ಬೆಳಗಿಂದ ಸಂಜೆಯ ತನಕ ಪ್ರತಿದಿನವು ಯಾರದೀ ನೆರಳು ?
ಹೆಜ್ಜೆಹೆಜ್ಜೆಗು ಕಾಲಿಗುರುಳಾಗಿ, ದಾರಿತಪ್ಪಿಸಿ ಅಲೆಸಿ ಬಳಲಿಸುವ
ಚದುರು !

ನನಗಂತು ಸಾಕಾಗಿ ಹೋಗಿದೆ ನೋಡಿ
ಇಂದಿಗೂ ಪತ್ತೆಯಾಗಿಲ್ಲ ಈ ಕಿಲಾಡಿ !
ಬೇಗೇಳಲೇ ಬೇಕು ನಾಳೆ, ನನಗೆ ಸಾವಿರ ಕೆಲಸ ;
ಕೀ ಕೊಟ್ಟು ಮಲಗಿದೆನು ನಂಬಿಕೆಯ ಗಡಿಯಾರಕೆ.
ಬೆಳಗಾಗ ಎಂಟು ಗಂಟೆಯ ಬಿಸಿಲು ಬಂದು ಕಣ್ಣಿಗೆ ಬಡಿದು
ನಾನೆದ್ದಾಗ, ನಗುವನು ಇವನು ಗಡಿಯಾರದೊಳಗೆ !

ಎಲ್ಲಿಗೋ ಹೋಗಬೇಕರ್ಜೆಂಟು, ಹೊರಟೆ ಕೋಟನು ತೊಟ್ಟು,
ಒಳಗೆ ಕಾಫಿಯ ಕಂಪು ಜಗ್ಗುವುದು ಕಮ್ಮಗೆ !
ಅದಕ್ಕೆ ಹಾಜರಿ ಹಾಕಿ ಹೊಸ್ತಿಲನು ದಾಟುವ ಹೊತ್ತು
ಮಗು ಬಂದು ಮಲ್ಲಿಗೆಯ ಬಳ್ಳಿ ಹಬ್ಬುವುದು ಕಾಲಿಗೆ !

ಆಯಿತು ಹೊರಟೆ ; ಬೀದಿಯಲಿ ಯಾರಿವನು ಗೆಳೆಯ ?
ಬಹಳ ಅಪರೂಪಕ್ಕೆ ಈಗ ಕಂಡಿದ್ದಾನೆ ಈ ಹಳೆಯ.
ಮಾತಾಡಿಸದೆ ಹೋಗುವುದುಂಟೆ ? ಅಯ್ಯೊ ತಪ್ಪಿಹೋಯಿತು ಬಸ್ಸು
ಇಷ್ಟೊಂದು ಹಾದಿ ನಡೆದಿದ್ದರೂ ನಾ ಹೋಗಲೇಬೇಕೆ ವಾಪಸ್ಸು ?

ಇನ್ನೇನು ತುಟಿಗೆ ಬಂದಿದೆ ಕವಿತೆ: – ‘ಕೆರೆತುಂಬಿ ಕೆಂಪು ನೀರು’,
ಬಾಗಿಲಿನಾಚೆ ಅರಚುತ್ತಿದ್ದಾರೆ ಯಾರೋ : ‘ಇದ್ದಾರೆಯೇ ಅವರು ?’
ಬಂದ ನೆರೆ ಬತ್ತಿ, ಬರಿಯ ಕೆರೆ ; ತಳದಲ್ಲಿ ಮೀನೆಲ್ಲ ಸತ್ತು
ಬಂದವರ ಮಾತಿನುರಿಯಲ್ಲಿ ಬೇಯುತಿದೆ ಕೊಚ್ಚೆ – ಕೆಸರು !

ಇರುಳು ಓದಲು ಕುಳಿತೆ, ರೆಪ್ಪೆ ತಕ್ಕಡಿಯಲ್ಲಿ ನಿದ್ದೆಯಂಗಡಿ ಸರಕು
ಹಾಗು ಹೀಗೂ ತೂಗುವುದು ವ್ಯಾಪಾರ ಸಾಗುವುದು ಹರಕುಮುರುಕು.
ಇದ್ದಕಿದ್ದಂತೆಯೇ ದೀಪ ಹೋಗುವುದು, ಎಲ್ಲಿಯೋ ತಂತಿ ಕತ್ತರಿಸಿ ;
ಕಿಡಿಯಿರದ ತಿದಿಯೊತ್ತಿ ಏನುಪಯೋಗ ? ತೆಪ್ಪಗಿರುವುದೆ ವಾಸಿ.

ದಿನವೊಂದರದು ಈ ವರದಿ ; ಹಗಲಿರುಳು ಹೀಗೆಯೇ ನೋಡಿ
ಬಿಡಲೊಲ್ಲ ನನ್ನ ಈ ಕಿಲಾಡಿ
ಒಂದೆ ಎರಡೆ ಹೇಳಿ ಇವನ ಮೋಡಿ ?