭಾವನೆಯನ್ನು ಶಂಕರಾಚಾರ್ಯರು ಒತ್ತಿ ಹೇಳಿದ್ದಾರೆ. ಈಶ್ವರಾರ್ಪಣಭಾವವೆಂದರೆ ಅದೇ. ಏಕೆಂದರೆ ಅದು ಮಾನವನನ್ನು ಅವನ ಅನ್ನಮಯ ಬಯಕೆಗಳಿಂದ ಬಿಡುಗಡೆಗೊಳಿಸುತ್ತದೆ; ಅಲ್ಲದೆ ಲೌಕಿಕವಾದ ಆಕರ್ಷಣೆ, ತೃಪ್ತಿ ಇವುಗಳಲ್ಲದೆ ಆಧ್ಯಾತ್ಮಿಕ ಜೀವನಕ್ಕೆಇಚ್ಛಾಶಕ್ತಿಯ ಪರಿಣಾಮಕಾರೀ ಚಾಲನೆಯನ್ನು ತಂದು ಕೊಡುತ್ತದೆ. ಅದು ನಮ್ಮ ಕ್ರಿಯಾತ್ಮಕ ವ್ಯಕ್ತಿತ್ವಕ್ಕೆ ಒಂದು ಹೊಸ ಅರ್ಥಕೊಟ್ಟು ಒಂದು ಹೊಸ ಬೆಳಕಿನಲ್ಲಿ ಚಲಿಸುವಂತೆ ಮಾಡುತ್ತದೆ. ಇಚ್ಛಾಶಕ್ತಿ ಆಧ್ಯಾತ್ಮಿಕವಾಗಿ ರೂಪು ಗೊಳ್ಳುವುದಕ್ಕೆ ಇದು ಅಗತ್ಯ. ಅನಂತ ಇಚ್ಛಾಶಕ್ತಿಯ ಅಭಿವ್ಯಕ್ತಿಯ ಉನ್ನತ ಘಟ್ಟ ನಮ್ಮ ಚೇತನದ ಅರ್ಪಣೆಯಾಗಿ ಪೂರ್ಣ ಶರಣಾಗತಿಯಾಗಿ ಒಡಮೂಡುತ್ತದೆ.

ಶಂಕರಾಚಾರ್ಯರ ಪ್ರಕಾರ ಗೀತೆಯಲ್ಲಿ ಕ್ಷರ, ಅಕ್ಷರ, ಪುರುಷೋತ್ತಮ ಎಂಬುದಾಗಿ ಅಸ್ತಿತ್ವದ ಮೂರು ಮೂಲ ಗುಂಪುಗಳಿಗೆ ಎಡೆಯಿದೆ. ವಿಕಾಸಗಳ ಕ್ರಮ, ಕ್ಷರ – ಅದೇ ವಿಷಯದಲ್ಲಿ ಬದಲಾಗುವ ನಿಯಮ. ಅವುಗಳ ಹಿಂದೆ ಇರುವ ಸಂಬಂಧಾತ್ಮಕವಲ್ಲದ ಪರವಸ್ತು ಅಕ್ಷರ. ಕ್ಷರ-ಅಕ್ಷರಗಳ ನಡುವಣ ತತ್ತ್ವ ಪುರುಷೋತ್ತಮ. ಜಗತ್ತಿನಲ್ಲಿ ಪ್ರತಿಯೊಂದನ್ನೂ ನಿಯಂತ್ರಿಸುವುದು ಅದೇ. ನಿರಂತರ ಜ್ಞಾನ ಆನಂದಗಳ ಮೂಲವೂ ಅದೇ. ವಿಕಾಸಪಥದಲ್ಲಿ ಎಲ್ಲ ಸಂತಜೀವಿಗಳೂ ಪುರುಷೋತ್ತಮನೊಡನೆ ಸಂಬಂಧ ಕಲ್ಪಿಸಿಕೊಳ್ಳಬಹುದು. ಅವನ ಶಕ್ತಿ ಗುಣಗಳನ್ನು ಪಡೆದು ಇನ್ನೂ ಇನ್ನೂ ಮುಂದುವರಿಯ ಬಹುದು. ಈ ಗುಣಗಳು ವಿಶ್ವಸ್ವಭಾವ, ಪ್ರಭಾವಗಳನ್ನು ಪಡೆದಿದ್ದರೂ, ಅಕ್ಷರ ಬ್ರಹ್ಮನಿಗೆ ಆರೋಪಿತವಾಗಿರುವ ಎಲ್ಲಾ ಕೇಂದ್ರೀಕರಣ, ಇತಿಮಿತಿಗಳ ನಾಶದಿಂದ ಬರುವ ಪರಮ ತೃಪ್ತಿಯನ್ನು ಅವು ನೀಡಲಾರವು. ಶಂಕರರ ಪ್ರಕಾರ, ಎಷ್ಟೇ ಸೊಗಸಾಗಿದ್ದರೂ, ವೈಭವದಿಂದ ಕೂಡಿದ್ದರೂ, ವಿಕಾಸದ ಕೊನೆಯ ಹಂತ ಇದಲ್ಲ. ಅವರ ಪ್ರಕಾರ ಕೊನೆಯ ಹಂತ ಎಂದರೆ ಪರವಸ್ತುವಿನಲ್ಲಿ ನೆಲೆಗೊಳ್ಳುವುದು. ಕರ್ಮ ತತ್ತ್ವದಿಂದ ಬಿಡುಗಡೆ ಹೊಂದುವುದು. ಜ್ಞಾನಮಾರ್ಗದ ಪರಮ ಆಶ್ವಾಸನೆ ಇದೇ ಎಂಬುದು ಶಂಕರರ ಭಾವನೆ.

ನನ್ನ ‘ಶ್ರೀ ರಾಮಾಯಣ ಮಹಾನ್ವೇಷಣಂ’ ಮಹಾಕಾವ್ಯದಲ್ಲಿ ಅಡಕವಾದ ಅದ್ವೈತ ತತ್ವವನ್ನು ಶ್ರುತಪಡಿಸುವುದು ಇಲ್ಲಿ ಪ್ರಸಕ್ತವಾಗಿದೆ :

ದ್ವಿತೀಯ ಸೋಪಾನದ ೫೮ನೇ ಪ್ರಸ್ಥಾನ: ‘ಬಿಡಿಬಿಡಿಯ ನಾಡುಗಳ ಇಡಿಗೊಳಿಪ ಶಕ್ತಿಯಿದೆ ಭಾರತಕೆ’ ಪ್ರಸ್ಥಾನದ ಶೀರ್ಷಿಕೆಯೇ ಅದ್ವೈತ ಸಿದ್ಧಾಂತದಿಂದ ಪ್ರೇರೇಪಿತವಾಗಿದೆ. ಅಂದರೆ ಎಲ್ಲವನ್ನೂ ಒಂದುಗೂಡಿಸುವ ಮಹಾತತ್ತ್ವ ಅದ್ವೈತ. ಇಲ್ಲಿ ಅಗಸ್ತ್ಯ ಮಹರ್ಷಿಗಳು ಶ್ರೀ ರಾಮನಿಗೆ ಅದ್ವೈತ ಸಿದ್ಧಾಂತವನ್ನು ಬೋಧಿಸಿದ್ದು ಹೀಗೆ :

ದಕ್ಷಿಣೋತ್ತರ ಧ್ರುವಗಳಂತಿಹ
ವಸಿಷ್ಠ ವಿಶ್ವಾಮಿತ್ರರ ಪ್ರಿಯ ಶಿಷ್ಯ ನೀನಾಗಿರುವೆ
ಸಕಲ ವಿದ್ಯೆಗಳ ಧಾರೆಯೆರೆದಿಹರು ನಿನಗೆ
ಭಾರ್ಗವನು ಸರ್ವಚೈತನ್ಯ ನಿನಗರ್ಪಿಸಿಹನು
ಎನ್ನನುಭವ ನಿನಗೊರೆಯುವೆನು, ಅದುವೆ ಹಂಬಲವು
ವಿಶಾಲವಹ ವಿಶ್ವದಲಿ ಹಲವು ದೇಶಗಳು
ಇರ್ದೊಡೆಯು ಭರತವರ್ಷವನೆ ಲೋಕವೆನ್ನುವರು
ಬಿಡಿಬಿಡಿಯ ನಾಡುಗಳ ಇಡಿಗೊಳಿಪ ಶಕ್ತಿಯಿದೆ
ಭಾರತಕೆ. ಪೂರ್ಣದಿಂ ಪೂರ್ಣವ ಕಳೆಯೆ ಪೂರ್ಣವೇ
ಉಳಿವ ತತ್ತ್ವಾನ್ವೇಷಣೆಯು ಇಲ್ಲಿ ಫಲಿಸುವುದು!
ಜೀವಾತ್ ಜೀವಶಕ್ತಿ ಪರಾತ್ ಪರಾಶಕ್ತಿಯೆಂದು
ಸಂಕೇತಿಸಲ್ಪಡುತೆ ವಿಭುವಾಗಿ ನಿರಾಲಂಬ
ಯೋಗ ಸಮುದ್ಭೂತಧಾರಣ ಶಕ್ತಿಯಾಗಿಹುದು
ನಿರಾಕಾರ ಗುಣಾತೀತ ಈಶ್ವರನೆ ತನ್ನ
ಪ್ರಕೃತಿ ಪುರುಷ ರೂಪದಲಿ ವಿಭಾಗಿಸಿಕೊಳುತ
ತಾನೆ ವಿಶ್ವಸೃಷ್ಟಿ ಸ್ಥಿತಿ ಲಯವ ಗೈವುದು
ಅದುವೆ ಮಾಯಾಶಕ್ತಿಯೆಂಬರು ಜ್ಞಾನಿಗಳು ಕೆಲರು
ಲೀಲೆಯೆಂಬರು ಕೆಲರು ಅದುವೆ ಜಗವ ವಂಚಿತ
ಶುಭ್ರ ಸೂರ್ಯಜ್ಞಾನವನು ಮರೆಮಾಚುವು.