ಸುತ್ತಲೂ ಬೆಟ್ಟ ಗುಡ್ಡಗಳು, ಹಸಿರು ವನರಾಶಿಯ ಮಧ್ಯದ ಹಳ್ಳಿ ಕಿಲಾರ. ಉತ್ತರ ಕನ್ನಡ ಜಿಲ್ಲೆಯ ಸಿದ್ದಾಪುರ ತಾಲ್ಲೂಕಿನ ಸೆರಗಿನಲ್ಲಿದೆ. ಬಟ್ಟಲಿನಾಕಾರದ ನಟ್ಟನಡುವೆ ಇದ್ದ ಊರಿಗೂ ನೀರಿನ ಬರ. ಬಡತನದ ಬೇಗೆ. ಅಭಿವೃದ್ದಿಗಳಿಂದ ದೂರ, ಮಾಹಿತಿಗಳ ಕೊರತೆ ಏನೆಲ್ಲಾ ಕಾಡುತ್ತಿದ್ದವು.

ಅಲ್ಲಲ್ಲಿ ಅಡಕೆ ತೋಟ. ಉಳಿದಂತೆ ಭತ್ತದ ಗದ್ದೆಗಳು. ಎಕರೆಗೆ ೧೦ ರಿಂದ ೧೫ ಚೀಲಗಳಷ್ಟು ಇಳುವರಿ. ಗ್ರಾಮದ ೭೩ ಕುಟುಂಬಗಳಲ್ಲಿ ಒಂದು ಹೆಕ್ಟೇರ್‌ನಷ್ಟು ಗದ್ದೆ ಇರುವವರು ಬೆರಳೆಣಿಕೆಯಷ್ಟು ಮಾತ್ರ. ಕೆಲವರಿಗೆ ಅರ್ಧ ಎಕರೆ, ಕೆಲವರಿಗೆ ಮುಕ್ಕಾಲು ಎಕರೆ, ಹೆಚ್ಚೆಂದರೆ ಒಂದು ಎಕರೆ.  ಅದರಲ್ಲೇ ನಾಲ್ಕೈದು ಜನರ ಕುಟುಂಬದ ನಿರ್ವಹಣೆ. ಗದ್ದೆ ಕೆಲಸವಿಲ್ಲದ ದಿನ ಕೂಲಿ.  ಬೆಳದದ್ದೆಲ್ಲಾ, ದುಡಿದದ್ದೆಲ್ಲಾ ಉಣ್ಣಲೇ ಸಾಕಾಗದು.

ಅತಿಯಾಗಿ ಮಳೆ ಬೀಳುವ ಈ ಊರಲ್ಲಿ ಫಸಲೂ ಕಡಿಮೆ. ನೀರು ನಿಲ್ಲದೆ ಹರಿದು ಹಳ್ಳ ಹೊಳೆಗಳ ಪಾಲು. ಹಾಕಿದ ಗೊಬ್ಬರವೆಲ್ಲಾ ನೀರು ಪಾಲು. ಎಷ್ಟು ರಾಸಾಯನಿಕ ಗೊಬ್ಬರ ಹಾಕಿದರೂ ಇಳುವರಿ ಖೋತ. ಗೊಬ್ಬರ ಹಾಕಿದ ಖರ್ಚು ಲೆಕ್ಕ ಹಾಕಿದರೆ ಪ್ರತಿವರ್ಷ ಲುಕ್ಸಾನು. ಸೊಸ್ಶೆಟಿಯಲ್ಲಿ, ಖಾಸಗಿಯವರಲ್ಲಿ ಸಾಲ ಹೆಚ್ಚಳ. ಇಸವಿ ೨೦೦೨ರ ಬೇಸಾಯದ ಖರ್ಚನ್ನು ಮ.ರಾ.ನಾಯಕರು ನೀಡುತ್ತಾರೆ – ಅಗೆ ಹಾಕುವಿಕೆ, ನೆಟ್ಟಿ ನೆಡುವಿಕೆ, ಕಳೆ ತೆಗೆಯುವಿಕೆಗಳಿಗೆ ೩೯ ಆಳುಗಳು ಬೇಕು. ೧೦ ಆಳು ಗಳೇವು ಕಟ್ಟಿ ಹೂಡಲು ಬೇಕು. ಕೊಯ್ಲು, ಒಕ್ಕಲು, ಹುಲ್ಲು ಕಟ್ಟುವಿಕೆ, ಭತ್ತ ತೂರುವಿಕೆ ಮುಂತಾದ ಎರಡನೇ ಹಂತದ ಕೆಲಸಕ್ಕೆ ೨೫ ಆಳುಗಳು ಬೇಕು. ಇದರೊಂದಿಗೆ ಯೂರಿಯಾ, ಫಾಸ್ಪೇಟ್, ಪೊಟ್ಯಾಷ್ ಮುಂತಾದ ರಾಸಾಯನಿಕ ಗೊಬ್ಬರಗಳಿಗೆ ೧,೫೦೦ ರೂಪಾಯಿಗಳು. ರಾಸಾಯನಿಕ ಜೌಷಧಿಗಳಿಗೆ ೩೦೦ ರೂಪಾಯಿಗಳು. ಒಟ್ಟಾರೆ ಖರ್ಚು ೫,೦೫೦ ರೂಪಾಯಿಗಳು. ಇಳುವರಿ ಸುಮಾರು ೧೦ ಕ್ವಿಂಟಾಲ್ ಎಂದುಕೊಂಡರೂ ಕ್ವಿಂಟಾಲ್ ಒಂದಕ್ಕೆ ಬೆಲೆ ೫೦೦ ರೂಪಾಯಿಗಳಂತೆ ೫,೦೦೦ ರೂಪಾಯಿಗಳ ಉತ್ಪನ್ನ. ಹುಲ್ಲಿನ ಲೆಕ್ಕ-ಸ್ವಂತ ಆಳು ಲೆಕ್ಕಕ್ಕೆ ಸಮನಾಗಿಸಿದರೆ ಸುಮಾರು ೭೫೦ ರೂಪಾಯಿಗಳಷ್ಟು ತಲೆದಂಡ.

ಭತ್ತದ ಬೇಸಾಯ ಬಿಟ್ಟು ಬಿಡಬೇಕೆಂಬ ಆಸೆ ಎಲ್ಲರದು. ತೋಟ ಹಾಕಲು ಹಣ ಎಲ್ಲಿಂದ ತರಲು ಸಾಧ್ಯ. ಕೂಲಿ ಮಾಡಿಯೂ ದಿನದ ಅನ್ನಕ್ಕೆ ತತ್ವಾರ. ಸಾಲದ ಬದುಕಿಗೆ ಒಗ್ಗಿಹೋದ ಜನ.

ಕಿಲಾರದಲ್ಲಿ ಹೇರಂಬ ಹೆಗಡೆಯವರು ಮೇಲ್ಮಧ್ಯಮ ವರ್ಗಕ್ಕೆ ಸೇರಿದವರು. ವಿಷ ರಾಸಾಯನಿಕಗಳ ಬಳಕೆಗೆ ವಿರೋಧ. ಸಾವಯವ ಆಹಾರದಿಂದ ಆರೋಗ್ಯ ಎಂಬ ಪ್ರತಿಪಾದಕರು. ಅವರ ಮಗ ಸತೀಶ್ ಹೆಗಡೆಯವರು ತಮ್ಮ ಹೊಲದಲ್ಲಿ ಸಾವಯವ ವಿಧಾನದಲ್ಲೇ ಭತ್ತ ಬೆಳೆಯಲು ಪ್ರಾರಂಭಿಸಿದರು. ತೋಟಕ್ಕೂ ರಾಸಾಯನಿಕಗಳ ನಿಷೇಧ. ಊರವರೆಲ್ಲಾ ಇದನ್ನು ಮಾಡಬೇಕೆಂಬ ಬಯಕೆ. ಸಾವಯವ ಕೃಷಿಯ ಬಗ್ಗೆ ರೈತರಿಗೆಲ್ಲಾ ಮಾಹಿತಿ ನೀಡತೊಡಗಿದರು. ಸಾವಯವದ ಮಹತ್ವ ಹಾಗೂ ಪ್ರಾತ್ಯಕ್ಷಿಕೆ ನಡೆಸಲು ಕೃಷಿ ಪ್ರಯೋಗ ಪರಿವಾರದ ಸಹಾಯ ಪಡೆದರು.

ಇದೇ ಸಮಯದಲ್ಲಿ ರಾಜ್ಯಸರ್ಕಾರದ ಸಾವಯವ ಗ್ರಾಮ ಯೋಜನೆ ಜಾರಿಯಾಯಿತು. ಕೃಷಿ ಪ್ರಯೋಗ ಪರಿವಾರದ ಪ್ರಯತ್ನದಿಂದ ಕಿಲಾರವೂ ಸಾವಯವ ಗ್ರಾಮ ಯೋಜನೆಯಲ್ಲಿ ಸೇರಿತು.

ಸಮೀಕ್ಷೆ, ತರಬೇತಿಗಳು

ಪ್ರಾರಂಭದಲ್ಲಿ ಪ್ರತಿಯೊಬ್ಬ ರೈತರ ಮನೆಗೂ ಭೇಟಿ, ಕೃಷಿ ಪದ್ದತಿ, ಜೀವನದ ರೀತಿ, ಖರ್ಚು-ವೆಚ್ಚಗಳು ಹೀಗೆ ರೈತರ ಬದುಕನ್ನು ಅನಾವರಣಗೊಳಿಸುವುದರೊಂದಿಗೆ ಇಡೀ ಊರಿನ ಚಿತ್ರಣವೇ ಸಿಕ್ಕಿತ್ತು. ಊರಿನಲ್ಲಿ ಎಲ್ಲರೂ ರಾಸಾಯನಿಕ ಗೊಬ್ಬರ, ಕೀಟನಾಶಕ ಬಳಸುವ ಕೃಷಿಕರಲ್ಲ. ಆದರೆ ಮಿತವ್ಯಯದ, ಆಧುನಿಕ, ಸುಲಭ ಕೃಷಿಪದ್ಧತಿಗಳ ಮಾಹಿತಿ ಕೊರತೆ ಇತ್ತು. ಇರುವುದರಲ್ಲೇ ಹೇಗೋ ಬದುಕು ಸಾಗಿಸುತ್ತಿದ್ದರೇ ವಿನಃ ಜೀವನಮಟ್ಟ ಹೆಚ್ಚಿಸಿಕೊಳ್ಳಲು ಸಾಧ್ಯವಾಗಿರಲಿಲ್ಲ. ಇರುವಷ್ಟು ಜಮೀನಿನಲ್ಲಿ ಉತ್ಪನ್ನ ಹೆಚ್ಚಿಸಲಾಗಲೀ, ಖರ್ಚು ಕಡಿಮೆ ಮಾಡಲಾಗಲೀ ಆಗದ ಸ್ಥಿತಿಯಲ್ಲಿದ್ದರು.

ಮೊದಲ ಆರು ತಿಂಗಳು ರೈತರಲ್ಲಿ ಜಾಗೃತಿ ಮೂಡಿಸುವ ಪ್ರಯತ್ನ ನಡೆಯಿತು. ಸಾವಯವದ ಅರ್ಥ, ಉಪಯೋಗ, ಮಹತ್ವ. ಅದಕ್ಕಿರುವ ಮಾನ್ಯತೆ, ಆರೋಗ್ಯ ಇವೆಲ್ಲಾ ಕುರಿತು ಚರ್ಚೆಗಳು. ನೀರಿಂಗಿಸುವ ರೀತಿಗಳು, ಅದರಿಂದಾಗುವ ಉಪಯೋಗ, ಪ್ರಯೋಜನಗಳ ಕುರಿತ ಮಾಹಿತಿ, ಚರ್ಚೆ, ಕ್ಷೇತ್ರ ಸಂದರ್ಶನ, ತಜ್ಞರೊಂದಿಗೆ ಸಂವಾದ ಏನೆಲ್ಲಾ ನಡೆಯಿತು.

ರಾಸಾಯನಿಕ ಕೃಷಿಯಿಂದ ಸಾವಯವ ಕೃಷಿಗೆ ಬದಲಾಗುವ ಸಂಕ್ರಮಣ ಬಲು ಬಿಕ್ಕಟ್ಟಿನದು. ಜನರ ಮನಃಪರಿವರ್ತನೆಯಾದ ವಿನಹ ಇದೆಲ್ಲಾ ಆಗದು. ರಾಸಾಯನಿಕ ಗೊಬ್ಬರ, ಕೀಟನಾಶಕಗಳು ಭೂಮಿಗೆ ವಿಷವಾಗುವ ರೀತಿಯು ಮನದಟ್ಟಾಗಬೇಕು. ಸಾವಯವ ಕೃಷಿ ಎಂದ ಕೂಡಲೇ ದುಬಾರಿ, ಖರ್ಚು-ವೆಚ್ಚ ಹೆಚ್ಚು ಎನ್ನುವುದು ಎಲ್ಲರ ನಂಬಿಕೆ. ಹೆಚ್ಚು ಶ್ರಮದಾಯಕ, ಕಷ್ಟ ಎಂಬುದು ಮತ್ತೊಂದು ಅಪವಾದ. ಆದರೆ ಇದೆಲ್ಲಾ ರೂಢಿಯಾದ ಮೇಲೆ ಸಾವಯವವೇ ಶ್ರೇಷ್ಠ ಎಂದು ಒಪ್ಪುತ್ತಾರೆ. ಹಾಗಂತ ಇದನ್ನು ಚರ್ಚೆ, ವಾದಗಳಿಂದ ಒಪ್ಪಿಸಲು ಸಾಧ್ಯವಿಲ್ಲ. ನೀವು ಸಾವಯವ ಮಾಡಿ ಎಂದು ಹೇಳಿ ಗಂಜಿಯೂ ಸಿಗದಂತೆ ಮಾಡಿದರೆ ನಾವೇನು ಮಾಡಬೇಕು. ಇದು ಊರಿನವರ ಅನುಮಾನದ ಪ್ರಶ್ನೆ.

ಅದಕ್ಕಾಗಿ ಮೊದಲನೇ ಪ್ರಕ್ರಿಯೆ ಒಪ್ಪಂದ. ಸಾವಯವದಲ್ಲಿ ಕೃಷಿ ಮಾಡಿದಾಗ ಇಳುವರಿ ಕಡಿಮೆ ಬಂದರೆ ಅದಿಷ್ಟನ್ನು ತುಂಬಿಕೊಡುವ ಖಚಿತ ಒಪ್ಪಿಗೆಯನ್ನು ಲಿಖಿತವಾಗಿ ಕೃಷಿ ಪ್ರಯೋಗ ಪರಿವಾರ ನೀಡಿತು. ಅದಕ್ಕೆ ಶ್ರೀರಾಮಚಂದ್ರಾಪುರ ಮಠವು ಬೆಂಬಲ ಸೂಚಿಸಿತು. ರೈತರೆಲ್ಲಾ ಸಾವಯವಕ್ಕೆ ಒಮ್ಮನಸ್ಸಿನಿಂದ ಸಿದ್ಧವಾದರು.

ಬೆಳೆಗೆ ಬೇಕಾಗುವ ಪೋಷಕಾಂಶಗಳ ನಿರ್ವಹಣೆಗೆ ಹಸುರೆಲೆ ಗೊಬ್ಬರಗಳ ಮಹತ್ವ ಹಾಗೂ ಹಸುರೆಲೆ ಗೊಬ್ಬರದ ಬೀಜ ವಿತರಣೆ ಮಾಡಲಾಯಿತು.

ಗದ್ದೆಗೆ ಹಸುರೆಲೆ ಗೊಬ್ಬರದ ಗಿಡ ಹಾಕಿ, ಅವು ಗಿಡವಾದ ಮೇಲೆ ಮಣ್ಣಿಗೆ ಸೇರಿಸುತ್ತಾ ಹೂಟಿ ಮಾಡುವುದರಿಂದ ಮಣ್ಣು ಹೊಸ ಶಕ್ತಿ ಪಡೆದುಕೊಳ್ಳುವುದನ್ನು ಅಣ್ಣಪ್ಪ ರಾಮಾನಾಯ್ಕ್ ವಿವರಿಸುತ್ತಾರೆ. ನಮಗೆ ಸಾವಯವ ಕೃಷಿ ಬಗ್ಗೆ ತಿಳಿದರೂ ಹೇಗೆ ಮಾಡಬೇಕೆಂದು ಗೊತ್ತಿರಲಿಲ್ಲ. ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಳಸಬಾರದೆಂದು ತಿಳಿದರೂ ಬದಲಿಗೆ ಏನು ಮಾಡಬೇಕೆಂದು ಗೊತ್ತಿರಲಿಲ್ಲ. ಯೋಜನಾಬದ್ಧವಾದ ಚೌಕಟ್ಟನ್ನು ಕೃಷಿ ಪ್ರಯೋಗ ಪರಿವಾರದವರು (ಅರುಣ, ಆನಂದರವರು) ನೀಡಿದರು. ಪ್ರಯೋಗ ಮಾಡಲು ನಾವೆಲ್ಲಾ ಮುಂದಾದೆವು ಎಂದು ಸೇರಿಸುತ್ತಾರೆ.

ಹಸಿರು ಸೊಪ್ಪನ್ನು ಗದ್ದೆಯಲ್ಲೇ ಬೆಳೆದುದರಿಂದ ಕಾಡಿನ ಅವಲಂಬನೆ ಕಡಿಮೆಯಾಯಿತು. ಅದರಲ್ಲೂ ಭತ್ತಕ್ಕೆ ಬೇಕಾದ ಹಸಿರು ಸೊಪ್ಪುಗಳನ್ನೇ ನೀಡಿದಾಗ ಮಣ್ಣಿನಲ್ಲಿ ಆಗುವ ಪರಿವರ್ತನೆ ಬೇರೆ.ಹೆಚ್ಚು ಇಳುವರಿ ನೀಡುವ ಭತ್ತ ಬೆಳೆಯಬೇಕು. ಅಥವಾ ನಮ್ಮಲ್ಲಿರುವ ತಳಿಯನ್ನೇ ಅಭಿವೃದ್ಧಿಪಡಿಸುವುದರಿಂದ ಹೆಚ್ಚು ಇಳುವರಿ ಪಡೆಯಬಹುದೆಂದು ಜಾಗೃತಿ ಕಾರ್ಯಕ್ರಮದಲ್ಲಿ ಹೇಳಲಾಯಿತು.ಅಗೆಹಾಕುವ ಕ್ರಮ, ಅಗೆಯನ್ನು ಕಿತ್ತು ನೆಡುವಾಗ ಜೈವಿಕವಾಗಿ ಸಂಸ್ಕರಣೆ ಮಾಡುವ ರೀತಿಯಿಂದ ರೋಗಬಾಧೆಯಿಂದ ದೂರವಿಡುವ ಕ್ರಮ ರೈತರಿಗೆ ಅನುಕೂಲವಾಯಿತು.

ಗೊಬ್ಬರ ತಯಾರಿಕೆ

ಎರೆಗೊಬ್ಬರದಿಂದಾಗುವ ಪರಿಣಾಮದ ವಿವರಣೆ ವೆಂಕಟರಮಣ ನಾಗಾನಾಯ್ಕ ನೀಡುತ್ತಾರೆ. ಮೊದಲು ನಾವೆಲ್ಲ ಯೂರಿಯಾ ಬೀರುತ್ತಿದ್ದೆವು. ಸಸಿಗಳೆಲ್ಲಾ ಎರಡೇ ದಿನಕ್ಕೆ ಅರಿಸಿನ ಬಣ್ಣವಾಗುತ್ತಿತ್ತು. ಎಷ್ಟು ನೀರು ನಿಲ್ಲಿಸಿದರೂ ಸಾಕಾಗುತ್ತಿರಲಿಲ್ಲ. ಈಗ ಎರೆಗೊಬ್ಬರ ಹಾಕತೊಡಗಿದ ಮೇಲೆ ಸಸಿಗಳೆಲ್ಲಾ ಇನ್ನಷ್ಟು ಹಸಿರಾಗುತ್ತವೆ. ನೀರು ಬೇಕೇಬೇಕೆಂದಿಲ್ಲ. ಎರೆಗೊಬ್ಬದಿಂದಲೇ ನೀರು ಸಿಗುತ್ತದೆ. ನೀರು ನಿಲ್ಲಿಸಬೇಕೆಂದಿಲ್ಲ. ಮಳೆ ಕಡಿಮೆಯಾದರೂ ತಡೆದುಕೊಳ್ಳುವ ಶಕ್ತಿ ಬರುತ್ತದೆ. ಮುಂದೆ ಒಣಹುಲ್ಲನ್ನು ಕೂಡ ಬಣ್ಣದಿಂದಲೇ ಗುರುತಿಸಬಹುದು ಎನ್ನುವ ನಿಖರತೆ ಅವರದು.

ಪ್ರಾರಂಭದಲ್ಲಿ ಎರೆಗೊಬ್ಬರವನ್ನು ಅಡಿಕೆ ದಬ್ಬೆಯ ತೊಟ್ಟಿ ಮಾಡಿ ತಯಾರಿಸಲಾಯಿತು. ಆನಂತರ ಕಲ್ಲಿನ ತೊಟ್ಟಿ, ಇಟ್ಟಿಗೆ ತೊಟ್ಟಿಗಳನ್ನು ನಿರ್ಮಿಸಿಕೊಂಡರು. ಹೀಗೆ ೨೨ ಜನ ಎರೆತೊಟ್ಟಿಯನ್ನು ಕಟ್ಟಿಸಿದರು. ಸಗಣಿ, ಮನೆ ತ್ಯಾಜ್ಯ, ಸೊಪ್ಪು, ದರಕು, ಸೋಗೆ, ಹೀಗೆ ಏನೆಲ್ಲಾ ತಿಂದು ಗೊಬ್ಬರವಾಗಿಸುವ ಎರೆಹುಳುಗಳ ಕೆಲಸ ಅವರಿಗೊಂದು ಅಚ್ಚರಿ. ಮೊದಲ ತಿಂಗಳಲ್ಲೇ ಒಂದೂವರೆ ಕ್ವಿಂಟಾಲ್ ಗೊಬ್ಬರ ಸಾಣಿಸಿ ತೆಗೆದಾಗ ಏನೋ ಖುಷಿ. ಹೊಲಕ್ಕೆ ಹೆಚ್ಚಾಗಿ ಉಳಿದದ್ದು ಮಾರಾಟ ಮಾಡಿ ಕೈಯಲ್ಲೊಂದಿಷ್ಟು ಕಾಸು ಸಿಕ್ಕಾಗ ಇನ್ನಷ್ಟು ಸಂತಸ. ಇದನ್ನು ನೋಡಿ ಉಳಿದವರೆಲ್ಲಾ ತೊಟ್ಟಿ ಕಟ್ಟಿಸಲು ಸಿದ್ಧರಾದರು. ೬೦ ತೊಟ್ಟಿಯಲ್ಲಿ ಇಂದು ಸುಮಾರು ೧೦೦ ಟನ್ ಎರೆಗೊಬ್ಬರ ಉತ್ಪಾದನೆ ನಡೆಯುತ್ತಿದೆ. ಇವರಿಗೆ ಗ್ರಾಹಕರೂ ಇದ್ದಾರೆ.

ಗುಂಡಿಯಲ್ಲಿ ಗೊಬ್ಬರ ತಯಾರಿಸುವಿಕೆಗಿಂತಲೂ ನೆಲದ ಮೇಲೆ, ಕಾಂಪೋಸ್ಟ್ ತಯಾರಿಸುವಿಕೆಯಿಂದ ಜೈವಿಕ ಚಟುವಟಿಕೆ ಹೆಚ್ಚುವುದು ತಿಳಿಯಿತು. ಕೊಟ್ಟಿಗೆ ತೊಳೆದ ನೀರಿನ ಬಳಕೆ, ಗೋಮೂತ್ರದ ಬಳಕೆಯಿಂದ ಸಸಿಗಳು ರೋಗನಿರೋಧಕ ಶಕ್ತಿ, ಕೀಟ ನಿರೋಧಕ ಶಕ್ತಿ ಬೆಳೆಸಿಕೊಳ್ಳುವುದು ಅರ್ಥವಾಯಿತು. ಭತ್ತದ ಸಸಿಗಳಿಗೆ ಗೋಮೂತ್ರವನ್ನು ಸೂಕ್ತ ಪ್ರಮಾಣದ ನೀರಿನೊಂದಿಗೆ ಬೆರೆಸಿ ಎರಡು-ಮೂರು ಬಾರಿ ಸಿಂಪಡಣೆ ಮಾಡಲಾಯಿತು.

ಸಸ್ಯಜನ್ಯ ಕೀಟನಾಶಕ ತಯಾರಿಕಾ ತಜ್ಞ ಬಾವಿಕೈಸರುವಿನ ದಿನೇಶ್‌ರವರು ಮುಕ್ಕಡಕ, ಬೇವಿನೆಣ್ಣೆ, ಲಕ್ಕಿ, ಬೆಳ್ಳುಳ್ಳಿ ಹಾಗೂ ಸ್ಥಳೀಯವಾಗಿ ಸಿಗುವ ಜಗಟೆಗೆಡ್ಡೆಗಳನ್ನು ಬಳಸಿ ಕೀಟನಾಶಕಗಳನ್ನು ತಯಾರಿಸುವ ಕ್ರಮ ಹೇಳಿಕೊಟ್ಟರು. ಇದರೊಂದಿಗೆ ಊರಿನವರು ತಾವು ಹಿಂದೆ ಜಗಟೆಗೆಡ್ಡೆ ಬಳಸಿ ಕೀಟನಾಶಕ ತಯಾರಿಸುತ್ತಿದ್ದ ಕ್ರಮ ನೆನಪಿಸಿಕೊಂಡರು. ಗದ್ದೆಯಲ್ಲಿ ನೀರು ನಿಲ್ಲಿಸಿಕೊಂಡು ಗೊಣಗಲು ಸೊಪ್ಪಿನಿಂದ ಸಸಿಗಳನ್ನು ಹೊಡೆದು ಹುಳಗಳನ್ನು ಕೆಳ ಕೆಡಗಿ ಕೊಲ್ಲುವ ವಿಧಾನ, ನೆಟ್ಟಿ ಮಾಡಿದ ಮೇಲೆ ಗದ್ದೆಯಲ್ಲಿ ಮೆದೆಚಂಡೆ ಗಿಡ ನೆಡುವ ಪದ್ಧತಿಗಳನ್ನು ಮತ್ತೆ ಮಾಡಲು ತೊಡಗಿದರು.

ಏನೆಲ್ಲಾ ಪ್ರಯತ್ನ ಮಾಡಿದರೂ ರಾಸಾಯನಿಕ ವಿಷದಿಂದ ನಿರ್ಜೀವವಾಗಿದ್ದ ಮಣ್ಣು ನಿರೀಕ್ಷಿಸಿದಷ್ಟು ಫಸಲು ನೀಡಲು ವಿಫಲವಾಯಿತು. ಕೆಲವರ ಗದ್ದೆ ಹಿಂದಿಗಿಂತ ಅರ್ಧ ಫಸಲು, ನಾಲ್ಕು ಚೀಲ ಭತ್ತ ಕಡಿಮೆ, ಎರಡು ಚೀಲ ಕಡಿಮೆ ಹೀಗೆ ಎಲ್ಲರದೂ ಕಡಿಮೆ ಫಸಲು ಬಂತು. ಒಪ್ಪಂದದ ನಿಯಮದಂತೆ ಶ್ರೀರಾಮಚಂದ್ರಾಪುರ ಮಠದಿಂದ ಕಡಿಮೆ ಬಿದ್ದ ಸುಮಾರು ೧೦೦ ಕ್ಷಿಂಟಾಲ್ ಅಕ್ಕಿಯನ್ನು ಪೂರೈಸಲಾಯಿತು. ಹಾಗೂ ೩೦ ಕ್ವಿಂಟಾಲ್ ಅಕ್ಕಿಯನ್ನು ಸಂಘಟನೆಯು ನೀಡಿತು.ಎಷ್ಟೋ ರೈತರು ಗಂಜಿಯೊಂದನ್ನೇ ನಂಬಿಕೊಂಡವರು. ಫಸಲು ಕಡಿಮೆಯಾದಾಗ ನಿರಾಸೆಯಾದರೂ ಅಕ್ಕಿ ಸಿಕ್ಕ ಕಾರಣ ನಿಶ್ಚಿಂತರಾದರು.

ರಾಸಾಯನಿಕ ವಿಷದಿಂದ ಹಾಳಾದ ಮಣ್ಣನ್ನು ಸಾವಯವದಿಂದ ಸರಿಪಡಿಸುವುದು ತಕ್ಷಣ ಆಗದ ಕೆಲಸ. ಮೂರು ವರ್ಷಗಳ ನಂತರ ಮಣ್ಣು ಸಾವಯವ ಗೊಬ್ಬರ, ಸಾವಯವ ಕೀಟನಾಶಕಗಳಿಗೆ ಹೊಂದಿಕೊಳ್ಳುತ್ತದೆ. ಆಗ ಇಳುವರಿಯೂ ಹೆಚ್ಚುತ್ತದೆ. ಯಾವುದೇ ಪೋಷಕಾಂಶಗಳನ್ನು ನೇರವಾಗಿ ನೀಡುವುದರಿಂದ ತಕ್ಷಣದ ಪರಿಣಾಮ ಹಾಗೂ ದುಷ್ಪರಿಣಾಮಗಳು ಕಾಣುತ್ತದೆ. ಆದರೆ ಮಣ್ಣಿನೊಳಗೆ ಸಸ್ಯಗಳಿಗೆ ಅಗತ್ಯ ಬೀಳುವ ಪೋಷಕಾಂಶಗಳು ಜೈವಿಕ ಕ್ರಿಯೆಯಿಂದ ಉತ್ಪನ್ನವಾದಾಗ ಸಸ್ಯಗಳು ರೋಗನಿರೋಧಕ ಶಕ್ತಿಯನ್ನು ಹೊಂದಿ ಬೆಳೆಯುತ್ತವೆ. ಹೀಗಾಗಿ ರಾಸಾಯನಿಕ ಗೊಬ್ಬರ ನೀಡಿದಾಗ ಅದರಿಂದ ಬರುವ ರೋಗ, ಕೀಟಗಳಿಗೆ ರಾಸಾಯನಿಕ ವಿಷವನ್ನೇ ಸಿಂಪಡಿಸಬೇಕಾಗುತ್ತದೆ. ಕಾಂಪೋಸ್ಟ್, ಎರೆಗೊಬ್ಬರ, ಜೀವಾಮೃತ, ಗೋಮೂತ್ರ ಇವೆಲ್ಲಾ ಮಣ್ಣಿನೊಳಗೆ ಜೈವಿಕ ಕ್ರಿಯೆ ಹೆಚ್ಚಿಸಲು ಸಹಾಯಕ.

ಕಿಲಾರ ಗ್ರಾಮದ ಮಾಸ್ತ್ಯಾನಾಯಕ ಹೇಳುತ್ತಾರೆ – ನಮಗೆ ಮನೆಯಲ್ಲೇ ಗೊಬ್ಬರ ತಯಾರಿಸುವಿಕೆ ಮುಖ್ಯವಾಗಬೇಕು. ಅದಕ್ಕೆ ಜಾನುವಾರುಗಳು ಬೇಕು. ಅದರಲ್ಲೂ ಗುಡ್ಡಬೆಟ್ಟಗಳನ್ನೆಲ್ಲಾ ಮೇಯ್ದು ಬರುವ ಹಳ್ಳಿತಳಿಗಳಾದರೆ ಬಹಳ ಒಳ್ಳೆಯದು. ಇದಕ್ಕಾಗಿ ಹೊಲ, ಗದ್ದೆಗಳು ಬೇಕು. ಗೋಮಾಳ ಬೇಕು. ಸೊಪ್ಪಿನ ಬೆಟ್ಟ ಬೇಕು. ಇದೆಲ್ಲಾ ಇದ್ದಾಗ ಕಾಂಪೋಸ್ಟ್ ತಯಾರಿಕೆಯಾಗಲೀ, ಜಾನುವಾರು ಸಾಕಣೆ ಹಾಗೂ ಸಾವಯವ ಕೃಷಿಯಾಗಲೀ ಕಷ್ಟವಾಗದು.

ಮಾಗಿ ಉಳುಮೆ

ಹಿಂದೆ ಮಳೆಗಾಲ ಪ್ರಾರಂಭಕ್ಕೂ ಮೊದಲು ಗದ್ದೆಗೆ ಗೊಬ್ಬರದ ರಾಶಿ ಹಾಕುವುದು. ತಿಂಗಳಕಾಲ ಹಾಗೇ ಬಿಟ್ಟು ಮತ್ತೆ ಪುರುಸೊತ್ತಾದಾಗ ಉಳುಮೆ ಮಾಡುವುದು. ಮಳೆಯಲ್ಲಿ ವಿಪರೀತ ನೀರು ನಿಲ್ಲಿಸುವುದು. ಕಬ್ಬಿನ ಗದ್ದೆಯಲ್ಲಿ ಉಳಿದ ರವದಿ, ಕೂಳೆಗಳಿಗೆ ಬೆಂಕಿಕೊಡುವುದು ಹೀಗೆ ಏನೆಲ್ಲಾ ಮಾಡುತ್ತಿದ್ದರು. ಇದರಿಂದ ಗೊಬ್ಬರದ ಪೋಷಕಾಂಶಗಳು ಬಿಸಿಲಿನಲ್ಲಿ ನಾಶವಾಗುತ್ತಿತ್ತು. ನೀರು ನಿಲ್ಲಿಸಿದಾಗ ಮಣ್ಣು ಜವಳಾಗಿ ತನ್ನ ಶಕ್ತಿಯನ್ನೇ ಕಳೆದುಕೊಳ್ಳುತ್ತಿತ್ತು. ಬೆಂಕಿ ಹಾಕಿದಾಗ ಮಣ್ಣಿನೊಳಗಿನ ಜೀವಾಣುಗಳೆಲ್ಲಾ ಸುಟ್ಟುಹೋಗುತ್ತಿದ್ದವು. ಈ ಪದ್ಧತಿಗಳನ್ನು ನಿಲ್ಲಿಸುವುದು ಸುಲಭವಾಗಿ ಆಗಲಿಲ್ಲ. ಆದರೆ ಎರಡನೇ ಬೆಳೆ ಬೆಳೆದ ಕೂಡಲೇ ನೆಲವನ್ನು ಉಳುಮೆ ಮಾಡಿಬಿಡುವುದರಿಂದ ರೋಗಕಾರಕ ಬ್ಯಾಕ್ಟೀರಿಯಾ, ಫಂಗಸ್‌ಗಳು, ಮಣ್ಣಿನಾಳದಲ್ಲಿ ಮೊಟ್ಟೆಯಿಡುವ ಪೀಡೆ ಕೀಟಗಳು ಬಿಸಿಲಿಗೆ ನಾಶವಾಗುವ ರೀತಿಯನ್ನು ವಿವರಿಸಿದಾಗ ಚಳಿಗಾಲದಲ್ಲಿ ಉಳುಮೆ ಮಾಡುವುದು ಒಳ್ಳೆಯದು ಎಂದು ಅದನ್ನೇ ಅನುಸರಿಸತೊಡಗಿದರು. ಇದರಿಂದ ಮಣ್ಣಿಗೆ ಗೊಬ್ಬರ ಸೇರಿಸುವಿಕೆ ಸುಲಭವಾಯಿತು. ಹಸುರೆಲೆ ಗೊಬ್ಬರದ ಗಿಡಗಳನ್ನು ಬೆಳೆಯಲೂ ಅನುಕೂಲವಾಯಿತು.

ಸಸ್ಯಗಳಿಗೆ ಟಾನಿಕ್

ಪಂಚಗವ್ಯ ತಯಾರಿಕೆ, ಜೀವಾಮೃತಗಳ ತಯಾರಿಕೆಯನ್ನು ಕಲಿತ ಮೇಲೆ ಎಲ್ಲರ ಮನೆಯಲ್ಲೂ ನೂರು ಹಾಗೂ ೨೦೦ ಲೀಟರ್ ನೀರು ಹಿಡಿಯುವ ಡ್ರಮ್‌ಗಳು ಬಂದವು. ತೋಟಕ್ಕೆ ವರ್ಷಾವಧಿ ಜೀವಾಮೃತ ನೀಡುತ್ತಲೇ ಇರಬೇಕು. ಗದ್ದೆಗಾದರೆ ಬೆಳೆ ಕೊಯ್ಲಿಗೆ ಬರುವ ತನಕ ಮಾತ್ರ ನೀಡಿದರೆ ಸಾಕು. ಇದೇನು ಕಷ್ಟದ ಕೆಲಸವಲ್ಲ. ಈ ದ್ರವರೂಪಿ ಟಾನಿಕ್, ಸಸ್ಯಗಳ ಬೆಳವಣಿಗೆಗೆ ಪ್ರಚೋದಕಗಳಾಗಿ ಕೆಲಸ ಮಾಡುವುದು ತಿಳಿಯಿತು. ಪ್ರಾರಂಭದಲ್ಲಿ ಎಂಟು ಜನ ರೈತರು ಮಾಡಿದರೆ ಈಗ ೪೦ಕ್ಕೂ ಹೆಚ್ಚು ರೈತರು ಜೀವಾಮೃತ ನೀಡುತ್ತಿದ್ದಾರೆ.

ಅತಿಯಾಗಿ ಮಳೆ ಬೀಳುವ ಪ್ರದೇಶವಾಗಿದ್ದರಿಂದ ಮಣ್ಣು ಕೊಚ್ಚಣೆಯಾಗುವುದು ಸಹಜ. ಪ್ರತಿಸಾರಿ ಹಾಕಿದ ಗೊಬ್ಬರಗಳು ತೊಳೆದುಹೋಗುತ್ತವೆ. ಇದರಿಂದ ಪೋಷಕಾಂಶಗಳ ಕೊರತೆ. ಗದ್ದೆಗೆ, ತೋಟಕ್ಕೆ ಬೇಕಾದ ಪೋಷಕಾಂಶಗಳನ್ನು ತುಂಬಿಕೊಡಲು ಬೇವಿನ ಹಿಂಡಿ, ಹೊಂಗೆ ಹಿಂಡಿ, ಹರಳು ಹಿಂಡಿ, ಕೋಳಿ ಗೊಬ್ಬರ ಇವುಗಳನ್ನೆಲ್ಲಾ ತರಿಸಲು ರೈತರು ತೀರ್ಮಾನಿಸಿದರು. ಅದಕ್ಕಾಗಿ ಮೊದಲು ಮಣ್ಣು ಪರೀಕ್ಷೆ ಮಾಡಿಸಿದರು. ಕೊರತೆಯನ್ನು ಸೂಕ್ತ ಪ್ರಮಾಣದಲ್ಲಿ ತುಂಬಲು ಬೇಕಾದ ನಿರ್ದಿಷ್ಟ ಪ್ರಮಾಣದ ಹಿಂಡಿಗೊಬ್ಬರಗಳನ್ನು ಅಂದಾಜಿಸಿದರು. ರೈತರದ್ದೂ ಸ್ಪಲ್ಪ ಪಾಲಿದ್ದರೆ ತರಿಸಿದ ಗೊಬ್ಬರ ಸೂಕ್ತವಾಗಿ ಬಳಕೆಯಾಗುತ್ತದೆ ಎನ್ನುವ ನಿಲುವು ಹೊಂದಿದರು. ಎಲ್ಲರೂ ಒಗ್ಗೂಡಿ ಹಿಂಡಿ, ಗೊಬ್ಬರ, ಕೋಳಿ ಗೊಬ್ಬರ ತರಿಸಿದರು. ಮೈಯಾಳಿನಲ್ಲಿ ಕೆಲಸ ಮಾಡಿ ತೋಟಕ್ಕೆ ತಕ್ಷಣ ಹಾಕಿದರು.

ಹೊಮ್ಮಂಡ

ಭತ್ತ ಬೆಳೆದ ಮೇಲೆ ಉಳಿಯುವ ತೇವಾಂಶ, ಸತ್ವಗಳಲ್ಲಿ ಮಗೆಸೌತೆ, ಎಳ್ಳು, ಉದ್ದು, ಹೆಸರು ಬೆಳೆಯುವಿಕೆ ಇಲ್ಲಿನ ರೈತರ ಪದ್ಧತಿ. ಈ ರೀತಿ ಎರಡನೇ ಬೆಳೆಯನ್ನು ಹೊಮ್ಮಂಡವೆನ್ನುತ್ತಾರೆ. ಅರ್ಧ ಎಕರೆಗೆ ಎಂದು ಸಾವಿರ ಮಗೆಸೌತೆ ಬೆಳೆದ ದಾಖಲೆ ರಘುಪತಿ ಹೆಗಡೆಯವರದು. ಜಾನುವಾರುಗಳ ಕಾಟ ಇಲ್ಲದಿದ್ದರೆ ಯಾವುದೇ ಫಸಲನ್ನು ಹೆಚ್ಚು ಪಡೆಯಬಹುದು.  ಫಸಲನ್ನು ಕೊಯ್ದುಕೊಂಡು ಉಳಿವ ಕಳೆ, ಕೂಳೆಗಳನ್ನು ಅದೇ ನೆಲಕ್ಕೆ ಸೇರಿಸುವ ರೂಢಿ ಇಲ್ಲ. ಹೊಮ್ಮಂಡದಲ್ಲಿ ದ್ವಿದಳ ಧಾನ್ಯಗಳನ್ನು ಬೆಳೆದರೆ ನೆಲಕ್ಕೆ ಹೆಚ್ಚು ಸಾರಜನಕ ಸೇರುತ್ತದೆ ಎಂಬುದು ತಿಳಿದಮೇಲೆ ಅನೇಕರು ದ್ವಿದಳ ಧಾನ್ಯಗಳನ್ನೇ ಹೆಚ್ಚು ಬೆಳೆಯುತ್ತಿದ್ದಾರೆ. ಇವುಗಳ ಗಿಡಗಳನ್ನು ಒಣಗಿಸಿಟ್ಟುಕೊಂಡರೂ ಒಳ್ಳೆಯ ಮೇವಾಗುತ್ತದೆ. ಅದೇ ರೀತಿ ಖುಷ್ಕಿಗಳಲ್ಲಿ, ಹಿತ್ತಲುಗಳಲ್ಲಿ ಕೆಲವರು ಮೇವಿನ ಬೆಳೆಯನ್ನು ಬೆಳೆಯತೊಡಗಿದರು. ಹುಲ್ಲು ಬೆಳೆಸಿ ನಿಯಮಿತವಾಗಿ ಹಸುರುಹುಲ್ಲು ನೀಡುವುದರಿಂದ ಹಾಲಿನ ಉತ್ಪಾದನೆ ಹೆಚ್ಚಾಗುತ್ತದೆ.

ಜಾನುವಾರುಗಳಿಗೆ ಮೇವಾಗಿ ಅಜೋಲಾ ನೀಡಿದರೆ ಅದರಲ್ಲಿರುವ ಪೋಷಕಾಂಶಗಳು ಅವುಗಳ ಬೆಳವಣಿಗೆಗೆ ಸಹಾಯಕ ಎಂಬುದು ಗ್ರಾಹಕ ಜಾಗೃತಿ ಸಭೆಯಲ್ಲಿ ತಿಳಿಯಿತು. ೫೦ ರೈತರು ಸಣ್ಣಪ್ರಮಾಣದಲ್ಲಿ ಅಜೋಲಾ ಬೆಳೆಯಲು ಪ್ರಾರಂಭಿಸಿದರು.

ಅಜೋಲಾ ನೀರಿನೊಳಗೆ ಬೆಳೆಯುವ ಸಸ್ಯ. ಅದಕ್ಕಾಗಿ ಅಗಲವಾದ ಹೊಂಡ ಮಾಡಿ ಅದಕ್ಕೆ ಟಾರ್ಪಾಲಿನ್‌ಗಳ ಮುಚ್ಚಿಗೆ ಮಾಡಲಾಗುತ್ತದೆ. ಅದರಲ್ಲಿ ನೀರು ತುಂಬಿ ಅಜೋಲಾ ಬೆಳೆಯುತ್ತಾರೆ. ಮಣ್ಣಿನ ಹೊಂಡವಾದರೆ ನೀರು ಇಂಗಿಹೋಗುತ್ತದೆ. ನೀರು ಕಡಿಮೆಯಾಗದಂತೆ ಆಗಾಗ ನೀರು ಬಿಡುತ್ತಿರಬೇಕು. ಬಿಸಿಲು ಹೆಚ್ಚಾಗಿ ಬೀಳದಂತೆ ನೆರಳು ಮಾಡಬೇಕು. ಸ್ವಲ್ಪ ಸಗಣಿ ಗೊಬ್ಬರ ನೀಡುತ್ತಿದ್ದರೆ ಬಲುಬೇಗ ಬೆಳೆಯುತ್ತದೆ. ನಾಲ್ಕು ಚದುರದ ಆರು ಹೊಂಡಗಳಿದ್ದರೆ ಪ್ರತಿದಿನ ಅರ್ಧ ಕಿಲೋಗ್ರಾಂನಷ್ಟು ಅಜೋಲಾ ಸಿಗುತ್ತದೆ ಎನ್ನುತ್ತಾರೆ ಆವಿನಹಳ್ಳಿಯ ದೇವಪ್ಪವನರು. ಅಜೋಲಾ ಹಾಕಿದರೆ ಜಾನುವಾರು ತಿಂಡಿಯನ್ನು ಸ್ಪಲ್ಪ ನೀಡಿದರೂ ಸಾಕು. ಜಾನುವಾರುಗಳು ಆರೋಗ್ಯವಾಗಿರುತ್ತವೆ ಎನ್ನುತ್ತಾರೆ.

ಇಂಗುಗುಂಡಿ ನಿರ್ಮಾಣ / ಅರಣ್ಯೀಕರಣ

ಎಷ್ಟೇ ಮಳೆ ಬಿದ್ದರೂ ನೀರೆಲ್ಲಾ ಹಳ್ಳದ ಪಾಲು. ಮಳೆಗಾಲದಲ್ಲಿ ಜವಳು. ಬೇಸಿಗೆಯಲ್ಲಿ ಬರ.  ಗುಡ್ಡಗಳು ಬೋಳಾಗಿ ಕಾಡು ನಾಶವಾಗುತ್ತಿದ್ದ ಕಾರಣ ಮಳೆನೀರು ನಿಲ್ಲದೇ ಹರಿದುಹೋಗುತ್ತಿತ್ತು. ಬೇಸಿಗೆಯಲ್ಲಿ ಕುಡಿಯುವ ನೀರಿನ ಬಾವಿಯಲ್ಲಿ ಒಂದಡಿ ನೀರು ಇರುತ್ತಿರಲಿಲ್ಲ ಎಂದು ಹೇರಂಬ ಹೆಗಡೆಯವರು ಹೇಳುತ್ತಾರೆ. ಇಂಗುಗುಂಡಿಗಳ ನಿರ್ಮಾಣದಿಂದ ಹರಿಯುವ ನೀರು ಇಂಗತೊಡಗುತ್ತದೆ. ಮಣ್ಣುಕೊಚ್ಚಣೆ ನಿಲ್ಲುತ್ತದೆ. ಗದ್ದೆಗೆ, ತೋಟಕ್ಕೆ ನುಗ್ಗುವ ನೀರಿನ ರಭಸ ತಗ್ಗುತ್ತದೆ. ಇಂಗಿದ ನೀರು ಬೇಸಿಗೆಯಲ್ಲೂ ತಂಪನ್ನು ಉಳಿಸುತ್ತದೆ. ಕುಡಿಯುವ ನೀರಿನ ಬಾವಿಯಲ್ಲೂ ನೀರಿನ ಪ್ರಮಾಣ ಏರುತ್ತದೆ. ಈ ರೀತಿ ಪ್ರಾತ್ಯಕ್ಷಿಕೆ, ಕ್ಷೇತ್ರ ಸಂದರ್ಶನಗಳಿಂದ ವಿಷಯ ಅರಿತ ಊರಿನವರು ಗ್ರಾಮದಲ್ಲಿ ಇಂಗುಗುಂಡಿಗಳನ್ನು ನಿರ್ಮಿಸಲು ತೀರ್ಮಾನಿಸಿದರು. ಕೇವಲ ಗುಂಡಿಗಳ ನಿರ್ಮಾಣವೊಂದೇ ಅಲ್ಲ ಜೊತೆಯಲ್ಲಿ ಅರಣ್ಯೀಕರಣವನ್ನೂ ಮಾಡುವುದರಿಂದ ಪರಿಸರ ರಕ್ಷಣೆಯೂ ಆಗುತ್ತದೆ ಎಂಬ ಚಿಂತನೆಯೂ ಸೇರಿಕೊಂಡಿತು.

ಕಿಲಾರ ಗ್ರಾಮದ ಗುಡ್ಡಬೆಟ್ಟಗಳಲ್ಲಿ, ಗೋಮಾಳ, ಹಿತ್ತಿಲು, ಸೊಪ್ಪಿನಬೆಟ್ಟ, ಖುಷ್ಕಿ ಹೀಗೆ ಎಲ್ಲೆಂದರಲ್ಲಿ ೮,೦೦೦ ಇಂಗುಗುಂಡಿಗಳ ನಿರ್ಮಾಣ. ಮೊದಲು ಜಾಗ ಗುರುತಿಸುವುದು. ನಿರ್ದಿಷ್ಟವಾದ ದಿನದಂದು ಎಲ್ಲರೂ ಸೇರಿ ಗುಂಡಿ ತೆಗೆಯುವುದು. ಕೆಲವರು ತಮ್ಮ ಸ್ವಂತ ಜಾಗಗಳಲ್ಲೂ ಒಂದಿಷ್ಟು ಗುಂಡಿಗಳನ್ನು ತೆಗೆದುಕೊಂಡರು.

ಮಳೆ ಬಂದಾಗ ತುಂಬಿದ ಗುಂಡಿಗಳು. ಮರುದಿನ ನೋಡಲು ನೀರೆಲ್ಲಾ ಇಂಗಿ ಖಾಲಿಯಾಗಿರುತ್ತಿದ್ದವು. ಮತ್ತೆ ತುಂಬಿ ಮತ್ತೆ ಖಾಲಿ. ಅಬ್ಬಬ್ಬಾ ಗುಂಡಿಗಳು ನೀರು ಕುಡಿಯುವ ರೀತಿ ನೋಡಿದರೆ ನೆಲಕ್ಕೆ ಎಷ್ಟು ಬಾಯಾರಿಕೆಯಾಗಿತ್ತು ಎಂದು ಈಗಲೂ ಅನಿಸುತ್ತದೆ ಎನ್ನುತ್ತಾರೆ ಅಣ್ಣಪ್ಪ ನಾಯ್ಕ. ಊರವರಿಗೆ ಮತ್ತಷ್ಟು, ಇನ್ನಷ್ಟು ಇಂಗುಗುಂಡಿ ತೆಗೆಯಲು ಇದೇ ಪ್ರೇರಣೆಯಾಯ್ತು. ಅದೇ ವರ್ಷ ಬೇಸಿಗೆಯಲ್ಲಿ ಬಾವಿಯ ನೀರು ನಾಲ್ಕು ಅಡಿಗಳಷ್ಟು ಮೇಲೇರಿತ್ತು. ನೀರಿನಮಟ್ಟ ಏರುತ್ತಿದ್ದರೆ ಕಾಡಿನಲ್ಲಿ ನೆಟ್ಟಗಿಡಗಳಿಗೆ ವಿಶೇಷವಾಗಿ ನೀರು ನೀಡುವುದು ಬೇಕಾಗದು. ಹೀಗಾಗಿ ಇಂಗುಗುಂಡಿಗಳ ಬದುವಿನ ಮೇಲೆ, ಸೊಪ್ಪಿನ ಬೆಟ್ಟಗಳಲ್ಲಿ ಕಾಡು ವಿರಳವಾಗಿರುವ ಕಡೆಯಲ್ಲಿ ಗಿಡ ನೆಡಲು ಯೋಜಿಸಲಾಯಿತು.  ಸ್ಥಳೀಯವಾಗಿ ಬೆಳೆಯುವ ಗಿಡಗಳನ್ನು ಗುರುತಿಸಲಾಯಿತು. ಅವುಗಳ ಸಸಿಗಳನ್ನು ತರುವುದು, ಊರವರೆಲ್ಲಾ ಶ್ರಮದಾನದ ಮೂಲಕ ನೆಡುವುದು. ಹೀಗೆ ೧೦,೦೦೦ ಸಸಿಗಳನ್ನು ನೆಡಲಾಯಿತು. ಒಳ್ಳೆಯ ಮಳೆ ಹಾಗೂ ಇಂಗುಗುಂಡಿಗಳಿರುವ ಕಾರಣ ನೆಟ್ಟಿರುವ ಸಸಿಗಳಲ್ಲಿ ಸತ್ತಿರುವ ಸಂಖ್ಯೆ ಅತ್ಯಂತ ಕಡಿಮೆ. ಈ ಕೆಲಸಕ್ಕೆ ಕಿಲಾರದ ಶಾಲೆಯ ಮಕ್ಕಳೆಲ್ಲಾ ಕೈಜೋಡಿಸಿದರು.

ಉಪಬೆಳೆ / ಉಪಕಸುಬು

ಉಪಬೆಳೆಗಳನ್ನು ಬೆಳೆದರೆ ಇರುವಷ್ಟೇ ಜಾಗದಿಂದ ಹೆಚ್ಚು ಉತ್ಪಾದನೆ ಪಡೆಯಲು ಸಾಧ್ಯ.  ಹಿತ್ತಲಲ್ಲಿ, ಖುಷ್ಕಿಯಲ್ಲಿ, ಗದ್ದೆಯ ಬದುಗಳ ಮೇಲೆ, ಹಲಸು, ಮಾವು, ಚಿಕ್ಕೂ, ನೆಲ್ಲಿ, ಮುರುಗನ ಹುಳಿ, ಮಿಡಿಮಾವು ಹೀಗೆ ಏನೆಲ್ಲಾ ಬೆಳೆಯಬಹುದು. ಇವುಗಳು ಮನೆ ಉಪಯೋಗಕ್ಕೆ ಮಾತ್ರವಲ್ಲ. ಮೌಲ್ಯವರ್ಧನೆ ಮಾಡಿದರೆ ಮಾರಾಟವನ್ನೂ ಮಾಡಬಹುದು. ಈ ಉದ್ದೇಶದಿಂದ ಉತ್ತಮ ತಳಿಯ ಗಿಡಗಳನ್ನು ಆಯ್ಕೆ ಮಾಡಿ ತಂದರು. ಸುಮಾರು ೭೦೦ ಸಸಿಗಳನ್ನು ವಿವಿಧ ರೈತರು ಬೆಳೆಸಿದ್ದಾರೆ. ಚೆನ್ನಾಗಿ ಆರೈಕೆ ಮಾಡಿದ್ದಕ್ಕಾಗಿ ಎಲ್ಲವೂ ಉತ್ತಮ ಬೆಳವಣಿಗೆ ಹೊಂದಿದೆ.

ಇದೇ ರೀತಿ ಉಪಕಸುಬುಗಳೂ ಸಹ ಜೀವನ ನಿರ್ವಹಣೆಗೆ ಪರೋಕ್ಷ ಸಹಕಾರ ನೀಡುತ್ತದೆ. ಅದರಲ್ಲೂ ಕೋಳಿಸಾಕಣೆ, ಜೇನು ಸಾಕಣೆಗೆ ಇಲ್ಲಿನ ರೈತರು ಸಿದ್ಧವಾದರು. ಗಿರಿರಾಜ ಕೋಳಿಗಳ ಸಾಕಣೆ ಸುಲಭ.  ಇದಕ್ಕೆ ರೋಗ ಕಡಿಮೆ. ವಿಶೇಷ ನಿಗಾ ನೋಡಬೇಕಾಗಿಲ್ಲ. ವರ್ಷಗೊಳಗೆ ದಷ್ಟಪುಷ್ಟವಾಗಿ ಬೆಳೆಯುವ ಕಾರಣ ಮಾರಾಟಕ್ಕೂ ಲಾಭದಾಯಕ. ಕೋಳಿಗಳು ಊರೆಲ್ಲಾ ಹುಳುಹುಪ್ಪಟೆಗಳನ್ನು ತಿನ್ನುತ್ತವೆ. ಅವುಗಳ ಮಲಮೂತ್ರ ಸಂಗ್ರಹಿಸಿದರೆ ಉತ್ತಮ ಗೊಬ್ಬರವಾಗುತ್ತದೆ. ಅಥವಾ ಅವುಗಳು ನಮ್ಮದೇ ಹೊಲ, ತೋಟಗಳಲ್ಲಿದ್ದರೆ ಅಲ್ಲಿಯೇ ಮಲಮೂತ್ರ ಮಾಡುತ್ತಿರುತ್ತವೆ. ಹೀಗೆ ಅವು ಇದ್ದರೂ ಉಪಯೋಗ, ಮಾರಿದರೂ ಲಾಭ. ಯಾವುದೇ ಖರ್ಚಿಲ್ಲದ ಉತ್ಪನ್ನ.ಈ ಉಪಕಸುಬುಗಳು ಯೋಜನೆಗೆ ನೇರ ಸಂಬಂಧಪಡದಿದ್ದರೂ, ಯೋಜನೆಯಿಂದ ಪ್ರೇರಿತವಾಗಿ ಪ್ರಾರಂಭವಾಯಿತು ಎನ್ನುತ್ತಾರೆ ವಾಸುದೇವನಾಯ್ಕ.

ಒಗ್ಗಟ್ಟಿನಲ್ಲಿ ಬಲ

ಯಾವುದೇ ಊರಿನಲ್ಲಿ ಸಾರ್ವಜನಿಕ ಕೆಲಸಗಳಾಗಲು ಮುಖ್ಯವಾಗಿ ಸಮುದಾಯಗಳ ಸಹಭಾಗಿತ್ವ ಇರಬೇಕು. ಊರೆಲ್ಲಾ ಒಗ್ಗಟ್ಟಾಗಿ ಕೆಲಸ ಮಾಡಿದರೆ ಶ್ರಮ ಹಂಚಿಕೆಯಾಗುತ್ತದೆ. ಕೆಲಸಗಳೂ ಬೇಗ ಪೂರೈಸುತ್ತದೆ. ಸಾಮುದಾಯಿಕ ಅಭಿವೃದ್ಧಿಯೂ ಆಗುತ್ತದೆ. ಇದಕ್ಕೆ ಪರಸ್ಪರ ಸಹಕಾರ, ಸಾಮರಸ್ಯಗಳು, ಜೊತೆಗೆ ಪಕ್ಕಾ ಯೋಜನೆಗಳು ಬೇಕು. ಇವನ್ನೆಲ್ಲಾ ನಡೆಸಲು ಉತ್ತಮ ನಾಯಕತ್ವ, ಸಂಘಟನಾ ಶಕ್ತಿ, ಅದನ್ನು ಕೊನೆಯವರೆಗೂ ಉಳಿಸಿಕೊಳ್ಳುವ ಚಾತುರ್ಯ ಇರಲೇಬೇಕಾಗುತ್ತದೆ. ಕಿಲಾರದ ರೈತರಲ್ಲಿ ಈ ರೀತಿಯ ಸಹಕಾರ ಸಾಮರಸ್ಯಗಳು ಸಹಜವಾಗಿವೆ. ಇವರನ್ನು ಮುನ್ನಡೆಸುವ ಯುವ ಮುಂದಾಳು ಸತೀಶ್ ಹೆಗಡೆ, ವಾಸುನಾಯ್ಕ, ಬಾಲಕೃಷ್ಣ ನಾಯ್ಕ ಇವರೆಲ್ಲಾ ರೈತಪರ ಚಿಂತಕರೇ ಆಗಿದ್ದಾರೆ.

ಊರಿನ ಅಭಿವೃದ್ಧಿಯ ಕೆಲಸಗಳಲ್ಲಿ ಒಬ್ಬರ ತೀರ್ಮಾನಕ್ಕೆ ಎಂದೂ ಆಸ್ಪದವಿಲ್ಲ. ಮೊದಲು ವಿಚಾರದ ಮಂಡನೆ. ಆ ಕುರಿತಾಗಿ ಮಾಹಿತಿಗಳ ಸಂಗ್ರಹ. ಅದರ ಸಾಧಕಬಾಧಕಗಳ ಕುರಿತ ವಿಮರ್ಶೆ. ಬೇಕೇ ಬೇಡವೇ ಎನ್ನುವ ತೀರ್ಮಾನ. ಬೇಕು ಎಂದಾದರೆ ಅದನ್ನು ಪಡೆಯುವ ರೀತಿ, ಬಳಸಿಕೊಳ್ಳುವ ಬಗೆ, ಹಾಗೇ ಮುಂದೆ ಎಷ್ಟು ಉಪಯೋಗವಾಗುತ್ತದೆ ಎನ್ನುವ ಕುರಿತ ಚರ್ಚೆ.

ಯಾವುದನ್ನೇ ಆಗಲಿ ಉಚಿತವಾಗಿ ಪಡೆದರೆ ಅವುಗಳ ಬಗೆಗೆ ನಮ್ಮ ನಿಗಾ ಕಡಿಮೆಯಾಗುತ್ತದೆ. ಆಗ ಅದು ಅನುಪಯುಕ್ತವಾಗುತ್ತದೆ. ಅದರ ಬದಲು ನಮ್ಮ ಪಾಲೂ ಅದರಲ್ಲಿದ್ದರೆ ನಮ್ಮ ನಿಲುವೇ ಬದಲಾಗುತ್ತದೆ. ನಾವೂ ಅದನ್ನು ಉಳಿಸಿಕೊಳ್ಳಲು, ಬೆಳೆಸಲು ಶ್ರಮ ವಹಿಸುತ್ತೇವೆ. ಅದಕ್ಕಾಗಿ ಬರುವ ಉಚಿತ ಅನುದಾನಕ್ಕಿಂತಲೂ ಸಹಾಯಧನದ ರೀತಿಯ ಅನುದಾನ ಹಾಗೂ ನಂತರದ ನಿರ್ವಹಣಾ ಸಹಕಾರ ಮುಖ್ಯ ಎನ್ನುವ ವಿಚಾರ ಕಿಲಾರದ ರೈತಸಂಘದ್ದು. ಹಸು, ಎತ್ತುಗಳನ್ನು ಕೊಳ್ಳುವುದಿರಲಿ, ಬಹುಪಯೋಗಿ ಡ್ರಮ್‌ಗಳನ್ನು ಕೊಳ್ಳುವುದಿರಲಿ, ರೈತರು ತಮ್ಮ ಪಾಲನ್ನೂ ಸೇರಿಸಿಯೇ ಕೊಂಡಿದ್ದಾರೆ. ಇದರಿಂದಾಗಿ ಕೊಂಡಿದ್ದು ಬಳಕೆಯಾಗುತ್ತದೆ.

ಮನೆ ಮದ್ದು

ಜಾಗೃತಿ ಕಾರ್ಯಕ್ರಮದಲ್ಲಿ ಬಹಳ ಉಪಯುಕ್ತವೆನಿಸಿದ್ದು ಮನೆಮದ್ದು ಕಾರ್ಯಕ್ರಮ. ಇದು ಅಮೃತ ಹೆಗಡೆಯವರ ಆಲೋಚನೆ. ಹೊಲ, ತೋಟಗಳನ್ನೆಲ್ಲಾ ಸಾವಯವ ಮಾಡಿ ಅಡಿಗೆ ಮನೆಯನ್ನು ಮಾತ್ರೆ, ಔಷಧಿಗಳಿಂದ ತುಂಬಿದರೆ ಸರಿಯೇ ಎನ್ನುವ ಪ್ರಶ್ನೆ ಬಂದಾಗ ಹೊಳೆದ ಉಪಾಯವಿದು. ನಮಗೆ ಬರುವ ಸಾಮಾನ್ಯ ಕಾಯಿಲೆಗಳಿಗೆಲ್ಲಾ ನಮ್ಮ ಸುತ್ತಲೇ ಔಷಧಿ ಸಸ್ಯಗಳು, ಕಾಳು, ಗೆಡ್ಡೆ, ಬೇರು, ನಾರುಗಳಿರುತ್ತವೆ. ಆದರೆ ಅವನ್ನು ನಾವು ಬಳಸುವುದಿಲ್ಲ. ಅವುಗಳನ್ನು ಯಾವ ಪ್ರಮಾಣದಲ್ಲಿ ಸೇರಿಸಿ ಸೇವಿಸಬೇಕೆಂಬುದು ಗೊತ್ತಿಲ್ಲ. ಯಾವ ಕಾಯಿಲೆಗೆ ಯಾವುದು ಮದ್ದು ಎಂದೂ ಗೊತ್ತಿಲ್ಲ.

ಸಾವಯವ, ಸಮತೋಲಿತ ಆಹಾರಸೇವನೆಯಿಂದಲೇ ಅನೇಕ ರೋಗಗಳನ್ನು ತಡೆಯಬಹುದೆಂಬುದು ಮನೆಮದ್ದಿನ ಶಿಬಿರದ ಮುಖ್ಯ ಪ್ರಣಾಳಿಕೆ. ಊಟಕ್ಕೆ ಬಳಸುವ ತಂಬಳಿಗಳ ಮೂಲಕವೇ ವಾತ, ಪಿತ್ತ, ಕಫಗಳನ್ನು ನಿಯಂತ್ರಿಸಬಹುದು. ತುರಿಕೆ, ತಲೆನೋವು, ಥಂಡಿಕೆಮ್ಮು, ಉರಿಶೀತ, ಅಜೀರ್ಣ ಹೀಗೆ ಕಿರಿಕಿರಿಗಳಿಗೆಲ್ಲಾ ಅಡುಗೆಮನೆಯ ಡಬ್ಬಿಗಳಲ್ಲೇ ಔಷಧಗಳಿವೆ ಎಂಬುದನ್ನು ತಜ್ಞರು ತಿಳಿಸಿದಾಗ ಅವುಗಳ ಪ್ರಮಾಣ, ಪರಿಣಾಮಗಳನ್ನು ಹೇಳಿದಾಗ ಎಲ್ಲರಿಗೂ ನಿಶ್ಚಿಂತೆ. ಪ್ರತಿದಿವಸ ಮನೆಮನೆಗಳಿಂದ ಡಾಕ್ಟರ್ ಬಳಿ ಔಷಧಿ ತರಲು ಬಾಟಲಿ ಹೋಗುತ್ತಿತ್ತು. ಮನೆಮದ್ದು ಶಿಬಿರದ ನಂತರ ಡಾಕ್ಟರ್ ಬಳಿ ಹೋಗುವವರೇ ಅಪರೂಪವಾಗಿದೆ. ಥಂಡಿ, ಕೆಮ್ಮು, ತಲೆನೋವಿಗಂತೂ ಯಾರೂ ಹೋಗುತ್ತಿಲ್ಲ ಎನ್ನುತ್ತಾರೆ ಅಣ್ಣಪ್ಪ ರಾಮಾನಾಯ್ಕ.

ನನಗೆ ದಿನಾ ತಲೆನೋವಿತ್ತು. ಮುರುಗನ ಹುಳಿ ಹಿಂಡಿ, ಎಂಟು ದಿನ ಬಿಸಿಲಲ್ಲಿ ಆರಿಸಿ, ಸಕ್ಕರೆ ಸೇರಿಸಿ ಬಾಟಲಿಯಲ್ಲಿ ಕಾಪಿಟ್ಟುಕೊಂಡಿದ್ದೇನೆ.  ದಿನಾ ಪಾನಕ ಮಾಡಿ ಕುಡಿಯುತ್ತೇನೆ. ವರ್ಷಾವಧಿ ಕಾಡಿದ ತಲೆನೋವು ಈಗಿಲ್ಲ ಎನ್ನುವ ನೆಮ್ಮದಿ ಮಾದೇವಿನಾಯ್ಕರದು.

ಕೊಂಡು ತರುವ ಆಹಾರವೇ ಅಪಾಯಕಾರಿ ಎಂದು ತಿಳಿದಾಗ ಮನೆಯಲ್ಲೇ ತರಕಾರಿಗಳನ್ನು ಬೆಳೆಯುವ ಕುರಿತು ಚಾಲನೆ ಸಿಕ್ಕಿತು. ಮೊದಲು ಬೆಳೆಯುತ್ತಿದ್ದರೂ ಕೊಂಡು ತರುವ ಪ್ರಮಾಣ ಸಹ ಹೆಚ್ಚಿತ್ತು. ಟೊಮೆಟೋ, ಕೋಸು, ಕ್ಯಾರೆಟ್ ಮುಂತಾದವುಗಳು ಬರೀ ರಾಸಾಯನಿಕ ಗೊಬ್ಬರ, ಕೀಟನಾಶಕಗಳಿಂದಲೇ ಬೆಳೆಯುತ್ತವೆ ಎಂದು ತಿಳಿದಾಗ ಹಿತ್ತಲ ತರಕಾರಿಗಳು ಮನೆಮನೆಯಲ್ಲೂ ಹೆಚ್ಚಿದವು.

ಬಸಳೆ, ಹರಿವೆ, ತೊಂಡೆ, ಬದನೆಗಳ ಜೊತೆ ಬೀನ್ಸ್, ಟೊಮೆಟೋ, ಮೆಣಸಿನಕಾಯಿ, ಬಾಳೆಕಾಯಿ, ಬಾಳೆದಿಂಡು, ಹಲಸಿನಕಾಯಿ, ಕಾಡಿನ ಸೊಪ್ಪುಗಳು, ಕೆಸ, ಹುರುಳಿ, ಹೆಸರು, ಮಗೆಕಾಯಿ, ಸೌತೆ ಹೀಗೆ ಆಯಾಕಾಲಕ್ಕೆ ತಕ್ಕ ತರಕಾರಿಗಳ ಬಳಕೆ ಹೆಚ್ಚಾಯಿತು. ಕೆಲವೊಮ್ಮೆ ಜಾಸ್ತಿಯಾದ ತರಕಾರಿಗಳ ವಿನಿಮಯ, ಮಾರಾಟಗಳೂ ನಡೆಯತೊಡಗಿದವು. ಒಟ್ಟಾರೆ ಹಿತ್ತಿಲು ಹಿಂದಿಗಿಂತಲೂ ಹೆಚ್ಚು ಸಂಪದ್ಭರಿತವಾಯಿತು.ಇದರ ನೇರ ಪರಿಣಾಮ ಪ್ರತಿವಾರ ಸಂತೆಯಿಂದ ತರಕಾರಿ ತರುವ ಶ್ರಮ, ಖರ್ಚಿನ ಉಳಿತಾಯ. ಪರೋಕ್ಷವಾಗಿ ತಾಜಾ ತರಕಾರಿಗಳಿಂದಾಗಿ ಹೆಚ್ಚಿದ ರುಚಿ ಮತ್ತು ಆರೋಗ್ಯ.

ಮೌಲ್ಯವರ್ಧನೆ

ಈ ರೀತಿ ಸಮುದಾಯಿಕ ಚಟುವಟಿಕೆಗಳು, ತಿಳುವಳಿಕೆಗಳು ಹೆಚ್ಚಿದಂತೆಲ್ಲಾ ಮೌಲ್ಯವರ್ಧನೆಯ ಮಹತ್ವ ತಿಳಿಯತೊಡಗಿತು. ಇದಕ್ಕೆ ಕಾರಣ ಊರಿನಲ್ಲೇ ಆದ ಭತ್ತದ ಬೆಳೆ ಕ್ಷೇತ್ರೋತ್ಸವ.

ಕಿಲಾರದ ಮುಖ್ಯ ಭತ್ತದ ತಳಿ ಹಸೂಡಿ. ಇದು ದಪ್ಪ ಭತ್ತ. ಇಳುವರಿ ಕಡಿಮೆ. ಅತಿಯಾದ ಮಳೆ, ಹಾಳಾದ ಮಣ್ಣಿನಲ್ಲೂ ಬೆಳೆಯುತ್ತದೆ ಎನ್ನುವ ಹೆಗ್ಗಳಿಕೆ. ಬೇರೆ ತಳಿಗಳು ಇಲ್ಲಿ ಹೊಂದಿಕೊಳ್ಳುವುದು ಕಷ್ಟ. ರೋಗ, ಕೀಟಗಳ ಉಪಟಳ. ಆದರೂ ಮಲ್ಲಿಗೆ, ಹೆಗ್ಗೆ, ಬಂಗಾರಕಡ್ಡಿ, ಗೌರಿ, ಪದ್ಮರೇಖಾ, ರಾಶಿ, ಜಡ್ಡು, ಚಿಟಗ, ಮಟ್ಹಳಗ, ಅಭಿಲಾಶ, ಸೋಮಸಾಲೆ, ಮೈಸೂರುವಾಳ್ಯ, ಬಿಳಿ ಇಂಟಾನ್ ಮುಂತಾದ ತಳಿಗಳಿವೆ. ಹೆಚ್ಚಿನವು ಬಿಳಿ ಅಕ್ಕಿ. ಹಸೂಡಿ ಕೆಂಪಕ್ಕಿ. ಉಣ್ಣಲು ಸಿಹಿ. ಅವಲಕ್ಕಿಗೆ, ಪಾಯಸಗಳಿಗೆ ಹೆಚ್ಚು ಬಳಕೆ. ಕ್ಷೇತ್ರೋತ್ಸವದ ದಿನ ಹಸೂಡಿಯದೇ ಪಾಯಸ. ಪಾಯಸದ ರುಚಿ ಸವಿದ ಸಿದ್ದಾಪುರದ ತಾಲ್ಲೂಕ ಪಂಚಾಯ್ತಿ ಅಧ್ಯಕ್ಷರಾದ ಎಸ್.ಆರ್.ನಾಯ್ಕರು ತಕ್ಷಣ ಅಲ್ಲಿಯೇ ೧೦ ಕ್ವಿಂಟಾಲ್ ಹಸೂಡಿ ಬೇಕೆಂದರು.

ಆಗಲೇ ಈ ಕೆಂಪಕ್ಕಿಯನ್ನು ಬೆಂಗಳೂರು, ಮೈಸೂರು, ತಿಪಟೂರು, ತುಮಕೂರು ಮೊದಲಾದ ಪಟ್ಟಣಗಳಿಗೆ ಕಳುಹಿಸಿ ಆಗಿತ್ತು. ಅಲ್ಲಿಯೂ ಮಾರಾಟವಾಗಿ ಇನ್ನಷ್ಟು ಅಕ್ಕಿಗೆ ಡಿಮ್ಯಾಂಡ್ ಬಂದಿತ್ತು. ಅಲ್ಲದೇ ಅವಲಕ್ಕಿ, ಅರಳು, ಬಿಳಿಅಕ್ಕಿ, ಅರಸಿನಪುಡಿ, ಬೆಲ್ಲ ಮುಂತಾದ ಅನೇಕ ಪದಾರ್ಥಗಳಿಗೂ ಮಾರುಕಟ್ಟೆ ಇರುವುದು ತಿಳಿಯಿತು. ಇದನ್ನೆಲ್ಲ ತಲುಪಿಸುವ ಕೆಲಸ ಹಾಗೂ ಹಣದ ವ್ಯವಹಾರ ಸುಗಮವಲ್ಲ. ಸಂಪರ್ಕಜಾಲ ದುರ್ಬಲವಾದ ಕಾರಣ ಸಾವಯವ ಪದಾರ್ಥಗಳು ಸರಿಯಾದ ಸಮಯಕ್ಕೆ ಬೇಕೆನ್ನುವವರಿಗೆ ಸೇರುತ್ತಿಲ್ಲ. ಸಾವಯವ ಬೆಳೆದ ರೈತರನ್ನೇ ಯಾರೂ ನೇರವಾಗಿ ಹುಡುಕಿಕೊಂಡು ಬರುವುದಿಲ್ಲ. ಬೇಕಾದ ಎಲ್ಲವೂ ಒಬ್ಬರಲ್ಲೇ ಸಿಗದ ಕಾರಣ ಗ್ರಾಹಕರಿಗೂ ಸಮಸ್ಯೆ. ಸಾವಯವ ಸಂಘಟನೆಗಳ ಸಂಪರ್ಕದಿಂದ ಒಂದಿಷ್ಟು ಮಾರುಕಟ್ಟೆ ಸಾಧ್ಯವಾಗುತ್ತಿದೆ. ಕಿಲಾರದಲ್ಲೂ ಅಕ್ಷಯ ಜೀವನ ಎನ್ನುವ ಸಾವಯವ ಸಹಕಾರ ಸಂಘವಿದೆ. ಇದರ ಮೂಲಕ ಸಾವಯವ ವಸ್ತುಗಳ ಮಾರಾಟ ಜಾಲ ಬೆಳೆಯುತ್ತಿದೆ. ಇದರ ಕಾರ್ಯದರ್ಶಿಯಾದ ವಾಸುದೇವನಾಯ್ಕರ ಪ್ರಕಾರ; ಸಾವಯವ ವಸ್ತುಗಳಿಗೆ ಮುಕ್ತ ಮಾರುಕಟ್ಟೆಯಲ್ಲಿ ಹೆಚ್ಚಿನ ಬೆಲೆಯಿಲ್ಲ. ಸಾವಯವ ಅಂಗಡಿಗಳಲ್ಲಿ ಮಾತ್ರ ಬೆಲೆ ಅಧಿಕ. ನಮ್ಮ ಸುತ್ತಲಿನ ಜನರಿಗೆ ಸಾವಯವ ಪದಾರ್ಥಗಳ ಅಭ್ಯಾಸ ಮಾಡಿಸಬೇಕು. ಸ್ಥಳೀಯ ಮಾರುಕಟ್ಟೆ ಬೆಳೆದರೆ ಮಾರಾಟ ಹೆಚ್ಚುತ್ತದೆ. ಉತ್ತಮ ಬೆಲೆ ಸಿಗುವುದನ್ನು ಗಮನಿಸಿ ಉಳಿದ ರೈತರೂ ಸಾವಯವ ಕೃಷಿಗೆ ಏರುತ್ತಾರೆ.

ಇಂದು ರಾಜ್ಯದಾದ್ಯಂತ ಸಾವಯವ ಅಲೆಯಿದೆ. ಆದರೆ ಸಾವಯವದ ವಸ್ತುಗಳೇ ಬೇಕೆಂಬ ಹಠವಾದಿಗಳೂ ಕಡಿಮೆ. ಇಡೀ ಬದುಕನ್ನು ಸಾವಯವಗೊಳಿಸುವುದು ಸುಲಭವಲ್ಲ.

ಜೀವನ್ಮುಖಿ

ಹಾಗಂತ ಯೋಜನೆ ಮುಗಿದ ಮೇಲೆ ರೈತರನ್ನು ಸಾವಯವದಲ್ಲೇ ಉಳಿಸಿಕೊಳ್ಳುವ ಸಲುವಾಗಿ ಅಕ್ಷಯ ಜೀವನ ಪ್ರಯತ್ನಪಡುತ್ತಿದೆ. ಇದೀಗ ಸಿದ್ದಾಪುರದಲ್ಲಿ ಜೀವನ್ಮುಖಿ ಸಾವಯವ ಪದಾರ್ಥಗಳ ಮಳಿಗೆಯೂ ಪ್ರಾರಂಭವಾಗಿದೆ. ಮಾರಾಟವನ್ನು ನಿರಂತರವಾಗಿಸಲು ಊರಿನ ಪ್ರತಿ ರೈತರಿಗೂ ಇರುವ ಜವಾಬ್ದಾರಿಗಳ ಅರಿವನ್ನುಂಟುಮಾಡಲಾಗಿದೆ. ಸ್ಥಳೀಯ ಮಾರುಕಟ್ಟೆಯೊಂದಿಗೆ ರಾಜ್ಯದಾದ್ಯಂತ ವಿಸ್ತರಿಸಲು ಈ ಮಳಿಗೆ ಸಹಾಯಕವಾಗುವಂತೆ ಯೋಜನೆ ರೂಪಿಸಲಾಗಿದೆ.

ಮನೆಮನೆಯಲ್ಲಿ ಬೆಳೆವ ಪದಾರ್ಥಗಳು, ಮೌಲ್ಯವರ್ಧಿತ ವಸ್ತುಗಳು, ನಾಟಿ ಔಷಧಿಗಳು, ಗವ್ಯಪದಾರ್ಥಗಳು. ಹೀಗೆ ಇಂದಿನ ಗ್ರಾಹಕ ಬಯಸುವ ಎಲ್ಲಾ ರೀತಿಯ ಪದಾರ್ಥಗಳನ್ನೂ ಜೀವನ್ಮುಖಿಯ ಮೂಲಕ ನೀಡಬೇಕೆಂಬ ಬಯಕೆ ಅಕ್ಷಯ ಜೀವನದ ಸದಸ್ಯರದು.  ಕಿಲಾರದ ರೈತರು ಜೀವ ಹಿಂಡುವ ಸಾಲದ ಉರುಳಿನಲ್ಲಿ ಸಿಲುಕಿಲ್ಲ. ಕೇವಲ ಬೇಸಾಯವನ್ನೇ ಮಾಡಿದರೆ ಉಳಿತಾಯ ಸಾಧ್ಯವಾಗುತ್ತಿರಲಿಲ್ಲ. ಸ್ಥಳೀಯ ತಳಿಗಳು ಮೈಸೂರು ಸಣ್ಣ, ಸೊನಾಮಸೂರಿ ತಳಿಗಳೆದುರು ನಿರ್ನಾಮವಾಗುತ್ತಿದೆ. ಕೃಷಿಯ ಖರ್ಚುವೆಚ್ಚಗಳೂ ಹೆಚ್ಚುತ್ತಿವೆ. ಸ್ಥಳೀಯ ತಳಿಯ ಭತ್ತಗಳಿಗೆ ಉತ್ತಮ ಬೆಲೆಯೂ ಇಲ್ಲ.

ಆದರೆ ಸಾವಯವ ಕೃಷಿಯಿಂದ ಬದಲಾದ ಬದುಕು ಹಾಗೂ ಲೆಕ್ಕಾಚಾರವನ್ನು ವೆಂಕಟರಮಣ ನಾಗಾನಾಯ್ಕ ತೆರೆದಿಡುತ್ತಾರೆ. ಆಳು ಖರ್ಚು ಹೆಚ್ಚಾಗಿದೆ. ರಾಸಾಯನಿಕ ವಿಷಗಳಿಗಾಗುತ್ತಿದ್ದ ಖರ್ಚು ಇಲ್ಲ. ಉತ್ತಮ ಬೆಲೆಗೆ ಸಾವಯವ ಮಳಿಗೆಗಳು ಅಕ್ಕಿಯನ್ನು ಕೊಂಡ ಕಾರಣ ಆದಾಯ ಹೆಚ್ಚಾಗಿದೆ. ಸಾವಯವ ವಿಧಾನದಲ್ಲಿ ಒಂದು ಎಕರೆಗೆ ೩,೭೫೦ ರೂಪಾಯಿಗಳಷ್ಟು ಖರ್ಚಾದರೆ ೧೦,೦೦೦ ರೂಪಾಯಿಗಳ ಉತ್ಪನ್ನ ಸಿಕ್ಕಿದೆ. ಇದೇ ಮೊದಲಬಾರಿ ೬,೦೦೦ ರೂಪಾಯಿಗಳ ಲಾಭ ಕಂಡಿದ್ದು. ಉಪಬೆಳೆಗಳು, ಉಪಕಸುಬುಗಳಿಂದಲೂ ಆದಾಯ ಸಿಗುತ್ತಿದೆ. ಹೀಗಿರುವಾಗ ಸಾವಯವ ಬಿಡಲು ಹೇಗೆ ಸಾಧ್ಯ.

ನಾಲ್ಕು ಜನರಿರುವ ಕುಟುಂಬದ ಖರ್ಚು ೩೦ ಸಾವಿರ ರೂಪಾಯಿಗಳು. ಬೆಳೆವ ಭತ್ತವೆಲ್ಲಾ ಉಣ್ಣಲು ಬೇಕಾಗುತ್ತಿತ್ತು. ಉಳಿದಂತೆ ರೋಗರುಜಿನ, ಬಟ್ಟೆಬರೆ, ಹಬ್ಬ ಸಮಾರಂಭಗಳಿಗೆಲ್ಲಾ ಸಾಲ ಮಾಡಬೇಕಾಗುತ್ತಿತ್ತು. ಈಗ ನಮ್ಮ ಕೃಷಿ ಖರ್ಚೊಂದೇ ಅಲ್ಲ, ಬೇರೆ ಖರ್ಚು?ಗಳೂ ಕಡಿಮೆಯಾಗಿವೆ. ಅನೇಕರು ಈಗ ಸ್ವಸಹಾಯ ಸಂಘಗಳಲ್ಲಿ ಉಳಿತಾಯವನ್ನೂ ಮಾಡಿದ್ದಾರೆ ಎನ್ನುವ ವರದಿಯನ್ನು ಮಾದೇವಿ ರತ್ನಾನಾಯ್ಕ ನೀಡುತ್ತಾರೆ.

ಅಕ್ಷಯ ಜೀವನದ ಸದಸ್ಯರು ಅಕ್ಕಪಕ್ಕದ ಗ್ರಾಮಗಳಿಗೆ ಸಾವಯವ ಬದುಕಿನ ಚಿತ್ರಣ ನೀಡಲು, ಅವರನ್ನು ಪ್ರೇರೇಪಿಸಲು ಆಹ್ವಾನಿತರಾಗುತ್ತಿದ್ದಾರೆ.

ಸಾವಯವದ ಹಠ – ಮಾದೇವಿ ರತ್ನಾನಾಯ್ಕ್

ಮಾದೇವಿ ರತ್ನಾನಾಯ್ಕರ ವಯಸ್ಸು ೬೦ರ ಸನಿಹ. ವಾಸ ಮೆಣಸೆ ಎನ್ನುವ ಹಳ್ಳಿಯಲ್ಲಿ. ಗದ್ದೆ ಇರುವುದು ಕಿಲಾರದಲ್ಲಿ. ಮಗ ಅಶೋಕ ಸಿದ್ದಾಪುರದಲ್ಲಿ ಲಾಯರ್. ಗದ್ದೆಯ ಕೆಲಸವೆಲ್ಲಾ ಮಾದೇವಿನಾಯ್ಕರ ಪಾಲು. ಸಾವಯವದಲ್ಲಿ ಶ್ರದ್ಧೆ. ಮಗ-ಸೊಸೆಯರದು ಸಹಕಾರ.

ಮೊದಲ ವರ್ಷ ಫಸಲು ಕಡಿಮೆ. ಶ್ರೀರಾಮಚಂದ್ರಪುರ ಮಠದ ಸಹಕಾರ ಸಿಕ್ಕಿತು. ಸ್ತ್ರೀಶಕ್ತಿ ಸಂಘ ಕಟ್ಟಿದರು. ನೆಟ್ಟಿ, ಕೊಯ್ಲು, ದರಕು ತರುವುದು, ಏನೆಲ್ಲಾ ಕೆಲಸಗಳನ್ನೂ ಮೈಯಾಳಿನಲ್ಲೇ ಮಾಡಿ ಪೂರೈಸಿದರು. ಹುಡುಗಿಯರು ನಾಚುವಷ್ಟು ಹೆಚ್ಚು ಕೆಲಸ, ಹೆಚ್ಚು ಚುರುಕು.

ಗದ್ದೆಗೆ ಹಸುರೆಲೆ ಗೊಬ್ಬರ, ಬಾಳೆಮರಗಳಿಗೆ ಮಣ್ಣು ಮುಂತಾದವುಗಳನ್ನು ಒಬ್ಬರೇ ಮಾಡುವಷ್ಟು ಚಾಲಾಕು. ಎರೆಗೊಬ್ಬರ ತಿಂಗಳಿಗೆ ಒಂದೂವರೆ ಕ್ವಿಂಟಾಲ್ ತೆಗೆಯುತ್ತಾರೆ. ಬಸಳೆ, ಹರಿವೆ, ತೊಂಡೆ, ಬದನೆ, ಸೌತೆ ಏನೆಲ್ಲಾ ತರಕಾರಿಗಳನ್ನು ಹಿತ್ತಲಲ್ಲಿ ಬೆಳೆಯುತ್ತಾರೆ. ಹೀಗಾಗಿ ಪೇಟೆಯ ವಿಷಕ್ಕೆ ಜಾಗವಿಲ್ಲ.

ಮೆಣಸೆಯಲ್ಲೂ ಇವರದು ಏಕೈಕ ಸಾವಯವ ಗದ್ದೆ. ಸುತ್ತಲಿನವರೆಲ್ಲಾ ರಾಸಾಯನಿಕ ವಿಷ ಬಳಸುತ್ತಿದ್ದರೂ ಇವರದು ಒಂದೇ ಸಾವಯವ ಹಠ. (ಅವರೆಲ್ಲರಿಗಿಂತ ಅಧಿಕ ಇಳುವರಿ). ಕಿಲಾರದ ಗದ್ದೆಯನ್ನು ಕಳೆದ ವರ್ಷ ಪಾಲಿಗೆ ಕೊಟ್ಟಿದ್ದರು. ರಾಸಾಯನಿಕ ವಿಷ ಹಾಕಲೇಬಾರದು ಎನ್ನುವ ಶರತ್ತು ವಿಧಿಸಿ. ಪಾಲು ಕಡಿಮೆ ಸಿಕ್ಕರೂ ತೊಂದರೆಯಿಲ್ಲ, ನೆಲ ವಿಷವಾಗಬಾರದು ಎನ್ನುವ ನಿಲುವು.

ಇಸವಿ ೨೦೦೮ರಲ್ಲಿ ಸ್ವತಃ ಗೌರಿಭತ್ತ ಬೆಳೆದರು. ಬೆಳೆ ಚೆನ್ನಾಗಿಯೇ ಇತ್ತು. ಫಸಲು ಬರುವ ಕಾಲಕ್ಕೆ ಕಾಟಿಯ ಪಾಲಾಯಿತು. ಬಿಳಿ ಇಂಟಾನ್ ಸಹ ಬೆಳೆದಿದ್ದಾರೆ. ಒಳ್ಳೆ ಇಳುವರಿ. ಹುಲ್ಲೂ ಸಹ ಅಧಿಕ.

ಪ್ರತಿ ಮೀಟಿಂಗ್‌ನಲ್ಲೂ ತಪ್ಪದೇ ಭಾಗವಹಿಸುವಿಕೆ. ಹೊಸ ಪ್ರಯೋಗಗಳನ್ನು ಮಾಡುವ ಸಾಹಸ. ಸದಾ ಕಾಡುತ್ತಿದ್ದ ತಲೆನೋವನ್ನು ಮುರುಗನ ಸಿರಪ್ಪು ಕುಡಿದೇ ವಾಸಿಮಾಡಿಕೊಂಡಿದ್ದು-ಮನೆಮದ್ದು ಶಿಬಿರದ ಫಲಶೃತಿ.

ರಾಸಾಯನಿಕ ಕಲಿಸಿದ ಪಾಠ – ವಿದ್ಯಾನಂದಭಟ್

ಎರಡು ಎಕರೆ ತರಿ ಇರುವ ವಿದ್ಯಾನಂದಭಟ್‌ರದ್ದು ಸ್ವಯಂಕೆಲಸವೇ ಹೆಚ್ಚು. ವಿಪರೀತ ರಾಸಾಯನಿಕ ಬಳಸುವ, ಅತಿಹೆಚ್ಚು ಬೆಳೆ ತೆಗೆಯಬೇಕೆಂಬ ಹುಚ್ಚು. ಕೆಲಸದವರ ಕೊರತೆಯಿಂದ ಗದ್ದೆಗೆ ರಾಸಾಯನಿಕ ಕೀಟನಾಶಕವನ್ನು ಒಮ್ಮೆ ಸ್ವತಃ ಸಿಂಪಡಿಸಿದರಂತೆ. ಪ್ರಾರಂಭದಲ್ಲಿ ಏನೋ ಕಿರಿಕಿರಿ. ಆಮೇಲೆ ಮೈಮುಖದ ಮೇಲೆಲ್ಲಾ ದದ್ದುಗಳಾದವು. ಚರ್ಮರೋಗವು ಎಷ್ಟು ದಿನಗಳಾದರೂ ವಾಸಿಯಾಗಲಿಲ್ಲ. ಹಾಗಂತ ರಾಸಾಯನಿಕ ವಿಷಗಳ ಬದಲಿಗೆ ಏನು ಮಾಡಿದರೆ ಭತ್ತದ ಸಸಿಗಳು ಆರೋಗ್ಯಯುತವಾಗಿರುತ್ತವೆ ಎಂಬುದೂ ಗೊತ್ತಿರಲಿಲ್ಲ. ಗೋಮೂತ್ರ ಜನಪ್ರಿಯವಾದಾಗ ಅದನ್ನೇ ಸಿಂಪಡಿಸಲು ತೊಡಗಿದರು.

ಯೋಜನೆ ಬಂದಾಗ ಮೊದಲ ಫಸಲು ಅರ್ಧಕ್ಕಿಂತಲೂ ಕಡಿಮೆ ಬಂದಿತ್ತು. ಮರುವರ್ಷ ಹಿಂಡಿ ಗೊಬ್ಬರ, ಎರೆಗೊಬ್ಬರ, ಗೋಮೂತ್ರ ಸಿಂಪಡನೆ, ಜೀವಾಮೃತ ಹೀಗೆ ಕ್ರಮಬದ್ಧವಾದ ಕೃಷಿಯಿಂದ ಎಕರೆಗೆ ೨೦ ಚೀಲ (ಪದ್ಮರೇಖಾ) ಸಿಕ್ಕಿತು. ಕಡಿಮೆ ಬಿದ್ದಾಗ ತುಂಬಿಕೊಟ್ಟಿದ್ದ ಮಠದ ಋಣವನ್ನು ಮೊದಲು ತೀರಿಸಿದರು. ಮನೆ ಪಕ್ಕವೇ ಗದ್ದೆಯಿರುವ ಕಾರಣ ಗೋಮೂತ್ರ, ಕೊಟ್ಟಿಗೆ ತೊಳೆದ ನೀರು, ದ್ರವ ಗೊಬ್ಬರ ಏನೆಲ್ಲಾ ಹಾಕಲು ಸುಲಭವಾಗಿದೆ. ಜಾನುವಾರುಗಳ ಕಾಟ ತಪ್ಪಿದರೆ ಬೆಳೆ ನಷ್ಟವಾಗದು.

ಹಸೂಡಿಯೇ ಉಳಿದೆಲ್ಲಾ ತಳಿಗಳಿಗಿಂತ ಹೆಚ್ಚು ಇಳುವರಿ ನೀಡುತ್ತದೆ ಎನ್ನುವ ಅನುಭವ ಇವರದು. ಈ ಸಾರಿಯೂ ಕೆಲಸದವರ ಸಮಸ್ಯೆಯಿಂದ ಅಗೆ ಹಾಕಿದ್ದನ್ನು ನೆಡುವುದು ತಡವಾಗಿ ಇಳುವರಿ ಕಮ್ಮಿಯಾಗಿದೆ ಎನ್ನುತ್ತಾರೆ. ಉಳಿದಂತೆ ಮಗೆಸೌತೆ, ಎಳ್ಳು, ಉದ್ದು, ಹೆಸರು ಮುಂತಾದವುಗಳನ್ನು ಹೊಮ್ಮಂಡದಲ್ಲಿ ಬೆಳೆಯುತ್ತಾರೆ. ಮನೆಯ ಹಿತ್ತಲಲ್ಲಿ ತರಕಾರಿಗಳು, ಮಾವು, ಚಿಕ್ಕು ಇವುಗಳೂ ಇವೆ.

 ಬದಲಾದ ಬದುಕು – ವೆಂಕಟರಮಣ ನಾಗಾ ನಾಯ್ಕ

ಕಿಲಾರದ ವೆಂಕಟರಮಣ ನಾಗಾನಾಯ್ಕ ಸುಮಾರು ೪೦ ವರ್ಷಗಳ ಹಿಂದೆ ಎಸ್.ಎಸ್.ಎಲ್.ಸಿ. ಓದಿದವರು. ಸಾಕಷ್ಟು ವರ್ಷಗಳಿಂದ ಪತ್ರಿಕಾ ಏಜೆಂಟರಾಗಿ ಕೆಲಸ ಮಾಡುತ್ತಿದ್ದಾರೆ. ಕೃಷಿ, ರಾಜಕೀಯ ವಿಷಯಗಳಲ್ಲಿ ಆಸಕ್ತರು. ಹೀಗಾಗಿ ಸಾರಾಯಿ ಅಂಗಡಿಯನ್ನೂ ತೆರೆದರು. ೭೦ರ ದಶಕದ ಹಸುರು ಕ್ರಾಂತಿಯ ಪರಿಣಾಮ ರಾಸಾಯನಿಕ ಗೊಬ್ಬರ ಬಳಸುವುದರಿಂದ ಇಳುವರಿ ಹೆಚ್ಚಾಗುವುದರ ಬಗ್ಗೆ ಪತ್ರಿಕೆಗಳಲ್ಲಿ ಓದುತ್ತಿದ್ದರು. ಅದನ್ನೇ ಅಳವಡಿಸಲು ಯೋಚಿಸಿದರು.

ಒಂದು ಎಕರೆ ೩೦ ಗುಂಟೆ ಜಾಗದಲ್ಲಿ ಬೆಳೆಯುವ ಭತ್ತಕ್ಕೆ ಸುಮಾರು ಒಂದು ಕ್ವಿಂಟಾಲ್‌ನಷ್ಟು ರಾಸಾಯನಿಕ ಗೊಬ್ಬರದ ಬಳಕೆ. ಆಮೇಲೆ ೧೦ ಗುಂಟೆ ಜಾಗದಲ್ಲಿ ಅಡಿಕೆ ಕೃಷಿ ಮಾಡಿದರು. ಉಳಿದದ್ದು ಭತ್ತದ ಕೃಷಿಗೆ. ಇಳುವರಿ ಸುಮಾರು ೧೯ ಚೀಲ. ಕೀಟಗಳ ಹಾವಳಿ ಕಡಿಮೆ ಇದ್ದುದರಿಂದ ಅವಶ್ಯವಿದ್ದಾಗ ಮಾತ್ರ ಕೀಟನಾಶಕಗಳ ಬಳಕೆ ಮಾಡುತ್ತಿದ್ದರು.

ಸಾವಯವ ಕೃಷಿಯನ್ನೂ ಸಹ ಪತ್ರಿಕೆಗಳಲ್ಲಿ ಓದುತ್ತಿದ್ದರು. ಆದರೆ ಹೇಗೆ ಮಾಡಬೇಕೆಂಬುದರ ಅರಿವಿರಲಿಲ್ಲ. ಯೋಜನೆಯ ಮೂಲಕ ಸಾವಯವದ ದಾರಿಯನ್ನು ತಿಳಿದುಕೊಂಡಾಗ ಮೊದಲು ಮಾಡಿದ ಕೆಲಸ ಸಾರಾಯಿ ಅಂಗಡಿಯನ್ನು ಮುಚ್ಚಿದ್ದು. ಅದೇ ಜಾಗವನ್ನು ಸಾವಯವ ಕೃಷಿಗೆ ಸಂಬಂಧಿಸಿದ ಪುಸ್ತಕಗಳು, ಗ್ರಂಥಾಲಯ ಹಾಗೂ ಸಮುದಾಯ ಬೀಜನಿಧಿ ಸಂಗ್ರಹಾಲಯ ಮಾಡಲು ನೀಡಿದರು.

ಸಹಾಯಧನದ ಮೂಲಕ ದನ ಕೊಂಡರು. ಗೋಮೂತ್ರ ಸಂಗ್ರಹ, ಕಾಂಪೋಸ್ಟ್ ಗೊಬ್ಬರ ತಯಾರಿಕೆ, ಎರೆತೊಟ್ಟಿ ನಿರ್ಮಾಣ ಹಾಗೂ ಜೀವಾಮೃತ ಎಲ್ಲಾ ಪ್ರಾರಂಭಿಸಿದರು.

ಗದ್ದೆಯ ಮೇಲಿನ ಜಾಗದಲ್ಲಿ ಇಂಗುತುಂಡಿ ನಿರ್ಮಾಣ ಮಾಡಿದರು. ಇದರಿಂದ ಬೇಸಿಗೆಯಲ್ಲಿ ಬೇಕಾದಷ್ಟು ನೀರು ಉಳಿಯತೊಡಗಿತು. ಬೇಸಿಗೆಯಲ್ಲಿ ಹುರುಳಿ, ಅಲಸಂದೆ, ಉದ್ದು, ಎಳ್ಳು ಮುಂತಾದವುಗಳನ್ನೆಲ್ಲಾ ಬೆಳೆಯತೊಡಗಿದರು. ಹೀಗೆ ಸಾವಯವ ಗ್ರಾಮ ಯೋಜನೆಯ ಪ್ರತಿ ವಿಷಯವನ್ನೂ ಸೂಕ್ತವಾಗಿ ಅರ್ಥ ಮಾಡಿಕೊಂಡು ಅಳವಡಿಸತೊಡಗಿದರು. ಕ್ರಮೇಣ ವಿಷವಾಗಿದ್ದ ನೆಲ ಫಲವತ್ತಾಗತೊಡಗಿತು.

ಇಸವಿ ೨೦೦೫ರಲ್ಲಿ ಪ್ರತಿ ಸಾರಿಗಿಂತಲೂ ನಾಲ್ಕು ಚೀಲದಷ್ಟು ಕಡಿಮೆ ಇಳುವರಿ ಬಂದಿತು. ಆದರೆ ಸಾವಯವದಲ್ಲಿ ಮನೆಯಲ್ಲೇ ಗೊಬ್ಬರ ತಯಾರಿಕೆ ಪ್ರಾರಂಭಿಸಿ ಬಳಸಿದರೆ ಉತ್ಪನ್ನ ಹೆಚ್ಚಿಸಬಹುದು ಎಂಬುದು ತಿಳಿಯಿತು. ಅದರಂತೆ ಮಾಡಿದಾಗ ೨೦೦೭ರಲ್ಲಿ ೧೯ ಚೀಲ ಇಳುವರಿ ಬಂತು. ಸುಮಾರು ನಾಲ್ಕು ಕ್ವಿಂಟಾಲ್ ಭತ್ತವನ್ನು ಉತ್ತಮ ಬೆಲೆಗೆ ಮಾರಾಟ ಮಾಡಿದರು. ರಾಸಾಯನಿಕ ಗೊಬ್ಬರ – ಕೀಟನಾಶಕಗಳ ಖರ್ಚಿನ ಉಳಿತಾಯ ಹಾಗೂ ಸಾವಯವ ಭತ್ತಕ್ಕೆ ಸಿಕ್ಕ ಹೆಚ್ಚಿನ ಬೆಲೆ ಇವೆಲ್ಲಾ ಪರಿಗಣಿಸಿದಾಗ ಸಾವಯವದಲ್ಲಿ ಭತ್ತ ಬೆಳೆಯುವುದರಿಂದ ಲಾಭ ಗಳಿಸಲು ಸಾಧ್ಯವೆನ್ನುವ ನಿಲುವು ವೆಂಕಟರಮಣ ನಾಗಾನಾಯ್ಕರದು. ಇವರೀಗ ಅಕ್ಕಪಕ್ಕದ ಗ್ರಾಮಗಳಿಗೆ ಸಾವಯವ ಕೃಷಿ, ಗೊಬ್ಬರ ತಯಾರಿಕೆ ಮುಂತಾದ ವಿವರಗಳನ್ನು ನೀಡಲು ಆಹ್ವಾನಿತರಾಗಿ ಹೋಗುತ್ತಾರೆ.

ಸಾವಯವವೇ ಮೇಲು – ಮಂಜುನಾಥ ರಾಮಾನಾಯ್ಕ

ಕಿಲಾರದ ಮಂಜುನಾಥ ರಾಮಾನಾಯ್ಕರಿಗೆ ಒಂದು ಎಕರೆ ೨೪ ಗುಂಟೆ ಗದ್ದೆ ಮಾತ್ರವಿದೆ. ಅದರಲ್ಲೀಗ ೧೦ ಗುಂಟೆ ಅಡಿಕೆಗೆ ಬದಲಾಗಿದೆ. ಉಳಿದ ಜಮೀನಿನಲ್ಲಿ ೨೦೦೪ರವರೆಗೂ ರಾಸಾಯನಿಕ ಬಳಸಿ ೨೦ ಚೀಲ ಭತ್ತ ಪಡೆಯುತ್ತಿದ್ದರು. ಸಾವಯವ ಕೃಷಿಯ ಬಗ್ಗೆ ತಿಳಿದಾಗ ರಾಸಾಯನಿಕ ಗೊಬ್ಬರ, ಕೀಟನಾಶಕಗಳನ್ನು ಬಿಡಲು ತೀರ್ಮಾನ. ಮನೆಯಲ್ಲಿ ಕಾಂಪೋಸ್ಟ್ ತಯಾರಿಕೆ ಪ್ರಾರಂಭ ಮಾಡಿದರು. ಎರೆತೊಟ್ಟಿಗೆ ಸಹಾಯಧನ ಪಡೆದು ಎರೆಗೊಬ್ಬರ ತಯಾರಿಕೆ. ಗದ್ದೆಗೆ ವಿವಿಧ ರೀತಿಯ ಹಸುರೆಲೆಗಳನ್ನು ಕಾಡಿನಿಂದ ತಂದು ಮಣ್ಣನ್ನು ಫಲವತ್ತಾಗಿಸಿದರು. ಗೋಮೂತ್ರ ಸಂಗ್ರಹಿಸಿ ಸಿಂಪಡಣೆ. ಹೀಗೆ ಕೃಷಿ ಪ್ರಯೋಗ ಪರಿವಾರದವರು ಸೂಚಿಸುವ ಕೆಲಸಗಳನ್ನೆಲ್ಲಾ ಚಾಚೂ ತಪ್ಪದೇ ಮಾಡಿದರು.

ಪ್ರಾರಂಭದಲ್ಲಿ ಇಳುವರಿ ಕಡಿಮೆ ಬಂತು. ಆದರೆ ರಾಸಾಯನಿಕಗಳಿಗೆ ಆಗುವ ಖರ್ಚಿನ ಉಳಿತಾಯಕ್ಕೆ ಸಮವಾಗಿತ್ತು. ಎರಡನೇ ವರ್ಷದಿಂದ ಎರೆಗೊಬ್ಬರವನ್ನು ತಮ್ಮ ಜಮೀನಿಗೆ ಬಳಸಿ ಉಳಿದದ್ದನ್ನು ಮಾರಿದರು. ಹಾಗೇ ಕೆಲವರಿಗೆ ಎರೆಹುಳುಗಳನ್ನೂ ಮಾರಿದರು.

ಹಿತ್ತಲಲ್ಲಿ ತರಕಾರಿಗಳನ್ನು ಬೆಳೆಯುವುದು, ಹಣ್ಣಿನ ಗಿಡ ಬೆಳೆಸುವುದು, ಬೇಸಿಗೆಯಲ್ಲಿ ದ್ವಿದಳ ಧಾನ್ಯಗಳು ಹೀಗೆ ಉಪಲಬೆಳೆಗಳಿಂದ ಆದಾಯ ಸಿಗತೊಡಗಿತು. ಇಸವಿ ೨೦೦೭ರಲ್ಲಿ ಸಂಪೂರ್ಣ ಸಾವಯವಕ್ಕೆ ಬದಲಾಗಿದ್ದ ಜಮೀನಿನಿಂದ ೨೧ ಚೀಲ ಭತ್ತ ಸಿಕ್ಕಿತು. ಅದರಲ್ಲಿ ಸುಮಾರು ಎರಡು ಕ್ವಿಂಟಾಲ್ ಮಾರಾಟ ಮಾಡಿದರು. ಸಾವಯವದಲ್ಲಿ ಬೆಳೆದ ಅಕ್ಕಿಯ ರುಚಿ, ಹುಲ್ಲಿನ ಬಣ್ಣ, ಬಾಳಿಕೆ ಇವೆಲ್ಲಾ ರಾಸಾಯನಿಕ ಗೊಬ್ಬರ ಬಳಸಿ ಬೆಳೆದದ್ದಕ್ಕಿಂತಲೂ ಮೇಲು ಎನ್ನುವ ವ್ಯತ್ಯಾಸವನ್ನು ಹೇಳುತ್ತಾರೆ.

ದಶಮೂಲ ಕಷಾಯ

ಇದು ಶಿರಸಿ ಆಯುರ್ವೇದ ತಜ್ಞರಾದ ಡಾ||ಸಾಂಬಮೂರ್ತಿ ಹಾಗೂ ಡಾ||ಸಾವಿತ್ರಿ ಸಾಂಬಮೂರ್ತಿಯವರ ಸಲಹೆ, ವೃಕ್ಷಾಯುರ್ವೇದದ ರೀತಿಯಂತೆ ಸಿದ್ಧಪಡಿಸಲಾಗಿದೆ.

ನೆಲ್ಲಿ, ತಾರೆ, ಅಣಲೆಕಾಯಿ ಅಥವಾ ಚಕ್ಕೆಗಳು ಸಮಪ್ರಮಾಣ (೫೦) ಕೊಡಸ, ವಾಯುವಿಳಂಗ, ಆಡುಸೋಗೆ, ವಿಷಮಧಾರಿ, ಮುಕ್ಕಡಕ, ಕಾಸರಕ ಅಥವಾ ಬಲಗಣೆ, ಜಗಟೆಗೆಡ್ಡೆ ಅಥವಾ ಇಸಮುಂಗ್ರಿ ಇವು ಪ್ರತಿಯೊಂದೂ ೨೦ ಕೊನಕೆಗಳು. ಜಗಟೆಗೆಡ್ಡೆಯಾದರೆ ಒಂದು ಗೆಡ್ಡೆ. ೧೦೦ ಲೀಟರ್ ಡ್ರಂನಲ್ಲಿ ಇದನ್ನೆಲ್ಲಾ ಸೇರಿಸಿ ಏಳು ತಾಸು ಇಡಬೇಕು. ಆಮೇಲೆ ೧೦ ತಾಸು ಕುದಿಸಿ ಕಷಾಯ ತಯಾರಿಸಬೇಕು. ಒಂದಕ್ಕೆ ಎರಡು ಪಟ್ಟು ನೀರು ಬೆರೆಸಿ ಬೆಳೆಗಳಿಗೆ, ತರಕಾರಿ, ಹೂವಿನ ಗಿಡಗಳಿಗೆ ಸಇಂಪಡಣೆ ಮಾಡಬಹುದು. ಕಿಲಾರ ಗ್ರಾಮದಲ್ಲಿ ತೆಂಗಿನಸುಳಿ ಕೊಳೆ ರೋಗ ಅತ್ಯಧಿಕ. ಕೊಳೆತ ಸುಳಿಯನ್ನು ಕತ್ತರಿಸಿ ಅದಕ್ಕೆ ದಶಮೂಲ ಕಷಾಯವನ್ನು ಚೆನ್ನಾಗಿ ಕುಡಿಸಬೇಕು. ಸುಮಾರು ಎರಡು ತಿಂಗಳ ನಂತರ ಹೊಸ ಆರೋಗ್ಯಭರಿತ ಸುಳಿ ಕಾಣುತ್ತದೆ. ಯಶಸ್ವೀ ಪ್ರಯೋಗ. ಅಲ್ಲಿನ ಅನೇಕ ರೈತರೆಲ್ಲಾ ಮಾಡಿದ್ದಾರೆ. ವೆನಿಲ್ಲಾ ಕೊಳೆಗೂ ಇದು ಪರಿಣಾಮಕಾರಿಯಾಗಿದೆ; ಸತೀಶ್ ಹೆಗಡೆ ಅನುಭವ

ಯೋಜನೆಯ ಅನುಷ್ಠಾನದಲ್ಲಾದ ತೊಡಕುಗಳು

ಕಿಲಾರದ ರೈತರಲ್ಲಿ ಹೊಸದನ್ನು ಒಪ್ಪಿಕೊಳ್ಳುವಿಕೆ ಬಹಳ ನಿಧಾನ. ಸಿಕ್ಕ ಮಾಹಿತಿಗಳನ್ನು ಅರ್ಥೈಸಿಕೊಳ್ಳುವಿಕೆ ಕಷ್ಟವಾಗುತ್ತಿತ್ತು. ಹಾಗೆಂದು ಪದೇ ಪದೇ ಹೇಳಿದರೆ ಅನುಮಾನಗಳಿಗೆ ಕಾರಣವಾಗುತ್ತಿತ್ತು.

ಯೋಜನೆ ಯಶಸ್ವಿಯಾಗಲು ಶಿಕ್ಷಣ, ಆರ್ಥಿಕ ಪರಿಸ್ಥಿತಿ, ಹಿಡುವಳಿಗಳು ಮುಖ್ಯವಾಗುತ್ತವೆ. ಯೋಜನೆ ಏನೆಂಬುದೇ ಅರ್ಥವಾಗದಷ್ಟು ಅಮಾಯಕರಾಗಿದ್ದರೆ ಉತ್ತಮ ಹಿಡುವಳಿ ಇದ್ದರೂ ನಿಷ್ಪ್ರಯೋಜಕ. ಈ ರೀತಿ ಯೋಜನೆಯ ಕುರಿತಾದ ಶಿಕ್ಷಣ ನೀಡಲು ಹೆಚ್ಚು ಸಮಯ ಹಿಡಿಯಿತು.

ಮಾಡುವ ಕೆಲಸವನ್ನು ಇಷ್ಟಪಟ್ಟು ಮಾಡಬೇಕಾಧ್ದು ಬಹಳ ಅವಶ್ಯಕ. ಕಿಲಾರದಲ್ಲಿ ಅಜೋಲಾ ಬೆಳೆ ನಿಲ್ಲಲು, ಕೆಲವು ಎರೆಗೊಬ್ಬರ ತಯಾರಿಕಾ ಘಟಕ ವಿಫಲವಾಗಲು ಮುಖ್ಯ ಕಾರಣ ಅನಾಸಕ್ತಿ. ಎಲ್ಲಾ ಮಾಹಿತಿ ತಿಳಿದು ಕೆಲವು ಕಾಲ ಉತ್ತಮ ಕಾರ್ಯನಿರ್ವಹಿಸಿದವರೂ ನಿಲ್ಲಿಸಿದಾಗ ಅವರನ್ನು ಪ್ರೇರೇಪಿಸುವ ಕೆಲಸ ಸುಲಭದ್ದಲ್ಲ.

ಸಾವಯವವನ್ನು ಒಪ್ಪಿಕೊಳ್ಳದ ರೈತರೂ ಇದ್ದರು. ಅವರ ಹೊಲದಿಂದ ರಾಸಾಯನಿಕಭರಿತ ನೀರು, ಕೀಟನಾಶಕಭರಿತ ಗಾಳಿ ನಮ್ಮ ಗದ್ದೆಗೆ ಬಂದರೆ ಏನು ಮಾಡುವುದು ಎಂಬ ಗೊಂದಲ.

ಊರೊಟ್ಟಿನ ಗದ್ದೆಯ ಸುತ್ತಲಿನ ಜೀವಂತ ಬೇಲಿಯ ನಿರ್ಮಾಣದಲ್ಲಿ ಕೊನೆಯವರೆಗೂ ತೀರ್ಮಾನವಾಗಲೇ ಇಲ್ಲ. ಹೀಗಾಗಿ ಹೊಮ್ಮಂಡಕ್ಕೆ ಜಾನುವಾರುಗಳ ಕಾಟ ತಪ್ಪಲಿಲ್ಲ. ಪ್ರತಿವರ್ಷ ಬೇಲಿ ಗೂಟ ಕಡಿಯುವುದೂ ನಿಲ್ಲಲಿಲ್ಲ.

ತೀವ್ರವಾದ ವ್ಯಸನಗಳು ಯಾವುದೇ ಯೋಜನೆಗೆ ತೊಡರಾಗುತ್ತವೆ. ಅದರಲ್ಲೂ ಸಾರಾಯಿ, ಓಸಿ, ಶೋಕಿ, ಆಡಂಬರ ಜೀವನವು ಉತ್ಪನ್ನ ಇದ್ದಷ್ಟೇ ಖರ್ಚು ಹೊಂದಿಸಲು ಬಿಡುವುದಿಲ್ಲ. ಆಗ ಸಾವಯವ, ಸರಳ ಜೀವನ ಎಂಬ ಘೋಷಣೆ ಸಂಕುಚಿತವಾಗುತ್ತದೆ.

ವೈಯಕ್ತಿಕ ವೈಮನಸ್ಯಗಳು, ಹಳ್ಳಿ ರಾಜಕೀಯಗಳು ಹಾಗೂ ಸ್ವಹಿತಾಸಕ್ತಿಯೇ ಮುಖ್ಯವಾದಾಗ ಯೋಜನೆ ಕುಂಠಿತಗೊಂಡಿದೆ. ಅದನ್ನು ತಿಳಿಗೊಳಿಸಿ ಮುಂದುವರೆಸಲು ಸಾಕಷ್ಟು ಶ್ರಮ, ಸಮಯ ವ್ಯರ್ಥವಾಗಿದೆ.

ಪ್ರಾಕೃತಿಕ ಸಮಸ್ಯೆಯಾದ ಅತಿಮಳೆ, ಕಾಡುನಾಶ, ಕಾಡುಪ್ರಾಣಿಗಳ ಕಾಟ ಇವುಗಳಿಂದ ಬೆಳೆ ನಾಶವಾದಾಗ ರೈತರಲ್ಲಿ ಹಿಂಜರಿತವಾಗಿತ್ತು.

ಸರ್ಕಾರಿ ಯೋಜನೆಗಳ ಬಗ್ಗೆ ಜನರಿಗಿರುವ ಉದಾಸೀನತೆ, ನಿರಂತರವಾಗಿ ನಡೆಯದು ಎನ್ನುವ ಅಪನಂಬಿಕೆ, ಬದುಕಿನ ಕ್ರಮ ಬದಲಿಸಿಕೊಳ್ಳಬೇಕೆಂಬ ನಿಟ್ಟಿನಲ್ಲಿ ನಿರಾಸಕ್ತಿ ಇವೆಲ್ಲಾ ಯೋಜನೆಯ ಹಿನ್ನಡೆಗೆ ಕಾರಣಗಳು.

ಮುಂದಿನ ಆಶಯ

ಕಿಲಾರ ಗ್ರಾಮದ ಸತೀಶ್ ಹೆಗಡೆಯವರು ಸದನದಲ್ಲಿ ನಡೆದ ರೈತ ಸಮಾವೇಶದ ಚರ್ಚೆಗೆ ವಿಶೇಷ ಆಹ್ವಾನಿತರಾಗಿ(ಪ್ರತಿನಿಧಿಸಿ)ದ್ದರು. ಅಲ್ಲಿ ಅವರು ಮಂಡಿಸಿದ ವಿಷಯಗಳ ಮುಖ್ಯಾಂಶಗಳಿವು.

  • ಪಶು ಸಂಗೋಪನೆ, ಅರಣ್ಯೀಕರಣ, ಮಳೆನೀರು ಕೊಯ್ಲಿಗೆ ಒತ್ತು ನೀಡುವಿಕೆ
  • ಮಲೆನಾಡಿಗೆ ಸೂಕ್ತವಾದ, ಬಯಲುಸೀಮೆಗೆ ಸೂಕ್ತವಾದ ತಳಿಗಳ ಆಯ್ಕೆ ಹಾಗೂ ಅವುಗಳನ್ನು ಬೆಳೆಸುವುದು, ಕೊಟ್ಟಿಗೆ ನಿರ್ಮಾಣ, ಕಾಂಪೋಸ್ಟ್, ಗೋಮೂತ್ರ ಸಂಗ್ರಹ ಹೀಗೆಲ್ಲಾ ಪ್ರೋತ್ಸಾಹ ನೀಡುವಿಕೆ.
  • ಸಂಸ್ಕರಣೆ, ಮೌಲ್ಯವರ್ಧನೆ, ಮಾರಾಟಕ್ಕೆ ಸಹಾಯ
  • ರೈತನಿಂದ ಬಳಕೆದಾರರಿಗೆ ನೇರ ಪೂರೈಕೆಗೆ ಅನುವಾಗಲು ಸಹಾಯ. ಗೋಡೌನ್ ನೀಡುವಿಕೆ, ಸಾಗಾಣಿಕೆ ಸುಗಮವಾಗಿಸುವುದು, ಪ್ಯಾಕಿಂಗ್, ಬಾಳಿಕೆ ಬರುವ ತಂತ್ರಜ್ಞಾನ ನೀಡುವಿಕೆ ಇತ್ಯಾದಿ.

ಗ್ರಾಮ ಕ್ಷೇಮ ನಿಧಿ

ವ್ಯಸನಮುಕ್ತವಾಗಿಸುವುದು. ಹಳ್ಳಿಯಿಂದ ಮಾರಾಟವಾಗುವ ಸಾವಯವ ಪದಾರ್ಥಗಳಿಗೆ ಮೂಲನಿಧಿ ನೀಡುವಿಕೆ, ಮೂಲತಳಿ ಉಳಿಸಿಕೊಳ್ಳಲು ಸಹಾಯ ಇತ್ಯಾದಿ.

ಸಾಮೂಹಿಕ ಕೃಷಿ ಪದ್ಧತಿ

ಈಗಿರುವ ಸರ್ಕಾರಿ ಯೋಜನೆಗಳಾದ ಕೂಲಿಗಾಗಿ ಕಾಳು, ಉದ್ಯೋಗ ಖಾತ್ರಿ ಇವೆಲ್ಲಾ ಕೃಷಿಗೆ ಅನ್ವಯಗೊಳಿಸಿ ಯೋಜಿಸುವಿಕೆ. ಸಣ್ಣ, ಮಧ್ಯಮ ವರ್ಗದವರು ಕೃಷಿ ಬೇಸಾಯ ಬಿಡದಂತೆ ಅವರ ಜಮೀನಿನಲ್ಲೇ ದುಡಿಯುವಂತೆ ಮಾಡುವ ಬದಲಾವಣೆಗಳು ಇತ್ಯಾದಿ.

ಸಾವಯವ ಸಂಶೋಧನಾ ಕೇಂದ್ರ

ಪರಂಪರಾಗತ, ನೆಲಮೂಲ ಜ್ಞಾನಗಳ ದಾಖಲಾತಿ, ಮರುಬಳಕೆಗೆ ಪ್ರಾಮುಖ್ಯತೆ.

ಸಾವಯವ ಕೃಷಿ, ತೋಟಗಾರಿಕೆ, ಪರಿಸರ, ಸಾಂಸ್ಕೃತಿಕ ವೈವಿಧ್ಯಗಳನ್ನೆಲ್ಲಾ ಸೇರಿಸಿದ ಪ್ರವಾಸೋದ್ಯಮಕ್ಕೆ ಅನುಕೂಲ ಒದಗಿಸುವುದು.