ಮೊಗಲ್ ಬಾದಶಹ ಅಕ್ಬರನ ನಂತರ ಸರ್ವಮತಗಳನ್ನು ಸಮಾನ ರೀತಿಯಲ್ಲಿ ಕಂಡು ಸರ್ವಹಿತ ಸಾಧನೆಯ ರಾಜ್ಯಭಾರ ಮಾಡಿದ ಕೀರ್ತಿ ಮೈಸೂರು ಹುಲಿ ಟೀಪುವಿಗೆ ಸಲ್ಲತಕ್ಕದ್ದು. ಮುಸ್ಲಿಂಯೇತರ ರಾಜ್ಯವೊಂದರ ಮುಸ್ಲಿಂ ಅರಸ ಎಂಬುದನ್ನು ತಿಳಿದುಕೊಂಡು ಜಾತ್ಯತೀತ ರಾಜ್ಯವಾಗಬೇಕೆಂದು ಅಪೇಕ್ಷಿಸಿದ. ಆಳವಾದ ಧರ್ಮಶ್ರದ್ಧೆಯನ್ನು ಸ್ವಂತದ ವಿಷಯವೆಂದು ಪರಿಗಣಿಸಿ ಸಾರ್ವಜನಿಕ ಜೀವನದಲ್ಲಿ ಎಲ್ಲಾ ಧರ್ಮಗಳನ್ನು ಸಮಾನವಾದ ದೃಷ್ಟಿಯಿಂದ ನೋಡಿದ. ಒಮ್ಮೆ ಹಿಂದೂ ಯುವಕನೊಬ್ಬನು ಓರ್ವ ಮುಸ್ಲಿಂ ತರುಣಿ ಯೊಬ್ಬಳನ್ನು ಮದುವೆ ಮಾಡಿಕೊಂಡನೆಂದು ಒಬ್ಬ ಫೌಜುದಾರನು ವರದಿ ಮಾಡಿಕೊಂಡಾಗ ಶರಿಯಾತ್‌ನಲ್ಲಿ ಅದಕ್ಕೆ ಅನುಮತಿ ಇಲ್ಲದಿದ್ದರೂ ಟೀಪು ಇಂತಹ ವೈಯಕ್ತಿಕ ವಿಚಾರಗಳ ಬಗ್ಗೆ ಮೂಗು ಹರಿಸುವ ಅಧಿಕಾರ ಫೌಜುದಾರನಿಗೆ ಇಲ್ಲವೆಂದು ತೀರ್ಪನ್ನು ನೀಡಿದ. ಇಂದು ಅತ್ಯಂತ ಆಧುನಿಕ ಮನೋಭೂಮಿಕೆಯುಳ್ಳ ಜನರಲ್ಲಿಯೂ ಇಂತಹ ಸಮನ್ವಯ ಪ್ರಜ್ಞೆಯಿಲ್ಲವೆಂಬುದು ಶೋಚನೀಯ ವಿಚಾರ. ದಿಂಡಿಗಲ್ ಕೋಟೆಯನ್ನು ಮುತ್ತಿದಾಗ ಅರಮನೆಯ ಹಿಂಭಾಗದಿಂದ ನುಗ್ಗಕೂಡದು ಎಂದು ಸೈನಿಕರಿಗೆ ಆಣತಿಯನ್ನು ನೀಡಿದ. ಅಲ್ಲಿ ರಾಜರ ಪೂಜಾಗೃಹವಿದ್ದು, ಅದಕ್ಕೆ ಭಂಗ ಬರಬಾರದೆಂಬುದೇ ಅವನು ಉದ್ದೇಶ. ಯಾರೋ ತನ್ನ ದಿವಾನ್ ಪೂರ್ಣಯ್ಯನ ವಿರುದ್ಧವಾಗಿ ಚಾಡಿ ಮಾತನ್ನು ಹೇಳಿ ‘ಬ್ರಾಹ್ಮಣರು ವಿಶ್ವಾಸಕ್ಕೆ ಅರ್ಹರಲ್ಲ’ ಎಂದು ನುಡಿದಾಗ ಅವರನ್ನು ಭಂಗಿಸಿ ಕುರಾನಿನ ಒಂದು ಪದ್ಯವನ್ನು ಟೀಪುವು ಉದ್ಧರಿಸಿ ಹೇಳಿದ. ‘ಒಬ್ಬನ ತಪ್ಪಿಗಾಗಿ ಇಡೀ ಸಮುದಾಯ ಕೆಟ್ಟದೆಂದು ಹಳಿಯಬಾರದು’. ಇದೇ ಪದ್ಯದ ಅರ್ಥ. ಇಂದು ನಡೆಯುತ್ತಿರುವ ಅನೇಕ ಕೋಮು ಗಲಭೆಗೆ ಯಾವುದೇ ಜನಾಂಗಕ್ಕೆ ಸೇರಿದ ಒಬ್ಬನ ಅಪರಾಧ ಕಾರಣವಾದರೆ ಇಡೀ ಜನಾಂಗವನ್ನು ಗುರಿಯಿಟ್ಟು ಹಿಂಸಾಚಾರಕ್ಕೆ ಇಳಿಯುವ ಜನತೆ ಅಥವಾ ಸಾಮಾಜಿಕ, ಧಾರ್ಮಿಕ ಮುಖಂಡರು ಅಥವಾ ರಾಜಕೀಯ ಮುಖಂಡರು ಇಂತಹ ಮಾತುಗಳಿಂದ ತಲೆ ತಗ್ಗಿಸಬೇಕಾಗಿದೆ. ಇಂದಿನ ನಡವಳಿಕೆಗಳು ನಮ್ಮ ಆಧುನಿಕ ನಾಗರಿಕತೆಗೆ ಕಳಂಕಪ್ರಾಯ ವಾದುದು. ಶ್ರೀರಂಗಪಟ್ಟಣದ ಶ್ರೀರಂಗನಾಥ ಸ್ವಾಮಿಯ ದೇವಾಲಯವು ಟೀಪು ಅರಮನೆ ಯಿಂದ ಕೇವಲ ಒಂದು ಕಲ್ಲೆಸೆತದ ದೂರದಲ್ಲಿತ್ತು. ಮಸೀದಿಯಿಂದ ಮಯಿಜಿನ್ ಪ್ರಾರ್ಥನೆಯ ಕರೆಕೊಡುವುದನ್ನು ಹೇಗೆ ಶ್ರದ್ಧೆಯಿಂದ ಆಲಿಸುತ್ತಿದ್ದನೋ, ಅಷ್ಟೇ ಶ್ರದ್ಧೆ ಗೌರವಗಳಿಂದ ದೇವಾಲಯದ ಗಂಟೆಗಳು ಮೊಳಗುವುದನ್ನು ಅವನು ಆಲಿಸುತ್ತಿದ್ದನು. ಸುಮಾರು ೧೫೬ ಹಿಂದೂ ಧಾರ್ಮಿಕ ಸಂಸ್ಥೆಗಳಿಗೆ ಧನ ಸಹಾಯ ಮಾಡಿದ ದಾಖಲೆಯಿದೆ. ಎಲ್ಲರ ಒಳಿತೇ ಅರಸರ ಮುಖ್ಯ ಕಾಳಜಿ, ಜಾತಿ, ಮತ, ಪಂಥಗಳು ಪ್ರಮುಖವಾಗಿರಲಿಲ್ಲ.

‘ಭಗವಂತನ ಏಕತೆ, ಮಾನವ ಏಕತೆ’ ಎಂಬ ಇಸ್ಲಾಂ ಧರ್ಮದ ಕ್ರಾಂತಿಕಾರಿ ಸಂದೇಶ ವನ್ನು ಅವನ ಧಮನಿ ಧಮನಿಯಲ್ಲಿ ಪ್ರವಹಿಸುತ್ತಿತ್ತು. ತನ್ನ ರಾಜ್ಯವನ್ನು ‘ಸುಲ್ತಾನಲ್-ಎ-ಖುದಾದದ್’ ಎಂದು ಕರೆದನು. ರಾಜ್ಯದ ಬೊಕ್ಕಸ ಸಾರ್ವಜನಿಕರ ಸಮಾನ ಆಸ್ತಿ ಎಂಬುದನ್ನು ಸಾಧಿಸಿ ತೋರಿಸಿದನು.

ಡೇನಿಷ್ ಮಿಶನರಿ ಫಾದರ್ ಸ್ವಾರ್ಟ್ಜ (Father Swartz) ೧೭೭೯ರಲ್ಲಿ ಶ್ರೀರಂಗ ಪಟ್ಟಣಕ್ಕೆ ಬಂದಿದ್ದನು. ಹೈದರನಿಗೆ ಸ್ವಂತವಾದ ಧರ್ಮ ಯಾವುದೂ ಇಲ್ಲವೆಂದೂ, ಪ್ರತಿಯೊಬ್ಬನನ್ನು ಅವನವನ ಧರ್ಮವನ್ನಾಚರಿಸಲು ಬಿಟ್ಟಿದ್ದನೆಂದೂ ಆತ ಹೇಳಿದ್ದಾನೆ. ಬ್ರಾಹ್ಮಣರಿಗೆ ಕೊಟ್ಟಿದ್ದ ಇನಾಂ ವ್ಯವಸ್ಥೆಯನ್ನು ಹೈದರ್ ಮುಂದುವರಿಸಿದ್ದನು. ಟೀಪುವೂ ಅದನ್ನು ರದ್ದುಪಡಿಸಲಿಲ್ಲ. ಪ್ರಜೆಗಳ ಬಗ್ಗೆ ತನ್ನದೇ ಒಂದು ‘ಧಾರ್ಮಿಕ ನೀತಿ’ ಎನ್ನುವುದು ಟೀಪುವಿಗೆ ಇರಲಿಲ್ಲ. ಅವನಿಗಿದ್ದುದು ಎರಡನೇ ನೀತಿಗಳು: ವಿದೇಶಾಂಗ ನೀತಿ ಮತ್ತು ಸ್ವದೇಶ ನೀತಿ. ಮೊದಲನೆಯದು ವಸಾಹತುಗಾರರನ್ನು ಹೊರಗಟ್ಟುವುದನ್ನು ಒಳಗೊಂಡಿತ್ತು. ಎರಡನೆಯದು ತನ್ನ ರಾಜ್ಯವನ್ನು ಪ್ರಗತಿಪರ ಮತ್ತು ಆಧುನೀಕರಣ ಮಾಡುವುದಾಗಿತ್ತು. ಶೃಂಗೇರಿ ಮಠಕ್ಕೆ ಹಾನಿಯಾದಾಗ ಟೀಪುವು ಕನ್ನಡ ಭಾಷೆಯಲ್ಲಿ ಜಗದ್ಗುರುಗಳಿಗೆ ಒಂದು ಪತ್ರವನ್ನು ಬರೆದು ಈ ರೀತಿಯಾಗಿ ಸಂಸ್ಕೃತ ಶ್ಲೋಕವನ್ನು ಉದ್ಧರಿಸುತ್ತಾನೆ. ‘ಜನರು ದುಷ್ಕಾರ್ಯಗಳನ್ನು ನಗುನಗುತ್ತಾ ಮಾಡುತ್ತಾರೆ, ಆದರೆ ಅದರ ಫಲಗಳನ್ನು ಅಳುತ್ತಾ ಅವರು ಅನುಭವಿಸಬೇಕಾಗುತ್ತದೆ’. ಟೀಪುವು ಶಾರದಾ ದೇವಾಲಯದ ಬೇರೊಂದು ಮೂರ್ತಿಯನ್ನು ಪ್ರತಿಷ್ಠಾಪಿಸಲು ಧನ ಸಹಾಯವನ್ನು ನೀಡಿದ. ವಿಗ್ರಹ ಪ್ರತಿಷ್ಠಾಪನೆಯ ನಂತರ ಪ್ರಸಾದ, ಶಾಲನ್ನು ಟೀಪುವಿಗೆ ಸ್ವಾಮೀಜಿಯವರು ಕಳುಹಿಸಿಕೊಟ್ಟರು. ಬಹುಭಕ್ತಿ ಯಿಂದ ಅವುಗಳನ್ನು ಸ್ವೀಕರಿಸಿದ ಟೀಪುವು ಶಾರದಾ ದೇವಿಗೆಂದು ಒಂದು ಚಿನ್ನದ ಜರಿಯ ಸೀರೆಯನ್ನೂ ಮೇಲು ವಸ್ತ್ರವನ್ನೂ, ಸ್ವಾಮೀಜಿಯವರಿಗೆ ಒಂದು ಜೋಡಿ ಶಾಲುಗಳನ್ನು ಭಕ್ತಿಪೂರ್ವಕವಾಗಿ ಕಳುಹಿಸಿಕೊಟ್ಟನು. ಇನ್ನೊಂದು ದಾಖಲೆಯಲ್ಲಿ ದೇವಿಗೊಂದು, ಸ್ವಾಮಿಗಳಿಗೊಂದು ಹೀಗೆ ಎರಡು ಪಲ್ಲಕ್ಕಿಯನ್ನು ಕಳುಹಿಸಿಕೊಟ್ಟನೆಂದೂ ಹೇಳಿದೆ. ಹೈದರನು ಕಾಂಜೀವರಂನ ದೇವಸ್ಥಾನಕ್ಕೆ ಶಿಲಾನ್ಯಾಸ ಮಾಡಿದ್ದ. ಆದರೆ ಅದರ ನಿರ್ಮಾಣವು ಪೂರ್ಣಗೊಳ್ಳುವುದರೊಳಗೆ ಅವನು ತೀರಿಕೊಂಡನು. ಟೀಪು ಅದನ್ನು ಕಟ್ಟಿ ಮುಗಿಸಲು ಆದೇಶ ನೀಡಿದುದಲ್ಲದೆ ಅದರ ಉದ್ಘಾಟನೆಯಲ್ಲಿಯೂ ಭಾಗವಹಿಸಿದ್ದನು.

ಇನ್ನೊಂದು ಪತ್ರದಲ್ಲಿ ಸ್ವಾಮಿಗಳಿಗೆ ‘ನಮ್ಮ ಅಭ್ಯುದಯದ ಆಧಿಕ್ಯಕ್ಕಾಗಿ ಪ್ರಾರ್ಥನೆ ಸಲ್ಲಿಸಬೇಕು. ತಮ್ಮಂತಹ ಮಹಾಪುರುಷರು ಯಾವ ನಾಡಿನಲ್ಲಿರುತ್ತಾರೆಯೋ ಆ ದೇಶವು ಒಳ್ಳೆಯ ಮಳೆ, ಬೆಳೆಯಿಂದ ಸಮೃದ್ದಿಯಾಗುತ್ತದೆ’. ಟೀಪುವು ನೀಡಿದ ನಂಜನಗೂಡು ಶ್ರೀಕಂಠೇಶ್ವರ ದೇವಾಲಯಕ್ಕೆ, ಮೇಲುಕೋಟೆಯ ಶ್ರೀ ನಾರಾಯಣಸ್ವಾಮಿಯ ದೇವಾಲಯಕ್ಕೆ ನೀಡಿದ ಕಾಣಿಕೆ ಮತ್ತು ಕೊಡುಗೆ ಸ್ಮರಣೀಯ.

ಅವನ ನ್ಯಾಯ ಸಂಹಿತೆಯು ಹೀಗೆ ಹೇಳಿತ್ತು: ‘ನಮ್ಮ ಪ್ರಜೆಗಳೊಂದಿಗೆ ಜಗಳ ವಾಡುವುದೆಂದರೆ ನಮ್ಮೊಂದಿಗೆ ನಾವು ಯುದ್ಧ ಮಾಡುವ ಹಾಗೆ. ಅವರು ನಮ್ಮನ್ನು ರಕ್ಷಿಸುವ ಗುರಾಣಿಯಿದ್ದ ಹಾಗೆ. ನಮಗೆ ಬೇಕಾದುದೆಲ್ಲವನ್ನು ಒದಗಿಸಿ ಶತ್ರುಗಳನ್ನೆದುರಿಸಲು ಅಗತ್ಯವಾದ ಶಕ್ತಿಯನ್ನು ಕಾಯ್ದಿರಿಸಿಕೊಳ್ಳುತ್ತಾರೆ’.

ಟೀಪು ಮುಂದಿನ ಪೀಳಿಗೆಗೆಂದು ಒಂದು ಸಂದೇಶವನ್ನು ನೀಡಿದ್ದಾನೆ: ‘ಮೊದಲನೆ ಯದಾಗಿ ವ್ಯಕ್ತಿಯು ಉದಾತ್ತ ಉದ್ದೇಶಕ್ಕಾಗಿ ಬದುಕಬೇಕು, ಅದಕ್ಕಾಗಿಯೇ ಸಾಯಬೇಕು’. ಅವನು ಅನೇಕ ಹಿಂದುಗಳನ್ನು ರಾಜ್ಯದ ಉನ್ನತ ಹುದ್ದೆಗಳಿಗೆ ಏರಿಸಿದ್ದನು. ಪೂರ್ಣಯ್ಯ ದಿವಾನನಾಗಿದ್ದುದಲ್ಲದೆ ಕಂದಾಯ ಮತ್ತು ಹಣಕಾಸು ವ್ಯವಹಾರಗಳನ್ನು ನೋಡಿಕೊಳ್ಳು ತ್ತಿದ್ದನು; ಕೃಷ್ಣರಾವ್ ಕೋಶಾಧಿಕಾರಿಯಾಗಿದ್ದನು; ಶಾಮ ಅಯ್ಯಂಗಾರ್‌ಗೆ ಅಂಚೆ ಸಚಿವ ಹಾಗೂ ಪೋಲೀಸ್ ಹೊಣೆಯಾಗಿತ್ತು. ನರಸಿಂಗರಾವ್ ಮತ್ತು ರಂಗ ಅಯ್ಯಂಗಾರ್ ಶ್ರೀರಂಗಪಟ್ಟಣದಲ್ಲಿ ಮುಖ್ಯವಾದ ಹುದ್ದೆಗಳಲ್ಲಿದ್ದರು. ಶ್ರೀನಿವಾಸರಾವ್ ಮತ್ತು ಅಪ್ಪಾಜಿ ರಾವ್ ಇಬ್ಬರೂ ಪ್ರಸಿದ್ಧ ಮುತ್ಸದ್ದಿಗಳು. ಮೂಲಚಂದ ಮತ್ತು ಸಜ್ಜನರಾವ್ ಮೊಗಲ್ ದುರ್ಬಾರಿನಲ್ಲಿ ಅವನ ಪ್ರತಿನಿಧಿಗಳಾಗಿದ್ದರು. ನಾಗಪ್ಪ ಕೊಡಗಿನ ಫೌಜುದಾರನಾಗಿದ್ದನು. ಹರಿಸಿಂಗ್ ಒಂದು ಅಶ್ವದಳದ ಮುಖ್ಯಸ್ಥನಾಗಿದ್ದರೆ ಶಿವಾಜಿ ಎಂಬ ಮರಾಠ ಸರದಾರನು ೩೦೦೦ ಅಶ್ವದಳದ ಮುಖ್ಯಸ್ಥನಾಗಿದ್ದ. ಇತ್ತೀಚೆಗೆ ಸುಸಂಸ್ಕೃತ ವ್ಯಕ್ತಿಯೆಂದು ಸಾದಾರವಾಗಿ ಅತ್ಯಂತ ಮುತ್ಸದ್ದಿತನದಿಂದ ಆಡಳಿತ ನಡೆಸಿಕೊಳ್ಳುತ್ತಿದ್ದನೆಂದು ದಾಖಲೆಗಳಿಂದ ತಿಳಿದು ಬರುತ್ತದೆ.

ಟೀಪುವಿನ ರಾಜಕೀಯ, ಸಾರ್ವಜನಿಕ ಜೀವನದ ಅನೇಕ ಮುಖಗಳನ್ನು ನಿಷ್ಪಕ್ಷಪಾತವಾಗಿ ಅವಲೋಕಿಸಿದರೆ ಅವನ ಧರ್ಮಸಹಿಷ್ಣುತೆ ಮತ್ತು ಜಾತ್ಯತೀತ ಸಿದ್ಧಾಂತಗಳ ಅರಿವಾಗುತ್ತದೆ. ಬ್ರಿಟಿಷರು ರೂಪಿಸಿದ ಚರಿತ್ರೆಯ ದೋಷವನ್ನು ಇಂದೂ ಕೂಡ ಕೆಲವು ಚರಿತ್ರೆಕಾರರು ಮುಂದುವರಿಸಿ ಭಾರತದ ಇತಿಹಾಸವನ್ನು ಮಲಿನಗೊಳಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಯಾವುದೇ ಒಂದು ರಾಜಕೀಯ ಕಾರಣದಿಂದ, ರಾಜ್ಯದ ಹಿತಾಸಕ್ತಿಯಿಂದ ಅಥವಾ ಅವರು ಬ್ರಿಟಿಷರ ಜತೆ ಹೊಂದಾಣಿಕೆ ಮಾಡಿದ ಕ್ರಮದಿಂದ ಟೀಪು ದಾಳಿ ಮಾಡಿದ್ದರೆ ಅವನನ್ನು ಮತಾಂಧನೆಂದು ಪರಿಗಣಿಸುವ ಪ್ರವೃತ್ತಿ ಇತಿಹಾಸಕ್ಕೆ ಅಪಚಾರವನ್ನು ಮಾಡಿದಂತೆ. ಹಾಗೆಂದ ಮಾತ್ರಕ್ಕೆ ಇತಿಹಾಸದಲ್ಲಿ ಅನೇಕ ಹಿಂದೂ ರಾಜರು ಮತ್ತೋರ್ವ ಹಿಂದೂ ರಾಜರ ಮೇಲೆ  ಮಾಡಿದ ದಾಳಿ ಅಥವಾ ಆಕ್ರಮಣ ಹಿಂದೂ ವಿರೋಧಿ ಧೋರಣೆಯಾಗುವುದಿಲ್ಲ ಅಥವಾ ಟೀಪು ಸುಲ್ತಾನನು ನಿಜಾಮನ ಮೇಲೆ ಮಾಡಿದ ಯುದ್ಧಗಳು ಮುಸ್ಲಿಂ ವಿರೋಧಿ ಧೋರಣೆ ಗಳಾಗುವುದಿಲ್ಲ. ಇಂತಹ ವಿಚಾರಗಳನ್ನು ಸಮಗ್ರ ದೃಷ್ಟಿಯಿಂದ ನೋಡದೆ ತಮ್ಮ ಮತೀಯ ಕಂಗಳಿಂದ ನೋಡುತ್ತಿರುವ ಇತಿಹಾಸಕಾರರು ಮತಾಂಧರಾಗುತ್ತಾರೆಯೇ ಹೊರತು ಅನ್ಯಥಾ ಇಲ್ಲ. ಮಹಾತ್ಮಾಗಾಂಧೀಜಿಯವರು ‘ಯಂಗ್ ಇಂಡಿಯಾ’ದಲ್ಲಿ ‘ಟೀಪುವು ಹಿಂದೂ-ಮುಸ್ಲಿಂ ಐಕ್ಯತೆಯ ಮೂರ್ತರೂಪ’ ಎಂದು ವರ್ಣಿಸಿದ್ದು ಸಮುಚಿತವಾಗಿದೆ.