ವೈರಿ ಪಡೆಯ ಮೇಲೆ ‘ಬಾಂಬ್’ ಹಾಕಿ ತನ್ನ ನೆಲೆಯಲ್ಲಿ ಬಂದು ಇಳಿಯುವ ವಿಮಾನ ಸುತ್ತುವಂತೆ, ಜೌಗು ಪ್ರದೇಶವೊಂದರ ಮೇಲೆ ನೀಲಿ ಮಿಶ್ರಿತ ಹಸಿರು ನೊಣವೊಂದು ಸುತ್ತುತ್ತದೆ. ಅಲ್ಲಿ ಆ ನೊಣವು ಆಹಾರಕ್ಕಾಗಿ ಯೋಗ್ಯ ಸ್ಥಳವನ್ನು ಹುಡುಕುತ್ತಲಿದೆ. ಕೊನೆಗೆ ಅದು ಸುಂದರವಾದ, ಕೆಂಪು ರೋಮಗಳಿಂದ ಆವೃತವಾದ ಹಾಗೂ ಈ ರೋಮಗಳ ತುದಿಯಲ್ಲಿ ‘ಮುತ್ತು’ ಪೋಣಿಸಿದಂತೆ ತೋರುವ ವಸ್ತುವಿನ ಮೇಲೆ ಕುಳಿತು, ಇನ್ನು ತನ್ನ ಆಹಾರವನ್ನು ಹುಡುಕುವ ಬಗ್ಗೆ ಯೋಚಿಸುತ್ತಿರುವಾಗಲೇ ತಾನು ಜಿಗುಟು ವಸ್ತುವಿನ ಮೇಲೆ ಕುಳಿತಿರುವಂತೆ ಭಾಸವಾಗುತ್ತದೆ. ತಾನಿಳಿದ ಸ್ಥಳ ಸುರಕ್ಷಿತವಲ್ಲವೆಂದು ನಿರ್ಧರಿಸಿ, ಮತ್ತೊಂದು ಯೋಗ್ಯವಾದ ಸ್ಥಳವನ್ನು ಹುಡುಕುವ ವಿಚಾರ ಮಾಡಿ ಅಲ್ಲಿಂದ ಹಾರಿಹೋಗಲು ಸಿದ್ಧವಾಗುತ್ತದೆ. ಆದರೆ ಅದಕ್ಕೆ ಹಾರಲು ಸಾಧ್ಯವಾಗುತ್ತಿಲ್ಲ. ಮತ್ತೊಮ್ಮೆ ಪ್ರಯತ್ನಿಸುತ್ತದೆ. ಇನ್ನೊಮ್ಮೆ ಪ್ರಯತ್ನಿಸುತ್ತದೆ ಉಹೂ ; ಆಗುತ್ತಿಲ್ಲ. ನೊಣ ಹೆದರಿಕೊಂಡು ತನ್ನೆಲ್ಲ ಶಕ್ತಿಯನ್ನು ಉಪಯೋಗಿಸಿ ಅಲ್ಲಿಂದ ಪರಾರಿಯಾಗಲು ಪ್ರಯತ್ನಿಸುತ್ತಿರುವಾಗಲೇ, ಯಾರೋ ಬಂದು ತನ್ನನ್ನು ಹಿಡಿದಂತೆ ಭಾಸವಾಗುತ್ತದೆ. ಹೌದು, ಕೆಲವು ಸುಂದರವಾದ ಗುಲಾಬಿ ರೋಮಗಳು, ಮುತ್ತುಗಳನ್ನು ತುದಿಗೆ ಪೋಣಿಸಿಕೊಂಡು ತನ್ನ ದೇಹವನ್ನು ಸುತ್ತುವರಿದು ಬಿಗಿಯುತ್ತಿರುವುದು ಅದಕ್ಕೆ ಗೊತ್ತಾಗುತ್ತದೆ. ನೊಣಕ್ಕೆ ಮತ್ತಷ್ಟು ಹೆದರಿಕೆಯಾಗುತ್ತದೆ. ಅಲ್ಲಿಂದ ತಪ್ಪಿಸಿಕೊಳ್ಳಲೇಬೇಕೆಂದು ಅದು ತನ್ನೆಲ್ಲ ಶಕ್ತಿಯನ್ನು ಉಪಯೋಗಿಸಿ ತನ್ನ ಕಾಲುಗಳನ್ನು ಕೆಳಕ್ಕೆ ಜೋರಾಗಿ ತಳ್ಳಿ ಮೇಲೆ ಜಿಗಿಯುತ್ತದೆ. ಅದಕ್ಕೆ ಹಾರಲು ಸಾಧ್ಯವಾಗಲಿಲ್ಲ. ನೊಣ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ‘ಯಮ’ಪಾಶದಂತಹ ರೋಮಗಳು ಕೀಟವನ್ನು ಕಟ್ಟಿಹಾಕುತ್ತವೆ. ರೋಮಗಳ ತುದಿಗಿರುವ, ಮುತ್ತಿನಂತಹ ಅಂಟಂಟಾದ ದ್ರವದಲ್ಲಿ ನೊಣ ಮುಳುಗುತ್ತದೆ. ಕೆಲವು ಗಂಟೆಗಳಾದ ಮೇಲೆ ರೋಮಗಳು ಹಾಗೂ ಅಂಟಂಟಾದ ದ್ರವದ ಮಧ್ಯೆ ನೊಣ ಸಿಕ್ಕು ಪ್ರಾಣಾರ್ಪಣೆ ಮಾಡುತ್ತದೆ. ವಿಚಿತ್ರವೆಂದರೆ ಇಲ್ಲಿ ಇಬ್ಬನಿ ಸಸ್ಯವೆಂಬ ಬೇಟೆಗಾರನ ಬಲೆಗೆ ‘ನೊಣ’ ಬಲಿಯಾಗುವ ಪರಿ.

ಡ್ರೊಸೆರಾ ಬರ್ಮಾನಿ ಎಂಬ ಇಬ್ಬನಿ ಸಸ್ಯವು ಕೆಲವು ಸೆ.ಮೀ.ಗಳಷ್ಟು ಎತ್ತರ ಬೆಳೆಯಬಲ್ಲ ಚಿಕ್ಕ ಮೂಲಿಕೆ. ಜೌಗು ಅಥವಾ ಪೋಷಕಗಳಿಲ್ಲದ ಒದ್ದೆಯಾದ ಮಣ್ಣಿನಲ್ಲಿ ಬೆಳೆಯುತ್ತದೆ. ಇದರ ಬೇರುಗಳು ಭೂಮಿಯಲ್ಲಿ ಗಟ್ಟಿಯಾಗಿ ಬಂಧಿತವಾಗವು. ಸುಮಾರು ಅರ್ಧ ಡಜನ್‌ಗಳಷ್ಟು, ಚಮಚೆಯಾಕಾರದ ಹಾಗೂ ಉದ್ದುದೇಟುಳ್ಳ ಎಲೆಗಳು ಕಾಂಡಕ್ಕೆ ವೃತ್ತಾಕಾರವಾಗಿ ಬೆಳೆದು, ಭೂಮಿಯ ಮೇಲೆ ಆಶ್ರಯ ಪಡೆಯುತ್ತವೆ. ಎಲೆಗಳ ಉದ್ದ ೦.೫ – ೩.೦೦ ಸೆ.ಮೀ.ಗಳು. ಎಲೆಗಳ ಮಧ್ಯದಿಂದ ಚಿಕ್ಕ, ಸುಂದರವಾದ ಹಾಗೂ ನೇರವಾದ ಪುಷ್ಪಗುಚ್ಛ ಬೆಳೆಯುತ್ತದೆ. ಇದು ನಸುಗೆಂಪು ಅಥವಾ ಬೂದೂ ಬಣ್ಣದ ಹೂವುಗಳನ್ನು ತಳೆಯುತ್ತದೆ.

ಪ್ರತಿಯೊಂದು ಎಲೆಯ ಮಧ್ಯದಲ್ಲಿ ಸುಂದರ ರೋಮಮಯ ಕೋಶಗಳು ಸೆಟೆದು ನಿಂತಿರುತ್ತವೆ. ಅವುಗಳಿಗೆ ‘ಗ್ರಹಣಾಂಗ’ಗಳೆನ್ನುವರು. ಒಂದೊಂದು ಗ್ರಂಥಿಯೂ ಒಂದು ವಿಶಿಷ್ಟ ಬಗೆಯ ಅಂಟು ದ್ರವವನ್ನು ಸ್ರವಿಸುತ್ತದೆ. ಈ ದ್ರವವು ಬಿಸಿಲಿನಲ್ಲಿ ಮಂಜಿನ ಹನಿಗಳಂತೆ ಹೊಳೆಯುವುದರಿಂದ, ಇದನ್ನು ಸ್ರವಿಸುವ ಈ ಸಸ್ಯಕ್ಕೆ “ಇಬ್ಬನಿ ಸಸ್ಯ” ಎಂದು ನಾಮಕರಣ ಮಾಡಿದ್ದಾರೆ.

ರೋಮಮಯ ಕೋಶಗಳು ಅತಿ ಶೀಘ್ರಗ್ರಾಹಿಗಳಾಗಿದ್ದು, ಕೀಟವು ಈ ಹೊಳೆಯುವ ದ್ರವವನ್ನು “ಮಧು” ಎಂದು ಭಾವಿಸಿ, ಆಕರ್ಷಿತವಾಗಿ ಎಲೆಯ ಮೇಲೆ ಬಂದು ಕುಳಿತಾಗ, ಅದು ಗ್ರಂಥಿಗಳಲ್ಲಿಯ ಅಂಟಂಟಾದ ಪದಾರ್ಥಕ್ಕೆ ಅಂಟಿಕೊಳ್ಳುತ್ತದೆ. ಗ್ರಂಥಿಗಳು ಪಾಚಕ ರಸಗಳನ್ನು ಉತ್ಪಾದಿಸುತ್ತವೆ. ಕೀಟವು ಪಚನಗೊಂಡು ಸಾಯುತ್ತದೆ. ಸಸ್ಯಕ್ಕೆ ಅವಶ್ಯವಿರುವ ಪದಾರ್ಥಗಳು ಒಳಸೇರುತ್ತವೆ.

ಹುಲ್ಲಿನ ಎಲೆಯಂತಹ ಇಬ್ಬನಿ ಸಸ್ಯದ ಎತ್ತರ ೫-೩೦ ಸೆ.ಮೀ. ಹಾಗೂ ಎಲೆಯ ಉದ್ದ  ೨.೫ – ೭.೦೦ ಸೆ..ಮೀ. ಎಲೆಯ ಮೇಲೆ ಕೀಟವು ಬಂದು ಕುಳಿತಾಗ, ಎಲೆಯು ಮಧ್ಯಭಾಗದಲ್ಲಿ ಬಾಗುತ್ತ ಹೋಗಿ ಕೀಟವನ್ನು ಬಂಧಿಸುತ್ತದೆ. ರೋಮಮಯ ಕೋಶಗಳಲ್ಲಿ ಸಿಕ್ಕ ಕೀಟವು ಸಾಯುತ್ತದೆ.

ಚಾರ್ಲಸ್ ಡಾರ್ವಿನ್ ಇಬ್ಬನಿ ಸಸ್ಯಗಳನ್ನು ತನ್ನ ಮನೆಯಲ್ಲಿ ಬೆಳೆದು, ಅವುಗಳಿಗೆ ಕೀಟಗಳ ಭೋಜನ ಉಣಿಸಿದ. ಈ ಸಸ್ಯಗಳು ಉಳಿದ ಸಸ್ಯಗಳಿಗಿಂತ ಹೆಚ್ಚು ಹೂ-ಕಾಯಿಗಳನ್ನು ತಳೆದಿದ್ದನ್ನೂ ವೀಕ್ಷಿಸಿದ.