ಭಾರತದ ಪ್ರತಿಭಾವಂತ ಇತಿಹಾಸಕಾರ ಡಿ. ಕೋಸಂಬಿ ೧೯೬೪ರಲ್ಲಿ ಭಾರತದ ಪ್ರಾಚೀನ ಇತಿಹಾಸವನ್ನು ನಯವಾದ ಮಂಜಿಗೆ ಹೋಲಿಸಿ – “ಭಾರತದಲ್ಲಿ ಮಿಥ್ಯಾಕಲ್ಪನೆ ಮತ್ತು ಐತಿಹ್ಯವನ್ನು ಮೀರಿದ ದಾಖಲೆಗಳಿಲ್ಲದ ಅಸ್ಪಷ್ಟ ಪರಂಪರೆಯೊಂದಿದೆ”. ಆಕರ ಶೋಧ, ಘಟನಾಶೋಧ ಹಂತಗಳನ್ನು ದಾಟಿ ಇಂದು ಸಂಸ್ಕೃತಿ ಶೋಧದತ್ತ ಕ್ರಮಿಸುತ್ತಲಿದೆ. ಆ ಸಂದರ್ಭದಲ್ಲಿ ಆಕರವಾಗಿ ಬರುವ ಶಿಷ್ಟಪದ ‘ಪುರಾಣ’ ಜನಪದ ‘ಐತಿಹ್ಯ’ಗಳನ್ನು ಮೊದಲು ಪರೀಕ್ಷೆಗೆ ಗುರಿಪಡಿಸಬೇಕಾಗುತ್ತದೆ. ಮತ-ಧರ್ಮ ಪ್ರಧಾನವಾದ ಭಾರತ ದಲ್ಲಂತೂ ಇದು ತೀರಾ ಅಗತ್ಯವಾಗಿದೆ. ಈ ಅಗ್ನಿ ಪರೀಕ್ಷೆಯಲ್ಲಿ ಗೆದ್ದು ಬಂದ ಆಕರಗಳನ್ನು ಆಧಾರವಾಗಿ ಇಟ್ಟುಕೊಂಡು ಕಳೆದುಹೋದ ಇತಿಹಾಸವನ್ನು ಪ್ರತ್ಯಕ್ಷ-ಶಬ್ದ-ಅನುಮಾನ ಸ್ವರೂಪಗಳಿಂದ ಆತನು ಶೋಧಿಸಬೇಕಾಗುತ್ತದೆ. ಹೀಗೆ ಮಾಡುವುದರ ಉದ್ದೇಶ ಗತಕಾಲದ ಚರಿತ್ರೆಯನ್ನು ಎತ್ತಿತರುವ ನೆಪದಲ್ಲಿ ಸಮಕಾಲೀನ ಚಾರಿತ್ರಿಕ ಪ್ರಜ್ಞೆಯನ್ನು ಜಾಗ್ರತಗೊಳಿ ಸುವುದಾಗಿದೆ. ಚರಿತ್ರೆಯೆನ್ನುವುದು ಅಭಿಮಾನದ್ದಿರಲಿ. ಅಪಮಾನದ್ದಿರಲಿ ಅದು ನಮ್ಮ ವರ್ತಮಾನ ಬದುಕಿಗೆ ದೊಡ್ಡ ಪಾಠವಾಗಿ ಪರಿಣಮಿಸುತ್ತದೆ. ಆದುದರಿಂದ ಗತಕಾಲದ ಶೋಧವು ಶೋಧಕ್ಕಾಗಿ ಅಲ್ಲ. ವರ್ತಮಾನದ ನಿರ್ಮಾಣಕ್ಕಾಗಿ; ಅದಕ್ಕಾಗಿಯೇ ಹೇಳುವುದು ‘ಇತಿಹಾಸವನ್ನು ಮರೆತವರು ಇತಿಹಾಸವನ್ನು ಸೃಷ್ಟಿಸಲಾರರು’. ಆದರೆ ಯಾವ ಇತಿಹಾಸ? ಸತ್ಯದ ಮೂಸೆಯಲ್ಲಿ, ಜ್ಞಾನದ ತಕ್ಕಡಿಯಲ್ಲಿ ತೂಗಿ ಘನತೆಯನ್ನು ಪಡೆದ ಇತಿಹಾಸವನ್ನು ಮರೆಯಲಾಗದು. ‘ಇತಿಹಾಸ ಬದಲಾಗದು’ – ಅಂದರೆ ಭಾವನೆ ಅಥವಾ ಮಿಥ್ಯಾ ಕಲ್ಪನೆ ಗಳಲ್ಲ! ಇತಿಹಾಸದ ಸತ್ಯಗಳು ಸದಾ ಸಾರ್ವಕಾಲಿಕವಲ್ಲ. ಬದಲಾಗುವ ಜಗದ ವಿಜ್ಞಾನ ಮತ್ತು ಜ್ಞಾನಕ್ಕೆ ಒಡ್ಡುವ ನಿರಂತರ ಪರೀಕ್ಷೆಯಲ್ಲಿ ಉತ್ತೀರ್ಣವಾಗಬೇಕು.

ಭಾರತ, ಸುಮೇರು ಮತ್ತು ಈಜಿಪ್ಟ್‌ನಂತಹ ಪ್ರಾಚೀನ ನಾಗರಿಕತೆಗಳನ್ನು ಸೃಜಿಸಿದ ದೇಶವೆಂದೇ ಹೆಸರುವಾಸಿಯಾಗಿದೆ. ಮೌಲಾನಾ ತಾರಿಕ್ ಅಬ್ದುಲ್ ಎಂಬ ಮಧ್ಯಏಷ್ಯಾದ ಇತಿಹಾಸಕಾರ ಅವನ ಪುಸ್ತಕ ‘Now or Never’ ಎಂಬುದರಲ್ಲಿ ಸಬಿಯನ್ ನಾಗರಿಕತೆ ಕ್ರಿ.ಪೂ. ೧೦ನೇ ಶತಮಾನದಲ್ಲಿ ಭಾರತದಿಂದ ಆಮದುಗೊಂಡಿದೆಯೆಂದು ಪ್ರಸ್ತಾವಿಸುತ್ತಾನೆ. ಭಾರತದಿಂದ ಬೌದ್ಧ ಸನ್ಯಾಸಿಗಳನ್ನು ಪೂರ್ವ ಮತ್ತು ಪಶ್ಚಿಮಕ್ಕೆ ಕಳುಹಿಸಲಾಗಿತ್ತು. ಆದರೆ ಈ ಮತ ಮತ್ತು ಧಾರ್ಮಿಕ ಪ್ರಚಾರ ಲಾಭವನ್ನು ಯಾವ ಸಾಮ್ರಾಟರೂ ತಮ್ಮ ರಾಜ್ಯ ವಿಸ್ತರಣೆ ಮಾಡಲು ದುರುಪಯೋಗಪಡಿಸಲಿಲ್ಲ. ಅಮೇರಿಕದಲ್ಲಿ ಚೀನಾದ ರಾಯಭಾರಿಯಾಗಿದ್ದ ಹುಶಿ ಎಂಬವನು ತನ್ನ ಪುಸ್ತಕದಲ್ಲಿ ‘ಯಾವನೇ ಒಬ್ಬ ಸೈನಿಕನನ್ನು ಭಾರತದ ಸೀಮೆಯಾಚೆಗೆ ಕಳುಹಿಸದೆ ೨೦ ಶತಮಾನಗಳ ತನಕ ಚೀನದ ಜನರ ಮನಸ್ಸನ್ನು ಮತ್ತು ಪ್ರದೇಶವನ್ನು ಆಳಿದ ರಾಷ್ಟ್ರ ಭಾರತ’ – ಇದು ಅಹಿಂಸಾತ್ಮಕ, ಸಹನಾಪರ ಧಾರ್ಮಿಕ ಮತ್ತು ಸಾಂಸ್ಕೃತಿಕ ಪರಂಪರೆ ಮೂಲಕ ಮಾತ್ರ ಸಾಧ್ಯವಾಯಿತು. ಭಾರತವನ್ನು ಧಾರ್ಮಿಕ ಗುರು, ಸ್ನೇಹಿತ ಮತ್ತು ಉದ್ಯಮಶೀಲತೆಯ ತವರೆಂದೂ ಜಗತ್ತು ಗುರುತಿಸಿದೆ; ಶೋಷಣೆಗೆ ಮನಮಾಡುವ ರಾಷ್ಟ್ರವೆಂದು ಯಾವ ದೇಶಗಳು ತಿಳಿದುಕೊಂಡಿರಲಿಲ್ಲ. ಆದರೆ ಪ್ರಾಚೀನ ರೋಮಿನ ಇತಿಹಾಸಕಾರನಾದ ಪ್ಲಿನಿ ಎಂಬವನು ಚರಿತ್ರೆ ಬರೆಯುತ್ತಾ ರೋಮ್ ಸಾಮ್ರಾಜ್ಯದ ಪತನಕ್ಕೆ ಭಾರತವೇ ಕಾರಣವೆಂದು ಆರೋಪಿಸಿದ್ದಾನೆ’. ಭಾರತ ಇದರಿಂದಾಗಿ ‘ಸ್ವರ್ಣ ಹಕ್ಕಿ’ಯಾಯಿತೆಂದೂ, ರೋಮ್ ‘ದಿವಾಳಿಯ’ ಅಂಚನ್ನು ತಲುಪಿತೆಂದು, ಹೇಳಿರುತ್ತಾನೆ. ಇದರಿಂದಾಗಿ ದಾಳಿಕೂರರು ಜನ ರೋಮನ್ನು ಧಾಳಿ ಮಾಡಿದಾಗ ರಾಷ್ಟ್ರದ ಖಜಾನೆ ಬರಿದಾಗಿತ್ತು, ರೋಮನ್ ರಾಜ್ಯ ಮತ್ತು ನಾಗರಿಕತೆ ಕುಸಿಯಿತು. ಭಾರತೀಯ ವ್ಯಾಪಾರಿಗಳು ಮಾತನಾಡುವ ಗಿಣಿಗಳನ್ನು, ನೃತ್ಯಗಾರ್ತಿಯರನ್ನು, ಸಿಂಹ, ಹುಲಿಗಳನ್ನು, ಭೋಗವಿಲಾಸ ಸಾಮಗ್ರಿಗಳನ್ನು, ಸೆಂಟು ಮತ್ತು ವೈನುಗಳನ್ನು ರಾಜರ ಮೋಜಿಗಾಗಿ ತಂದು ಸುಖ ಲೋಲುಪತೆಯಲ್ಲಿ ತೇಲಾಡುವಂತೆ ಮಾಡಿದಾಗ ರೋಮನ್ ದೊರೆಗಳು ರಾಜ್ಯದ ಹಿತಾಸಕ್ತಿ ಅಲ್ಲಗಳೆದರೆಂದು ಆರೋಪಿಸಿದ್ದ. ಇತಿಹಾಸವೆಂದರೆ ಪರಂಪರೆಯ ದಾಯಿತ್ವದ ಅತಾರ್ಕಿಕವಾದ ಸಂವಾದವಲ್ಲ. ಇಂದು ಜಗತ್ತು ನಾಗರಿಕತೆ ಅಥವಾ ಸಂಸ್ಕೃತಿಯ ಸಂಘರ್ಷ ಕಾಲದಲ್ಲಿರುವಾಗ ಸಾಂಸ್ಕೃತಿಕ ಆಯ್ಕೆ ಮತ್ತು ಸರ್ವಸ್ವತಂತ್ರತೆಯ ಪ್ರಧಾನ ಭೂಮಿಕೆಯ ಪಾತ್ರ ಪ್ರಮುಖವಾಗಿರುತ್ತದೆ. ಸಾಂಸ್ಕೃತಿಕ ಸಂಬಂಧ ರಾಷ್ಟ್ರದ ಉತ್ಪನ್ನ ಮತ್ತು ಮಾನವನ ಶಕ್ತಿ ಸಾಮರ್ಥ್ಯವನ್ನು ಪ್ರತಿಫಲಿಸುತ್ತದೆ. ೧೯೬೦ರ ದಶಕದಲ್ಲಿ ಘಾನಾ ಮತ್ತು ದಕ್ಷಿಣ ಕೊರಿಯಾದ ಆರ್ಥಿಕ ಪರಿಸ್ಥಿತಿ ಸರಿಸಮಾನವಾಗಿತ್ತು. ಆದರೆ ೯೦ರ ದಶಕದಲ್ಲಿ ದಕ್ಷಿಣ ಕೊರಿಯ ಕೈಗಾರಿಕಾ ಮಹಾದೈತ್ಯವಾಗಿ, ಆಟೋಮೊಬೈಲ್ ಕ್ಷೇತ್ರದಲ್ಲಿ ಅತ್ಯಧಿಕ ರಫ್ತು ಮಾಡುವ ಮತ್ತು ಜಗತ್ತಿನ ೧೪ನೇ ಬಹುದೊಡ್ಡ ಆರ್ಥಿಕ ಸಮೃದ್ದಿಯ ದೇಶವಾಗಿ ರೂಪುಗೊಂಡಿತು. ಆದರೆ ಘಾನಾದ ತಲಾ ವರಮಾನ ದಕ್ಷಿಣ ಕೊರಿಯಾದ  ೧/೧೫ ಅಂಶ ಮಾತ್ರವಾಗಿತ್ತು. ಇದು ಹೇಗಾಯಿತು? ಸಾಂಸ್ಕೃತಿಕ ಮೌಲ್ಯಗಳು ಬಹುದೊಡ್ಡ ಪಾತ್ರವಹಿಸಿದುವು. ದಕ್ಷಿಣ ಕೊರಿಯಾದ ಜನರ ಉಳಿತಾಯ ಪ್ರವೃತ್ತಿ, ಬಂಡವಾಳ ಹೂಡಿಕೆಯ ತಂತ್ರ, ಶ್ರಮ, ಶಿಕ್ಷಣ, ಪರಿಪಕ್ವ ಆಡಳಿತ ಮತ್ತು ಶಿಸ್ತು ಈ ಪ್ರಗತಿಯ ಚಾಲನಾ ಶಕ್ತಿಯಾಗಿ ದೇಶದ ಜಿಗಿತಕ್ಕೆ ಕಾರಣವಾಯಿತು. ಘಾನಾದ ಸಾಂಸ್ಕೃತಿಕ ಮೌಲ್ಯಗಳು ಪ್ರಗತಿಯ ಸಂವೇದನಾ ಶಕ್ತಿಯನ್ನು ವೃದ್ದಿಪಡಿಸಲಾಗಲಿಲ್ಲ. ಆದುದರಿಂದ ಸಾಂಸ್ಕೃತಿಕ ಮೌಲ್ಯಗಳು ಒಂದು ದೇಶದ ಪ್ರಗತಿಯ ಸಂವಹನಕ್ಕೆ ಕಾರಣೀಭೂತವಾಗುತ್ತವೆ.

ಸಹಿಷ್ಣುತೆ, ಸಹನೆ ಮತ್ತು ಸರ್ವಸ್ವಾತಂತ್ರ್ಯ ಒಂದು ನಾಗರಿಕತೆಯ ಪ್ರಾಚೀನ ಇತಿಹಾಸದ ಪ್ರಧಾನ ಗುಣ ಮೌಲ್ಯಗಳೇ ಆಗಿರಬೇಕಾಗಿಲ್ಲ. ಉದಾಹರಣೆಗೆ ಪ್ಲೇಟೊ ಮತ್ತು ಆಗಸ್ಟಿನ್ ನಿರಂಕುಶ ಪ್ರವೃತ್ತಿಯವರಾಗಿದ್ದರು. ಅದೇ ಪ್ರಕಾರ ಚೈನಾದ ಕನ್ಪ್ಯುಶಿಯಸ್ ಮತ್ತು ಭಾರತದ ಕೌಟಿಲ್ಯ ಕೂಡ ಇದೇ ರೀತಿಯ ನಿರಂಕುಶ ಸ್ವಭಾವವನ್ನು ಹೊಂದಿದವರಾಗಿದ್ದರು. ಕೆಲವೆಡೆ ಮನು ಕೂಡ ಇದೇ ಸ್ವಭಾವವನ್ನು ಹೊಂದಿದ್ದ. ಆದುದರಿಂದ ಈ ಮಹಾನುಭಾವರು ಅವರವರು ಬಾಳಿದ ಕಾಲಕ್ಕೆ ಸರಿಯಾಗಿ ಕೆಲವು ವಿಚಾರಗಳನ್ನು ಇಂದಿನ ಮೌಲ್ಯಗಳಿಗೆ ವಿರುದ್ಧವಾಗಿ ಹೇಳಿದ್ದರೂ, ಅವುಗಳನ್ನು ನಾವು ಅಲಕ್ಷಿಸಿ, ತಾರ್ಕಿಕವಾದ ಒಳ್ಳೆಯ ಮೌಲ್ಯಗಳನ್ನು ಆಯ್ಕೆ ಮಾಡುವ ಮನೋಭೂಮಿಕೆ ಬೆಳೆಸಿಕೊಳ್ಳಬೇಕು. ಅವರ ತತ್ವಗಳ ವಿಕಲ್ಪತೆಗಳು ನಮ್ಮ ಆದರ್ಶವಾಗಿರದೆ ಇಂದು ನಡೆಸುವ ತಾರ್ಕಿಕ ಅಗ್ನಿದಿವ್ಯದ ಪರೀಕ್ಷೆಗೆ ಒಳಪಟ್ಟು ಹೊರಬಂದ ಸ್ಫುಟವಾದ ಸತ್ಯಗಳಿಗೆ ಮಾತ್ರ ನಾವು ಬೆಲೆ ಕೊಡಬೇಕಾಗಿದೆ. ಅಶೋಕ ಸಾಮ್ರಾಟ ಕ್ರಿ.ಪೂ. ೩ನೇ ಶತಮಾನದಲ್ಲಿ ಈ ಮಾತನ್ನು ಹೇಳುತ್ತಾನೆ – “ಪರರ ಪಂಥಗಳು ಕೂಡ ಬೇರೆ ಬೇರೆ ಕಾರಣದಿಂದ ಗೌರವಕ್ಕೆ ಪಾತ್ರವಾಗಿರುತ್ತವೆ” ಅದೇ ಪ್ರಕಾರ ಅಕ್ಬರ್ ಬಾದಶಹ ಕೂಡ ಈ ರೀತಿ ಹೇಳುತ್ತಾನೆ – “ಯಾವುದೇ ಧರ್ಮದಲ್ಲಿ ಹಸ್ತಕ್ಷೇಪ ಸಲ್ಲದು. ಯಾವುದೇ ಓರ್ವ ವ್ಯಕ್ತಿ ಮತ್ತೊಂದು ಮತಕ್ಕೆ ತನ್ನ ಸ್ವಸಂತೋಷದಿಂದ ಸೇರುವುದಿದ್ದರೆ ಅದಕ್ಕೆ ಅಡ್ಡಿಯನ್ನು ಒಡ್ಡಬಾರದು”. ಭಾರತದಲ್ಲಿ ಮತ್ತೊಂದು ಮತ ಅಥವಾ ಪಂಥದ ಬಗ್ಗೆ ಸಹನಶೀಲ ಪ್ರವೃತ್ತಿ ಇದ್ದ ಕಾರಣದಿಂದಲೇ ಅನೇಕ ಅವತಾರ ಪುರುಷರು, ಸಂತರು, ಬುದ್ಧ, ಜೈನ ಮತಗಳು, ಬಸವ ತತ್ವಗಳು ಮತ್ತು ಅನೇಕ ಮತಸಿದ್ಧಾಂತಗಳು ಆಸ್ತಿಕ ಮತ್ತು ನಾಸ್ತಿಕ ವಾದಗಳು ಸ್ವತಂತ್ರ ವಾತಾವರಣದಲ್ಲಿ ವಿಹಂಗಮವಾಗಿ ಪ್ರಚಲಿತವಾದವು. ಇದೇ ಭಾರತೀಯ ಸಂಸ್ಕೃತಿಯೆಂದೆನಿಸಿತು. ಭಾರತದಲ್ಲಿ ಮತ-ಪಂಥದ ವಿಚಾರದಲ್ಲಿ ಬಹುತೇಕ ಹಿಂಸೆ ಅಥವಾ ಪೀಡನೆ ಹಿಂದೆ ನಡೆದಿರಲಿಲ್ಲ. ಇಂತಹ ದ್ವೇಷ, ಅಸಹನೆ ಮತ್ತು ಪರಪೀಡನೆ ಇಪ್ಪತ್ತನೇ ಶತಮಾನದ ಕೊನೆಯ ಹಂತದಲ್ಲಿ ನಮ್ಮ ರಾಷ್ಟ್ರದಲ್ಲಿ ಉಲ್ಪಣವಾಯಿತು. ಆದರೆ ಐರೋಪ್ಯ ಖಂಡದಲ್ಲಿ ಇಂತಹ ಪರಮತ ಸಹಿಷ್ಣುತೆ ಇಲ್ಲದೆ ಸಾಕಷ್ಟು ಹಿಂಸೆ ಮತ್ತು ಪೀಡನೆಗಳು ಸತತವಾಗಿ ನಡೆದವು. ಯಹೂದಿಯರ ಸಿದ್ಧಾಂತಿ ಮೈಮೋನಿಡಸ್ ಎಂಬುವವನು ಯುರೋಪಿನ ಅತ್ಯಂತ ಅಸಹನೆಯ ಪ್ರವೃತ್ತಿ ಯಿಂದಾಗಿ ೧೨ನೇ ಶತಮಾನದಲ್ಲಿ ದೇಶಾಂತರ ಹೊಂದಿ ಕೊನೆಗೆ ಸಹನಶೀಲ ಆಶ್ರಯವನ್ನು ಅರಬ್ ಜಗತ್ತಿನಲ್ಲಿ ಕಂಡ. ಅವನಿಗೆ ಅರಬ್ ದೇಶದ ಸಾಮ್ರಾಟ ಸಲದ್ದೀನ್ ಕೈರೋನಲ್ಲಿ ಅತ್ಯಂತ ಪ್ರಭಾವಿ ಮತ್ತು ಗೌರವಾನ್ವಿತ ಪದವಿ ನೀಡಿದ! ಮುಂದೆ ಅದೇ ಸಲಾದ್ದೀನ್ ಇಸ್ಲಾಮಿನ ಬಗ್ಗೆ ಒಂದು ದೊಡ್ಡ ಧಾರ್ಮಿಕ ಯುದ್ಧವನ್ನೇ ಸಾರಿದ-ಇದೊಂದು ಇತಿಹಾಸ!.

ಜಪಾನಿನ ಪ್ರಿನ್ಸ್ ಸೊಟೊಕೊ ಅವನ ತಾಯಿ ಸಮ್ರಾಜ್ಞಿ ಸುಯಿಕೊ ಎಂಬುವಳ ಪರವಾಗಿ ‘ಕೆಂಪೊ’ ಎಂಬ ಹದಿನೇಳು ಕಲಮುಗಳ ಸಂವಿಧಾನವನ್ನು ಇಂಗ್ಲೆಂಡಿನ Magnacarte ಸ್ವರೂಪದಲ್ಲಿ ರಾಷ್ಟ್ರದಲ್ಲಿ ಜಾರಿ ಮಾಡಿದ. ಅದರ ಒಂದು ಕಲಮಿನಲ್ಲಿ ಈ ರೀತಿ ಹೇಳಲಾಗಿದೆ – “ಯಾವುದೇ ಪ್ರಮುಖ ನಿರ್ಣಯಗಳನ್ನು ಯಾವುದೇ ಒಬ್ಬ ವ್ಯಕ್ತಿ ಮಾಡಲಾಗದು. ಆ ಪ್ರಸ್ತಾವನೆ ಅನೇಕರಲ್ಲಿ ಸಮಾಲೋಚಿಸಲ್ಪಡಬೇಕು”. ಸಹನಶೀಲತೆಯ ವಿಷಯ ಸಂವಿಧಾನದಲ್ಲಿ ಈ ರೀತಿ ಹೇಳಲಾಗಿದೆ – “ಮತ್ತೊಬ್ಬರು ನಮ್ಮ ವಿಚಾರಗಳನ್ನು ನಿರಾಕರಿಸಿದರೆಂದು ದ್ವೇಷಿಸಲಾಗದು. ಯಾಕೆಂದರೆ ಎಲ್ಲರಲ್ಲೂ ಹೃದಯವಿದೆ ಮತ್ತು ಪ್ರತಿಯೊಬ್ಬರ ಹೃದಯ ತನ್ನದೇ ಆದ ಒಲವನ್ನು ಹೊಂದಿರುತ್ತದೆ. ಓರ್ವನ ಸರಿಯಾದ ನಿಲುವೇ ಮತ್ತೊಬ್ಬರಿಗೆ ತಪ್ಪೆಂದು ಅನಿಸಬಹುದು. ಮತ್ತೊಬ್ಬರ ಸರಿಯಾದ ನಿಲುವು ಇನ್ನೊಬ್ಬರಿಗೆ ತೀರ ತಪ್ಪೆಂದು ಕಾಣಬಹುದು”.

ಯಾವುದೇ ಇತಿಹಾಸಕಾರ ಪರೀಕ್ಷೆಗೆ ಒಡ್ಡದ ಪರಂಪರೆಯನ್ನು ಇತಿಹಾಸವೆಂದು ಪರಿಗಣಿಸಲಾಗದು. ಅದರ ಆಧಾರದ ಮೇಲೆ ಸಾಂಸ್ಕೃತಿಕ ಸ್ವಾತಂತ್ರ್ಯ ಸೌಧವನ್ನು ಕಟ್ಟ ಲಾಗದು. ಜಗತ್ತಿನ ಸುಮಾರು ೨೦೦ ರಾಷ್ಟ್ರಗಳಲ್ಲಿ ೫ ಸಾವಿರ ಜನಾಂಗೀಯ ಗುಂಪುಗಳಿವೆ; ೨/೩ ಭಾಗ ರಾಷ್ಟ್ರಗಳಲ್ಲಿ ಒಂದಕ್ಕಿಂತ ಹೆಚ್ಚು ಮತೀಯ ಮತ್ತು ಜನಾಂಗೀಯ ಗುಂಪುಗಳಿವೆ. ಅಂದರೆ ಆ ರಾಷ್ಟ್ರಗಳಲ್ಲಿ ಶೇ. ೧೦ರಷ್ಟು ಬೇರೆ ಜನಾಂಗಗಳಿವೆ. ಇದು ಜಗತ್ತಿನ ರಾಷ್ಟ್ರಗಳ ವಾಸ್ತವಿಕವಾದ ಕಥನ.

ಇತಿಹಾಸಕಾರರು ಬಹಳ ಸಹನೆ ಮತ್ತು ಸತ್ಯಶೋಧನೆಯಿಂದ ಐತಿಹಾಸಿಕ ವಿಕಲ್ಪತೆ ಮತ್ತು ಮಿಥ್ಯಾಕಲ್ಪನೆಗಳನ್ನು ಸ್ಫೋಟಿಸಬೇಕಾಗಿದೆ. ಕೆಲವು ಇತಿಹಾಸಕಾರರು ಐತಿಹಾಸಿಕ ಮಿಥ್ಯಾಕಲ್ಪನೆಯನ್ನು ಸಂರಕ್ಷಿಸುವ ಸಿದ್ಧಾಂತ ಹುಡುಕುತ್ತಾ ಸಾಗುತ್ತಾರೆ. ಅನೇಕ ಬಾರಿ ಇವುಗಳಲ್ಲಿ ಯಾವುದೇ ಸತ್ಯಾಂಶವಿರುವುದಿಲ್ಲ. ಸಾಮಾನ್ಯವಾಗಿ ಇತಿಹಾಸದ ಸಿದ್ಧಾಂತಿಗಳನ್ನು ಜನ ನಂಬುತ್ತಾರೆ. ಅವರ ವಿಚಾರಗಳ ಬಗ್ಗೆ ಪ್ರಶ್ನಿಸುವುದಿಲ್ಲ. ಆದರೆ ಅನೇಕ ಬಾರಿ ದಾರಿ ತಪ್ಪಿಸುವವರ ಇತಿಹಾಸದಿಂದ ಆತಂಕಕಾರಿ ಪರಿಣಾಮಗಳು ಉದ್ಭವಿಸುತ್ತದೆ. ಇವುಗಳಿಂದ ಹೊರಬರಲು ಜಗತ್ತು ಹೊಸ ದಾರಿಯನ್ನು ಹುಡುಕಬೇಕಾದುದು ಅನಿವಾರ‍್ಯ.

ಇತಿಹಾಸ ಅಂದು-ಇಂದು-ಮುಂದಿನ ಕನ್ನಡಿಯಾಗಬೇಕು. ವಸ್ತು ಸ್ಥಿತಿಯನ್ನು ಕಾಣುವ ದಿಕ್ಸೂಚಿಯಾಗಬೇಕು. ಅಂದಿನ ೧೯ ಮತ್ತು ೨೦ನೇ ಶತಮಾನದ ಮೂಕ ಮತ್ತು ಇಲ್ಲದವರ ಜನಸಮುದಾಯ ಇಂದು ಉಳ್ಳವರ ವಿರುದ್ಧ ಸಮರವೆಸಗುವ ಸನ್ನಾಹದಲ್ಲಿದ್ದಾರೆ. ಉಳ್ಳವರು ಅಧಿಕಾರ ಮತ್ತು ಹಣದಿಂದ ಸುಸಜ್ಜಿತವಾಗಿದ್ದಾರೆ. ಇಲ್ಲದವರು ತಮ್ಮ ರೋಷದಿಂದ ಸ್ಫೋಟನಕ್ಕೆ ಸಿದ್ಧವಾಗಿದ್ದಾರೆ. ಇದು ಒಂದು ರೀತಿಯ ವರ್ಗ ಸಂಘರ್ಷದ ಸಂದಿಗ್ಧ ಕಾಲ. ಭಾರತದಲ್ಲಿ ಎಂಭತ್ತರ ದಶಕದ ಆರ್ಥಿಕ ಪರಂಪರೆಯಿಂದ ತೊಂಭತ್ತರ ದಶಕದಲ್ಲಿ ರಾಜಕೀಯ ಇತಿಹಾಸ ಕೋಮು ಸಂಘರ್ಷದ ದಿಕ್ಕಿಗೆ ಸರಿಯಿತು.

ಜಗತ್ತಿನ ಮತ್ತು ರಾಷ್ಟ್ರದ ಬದುಕಿನಲ್ಲಿ ಇತಿಹಾಸ ಅಂತ್ಯದಲ್ಲಿ ಒಂದೊಂದು ದೃಷ್ಟಿಕೋನ ವನ್ನು ನೀಡುತ್ತದೆ. ಅದೇ ಅಂತಿಮ ಸತ್ಯವಲ್ಲ ಅಥವಾ ಶ್ರೇಷ್ಠ ಗುರಿಯೂ ಅಲ್ಲ. ಸತ್ಯದ ಪಥವೂ ಅಲ್ಲ. ಅದರ ಪ್ರಮುಖ ಕ್ಷಿತಿಜಗಳಲ್ಲಿ ನಾನಾ ಕಾಲ ಪರಿಸ್ಥಿತಿಯ ಸಂಘರ್ಷ ಅಥವಾ ಮಂಥನದಿಂದ ಫಲೋತ್ಪತ್ತಿಯಾಗುತ್ತದೆ. ವರ್ಗ-ವರ್ಗದ, ಸಾಮ್ರಾಜ್ಯಶಾಹೀ-ವಸಾಹತುಗಳ, ಕಪ್ಪು-ಬಿಳಿ ವರ್ಣಗಳ, ಮತ-ಮತಗಳ, ಜಾತಿ-ಜಾತಿಗಳ, ಭಾಷೆ-ಭಾಷೆಗಳ, ಪ್ರದೇಶ-ಪ್ರದೇಶಗಳ, ಸಂಸ್ಕೃತಿ-ಸಂಸ್ಕೃತಿಗಳ, ಪುರುಷ-ಮಹಿಳೆಯರ ಲಿಂಗಭೇದಗಳ, ಮುಂದುವರಿಕೆ-ಬದಲಾವಣೆಗಳ ಸಮರ ಇತಿಹಾಸ ಗರ್ಭದಲ್ಲಿ ಲಾವಾರಸದಂತೆ ಹರಿಯುತ್ತಿದೆ. ಇತಿಹಾಸ ಸತ್ಯಗಳ ಸಮರಸದ ಸಿಂಚನ ಕಾರಂಜಿಯಾಗಿ ಪುಟಿದು ತಂಪಾಗಿರಿಸದಿದ್ದರೆ ಜ್ವಾಲಾಮುಖಿ ಸಿಡಿದು ಜಗತ್ತು ಅಗ್ನಿಮಯವಾಗಬಹುದು. ಈ ರೀತಿ ಒಂದು ಸಮುದಾಯ ಮತ್ತೊಂದು ಸಮುದಾಯದ ವಿರುದ್ಧ ಕೆಲವೊಮ್ಮೆ ಯಾವುದೇ ಪರಸ್ಪರ ಹಂಚಿಕೊಳ್ಳುವ ಸಮನ್ವಯ ಬದುಕಿನ ಎಳ್ಳಷ್ಟು ಜಾಗವಿಲ್ಲದೆ ಸಮರವೇರ್ಪಡುತ್ತದೆ. ಜಗತ್ತೇ ಒಂದು ಗ್ರಾಮವಾಗಿ ಪರಿವರ್ತನೆಯಾಗುತ್ತಿರುವ ವೈಜ್ಞಾನಿಕ ಯುಗದಲ್ಲಿ ಪರಸ್ಪರ ಸಂವಹನ-ಸಹನೆ-ಸುಜ್ಞಾನ ಮತ್ತು ಮಾನವೀಯ ಅರಿವಿನ ಬೆಸುಗೆ ನಮ್ಮನ್ನು ಒಲವಿನ ತಾದಾತ್ಮ್ಯದಲ್ಲಿ ಹೆಣೆಯದಿದ್ದರೆ ಜಗದ ಬದುಕು ದುಸ್ತರವಾಗುತ್ತದೆ. ಇದನ್ನು ಸಾಧಿಸದ ಇತಿಹಾಸದ ಕೊಂಡಿ ಅಪ್ರಸ್ತುತವಾಗುತ್ತದೆ.

ಭಾರತ ತನ್ನ ಭೂತಕಾಲದ ಅನೇಕ ಬಂಧನದಿಂದ ಹೊರಬರಬೇಕಾಗಿದೆ. ಭೂತಕಾಲ ಎಂದೆಂದೂ ವರ್ತಮಾನ ಮತ್ತು ಭವಿಷ್ಯದ ಮೇಲೆ ಪ್ರಭುತ್ವವನ್ನು ಸ್ಥಾಪಿಸಬಾರದು. ಆದರೆ ಇತಿಹಾಸದ ಜನಜೀವನ ಪೋಷಿಸುವ ಧಾತುಗಳಿಂದ ಕಳಚಿಕೊಳ್ಳಬಾರದು. ನಮ್ಮ ಜನಾಂಗಕ್ಕೆ ಚಾಲನೆ ನೀಡಿದ ಕನಸು ಕಾಣುವ ಶಕ್ತಿಯನ್ನು ಉಳಿಸಿದ ನಮ್ಮ ಪೂರ್ವಿಕರ ವಿವೇಕ, ಸಂಚಾಲನಾ ಶಕ್ತಿ, ಬದುಕಿನ ಪ್ರೀತಿ, ಅರಿವಿನ ಸ್ಫೂರ್ತಿ, ಮಾನಸಿಕ ಸಾಹಸ ಪ್ರವೃತ್ತಿ, ಸ್ಥೈರ್ಯ, ಸಾಧಿಸಿದ ಸಾಹಿತ್ಯ ಶಕ್ತಿ ಮತ್ತು ಸಾಧನೆ, ಕಲೆ ಮತ್ತು ಸಂಸ್ಕೃತಿಯ ಉಜ್ವಲತೆ, ಸತ್ಯ ಮತ್ತು ಸತ್ಯದನ್ವೇಷಣೆ, ಸೌಂದರ್ಯ, ಸ್ವತಂತ್ರತೆ ಮೂಲಭೂತ ಜೀವನ ಮೌಲ್ಯಗಳು ಜೀವನದ ರಹಸ್ಯಗಳನ್ನು ಹೊರಗೆಡಹುವ, ಸಹನಾಶಕ್ತಿ ವರ್ಧಿಸುವ ಮೌಲ್ಯಗಳು ಮತ್ತೊಬ್ಬರ ಅಭಿಪ್ರಾಯ ಮತ್ತು ಜ್ಞಾನವನ್ನು ತನ್ನದಾಗಿಸುವ ಸಾಂಸ್ಕತಿಕ ಸಂವಹನ ಶಕ್ತಿಯಿಂದ ಬೆಳೆದ ನಮ್ಮ ಅಂತರ್‌ಶಕ್ತಿಯನ್ನು ಕಳೆದುಕೊಳ್ಳಬಾರದು. ಆಗ ಹಿಂದಿನ ಯೋಗ್ಯ ಮೌಲ್ಯಗಳು ಇಂದಿನ ಧಾರಣಾಶಕ್ತಿಯನ್ನು ಹೆಚ್ಚಿಸುತ್ತವೆ.

ಸಹಿಷ್ಣುತೆಯನ್ನು ಧರಿಸದ ಸಮುದಾಯ ಮತ್ತು ರಾಷ್ಟ್ರ ಸಾಂಸ್ಕೃತಿಕ ಸಂಘರ್ಷದ ಅನಾಹುತದಿಂದ ಜಾಗತಿಕ ಬಾಳ್ವೆಯನ್ನು ಸಾಗಿಸಲಾರದು. ಜಾಗತಿಕವಾಗಿ ಇಂದು ನಡೆಯು ತ್ತಿರುವ ಮತ, ಪಂಥ, ಸಿದ್ಧಾಂತಗಳ ಸಂಘರ್ಷದ ಈ ಕಾಲದಲ್ಲಿ ಸಹಿಷ್ಣುತೆಯ ಮನೋಭೂಮಿಕೆ ಮಾತ್ರ ಜಾಗತಿಕ ಬಾಳ್ವೆಯ ಸಿಂಚನವನ್ನು ನೀಡಬಹುದು. ಅನ್ಯಥಾ ಉಲ್ಬಣಿಸಿದ ಸಂಘರ್ಷ ಮುಂದೆ ಬರುವ ಮಾನವೀಯತೆಯನ್ನು ಮರಳಿಸಲಾರದ ಮೂರನೇ ಮತ್ತು ಅಂತಿಮ ಸಮರ ಪ್ರಪಾತಕ್ಕೆ ಮನುಜಕುಲವನ್ನು ತಳ್ಳಬಹುದು. ಆದುದರಿಂದ ಎಲ್ಲಾ ಮತ, ಧರ್ಮ ಪರಂಪರೆಯ ಹೊಟ್ಟನ್ನು ತೂರಿ ಬದುಕಿನ ಸಹಿಷ್ಣುತೆಯ ಅಮೃತವನ್ನು ಮತ್ತೆ ಪಡೆಯುವ ಸಮುದ್ರಮಂಥನ ನಡೆಯಬೇಕು. ಆಗ ಮಾತ್ರ ಜಗತ್ತಿನ ಬದುಕು ಸುಂದರವಾಗುತ್ತದೆ. ಬಾಳ್ವೆ ಬೃಂದಾವನವಾಗುತ್ತದೆ.

—-
(ಇದೊಂದು ವೀರಪ್ಪ ಮೊಯಿಲಿಯವರು ಆಗಸ್ಟ್ ೧೧ ರಂದು ಕಟೀಲಿನಲ್ಲಿ ಜರಗಿದ ಕರ್ನಾಟಕ ರಾಜ್ಯ ಇತಿಹಾಸ ಉಪನ್ಯಾಸಕರ ಸಂಘದಲ್ಲಿ ಮಾಡಿದ ಭಾಷಣದ ಸಾರಾಂಶ.)