ಲಂಕೆಯ ಮೇಲೆ ದಂಡೆತ್ತಿ ನಡೆದ ರಾಮನ ಹಿಂದೆ
ಯಾವತ್ತೋ ಹೊರಟು ಹೋಗಿದೆ ನಮ್ಮ ಪೌರು-
ಷದ ಕಿಷ್ಕಿಂಧೆ. ತುಂಗಭದ್ರೆಯ ತಡಿಯ ಬನ
ಬೆಟ್ಟಗಳ ಮೇಲೆ ಕವಿದುಕೊಂಡಿದೆ ಸಂಧ್ಯೆ.

ಈಗ ಯಾರಿದ್ದಾರೆ ಈ ನಾಡಲ್ಲಿ, ಗಾಳಿ
ಊಳಿಡುವ ಪಾಳುಗುಡಿಯಂತಿರುವ ಪರಿ-
ಸರದಲ್ಲಿ? ಮನೆ ಮನೆಯ ಕತ್ತಲಿನಲ್ಲಿ
ಮುಸುಕೆಳೆದು ನಿಟ್ಟುಸಿರಿಡುವ ಹೆಂಗಸರು,

ಕೆಮ್ಮುತ್ತ ಮುದುರಿ ಮೂಲೆಗೆ ಕೂತ ಮುದು-
ಕರು, ಏನೂ ತಿಳಿಯದ ಹಾಗೆ ತಮ್ಮ ಪಾಡಿಗೆ
ತಾವು ಆಟವಾಡಿಕೊಳ್ಳುತ್ತಿರುವ ಮಕ್ಕಳು. ನೋಡಿ-
ದರೆ ಎಷ್ಟೊಂದು ಸ್ತಬ್ದವಾಗಿದೆ ಸುತ್ತ, ಈ

ಬೆಟ್ಟ-ಗುಡ್ಡಗಳೂ ಕೂಡ ತುಕ್ಕು ಹಿಡಿಯುತ್ತ!
ಪುಟಿವ ಪೌರುಷವಿತ್ತೆ, ಕನಸಿತ್ತೆ, ಮಹತ್ವಾ-
ಕಾಂಕ್ಷೆಯಿತ್ತೆ ಇಲ್ಲಿ ನಿನ್ನೆ ಮೊನ್ನೆಯವರೆಗೆ
ಎನ್ನುವನುಮಾನಗಳ ಗೋರಿಯಾಗಿದೆ ಚಿತ್ತ.

ಕಾವಲಿಲ್ಲದ ಹೊಲದ ಬೇಲಿಯಾಚೆಗೆ ನಿಂತು
ಹೊಂಚು ಹಾಕುತ್ತಿರುವ ಕೆಂಗಣ್ಣ ಕೋಣ-
ಗಳ ನೆರಳ ಭಯದಲ್ಲಿರುವ ನಮ್ಮೆದೆಗೆ
ಧೈರ್ಯವ ತುಂಬಿ ಹಿಡಿದು ನಡಸುವ ತ್ರಾಣ-

ವುಳ್ಳವರು ಯಾರಿದ್ದಾರೆ ಈ ಹಾಳೂರಿನಲ್ಲಿ?’
ವೀರ ವಾಲಿಯನು ಮರೆಮೋಸದಿಂದಿರಿದ-
ವನ ಬೆನ್ನ ಹಿಂದೆಯೆ ಹೋದ ನಮ್ಮವರು ಸುರ-
ಕ್ಷಿತವೆ, ರಕ್ಕಸ ಪಡೆಯ ರಣರಂಗದಲ್ಲಿ?

ಬಂದಾರೆಯೆ ಹಿಂದಕ್ಕೆ ನಮ್ಮ ಜನ, ಬರಡಾ-
ಗುತ್ತಿರುವ ಈ ನೆಲದಲ್ಲಿ ಮತ್ತೆ ಪೌರು-
ಷದ ಬೀಜ ಬಿತ್ತುವುದಕ್ಕೆ? ಪಾಚಿಗಟ್ಟುತ್ತಿ-
ರುವ ನೀರುಗಳನ್ನು ಮುಂದೆ ಹರಿಸುವುದಕ್ಕೆ?


ಯಾಕೆ ನಿಟ್ಟುಸಿರಲ್ಲಿ ಇಲ್ಲಸಲ್ಲದ ಚಿಂತೆ-
ಗಳ ಪೋಣಿಸುತ ಕೂತಿರುವೆ ತಾಯಿ, ವೀರ
ವಾಲಿಯ ಮಡದಿ, ಇರುವ ಕತ್ತಲನು ಮತ್ತಷ್ಟು
ಕತ್ತಲನು ಮಾಡಿಕೊಂಡು? ಇಂಥ ಪರಿಸರ-

ದಲ್ಲಿ ಮೊದಲು ದೀಪ ಹಚ್ಚುವುದು ಹೇಗೆಂದು
ಯೋಚಿಸಬೇಕು. ಕೇಳಮ್ಮ, ನಾನೊಬ್ಬ ಬಲು
ಹಳಬ ಈ ಕಿಷ್ಕಿಂಧೆಯಲ್ಲಿ. ಕಂಡಿದ್ದೇನೆ, ವ-
ರ್ತಮಾನದ ಜತೆಗೆ, ಉಜ್ವಲವಾಗಿ ಉರಿದು

ಬೆಳಕಾದ ಇತಿಹಾಸವನ್ನೂ. ಯಾವ ನಿಜವಾದ
ಸತ್ವವೂ ಬತ್ತಿಹೋಗುವುದಿಲ್ಲ ಇದ್ದ-
ಕಿದ್ದಂತೆಯೇ. ಸುಪ್ತವಾಗಿರುವುದದು, ಈ
ಬೆಳೆವ ಮಕ್ಕಳ ಒಳಗೆ, ಮರವು ಮಲಗಿದ

ಹಾಗೆ ಬೀಜದೊಳಗೆ. ಬೆಟ್ಟದೆತ್ತರ ಬೆಳೆದು ಸ್ಪ-
ರ್ಧಿಸುವ ಈ ಒಂದೊಂದು ವೃಕ್ಷವೂ, ನಾನು
ಕಂಡಂತೆ ಹಿಂದೊಮ್ಮೆ ಪುಟ್ಟ ಸಸಿ. ಎತ್ತರದ
ಮರಗಳಡಿ ಮತ್ತೆ ತಲೆಯೆತ್ತುತಿವೆ ನೂರು

ಉತ್ಸಾಹಗಳು ನೀಲಿಯಾಕಾಶಕ್ಕೆ ಕಣ್ಣ
ತೆರೆದು. ಒಳ್ಳಿತನು ಕುರಿತು ಮೊದಲು ನಂಬಿಕೆ
ಬೇಕು, ಕೆಟ್ಟದೆಷ್ಟಿದ್ದರೂ. ಈ ಜಗವನಾ-
ಳುತ್ತಿರುವುದಾವುದೋ ಹಿರಿಯ ಸೋಜಿಗವೆ

ದಿಟ. ವಿಶ್ವಾಸವಿರಬೇಕು ನಮಗದರ ವಿನ್ಯಾ-
ಸದಲ್ಲಿ. ಗೆದ್ದು ಬರುತ್ತಾರಮ್ಮ ನಮ್ಮವರು
ಹೋರಾಡಿ ದೂರದ ಮಹತ್ಕಾರಣದ ರಣರಂಗ-
ದಲ್ಲಿ. ಎಷ್ಟಾದರೂ ತಾಯಿಯಲ್ಲವೆ ನೀನು,

ನಿನಗೆ ತಲ್ಲಣ ಸಹಜ. ಗೊತ್ತಿಲ್ಲವೇ ನನಗೆ ನೀನು
ಎಂಥವಳೆಂದು. ಈ ಹೆಣ್ಣು ಯಾವಾಗಲೂ
ಹೀಗೆಯೇ : ಶಂಕೆಬೆಂಕಿಯ ಕುಲುಮೆ;
ಹಾಗೆಯೇ, ಪ್ರೀತಿ-ವಾತ್ಸಲ್ಯಗಳು ಪುಟಿವ ಚಿಲುಮೆ!