ಅಡಿಕೆ
ಬೇರುಹುಳ : ಇದು ಬಿಳಿಯ ರೇಷ್ಮೆ ಹುಳುಗಳಂತೆ ಇದ್ದು ಅಡಿಕೆ ಮರದ ಬೇರನ್ನು ತಿನ್ನುತ್ತದೆ ಎಂಬುದು ನಂಬಿಕೆ. ಇದಕ್ಕೆ ಬೇವಿನಹಿಂಡಿಯು ಮೊದಲ ಪರಿಹಾರ. ಜೂನ್ ತಿಂಗಳಲ್ಲಿ ನೆಲದಿಂದೇಳುವ ದುಂಬಿಯನ್ನು ಹಿಡಿದು ಕೊಲ್ಲುವುದು ಎರಡನೇ ಪರಿಹಾರ. ಅದೇ ಸಮಯದಲ್ಲಿ ತೋಟದೊಳಗೊಂದು ಹೊಡಚಲು ಹಾಕಿದರೆ (ಬೆಂಕಿ) ಹುಳುಗಳೆಲ್ಲಾ (ದುಂಬಿಗಳು) ಹಾರಿಬಂದು ಬೆಂಕಿಗೆ ಬಿದ್ದು ಸಾಯುತ್ತವೆ ಎನ್ನುವುದು ಮೂರನೇ ಪರಿಹಾರ. ಅವುಗಳಿಗಾಗಿ ಏನೂ ಮಾಡದೇ ಸುಮ್ಮನಿರುವುದು ಎಲ್ಲಕ್ಕಿಂತ ಉತ್ತಮ ಪರಿಹಾರ. ಪರಿಸರದಲ್ಲೇ ಅದರ ನಿಯಂತ್ರಣ ವ್ಯವಸ್ಥೆ ಇದೆ.
ಕೊಳೆರೋಗ/ಮಹಾಳಿ : ಮಳೆಗಾಲದ ಮಳೆ ಹೆಚ್ಚಾದಂತೆ ರೋಗವೂ ಹೆಚ್ಚು. ಮಿಡಿ ಅಡಿಕೆಗಳು ಕೊಳೆತು ಬೀಳುತ್ತವೆ. ಬಿಸಿಲು ಮಳೆಯಾದರಂತೂ ಇದು ತೋಟವೆಲ್ಲಾ ವ್ಯಾಪಿಸಿಬಿಡುತ್ತದೆ. ಇದಕ್ಕೆ ಸಾಗರದ ಖಂಡಿಕಾದಲ್ಲಿ ಪ್ರಯೋಗ ಮಾಡಿ, ಜರ್ಮನಿಯ ಕೋಲ್ಮನ್ ಎನ್ನುವ ವಿಜ್ಞಾನಿ ಕಂಡುಹಿಡಿದ ನಿವಾರಣೆ ಶೇಕಡಾ ಒಂದರ ಬೋರ್ಡೋ ದ್ರಾವಣ ಸಿಂಪಡಣೆ. ಸುಣ್ಣ ಹಾಗೂ ಮೈಲುತುತ್ತ ಎರಡನ್ನೂ ಶೇಕಡಾ ಒಂದರ ಪ್ರಮಾಣದಲ್ಲಿ ಸೇರಿಸುವಿಕೆಯೇ ಬೋರ್ಡೋ ತಯಾರಿ. ನೂರು ಲೀಟರ್ ಹಿಡಿಯುವ ಹಂಡೆ/ ಬಾನಿ/ ಪ್ಲಾಸ್ಟಿಕ್ ಕೊಳಾಯಿಯನ್ನು ತೆಗೆದುಕೊಳ್ಳಬೇಕು. ಒಂದು ಕಿಲೋಗ್ರಾಂ ಮೈಲುತುತ್ತವನ್ನು ನೀರಿನಲ್ಲಿ ನೆನೆಸಿಕೊಳ್ಳಬೇಕು. ಮೈಲುತುತ್ತವು ಹರಳಾಗಿರುವ ಪ್ರಯುಕ್ತ ಬಟ್ಟೆಯಲ್ಲಿ ಕಟ್ಟಿ ನೀರಿನಲ್ಲಿ ಇಳಿಬಿಡಬೇಕು. ಅದೇ ರೀತಿ ಒಂದು ಕಿಲೋಗ್ರಾಂ ಸುಣ್ಣವನ್ನೂ ನೆನೆಸಬೇಕು. ಎರಡನ್ನೂ ಒಮ್ಮೆಲೇ ಹಂಡೆಗೆ ಹಾಕುತ್ತಾ ಬರಬೇಕು. ಆಮೇಲೆ ಹಂಡೆ ತುಂಬಾ ನೀರು ಹಾಕಿ ನೂರು ಲೀಟರ್ ಭರ್ತಿ ಮಾಡಬೇಕು. ದ್ರಾವಣ ನ್ಯೂಟ್ರಲ್ ಆಗಬೇಕಾದ್ದು ಬಹಳಾ ಮುಖ್ಯ. ಅದಕ್ಕೆ PH ಪೇಪರ್ ಪ್ರಮಾಣ ನೋಡಬೇಕು.
ಕತ್ತಿ ಅದ್ದಿ ಪ್ರಮಾಣ ನೋಡುತ್ತಾರೆ. ಅದ್ದಿದಾಗ ಕತ್ತಿಯ ಬಣ್ಣ ಬದಲಾದರೆ ಪ್ರಮಾಣ ಸರಿಯಾಗಿದೆ ಎಂದು ತಿಳಿಯುತ್ತಾರೆ. ಹರಿತ ಕತ್ತಿಯ ಬಣ್ಣ ಹಾಗೇ ಇದ್ದರೆ ಸುಣ್ಣ ಸೇರಿಸುತ್ತಾರೆ. ಹೆಚ್ಚು ಕಪ್ಪಾದರೆ ಮೈಲುತುತ್ತ ಸೇರಿಸುತ್ತಾರೆ. ಅರಿಸಿನಪುಡಿ ಪರೀಕ್ಷೆ; ಅರಿಸಿನ ಪುಡಿಯ ಮೇಲೆ ದ್ರಾವಣದ ಹನಿಗಳನ್ನು ಬಿಟ್ಟಾಗ ಅರಿಸಿನಪುಡಿಯ ಬಣ್ಣ ಬದಲಾಗದಿದ್ದರೆ ಸುಣ್ಣ ಸೇರಿಸಬೇಕು. ಅರಿಸಿನಪುಡಿಯ ಬಣ್ಣ ಕೆಂಪಾದರೆ ಮೈಲುತುತ್ತ ಸೇರಿಸಬೇಕು. ಅರಿಸಿನಪುಡಿಯ ಬಣ್ಣ ಕಿತ್ತಳೆಯಾದರೆ ದ್ರಾವಣ ನ್ಯೂಟ್ರಲ್ ಎಂದು ತಿಳಿಯುತ್ತಾರೆ.
ಬೋರ್ಡೋವನ್ನು ಗೊನೆಗಳಿಗೆ ಸಿಂಪಡಿಸಬೇಕು. ಕೊನೆಗೌಡ ಮರವನ್ನು ಅರ್ಧ ಹತ್ತಿ ಪಿಚಕಾರಿಯಿಂದ ಸಿಂಪಡಿಸುತ್ತಾನೆ.
ಮಳೆಗಾಲ ಪ್ರಾರಂಭಕ್ಕೂ ಮೊದಲು, ಮಧ್ಯದಲ್ಲೊಮ್ಮೆ ಹಾಗೂ ಮತ್ತೊಮ್ಮೆ ಅಂದರೆ ಪ್ರತಿ ೪೦ ದಿನಗಳ ಅಂತರದಲ್ಲಿ ಸಿಂಪಡಿಸಬೇಕು. ಸಿಂಪಡಿಸುವಾಗ ಮಳೆಯಿರಬಾರದು. ಕನಿಷ್ಠ ಸಿಂಪಡಿಸಿದ ಒಂದು ತಾಸು ಮಳೆ ಬರಬಾರದು. ದ್ರಾವಣವು ಮಣ್ಣಿಗೆ ಬಿದ್ದರೆ ಅಪಾಯವಿಲ್ಲ.
ಸುಳಿಕೊಳೆ ರೋಗ: ಇದಕ್ಕೂ ಬೋರ್ಡೋ ಔಷಧಿ. ಸುಳಿಯನ್ನು ದ್ರಾವಣದಲ್ಲಿ ತೊಳೆಯಬೇಕು. ಮೂರು-ನಾಲ್ಕು ಸಾರಿ ಮಾಡಬೇಕಾಗಬಹುದು.
ಅಣಬೆ ರೋಗ: ಮರವು ಟೊಳ್ಳಾಗಿರುತ್ತದೆ. ಮುರಿದು ಬಿದ್ದಾಗ ಒಳಗೆ ಅಣಬೆ ಬೆಳೆದಿರುವುದು ತಿಳಿಯುತ್ತದೆ. ಇಂತಹ ಜಾಗ ಮರವನ್ನು ಸುಡಬೇಕು. ಅದೇ ಜಾಗದಲ್ಲಿ ಹೊಸ ಗಿಡ ನೆಡಬಾರದು. ಹೆಚ್ಚು ನೀರು ಇರುವ ಕಡೆ ಈ ರೋಗ ಹೆಚ್ಚು. ಬಸಿಗಾಲುವೆ ಸರಿಪಡಿಸಿ, ನೀರು ನಿಲ್ಲದಂತೆ ನೋಡಿಕೊಳ್ಳಬೇಕು.
ಹಿಡಿಮುಂಡಿಗೆ ರೋಗ: ಇದೊಂದು ಶಾರೀರಿಕ ಅವ್ಯವಸ್ಥೆ. ಎಲೆಗಳು ಸಣ್ಣಗೆ ನೆರಿಗೆ ನೆರಿಗೆಯಾಗಿ ಬಿರುಸಾಗುತ್ತವೆ. ಕಾಂಡ ಚೂಪಾಗುತ್ತದೆ. ಗಣ್ಣು ಕಿರಿದಾಗುತ್ತದೆ. ಸುಳಿ ಒತ್ತಾಗುತ್ತದೆ. ವಿಕೃತವಾಗಿ ಫಲ ಬಿಡುವುದಿಲ್ಲ.
ಹಳದಿಮುಂಡಿಗೆ ರೋಗ: ಎಲೆಗಳ ಮೇಲೆ ಹಳದಿ ಪಟ್ಟಿಯಾಗುತ್ತದೆ. ಮರ ಸಣ್ಣಗಾಗಿ ಗೊನೆಯೂ ಹಾಳಾಗುತ್ತದೆ. ಇದಕ್ಕೆ ಪರಿಹಾರ ಸಿಕ್ಕಿಲ್ಲ.
ಮಡ್ಲೊಡಕ, ಹಣ್ಣಡಿಕೆ ಕೊಳೆಯುವುದು ಮುಂತಾದವುಗಳಿಗೆ ಮಣ್ಣು ಫಲವತ್ತತೆಯಿಲ್ಲದಿರುವುದೇ ಕಾರಣ.
ಸುಳಿ ಕೊಳೆಗೆ ಕೆಂಡ ಸಂಪಿಗೆ ಗಿಡವನ್ನು ತೋಟದಲ್ಲಿ ನೆಡುವ ಪದ್ಧತಿಯಿದೆ.
ತೆಂಗು : ಕೊಬ್ಬರಿ ಕೌಟು ಬರುವುದಕ್ಕೆ ಹಲ್ಲಿವರ್ಕ ಎನ್ನುತ್ತಾರೆ. ಪರಿಹಾರವಿಲ್ಲ.
ರಸ ಸೋರುವಿಕೆ : ಮೊದಲು ತೆಂಗಿನಗರಿ, ಆಮೇಲೆ ಕಾಂಡದಲ್ಲಿ ರಸ ಸೋರುತ್ತದೆ. ತೇವಾಂಶ ಹೆಚ್ಚಾಗಿ ಅತಿ ಶೀತದಿಂದ ಬರುವ ರೋಗವಿದು. ನಾಲ್ಕು ಅಡಿ ಎತ್ತರದಲ್ಲಿ ದಪ್ಪ ಮೊಳೆಯಿಂದ ಎರಡೂ ಕಡೆ ಕಂಡಿ ಮಾಡಬೇಕು. ರಸ ಸೋರಿಹೋದ ಮೇಲೆ ಬೆಂಕಿ ಹಚ್ಚಿದ ದೊಂದಿ ತೆಗೆದುಕೊಂಡು ಸರಿಯಾಗಿ ಶಾಖ ಕೊಡಬೇಕು. ಕಾಂಡಕ್ಕೆ ಸುಣ್ಣ ಬಳಿಯಬೇಕು. ಮಣ್ಣು, ಗೊಬ್ಬರ, ನೀರು ಸರಿಪಡಿಸಿ ಗುಣಪಡಿಸಬಹುದು.
ಕೆಲವರು ಡಾಂಬರು ಬಡಿಯುತ್ತಾರೆ. ಮರ ಸತ್ತಿದ್ದು ದಾಖಲೆಯಿಲ್ಲ. ಉಳಿಯಿಂದ ರಸ ಸೋರುವ ಜಾಗವನ್ನು ಚೌಕಾಕಾರವಾಗಿ ಕೆತ್ತಬೇಕು. ಅದಕ್ಕೆ ಎಕ್ಕದ ಸೊಪ್ಪು, ತುಂಬೆ ಸೊಪ್ಪು, ಅಂಬಳಿ ಸೊಪ್ಪು, ತಂಗಡೆ ಸೊಪ್ಪು ಸೇರಿಸಿ ಅರೆದು ರಸವನ್ನು ಹಚ್ಚುವುದು. ಹೀಗೆ ನಾಲ್ಕಾರು ಸಾರಿ ಹಚ್ಚಬೇಕು. ಕ್ರಮೇಣ ರೋಗ ವಾಸಿಯಾಗುತ್ತಾ ಬರುತ್ತದೆ.
ಕೊಂಬಿನ ದುಂಬಿ: ಸುಳಿಯೊಳಗೆ ಇರುತ್ತವೆ. ಇದಕ್ಕೆ ಉಪ್ಪು, ಮರಳಿನ ಮಿಶ್ರಣವನ್ನು ಸುಳಿಯ ಒಳಗೆ ಪ್ರತಿವರ್ಷ ಹಾಕುತ್ತಾರೆ. ಕೆಲವರು ಸುಳಿ ಮೆಟ್ಟುತ್ತಾರೆ. ಮರ ಅಲ್ಲಾಡಿದಂತೆ ಸುಳಿಯೊಳಗೆ ಮರಳು ಇಳಿಯುತ್ತದೆ. ಹುಳುಗಳಿದ್ದರೆ ಹೊರಬರಲು ಆಗದು. ಆಹಾರ ತಿನ್ನಲಾಗದೇ ಸತ್ತುಹೋಗುತ್ತದೆ.
ಕೆಂಪು ಮೂತಿ ಹುಳುಗಳಿಗೂ ಇದೇ ಮದ್ದು. ಜೊತೆಗೆ ಕಬ್ಬಿನ ತುಂಡು, ಅನಾನಸು ತುಂಡನ್ನು ಕಾಕಂಬಿಯನ್ನು ಅದ್ದಿ ಮರದ ಬುಡದಲ್ಲಿಟ್ಟರೆ ಹುಳುಗಳು ಅದನ್ನು ತಿನ್ನಲು ಬರುತ್ತವೆ. ಆಗ ಹಿಡಿದು ಕೊಲ್ಲಬೇಕು. ತೆಂಗಿನ ಎಳೆಯ ಕಾಂಡ ಸೇರಿಸಬೇಕು.
ತೊಗಟೆ ಕಳಚಿ ಬಿದ್ದರೆ ಅಂತಹ ಜಾಗಕ್ಕೆ ಸಿಮೆಂಟ್ ಕಟ್ಟುವುದಕ್ಕಿಂತಲೂ ಮಣ್ಣು ಮೆತ್ತುವುದು ಒಳ್ಳೆಯದು. ತೇವವಿರುವಂತೆ ನೋಡಿಕೊಂಡರೆ ಮಣ್ಣು ಉದುರುವುದಿಲ್ಲ. ಅದೇ ಜಾಗದಲ್ಲಿ ಬೇರು ಬಂದು ಮರ ಸಾಯುವುದು ತಪ್ಪುತ್ತದೆ.
ಸುಳಿಯ ಬಳಿ ಅರಿಸಿನ, ಇಂಗು, ಬೆಳ್ಳುಳ್ಳಿ, ಶುಂಠಿಗಳನ್ನು ಕಟ್ಟುವುದರಿಂದಲೂ ಹುಳು, ನುಸಿಗಳ ನಿಯಂತ್ರಣ ಸಾಧ್ಯ.
ವೀಳ್ಯದೆಲೆ
ಕರ್ಜಾಲ ರೋಗ: ಬಳ್ಳಿಯ ಮಧ್ಯೆ ಎರಡು ಇಂಚಿನಷ್ಟು ಕಪ್ಪಾಗಿಬಿಡುತ್ತದೆ. ಇದೇ ಕರ್ಜಾಲ ರೋಗ. ಇದಕ್ಕೆ ಟೇಪ್ ಸುತ್ತುತ್ತಾರೆ ಅಥವಾ ಪಾಲಿಥಿನ್ ರಿಬ್ಬನ್ ಗಟ್ಟಿಯಾಗಿ ಸುತ್ತುತ್ತಾರೆ.
ಬೂದಿರೋಗ, ಎಲೆಸುರಟೋ ರೋಗ, ದದ್ದು ರೋಗ, ನರವಲಿ ಇವುಗಳಿಗೆ ಹೊಂಗೆ ಕಷಾಯ, ಬೇವಿನ ಕಷಾಯಗಳನ್ನು ನೀರಾಗಿ ಮಾಡಿಕೊಂಡು ಸಿಂಪಡಿಸಬೇಕು.
ವೀಳ್ಯದೆಲೆಯಲ್ಲಿ ರೋಗ ಬಾರದಂತೆ ತಡೆಯುವ ಕೆಲಸಗಳು ಬಹಳ ಮುಖ್ಯ. ಬಳ್ಳಿಯ ಬುಡಭಾಗದ ತುಂಡುಗಳನ್ನು ನೆಡಲು ಬಳಸಬಾರದು. ಮಣ್ಣನ್ನು ರೋಗರಹಿತ ಮಾಡಿಕೊಳ್ಳುವುದು ಮುಖ್ಯ. ನೀರು ನಿಲ್ಲಬಾರದು, ಬಸಿಗಾಲುವೆಗಳ ವ್ಯವಸ್ಥೆ ಚೆನ್ನಾಗಿರಬೇಕು. ತೋಟದಲ್ಲಿ ಉದುರಿದ ಎಲೆಗಳನ್ನು ಸುಡಬೇಕು. ಯಾವುದೇ ರೀತಿಯ ಸೊಪ್ಪು, ಸತ್ತೆಗಳಿಲ್ಲದಂತೆ ಚೊಕ್ಕಟವಾಗಿರಬೇಕು. ಕಳೆಗಳನ್ನು ತೆಗೆಯುತ್ತಿರಬೇಕು.
ಬಸವನಹುಳುಗಳ ನಿವಾರಣೆಗೆ ಕೋಳಿ, ಬಾತುಕೋಳಿಗಳನ್ನು ಸಾಕಬೇಕು. ಆಂಧ್ರದಿಂದ ಬಾತುಕೋಳಿಗಳ ಹಿಂಡು (ಕುರಿ ಹಿಂಡಿನಂತೆ) ಬರುತ್ತವೆ. ಅವುಗಳನ್ನು ತೋಟದೊಳಗೆ ಬಿಟ್ಟುಕೊಂಡರೆ ಕೀಟಗಳು, ಹುಳುಗಳು [ಬಸವನಹುಳು, ಗೊಣ್ಣೆಹುಳು] ಎಲ್ಲವನ್ನೂ ಒಂದೇ ದಿನದಲ್ಲಿ ತಿಂದು ತೇಗುತ್ತವೆ.
ಜಂತುಹುಳುಗಳ ನಿವಾರಣೆಗೆ ಎಕ್ಕದ ಕಷಾಯದ ಸಿಂಪಡಣೆ ಅಥವಾ ಮಣ್ಣಿಗೆ ಹೊಯ್ದರೂ ಸಾಕು. ಆದರೆ ನೀರನ್ನು ಸದಾ ಕೊಡುತ್ತಿರಬೇಕು.
ಬೇರುಗಳಲ್ಲಿರುವ ಹುಳುಗಳ ನಾಶಕ್ಕೆ ಬೇವಿನಹಿಂಡಿ, ಹರಳು ಹಿಂಡಿ, ಶೇಂಗಾ ಹಿಂಡಿ, ಹತ್ತಿ ಹಿಂಡಿ, ಹುಚ್ಚೆಳ್ಳು ಹಿಂಡಿ, ಹೊಂಗೆ ಹಿಂಡಿ, ಮರದ ಹೊಟ್ಟಿನ ಪುಡಿ ಹೀಗೆ ಏನೆಲ್ಲಾ ಗೊಬ್ಬರವನ್ನು ನೀಡುತ್ತಾ ಪರಿಹರಿಸಬಹುದು. ಅಗಸೆ, ನುಗ್ಗೆ, ಬೂರಗಗಳೂ ಜೊತೆಯಲ್ಲಿರುವ ಕಾರಣ ರೋಗಬಾಧೆ ಕಡಿಮೆಯಿರುತ್ತದೆ.
ಹಲಸು: ಮಳೆಗಾಲ ಬಂದಾಗ ಹಣ್ಣು ಬಿರಿದು ಕೊಳೆಯತೊಡಗುತ್ತದೆ. ಕಾರಣ ಪೋಷಕಾಂಶಗಳ ಕೊರತೆ ಹಾಗೂ ಅತಿಯಾದ ನೀರು. ಬಿಸಿಲಿಗೆ ಸಿಕ್ಕು ಹೈರಾಣಾದ ಹಲಸಿನ ಕಾಯಿಗೆ ತಕ್ಷಣದ ಮಳೆ ಹಾಗೂ ನೀರು ಈ ಅಪಾಯವನ್ನು ತರುತ್ತದೆ. ನೀರು ಬಸಿದುಹೋಗುವ ವ್ಯವಸ್ಥೆ ಮಾಡಬೇಕು. ಹಲಸು ಬಿಸಿಲಿಗೆ ಸಿಗದಂತೆ ಹಾಳೆ ಟೊಪ್ಪಿಗೆ ಹಾಕಬೇಕು. ಮರಕ್ಕೆ ಬೇವಿನ ಹಿಂಡಿ, ಶೇಂಗಾ ಹಿಂಡಿ ಹಾಕಿ ಗೊಬ್ಬರ ನೀಡಬೇಕು. ಇದರಿಂದ ಶೀತ ನಿವಾರಣೆಯಾಗಿ ಫಸಲು ಸರಿಯಾಗುತ್ತದೆ. ಶೀತ ನಿವಾರಣೆಗೆ ಆಯಾ ಪ್ರದೇಶದಲ್ಲಿರುವ ಉಪಾಯಗಳನ್ನು ಮಾಡಬಹುದು.
ಮಾವು: ಮಾವಿಗೆ ಬಂದಳಿಕೆ ಕಾಟ. ಮಾವಿನಮರಕ್ಕೂ ಕಾಗೆಗಳಿಗೂ ನಂಟು. ಕಾಗೆಗಳ ಮೂಲಕ ಬರುವ ಈ ಗಿಡದ ಬೀಜಗಳು ಮಾವಿನಕಾಂಡಕ್ಕೆ ಅಂಟಿಕೊಳ್ಳುತ್ತವೆ. ಪ್ರತಿವರ್ಷ ಇದನ್ನು ಕೀಳಿಸಬೇಕು.
ಗೆಲ್ಲು ಉದುರುವ ರೋಗ ಅಥವಾ ಕೊಂಬೆ ಒಣಗುವಿಕೆ ಇನ್ನೊಂದು ತೊಂದರೆ. ಪ್ರತಿವರ್ಷ ಬಿಸಿಲು ತಾಗದ ಕೊಂಬೆಗಳನ್ನು, ಫಲ ಬಿಡದ ಕೊಂಬೆ, ಗೆಲ್ಲುಗಳನ್ನು ಅಕ್ಟೋಬರ್ನಲ್ಲಿ ಗುರುತಿಸಿ ಕಡಿಯಬೇಕು. ಅದಕ್ಕೆ ಬೋರ್ಡೋ ಮಿಶ್ರಣವನ್ನು ಶೇಕಡಾ ಒಂದರ ಪ್ರಮಾಣದಲ್ಲಿ ಬೆರೆಸಿ ಪೇಸ್ಟ್ ರೀತಿ ತಯಾರಿಸಿ ಕಡಿದ ಜಾಗಕ್ಕೆ ಹಚ್ಚಬೇಕು. ಇಲ್ಲದಿದ್ದರೆ ಇಜ್ಜಲನ್ನು ಹಚ್ಚಿದರೂ ಒಳ್ಳೆಯದು. ಕೆಲವರು ಸಗಣಿ ತೊಪ್ಪೆಯನ್ನು ಹಚ್ಚುತ್ತಾರೆ.
ಸಪೋಟಾ: ಹಣ್ಣು ಕರಲು ಬೀಳುತ್ತದೆ. ಹುಳಿ ಬಂದು ಒಳಗೆ ಕೆಂಪಾಗುತ್ತದೆ. ಕೆಲವೊಮ್ಮೆ ನುಸಿ, ತಿಗಣೆಗಳಿಂದ ಹಾಳಾಗುತ್ತದೆ. ಪರಿಹಾರವನ್ನು ಪರಿಸರವೇ ಸರಿಪಡಿಸಿಕೊಳ್ಳಲು ಬಿಡುತ್ತಾರೆ.
ಪೇರಳೆ: ಕಾಯಿಯಿರುವಾಗಲೇ ಕಜ್ಜಿ ಕಜ್ಜಿಯಾಗುತ್ತದೆ. ಅದೇ ಸಮಯದಲ್ಲಿ ವಿಪರೀತ ಕಂಬಳಿಹುಳುಗಳು ಎಲೆಗಳನ್ನೆಲ್ಲಾ ತಿಂದು ನಿರ್ನಾಮ ಮಾಡುತ್ತಿರುತ್ತದೆ. ಹಣ್ಣುಗಳಲ್ಲಿ ಮಳೆಗಾಲದಲ್ಲಿ ಬಿಳಿ ಚಿಕ್ಕಹುಳುಗಳು ಕಾಣುತ್ತವೆ.
ಇದೆಲ್ಲಾನೊಣ, ಸೊಳ್ಳೆಗಳಿಂದ ಆಗುವ ಸಮಸ್ಯೆಗಳು. ಮರಕ್ಕೆ ಇಂಗು, ಬೆಳ್ಳುಳ್ಳಿ ಮಿಶ್ರಣವನ್ನು ಮೊದಲೇ ಸಿಂಪಡಿಸುವುದರಿಂದ ಪರಿಹಾರ ಸಾಧ್ಯವಿದೆ. ಬೇವಿನಸೊಪ್ಪನ್ನು ಗೊಂಚಲು ಗೊಂಚಲಾಗಿ ಮರದ ಕೊಂಬೆಗಳಿಗೆ ಕಟ್ಟಬೇಕು.
ದ್ರಾಕ್ಷಿ: ಕಂಬಳಿಹುಳುಗಳು ಎಲೆ ತಿನ್ನಲು ಬರುತ್ತವೆ. ಬಳ್ಳಿಗಳನ್ನು ಅಲುಗಿಸದರೆ ಬೀಳುತ್ತವೆ. ಕೆಳಗೆ ಪಂಚೆ ಹಿಡಿದರೆ ಎಲ್ಲವೂ ಪಂಚೆಯೊಳಗೆ ಬೀಳುತ್ತವೆ. ಹೊಸಕಿ ಹಾಕಿದರಾಯಿತು.
ಬೂಜುರೋಗಕ್ಕೆ ಶೇಕಡಾ (೧) ಒಂದರ ಪ್ರಮಾಣದ ಬೋರ್ಡೋ ಸಿಂಪಡಣೆ. ಒಂದು ಕಿಲೋಗ್ರಾಂ ಮೈಲುತುತ್ತ+೫೦ ಲೀಟರ್ ನೀರು
ಒಂದು ಕಿಲೋಗ್ರಾಂ ಸುಟ್ಟ ಸುಣ್ಣ+೫೦ ಲೀಟರ್ ನೀರು (ಕೆಲವೊಮ್ಮೆ ೮೦೦ ಗ್ರಾಂ ಸಾಕು)
ಬಿಸಿನೀರಲ್ಲಿ ಸುಣ್ಣವನ್ನು ಬೆಣ್ಣೆ ತರಹ ಬೇಯಿಸಿ ಸೇರಿಸಬೇಕು. ಮಣ್ಣಿನ ಗುಡಾಣವನ್ನು ದ್ರಾವಣ ತಯಾರಿಸಲು ಬಳಸಬೇಕು. ಮೊದಲು ಮೈಲುತುತ್ತದ ದ್ರಾವಣವನ್ನು ಹಾಕಿಕೊಂಡು ಅದಕ್ಕೆ ಸುಣ್ಣ ಸೇರಿಸುತ್ತಾ ಬರಬೇಕು. ಕತ್ತಿ ಅದ್ದಿ ತಾಮ್ರದ ಬಣ್ಣ ಹೋದ ಕೂಡಲೇ ದ್ರಾವಣ ಸಿದ್ಧವಾದಂತೆ. ಐದು, ಎಂಟು, ಒಂಬತ್ತನೇ ಎಲೆಗಳಿಗೆ ಸಿಂಪಡಣೆ. ಚಾಟ್ನಿಯಾದ ೧೮ ದಿನಗಳ ಕಾಲ ಬಳ್ಳಿಗೆ ಎಲ್ಲಾ ರೀತಿಯ ರಕ್ಷಣೆ ಕೊಟ್ಟರೆ ದ್ರಾಕ್ಷಿ ಬಚಾವ್ ಆದಂತೆ. ಕಪ್ಪು ಕಣ್ಣಿನ ರೋಗಕ್ಕೂ ಇದೇ ಮದ್ದು. ಬೇಲಿ ಬೇಡ. ತೋಟದಲ್ಲಿ ಕಳೆ, ಕಸಕಡ್ಡಿಗಳಿರದಂತೆ ಸ್ವಚ್ಛವಾಗಿಡುವುದು ರೋಗಗಳಿಂದ ರಕ್ಷಣೆಗಾಗಿ.
ಇರುವೆಗಳು ಬಾರದಂತೆ ನೀರು ಹರಿಯೋ ಜಾಗದಲ್ಲಿ ಇಂಗನ್ನು ಬಟ್ಟೆ ಕಟ್ಟಿ ನೀರಿನಲ್ಲಿ ಅದ್ದಿ ಇಟ್ಟರಾಯಿತು. ಸೀಮೆಯೆಣ್ಣೆಯಲ್ಲಿ ಅದ್ದಿದ ಗೋಣಿಚೀಲ ಇಟ್ಟರೂ ಇರುವೆಗಳು ನಾಪತ್ತೆ.
ಎಲೆಗಳಿಗೆ ಬೂದಿರೋಗ ಬರುತ್ತದೆ. ಕಾರಣ ಅತಿಯಾದ ಚಳಿ. ಅದಕ್ಕಾಗಿ ತೋಟದಲ್ಲಿ ಮಡಕೆಗಳನ್ನಿಟ್ಟು ಅದರಲ್ಲಿ ಬೆರಣಿ ಹಾಕಿ ಬೆಂಕಿ ಹಾಕುತ್ತಾರೆ. ಇದರ ಹೊಗೆ ತೋಟವನ್ನೆಲ್ಲಾ ಆವರಿಸಿ ಉಷ್ಣಾಂಶ ಹೆಚ್ಚುತ್ತ ಸೊಳ್ಳೆಗಳು ನೊಣಗಳೂ ಸಹ ಸಾಯುತ್ತವೆ.
ದಾಳಿಂಬೆ: ಮಧುಗಿರಿ ಹಾಗೂ ಜರದನಹಳ್ಳಿ ದಾಳಿಂಬೆಗಳಿಗೆ ಅಂತಹ ರೋಗವಿಲ್ಲ. ಬಿಸಿಲಿಗೆ ಹಣ್ಣು ಒಡೆಯುತ್ತದೆ. ಅದಕ್ಕೆ ಕಾಗದದ ಟೋಪಿ ಹಾಕಿದರಾಯಿತು. ಗೆರಟೆ ಕಟ್ಟಿದರೂ ಬರುತ್ತದೆ. ಗೆರಟೆ ಒದಗಿಸುವುದು ಕಷ್ಟ. ಮಳೆಗಾಲದಲ್ಲಿ ಹಣ್ಣುಗಳು ಒಳಗೊಳಗೇ ಕೊಳೆತುಹೋಗಿರುತ್ತದೆ. ಅತಿಯಾದ ಮಳೆಯೇ ಕಾರಣ. ಬುಡಕ್ಕೆ ಹೊಂಗೆ, ಎಕ್ಕ ಹಾಗೂ ಬೇವಿನ ಗೊಬ್ಬರ ನೀಡುವುದರಿಂದ ಇದರ ನಿವಾರಣೆ ಸಾಧ್ಯ.
ಪೋಷಕಾಂಶಗಳ ಕೊರತೆಯಿಂದ ಮಣ್ಣಿನ ದುರ್ಬಲತೆಯಿಂದ [ಫಲವತ್ತಾಗಿರದ ಕಾರಣ] ಎಲೆಚುಕ್ಕೆ, ಹಣ್ಣು ಚುಕ್ಕೆ ರೋಗ ಕಾಣಿಸಿಕೊಳ್ಳುತ್ತದೆ. ವ್ಯಾಪಕವಾಗಿ ಕಾಣಿಸಿಕೊಂಡು ತೊಟವನ್ನೇ ನಾಶ ಮಾಡುವ ಡೈಬ್ಯಾಕ್ ರೋಗಕ್ಕೆ ಮದ್ದು ಇಲ್ಲ.
ಕಿತ್ತಳೆ: ಕೊಳೆರೋಗಕ್ಕೆ ಬೋರ್ಡೋ ಮಿಶ್ರಣ ಶೇಕಡಾ ಒಂದರ ಪ್ರಮಾಣ. ಕಾಂಡಕ್ಕೆ ಪೇಸ್ಟ್ ಮಾಡಿ ಹಚ್ಚಬೇಕು. ಪಿಂಕ್ರೋಗಕ್ಕೂ ಇದೇ ಮದ್ದು. ಕಿತ್ತಳೆಗೆ ಹಿಂದೆ ರೋಗವೇ ಇರಲಿಲ್ಲ. ೨೫ ವರ್ಷಗಳಿಂದೀಚೆಗೆ ರೋಗಗಳು ನಿಧಾನವಾಗಿ ಹರಡುತ್ತಾ ಕೊಡಗಿನಲ್ಲಿ ಕಿತ್ತಳೆಯ ವಂಶವನ್ನೇ ನಾಶ ಮಾಡುತ್ತಿದೆ. ಕಾಫಿಯ ಲಾಭದ ಎದುರು ಕಿತ್ತಳೆಯದು ರಗಳೆ ಕೆಲಸ. ಅದಕ್ಕಾಗಿ ನಿರ್ಲಕ್ಷ್ಯ ಹೆಚ್ಚಾಗಿದೆ. ಈ ರೋಗಕ್ಕೆ ಯಾವ ಮದ್ದೂ ಕೆಲಸ ಮಾಡುವುದಿಲ್ಲ.
ನಿಂಬೆ: ನಿಂಬೆಗೆ ರೋಗ ಕೀಟಗಳು ಬಾಧೆ ಕೊಡುವುದು ಕಡಿಮೆ. ಆದರೂ ಕಪ್ಪುಚುಕ್ಕೆ ರೋಗ, ಸುರಳಿ ಪೂಚಿ ಮುಖ್ಯವಾದವು. ಸುರಳಿಪೂಚಿಗೆ ಬೇವಿನ ಕಷಾಯ, ಕಾಯಿ ಚುಕ್ಕಿಗೆ ಎಕ್ಕದ ಕಷಾಯ ಎರಡು ಕಿಲೋಗ್ರಾಂ ಎಕ್ಕದ ಎಲೆಗಳನ್ನು ಒಂದು ದಿವಸ ನೀರಿನಲ್ಲಿ ನೆನೆಸಿ ಕುದಿಸಬೇಕು. ಅದಕ್ಕೆ ಹತ್ತುಪಟ್ಟು ನೀರು ಸೇರಿಸಿ ಸಿಂಪಡಿಸಬೇಕು.
ನೊಣ, ಸೊಳ್ಳೆಗಳಿಗೆ ಬಟ್ಟೆಯಲ್ಲಿ ಇಂಗು ಕಟ್ಟಿ ನೇತು ಹಾಕುವುದು. ತುಳಸಿಯನ್ನು ನೀರಿನಲ್ಲಿ ಕುದಿಸಿ ಗೆರಟೆಯೊಳಗೆ ಹಾಕಿ ನೇತುಹಾಕುವುದು. ತಿಂಗಳಿಗೊಮ್ಮೆ ಬೆರಣಿಯನ್ನು ಮಡಕೆಯೊಳಗಿಟ್ಟು ಬೆಂಕಿ ಕೊಟ್ಟು ಹೊಗೆಯನ್ನು ತೋಟದ ಗಿಡಗಳಿಗೆಲ್ಲಾ ಹರಡುವುದು ಮುಖ್ಯವಾದ ನಿಯಂತ್ರಣಗಳು.
ಚೆನ್ನಾಗಿ ನೀರನ್ನು ಉಗ್ಗುವುದರಿಂದ ಕಂಬಳಿಹುಳ, ಹಸಿರುಹುಳಗಳು ಬಿದ್ದುಹೋಗುತ್ತವೆ. ಅದನ್ನು ಹಿಡಿದು ಸಾಯಿಸಬೇಕು.
ಕಾಫಿ: ಕಾಫಿಗೆ ದೊಡ್ಡದಾದ ಯಾವ ರೋಗವೂ ಇಲ್ಲ. ಕಂಬಳಿಹುಳುಗಳನ್ನು ಕೈಯಿಂದ ಹಿಡಿಯುವ ಮಾರ್ಗವೇ ಉತ್ತಮ. ಕಾಂಡಕೊರಕವನ್ನು ತಂತಿಯನ್ನು ತೆಗೆದುಕೊಂಡು ಕಾಂಡಕೊರಕವಿರುವ ಕಂಡಿಗೆ ಚುಚ್ಚಿ ಹುಳ ತೆಗೆಯಬೇಕು. ಎಲ್ಲಾ ಸೇರಿಸಿ ಸುಡಬೇಕು. ನಾಲ್ಕಾರು ಹುಳುಗಳು ಉಳಿದರೂ ಸಾಕು ಮತ್ತೆ ಇಡೀ ತೋಟವನ್ನೇ ವ್ಯಾಪಿಸುತ್ತವೆ. ಸಾಧ್ಯವಾದರೆ ಅಂತಹ ರೆಂಬೆ ಕೊಂಬೆಗಳನ್ನು ಸುಡುವುದು ಒಳ್ಳೆಯದು.
ಹುಣಸೆ: ಕಾಯಿ ಕರಲಾಗುತ್ತದೆ. ಮರ ಗಂಟುಗಂಟಾಗುತ್ತದೆ. ಅಪರೂಪಕ್ಕೆ ಹಣ್ಣಿನೊಳಗೆ, ಬೀಜದೊಳಗೆ ಹುಳುಗಳು ಆಗುತ್ತವೆ. ಆದರೆ ಇದು ಗೊತ್ತಾಗುವುದು ಗುತ್ತಿಗೆದಾರನಿಗೆ ಮಾತ್ರ. ಆತನಿಗೆ ಯಾವ ಮರದಹಣ್ಣು ಹೀಗಾಯ್ತು ಎಂದು ಹಲವು ಸಾರಿ ಗೊತ್ತಾಗುವುದೇ ಇಲ್ಲ. ಗೊತ್ತಾದರೂ, ಯಜಮಾನನಿಗೆ ಹೇಳಿದರೂ ಇಬ್ಬರೂ ಮರಕ್ಕೆ ಔಷಧಿ ಮಾಡುವ ಕುರಿತಾಗಿ ಯೋಚಿಸುವುದೇ ಇಲ್ಲ.
ಪಪ್ಪಾಯ: ಬೂದಿರೋಗ ನಿವಾರಣೆಗೆ ಹಿಂಡಿ ಗೊಬ್ಬರವೇ ಉತ್ತಮ ಪರಿಹಾರ. ಜೊತೆಗೆ ಎಕ್ಕದ ಎಲೆಗಳು.
ಕಾಂಡಕೊಳೆ ರೋಗಕ್ಕೆ ಬೋರ್ಡೋ ಸಿಂಪಡಣೆ ಹಾಗೂ ನೀರು ನಿಲ್ಲದ ಹಾಗೆ ಬಸಿಯುವಿಕೆಗೆ ಕಾಲುವೆ ನಿರ್ಮಾಣ.
ಮೊಸಾಯಿ ರೋಗ ಬಂದಾಗ ಎಲೆಗಳು ವಿಕೃತವಾಗುತ್ತವೆ. ಕಾಂಡವು ನೀರಾಗಿ ಕೊಳೆಯುತ್ತದೆ. ಕಾಯಿಗಳು ಚಿಕ್ಕದಾಗುತ್ತವೆ. ಇದು ತೋಟಪೂರ್ತಿ ಹಬ್ಬುವುದರೊಳಗೆ ಕಿತ್ತು ಸುಟ್ಟುಬಿಡಬೇಕು.
ಬಾಳೆ: ಕಟ್ಟೆರೋಗ ಬಂದರೆ ಇಡೀ ತೋಟವೇ ನಾಶವಾಗುತ್ತದೆ. ಸುಮಾರು ೧೦ ವರ್ಷಗಳವರೆಗೆ ಮಣ್ಣಿನೊಳಗೆ ಈ ರೋಗದ ಕ್ರಿಮಿಗಳು ಉಳಿಯುತ್ತವೆ. ಆಮೇಲೆ ಮತ್ತೆ ಬಾಳೆ ನೆಡಬಹುದೆನ್ನುವುದು ನಂಬಿಕೆ.
ಗೆಡ್ಡೆಹುಳುಗಳು, ಕೀಟಗಳು ರೋಗಗಳೆಲ್ಲಾ ಇದ್ದರೂ ಬಹಳ ಕಮ್ಮಿ. ಸೂಕ್ತ ಬಸಿಗಾಲುವೆ ವ್ಯವಸ್ಥೆ ಇರಬೇಕು. ಬೇವಿನಹಿಂಡಿ ನೀಡುತ್ತಿದ್ದರೆ ಅನೇಕ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತವೆ.
Leave A Comment