ಗೋಪಿಯನಾಥನೇ ಗೋಕುಲದರಸನೇ
ಪಾಪಿ ಕೀಚಕ ತಾನು ಕಾಡುವನು | ಇಂಥ
ಪಾಪವ ಕಾಣುತ ನೋಡುವೆನು | ಧರ್ಮ
ಭೂಪಗೆ ಸುದ್ದಿಯ ಹೇಳಿರೇನು | ಎಂದು
ತಾಪ ಚಿಂತೆ ಹೆಚ್ಚಿ ಈ ಪರಿಯಿಂದಲಿ
ಪಾಪರಹಿತ ದ್ರೌಪದಿ ಮರುಗಿದಳು ೪೧

ಮಂದಗಮನೆಯಳು ನೊಂದಳು ಕಣ್ಣೀರ
ತಂದಳು ತನ್ನಯ ದುಃಖದಿಂದ | ವಿಧಿ
ಬೆನ್ಹತ್ತಿ ಕಾಡುವದು ಹಗೆಯಿಂದ | ಮನ
ನೊಂದಳು ದ್ರೌಪದಿ ಚಿಂತಿಲಿಂದ | ಸುಖ
ವಿನ್ನಿಲ್ಲವೆಂಬುದು ಎನ್ನ ಮನಕೆ ಬಂತು
ಇನ್ಯಾಕೆ ಈ ಜನ್ಮ ಇಡಲಾ‌ರೆ ನಾನು          ೪೨

ಸುಡು ಸುಡು ಹೆಣ್ಣಿನ ಜನ್ಮವು ಕಷ್ಟವೆಂ
ದೊಡಲೊಳ ಉರಿಬಿದ್ದು ಹೊರಳುತಲಿ | ತನ್ನ
ಎಡೆಯ ಬಾಯಿಯ ಬಡಿಬಡಿವುತಲಿ | ಸರಿಯ
ಮಡದೇರ ಮುಂದೆಲ್ಲ ಹೇಳುತಲಿ | ಎನ್ನ
ದುಡುಕು ಮಾಡುತಲಿಹನು ತುಡುಗು ಬುದ್ಧಿಗಳಿಂದ
ಹಿಡಿಯಲಾಕ್ಷಣ ಭೂಮಿಗುರುಳ್ಯಾಳು ನಾರಿ   ೪೩

ಮರುಳುವ ನೆರಳುವ ಧ್ವನಿಯ ಕೇಳುತಾಗ
ಅರಸು ವಿರಾಟನ ಸತಿಯು ಬೇಗ | ತನ್ನ
ತಮ್ಮ ಕೀಚಕನನ್ನು ಕರೆದಳಾಗ | ಇದು
ಇನ್ನೇನು ಗದ್ದಲವೆಂಬುತಾಗ | ಕೇಳಿ
ತನ್ನ ಅಕ್ಕನ ಮುಂದೆ ಹೇಳಿ ಸುದ್ದಿಯ ರಂಭೆ
ದ್ರೌಪದಿಯನು ಕೂಡಿಸಬೇಕೆಂದನಾಗ        ೪೪

ಇವತ್ತು ಒಂದಿನ ತಡೆದರೆ ಆಕೆಯ
ಭಾವ ತಿಳಿದು ಕರೆ ತರುವೆನೆಂದು | ತಮ್ಮ
ನೀ ಮರುಳಾಗುದುಚಿತವಲ್ಲೆಂದು | ಸುಮ್ಮ
ನೇಳೇಳು ಊಟಕ್ಕೆ ಹೋಗು ಎಂದು | ತಾನು
ಹೇಳಿದಾಕ್ಷಣ ಕಾಮಿನಿ ಕುಲಮಣಿ ಕೇಳ
ದ್ರೌಪತಿ ನಿನಗ್ಹೇಳುವೆ ಮಾತನೊಂದ         ೪೫

ಬಂದಳು ದ್ರೌಪದಿ ಸಂದೇಹವಿಲ್ಲದೆ
ಚಂದಾಗಿ ಕರೆದು ಕುಳ್ಳಿರಿಸಿಕೊಂಡು | ಎನ್ನ
ಸಂದೇಹವೊಂದನೆ ನಡಿಸಿಕೊಂಡು | ಎನ್ನ
ತಮ್ಮ ಕೀಚಕ ನಿನ್ನ ಪುಣ್ಯ ಕಂಡು | ರತಿ
ಯನ್ನಿಟ್ಟ ಅಬಲೆಯನ್ನ ಮಾತನು ಮೀರದೆ
ಚೆನ್ನಾಗಿ ನಡಿಸಿಕೊಡೆಂದು ಹೇಳಿದಳು        ೪೬

ಬಡವರ ಕೂಡಿರ್ದ ಬಾಲೆ ನೀ ಬಲು ಕಷ್ಟ
ಬಿಡುವದ್ಯಾತಕೆ ನೀನು ಹೇಳೆನುತ | ಎನ್ನ
ಒಡಹುಟ್ಟಿದವನೊಳು ಇರು ಎನುತ | ನಿನ್ನ
ಬಡತನ ಹರಿವುದು ಕೇಳೆನುತ | ಹೀಂಗ
ಮಡದಿ ದ್ರೌಪದಿಗೆ ತಾ ಕಡು ಮೋಹದಿಂದಲಿ
ಒಡೆಯ ವಿರಾಟನ ಸತಿಯು ಹೇಳಿದಳು       ೪೭

ಕೇಳಿದಾಕ್ಷಣ ನಾರಿ ಬಹಳ ದುಃಖದಿಂದ
ಕಾಳೋರಗವೇಣಿ ಚಿಂತಿಸುತ | ಕೃಷ್ಣ
ವ್ಯಾಳೆ ಎಂಥದು ತಂದೆ ನಮಗೆನುತ | ನಮ್ಮ
ಬಾಳುಳ್ಳವರಿಗ್ಹೊತ್ತು ಬಂತೆನುತ | ಆಗ
ಮೋರೆ ತಗ್ಗಿಸಿಕೊಂಡು ವನಿತೆ ದ್ರೌಪದಿ ತನ್ನ
ದಾರಿ ಹಿಡಿದು ಧರ್ಮರಾಜನ ಬಳಿಗೆ          ೪೮

ರಾಜರಾಜರಿಗೆಲ್ಲ ಶ್ರೇಷ್ಠವಾದ ಧರ್ಮ
ರಾಜ ಭೂಪನ ಬಳಿಗೆ ಬಂದಳಾಗ | ಖಳನು
ಕಾಡಿದಂಥ ಸುದ್ದಿ ಹೇಳ್ದಳಾಗ | ಎನ್ನ
ಮಾನಕ್ಕೆ ಕೊರತೆಯು ಬಂತೆಂದಳಾಗ | ಹೀಂಗ
ಮಾನಿನಿ ಹೇಳ್ದ ಮಾತಿಗೆ ಧರ್ಮರಾಜನು
ತಾ ಒತ್ತಿ ಹೇಳಿದಂಥ ಮಾತನು ಕೇಳಿ        ೪೯

ಅನ್ನ ಕೊಡುವ ದಾತರಾಜ್ಞೆಯ ಮೀರಲು
ಇನ್ನು ಎಮಗೆ ಶಿವ ಮೆಚ್ಚುವನೆ | ಸಂ
ಪನ್ನೆ ಎನ್ನಯ ಮಾತು ಕೇಳು ನೀನೆ | ಇದಕೆ
ಅನ್ಯ ಉತ್ರವ  ಕೊಡಲ್ಯಾಂಗ ನಾನೆ | ಎಂದು
ಸುಮ್ಮನೆ ಧರ್ಮರಾಜನು ಕೇಳುತ್ತಿರಲಾಗ
ಘಮ್ಮನೆ ತಿರುಗ್ಯಾಳು ಪಾರ್ಥನ ಬಳಿಗೆ       ೫೦

ಬಂದಳು ದ್ರೌಪದಿ ಮುಖಬಾಡಿ ಪಾರ್ಥನಿ
ಗೆಂದಳು ತನ್ನಯ ಚಿಂತಿಲಿಂದ | ಇಂದು
ಇದಕೇನು ಗತಿ ನಾನು ಮಾಡಲೆಂದ | ಹೊತ್ತು
ತಂದಾನೆ ಶಿವ ನನಗಿಂಥಾದ್ದೆಂದ | ಪಾರ್ಥ
ಅಂದ ನುಡಿಯ ಕೇಳಿ ದ್ರೌಪದಿ ದುಗುಡದಿ
ಬಂದಳು ನಕುಲ ಸಹದೇವರ ಬಳಿಗೆ          ೫೧

ಮುಖಬಾಡಿ ನಕುಲ ಸಹದೇವರಿಗೆ ಅಂದು
ಅಕಟಕಟೆನಗೇನು ಗತಿ ಎಂದಳು | ನಾರಿ
ಮುಖವ ತಗ್ಗಿಸಿ ನಿಂತು ಹೇಳಿದಳು | ತನ್ನ
ದುಃಖದಿ ಕಣ್ಣೀರ ಸುರಿಸಿದಳು | ಮತ್ತೆ
ಸಖಿ ಕುಲಮಣಿ ನಾವು ಕಿರಿಯರು ನೀನಿದಕೆ
ಧರ್ಮಪಾರ್ಥರ ಬಳಿಗೆ ಹೋಗೆನ್ನಲಾಗ       ೫೨

ಹೀಗೆಂದ ನುಡಿಯನು ಕೇಳುತಲಾಕ್ಷಣ
ಕೋಗಿಲಸ್ವರದಿಂದ ಅಳುತಲಾಗ | ಮತ್ತೆ
ಬೇಗ ಬಂದಳು ಭೀಮನ್ಹುಡುಕುತಲಾಗ | ದಯ
ವಾಗು ನೀ ಎನಗೆಂದು ನುಡಿದಳಾಗ | ಇಂಥ
ಶೋಕ ಮಾಡುವ ಕಂಡು ಯಾಕೆಂದು ಭೀಮನು
ಆಕೆಯ ಮುಖವನ್ನು ಹಿಡಿದು ಕೇಳಿದನು       ೫೩

ಹೇಳು ಹೇಳು ನಾರಿ ಬಹಳ ದುಃಖದಿಂದ
ತಾಳಲಾರದೆ ಎನ್ನ ಒದರಿದ್ಯಾಕೆ | ಹಳ
ಹಾಳಿಯಾಗದೆ ನಿನ್ನ ಮನಸು ಯಾಕೆ | ನಾನು
ಹೇಳುವೆ ಇದಕೆ ಸುಳ್ಳಲ್ಲ  ಜೋಕೆ | ಎಂದು
ಕೇಳಲು ಆ ಕ್ಷಣ ಖೂಳ ಕೀಚಕ ತಾನು
ಬಾಳ ಕಾಡಿದ ಬಗೆಯನೆಲ್ಲ ಹೇಳಿದಳು        ೫೪

ಕೇಳಿದಾಕ್ಷಣ ಭೀಮ ಬಹಳ ಸಿಟ್ಟಿನಿಂದ
ಖೂಳ ಕೀಚಕನನ್ನು ಹೊಡೆವೆ ಜಾಣೆ | ಇದಕೆ
ಚಿಂತೆಮಾಡುದು ಸಲ್ಲ ಸುಪ್ರವೀಣೆ | ನಾನು
ಬಿಟ್ಟರೆ ಧರ್ಮನ ಪಾದದಾಣೆ | ಎಂದು
ಇಟ್ಟುಕೊಂಡನು ತಾನು ಗಟ್ಯಾಗಿ ಶಪಥವ
ಥಟ್ಟನೆ ಹೇಳು ವಿರಾಟನ ಸತಿಗೆ     ೫೫

ಕೇಳು ಕಾಮಿನಿ ನೀನು ಬಹಳ ಚಿಂತಿಸಬೇಡ
ನಾಳೆ ನಾ ನಿನ್ನ ವೇಷವ ಧರಿಸಿ | ಇಂಥ
ಖೂಳ ಕೀಚಕನನ್ನು ಸಂಹರಿಸಿ | ಚಿಂತಿ
ಹರಿಸಿ ಬಿಡುವೆನೇಳ ಎನ್ನರಿಸಿ | ಅವಗೆ
ಸರಸದಿ ಬರುವೆನೆಂದ್ಹರುಷದಿ ಹೇಳೆಂದು
ಅರಸಿ ದ್ರೌಪದಿಗಾಗ ಹೇಳಿ ಕಳುಹಿದನು      ೫೬

ಹೇಳುವೆ ಬಗೆಯನು ಸರಸದಿ ನಾರಿ ನೀ
ಕೇಳೆಂದು ಭೀಮನು ನುಡಿದನಾಗ | ಹೋಗಿ
ಹೇಳು ವಿರಾಟ ಸತಿಗೆ ಬೇಗ | ನಿಮ್ಮ
ಕೀಚಕನಿಗೆ ಹೇಳು ಬರ್ಪೆನೀಗ | ಇಂದು
ನಾ ಹೋಗಿ ಗರಡಿಯ ಶಾಲೆಯೊಳಿರುವೆನು
ನೀ ಮಾತ್ರ ಕಳುಹೆಂದು ಹೇಳಿ ಬಾರೆಂದ     ೫೭

ಹೇಳಿ ಬಂದಳು ನಾರಿ ಬಹಳ ಸಂತೋಷದಿ
ನಾಳೆ ನಾ ಸಂಜೆಗೆ ಬರುವೆನೆಂದು | ಬೇಗ
ಭೂಪ ಕೀಚಕನಿಗೆ ಬರಹೇಳೆಂದು | ಅಕ್ಕ
ಮರೆಯಬ್ಯಾಡವ್ವ ಈ ಮಾತನೆಂದು | ಹೇಳಿ
ತಿರುಗಿದಳಾಕ್ಷಣ ತ್ವರಿತದಿ ದ್ರೌಪದಿ
ಭರದಿಂದ ಬಂದಳು ಭೀಮನಿದ್ದೆಡೆಗೆ           ೫೮

ಹೇಳಿ ಬಂದೆನು ನಾನು ನಾಳೆ ಬರುವೆನೆಂದು
ಧೂಳ ಸಂಜಿಲಿ ಗರಡಿಶಾಲೆಯೊಳು | ನಿಮ್ಮ
ತಮ್ಮ ಕೀಚಕನಿಗೆ ಬೇಗ ಹೇಳು | ಗುಲ್ಲು
ಮಾಡದೆ ಈಕ್ಷಣ ಹೋಗೆಂದಳು | ಎಂದು
ಹೇಳಿ ಬಂದಳು ತಾನು ಬಹಳ ಸಂತೋಷದಿ
ಕೇಳಿರಿ ನೀವೆಲ್ಲ ಭೀಮನ ಬಗೆಯ    ೫೯

ಭೀಮಸೇನನು ಆಗ ಕೇಳಿರಿ ತಾಳಿದ
ಕಾಮಿನೀ ರೂಪವ ಕಪಟದಲ್ಲಿ | ತಾನು
ಪ್ರೇಮದಿ ಹೊಂಟನು ಗರಡಿಯಲ್ಲಿ | ಖೂಳ
ಕೀಚಕ ಹೊತ್ತನು ನೋಡುತಲ್ಲಿ | ಸೂರ್ಯ
ಅಸ್ತವಾದ ಮೇಲೆ ಮಸ್ತಿಕೋಣನ್ಹಂಗ
ಸಿಸ್ತೀಲಿ ಕೀಚಕ ಗರಡಿಗೆ ಬಂದ      ೬೦

ಬಂದಾಕ್ಷಣ ಬಹಳ ಭ್ರಾಂತಿಯಿಂದ ಸಖಿ
ಗೆಂದನು ಕಾಮಿನಿ ಕಾಡುವರೆ | ಇಷ್ಟು
ಹೇಳ್ದರೆ ಹುಡುಕಾಟ ಮಾಡುವರೆ | ಇಂದು
ಎನ್ನೊಳು ಮಾತಾಡುತಿರಲಾಗ ಭೀಮನು
ಸುಮ್ಮನೆ ಮಂಚದ ಮೇಲೆ ಕುಳಿತಿಹನು      ೬೧

ಹರಡಿ ಕಂಕಣಕೈಯ ಹಿಡಿದೆಳೆದು ಅವನು
ಮಡದಿ ನೀ ಬಾರೆಂದು ಕರೆಯುತಲಿ | ಕುಚ
ಪಿಡಿಯಲಿಚ್ಛಿಸಿದನು ಪ್ರೀತಿಯಲಿ | ಚುಂಬ
ನವ ಕೊಡು ಎಂಬ ಸಮಯದಲಿ | ದುಡುಕಿ
ದುಡುಕುವ ಸಮಯದಿ ತಡಿರೆಂದು ಹೇಳಲು
ಮಡದಿ ಸೈರಿಸಲಾರೆ ವಿರಹತಾಪವನು       ೬೨

ಚೆಂದುಟಿಯಳೆ ನಿನ್ನ ಚುಂಬನ ಕೊಡುಯಂದು
ಮುಂಬಾಗಿ ಸೆರಗನು ಹಿಡಿದೆಳೆದು | ಎದೆ
ಗಿಂಬಾಗಿ ತೆಕ್ಕಿಯೊಳಗೆ ಎಳೆದು | ನಗೆ
ಯಿಂದಲಿ ಸೀರೆಯ ತಾ ಸೆಳೆದು | ಮತ್ತೆ
ಚೆನ್ನಾಗಿ ಭೋಗಕೆ ಎಳೆಯುತಿರಲು ಆಗ
ಇನ್ನೇಕೆ ಅನುಮಾನ ಎಂದನು ಭೀಮ         ೬೩

ಚೆನ್ನಾಗಿ ನಿಮ್ಮಕ್ಕಗ್ಹೇಳಿ ಬಂದಿಯಿಲ್ಲೊ
ಕುನ್ನಿ ಎನ್ನ ಕೈಯೊಳು ಸಿಕ್ಕಿದೆಲ್ಲೊ | ನಿನ್ನ
ಸೀಳಿ ಹಲ್ಲು ಮುರಿಗುಟ್ಟೆನಲ್ಲೊ | ಮೇಲೆ
ಯಮಪಟ್ಣಕೆ ನಿನ್ನ ಅಟ್ಟೆನಲ್ಲೊ | ಎಂದು
ಬಿರಿನುಡಿಯಿಂದಲಬ್ಬರಿಸೆ ಭೀಮಸೇನನು
ಮರಿ ಆಡಿನ್ಹಾಂಗ ತಾ ನಿಂತನು ಖಳನು      ೬೪

ಗಾರುಡಿಸಿ ಗೆದ್ದು ಪೋಗು ನೀ ನಮ್ಮೊಳು
ಶೂರತನವನಿಂದು ನೋಡುವೆನು | ರಣ
ಧೀರನಹುದೆಂದು ನಾ ಆಡುವೆನು | ಮಹಾ
ಶೂರನೆಂದು ನಾ ಕೇಳಿದೆನು | ಎನ್ನೊಳ್
ಪೂರ ಶೌರ್ಯವನೀಗ ತೋರೆಂದು ಭೀಮನು
ಖೂಳ ಕೀಚಕನಿಗೆ ಕೇಳುತಲಿರ್ದ    ೬೫

ಬೆದರಿ ಬೆಂಡಾಗಿ ಚೇತನಗುಂದಿ ಕೀಚಕ
ಒದರಿದ ತನ್ನಯ ಬಳಗವನು | ಈಗ
ಖೂಳನ ಕೈಯೊಳು ಸಿಕ್ಕಿದೆನು | ಬೇಗ
ಯಾರರೆ ಬಂದೆನ್ನ ಉಳಿವಿರೇನು | ಇಂದು
ಪೂರ ಘಾತವಾದಿತೆಂದು ಕೀಚಕ ತಾನು
ಬೋರ್ಯಾಡಿ ಕಣ್ಣೀರು ತಂದನು ಆಗ         ೬೬

ಕಣ್ಣೀರು ತರುವಂಥ ಕೆಲಸವ ಮಾಡಿದಿ
ಇನ್ಹ್ಯಾಂಗ ಬಿಟ್ಟೀತು ಎಂದ ಭೀಮ | ನಿನ್ನ
ಸೀಳಿ ಒಗೆವೆ ನಿನಗೀಗಿಲ್ಲೊ ಕ್ಷೇಮ | ಯಮ
ದಾಳಿ ನಿನಗೆ ತಂದಿತೆಂದ ಪ್ರೇಮ | ಈಗ
ಬಾಳುಳ್ಳ ಹೆಣ್ಣನು ಕಾಡಿದ ತಪ್ಪಿಗೆ
ಓಡಿ ಬಂದಿತು ನಿನ್ನ ಜೀವಕೆ ಮೂಲ          ೬೭

ಭೀಮನ ಕೈಯೊಳು ನಿನ್ನ ಪ್ರಾಣವಿತ್ತೆಂದು
ಪ್ರೇಮದಿಂದ್ಯಾರ್ಯಾರು ಹೇಳಲಿಲ್ಲೆ | ನಿಮ್ಮ
ಅಕ್ಕ ಪಂಚಾಂಗವ ಕೇಳಲಿಲ್ಲೆ | ವ್ಯರ್ಥ
ಸಾಯಾಕ ಬಂದೆಲ್ಲೊ ಹುಚ್ಚಮಲ್ಲೆ | ಎಂದು
ಬಾರೆಂದು ಮುಂದಕೆ ಕರೆಯಲು ಭೀಮನು
ವಾರಿಗೆ ಹಿಂದಕ್ಕೆ ಸರಿದನು ಖಳನು ೬೮

ಸರಿದು ಹಿಂದಕೆ ನಿಂತು ತಿರಿಗ್ಹೋಗು ಸಮಯದಿ
ತ್ವರಿತದೆ ಭೀಮಗೆ ಸಿಟ್ಟು ಬೆಂದು | ಖಳನ
ಎರಡು ಕಾಲ್ಗಳ ಬೇಗ ಹಿಡಿದು ನಿಂದು | ನೆಲ
ಕ್ಕೊಗೆದು ಸೀಳಿ ಬಿಟ್ಟ ಕ್ರೋಧದಿಂದ | ಹೀಗೆ
ಸತ್ತನು ಕೀಚಕ ಇಲ್ಲಿಗೆ ಕಥೆಯನು
ಉತ್ತಮರು ತಿಳಿದು ಕೇಳ್ವುದು ಜನರು        ೭೦