ದುಂದುಮೆ ಎಂದೆಂದು ಪಾಡಿರಿ ಜಾಣಾs

ದುಂದುಮೆ ಬಸಂತನ ಹಬ್ಬ |        || ಪ ||

ಶ್ರೀಗುರು ನಿಮ್ಮಯ ಚರಣಾರವಿಂದ
ದಾಗರಕೇನುಸುರ್ವೆ ಖಾತ್ರಿಗಳನು | ಅತಿ
ಪ್ರಾಸ ಬೀಳದ್ಹಾಂಗ ಪದಗಳನು | ಮುಂದೆ
ಲೇಸಾಗಿ ಖಾತ್ರಿಯನು ಸಾಗಿಸುಯೆಂದು-
ಲ್ಹಾಸದಿಂದಲಿ ಎನ್ನ ಮತಿಗೆ ಮಂಗಳವ       ೧

ಉರ್ವಿಯೊಳಗ ಶ್ರೇಷ್ಟವಾದ ವಿರಾಟನ
ಪರ್ವದ ಕಥನವ ಪೇಳುವೆನು | ಕೇಳು
ಉರ್ವಿ ಜನರಿಗೆಲ್ಲ ಹೇಳುವೆನು | ಮುಂದೆ
ತಂದೆಯ ಕರುಣದಿ ಮಾಡುವೆ ಪದವನು
ಚಂದದಿ ಗಣಪನೆ ಕೊಡು ಬೇಗ ಮತಿಯ     ೨

ಕ್ಷತ್ರಿಯ ವಂಶದೊಳಿರ್ದ ಧರ್ಮರಾಜ
ಧಾತ್ರಿಯೊಳು ವನವಾಸ ಪೋಗುತಲಿ | ದೊಡ್ಡ
ಕ್ಷೇತ್ರಗಳೆಲ್ಲವರಸುತಲಿ | ಅಂದು
ಧಾತ್ರಿಯೊಳಗೆ ತಾನು ತಿರುಗುತಲಿ | ಅಂದು
ಧಾತ್ರಿಯೊಳಗೆ ತಾನು ತಿರುಗುತಲಿ | ಮುಂದೆ
ಪಾರ್ಥ ನಕುಲ ಸಹದೇವ ಭೀಮರು ಮತ್ತೆ
ಗುರ್ತವನು ತಪ್ಪಿಸಿ ತಿರುಗುತಲಿಹರು         ೩

ವನವಾಸ ತಿರುಗುತ ವನಿತೆ ದ್ರೌಪತಿಯನು
ವಿನಯದಿ ಬಾರೆಂದು ಕರೆವುತಲಿ | ತಮ್ಮ
ಮನದೊಳು ಚಿಂತೆಯ ಮಾಡುತಲಿ | ಅಕೊ
ಧರ್ಮರಾಜನ ಮುಂದೆ ಹೇಳುತಲಿ | ಪಾರ್ಥ
ವರ್ಮವು ತಿಳಿಯದು ಉರ್ವಿಯ ಮೇಲಿನ್ನು
ಕರ್ಮವ ಕಳೆವುದು ಇಂದು ಧರ್ಮಜನು      ೪

ವನವಾಸ ತಿರುಗುತ ವನಿತೆಯ ಕರಕೊಂಡು
ವಿನಯದಿ ಕಾನನದೊಳಗಿರಲು | ದೊಡ್ಡ
ಘನವೃಕ್ಷ ಬನ್ನಿ ಮಹಾಕಾಳಿರಲು | ತಾವಾ
ಗ ನಾಲ್ವರು ತಿರುಗುತಲ್ಲಿಗೆ ಬರಲು | ಮುಂದೆ
ವಿನಯದಿ ತಮ್ಮ ಕರದೊಳು ಇದ್ದಂಥ
ಘನ ಸರಳುಗಳನು ಇಟ್ಟರು ಬೇಗದಲಿ        ೫

ಇಟ್ಟು ಕೈದುಗಳನು ಮುಟ್ಟಿ ಶರಣು ಮಾಡಿ
ಕೊಟ್ಟೀರಿ ಯಾರಿಗೆ ಎಂದೆನುತ | ಬಹು
ನಿಷ್ಠೆಯಲಿ ಬನ್ನಿ ಮತಾಡಿಸುತ | ತಾಯಿ
ಇಟ್ಟೇವು ಕೈದುಗಳ ಬೇಗೆನುತ | ನಮ್ಮ
ಹುಟ್ಟಿದ ವನವೇ ಸಾಕ್ಷಿಯೆಲೆ ದೇವಿ
ಘಟ್ಯಾಗಿ ಕಾಯವ್ವ ಬನ್ನಿ ಮಹಾಕಾಳಿ         ೬

ವನವಾಸದೊಳು ಒಂದು ವರ್ಷ ಅಜ್ಞಾತ
ವನು ಕಳೆಯಲಿ ಬೇಕು ಸತ್ಯಕಾಗಿ | ನಾಮ
ರೂಪ ಮಾಜಿಕೊಂಡು ಸುಮ್ಮನಾಗಿ | ಧರ್ಮ
ರಾಜನು ತಾನೀಗ ಶ್ರೇಷ್ಠನಾಗಿ | ಎಲ್ಲ
ಅನುಜರು ತಮ್ಮ ರೂಪ ಬದಲಿಸಿಕೊಂಡು
ಮೌನದಿ ವಿರಾಟನಗರಕೈದಿದರು    ೭

ಬಂದು ವಿರಾಟನ ಸದರಿನೊಳಗೆ ತಾವು
ಚಂದದಿ ನಿಂತುಕೊಂಡ್ಹೇಳುತಲಿ | ನಮ
ಗೊಂದೊಂದು ಚಾಕರಿ ಬೇಕೆನುತಲಿ | ನೀವೆ
ತಂದೆಯು ಎಂದು ಕೊಂಡಾಡುತಲಿ | ಯಮ
ನಂದನ ಪೇಳಲು ಅಂದು ವಿರಾಟನು
ಚಂದವಾಯಿತೆಂದು ಮುಂದಕ್ಕೆ ಕರೆದ        ೮

ಮುಂದಕ್ಕೆ ಬಂದು ಶರಣುಮಾಡಿ ನಾಲ್ವರು
ಹಿಂದಕ್ಕೆ ಸರಿವಂಥ ಸಮಯದಲಿ | ದ್ರೌಪದಿ
ಕಂಡು ವಿರಾಟನ ಮನಸಿನಲಿ | ಚಂದ್ರ
ಮುಖಿಯಳ ಮುಖನೋಡಿ ಚಿಂತಿಯಲಿ | ತನ್ನ
ಮಂದಗಮನೆಯಳ ಕರೆದು ಹೇಳಿದನಾಗ
ನಂದಿನಿಯಳ ಕರಕೊಂಡು ಹೋಗೆಂದ        ೯

ದ್ರೌಪತಿಯನು ತನ್ನ ಸತಿಯ ಬಳಿಯಿಟ್ಟು
ಬೇಕಾದ ಕೆಲಸವ ಹೇಳೆನುತ | ತಂಗಿ
ಒಳೆಯಕ್ಕೆ ಬಾರೆಂದು ಕರೆದೊಯ್ಯುತ | ದಿನ
ಊಟಕ್ಕೆ ಮಾಡು ನಮಗೆಂದೆನುತ | ಇಂದು
ಬಾಳುಳ್ಳ ಮಗಳಿಗೆ ಬಡತನ ಬಂದಿದೆ
ಬಾರವ್ವ ಭಾಮಿನಿಯೆಂದು ಕರೆದಳು          ೧೦

ಬಂದೆನಕ್ಕ ಎಂದು ಸಂದೇಹವಿಲ್ಲದೆ
ಚಂದದಿ ಒಳಯಕ್ಕೆ ಹೋದಳಾಗ | ಅಕ್ಕ
ಇಂದೇನು ಕೆಲಸವು ಹೇಳಿರೀಗ | ಇಂದು
ಎಂದಾಗ ಮನಿಯೊಳು ಕೇಳುತಾಗ | ಮನ
ನೊಂದು ಹೃದಯ ಕಳೆಗುಂದಿ ದ್ರೌಪದಿ ತಾನು
ಚಂದದಿ ಅನ್ನವ ಮಾಡುತ್ತಲಿಹಳು   ೧೧

ಧರ್ಮರಾಜನು ಪಾರ್ಥ ನಕುಲ ಸಹದೇವರು
ನಿರ್ಮಲದಿಂದಲ್ಲಿ ಇರುತಿರಲು | ಭೀಮ
ತಾ ಮಡಿಹೊತ್ತು ನೀರ ತರುತಿರಲು | ತಮ್ಮ
ರೂಪವ ತಿಳಿಯದೆ ಇರುತಿರಲು | ಮುಂದೆ
ಆಗುವ ಕಥೆಯನು ಹೇಳುವೆ ಕೇಳಿರಿ
ಭೋಗವಂತರು ಬೇಗ ಮನಸಿಗೆ ತಂದು      ೧೨

ವನವಾಸ ತೀರೋದು ಸನಿಯಕ್ಕ ಬಂದಿತು
ಮನೆಯೊಳಗ ಇದ್ದಂಥ ಕೀಚಕನು | ತಾನು
ಒಂದಿನ ದ್ರೌಪದಿಯ ಕಂಡಾನು | ಆಗ
ಮನ ಮರುಳುಗೊಂಡು ನಿಂತಿಹನು | ಇವ
ಳೆಲ್ಲಿಯವಳು ಎಂದು ಅಕ್ಕನ ಕೇಳಲು
ಎಲ್ಲಾನು ತಮ್ಮಗೆ ಹೇಳುತಲಿಹಳು ೧೩

ಬಾಲೇರ ಕೂಡಿ ಈ ನಾರಿ ಬಂದಳೊ ಈಕಿ
ದಾರು ನಾನರಿಯೆನು ಕೇಳೊ ತಮ್ಮ | ಬಲು
ವಯ್ಯಾರ ಮಾಡುತಾಳೆ ಕೇಳಿರಮ್ಮ | ಬಹು
ಭಾರಿ ಕಾಣಸ್ತಾಳೆ ನೋಡಿರಮ್ಮ | ಇಂದು
ನಾರೇರ ಸಮೂಹದಿ ಸೂಚು ಬಡಿದು ಮತ್ತೆ
ವಾರಿಗೆ ನಿಂತಳು ಕೀಚಕನಕ್ಕ       ೧೪

ಭ್ರಾಂತಿ ಹತ್ತಿ ಆಗ ನಿಂತು ಮಾತಾಡುತ
ಕಾಂತೆ ನೀ ಯಾರವ್ವ ಎಂದೆನುತ | ಬಲು
ಚಿಂತೀಲಿ ತಾನು ಮಾತಾಡಿಸುತ | ಕಾಮ
ತಂತ್ರಕ್ಕೆ ದೇಹದ್ಹತ್ತರ ಹೋಗುತ | ಕೀಚ
ಕಂತು ತಾ ನಿಂತನು ಕಾತೆಯಮುಖ ನೋಡಿ
ಭ್ರಾಂತನಾಗಿ ತಾನು ಬಿಟ್ಟಾನ ಬಾಯ        ೧೫

ನಳಿತೋಳುಗಳ ಕಂಡು ಕಳವಳಗೊಳ್ಳುತ
ಇಳಿದನು ಚಿಂತಿಲೆ ಭೂಮಿಗಿಂದ | ಭಾಳ
ಹಲ್ಲು ಬೆನ್ನು ಬಾಯಿ ತೆಗೆದು ಮುಗಿಲಿಗಿಂದ | ಇಂಥ
ಹೆಣ್ಣನು ಕಣ್ಣಿಲೆ ಕಾಣೆನೆಂದ | ಮುಂದೆ
ಇನ್ನೇನು ಉಳಿಯೆನು ಈಕಿ ರೂಪವ ನೋಡಿ
ಕನ್ನೆಯ ವಶಮಾಡಿಕೊಡಿಂದು ನನ್ನ ಕ್ಕ       ೧೬

ತೋಳ್ತೊಡಿ ಬಾಳೆಯ ದಿಂಡಿನಂಥವಳ
ಕಾಲ್ಬೆರಳುಗಳ್ ಸಣ್ಣಾಗಿ ಕಾಣಿಸುತ | ವಾರಿ
ನೋಟದಿಂದ ನೋಡುತ ಪೋಗುತ | ಇಂಥ
ನಾರಿಯು ಕೈವಶವಾಗದಿದ್ದರೆ ಎನ್ನ
ಶರೀರ ವ್ಯರ್ಥವೆಂದು ನುಡಿದ ಕೀಚಕನು      ೧೭

ಮಧುರ ಕೋಕಿಲವೆಣ್ಣು ಸ್ವರವೆತ್ತಿ ನುಡಿದರೆ
ಕಿವಿಯೊಳು ಹಾರಿಯು ಹಾಕಿದಂತೆ | ಎನಗೆ
ಸಿಡಿಲು ಹೊಡೆದು ಜೀವ ಝಲ್ಲೆಂದಂತೆ | ಘುಡಿ
ಘುಡಿಸುವ ಹುಲ್ಲೆಂದು ಅರ್ಭಾಟದಂತೆ | ಇಂದು
ಮಡದಿಯ ಕಂಡು ನಾ ಬಿಡಲಾರೆನೆಂಬುತ
ಗಡಗುಟ್ಟಿ ಹೊರಳುತ ನೆರಳುತಲಿಹನು       ೧೮

ಕನ್ನಡಿ ಕದಪಿನ ಮುಖವನು ಕಾಣುತ
ತಾನು ಎಚ್ಚರದಪ್ಪಿ ನಿಂತಿಹನು | ಮತ್ತೆ
ಇನ್ನೇನು ಗತಿಯೆಂದು ಆಡಿದನು | ಬೇಗ
ತನ್ನ ಅಕ್ಕನ ಕರೆದ್ಹೇಳಿದನು | ಇಂಥ
ಚನ್ನೆಯ ವಶಮಾಡಿ ಕೊಟ್ಟರೆ ಎನ್ನಯ
ಪುಣ್ಯಕ್ಕೆಣೆಯುಂಟೆ ಮೂರು ಲೋಕದಲಿ       ೧೯

ಒಬ್ಬ ದೂತನ ವಾರಿಯೊಳು ನಿಂತು ತನ್ನಯ
ಹುಬ್ಬಿಗೆ ಕೈಹಚ್ಚಿ ನೋಡಿದನು | ಇಂಥ
ಹೆಣ್ಣಿನ ಸಮನಿಲ್ಲ ನೋಡೆಂದನು | ಬಣ್ಣ
ನಿಂಬಿಯ ಹಣ್ಣು ಕಾಣೆಂದನು | ಇಂಥ
ಹೆಣ್ಣಿನ ರೂಪವ ಕಂಡು ಸೈರಿಸಲಾರೆ
ಇನ್ನೇನು ಗತಿಯೆಂದು ಅಂದ ಕೀಚಕನು      ೨೦

ಬಡನಡು ಬಳಕುವ ಹೆಣ್ಣಿನ ನಡಿಗೆಯು
ನಡೆದರೆ ಮದ್ದಾನೆಯಂದದಲಿ | ಬಲು
ನುಡಿವಳು ಸ್ವರ ಕೋಕಿಲೆಯಂದದಲಿ | ತಾನು
ಕಡೆಗಣ್ಣ ನೋಟದಿ ನೋಡುತಲಿಹಳು | ಇಂಥ
ಸುಂದರಿ ಸುಗುಣಿ ಇಂದಾಗದಿರೆ ಎನಗೆ
ಇನ್ನೆಂದಿಗೆ ಆಗೋದು ಎಂದ ಕೀಚಕನು       ೨೧

ಸ್ಮರನ ತಾಪವು ಹೆಚ್ಚಿ ಮರುಗುತಾಲಕ್ಷಣ
ಕರೆದನು ಬಾರೆ ನೀ ಬಾರೆನುತ | ಬಾಯಿ
ದೆರೆದನು ಹೇಳು ಹೇಳೆಂದೆನುತ | ಕೈಯ
ಮುಗಿವೆನು ನೀರೆ ನೀ ಪೇಳೆನುತ | ನಿನ್ನ
ನಗೆಗೆ ನಾ ಮರುಳಾದೆ ಲಗುಬಗೆಯಿಂದಲಿ
ಬಗೆಯ ನಿನ್ನದು ಹೇಳು ಎಂದ ಕೀಚಕನು     ೨೨

ಎನ್ನ ಬಗೆಯ ಭಾವ ಇನ್ನೇನು ನೀ ಕಂಡೆ
ಬಿನ್ನಾಣ ಮಾತನಾಡುದು ಸಲ್ಲವೊ | ಪರ
ಹೆಣ್ಣಿಗೆ ಮರುಳಾಗುದುಚಿತಲ್ಲವೊ | ನಿನ್ನ
ಕಣ್ಣು ಕೀಳಿಸುವೆನು ಪೋಗೆಲವೊ | ಎಂದು
ಘರ್ಜಿಸಿ ನುಡಿಯಲು ಮಡದಿ ದ್ರೌಪದಿ ತಾನು
ಸರ್ಜಿಸಿ ಹಿಂದಕ್ಕೆ ಸರಿದ ಕೀಚಕನು ೨೩

ಸರಿದು ಹಿಂದಕೆ ನಿಂತು ಸರಸದಿ ಮಾತಾಡು
ತಿರೆ ಹೆಣ್ಣೆ ನೀನಿಗ ಏಳೆನುತ | ನಿನ್ನ
ನಾಳ್ವರ ಹೆಸರು ಎಂದೆನುತ | ಇಂಥ
ಖೂಳ ಕೀಚಕ ನುಡಿವಂಥ ನುಡಿಯ ಕೇಳಿ
ಘೋಳಿಟ್ಟು ಮನದಲ್ಲಿ ಚಿಂತೆ ಮಾಡಿದಳು     ೨೪

ಬಡವರಿಗೆ ಹೊತ್ತು ಬಂದ ವ್ಯಾಳ್ಳೇದಲ್ಲಿ
ಕಿಡಿಗೇಡಿ ಮಾತನಾಡೋದು ಸಲ್ಲವೊ | ನಿನ್ನ
ತುಡುಗ ಬೆರಸುವದು ಇದು ಸಲ್ಲವೊ | ನೀನು
ಕಿಡಿಗೇಡಿತನ ಮಾಡುದುಚಿತಲ್ಲವೊ | ಎಂದು
ಮಡದಿ ದ್ರೌಪದಿ ತಾನು ನುಡಿಯಲಾಕ್ಷಣ
ಗಡಬಡಿಸುತ ಕಾಡುತಲ್ಲಿರ್ದ ಕೀಚಕನು       ೨೫

ಬಡತನ ಬಂದರೆ ದುಡುಕು ಮಾಡುದು ಸಲ್ಲ
ಕೊಡುವೆನು ವಸ್ತವಡವಿಯೆನುತ | ಕೈಯೊ
ಳಿಡುವೆನು ವಂಕಿ ಹರಡಿಯೆನುತ | ಎನ್ನ
ಮಡದಿ ನೀನಾಗು ಇಂದಿಗೆ ಎನುತ | ಮತ್ತೆ
ತುಡುಗು ಬುದ್ಧಿಯಲಿಂದ ಬಿಡದೆ ಕಾಡುತಲಿಹನು
ಕಡುಚೆಲ್ವ ದ್ರೌಪದಿಯನು ಕಂಡು ಖಳನು     ೨೬

ದುಡುಕು ಮಾಡೂದು ಸಲ್ಲದೆಂದು ದ್ರೌಪದಿ ತಾನು
ಕಡುಸಿಟ್ಟಿನಿಂದಲಿ ನುಡಿಯುತಲಿ | ನಿನ್ನ
ವಡವಿ ವಸ್ತುಗಳೆಲ್ಲ ತೋರುತಲಿ | ಮತ್ತೆ
ತುಡುಗ ಬುದ್ಧಿಯು ಸಲ್ಲದೆಂಬುತಲಿ | ಹೀಂಗೆ
ದುಡುಕೂದು ತರವಲ್ಲ ಕಡಿಸಿ ಹಾಕುವೆ ನಿನ್ನ
ಕೊಡಸೂದೆ ಯಮನಿಗೆ ಇಡಸಲ್ಲ ನಿನ್ನ        ೨೭

ಸಿಟ್ಟು ಮಾಡಲಿ ಬೇಡ ನಿನ್ನ ಮನಸಿನೊಳು
ಘಟ್ಯಾಗೆ ಎನಗೆ ನಂಬಿಗೆಯ ಕೊಟ್ಟು | ನಿನ್ನ
ಹೊಟ್ಟೆಯ ಒಳಗಿನ ಸಿಟ್ಟು ಬಿಟ್ಟು | ರತಿ
ಯಿಟ್ಟು ಎನಗೆ ಮಾತು ಪೂರ್ಣಕೊಟ್ಟು | ಮನ
ಸಿಟ್ಟು ಎನ್ನಯ ಮಾತು ಕೇಳೆಂದು ಕೀಚಕ
ಗಟ್ಯಾಗಿ ದ್ರೌಪದಿಯ ಕಾಡಿದ ಖಳನು         ೨೮

ಭ್ರಷ್ಟ ಮಾತುಗಳಿಂದ ಫಲವಿಲ್ಲವೆಂಬುತ
ಕೆಟ್ಟಿ ನೀ ಬೇಡವೊ ಸುಮ್ಮನ್ಹೋಗು | ರಟ್ಟಿ
ಕಟ್ಟಿಸಿಕೊಂಡಿಯೊ ಸಲ್ಲ ಹೋಗು | ಹಲ್ಲು
ಕುಟ್ಟಿಸಿ ಹೊಯ್ಸುವೆ ಅಲ್ಲ ಹೋಗು | ಎಂದು
ಸಿಟ್ಟಿಲಿ ದ್ರೌಪದಿ ನುಡಿವುತ್ತಿರಲು ಮತ್ತೆ
ಕೆಟ್ಟ ಕೀಚಕ ಆಡಿದಂಥ ಮಾತುಗಳ           ೨೯

ಉಟ್ಟೆನೆಂದರೆ ನಿನ್ನ ಮನಕೆ ಬೇಕಾದಂಥ
ಪಟ್ಟಾವಳಿಯ ಸೀರಿ ಹಿಡಿಯೆನುತ | ಮುತ್ತ
ಪಟ್ಟಿನ ಸರವನು ಹಾಕೆನುತ | ಕರ್ಣ
ಕಿಟ್ಟುಕೊ ಬುಗುಡಿ ಬಾವಲಿ ಎನುತ | ರತಿ
ಯಿಟ್ಟು ನಾ ಹೇಳುವೆ ಸಿಟ್ಟು ಮಾಡಲಿ ಬೇಡ
ಕಟ್ಟಾಣಿ ಮುತ್ತಿನ ಮುದ್ದುಹೆಣ್ಣೆ        ೩೦

ಪರಹೆಣ್ಣು ಕಂಡರೆ ಸರಸ ಮಾಡುದು ಸಲ್ಲ
ಗುರಿಯಾದಿ ಯಮನಿಗೆ ಬೇಡಲವೊ | ನಿನ್ನ
ಶರೀರವ ಸೀಳ್ಯಾರು ಕೇಳೆಲವೊ | ಕಾಮ
ಗುರಿಗೆ ನೀ ಈಡಾಗಬೇಡಲವೊ | ತಿಳಿ
ದರಿದು ಕೇಳೆಲೊ ನಿನ್ನ ಸರಸ ಮಾಡುದು ಸಲ್ಲ
ಪರದೇಶಿ ಛೀ ಎಂದು ನುಡಿದಳು ಖಳಗೆ      ೩೧

ಪರದೇಶಿ ಅಂಗುದು ತರವಲ್ಲ ನೀ ಬಾಲೆ
ಅರಸು ವಿರಾಟನ ಸತಿಯು ಕಾಣೆ | ನಮ್ಮ
ಹಿರಿಯಕ್ಕ ನಿನಗೆ ಹೇಳುವೆನು ಜಾಣೆ | ಭಾಗ್ಯ
ವಂತನು ಕೇಳೆ ಪನ್ನಂಗವೇಣಿ | ನಿನ್ನ
ಸರಸರೂಪಕೆ ನಾನು ಮರುಳುಗೊಂಡೆನು ನಾರಿ
ಕರುಣಿಟ್ಟು ಎನ್ನ ನೀ ನೋಡೆ ವೈಯಾರಿ      ೩೨

ವೈಯಾರಿ ಎಂಬುವದು ತರವಲ್ಲ ನಿನಗೀಗ
ಜಾರ ಹೆಣ್ಣುಗಳಲ್ಲ ಕೇಳೊ ಜಾಣಾ | ನಗೆ
ಯಾಡುವಳು ಅಲ್ಲ ಬೇಡೊ ಕಾಣಾ | ಮುಂದ
ಕ್ಕಾಗಿ ಸಾಗಿ ಹೋಗೊ ಅಪ್ರವೀಣಾ | ನಿನ್ನ
ಬಗೆಯನು ತಿಳಿದೆನು ಶ್ವಾನ ನೀ ಹೋಗೆಂದು
ಮುಖವ ತಗ್ಗಿಸಿ ಮಾತನಾಡಿದಳು ನಾರಿ      ೩೩

ಮುಖವ ತಗ್ಗಿಸಿ ಮಾತನಾಡುವಳ ಕಂಡು
ಪಿಕಸ್ವರವಾಣಿ ನೀ ಕೇಳೆಂದನು | ಚಕ
ಚಕನೆ ಎನಗೆ ಮಾತು ಕೊಡು ಎಂದನು | ನಿನ್ನ
ಮುಖನೋಡಿ ನಾ ಮರುಳಾಗಿದ್ದೆನು | ಮುಂದೆ
ಅಂತಃಕರುಣವಿಟ್ಟು ಸಂತೋಷ ಮಾಡೆಂದು
ನಿಂತು ಮಾತು ಹೇಳುತ್ತಿರ್ದನು ಖಳನು      ೩೪

ಖಳನ ಮಾತನು ಕೇಳಿ ಕಾಮಿನಿ ಕುಲಮಣಿ
ಬಳಬಳ ಬಳಲುತ ಮನಸಿನಲ್ಲಿ | ನೀರ
ಸುರಿಸ್ಯಾಳು ತನ್ನಯ ಕಣ್ಣಿನಲ್ಲಿ | ಎನ್ನ
ಫಣಿಯೊಳು ಬರೆದಿಹ ಬ್ರಹ್ಮನಲ್ಲಿ | ಆಗ
ಬೆದರು ಹುಟ್ಟಲಿಯೆಂದು ಸುದತಿ ಶಾಪವ ಕೊಟ್ಟು
ಮನದಲಿ ಮರುಗಿ ಸುಯ್ಗರೆದಳಾ ಬಾಲೆ      ೩೫
ಹಿಂದೆ ನಾ ಮಾಡಿದ ಪಾಪದ ಫಲದಿಂದೆ
ಮುಂದೆ ಇಂಥ ಘಾತ ಬಂದಿತೆಂದು | ಎನ್ನ
ತಂದೆತಾಯಿ ಇದಕ್ಕಾಗಿ ಹಡೆದರೆಂದು | ಒಮ್ಮೆ
ಅಣ್ಣ ಮುಕ್ಕುಂದನು ಮುನಿದನೆಂದು | ತಾನು
ಮಂದಗಮನೆಯಳು ನೊಂದು ಹೃದಯ ಕಳೆ
ಗುಂದಿ ಚಿಂತಿಸುತಾಗ ನಿಂತಾಳ ನಾರಿ       ೩೬

ಚಿಂತೆ ಮಾಡುವುದು ಸಲ್ಲದೆಂದು ನಾ ಹೇಳಿದರೆ
ಯಾತಕ್ಕೆ ಕರುಣವು ಬರಲೊಲ್ಲದು | ನಿನಗೆ
ಭ್ರಾಂತಿ ಹತ್ತಿ ಮನಸು ತಾ ನಿಲ್ಲದು | ಮಾರನ
ತಂತ್ರವು ಯಾರಿಗೆ ನಿಲುಕುವದು | ಇಂಥ
ಕಾಂತೆ ನೀನು ಪ್ರಾಯವಂತೆ ಎನಗೆ ಮನನ
ಸಂತೋಷ ಮಾಡೆಂದು ಸೆರಗನು ಹಿಡಿದ     ೩೭