ಅಲ್ಬನಿ ಹೂಜಿ ಸಸ್ಯವು ನೆಲದಲ್ಲಿ ಬೆಳೆಯುವ ಗುಂಪ್ತಕಾಂಡ (ರೈಜೋಮ್) ದಿಂದ ಬೆಳೆಯುತ್ತದೆ. ಇದು ಇತರ ಹೂಜಿ ಸಸ್ಯಗಳಂತೆ ಕಂಡರೂ ಅವುಗಳ ಸಂಬಂಧಿ ಅಲ್ಲ. ಈ ಸಸ್ಯದ ಮಧ್ಯದಲ್ಲಿರುವ ಸಾಮಾನ್ಯ ಹಸಿರು ಎಲೆಗಳು ದ್ಯುತಿಸಂಶ್ಲೇಷಣೆಯಲ್ಲಿ ತೊಡಗಿರುತ್ತವೆ. ಹಾಗೂ ಅವು ಒಂದು ವರ್ಷಕಾಲ ಸಸ್ಯದಲ್ಲಿರುತ್ತವೆ. ಅವು ಬಲಿತ ಮೇಲೆ ಉಳಿದ ಎಲೆಗಳು ಹೂಜಿಗಳಾಗಿ ಮಾರ್ಪಟ್ಟು ಕೀಟಗಳನ್ನು ಹಿಡಿಯುತ್ತವೆ.

ಈ ಸಸ್ಯದ ಹೂಜಿಗಳು ನೆಪೆಂಥಿಸ್ ಹೂಜಿಗಳಿಗಿಂತ ಚಿಕ್ಕವು. ಇವುಗಳ ಅಳತೆ ಸುಮಾರು ೩ ಸೆ.ಮೀ. ಎಲೆಗಳು ಪೂರ್ಣ ಬಲಿತಮೇಲೆ “ಮುಚ್ಚಳ” ತೆರೆದುಕೊಳ್ಳುತ್ತದೆ. ಹಾಗೂ ಪಾಚಕ ರಸವು ಹೂಜಿಯಲ್ಲಿ ತುಂಬಿಕೊಳ್ಳುತ್ತದೆ. ಹೂಜಿಯ ಹೊರಗೆ ಕಾಣುವ ನಾಳಗಳ ಮೇಲಿನ “ಮಧು” ಗ್ರಂಥಿಗಳು ಕೀಟಗಳನ್ನು ಆಕರ್ಷಿಸುತ್ತವೆ. ಎಲೆಗಳು ಒಣಗಲು ಪ್ರಾರಂಭಿಸಿದರೆ ಮುಚ್ಚಳ ಮುಚ್ಚಿಕೊಳ್ಳುತ್ತದೆ. ಇದರಿಂದ ಹೂಜಿಯಲ್ಲಿಯ ಪಾಚಕ ರಸವು ಸುರಕ್ಷಿತವಾಗಿ ಉಳಿಯುತ್ತದೆ.

ಹೂಜಿಯ ಬಾಯಿಯು ಕಡುಗೆಂಪು ಹಾಗೂ ಇದರ ಮೇಲೆ ನುಣುಪಾದ ಉಬ್ಬು ತಗ್ಗುಗಳಿವೆ. ಬಾಯಿಯ ಮುಚ್ಚಳದಲ್ಲಿ ಅರೆಪಾರಕ ಸ್ಥಳಗಳಿದ್ದು, ಕೀಟವು ಹೂಜಿಯಲ್ಲಿ ಸಿಕ್ಕುಬಿದ್ದನಂತರವೂ ಹೊರಹೋಗಲು ಪ್ರಯತ್ನಿಸುತ್ತದೆ. ಯಾಕೆಂದರೆ ಇವು ಕೀಟಗಳಿಗೆ ‘ಬೆಳಕಂಡಿ’ಗಳಂತೆ ತೋರುತ್ತವೆ. ಕೀಟವು ಹೊರಗೆ ಹಾರಿ ಹೋಗಲು ಪ್ರಯತ್ನಿಸಿ, ಸೋತು, ಬಿದ್ದು, ಪಾಚಕ ರಸದಲ್ಲಿ ಮುಳುಗಿ ಅಸುನೀಗುತ್ತದೆ. ಈ ಸಸ್ಯವು ಬೇಸಿಗೆಯಲ್ಲಿ ಹೂ ತಳೆಯುತ್ತದೆ.