೨೦ನೇ ಶತಮಾನದ ಸತ್ಯ, ಶಾಂತಿ, ಅಹಿಂಸೆಯ ಶ್ರೇಷ್ಠ ಪ್ರವಾದಿ ಮಹಾತ್ಮಾ ಗಾಂಧಿಯವರೆಗೆ ನೊಬೆಲ್ ಪ್ರಶಸ್ತಿ ಬರಲಿಲ್ಲ. ಬದಲಿಗೆ ಅಮೆರಿಕದ ಸಮರನೀತಿ ನಿರೂಪಿಸಿದ, ವಿಯೆಟ್ನಾಂನ ಬರ್ಬರ ಹಿಂಸಾಚಾರದ ಕುಖ್ಯಾತ ಅಮೆರಿಕದ ವಿದೇಶಾಂಗ ಸಚಿವ ಹೆನ್ರಿ ಕಿಸಿಂಜರ್‌ಗೆ ಶಾಂತಿಗಾಗಿ ನೊಬೆಲ್ ಪ್ರಶಸ್ತಿ ನೀಡಲಾಯಿತು. ಟೋಮ್ ಲೆಹರರ್ ಅಮೆರಿಕದ ವ್ಯಂಗ್ಯ ವಿನೋದ ಗೀತ ರಚನಕಾರ. ಈ ಘಟನೆಯಿಂದ ನೊಂದು ತಾನು ಗೀತರಚನೆಯಿಂದ ನಿವೃತ್ತನಾಗುವೆನೆಂದು ಘೋಷಿಸಿ “ವಿನೋದವಿನ್ನು ಮುಂದೆ ಸಿಗದು” ಎಂಬ ಹಾಡು ಬರೆದ. ಗಾಂಧೀಜಿಯವರು ದಿವಂಗತರಾದಾಗ ವಿಶ್ವಸಂಸ್ಥೆ ತನ್ನ ಧ್ವಜವನ್ನು ಕೆಳಗಿಳಿಸಿ ಯಾರಿಗೂ ನೀಡದ ಗೌರವ ನೀಡಿತ್ತು. ಬಹುಶಃ ಯಾವುದೇ ಅಧಿಕಾರ ಪೀಠ ಏರದ ಒಬ್ಬ ನಾಯಕನಿಗೆ ಇಂತಹ ಜಾಗತಿಕ ಗೌರವ ದೊರಕಿದ ದೃಷ್ಟಾಂತ ಬೇರೆ ಯಾವುದೇ ಸಂದರ್ಭವಿಲ್ಲ.

ನ್ಯೂಯಾರ್ಕಿನ ಒಬ್ಬ ಯಹೂದಿ ವಿಮರ್ಶಕ ಹಯೀಂ ಗ್ರೀನ್‌ಬರ್ಗ್ ಮಹಾತ್ಮರ ಬಗ್ಗೆ ಈ ರೀತಿ ಉದ್ಗಾರ ತೆಗೆದ “ಅವತಾರದ ಕಲ್ಪನೆ ನಿಜವೆನ್ನುವುದಾದರೆ ಗಾಂಧೀಜಿಯವರು ಒಂದು ಅವತಾರ….ಬಹುಶಃ ಕ್ರಿಸ್ತಪೂರ್ವ ಮೂರನೆ ಶತಮಾನದಲ್ಲಿ ‘ಸ್ವರ್ಗ ಸದೃಶ ಸಾಮ್ರಾಜ್ಯ’ವನ್ನು ಹೊಸ ಸಮುದಾಯ ಕಲ್ಪನೆಯಲ್ಲಿ ಸ್ಥಾಪಿಸಿದ ಅಶೋಕ ಚಕ್ರವರ್ತಿಯ ಅವತಾರವೇ ಗಾಂಧಿಯಿರಬಹುದೆ? ಯಹೂದಿ ಪರಿಭಾಷೆಯಲ್ಲಿ ಅಂತಃಕರಣದಿಂದ ಕೂಡಿದ ಕಾನೂನೇ ಉತೃಷ್ಟ. ಮೂರು ಸಾವಿರ ವರ್ಷಗಳ ಹಿಂದಿನ ಭಾರತದ ಅಹಿಂಸಾ ಧರ್ಮ-ಕೊಲ್ಲದಿರುವ, ನೋವನ್ನುಂಟುಮಾಡದಿರುವ, ಪ್ರೀತಿ ಕಾರುಣ್ಯದ ಸಂವಿಧಾನವನ್ನು ನಿರ್ಮಿಸಲು ಹೊರಟ ಜೀವನದ ಅನ್ವೇಷಣೆಯ ಸಾಕಾರ ಪುರುಷ ಮಹಾತ್ಮಾಗಾಂಧಿ”.

ಒಂದೆಡೆ ಯಾಂತ್ರಿಕ ಶಕ್ತಿ ದೈತ್ಯರೂಪದ ಹೆಡೆಯಾಡಿಸುತ್ತಿದ್ದರೆ ಆತ್ಮಶಕ್ತಿಯಿಂದ ಕೃಷ್ಣಾವತಾರಿಯಾಗಿ ಶಾಂತಿ ನರ್ತನ ಗೈದ ಅದ್ಭುತ ವ್ಯಕ್ತಿತ್ವ ಗಾಂಧಿಯವರದ್ದು. ಡಾ. ಅಂಬೇಡ್ಕರ್‌ರವರು ಪೂನಾ ಒಪ್ಪಂದದ ಅನಂತರ ಹೇಳಿದ ಒಂದು ಮಾತನ್ನು ಜ್ಞಾಪಿಸುವುದು ಅನಿವಾರ‍್ಯ – “ಸತ್ಯದ ನಂತರ ಅಹಿಂಸೆಗೆ ಅಗ್ರಸ್ಥಾನವನ್ನು ನೀಡಿದವರು ಮಹಾತ್ಮಾಗಾಂಧಿ. ನನ್ನ ಮತ್ತು ಆತನ (ಗಾಂಧಿ) ಮಧ್ಯೆ ಎಷ್ಟೊಂದು ಸಾಮ್ಯವಿದೆ ಯೆಂಬುದನ್ನು ಆತನನ್ನು ಭೇಟಿ ಮಾಡಿದಾಗ ತಿಳಿದು ಅತ್ಯಾಶ್ಚರ್ಯವಾಗಿದೆ  ಎಂಬುದನ್ನು ನಾನು ಒಪ್ಪಿಕೊಳ್ಳಲೇ ಬೇಕು” ಬಹುಶಃ ಮಹಾತ್ಮಾಗಾಂಧಿ ಮತ್ತು ಅಂಬೇಡ್ಕರ್ ಮಧ್ಯೆ ವ್ಯತ್ಯಾಸದ ಇತಿಹಾಸವನ್ನು ಸೃಷ್ಟಿಸುವವರಿಗೆ ಡಾ. ಅಂಬೇಡ್ಕರ್‌ರವರ ಈ ಮಾತನ್ನು ಜ್ಞಾಪಿಸಬೇಕು.

ಡಿ.ಎಸ್. ಆಂಡ್ರೋಸ್ ಮಹಾಶಯರು ತನ್ನ ಮಾತಿನಲ್ಲಿ ಗಾಂಧೀಜಿಯವರ ಸಿದ್ಧಾಂತಕ್ಕೆ ಸ್ಪಷ್ಟವಾದ ವ್ಯಾಖ್ಯೆ ನೀಡುತ್ತಾರೆ; “ಗಾಂಧೀಜಿಯವರು, ಎಂದೆಂದಿಗೂ ನಾಶವಾಗದಂತಹ ಅಡಿಗಲ್ಲುಗಳ ಮೇಲೆ ಸತ್ವಪೂರ್ಣ ನಗರಗಳನ್ನು ನಿರ್ಮಿಸುತ್ತಿದ್ದಾರೆ. ಅವುಗಳ ನೆಲೆಗಟ್ಟು, ದೇವರ ಸಾಮ್ರಾಜ್ಯದಲ್ಲಿ ಆಳವಾಗಿ ಸತ್ಯದ ಮೇಲೆ ಭದ್ರವಾಗಿದೆ. ಬಡವರ ಶೋಷಣೆಯ ಶಕ್ತಿಯನ್ನು ಈ ನಿರ್ಮಾಣ ಕಾರ್ಯಕ್ಕೆ ಬಳಸಿಕೊಂಡಿಲ್ಲ. ಪ್ರೀತಿ, ಭಕ್ತಿ ಮತ್ತು ಸೇವೆಗಳೇ ಈ ನಗರದ ಅಲಂಕಾರಗಳಾಗಿವೆ. ಯಾವುದೇ ಸೈನಿಕಶಕ್ತಿ ನಗರದ ಅಲಂಕಾರಗಳಾಗಿಲ್ಲ. ಯಾವುದೇ ಶಕ್ತಿ ಈ ನಗರದ ಗಡಿ ಪ್ರದೇಶಗಳನ್ನು ರಕ್ಷಿಸುವ ಹೊಣೆ ಹೊತ್ತಿರುವುದಿಲ್ಲ. ಶಾಂತಮಯಿ, ಸ್ನೇಹಮಯಿ ಆತ್ಮಗಳೇ ಆ ಕೆಲಸವನ್ನು ನಿರ್ವಹಿಸಿಕೊಂಡಿವೆ. ಯಾವುದೇ ಕಾಲ ಇಲ್ಲವೇ ವರ್ಣಭೇದ ನೀತಿಗಳಿಗೆ ಈ ನಗರದಲ್ಲಿ ಆಸ್ಪದವಿಲ್ಲ. ಜಾತೀಯ ಸಂಘರ್ಷಣೆ ಈ ನಗರದ ಅಭಿವೃದ್ದಿಗೆ ಮಾರಕ, ಅದರ ಸಾಮ್ರಾಜ್ಯವೆಂದರೆ ಹೃದಯವೇ ಆಗಿದೆ”.

ಐನ್‌ಸ್ಟೀನ್ ಮತ್ತು ಗಾಂಧಿ ಇಬ್ಬರೂ ಜಾಗತಿಕ ಜೀವನದ ಎರಡು ಪ್ರಮುಖ ಮೌಲ್ಯಗಳ ಪ್ರತೀಕಗಳು. ಭೌತಶಕ್ತಿ ಮತ್ತು ಆತ್ಮಶಕ್ತಿಯ ವಿರಾಟ್ ಪ್ರಖರತೆಯ ದರ್ಶನ ಮಾಡಿಸಿದ ಯುಗ ಪ್ರವರ್ತಕರು. ವಿಜ್ಞಾನ ಮತ್ತು ಆತ್ಮಜ್ಞಾನ ಒಂದಕ್ಕೆ ಮತ್ತೊಂದು ಪೂರಕ ಎಂದು ಸಾಧಿಸಿದ ದಾರ್ಶನಿಕರು. ಡಾ. ರಾಧಾಕೃಷ್ಣನ್ ಅವರು ವ್ಯಾಖ್ಯಾನ ಉಲ್ಲೇಖಾರ್ಹ. “ಮಾನವ ಸಮಾಜದ ವಿಕಾಸಪಥಕ್ಕೆ ಮೂರು ಮಜಲುಗಳುಂಟು; ಮೊದಲನೆಯದು ಪಶುಬಲದ ಕಾಡುನ್ಯಾಯದ ರಾಜ್ಯ; ಅಲ್ಲಿ ಸ್ವಾರ್ಥ ಮತ್ತು ಹಿಂಸೆ ತುಂಬಿರುತ್ತವೆ. ಎರಡನೆಯದು ಕಾನೂನು ಕಟ್ಟಳೆಗಳ ರಾಜ್ಯ; ಅಲ್ಲಿ ನ್ಯಾಯಾಲಯಗಳು, ಪೊಲೀಸರು, ಸೆರೆಮನೆಗಳು ಎದ್ದು ಕಾಣುತ್ತವೆ. ಮೂರನೆಯದಾದ ಮಾನವೀಯ ಸಮಾಜದಲ್ಲಿ ಅಹಿಂಸೆ, ನಿಸ್ವಾರ್ಥತೆ ಅರಳಿರುತ್ತದೆ. ಅಲ್ಲಿ ಪ್ರೇಮವೇ ಸಹಜ ಕಾನೂನು. ಅದೇ ಸುಸಂಸ್ಕೃತ ಮಾನವ ಕುಲದ ಗುರಿ. ಬಾಪೂಜಿ ಜೀವನ ಸಂದೇಶಗಳು ಈ ಗುರಿಯ ಹತ್ತಿರಕ್ಕೆ ನಮ್ಮನ್ನು ಕೊಂಡೊಯ್ದಿವೆ.”

ಗಾಂಧೀಜಿ ಒಂದು ಮಾತನ್ನು ಎತ್ತಿ ಹೇಳುತ್ತಿದ್ದರು; “ಯಾವ ಮಹಾಯುದ್ಧದಲ್ಲೇ ಆಗಲಿ ಹೋರಾಡುವವರ ಸಂಖ್ಯೆ ನಿರ್ಣಾಯಕವಲ್ಲ; ಜಗತ್ತಿನ ಮಹಾವ್ಯಕ್ತಿಗಳೆಲ್ಲಾ ಏಕಾಂಗಿಯಾಗಿ ನಿಂತವರು; ಝರಾತುಷ್ಟ್ರ, ಬುದ್ಧ, ಏಸು, ಮಹಮ್ಮದ್ ಪೈಗಂಬರ್ ಮುಂತಾದ ಎಲ್ಲ ಪ್ರವಾದಿಗಳನ್ನೂ ಗಮನಿಸಿ. ಅವರಿಗೆ ತಮ್ಮ ಸತ್ಯನಿಷ್ಠೆಯಲ್ಲೂ ಭಗವಂತನ ಅನುಗ್ರಹದಲ್ಲೂ ಜೀವಂತ ಶ್ರದ್ಧೆಯಿತ್ತು. ಭಗವಂತ ತಮ್ಮ ಪಕ್ಕದಲ್ಲೇ ಇದ್ದಾನೆಂಬ ಪೂರ್ಣ ವಿಶ್ವಾಸ ಇದ್ದುದರಿಂದ ತಾವು ಏಕಾಂಗಿಗಳು ಎಂಬ ಭಾವನೆಯೇ ಅವರಿಗೆ ಬರಲಿಲ್ಲ”.

ಅವರ ಸಿದ್ಧಾಂತದ ಸ್ಪಷ್ಟ ಅರಿವಿಲ್ಲದ ಹಲವು ವಿದ್ವಾಂಸರು ಅನೇಕ ಬಾರಿ ರಂಗುರಂಗಿನ ಶಬ್ದದಿಂದ ಅವಹೇಳನ ಮಾಡುವ ಪರಿಪಾಠ ಬೆಳೆಯುತ್ತಿದೆ. ಮಹಾತ್ಮರನ್ನು ಕೊಂದ ಗೋಡ್ಸೆಯನ್ನೇ ವೈಭವೀಕರಿಸುವ ಪ್ರವೃತ್ತಿಗೂ ಕಡಿಮೆಯಿಲ್ಲ. ಹಲವು ಲೇಖನಗಳಲ್ಲಿ ‘ಸೋತ ದೇವರು’ (The God That Failed) ಎಂಬುದಾಗಿ ಹಗುರವಾಗಿ ಇತಿಹಾಸವನ್ನು ಅಪಭ್ರಂಶ ಮಾಡಿ ಇಂದಿನ ಜನಾಂಗವನ್ನು ದಾರಿ ತಪ್ಪಿಸುವ ಕೆಲಸ ನಿರಂತರವಾಗಿ ಸಾಗಿದೆ. ಅಲ್ಲಲ್ಲಿಂದ ಅವರು ಹೇಳಿದ ಮಾತುಗಳನ್ನು ತಮ್ಮ ದುರುದ್ದೇಶಕ್ಕಾಗಿ ಬಳಸಿ ಗಾಂಧಿತತ್ವ ವನ್ನು ಅಪ್ರಸ್ತುತವೆನ್ನುವ ಈ ಹೊಸ ವ್ಯಾಖ್ಯೆಯ ಬಗ್ಗೆ ಎಚ್ಚರಿಕೆ ವಹಿಸಬೇಕಾಗಿದೆ. ಆಧ್ಯಾತ್ಮದಲ್ಲಿ ಮಾತ್ರವಲ್ಲ, ಆರ್ಥಿಕ ಸಿದ್ಧಾಂತದ ದೃಷ್ಟಿಯಲ್ಲಿಯೂ ಇಂದು ಅಥವಾ ಮುಂದು ಕೂಡ ಗಾಂಧೀಜಿಯವರು ಪ್ರಸ್ತುತ. ಇತ್ತೀಚೆಗೆ ಮ್ಯಾನೇಜ್‌ಮೆಂಟ್ ಗುರು ಎಂದೇ ಪ್ರಖ್ಯಾತರಾದ ಸಿ.ಕೆ. ಪ್ರಹ್ಲಾದ್, ತಾವು ಬರೆದ “The fortune At the Bottom of the Pyramid” ಎಂಬ ಗ್ರಂಥದಲ್ಲಿ ಪರಿಣಾಮಕಾರಿಯಾಗಿ ಪ್ರತಿಪಾದಿಸಿದ ಬಡತನವನ್ನು ನಿವಾರಿಸುವ ಆಧುನಿಕ ಆರ್ಥಿಕ ಸಿದ್ಧಾಂತಕ್ಕೆ ಅತಿ ಹತ್ತಿರದ್ದಾಗಿರುವ ದೃಷ್ಟಿಯ ಗಾಂಧೀಜಿ ಯವರು ಅತ್ಯಂತ ಎತ್ತರದ ಆರ್ಥಿಕ ತಜ್ಞರಾಗಿ ಮುಂದೆ ನಿಲ್ಲುತ್ತಾರೆ. ೧೯೯೮ರಲ್ಲಿ ಬಹುರಾಷ್ಟ್ರೀಯ Apple Computer ಸಂಸ್ಥೆ ಗಾಂಧೀಜಿಯವರನ್ನು ತಮ್ಮ ಜಾಹಿರಾತಿನಲ್ಲಿ ತೋರಿಸಿ ಸಮುದಾಯದ ಸಂಘಟನೆಯಿಂದ ಬಹುರಾಷ್ಟ್ರ ಕಂಪನಿಗಳನ್ನು ಕಟ್ಟಲು ಸಾಧ್ಯವಿದೆ ಎಂದು ನಿರೂಪಿಸಿತ್ತು. ಇಂದಿನ ಅನೇಕ ಬಹುರಾಷ್ಟ್ರೀಯ ಕಂಪನಿಗಳು ಮಹಾತ್ಮ ಗಾಂಧಿಯವರ ಆಡಳಿತ ಸೂತ್ರಗಳನ್ನು ಅನುಕರಿಸುತ್ತವೆ. ಆದರೆ ನಮ್ಮ ರಾಷ್ಟ್ರದ ದೊಡ್ಡ ದೊಡ್ಡ ಕಂಪನಿಗಳಿಗೆ ಈ ತಿಳಿವಳಿಕೆ ಬಾರದಿರುವುದು ದುರದೃಷ್ಟಕರ. ಬಾಪೂಜಿ ಅನೇಕ ಬಾರಿ ಪರಿಸರದ ಬಗ್ಗೆ ನೀಡಿರುವ ಎಚ್ಚರಿಕೆ ಅವರ ಕಾಲದಲ್ಲಿ ಅಷ್ಟು ಗಂಭೀರ ವಾಗಿರದಿದ್ದರೂ – ಜೈವಿಕ ಶಕ್ತಿಯ ಸತ್ವವನ್ನು ಉಳಿಸುವ ವಿಚಾರದಲ್ಲಿ ನೀಡಿರುವ ಎಚ್ಚರಿಕೆ ಅವರ ದೂರದರ್ಶಿತ್ವಕ್ಕೆ ಸಾಕ್ಷಿ. ಈ ಬಗ್ಗೆ ಅವರು ಹೇಳಿದ ಮಾತು ಬಹಳ ಪ್ರಸ್ತುತಃ “ಸರ್ವರ ಆವಶ್ಯಕತೆಗಳನ್ನು ಪೂರೈಸುವ ಶಕ್ತಿ ಪ್ರಕೃತಿಗಿದೆ. ಆದರೆ ಕೆಲವೇ ಜನರ ದುರಾಸೆ ಯನ್ನು ತೀರಿಸಲು ಸಾಧ್ಯವಿಲ್ಲ”. ಗಾಂಧೀಜಿಯವರು ಯಾವುದೇ ಆರ್ಥಿಕ ಅಭಿವೃದ್ದಿಯ ಹೃದಯದಲ್ಲಿ ಬಡಸಮುದಾಯದ ಕಲ್ಯಾಣವಿರಬೇಕೆಂಬುದು ಅಂದೇ ಸಾರಿದ್ದರು. ನೀತಿ ನಿರೂಪಕರಿಗೆ ಈ ರೀತಿ ಹೇಳಿದ್ದರು. “ನೀನೆಂದಾದರೂ ನಿನ್ನ ಆಡಳಿತದಲ್ಲಿ ಶಂಕೆ ಯುಂಟಾದಾಗ ಅತ್ಯಂತ ಕಡುಬಡವ ಅಥವಾ ದುರ್ಬಲ ಮನುಷ್ಯನ ಮುಖ ನೆನಪು ಮಾಡಿಕೋ. ನೀನು ತೆಗೆದುಕೊಳ್ಳಬೇಕಾದ ಹೆಜ್ಜೆ ಅವನಿಗೇನಾದರೂ ಪ್ರಯೋಜನ ವಾಗುವುದೆ? ಅವನ ಜೀವನ ಮತ್ತು ಗುರಿಯ ದಿಕ್ಕಿನಲ್ಲಿ ನೀನು ರೂಪಿಸುವ ನೀತಿ ಸಹಕಾರಿಯಾಗುವುದೆ?’ ಆಡಳಿತ ಪರಿಕ್ರಮದ ನೈತಿಕ ತಳಹದಿಯ ಬಗ್ಗೆ ಯೋಚಿಸುತ್ತಿರುವ ಇಂದಿನ ಜಗತ್ತಿನ ಆಡಳಿತ ತಜ್ಞರು ಬಾಪೂಜಿಯ ನೈತಿಕ ನಿರೂಪಣೆಗಳನ್ನು ಜ್ಞಾಪಿಸಿ ಕೊಳ್ಳುವುದು ವಿಹಿತ. ಜಗತ್ತಿನ ಮೂಲ ಚಿಂತಕರಾದ ಪ್ಲೇಟೋ, ಕಾರ್ಲ್‌ಮಾರ್ಕ್ಸ್, ಟಾಲ್‌ಸ್ಟಾಯ್ ಪಂಕ್ತಿಯಲ್ಲಿ ಸೇರಿದವರು ದಾರ್ಶನಿಕ ಬಾಪೂಜಿ.

ಈ ದೇಶದಲ್ಲಿ ಬೆಳಗಿದ ಗಾಂಧೀಜಿಯವರ ಜ್ಯೋತಿ ಸಾಧಾರಣ ಬೆಳಕಲ್ಲ. ಸಾವಿರಾರು ವರ್ಷಗಳು ಕಳೆದರೂ ಆ ಬೆಳಕು ಭಾರತದಲ್ಲಿ ಇನ್ನೂ ಬೆಳಗುತ್ತಿರುತ್ತದೆ. ಜಗತ್ತು ಅದಕ್ಕೆ ಸಾಕ್ಷಿಯಾಗುತ್ತದೆ. ಅನೇಕ ತಪ್ತ ಹೃದಯಗಳಿಗೆ ಸಾಂತ್ವನದ ಅಮೃತಧಾರೆಯಾಗುತ್ತದೆ. ಈ ಬೆಳಕು ಜೀವಂತ ಸತ್ಯದ ಸ್ವರೂಪ. ಈ ಶಾಶ್ವತ ವ್ಯಕ್ತಿ ಶಾಶ್ವತ ಸತ್ಯದೊಡನೆ ನಮ್ಮೊಡನಿದ್ದು ಸರಿಯಾದ ಮಾರ್ಗ ತೋರಿ ತಪ್ಪು ದಾರಿಯಿಂದ ರಕ್ಷಿಸಿ ಈ ಸನಾತನ ರಾಷ್ಟ್ರದ ಸ್ವಾತಂತ್ರ್ಯ ಗಳಿಸಿಕೊಟ್ಟರು! ಸರೋಜಿನಿ ನಾಯ್ಡು ಹೇಳಿದಂತೆ; “ಅವರೊಬ್ಬ ಸದಾ ಕಾರ್ಯೋನ್ಮುಖನಾದ ಓರ್ವ ಮಹಾಕವಿ! ಅವರ ಬದುಕೇ ಒಂದು ಮಹಾಕಾವ್ಯ”.