ಕಿಶೋರಿಲಾಲ್ ಮಶ್ರುವಾಲಾ —ಜೀವನದುದ್ದಕ್ಕೂ ಅನಾರೋಗ್ಯವೇ ಒಡನಾಡಿ ಯಾದರೂ ಕಿಶೋರಿಲಾಲರು ದೇಶ ಸೇವೆಗೆ ಮುಡಿಪಾದರು. ಗಾಂಧೀಜಿಯ ಶಿಷ್ಯರಾಗಿ ಅವರ ವಿಚಾರ ರೀತಿಯನ್ನು ಆಳವಾಗಿ ಅಧ್ಯಯನ ಮಾಡಿದರು. ರಚನಾತ್ಮಕ ಕಾರ್ಯಕ್ಕೆ ಮೇಲ್ಪಂಕ್ತಿಯಾದರು. ದೇಶಕ್ಕಾಗಿ ಸೆರೆಮನೆ ಸೇರಿದರು. ಇವರ ಬಾಳೇ ಒಂದು ಬಗೆಯ ತಪಸ್ಸು.

ಕಿಶೋರಿಲಾಲ್ ಮಶ್ರುವಾಲಾ

ಇಪ್ಪತ್ತನೆಯ ಶತಮಾನ ಪ್ರಾರಂಭವಾಗುತ್ತಿದ್ದ ದಿನಗಳವು. ಭಾರತದು ಚರಿತ್ರೆ ಹೊಸ ತಿರುವಿನಲ್ಲಿತ್ತು.  ಬ್ರಿಟಿಷರ ಸಾಮ್ರಾಜ್ಯ ಪ್ರಬಲವಾಗಿದ್ದರೂ ಈ ದೇಶದಲ್ಲಿ ನವಚೈತನ್ಯ ಮೂಡಿಸುವ ಮಹಾಪುರುಷರು ಉದಯಿಸಿದ್ದರು. ತಾಯ್ನಾಡಿನ ದಾಸ್ಯವಿಮೋಚನೆಗೆ ಜನ ಪ್ರಯತ್ನಶೀಲರಾಗುತ್ತಿದ್ದರು. ರಾಷ್ಟ್ರಶಕ್ತಿ ಎದ್ದು ನಿಲ್ಲುತ್ತಿತ್ತು. ಹೊಸ ಯುಗಮ ಧೀರ ನಾಯಕರು ನವಯುವಕರನ್ನು ದೇಶಸೇವೆಗೆ ಅಣಿಮಾಡುತ್ತಿದ್ದರು.

ಈ ನವೋದಯ ಸಮಯದಲ್ಲಿ ಹುಟ್ಟಿದವರು ಕಿಶೋರಿಲಾಲ್ ಮಶ್ರುವಾಲಾ. ಗಾಂಧೀಯುಗದ ಪ್ರಚಂಡ ರಾಷ್ಟ್ರೀಯ ಜಾಗೃತಿಗೆ ತಾತ್ವಿಕ ಹಿನ್ನಲೆ ಒದಗಿಸಿಕೊಟ್ಟ ಜ್ಞಾನಯೋಗಿ ಅವರು. ದೇಶದ ಸ್ವಾತಂತ್ರ್ಯ ಸಂಗ್ರಾಮಕ್ಕೆ ವೀರ ಸತ್ಯಾಗ್ರಹಿಗಳನ್ನು ಸಿದ್ಧಮಾಡಲು ಗಾಂಧೀಜಿ ಪ್ರಾರಂಭಿಸಿದ್ದ ಸಬರಮತಿ ಆಶ್ರಮದ ಆತ್ಮೀಯ ಬಳಗಕ್ಕೆ ಸೇರಿದವರಲ್ಲಿ ಕಿಶೋರಿಲಾಲ್ ಅಗ್ರಗಣ್ಯರು. ಮಹಾ ಮೇಧಾವಿ, ನಿಷ್ಠಾವಂತ ಸಮಾಜ ಸೇವಕ. ಆದರ್ಶ ತ್ಯಾಗಿ, ಕುಶಲ ಶಿಕ್ಷಕ, ಉತ್ತಮ ಸಂಚಾಲಕ. ಉನ್ನತ ತತ್ವಚಿಂತಕ. ಇಂಥ ಅಪೂರ್ವ ಗುಣಗಳ ಆದರೆ ಕೃಶವಾದ ದುರ್ಬಲ ಶರೀರ ಪಡೆದಿದ್ದ ಕಿಶೋರಿಲಾಲ್ ತಮ್ಮ ಜೀವನವನ್ನು ಅಖಂಡವಾಗಿ ಅಹಿಂಸಾ ಮಾರ್ಗದ ಆಚರಣೆಗೆ ಮುಡಿಪಾಗಿಟ್ಟರು. ರಾಜಕೀಯರಂಗಕ್ಕೆ ಪ್ರವೇಶಿಸದೆ ನಿಶ್ಶಬ್ದ ರಚನಾತ್ಮಕ ಕಾರ್ಯಗಳಲ್ಲೇ ತೊಡಗಿರುತ್ತಿದ್ದರು. ಕರೆ ಬಂದಾಗ ಕಡುಗಲಿಯಂತೆ ಸತ್ಯಾಗ್ರಹ ಸಮರದಲ್ಲೂ ಧುಮುಕುತ್ತಿದ್ದರು. ಅವರ ಮುಖ್ಯ ಒಲವು ಚಿಂತನೆ, ಬೋಧನೆ ಮತ್ತು ಆತ್ಮೋನ್ನತಿ.

ಕಿಶೋರಿಲಾಲ್ ಬಗ್ಗೆ ಬಾಪೂ ಹೀಗೆಂದಿದ್ದಾರೆ,

‘ನಮ್ಮಲ್ಲಿನ ಅತ್ಯಂತ ವಿರಳ ಕಾರ್ಯಕರ್ತರಲ್ಲಿ ಅವರೊಬ್ಬರು. ಅವರ ಜಾಗೃತ ದೃಷ್ಟಿ ಅಮೋಘ. ಅವರಲ್ಲಿ ಜಾತಿ ಪಕ್ಷಪಾತವಿಲ್ಲ. ಸಂಪ್ರದಾಯ ಶರಣರಲ್ಲ ಅವರು. ಪ್ರಾಂತೀಯ ದುರಾಭಿಮಾನವೂ ಇಲ್ಲ. ಸ್ವತಂತ್ರವಾದ ಚಿಂತನೆ ಅವರದು. ರಾಜಕೀಯಕ್ಕಿಂತ ಸಮಾಜ ಸುಧಾರಣೆಯಲ್ಲಿ ಅವರ ಆಸಕ್ತಿ. ಸರ್ವಧರ್ಮಗಳ ಸಾರವನ್ನು ಗ್ರಹಿಸಿದ್ದಾರೆ. ಯಾವುದೇ ಕಾರ್ಯ ಕೈಗೊಂಡರೂ ಪೂರ್ಣತೆಯ ಸಾಧನೆಗೆ ನಿಷ್ಠೆಯಿಂದ ದುಡಿಯುವ ನಿಸ್ವಾರ್ಥ ಸಾಧಕರು.’

ಮನೆತನ

ಮಶ್ರುವಾಲಾ ಮನೆತನ ತಲತಲಾಂತರದಿಂದ ವ್ಯಾಪಾರದಲ್ಲಿ ತೊಡಗಿದ್ದ ಗುಜರಾತಿ ವರ್ಗಕ್ಕೆ ಸೇರಿದುದು. ‘ಮಶ್ರು’ ಎಂದರೆ ರೇಷ್ಮೆ ಮತ್ತು ಹತ್ತಿ ದಾರಗಳನ್ನು ಒಟ್ಟಾಗಿ ನೇಯ್ದ ಬಟ್ಟೆ. ಇದನ್ನು ತಯಾರಿಸಿ ಮಾರುತ್ತಿದ್ದರು. ಆದುದರಿಂದ ಅದು ಮನೆತನದ ಹೆಸರಾಯಿತು. ಕಿಶೋರಿಲಾಲ್ ಅವರ ತಂದೆ ಇಚ್ಛಾರಾಮ್ ಮಶ್ರುವಾಲಾ. ತಾತ ರಂಗೀಲದಾಸ್. ಇವರದು ವಲ್ಲಭ ಸಂಪ್ರದಾಯದ ವೈಷ್ಣವ ಪಂಥ. ಗಾಂಧೀ ಮನೆತನದವರಂತೆ. ಆದರೆ ಮುಂದೆ ಸ್ವಾಮಿ ಸಹಜಾನಂದರ ಸ್ವಾಮಿ ನಾರಾಯಣ ಸಂಪ್ರದಾಯಕ್ಕೆ ಸೇರಿದರು ರಂಗೀಲದಾಸ್. ಕುರುಡು ಆಚಾರಗಳನ್ನು ಬಿಟ್ಟ ಮುಕ್ತ ಭಕ್ತಿಪಂಥ ಅದು. ಮಡಿವಂತ ವೈಷ್ಣವರು ಇವರನ್ನು ದೂರ ಇಟ್ಟರು.

ಕಿಶೋರಿಲಾಲರಿಗೆ ಇಬ್ಬರು ತಂಗಿಯರು ಹರಿಲಕ್ಷ್ಮಿ ಮತ್ತು ರಮಣಕ್ಷ್ಮಿ. ಐವರು ಅಣ್ಣಂದಿರು. ತಂದೆ ಇಚ್ಛಾರಾಮರು ವ್ಯಾಪಾರೀವೃತ್ತಿಯನ್ನು ಬಿಟ್ಟು ಪ್ರೌಢಶಾಲೆಯ ಶಿಕ್ಷಕರಾದರು. ನಂತರ ಕೆಲವು ಕಾಲ ಸೇಠ್ ಮಂಗಾರಾಮರ ಮುದ್ರಾಲಯ ಮತ್ತು ಪತ್ರಿಕೆಯಲ್ಲಿ ಕೆಲಸ ಮಾಡಿದರು.

ಕಿಶೋರಿಲಾಲರು ಹುಟ್ಟಿದ್ದು ಮುಂಬಯಿಯಲ್ಲಿ. ೧೯೮೦ರ ಅಕ್ಟೋಬರ್ ಐದರಂದು. ಏಳನೇ ವರ್ಷದಲ್ಲಿ ಅವರ ತಾಯಿ ತೀರಿಕೊಂಡರು. ನಂತರ ಅಣ್ಣ ಅತ್ತಿಗೆಯರ ಪಾಲನೆಯಲ್ಲಿ ಹೈಸ್ಕೂಲ್ ಶಿಕ್ಷಣ ಪಡೆದರು. ಎಸ್ಲನೇಡ್ ಹೈಸ್ಕೂಲ್‌ನಲ್ಲಿ ಇಂಗ್ಲಿಷ್ ಶಿಕ್ಷಣ. ಆ ಕಾಲಕ್ಕೆ ಗಾಂಧೀಜಿ ಮುಂಬಯಿಯಲ್ಲಿ ವಕೀಲರು. ಅವರ ದೊಡ್ಡ ಮಗ ಹರಿಲಾಲ್ ಅದೇ ಸ್ಕೂಲಿನ ವಿದ್ಯಾರ್ಥಿ. ಮುಂದೆ ಗಾಂಧೀಜಿ ದಕ್ಷಿಣ ಆಫ್ರಿಕಕ್ಕೆ ಹೋಗಿ ನೆಲೆಸಿದರು. ಹರಿಲಾಲನೂ ಅಲ್ಲಿಗೆ ಪ್ರಯಾಣ ಮಾಡಿದಾಗ ಜೊತೆಗಾರರಾದ ಕಿಶೋರಿಲಾಲ ಮತ್ತಿತ್ತರ ಗೆಳೆಯರಿಗೆ ಆಶ್ಚರ್ಯ.ಕಿಶೋರಿಲಾಲ್ ಮಶ್ರು ವಾಲಾ ಗಾಂಧೀಜಿಯ ಹೆಸರನ್ನು ಮೊದಲು ಕೇಳಿದ್ದು ಆಗ.

ಶಿಕ್ಷಣ

ಕಿಶೋರಿಲಾಲರು ಹೈಸ್ಕೂಲು ಶಿಕ್ಷಣ ಮುಗಿಸಿ ವಿಲ್ಸನ್ ಕಾಲೇಜು ಸೇರಿದರು. ಅಲ್ಲಿ ವಿದ್ಯಾರ್ಥಿವೇತನವೂ ದೊರೆಯಿತು. ಅದು ಒಂದು ಜಾತೀಯ ನಿಧಿಯಿಂದ ಬರುತ್ತಿತ್ತು. ಅದನ್ನು ತಿಳಿದು ಎರಡು ತಿಂಗಳ ನಂತರ ತಾವೇ ಅದನ್ನು ವಿನಯದಿಂದ ನಿರಾಕರಿಸಿದರು. ಕಿಶೋರಿಲಾಲ್ ಕುಟುಂಬದ ಆರ್ಥಿಕಸ್ಥಿತಿಯ ಕಾರಣ ಶಿಕ್ಷಣದ ವೆಚ್ಚಕ್ಕಾಗಿ ಕೆಲಸ ಹುಡುಕಬೇಕಾಯಿತು.

ಚಿಕ್ಕಂದಿನಲ್ಲೇ ಗೂರಲುರೋಗಕ್ಕೆ ತುತ್ತಾದರು ಕಿಶೋರಿಲಾಲರು. ಬಾಳಿನುದ್ದಕ್ಕೂ ಅದರ ವೇದನೆಯನ್ನು ಅನುಭವಿಸುತ್ತಲೇ ಬಂದರು. ಜ್ಞಾನ ಸಾಧನೆ ಎಷ್ಟೇ ಇದ್ದರೂ ಶರೀರ ಶ್ರಮದಲ್ಲಿ ತೊಡಗಲು ತಮಗೆ ಸಾಧ್ಯವಾಗದಲ್ಲ ಎಂದು ಅನೇಕ ಬಾರಿ ಪರಿತಾಪಪಡುತ್ತಿದ್ದರು. ಕುಶಾಗ್ರಮತಿ ಗಳಾಗಿದ್ದುದರಿಂದ ಅಧ್ಯಾಪಕರ ಪ್ರೀತಿ ಗೌರವಗಳಿಗೆ ಪಾತ್ರರಾದರು. ಅಷ್ಟೇ ಅಲ್ಲ ಹಿರಿಯರೊಂದಿಗೆ ವಿದ್ವಾಂಸ ರೊಂದಿಗೆ ಗಂಭೀರ ಚರ್ಚೆಯಲ್ಲಿ ತೊಡಗುವುದೆಂದರೆ ಉತ್ಸಾಹ. ವಾಖ್ಯಾನ ಮತ್ತು ಭಾಷಣಗಳಲ್ಲಿ ವಿಖ್ಯಾತರೆನಿ ಸಿದರು. ಲೇಖನಗಳನ್ನು ಬರೆಯುತ್ತಿದ್ದರು. ವಿಜ್ಞಾನ ವಿಷಯಗಳನ್ನು ಆರಿಸಿಕೊಂಡು ೧೯೦೯ ರಲ್ಲಿ ಪದವೀಧರ ರಾದರು. ಮುಂದೆ ನ್ಯಾಯಶಾಸ್ತ್ರವನ್ನೋದಿದರು. ವಕೀಲಿ ಪರೀಕ್ಷೆ ಪಾಸಾದರು. ೧೯೧೨ ರಲ್ಲಿ ಎಲ್.ಎಲ್.ಬಿ. ಪರೀಕ್ಷೆಗೆ ಕುಳಿತು ಪ್ರಥಮಶ್ರೇಣಿಯಲ್ಲಿ ತೇರ್ಗಡೆಯಾದರು.

ಸರಳ ಸ್ವಭಾವ, ಸ್ನೇಹಪರತೆ, ಗೆಳೆಯರಲ್ಲಿ ಅಪಾರ ಪ್ರೇಮ, ಕಷ್ಟದಲ್ಲಿ ಸಹಾನುಭೂತಿ ಈ ಗುಣಗಳಿಂದ ಕಿಶೋರಿಲಾಲ್ ಸಂಪಾದಿಸಿದ ಮಿತ್ರವೃಂದ ಅಪಾರ. ಒಮ್ಮೆ ಸಂಪರ್ಕಕ್ಕೆ ಬಂದವರು ಅದರ ಸವಿಯಿಂದ ನಿಕಟವರ್ತಿ ಗಳಾಗಿ ಬಿಡುತ್ತಿದ್ದರು.

ಮದುವೆ

ವಿದ್ಯಾರ್ಥಿಯಾಗಿದ್ದಾಗಲೇ ಕೀಶೋರಿಲಾಲರಿಗೆ ಮದುವೆಯಾಯಿತು. ಪತ್ನಿ ಗೋಮತಿ ದೇವಿ-ಅವರಿಗೆ ಆದರ್ಶ ಪತ್ನಿ. ೧೯೦೪ರಲ್ಲಿ ಕಿಶೋರಿಲಾಲರ ಮನೆ ಸೇರಿದಾಗ ಅವರಿಗಿನ್ನೂ ೧೪ ವರ್ಷ. ಮುಂದೆ ಸಬರಮತಿ ಆಶ್ರಮದಲ್ಲೂ ಸೇವಾ ಗ್ರಾಮದಲ್ಲೂ ಗೋಮತಿ ತಾಯಿ ವಾತ್ಸಲ್ಯಪೂರ್ಣ ಪ್ರೀತ್ಯಾದಾರಗಳಿಂದ ಗಾಂಧಿ ಪರಿವಾರ ದಲ್ಲಿ  ಮಹಿಳೆ  ಎನಿಸಿದ್ದರು.

ವಕೀಲಿವೃತ್ತಿ ಸೇವೆಯ ಬಾಳು ಪ್ರಾರಂಭ

ಆ ವೇಳೆಗೆ ಇಚ್ಛಾರಾಮರು ಅಕೋಲಾದಲ್ಲಿದ್ದರು. ಕಿಶೋರಿಲಾಲರು ವಕೀಲವೃತ್ತಿಯನ್ನು ಅಲ್ಲೇ ಪ್ರಾರಂಭಿಸಿದರು. ಅಕೋಲಾದ ಸಾರ್ವಜನಿಕ ಜೀವನದಲ್ಲಿ ಕಿಶೋರಿಲಾಲ್ ಪ್ರಮುಖ ಪಾತ್ರ ವಹಿಸಲಾರಂಭಿಸಿದರು. ಗೋಖಲೆಯವರು ಆಗ ತಾನೇ ದಕ್ಷಿಣ ಆಫ್ರಿಕದಿಂದ ಹಿಂದಿರುಗಿ ಗಾಂಧೀಜಿ ನಡೆಸುತ್ತಿದ್ದ ಸತ್ಯಾಗ್ರಹಕ್ಕೆ ಬೆಂಬಲ ನೀಡಿ ನಿಧಿಸಂಗ್ರಹಕ್ಕೆ ಮನವಿ ಮಾಡಿದ್ದರು. ಶ್ರೀಮತಿ ಆನಿ ಬೆಸೆಂಟರು ಹೋಂರೂಲ್ ಚಳವಳಿ ಆರಂಭಿಸಿದ್ದರು. ಕಿಶೋರಿಲಾಲ್ ಈ ಕೆಲಸಗಳಲ್ಲಿ ಉತ್ಸಾಹದಿಂದ ತೊಡಗಿದರು.

ಒಗ್ಗದ ವ್ಯಾಪಾರವೃತ್ತಿ

ಮೂರು ವರ್ಷ ವಕೀಲಿ ನಡೆಯಿತು. ಅಷ್ಟರಲ್ಲಿ ಅಣ್ಣ ಬಾಲೂಭಾಯಿ ಮುಂಬಯಿಯಲ್ಲಿ ತಮ್ಮ ವ್ಯಾಪಾರೀ ಸಂಸ್ಥೆಯನ್ನು ವಿಸ್ತರಿಸಿದರು. ಕಿಶೋರಿಲಾಲರನ್ನು ತಮ್ಮೊಡನೆ ಬಂದು ಸೇರಲು ಆಗ್ರಹಪಡಿಸಿದರು. ಕಿಶೋರಿಲಾಲ್‌ರು ವಕೀಲಿವೃತ್ತಿ ಬಿಟ್ಟು ಅಣ್ಣನೊಡನೆ ವ್ಯಾಪಾರೀಸಂಸ್ಥೆಯಲ್ಲಿ ಕೆಲಸ ಮಾಡತೊಡಗಿದರು.

ವ್ಯಾಪಾರವೃತ್ತಿಯಲ್ಲಿ ಕಿಶೋರಿಲಾಲರು ಹೆಚ್ಚು ಆಸಕ್ತರಾಗಲೇ ಇಲ್ಲ. ಅವರ ಮನೋಧರ್ಮಕ್ಕೆ ಅದು ಒಗ್ಗಲಿಲ್ಲ. ಅವರ ಒಲವು ವೈರಾಗ್ಯ, ಸೇವೆ, ಆತ್ಮ ವಿಕಾಸಗಳ ಕಡೆಗೇ ಹೆಚ್ಚಾಗಿತ್ತು.

ಅದೇ ಸಮಯಕ್ಕೆ ಕಿಶೋರಿಲಾಲರ ತಂದೆ ತೀರಿಕೊಂಡರು. ಕೊನೆಯ ಗಳಿಗೆಯಲ್ಲಿ ಪ್ರೀತಿಯ ಕಿರಿಯ ಮಗ ಹತ್ತಿರ ಇರಲಾಗಲಿಲ್ಲ. ಹಳೆಯ ಮೊಕದ್ದಮೆ ಯೊಂದರ ಸಲುವಾಗಿ ಅಕೋಲಾಗೆ ಹೋಗಿದ್ದರು. ತೀರ ಅಸ್ವಸ್ಥರಾದಾಗತಂದೆಯ ಬಳಿ ಇದ್ದು ಸೇವೆ ಮಾಡಲಿಲ್ಲವಲ್ಲ ಎಂದು ಕಿಶೋರಿಲಾಲರ ಮನಸ್ಸು ಹೃದಯಗಳು ದು:ಖಿತವಾದವು. ‘ಧನಲೋಭದಿಂದ ತಂದೆಯ ಕೊನೆ ಘಳಿಗೆಯಲ್ಲಿ ಸಮೀಪದಲ್ಲಿರದಾದೆ. ಅದು ನನ್ನ ಜೀವನದ ಕಹಿ ನೆನಪಾಗಿ ಉಳಿದಿದೆ’ ಎಂದು ಬರೆದಿದ್ದಾರೆ.

ಸೇವಾಕ್ಷೇತ್ರದಲ್ಲಿ

೧೯೦೪ರಲ್ಲಿ ಭಾರತದಲ್ಲಿ ಒಂದು ರಾಜಕೀಯ ಬಿರುಗಾಳಿ ಎದ್ದಿತು. ಬ್ರಿಟಿಷ್ ಸರ್ಕಾರ ಬಂಗಾಳದ ಪ್ರಾಂತವನ್ನು ಎರಡಾಗಿ ಒಡೆಯಲು ಯೋಚನೆಮಾಡಿತು. ಬಂಗಾಳದ ಜನ ಇದನ್ನು ವಿರೋಧಿಸಿದರು. ಆದರೂ ಬ್ರಿಟಿಷ್ ಸರ್ಕಾರ ಇದನ್ನು ಕಾರ್ಯಗತ ಮಾಡಲು ನಿಶ್ಚಯಿಸಿತು. ತಿಲಕರು ಬಂಗಾಳ ವಿಭಜನೆಯ ವಿರುದ್ಧ ಬಂಡೆದ್ದು ವಿದೇಶೀವಸ್ತು ಬಹಿಷ್ಕಾರ ಆಂದೋಲನ ಪ್ರಾರಂಭಿಸಿದರು. ಮಶ್ರುವಾಲಾ ಸಹೋದರರೆಲ್ಲ ಸ್ವದೇಶಿ ವ್ರತ ತೊಟ್ಟರು. ಕಿಶೋರಿಲಾಲರು ರಾಷ್ಟ್ರನಾಯಕರ ದರ್ಶನ, ಸಹವಾಸಗಳಿಗೆ ತವಕಪಡುತ್ತಿದ್ದರು. ಮುಂಬಯಿಯ ದೇವಧರ್ ಅವರ ಪರಿಚಯವಾಯಿತು. ಗೋಖಲೆಯವರು ಸ್ಥಾಪಿಸಿದ್ದ ಭಾರತ ಸೇವಕ ಸಂಘದ (ಸರ್ವೆಂಟ್ಸ್ ಆಫ್ ಇಂಡಿಯಾ ಸೊಸೈಟಿ) ಹಾಗೂ ಮಿಕ್ಕ ಮಿತ್ರರ ಪರಿಚಯ ಮಾಡಿಸಿದರು. ಪ್ರಮುಖ ರಾಗಿದ್ದ ಥಕ್ಕರ್ ಬಾಪಾ ಅವರೊಡನೆ ಸಂಪರ್ಕ ಬೆಳೆಯಿತು.

ಗಾಂಧೀಜಿಯವರು ಭಾರತದಲ್ಲಿ ಸತ್ಯಾಗ್ರಹ ಆಶ್ರಮವನ್ನು ಅಹಮದಾಬಾದಿನ ಕೊಚರಬ್‌ನಲ್ಲಿ ಪ್ರಾರಂಭಿಸಿದ್ದರು. ರಾಷ್ಟ್ರಸೇವೆಗೆ ಕಂಕಣ ತೊಟ್ಟ ಯುವಕರಿಗೆ ಅಹಿಂಸಾಸಮರದ ಶಿಕ್ಷಣ ಕೊಡುವ ಉದ್ದೇಶದಿಂದ ಆಶ್ರಮ ಪ್ರಾರಂಭವಾಯಿತು. ಅದಕ್ಕೆ ಮೊದಲು ಒಂದೆರಡು ಬಾರಿ ಮುಂಬಯಿಯಲ್ಲಿ ಕಿಶೋರಿಲಾಲರು ಗಾಂಧೀಜಿಯನ್ನು ಭೇಟಿಯಾಗಿದ್ದರು. ದಕ್ಷಿಣ ಆಫ್ರಿಕದ ಸತ್ಯಾಗ್ರಹದ ಅಪೂರ್ವ ಯಶಸ್ವಿನ ಕಥೆ ಎಲ್ಲೆಡೆಯೂ ಹರಡಿತ್ತು. ಪರಿಸ್ಥಿತಿಯನ್ನು ಪರಿಶೀಲಿಸಿ ತಮ್ಮದೇ ಆದ ಕಾರ್ಯಕ್ರಮ ರೂಪಿಸಲು ಗಾಂಧೀಜಿ ಸಂಕಲ್ಪ ಮಾಡಿದರು. ತಮ್ಮ ವಿಚಾರಮಾರ್ಗ ವನ್ನು ಅಂಗೀಕರಿಸುವ ತತ್ವನಿಷ್ಠ, ಜ್ಞಾನನಿಷ್ಠ ಗೆಳೆಯರನ್ನು ಹುಡುಕುತ್ತಿದ್ದರು. ವಿದ್ಯಾವಂತ, ಸೇವಾನಿಷ್ಠ ಯುವಕ ಕಿಶೋರಿಲಾಲರ ಬಗ್ಗೆ ಅಪಾರ ವಿಶ್ವಾಸ ಮೂಡಿತು. ತಮ್ಮ ಶಿಕ್ಷಣ ಕ್ರಮದ ರೂಪರೇಖೆಗಳನ್ನು ಸಿದ್ಧಮಾಡಿ ಪ್ರಯೋಗಿಸಲು ಇವರು ಸಮರ್ಥ ವ್ಯಕ್ತಿ ಎನ್ನಿಸಿತು. ಮೊದಲ ಭೇಟಿಯಲ್ಲೇ ಪರಸ್ಪರ ನಂಬಿಕೆ ಹುಟ್ಟಿ ಕಿಶೋರಿಲಾಲರು ಗಾಂಧೀ ಸೇವಾಕ್ಷೇತ್ರದ ಪ್ರಥಮ ಶ್ರೇಣಿಯ ಕಾರ್ಯಕರ್ತ ರಾಗಿ ಸಬರಮತಿ ಆಶ್ರಮ ಸೇರಿದರು. ಅವರ ಬಾಳಿನ ಗುರಿ ಸ್ಪಷ್ಟವಾಯಿತು. ಅಲ್ಲಿಂದಾಚೆಗೆ ದೇಶದ ಅಹಿಂಸಕ ರಚನಾಯತ್ಮಕ ಕ್ರಾಂತಿಗೆ ಕಿಶೋರಿಲಾಲರು ಸಲ್ಲಿಸಿದ ಸೇವೆ ಅಮೋಘ, ಕೊಟ್ಟ ಮಾರ್ಗದರ್ಶನ ಅಮೂಲ್ಯ.

ಗುರು-ಶಿಷ್ಯ ಸಮಾಗಮ

ಸ್ವಾತಂತ್ರ್ಯಕ್ಕಾಗಿ ಸತ್ಯಾಗ್ರಹ ಸಮರ ಪ್ರಾರಂಭ ವಾದುದು ಚಂಪಾರಣ್ಯದ ನೀಲಿತೋಟಗಳ ಕಾರ್ಮಿಕರ ಹೋರಾಟದಿಂದ. ೧೯೪೭ರಲ್ಲಿ ಗಾಂಧೀಜಿ ಭಾರತದಲ್ಲಿ ಕೈಕೊಂಡ ಪ್ರಮುಖ ಸತ್ಯಾಗ್ರಹ ಅದು. ಸ್ವಯಂಸೇವಕರಾಗಿ ಮನವಿ ಮಾಡಿದ್ದರು. ಮುಂಬಯಿಯಲ್ಲಿದ್ದ ಥಕ್ಕರ್ ಬಾಪಾ ಅವರು ಕಿಶೋರಿಲಾಲರನ್ನು ಬಿಹಾರಿಗೆ ಹೋಗುತ್ತೀರಾ ಎಂದು ಕೇಳಿದರು. ಅಣ್ಣ ಬಾಲೂ ಭಾಯಿ ಅವರೂ ಒಪ್ಪಿಗೆ ಕೊಟ್ಟರು. ಪತ್ನಿ ಗೋಮತಿ ದೇವಿ ಸಮ್ಮತಿಸಿದರು. ತಮ್ಮ ಅನಾರೋಗ್ಯವನ್ನೂ ಕೃಶದೇಹದಾರ್ಢ್ಯವನ್ನೂ ಲೆಕ್ಕಿಸದೆ ಹೊರಟುಬಿಟ್ಟರು ಕಿಶೋರಿಲಾಲ್ ಮಶ್ರುವಾಲಾ.

ಗಾಂಧೀಜಿಯವರಿಗೆ ಬೇರೆ ಕಲ್ಪನೆಯೇ ಇತ್ತು. ಚಂದೂಲಾಲ್ ದವೆಯವರಿಗೆ ಕಿಶೋರಿಲಾಲರು ಬರೆದಿದ್ದ ಪತ್ರವನ್ನು ಅವರು ನೋಡಿದ್ದರು. ಈತ ಸೂಕ್ಷ್ಮಮತಿಯಾದ ವಿಚಾರವಂತ. ಅಹಿಂಸಾ ಪಥದ ನೂತನ ಶಾಸ್ತ್ರ ನಿರ್ಮಾಣ ವಾಗಲು ಇಂಥ ಸಮರ್ಥರು ಬೇಕು ಎನ್ನಿಸಿತ್ತು. ಕಿಶೋರಿಲಾಲರೊಡನೆ ಜಿಜ್ಞಾಸೆ ಮಾಡಿದರು. ನಂತರ ‘ಈ ಸಮರರಂಗದ ಕೋಲಾಹಲದಲ್ಲಿ ನೀನು ಕೆಲಸ ಮಾಡುವುದು ಕಠಿಣ. ನನ್ನ ಆಶ್ರಮವನ್ನು ನೋಡಿಕೊಳ್ಳುವ ಸಾಮರ್ಥ್ಯ ನಿನಗಿದೆ. ಕೂಡಲೇ ಸಬರಮತಿ ಆಶ್ರಮದ ವಿದ್ಯಾಶಾಲೆಯ ಅಧ್ಯಾಪಕನಾಗಿ ಸೇರು’ ಎಂದು ಅಜ್ಞಾಪಿಸಿದರು ಬಾಪೂ.

ಕಿಶೋರಿಲಾಲರಿಗೆ ಒಂದು ಕಡೆ ನಿರಾಸೆ, ಮತ್ತೊಂದು ಕಡೆ ಆ ಆತ್ಮೀಯತೆಯ ಆಕರ್ಷಣೆ. ಸತ್ಯಾಗ್ರಹದಲ್ಲಿ ಪಾಲ್ಗೊಳ್ಳಬೇಕೆಂಬ ಆಸೆ. ದೈಹಿಕ ದೌರ್ಬಲ್ಯದ ಆತಂಕ ವನ್ನು ಗಾಂಧೀಜಿ ಎತ್ತಿ ಆಡಿದರೂ ಇನ್ನೂ ಸಮೀಪಕ್ಕೆ ಆಹ್ವಾನಿಸಿದರಲ್ಲಾ ಎಂಬ ಹೆಮ್ಮೆ.

‘ಮುಂಬಯಿಗೆ ಹಿಂತಿರುಗಿದ ನಂತರ ನನ್ನ ನಿರ್ಧಾರವನ್ನು ತಿಳಿಸುತ್ತೇನೆ’ ಎಂದು ಹೇಳಿ ಅದೇ ದಿನ ಮಧ್ಯಾಹ್ನ ಬಿಹಾರದಿಂದ ಹಿಂತಿರುಗಿ ಹೊರಟುಬಿಟ್ಟರು. ದಾರಿಯಲ್ಲಿ ಸ್ವಾಮಿ ನಾರಾಯಣ ಪಂಥದ ಪ್ರವರ್ತಕರಾದ ಸ್ವಾಮಿ ಸಹಜಾನಂದ ಅವರ ಜನ್ಮಸ್ಥಳ ಛಪಿಯಾದಲ್ಲಿ ತಂಗಿದ್ದರು. ಸಾಧುಸಂತರ ಪರಂಪರೆ ಮತ್ತು ಅವರ ಸಮಾಜಸೇವೆ ಬಗ್ಗೆ ಕಿಶೋರಿಲಾಲರಿಗೆ ಆಳವಾದ ಶ್ರದ್ಧೆ. ಹಾಗೆಯೇ ಅವರ ಆತ್ಮಜ್ಞಾನ ಸಾಧನೆ ಮಾಡಬೇಕೆಂಬ ತೀವ್ರ ಹಂಬಲ. ಸತತವಾಗಿ ಇದು ಬೆಳೆಯುತ್ತಲೇ ಇತ್ತು. ಆಶ್ರಮ ಜೀವನದಿಂದ ಅವರ ಸಾಧನೆ ಅರ್ಥಪೂರ್ಣ ವಾಯಿತು. ಜ್ಞಾನ-ಕರ್ಮಗಳ ಸುಂದರ ಸಂಯೋಜನೆ ಯಾಯಿತು.

ಸತ್ಯಾಗ್ರಹ ಆಶ್ರಮದ ಶಿಕ್ಷಣ

ಗಾಂಧೀಜಿಯವರ ಸೂಚನೆ ಕಿಶೋರಿಲಾಲರಿಗೆ ತುಂಬ ಹಿಡಿಸಿತು. ಅಣ್ಣಂದಿರ ವ್ಯಾಪಾರೀಸಂಸ್ಥೆಗಳಲ್ಲಿ ಆಸಕ್ತಿ ಇರಲಿಲ್ಲ. ತಮ್ಮ ಇಚ್ಛೆಯನ್ನು ತಿಳಿಸಿದಾಗ ಪೋಷಕರಿಗೆ ಆತಂಕವಾಯಿತು. ಆದರೆ ಕಿಶೋರಿಲಾಲರ ನಿಶ್ಚಯವನ್ನು ಬದಲಿಸಲಾಗಲಿಲ್ಲ. ಪತ್ನಿ ಗೋಮತಿ ಬಹನ್ ಸಂತೋಷ ದಿಂದ ಒಪ್ಪಿದ್ದು ಪ್ರೋತ್ಸಾಹವಾಯಿತು. ೧೯೧೮ರಲ್ಲಿ ಸಂಸಾರ ಸಮೇತ ಕಿಶೋರಿಲಾಲರು ಸಬರಮತಿ ಆಶ್ರಮಕ್ಕೆ ಬಂದು ಸೇರಿದರು.

ಅಲ್ಲಿನ ಮುಖ್ಯ ಪ್ರಾಧ್ಯಾಪಕರು ಆಚಾರ‍್ಯ ಕಾಕಾ ಕಾಲೇಲ್ಕರ್, ರವೀಂದ್ರನಾಥ ಠಾಕೂರರ ಶಾಂತಿನಿಕೇತನದಲ್ಲಿ ಕೆಲಸ ಮಾಡಿದ್ದವರು. ಪ್ರಖ್ಯಾತ ಲೇಖಕರು, ವಿದ್ವಾಂಸರು. ಅವರಲ್ಲದೆ ಸಕಲಚಂದ್ ಶಹಾ, ನರಹರಿಭಾಯಿ ಪರೇಖ್ ಮುಂತಾದವರು ಶಿಕ್ಷಕರು.ಆಚಾರ‍್ಯ ವಿನೋಬಾ ಆಶ್ರಮದಲ್ಲೇ ಇರುತ್ತಿದ್ದರು. ಈ ಬಳಗಕ್ಕೆ ಈ ಮೂವತ್ತು ವರ್ಷದ ತರುಣ ಜಿಜ್ಞಾಸು ಕಿಶೋರಿಲಾಲ್ ಭೂಷಣಪ್ರಾಯರಾಗಿ ಬಂದು ಸೇರಿದರು.

ಧಾರ್ಮಿಕ ಹಿಂದೂ ಸಂಪ್ರದಾಯಗಳನ್ನು ಹಿಗ್ಗಿಸಿ ಸರ್ವಧರ್ಮೀಯರಿಗೂ ಸಾಮಾನ್ಯವಾದ ರೀತಿನೀತಿಗಳನ್ನು ಗಾಂಧೀಜಿ ಅನುಸರಿಸುತ್ತಿದ್ದರು. ಅಡಿಗೆ, ಊಟ, ಕೆಲಸ, ಸಾಧನೆ ಎಲ್ಲರಿಗೂ ಒಂದೇ ರೀತಿ. ಕಿಶೋರಿಲಾಲರಿಗೆ ಸಂಪ್ರದಾಯಬದ್ಧ ವೈಯುಕ್ತಿಕ ಸಾಧನೆಯಲ್ಲಿ ಒಲವಿತ್ತು. ಸಾಮೂಹಿಕ ಜೀವನದಲ್ಲಿ ಎಲ್ಲರೊಡನೆ ಬೆರೆತರು. ಆದರೆ ತಮ್ಮ ವ್ಯಕ್ತಿಗತ ಪೂಜಾ ವಿಧಾನ, ಆಹಾರ ನಿಯಮಗಳೂ ಚಿಂತನಗಳ ಬಗ್ಗೆ ಅವರದು ಸ್ವತಂತ್ರ ದಾರಿ, ಗಾಂಧೀಜಿ ಯೊಡನೆ ಈ ಬಗ್ಗೆ ಗಂಭೀರವಾಗಿ ಚರ್ಚೆ ಮಾಡುತ್ತಿದ್ದರು. ಅವರ ಅಭಿಪ್ರಾಯಗಳನ್ನು ಗಾಂಧೀಜಿ ಗೌರವಿಸುತ್ತಿದ್ದರು.

ಆಶ್ರಮದ ಶಾಲೆ ಒಂದು ಅಪೂರ್ವ ಪ್ರಯೋಗ ವಾಗಿತ್ತು. ಶಿಕ್ಷಕರೆಲ್ಲ ಒಟ್ಟಾಗಿ ಬಾಲಕರೆಲ್ಲರ ಜವಾಬ್ದಾರಿ ವಹಿಸಿಕೊಂಡು ಒಟ್ಟಿಗೆ ಕಲೆತು ಪರಸ್ಪರ ತಿದ್ದುವ ಕ್ರಮ ರೂಢಿಸಿದ್ದರು. ಕಿಶೋರಿಲಾಲರು ಭೂಗೋಳ, ಗಣಿತ, ಪ್ರಬಂಧ ಲೇಖನ ಮತ್ತು ಕಾವ್ಯ ವ್ಯಾಸಂಗಗಳನ್ನು ಕಲಿಸುತ್ತಿದ್ದರು. ಎಲ್ಲವೂ ಗುಜರಾತಿ ಭಾಷೆಯಲ್ಲಿ. ಅದಕ್ಕಾಗಿ ಹೊಸ ಪುಸ್ತಕಗಳನ್ನು ತಯಾರಿಸಿದ್ದರು. ತಾವೇ ಬರೆದು ತರುತ್ತಿದ್ದರು. ವಿದ್ಯಾರ್ಥಿಗಳಿಂದಲೇ ಪಠ್ಯಪುಸ್ತಕ ತಯಾರಾಗುತ್ತಿತ್ತು.

ಅಲ್ಲಿನ ಶಿಕ್ಷಣದಲ್ಲಿ ದಂಡ ಇಲ್ಲ. ಛೀಮಾರಿ ಇಲ್ಲ. ಜಡ ದಿನಚರಿ ಇಲ್ಲ. ತಪ್ಪು ಮಾಡಿದವರನ್ನು ಇತರರ ಮುಂದೆ ಹೀಯಾಳಿಸದೆ, ವಿಶ್ವಾಸದಿಂದ ಶಿಕ್ಷಕರೇ ತಿದ್ದುತ್ತಿದ್ದರು. ಶಾಲೆಯ ಸಮಸ್ತ ಕೆಲಸಗಳಲ್ಲೂ ಎಲ್ಲರೂ ಭಾಗಿಗಳು. ಅವರವರ ಒಲವಿನಂತೆ ಅವರವರ ಅಭಿರುಚಿಗಳಂತೆ ಅವರ ಬೆಳವಣಿಗೆ, ಶಿಕ್ಷಣ, ನಂಬರುಗಳ ಸ್ಪರ್ಧೆ ಇಲ್ಲ. ಉರು ಹೊಡೆದು ಬರೆಯುವ ಪರೀಕ್ಷೆಗಳಿಲ್ಲ.

ವ್ಯವಸಾಯಕ್ಷೇತ್ರ ಶಾಲೆ ಮುಖ್ಯಭಾಗ, ದುರ್ಬಲ ರಾದರೂ ಕಿಶೋರಿಲಾಲರು ಉತ್ಸಾಹದಿಂದ ಭಾಗವಹಿ ಸುತ್ತಿದ್ದರು. ಅವರೆಲ್ಲಿದ್ದರೆ ಅಲ್ಲಿ ಜಿಜ್ಞಾಸುಗಳ ಗುಂಪು. ನೂರಾರು ಪ್ರಶ್ನೆಗಳು, ಚರ್ಚೆ, ವಿರೋಧ; ನಂತರ ಸಮಂಜಸವಾದ ಉತ್ತರಗಳನ್ನು ಪಡೆಯುವುದು. ಹೀಗೆ ಸಂತಸದ ದಿನಚರಿಯಲ್ಲಿ ತಮಗೆ ತಿಳಿಯದಂತೆಯೇ ಅನೇಕ ವಿಷಯಗಳ ಪರಿಚಯಮಾಡಿಕೊಳ್ಳುತ್ತಿದ್ದರು. ಕಿಶೋರಿ ಲಾಲರ ಚಿಂತನ, ಪ್ರಯೋಗ, ಸಾಧನೆಗಳ ಪ್ರತೀಕವಾಯಿತು. ಸಬರಮತಿಯ ಶಾಲೆ, ಗಾಂಧೀ ಜೀವನ ತತ್ವಗಳ ಪ್ರಗತಿಗೆ ದೊಡ್ಡ ಶಕ್ತಿಯಾಗಿ ಪರಿಣಮಿಸಿದರು ಕಿಶೋರಿಲಾಲ್ ಮಶ್ರುವಾಲಾ. ಕೊನೆಯವರೆಗೂ ಈ ಬಾಂಧವ್ಯ ಉಳಿಯಿತು.

ಬಾಪೂಜಿಯ ಕರೆ

ಎರಡು ವರ್ಷ ರಾಷ್ಟ್ರೀಯ ಶಾಲೆಯ ಕೆಲಸ ಮಾಡಿ ಕಿಶೋರಿಲಾಲರು ಮುಂಬಯಿಗೆ ಹಿಂತಿರುಗಿದ್ದರು. ಅಣ್ಣನವರ ವ್ಯಾಪಾರೀಸಂಸ್ಥೆ ತುಂಬ ಕಷ್ಟದ ದಿನಗಳನ್ನೆದುರಿಸುತ್ತಿತ್ತು. ಸಹಾಯಕ್ಕಾಗಿ ನಿಂತುಬಿಟ್ಟರು ಕಿಶೋರಿಲಾಲ್. ಕೆಲವು ಕಾಲದ ಮೇಲೆ ಗಾಂಧೀಜಿಯ ಪತ್ರ ಬಂತು- ತುಂಬ ಆತ್ಮೀಯತೆಯಿಂದ ಬರೆದಿದ್ದರು, ಅಣ್ಣನನ್ನೂ ಅವರ ಮಕ್ಕಳನ್ನೂ ಕರೆದುಕೊಂಡು ಸಬರಮತಿಗೆ ಹಿಂತಿರುಗಲು ಕೋರಿದ್ದರು. ‘ನಿನ್ನ ಸಹಜ ಸ್ವಭಾವ, ಔದಾರ್ಯ, ಸರಳತೆ, ಬಡವರಂತೆ ಜೀವಿಸುವು ದರೆಡೆಗೆ ನಿನ್ನನ್ನೆಳೆಯುತ್ತದೆ. ಆತ್ಮಸಂತೋಷವಿದ್ದರೆ ಮಾತ್ರವೇ ಜೀವನ ಹೂವಿನಂತೆ ಅರುಳುತ್ತದೆ. ಧನ ಸಂಗ್ರಹ ದಿಂದಲ್ಲ. ಹಿಂತಿರುಗಿ ಬಂದು ಇಲ್ಲೇ ನಿನ್ನ ಅಣ್ಣನ ಸಂಸಾರವನ್ನೂ ಸರಳರೀತಿಯಲ್ಲಿ ಪೋಷಿಸುವುದು ಒಳ್ಳೆಯದು’ ಎಂದು ಬಿಚ್ಚು ಮನಸ್ಸಿನಿಂದ ನುಡಿದಿದ್ದರು ಬಾಪೂ.

ಕಿಶೋರಿಲಾಲರಿಗೆ ಈ ವಿಶ್ವಾಸದ ಕರೆಯನ್ನು ತಡೆಯಲಾಗಲಿಲ್ಲ. ೧೯೨೦ರಲ್ಲಿ ಆಶ್ರಮಕ್ಕೆ ಮರಳಿ ಬಂದರು.

ಗುಜರಾತ್ ವಿದ್ಯಾಪೀಠ

ರಾಷ್ಟ್ರೀಯ ಅಸಹಕಾರ ಚಳವಳಿಯನ್ನು ಆ ವೇಳೆಗೆ ಪ್ರಾರಂಭಿಸಿದ್ದರು ಗಾಂಧೀಜಿ. ರಾಜಕೀಯ ವಾತಾವರಣ ಬಿಗಡಾಯಿಸುತ್ತಿತ್ತು. ಅದೇ ವರ್ಷ ಕಲ್ಕತ್ತದ ಐತಿಹಾಸಿಕ ಅಧಿವೇಶನ. ಗುಜರಾತ್ ರಾಜ್ಯ ಸಮ್ಮೇಳನವೊಂದು ಪೂರ್ವಭಾವಿಯಾಗಿ ನಡೆಯಿತು. ಸ್ವಾತಂತ್ರ್ಯ ಚಳವಳಿ ಯನ್ನು ಬೆಂಬಲಿಸುವ ನಿರ್ಣಯ ಆಯಿತು. ಅದೇ ಅಧಿವೇಶನದಲ್ಲಿ ರಾಷ್ಟ್ರೀಯ ಶಿಕ್ಷಣದ ಬಗ್ಗೆ ಒಂದು ಮಹತ್ವದ ನಿರ್ಣಯ ಮಾಡಿದರು. ಅಂದಿನ ಬ್ರಿಟಿಷ್ ರಾಜ್ಯದ ಶಿಕ್ಷಣಕ್ರಮ ಹೇಗೆ ನಮ್ಮ ಸಾಂಸ್ಕೃತಿಕ ಮತ್ತು ಬೌದ್ಧಿಕ ದಾಸ್ಯಕ್ಕೆ ಕಾರಣ ಎಂದು ಗಾಂಧೀಜಿ ವಿವರಿಸಿ ಆ ಶಾಲೆಗಳನ್ನು ಬಹಿಷ್ಕರಿಸಿ ಎಂದು ಕರೆಯಿತ್ತರು. ಜೊತೆಗೆ ಗುಜರಾತಿನಲ್ಲಿ ರಾಷ್ಟ್ರೀಯ ಶಿಕ್ಷಣಕ್ರಮದ ಯೋಜನೆ ಸಿದ್ಧಮಾಡಿ ಜಾರಿಗೆ ತರಲು ಒಂದು ಸಮಿತಿ ಮಾಡಿದರು. ಇಂದುಲಾಲ್ ಯಾಜ್ಞಿಕ್ ಮತ್ತು ಕಿಶೋರಿಲಾಲ್ ಮಶ್ರುವಾಲಾ ಅವರನ್ನು ಸರ್ವಾನುಮತದಿಂದ ಸಂಚಾಲಕರನ್ನಾಗಿ ಮಾಡಲಾಯಿತು. ಆ ಸಮಿತಿ ಗುಜರಾತ್ ವಿದ್ಯಾಪೀಠದ ವಿವರವಾದ ಘಟನೆ ಮತ್ತು ಕಾರ್ಯವಿಧಾನ ಗಳನ್ನು ನಿರೂಪಿಸಿಕೊಟ್ಟಿತು.

೧೯೨೦ರ ಅಕ್ಟೋಬರ್‌ನಲ್ಲಿ ಗುಜರಾತ್ ವಿದ್ಯಾಪೀಠ ಸ್ಥಾಪಿತವಾಯಿತು. ಗಾಂಧೀಜಿಯವರೇ ಅದರ ಕುಲಪತಿ ಸ್ಥಾನವನ್ನಲಂಕರಿಸಿದರು. ಗಿದ್ವಾನಿ ಕುಲನಾಯಕರು; ಕಿಶೋರಿಲಾಲರು ಮಹಾಮಾತ್ರ (ಸೆಕ್ರಟರಿ ಜನರಲ್)ರಾಗಿ ನೇಮಿಸಲ್ಪಟ್ಟರು. ಆ ಮಹಾ ವಿದ್ಯಾಪೀಠ ಬೃಹತ್ತಾಗಿ ಬೆಳೆದು ರಾಷ್ಟ್ರೀಯ ಶಿಕ್ಷಣ ಆಂದೋಲನದಲ್ಲಿ ಪ್ರಧಾನಪಾತ್ರ ವಹಿಸಿತು.

ಸ್ವಾತಂತ್ರ್ಯಕ್ಕಾಗಿ ನಡೆಯುತ್ತಿದ್ದ ಅಹಿಂಸಾ ಸಮರದಲ್ಲಿ ಧುಮುಕಿ ಶಾಲೆಗಳನ್ನು ಬಹಿಷ್ಕರಿಸಿ ಬಂದ ಶಿಕ್ಷಕ ಸತ್ಯಾಗ್ರಹಿ ಗಳಿಗೂ, ವಿದ್ಯಾರ್ಥಿಗಳಿಗೂ ಒಂದು ಮಾದರಿ ವಿದ್ಯಾಪೀಠ ವೆಂದು ಗುಜರಾತ್ ವಿದ್ಯಾಪೀಠ ಖ್ಯಾತಿಗಳಿಸಿತ್ತು. ಕಿಶೋರಿಲಾಲರು ಸತ್ಯಾಗ್ರಹ ನಿಯಮಗಳ ಅತ್ಯಂತ ದಕ್ಷ ಶಿಕ್ಷಣ ಕೊಟ್ಟು ವಿದ್ಯಾವಂತ ತರುಣರನ್ನು ರಾಷ್ಟ್ರೀಯ ಅಂದೋಲನಕ್ಕೆ ಅಣಿ ಮಾಡಿದರು.

ವಿದ್ಯಾವಂತರನ್ನು ಬ್ರಿಟಿಷ್ ಸಾಮ್ರಾಜ್ಯದ ಗುಲಾಮರನ್ನಾಗಿ ಮಾಡುತ್ತಿದ್ದ ವ್ಯಾಸಂಗದ ಬದಲು ರಾಷ್ಟ್ರೀಯ ಉತ್ಥಾನಕ್ಕಾಗಿ ಅಣಿಮಾಡಲು ಉತ್ಕೃಷ್ಟ ರೀತಿಯ ಉನ್ನತ ಶಿಕ್ಷಣ ಆಗ ರೂಪುಗೊಳ್ಳುತ್ತಿತ್ತು. ದೇಶ ವಿಮೋಚನೆಗೆ ಅಹಿಂಸೆ, ಸತ್ಯಾಗ್ರಹ, ಸ್ವದೇಶೀ, ಸರ್ವಧರ್ಮ ಸಮಭಾವ ಹೇಗೆ ಯುವಕರಲ್ಲಿ ಮೂಡಿಬರಬೇಕೆಂದು ವಿಚಾರಮಾಡಿದರು ಕಿಶೋರಿಲಾಲರು. ನೂಲುವುದು, ನೇಯುವುದು, ಸಾಮೂಹಿಕ ಜೀವನ, ರಾಷ್ಟ್ರೀಯ ಸಂಸ್ಕೃತಿಯ ಅಧ್ಯಯನ, ಸತ್ಯಾಗ್ರಹಿಯ ನಿಯಮಪಾಲನೆ ಕಡ್ಡಾಯ ಅಂಶಗಳಾಗಿ ಶಿಕ್ಷಣದಲ್ಲಿ ಸೇರಿತು.

ಮಧ್ಯೆ ಕೆಲಕಾಲ ಕಿಶೋರಿಲಾಲರು ವಿದ್ಯಾಪೀಠದ ಕೆಲಸದಲ್ಲಿ ಕ್ಲಿಷ್ಟ ಸಮಸ್ಯೆಗಳನ್ನು ಎದುರಿಸಬೇಕಾಯಿತು. ಧಾರ್ಮಿಕ ಪ್ರವೃತ್ತಿ ಅವರನ್ನು ಏಕಾಂತತೆ, ಆತ್ಮ ಸಾಕ್ಷಾತ್ಕಾರಗಳಡೆಗೆ ಸೆಳೆಯಿತು. ಕೇದಾರನಾಥಜಿ ಅವರ ಸ್ನೇಹವಾಯಿತು. ತತ್ವಜ್ಞಾನ ಮತ್ತು ಅನುಷ್ಠಾನಗಳಿಗೆ ಹೆಸರಾ ದವರು ಅವರು. ಗಾಂಧೀಜಿಯ ನಿಕಟಾನುವರ್ತಿಗಳು. ಅವರ ಮಾರ್ಗದರ್ಶನದಲ್ಲಿ ಅಬು ಪರ್ವತದಲ್ಲಿ ಹಲವು ತಿಂಗಳು ಏಕಾಂತದಲ್ಲಿದ್ದು ತಪಶ್ಚರ್ಯೆ ನಡೆಸಿದರು ಕಿಶೋರಿಲಾಲರು. ಮನಸ್ಸಿಗೆ ಸಮಾಧಾನ ಸಿಕ್ಕಿತು. ಸಂಸಾರದಲ್ಲೇ ಜಿಗುಪ್ಸೆಗೊಂಡು ದೂರ ಹೋಗಿದ್ದವರು ಮತ್ತೆ ಹಿಂತಿರುಗುವಂತಾಗಿ ಆಶ್ರಮಕ್ಕೆ ಬಂದರು. ಆಗ ವಿದ್ಯಾಪೀಠದ ನಿರ್ದೇಶಕರಾಗಿದ್ದ ಸರ್ದಾರ್ ವಲ್ಲಭವಾಯಿ ಪಟೇಲರು ಕಿಶೋರಿಲಾಲರ ಮನವೊಲಿಸಿ ಮತ್ತೆ ವಿದ್ಯಾಪೀಠದ ಸಂಚಾಲಕರನ್ನಾಗಿ ಮಾಡಿದರು.

ಗುಜರಾತ್ ವಿದ್ಯಾಪೀಠದ ಆಶ್ರಯದಲ್ಲಿ ರಾಷ್ಟ್ರೀಯ ಶಿಕ್ಷಣ ಸಮ್ಮೇಳನ ಗಾಂಧೀಜಿಯ ಅಧ್ಯಕ್ಷತೆಯಲ್ಲಿ ನಡೆಯಿತು. ಗ್ರಾಮೀಣ ಪುನರುತ್ಥಾನ, ಖಾದಿ ಶಿಕ್ಷಣ ದೇಶಭಾಷೆಗಳ ಬೆಳವಣಿಗೆ ಇವುಗಳಲ್ಲಿ ಪ್ರತಿ ವಿದ್ಯಾರ್ಥಿಗೂ ಕಡ್ಡಾಯಶಿಕ್ಷಣ ದೊರೆಯಬೇಕೆಂದು ನಿರ್ಣಯವಾಯಿತು. ಪ್ರಾಥಮಿಕ ವಿದ್ಯಾಭ್ಯಾಸ ಪ್ರತಿ ಹಳ್ಳಿಗೂ ವ್ಯವಸ್ಥೆಯಾಗುವಂತೆ ಸ್ವಯಂಸೇವಕರಿಗೆ ನಿರ್ದೇಶಿಸಲಾಯಿತು.

ಅದೇ ವರ್ಷ ಕಿಶೋರಿಲಾಲರು ತಮ್ಮ ಸಂಚಾಲಕ ಪದವಿಯನ್ನು ಬಿಟ್ಟುಕೊಟ್ಟು ಆತ್ಮಸಾಧನೆಯಲ್ಲಿ ತೊಡಗಿದರು. ಗೋಮತಿ ದೇವಿಯವರು ತೀವ್ರ ರೋಗಗ್ರಸ್ತ ರಾದರು. ಹವಾ ಬದಲಿಸಲು ದೇವಲಾಲಿಗೆ ಪ್ರಯಾಣ ಮಾಡಿದರು. ಅತ್ತಿಗೆ ನಿಧನರಾದರು. ಮುಂದೆ ೧೯೨೮ರ ವರೆಗೂ ಅವರು ಆಶ್ರಮಕ್ಕೆ ಹಿಂತಿರುಗಲಾಗಲಿಲ್ಲ.

ತಾತ್ವಿಕ ಜಿಜ್ಞಾಸೆ.

ಆರು ವರ್ಷಗಳಲ್ಲೇ ಕಿಶೋರಿಲಾಲ್ ಗಾಂಧೀಜಿಯ ಅತ್ಯಂತ ನಿಕಟವರ್ತಿಗಳಲ್ಲೊಬ್ಬರಾಗಿದ್ದರು. ಆದರೆ ತಮ್ಮ ಸ್ವತಂತ್ರ ಅಭಿಪ್ರಾಯಗಳನ್ನಿಟ್ಟುಕೊಂಡು ಅನೇಕ ವೇಳೆ ಗಾಂಧೀಜಿಯ ನಿರ್ಣಯಗಳನ್ನೊಪ್ಪುತ್ತಿರಲಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಅವರ ರೋಗಗ್ರಸ್ತ ಸ್ಥಿತಿಯಿಂದ ಆಶ್ರಮ ಜೀವನಕ್ಕೆ ಹೊಂದಿಕೊಳ್ಳುವುದು ಕಷ್ಟವಾಗಿತ್ತು. ಕಾಕಾ ಕಾಲೇಲ್ಕರಿಗೆ ೧೯೨೮ರಲ್ಲಿ, ‘ನನ್ನ ತಂದೆ ಕಾಲವಾದ ನಂತರ ಪಿತೃವಾತ್ಸಲ್ಯದಿಂದ ವಂಚಿತನಾದ ನನಗೆ ಬಾಪೂ ಪ್ರೇಮಪೂರ್ಣ ತಂದೆಯಂತೆ ನನ್ನನ್ನಂಗೀಕರಿಸಿದರು. ತಮ್ಮ ಬಳಗದಲ್ಲಿ ಸ್ಥಾನ ಕೊಟ್ಟರು. ಒಮ್ಮೆ ಗಾಂಧೀಜಿಯವರೇ ಉತ್ಕಟ ರೋಗದಿಂದ ಮಲಗಿದಾಗ ನನ್ನನ್ನು ಆಶ್ರಮದ ಜವಾಬ್ದಾರಿ ತೆಗೆದುಕೊಂಡು ಅಲ್ಲೇ ವಾಸಿಸುವಂತೆ ಅಗ್ರಹ ಮಾಡಿದ್ದರು. ಯಾವುದಾದರೊಂದು ಜವಾಬ್ದಾರಿ ವಹಿಸಿ, ಆಶ್ರಮದಲ್ಲಿ ಉಪಯುಕ್ತ ಸೇವೆ ಸಲ್ಲಿಸದೆ ಸುಮ್ಮನೆ ಇರಲು ನನ್ನಿಂದಾಗದು.  ಯೋಚಿಸುತ್ತಿದ್ದೇನೆ’ ಎಂದು ಬರೆದರು.

ಗಾಂಧೀಜಿಗೂ ಮಶ್ರುವಾಲಾರ ಸ್ವತಂತ್ರ ವ್ಯಕ್ತಿತ್ವದ ಬಗ್ಗೆ ಗೌರವವಿತ್ತು. ಒಮ್ಮೆ ಹೀಗೆಂದರು, ‘ಕಿಶೋರಿ ಲಾಲ್ ಭಾಯಿ ಅವರ ಸತ್ಯನಿಷ್ಠೆ ನನ್ನದಕ್ಕೇನೂ ಕಮ್ಮಿ ಇಲ್ಲ. ಆದರೆ ಅವರ ಮಾರ್ಗ ನನ್ನಿಂದ ಸ್ವಲ್ಪ ಭಿನ್ನ. ಅವರದು ಅಹಿಂಸೆಯ ಇನ್ನೊಂದು ಸಮಾನಾಂತರ ಪಥ.’

ಸೆರೆಮನೆ

ಮುಂಬಯಿಯಲ್ಲಿರುವಾಗ ಅಣ್ಣ ಬಾಲೂಭಾಯಿ ಕಾಲವಾದರು. ದೇಶ ೧೯೩೦ರ ಪ್ರಸಿದ್ಧ ಉಪ್ಪಿನ ಸತ್ಯಾಗ್ರಹದ ಹೊಸ್ತಿಲಿನಲ್ಲಿತ್ತು. ಕಿಶೋರಿಲಾಲರು ಮುಂಬಯಿಯ ವಿಲೇಪಾರ‍್ಚೆ ರಾಷ್ಟ್ರೀಯ ಶಾಲೆಯಲ್ಲಿ ಕೆಲಸ ಮಾಡಲು ನಿಶ್ಚಯಿಸಿ ಒಂದು ವರ್ಷ ಕಾರ್ಯ ನಿರ್ವಹಿಸಿದರು. ಜಮನಲಾಲ್ ಬಜಾಜ್ ಉಪ್ಪಿನ ಸತ್ಯಾಗ್ರಹ ದಲ್ಲಿ ಭಾಗವಹಿಸಿ ದಸ್ತಗಿರಿಯಾದರು. ನ್ಯಾಯಾಲಯ ಎರಡು ವರ್ಷ ಕಠಿಣ ಸಜಾ ವಿಧಿಸಿತು.

ನಾಸಿಕ ಜೈಲಿನಲ್ಲಿ ಹಲವು ಸಮಾಜವಾದಿ ಮಿತ್ರರೂ ಸಾಮ್ಯವಾದಿಗಳೂ ಇದ್ದರು. ವಿಪುಲವಾದ ಚರ್ಚೆ, ಜಿಜ್ಞಾಸೆ, ತರ್ಕ ನಡೆಯುತ್ತಿತ್ತು. ಗಾಂಧೀವಾದಕ್ಕೆ ಅಧಿಕೃತ ಆಸರೆಯಾಗಿದ್ದವರು ಮಶ್ರುವಾಲಾ. ಅವರು ಸಮಾಜವಾದಿ ಸಾಹಿತ್ಯ ಅಭ್ಯಾಸ ಮಾಡಿದರು. ಗಾಂಧೀ ವಿಚಾರ ಅಧ್ಯಯನಗೋಷ್ಠಿ ನಡೆಸಿದರು. ಅಲ್ಲೇ ಅವರ ಪ್ರಸಿದ್ಧ ಗ್ರಂಥ ‘ಗಾಂಧೀವಿಚಾರದೋಹನ’ ಸಿದ್ಧವಾಯಿತು. ಆ ವೇಳೆ ಗಾಗಲೇ ಅವರ ‘ಜೀವನ ಶೋಧನೆ’ ಗ್ರಂಥ ಪ್ರಕಟವಾಗಿತ್ತು. ಲೇಖನಕಲೆಯಲ್ಲಿ ಪ್ರಸಿದ್ಧರೂ ಆಗಿದ್ದರು.

ಗಾಂಧೀ-ಇರ‍್ವಿನ್ ಒಪ್ಪಂದವಾಯಿತು. ೧೯೩೨ರಲ್ಲಿ ಅವರ ಬಿಡುಗಡೆ ಆಯಿತು.

ಇದೇ ನನ್ನ ಸೌಭಾಗ್ಯ

ಮುಚ್ಚಿಹೋಗಿದ್ದ ವಿದ್ಯಾಪೀಠ,  ರಾಷ್ಟ್ರೀಯ ಶಾಲೆಗಳು ಮತ್ತೆ ಪ್ರಾರಂಭವಾದವು. ಸತ್ಯಾಗ್ರಹ ಸಮರ ಮತ್ತೆ ಎಂದು ಶುರುವಾಗುವುದೋ ಎಂಬ ಶಂಕೆಯಿಂದ ತಾತ್ಕಾಲಿಕ ಅಲ್ಪಕಾಲದ  ಶಿಕ್ಷಣ ತರಗತಿಗಳನ್ನು ನಡೆಸುತ್ತಿದ್ದರು.

೧೯೩೨ರಲ್ಲಿ ಗಾಂಧೀಜಿ ಇಂಗ್ಲೆಂಡಿಗೆ ಹೋಗಿ ಭಾರತದ ಪ್ರಜಾಪ್ರತಿನಿಧಿಯಾಗಿ ದುಂಡುಮೇಜಿನ ಪರಿಷತ್ತಿನಲ್ಲಿಭಾಗವಹಿಸಿದರು. ಬ್ರಿಟಿಷ್ ಸರ್ಕಾರ ಒಪ್ಪಂದಗಳನ್ನೆಲ್ಲ ಮುರಿದಿತ್ತು. ಸ್ವಾತಂತ್ರ್ಯದ ಬಗ್ಗೆ ಯಾವ ಒಪ್ಪಂದವೂ ಆಗಲಿಲ್ಲ. ಗಾಂಧೀಜಿ ಹಿಂತಿರುಗಿದೊಡನೆ ಮತ್ತೆ ದಸ್ತಗಿರಿ ಮಾಡಲ್ಪಟ್ಟರು. ದೇಶದ ನಾಯಕರನ್ನೆಲ್ಲ ಒಟ್ಟಿಗೆ ಬಂಧಿಸಿದರು. ಕಿಶೋರಿಲಾಲರೂ ಮತ್ತೆ ಸೆರೆಮನೆ ಸೇರಬೇಕಾಯಿತು. ನ್ಯಾಯಾಲಯದಲ್ಲಿ ಅವರು ಕೊಟ್ಟ ಹೇಳಿಕೆ ಇತಿಹಾಸ ಪ್ರಸಿದ್ಧವಾಯಿತು. ಅದರ ಕೆಲವು ಮಾತುಗಳು ಹೀಗಿದ್ದವು-

‘ಮಾನವ ಜಾತಿಯಲ್ಲಿರುವ ಹೇಳಲಾರದಷ್ಟು ಕ್ರೌರ‍್ಯ ಅತ್ಯಾಚಾರಗಳನ್ನು ದೂರಮಾಡಲು ನಮಗಿರುವುದು ಒಂದೇ ಮಾರ್ಗ-ಈ ಅಹಿಂಸಕ ಸತ್ಯಾಗ್ರಹದ ಯಜ್ಞಕುಂಡ ದಲ್ಲಿ ಸ್ವಸಂತೋಷದಿಂದ ಬಲಿದಾನ ಮಾಡುವುದು. ಈ ಆಹುತಿ ಅತ್ಯಂತ ಪವಿತ್ರವಾಗಿರುವುದು ಅಗತ್ಯ. ಇಂಥ ಪಾವಿತ್ರ್ಯತೆ ಅಥವಾ ಅಂಥ ಪ್ರಯತ್ನಶೀಲತೆ ಇರುವ ಪ್ರಾಣಿಯೊಬ್ಬನ ಬಲಿದಾನದಿಂದ ಸಾವಿರಾರು ಪ್ರಾಣಿಗಳ ರಕ್ಷಣೆ ಸಾಧ್ಯ. ಭಾರತದ ದಾರುಣ ದಾರಿದ್ರ್ಯ ಹಸಿವು ದಾಸ್ಯಗಳು ಅಸಹನೀಯ. ಸ್ವಾಭೀಮಾನಿಯಾದವನು ಜೀವಿಸುವುದೇ ಕಷ್ಟವೆನಿಸಿದೆ. ಬ್ರಿಟಿಷ್ ಸಾಮ್ರಾಜ್ಯವಾದವೇ ಇದರ ಕಾರಣ. ಭಾರತದ ನ್ಯಾಯಬೇಡಿಕೆಗಳನ್ನು ಧಿಕ್ಕರಿಸಿ ಬ್ರಿಟಿಷ್ ಪ್ರಭುತ್ವ ಅನ್ಯಾಯ ಮಾಡಿದೆ. ಆಂಗ್ಲೇಯರಿಗೂ ಇದು ಶ್ರೇಯಸ್ಕರವಲ್ಲ.’

‘ಮಾನವ ಸಮಾಜದ ಸೇವೆಯಲ್ಲಿ ನನ್ನ ಬಲಿದಾನ ವನ್ನರ್ಪಿಸುವುದೊಂದೇ ಮಾರ್ಗ. ಎಂಥ ಶಿಕ್ಷೆಯನ್ನಾದರೂ ಸಂತೋಷದಿಂದ ಅನುಭವಿಸುತ್ತೇನೆ. ಇದೇ ನನ್ನ ಸೌಭಾಗ್ಯ.’

ಈ ಸಾರಿಯೂ ಮತ್ತೆ ಎರಡು ವರ್ಷ ಶಿಕ್ಷೆ ವಿಧಿಸಲಾಯಿತು. ಕಿಶೋರಿಲಾಲರು ಜೈಲಿನಲ್ಲಿರುವಾಗ ಶುದ್ಧ ಖಾದಿ ಬಟ್ಟೆಯನ್ನಲ್ಲದೆ ಬೇರೆ ಹಾಕಲು ನಿರಾಕರಿಸಿದರು. ಜೈಲಿನ ಬಟ್ಟೆ ಖಾದಿಯಲ್ಲ. ಖಾದಿ ಕೊಡುವ ತನಕ ಒಂದು ಹೊತ್ತು ಊಟ ಬಿಟ್ಟರು. ಸತ್ಯಾಗ್ರಹಿಗಳು ಸೇರಿ ಚರಕದಲ್ಲಿ ನೂತು ಬಟ್ಟೆ ತಯಾರಿಸಿದ ಮೇಲೆ ಊಟ ಮಾಡಿದರು. ಎಲ್ಲರೂ ತಮ್ಮ ಬಟ್ಟೆಗಾಗುವಷ್ಟು ನೂಲು ಸಿದ್ಧಮಾಡಲು ಜೈಲಿನ ಅಧಿಕಾರಿಗಳು ಚರಕಗಳನ್ನೊದಗಿಸಬೇಕಾಯಿತು.

ಗಾಂಧೀಜಿ ಆಗ ಯರವಾಡಾ ಸೆರೆಮನೆಯಲ್ಲಿದ್ದರು. ಕಿಶೋರಿಲಾಲರಿಗೆ ಅನೇಕ ಪತ್ರಗಳನ್ನು ಬರೆದು ರಚನಾತ್ಮಕ ಕಾರ್ಯದ ಬಗ್ಗೆ ವಿಚಾರವಿನಿಮಯ ಮಾಡುತ್ತಿದ್ದರು. ಸತ್ಯಾಗ್ರಹ ತತ್ವಗಳ ಬಗ್ಗೆ ಚರ್ಚಿಸುತ್ತಿದ್ದರು.

ಎರಡು ವರ್ಷ ಶಿಕ್ಷೆ ಮುಗಿಸುವುದರೊಳಗೆ ಕಿಶೋರಿಲಾಲರ ಆರೋಗ್ಯ ಪೂರಾ ಹದಗೆಟ್ಟಿತ್ತು. ಬಿಡುಗಡೆಯಾದ ಮೇಲೆ ಮುಂಬಯಿ ದೇವಲಾಲಿ ಮತ್ತು ಆಕೋಲಾಗಳಲ್ಲಿ ಬಂಧುಗಳೊಡನಿದ್ದು ಚಿಕಿತ್ಸೆ ಪಡೆದರು. ೧೯೩೪ರಲ್ಲಿ ವಾರ್ಧಾಕ್ಕೆ ಬಂದು ಜಮನಲಾಲ ಬಜಾಜರ ಸೇವಾಕ್ಷೇತ್ರದಲ್ಲಿ ನೆಲಸಿದರು.

ಗಾಂಧೀ ಸೇವಾಸಂಘ

ಸಬರಮತಿ ಆಶ್ರಮ ಬಿಟ್ಟು ಗಾಂಧೀಜಿ ವಾರ್ಧಾದಲ್ಲಿ ವಾಸಮಾಡತೊಡಗಿದ್ದರು. ವಿನೋಬಾಜಿ ಅದಕ್ಕೆ ಮುಂಚೆಯೇ ಅಲ್ಲಿದ್ದರು. ಮಶ್ರುವಾಲಾ, ಜೆ.ಸಿ.ಕುಮಾರಪ್ಪ, ಸ್ವಾಮಿ ಆನಂದ್, ಪ್ಯಾರಿಲಾಲ್ ನಯ್ಯಾರ್, ಮಹದೇವ ದೇಸಾಯಿ, ಭನ್ಸಾಲಿ ಭಾಯಿ ಇವರೆಲ್ಲರೂ ಈ ಸೇವಾ ಕೇಂದ್ರದಲ್ಲಿ ಒಟ್ಟಾದರು. ಖಾದಿ ಗ್ರಾಮೋದ್ಯೋಗ ಚಳವಳಿ, ಅಸ್ಪ್ರಶ್ಯತಾ ನಿವಾರಣೆ, ಮೂಲಶಿಕ್ಷಣ ಪ್ರಚಾರ, ಜಾತೀಯ ಐಕ್ಯತೆ, ರಾಷ್ಟ್ರಭಾಷಾ ಪ್ರಚಾರ, ಕುಷ್ಠರೋಗಿಗಳ ಸೇವೆ ಇಂಥ ಹಲವು ಮುಖಗಳಲ್ಲಿ ಗಾಂಧೀಜಿ ಸಮಾಜ ಪರಿವರ್ತನೆಯ ತೀವ್ರ ಕಾರ‍್ಯಕ್ರಮಗಳನ್ನು ಕೈಗೊಂಡರು. ಈ ಬಳಗದಲ್ಲಿ ಕಿಶೋರಿಲಾಲರು ಹಿರಿಯ ಮಾರ್ಗದರ್ಶಕದಲ್ಲಿ ಒಬ್ಬ ರಾದರು. ಗಾಂಧೀಜಿ ಮತ್ತೊಂದು ವಲಯದಲ್ಲಿ ಸ್ವತಂತ್ರ ಭಾರತದಲ್ಲಿನ ಸರ್ವೋದಯ ಸಮಾಜದ ರೂಪರೇಷ ಗಳನ್ನೂ ಸೃಷ್ಟಿಸಿಕೊಟ್ಟರು. ಈ ಕಾರ್ಯದಲ್ಲಿ ಅವರಿಗೆ ಸಹಾಯಕರಾಗಿ ನಿಂತ ಮಹಾ ತಪಸ್ವಿಗಳಲ್ಲಿ, ಅವರಂತೆಯೇ ಗಂಭೀರವಾಗಿ ಚಿಂತನೆ ಮಾಡುತ್ತಿದ್ದವರಲ್ಲಿ ಕಿಶೋರಿಲಾಲ್ ಮಶ್ರುವಾಲಾ ಪ್ರಮುಖರು.

ಗಾಂಧೀ ಜೀವನ ಮಾರ್ಗದ ಮೂಲ ತತ್ವಗಳನ್ನು ಅಂಗೀಕರಿಸಿ ಅಹಿಂಸಕ ಕ್ರಾಂತಿಮಾರ್ಗದಲ್ಲಿ ಶ್ರದ್ಧೆ ಇದ್ದವರ ಅಖಿಲ ಭಾರತ ಸಂಘವೊಂದನ್ನು ೧೯೩೪ರಲ್ಲಿ ಗಾಂಧೀಜಿಯೇ ಸ್ಥಾಪಿಸಿದರು. ಗಾಂಧೀ ಸೇವಾಸಂಘ ಎಂದು ಹೆಸರಾಯಿತು. ಜಮನಲಾಲ ಬಜಾಜರು ಸ್ವಲ್ಪ ಕಾಲ ಅಧ್ಯಕ್ಷರಾದರು. ನಂತರ ಸದಸ್ಯರೆಲ್ಲ ಸೇರಿ ಕಿಶೋರಿ ಲಾಲರನ್ನು ಸರ್ವಾನುಮತದಿಂದ ಸಂಘದ ಅಧ್ಯಕ್ಷರನ್ನಾಗಿ ಮಾಡಿದರು. ಅನೇಕರಿಗೆ ಅಲ್ಲಿನ ನಿಯಮಗಳು ಕಠಿಣ ವೆನಿಸಿದವು. ತತ್ವನಿಷ್ಠೆ ಉಳಿಯಲು ಆ ನಿಯಮಗಳು ಅಗತ್ಯ ಎಂದು ಕಿಶೋರಿಲಾಲರು ವಾದಿಸಿದರು. ಸಂಘದ ಸದಸ್ಯರು ರಾಜ್ಯಾಡಳಿತ ಸಭೆಗಳಲ್ಲಿ ಸದಸ್ಯರಾಗುವುದು ನಿಷೇಧವಾಗಿತ್ತು. ಚುನಾವಣೆಗಳಲ್ಲಿ ಸ್ಪರ್ಧಿಸುವಂತಿರಲಿಲ್ಲ. ರಾಜಕೀಯ ಹೋರಾಟದಲ್ಲಿ ತೊಡಗಿದ್ದ ಕಾಂಗ್ರೆಸ್ ಸಂಸ್ಥೆ ಮತ್ತು ರಾಜಕೀಯದಿಂದ ಪ್ರತ್ಯೇಕವಾಗಿದ್ದ ರಚನಾತ್ಮಕ ಸಂಸ್ಥೆಗಳು ಬೇರೆಯಾದವು. ಗಾಂಧೀ ಶಕ್ತಿಯೇ ಎರಡಕ್ಕೂ ಮೂಲ. ಸ್ವಾತಂತ್ರ್ಯ ಬಂದ ಮೇಲೆ ಗಾಂಧೀ ಕನಸಿನ ಗ್ರಾಮ ಸ್ವರಾಜ್ಯದ ಸ್ಥಾಪನೆಯಾಗಲು ಸವೋದಯ ಮಾರ್ಗ ವೊಂದೇ ಎಂದು ಗಾಂಧೀ ಸೇವಾ ಸಂಘ ನಿರ್ಣಯಿಸಿತು. ರಾಜ್ಯಶಕ್ತಿಯ ಮೂಲಕವೇ ಇದು ಸಾಧ್ಯ ಎನ್ನುವವರೂ ಇದ್ದರು. ಹೀಗಾಗಿ ಆದರ್ಶ ಅಹಿಂಸೆ, ಆದರ್ಶ ಸತ್ಯನಿಷ್ಠೆಗಳ ಬಗ್ಗೆ ಚರ್ಚೆ ನಡೆಯಿತು.

ಮಾರ್ಗ ಸ್ಪಷ್ಟ ಮಾಡಿಕೊಳ್ಳಲು

೧೯೪೦ರಲ್ಲಿ ಕಲ್ಕತ್ತಾದಲ್ಲಿ ಸಂಘದ ಅಧಿವೇಶನ ನಡೆಯಿತು. ಇನ್ನೂ ಸ್ಪಷ್ಟಾಭಿಪ್ರಾಯಗಳು ಮೂಡಿ ಬರದೇ ಇರುವುದರಿಂದ ಸಂಘವನ್ನು ಸದ್ಯಕ್ಕೆ ವಿಸರ್ಜಿಸಬೇಕೆಂದು ನಿರ್ಣಯವಾಯಿತು. ‘ಸರ್ವೋದಯ’ ಎಂಬ ಮಾಸಪತ್ರಿಕೆ ಯನ್ನು ಮಾತ್ರ ಮುಂದುವರಿಸಲಾಯಿತು. ಅಹಿಂಸೆಯ ನೂತನ ಸಂಶೋಧನೆಗಳ ಕಡೆ ಕಿಶೋರಿಲಾಲರೂ ಗಾಂಧೀಜಿಯವರೂ ಗಮನ ಹರಿಸಿದರು. ಮುಂದೆ ಒಂದು ಸಮಗ್ರ ತತ್ವ ಪ್ರಣಾಳಿ ಸಿದ್ಧವಾಗಲು ಕಿಶೋರಿಲಾಲರು ವಿಪುಲವಾಗಿ ಲೇಖನಗಳನ್ನು ಬರೆದರು. ಅಹಿಂಸಕ ರಾಜ್ಯಶಾಸ್ತ್ರ, ಅರ್ಥಶಾಸ್ತ್ರ ಮತ್ತು ಸಮಾಜ ಶಾಸ್ತ್ರಗಳು ಹೇಗೆ ರೂಪಗೊಳ್ಳಬೇಕೆಂದು ವಿವರಿಸಿದರು. ಶಿಕ್ಷಣಶಾಸ್ತ್ರದಲ್ಲಿ ಪ್ರಯೋಗ ಮಾಡಲು ತೊಡಗಿದರು. ಹರಿಜನ ಪತ್ರಿಕೆ ಈ ಗ್ರಾಮ ಸ್ವರಾಜ್ಯ ಚಳವಳಿಯ ವಾಹಕವಾಯಿತು. ಸೇವಾ ಗ್ರ್ರಾಮ ರಚನಾತ್ಮಕ ಕ್ರಾಂತಿಯ ಸ್ಫೂರ್ತಿ ಚಿಲುಮೆ ಯಾಯಿತು.

ಮತ್ತೆ ಸೆರೆಮನೆ

ಎರಡನೆ ಮಹಾಯುದ್ಧ ಇಡೀ ಪ್ರಪಂಚವನ್ನು ಭೀಕರ ಹಿಂಸಾಚಾರಗಳಿಗೆ ಗುರಿಮಾಡಿತು. ದಾಸ್ಯ ರಾಷ್ಟ್ರವಾಗಿದ್ದ ಭಾರತವನ್ನು ಇಂಗ್ಲೆಂಡ್ ತನ್ನ ಜೀತದಾಳಿನಂತೆ ಅವಮಾನಿಸಿ ಯುದ್ಧಕ್ಕೆ ನೂಕಿತು. ರಾಷ್ಟ್ರನಾಯಕರನ್ನು ಕಡೆ ಗಣಿಸಿತು. ಗಾಂಧೀಜಿ ಅತ್ಯಂತ ತಾಳ್ಮೆಯಿಂದ ಇಂಗ್ಲೆಂಡಿನ ಕಷ್ಟ ಸಮಯದಲ್ಲಿ ಪ್ರತಿಭಟಿಸಬಾರದೆಂದು ಬಹುಕಾಲ ತಡೆದರು. ಕೊನೆಗೊಮ್ಮೆ ೧೯೪೭ರಲ್ಲಿ ಗಾಂಧೀಜಿ ಪ್ರಬಲ ಸತ್ಯಾಗ್ರಹದ ಕೊನೆಯ ಕರೆಯಿತ್ತರು. ‘ಭಾರತ ಬಿಟ್ಟು ತೊಲಗಿ’ ಎಂದು ಬ್ರಿಟಿಷರಿಗೆ ಎಚ್ಚರಿಕೆಯಿತ್ತು ಚಳವಳಿ ಮೊದಲಿಟ್ಟರು.

ಕಾಂಗ್ರೆಸ್ಸಿನ ಸಮಸ್ತನಾಯಕರನ್ನೂ ಗಾಂಧೀಜಿಯ ಎಲ್ಲ ಅನುಯಾಯಿಗಳನ್ನೂ ಲಕ್ಷಾಂತರ ಕಾರ್ಯಕರ್ತ ರನ್ನೂ ಸೆರೆಯಲ್ಲಿ ನೂಕಿತು ಬ್ರಿಟಿಷ್ ಸರ್ಕಾರ.

ಕಿಶೋರಿಲಾಲ್ ಮಶ್ರುವಾಲಾ ರಾಜಕೀಯಕ್ಷೇತ್ರಕ್ಕೆ ಧುಮುಕಿ ಗಾಂಧೀ ವಿಚಾರಧಾರೆಯ ಅಧಿಕೃತ ವ್ಯಾಖ್ಯಾನ ಕಾರರಾದರು. ಹರಿಜನ ಪತ್ರಿಕೆ ಸರ್ಕಾರದಿಂದ ನಿಷೇಧಿತವಾಗಿದ್ದರೂ ಕಿಶೋರಿಲಾಲರು ಪ್ರಕಟಮಾಡ ತೊಡಗಿದರು. ‘ಕ್ವಿಟ್ ಇಂಡಿಯ’ ಚಳವಳಿಯ ನಿರ್ದೇಶನ ಮಾಡಿದರು. ಸೆರೆಮನೆ ಸೇರಿದ ಮೇಲೂ, ಮಿತ್ರರ ನೆರವಿನಿಂದ ನಿರ್ದೇಶನಗಳನ್ನು ಹೊರಕ್ಕೆ ಕಳುಹಿಸಿ ಕಾರ್ಯಕರ್ತರಿಗೆ ತಲುಪಿಸುತ್ತಿದ್ದರು. ಈ ಬಗ್ಗೆ ಸರ್ಕಾರ ತೀವ್ರವಾಗಿ ಅಕ್ಷೇಪಿಸಿದಾಗ ಗಾಂಧೀಜಿಯೇ ಉತ್ತರವಿತ್ತು, “ನಾಯಕರನ್ನೆಲ್ಲ ಸೆರೆ ಹಿಡಿದು ಜನತೆಯನ್ನು ರೊಚ್ಚಿಗೆಬ್ಬಿಸಿ ದೊಂಬಿಯ ಪ್ರವೃತ್ತಿ ಬೆಳೆಯಲು ಸರ್ಕಾರವೇ ಕಾರಣ ವಾಯಿತು. ಮಶ್ರುವಾಲಾ ಅಂಥ ಶುದ್ಧ ಅಹಿಂಸಕ ಸತ್ಯಾಗ್ರಹಿಗಳೂ ಜನತೆಗೆ ತಮ್ಮ ಕೈಲಾದಷ್ಟು ಮಾರ್ಗದರ್ಶನ ಮಾಡಿದ್ದು ಸರಿ. ಅಂಥ ಶ್ರೇಷ್ಠ ಸತ್ಯನಿಷ್ಠರು ಯಾವುದನ್ನೂ ಕೇವಲ ವಿಧ್ವಂಸಕ ದೃಷ್ಟಿಯಿಂದಾಗಲೀ ಕೆಡಕು ಮಾಡುವ ಉದ್ದೇಶದಿಂದಾಗಲಿ ಮಾಡಲು ಸಾಧ್ಯವೇ ಇಲ್ಲ’ ಎಂದರು.

ಜೈಲಿನಲ್ಲಿರುವಷ್ಟು ಕಾಲ ಕಿಶೋರಿಲಾಲರು ಸತ್ಯಾಗ್ರಹ ಶಾಸ್ತ್ರವನ್ನು ವಿಸ್ತೃತ ವಿವರಣೆಗಳೊಂದಿಗೆ ಕಾರ್ಯಕರ್ತರಿಗೆ ತಿಳಿಸಲು ಅಗಾಧ ಶ್ರಮವಹಿಸಿದರು. ಅಧ್ಯಯನ ಗೋಷ್ಠಿಗಳೂ, ಚರ್ಚಾಕೂಟಗಳೂ, ಸಂವಾದ ಮಿತ್ರಮಿಲನ ಗಳೂ ಸತತವಾಗಿ ನಡೆಯುತ್ತಿದ್ದವು. ಯಾವುದೇ ರೀತಿಯ ನಿಷ್ಪಕ್ಷಪಾತ, ನ್ಯಾಯನಿಷ್ಠ ನಿರ್ಣಯ ಆಗಬೇಕಾದರೂ ಮಶ್ರುವಾಲಾ ಅವರದು ಅಧಿಕಾರವಾಣಿಯಾಯಿತು.

ಮೂಲಶಿಕ್ಷಣದ ಪ್ರಾಚಾರ್ಯ

೧೯೩೭ರಲ್ಲಿ ಭಾರತ ರಾಷ್ಟ್ರೀಯ ಕಾಂಗ್ರೆಸ್ ಮೊದಲ ಬಾರಿಗೆ ಪ್ರಾಂತ ಸರ್ಕಾರಗಳನ್ನು ಬ್ರಿಟಿಷ್ ಆಶ್ರಯದಲ್ಲೇ ರಚಿಸಿದಾಗ ಗಾಂಧೀಜಿ ಕೆಲವು ಕ್ರಾಂತಿಕಾರಕ ಬದಲಾವಣೆ ಗಳನ್ನು ಸಮಾಜದಲ್ಲಿ ತರಲು ಸೂಚಿಸಿದ್ದರು. ಅದರಲ್ಲಿ ಮುಖ್ಯವಾದುದು ಶಿಕ್ಷಣಕ್ರಮದ ಬದಲಾವಣೆ. ಗ್ರಾಮ ಜೀವನವನ್ನು ಕೇಂದ್ರವಾಗಿಟ್ಟು ಇಡೀ ದೇಶದ ಸಮಗ್ರ ಅಭಿಕ್ರಮದ ದೃಷ್ಟಿಯಿಂದ ಶಿಕ್ಷಣ ರೂಪಗೊಳ್ಳಬೇಕೆಂದರು. ಜೀವನದ ಮೂಲಕ ಜೀವನ ಸಮೃದ್ಧಿಗಾಗಿ ಶಿಕ್ಷಣಕ್ರಮ ‘ಮೂಲಶಿಕ್ಷಣ’ ಗಾಂಧೀಜಿಯವರ ಜೀವನ ಮೌಲ್ಯಗಳ ಮೇಲೆ ರೂಪಿತವಾಯಿತು. ಕಿಶೋರಿಲಾಲ್ ಮಶ್ರುವಾಲಾ ಈ ಕಾರ್ಯದಲ್ಲಿ ಪೂರ್ಣ ನೆರವಿತ್ತರು. ತಾತ್ವಿಕ ಹಿನ್ನೆಲೆಯನ್ನು ರೂಪಿಸಿಕೊಟ್ಟರು. ಶಕ್ತಿಮೀರಿ ಶ್ರಮಿಸಿ ಪ್ರಯೋಗಗಳನ್ನು ಮಾಡಿ ತೋರಿಸಿದರು. ಕೃಪಲಾನಿ, ರಾಜಾಜಿ, ವಿನೋಬಾ ಇಂಥ ಮಹಾಮೇಧಾವಿಗಳು ಮಶ್ರುವಾಲಾರೋಡನೆ ಸಮಾಲೋಚನೆ ಮಾಡುತ್ತಿದ್ದರು. ರಾಜಾಜಿಯವರು ಆಗಿನ ಮದರಾಸ್ ಪ್ರಾಂತದ ಪ್ರಥಮ ಪ್ರಧಾನಿಯಾಗಿ ಖ್ಯಾತಿಗಳಿಸಿದಾಗ ಅವರ ಪ್ರಮುಖ ಕಾರ್ಯಗಳಲ್ಲಿ ನೂತನ ಶಿಕ್ಷಣ, ಖಾದಿ ಗ್ರಾಮೋದ್ಯೋಗಗಳ ಸ್ಥಾಪನೆ, ಮದ್ಯಪಾನ ನಿರೋಧ, ಅಸ್ಪೃಶ್ಯತಾ ನಿವಾರಣೆ ಮತ್ತು ರಾಷ್ಟ್ರೀಯ ಭಾಷೆಗಳ ಪ್ರಸಾರ ಮುಖ್ಯವಾದವು. ಈ ಎಲ್ಲ ಕಾರ್ಯಗಳೂ ಯೋಜನಾಬದ್ಧವಾಗಿ ವಿಜ್ಞಾನ ಯುಗದ ಅವಶ್ಯಕತೆಗಳಿಗೆ ಅನುಗುಣವಾಗಿ ಬೆಳೆಯಲು ಮಶ್ರುವಾಲಾ ಅವರ ಚಿಂತನ ಮಂಥನಗಳು ಮಾರ್ಗದರ್ಶನ ಮಾಡಿದವು.

ಕಿಶೋರಿಲಾಲರು ಏಕಾಂತ ಜೀವನವನ್ನೇ ಬಹುವಾಗಿ ಪ್ರೀತಿಸುತ್ತಿದ್ದರು. ಧಾರ್ಮಿಕ ವಿಷಯಗಳನ್ನು ಆಳವಾಗಿ ಅಭ್ಯಾಸ ಮಾಡುತ್ತಿದ್ದರು. ಸರ್ವಧರ್ಮ ಸಮಭಾವ, ಅಹಿಂಸಕ ಸರ್ವೋದಯ ಸಮಾಜದ ಅಡಿಗಲ್ಲು ಎಂದು ತಿಳಿದು ತಮ್ಮ ವಿದ್ಯಾರ್ಥಿಗಳಲ್ಲಿ ಆತ್ಮಶೋಧನೆಯ ಪ್ರವೃತ್ತಿ ಯನ್ನು ತುಂಬುತ್ತಿದ್ದರು. ಸಬರಮತಿ ಶಾಲೆ, ಗುಜರಾತ್ ವಿದ್ಯಾಪೀಠ, ವಾರ್ಧಾದಲ್ಲಿನ ಗ್ರಾಮ ಪುನರ್ರಚನಾ ಕೇಂದ್ರ, ಸೇವಾಗ್ರಾಮದ ಆಶ್ರಮ ಜೀವನ ಎಲ್ಲದರಲ್ಲೂ ಕಿಶೋರಿ ಲಾಲರು ಶಿಕ್ಷಣ ಪ್ರಾಚಾರ್ಯರಾಗಿ ಸೇವೆ ಸಲ್ಲಿಸಿದ್ದಾರೆ. ವಿಪುಲವಾಗಿ ಬರೆದಿದ್ದಾರೆ. ಹೊಸ ಹೊಸ ಪ್ರಯೋಗ ಗಳನ್ನು ಮಾಡಿ ಗಾಂಧೀ ವಿಚಾರಧಾರೆಯನ್ನು ಪುಷ್ಟಿಗೊಳಿಸಿದ್ದಾರೆ.

ಗಾಂಧೀಜಿಯ ತತ್ವಪ್ರಸಾರಕ್ಕಾಗಿಯೇ ಮೀಸಲಾಗಿದ್ದ ಅವರ ‘ನವಜೀವನ ಮತ್ತು ಹರಿಜನ’ ಪತ್ರಿಕೆಗಳಲ್ಲಿ ಗಾಂಧೀಜಿಯ ಲೇಖನಗಳನ್ನು ಬಿಟ್ಟರೆ ವಿಪುಲವಾಗಿ ಪ್ರಕಟವಾದ ಬರಹಗಳೆಂದರೆ ಮಶ್ರುವಾಲಾ ಅವರದು, ಗಾಂಧೀಜಿ ನಿಧನರಾದ ಮೇಲೆ ಹರಿಜನ ಪತ್ರಿಕೆ ಮಶ್ರುವಾಲಾ ಅವರ ಸಂಪಾದಕತ್ವದಲ್ಲಿ ಎರಡು ವರ್ಷ ನಡೆಯಿತು. ಸ್ವತಂತ್ರ ಭಾರತ ಆಗತಾನೇ ಉದಯವಾಗಿತ್ತು. ನಾಡಿನ ದುರ್ದೈವದಿಂದ ೧೯೪೮ರಲ್ಲಿ ಗಾಂಧೀಜಿಯ ಕ್ರೂರ ಕೊಲೆ ಆಯಿತು. ಹೊಸ ರಾಷ್ಟ್ರದ ಭವ್ಯಭೂಮಿಕೆ ಯನ್ನು ಸರ್ವೋದಯ ತತ್ವಗಳಿಂದ ನಿರ್ಮಿಸಬೇಕೆಂಬ ಆಕಾಂಕ್ಷೆ ಗಾಂಧೀಜಿಯವರಲ್ಲಿ ತೀವ್ರವಾಗಿತ್ತು. ಕೊನೆಯ ಮರಣ ಶಾಸನದಂತಿದ್ದ ಲೇಖನವನ್ನು ‘ಹರಿಜನ’ ಪತ್ರಿಕೆಯಲ್ಲಿ ಪ್ರಕಟಿಸಿ ಸತ್ಯಾಗ್ರಹಿಗಳೆಲ್ಲ ಲೋಕಸೇವಕರಾಗಿ ಹಳ್ಳಿಗಳಲ್ಲಿ ನೆಲಸಿ ಎಂದು ನಿರ್ದೇಶವವಿತ್ತಿದ್ದರು. ರಾಜಕೀಯ ಸ್ಪರ್ಧೆ, ಅಧಿಕಾರದಾಹ, ಹಣದಾಸೆಗಳಿಂದ ದೂರವಿದ್ದು ಜನತೆಯ ಸರ್ವತೋಮುಖ ಸೇವೆಗೆ ಸಿದ್ಧ ರಾಗುವ ಕಾರ್ಯಕರ್ತರನ್ನು ಸಿದ್ಧ ಮಾಡಲು ಗಾಂಧೀಜಿ ಬಯಸಿದ್ದರು. ಈ ಸಂದೇಶವನ್ನು ಮುಂದೆ ಹರಿಜನ ಪತ್ರಿಕೆಯಲ್ಲಿ ಮಶ್ರುವಾಲಾ ವಿವರವಾಗಿ ಪ್ರತಿಪಾದಿಸಿದರು.

ರಾಜ್ಯಶಕ್ತಿ ಮತ್ತು ಸರ್ವೋದಯ

ರಾಜಕೀಯಕ್ಷೇತ್ರದಲ್ಲಿ ಮೊದಲಬಾರಿಗೆ ಸತ್ಯ ಅಹಿಂಸೆ ಗಳ ಪ್ರಯೋಗ ಮಾಡಿದ್ದು ಗಾಂಧೀಜಿಯೇ. ಸತ್ಯಾಗ್ರಹ ಶಕ್ತಿಯೊಂದೇ ಪ್ರಜೆಗಳ ಪ್ರಭುತ್ವವನ್ನು ಶಾಶ್ವತಗೊಳಿಸುತ್ತದೆ ಎಂದು ಸಾರಿದರು. ಕಾನೂನು, ನ್ಯಾಯಾಲಯ, ಪೊಲೀಸು, ಸೈನ್ಯ ಮತ್ತು ಅಧಿಕಾರಿಗಳ ಬೆಂಬಲದಿಂದ ಮಾತ್ರವೇ ನಡೆಯುವ ರಾಜ್ಯ ಸ್ವರಾಜ್ಯವಲ್ಲ; ಅದಕ್ಕೆ ಬಹುಪಾಲು ಬೆಂಬಲ ಸಾಮಾನ್ಯ ಪ್ರಜೆಯಿಂದ ಬರಬೇಕು ಎಂದರು. ಸರ್ವಸಮ್ಮತಿ ಅಥವಾ ಸರ್ವಾನುಮತಿ ಪ್ರಜಾರಾಜ್ಯದ ಅಡಿಗಲ್ಲು, ಹಳ್ಳಿಹಳ್ಳಿಯಲ್ಲಿ ಸ್ವರಾಜ್ಯ ನಡೆದು ನಾವು ಸ್ವಾವಲಂಬಿ ಗಳಾಗಬೇಕು. ಅದೇ ನಿಜವಾದ ಭಾರತೀಯ ಪ್ರಾಜಾರಾಜ್ಯ. ಇದು ಗಾಂಧೀಜಿಯ ಮತ, ಕಿಶೋರಿ ಲಾಲರು ಈ ತತ್ವವನ್ನು ಒಪ್ಪಿದ್ದರು. ರಾಜಕೀಯ ನಾಯಕರು ದೇಶದ ಆಡಳಿತವನ್ನು ನಡೆಸುತ್ತಾರೆ, ನಿಜ. ಈ ಆಡಳಿತದ ಮೇಲೆ ಸಾರ್ವಜನಿಕರ ಹತೋಟಿ ಇರಬೇಕು. ಎಂದರೆ, ಸಾರ್ವಜನಿಕರ ಅಭಿಪ್ರಾಯ ಸರಿಯಾಗಿ ರೂಪಿತ ವಾಗಬೇಕು. ಜನರಿಗೆ ಮಾರ್ಗದರ್ಶನ ಯಾರು ಮಾಡಬೇಕು? ಅವರ ನಾಯಕರು, ಈ ನಾಯಕರ ಜೀವನ ಶುದ್ಧವಾಗಿರಬೇಕು, ನಿರ್ಮಲವಾಗಿರಬೇಕು. ಅವರು ಜನರಿಗೆ ಅಹಿಂಸೆಯನ್ನು ಕಲಿಸಿಕೊಡಬೇಕು. ಅಧಿಕಾರ ಸ್ಥಾನಗಳಿಗೆ ಸ್ಪರ್ಧಿಸದೆ ಸೇವಾಪರಾಯಣರಾಗಿರುವ ಸಜ್ಜನರು ಕೆಲಸ ಮಾಡಬೇಕು ಎಂದು ಬರೆದರು.

ರಾಷ್ಟ್ರಪತಿಗಳಿಗೆ ಶಂಕೆ ಇದ್ದರೆ ಬರುವುದು ಬೇಡ

ಗಾಂಧೀಜಿಯ ಮರಣದನಂತರ ಒಮ್ಮೆ ರಾಷ್ಟ್ರಾಧ್ಯಕ್ಷ ರಾಜೇಂದ್ರಪ್ರಸಾದರು ಸೇವಾಗ್ರಾಮಕ್ಕೆ ಬಂದರು. ಮಶ್ರುವಾಲಾ ಅವರ ಕುಟೀರದಲ್ಲೇ ಇದ್ದರು. ಅಧ್ಯಕ್ಷರಿಗೆ ಮುಂಚೆಯೇ ರಕ್ಷಣಾದಳದ ಸಮವಸ್ತ್ರದ ಸಿಪಾಯಿಗಳೂ ಆಶ್ರಮವನ್ನಾಕ್ರಮಿಸಿದರು. ‘ಇದೇಕೆ? ಎಂದು ಕೇಳಿದರು ಮಶ್ರುವಾಲಾ. ‘ಇದು ರಾಷ್ಟ್ರಾಧ್ಯಕ್ಷರ ರಕ್ಷಣೆಯ ಕ್ರಮ. ಹಿಂದಿನ ವೈಸ್ ರಾಯರುಗಳ ಸಿಬ್ಬಂದಿ ನಾವು’ ಎಂದು ಉತ್ತರ ಬಂತು. ಮಶ್ರುವಾಲಾ ಸ್ಪಷ್ಟವಾಗಿ ನುಡಿದರು. ‘ರಾಜೆನ್ ಬಾಬುಗಳಿಗೆ ಈ ಸ್ಥಳದಲ್ಲಿ ಅಂಥ ಅಪಾಯವುಂಟು ಎನ್ನುವುದಾದರೆ ಅವರು ಬರುವುದು ಬೇಡ.’ ರಾಜೇಂದ್ರ ಬಾಬುಗಳ ಸೂಕ್ಷ್ಮಮತಿಗೆ ಈ ಮಾರುತ್ತರದ ಅರ್ಥ ಹೊಳೆಯಿತು. ಕೂಡಲೇ ಅಧಿಕಾರಿ ಗಳನ್ನು ಹಿಂದಕ್ಕೆ ಕರೆಯಿಸಿ ತಾವೊಬ್ಬರೇ ಮಶ್ರುವಾಲಾ ಅವರ ಕುಟೀರಕ್ಕೆ ಹೋದರು. ಮಶ್ರುವಾಲಾ ನೇರವಾಗಿ ಕೇಳಿದರು. ‘ನಮ್ಮ ಅಧ್ಯಕ್ಷರಿಗೆ ಪರಕೀಯ ವೈಸ್ ರಾಯರಂತೆಯೇ ನಮ್ಮ ದೇಶದಲ್ಲಿ ಇಷ್ಟು ಬೆಂಗಾವಲು ಬೇಕಾದರೆ ಅದು ಜನತಾ ರಾಜ್ಯವಾದೀತೇ?’

ಸಾಹಿತ್ಯ ಸೃಷ್ಟಿ

ಗುಜರಾತಿ, ಮರಾಠಿ, ಹಿಂದಿ ಮತ್ತು ಇಂಗ್ಲಿಷ್ ಭಾಷೆ ಗಳಲ್ಲಿ ಕಿಶೋರಿಲಾಲರು ಲೇಖನಗಳನ್ನು ಬರೆದರು. ಪುಸ್ತಕ ಗಳನ್ನು ಪ್ರಕಟಿಸಿದರು. ವ್ಯಾಖ್ಯಾನಗಳನ್ನು ಮಾಡಿದರು. ಅಧ್ಯಯನಕ್ಕಾಗಿ ಸಾಹಿತ್ಯ ಸೃಷ್ಟಿಮಾಡಿಕೊಟ್ಟರು ಅಮೂಲ್ಯ ಚಿಂತನಧಾರೆ ಅವರದು. ರಾಮ, ಕೃಷ್ಣ, ಬುದ್ಧ, ಏಸು ಈ ಮಾನವ ಶ್ರೇಷ್ಠರ ಬೋಧೆಗಳನ್ನು ಆಧುನಿಕರಿಗೆ ವಿವರಿಸಿದ ಅವರ ಕಲೆ ಅಮೋಘ, ಕುರುಡು ನಂಬಿಕೆಗಳನ್ನು ದೂರಮಾಡಿ ಯಾವುದು ಮನನೀಯ ಎಂದು ತೋರಿಸಿಕೊಟ್ಟರು. ‘ಗಾಂಧೀ ವಿಚಾರದೋಹನ’ ಮತ್ತು ‘ಗೀತಾಮಂಥನ’ ಅವರು ಬರೆದ ಮತ್ತೆರಡು ಪ್ರಸಿದ್ಧ ಗ್ರಂಥಗಳು, ರಷ್ಯದ ಮಹಾ ಸಾಹಿತಿ ಟಾಲ್ಸಸ್ಟಾಯಿಯವರ ‘ದಿ ಲೈಟ್ ಷೈನ್ಸ್ಸ್ ಇನ್ ಡಾರ್ಕನೆಸ್’ (ಕತ್ತಲಲ್ಲಿ ಜ್ಯೋತಿ ಬೆಳಗಿತು)ಎಂಬ ನಾಟಕವನ್ನು ಭಾಷಾಂತರಿಸಿದರು. ಅಮೆರಿಕದ ಕುಷ್ಟರೋಗಿ ಸಂಘ (ಲೆಪ್ರಸಿ ಫೌಂಡೇಷನ್) ಅಧ್ಯಕ್ಷ ಪ್ಯಾರಿ ಬರ್ಜೆಸನ್ ‘ಹಿ ವಾಕ್ಸ್ಸ್ ಅಲೋನ್ ’ ತರ್ಜುಮೆ ಮಾಡಿದರು.

‘ಶಿಕ್ಷಣದಲ್ಲಿ ವಿವೇಕಮಾರ್ಗ’,‘ಅಹಿಂಸೆಯ ವಿವೇಚನೆ’,  ‘ಗಾಂಧೀ-ಮಾರ್ಕ್ಸ’ – ಇವು ಅವರ ಗಾಂಧೀಜಿ ವಿಚಾರ ವಿಶದಪಡಿಸಿದ ಮೌಲಿಕ ಗ್ರಂಥಗಳು.

ಕೊನೆ

ಸೇವಾಗ್ರಾಮ ವಾರ್ಧಾಗಳು ಗಾಂಧೀಜಿಯವರ ಮರಣದಿಂದ ತುಂಬಲಾರದ ನಷ್ಟವನ್ನನುಭವಿಸಿದವು. ಕಿಶೋರಿಲಾಲರು ಮೊದಲಿನಿಂದಲೂ ಅನುಭವಿಸುತ್ತಿದ್ದ ಗೂರಲುರೋಗ ಉಲ್ಬಣಿಸಿತ್ತು. ಹರಿಜನ ಪತ್ರಿಕೆ ನಿಲ್ಲಿಸಿದ ಮೇಲೆ ಅವರು ಪೂರ್ತಿ ಹಾಸಿಗೆ ಹಿಡಿದಿದ್ದರು. ಆಗಾಗ್ಗೆ ಪ್ರಮುಖರ ಭೇಟಿಗಳು ಮಿತ್ರರೊಡನೆ ಸಂಭಾಷಣೆ, ದೇಶವಿದೇಶಗಳ ವಿದ್ಯಮಾನಗಳ ಬಗ್ಗೆ ಲೇಖನ ಇವು ದಿನಚರಿಯಾಯಿತು.

೧೯೫೨ರ ಸೆಪ್ಟೆಂಬರ್ ಒಂಭತ್ತರಂದು ರೋಗ ಉಲ್ಬಣಿಸಿ ಅವರ ಸ್ವರ್ಗಸ್ಥರಾದರು. ಗಾಂಧೀಯುಗದ ಒಂದು ದಿವ್ಯಜ್ಯೋತಿ ನಂದಿತು.

ಅವರ ಸಾವಿನ ಸುದ್ದಿ ಕೇಳಿ ಜವಹರಲಾಲರು ಹೀಗೆಂದರು:

‘ಕಿಶೋರಿಲಾಲ್ ಮಶ್ರುವಾಲಾರು ನಿಷ್ಕಪಟಿಗಳಲ್ಲಿ ನಿಷ್ಕಪಟಿ. ಸಜ್ಜನರು, ನಮ್ಮ ಪುರಾತನ ಸಂತರಂತೆ ಸತ್ಯನಿಷ್ಠ ಸಾಧಕ. ಸತ್ಯಶೋಧನೆಯಲ್ಲಿ ಎಂದೂ ಪಕ್ಷಪಾತವನ್ನೆಣಿಸದ ಈ ಮಿತ್ರರ ಮರಣದಿಂದ ರಾಷ್ಟ್ರಕ್ಕೆ ಆಗಿರುವ ನಷ್ಟ ಅಪಾರ.