ಕೋನನ್, ಬುಡಕಟ್ಟು ಜನಾಂಗದ ನಾಯಕ. ಬುಡಕಟ್ಟು ಜನಾಂಗದವರ ಜೊತೆಗೆ ಈತನ ವಾಸ. ಅಲ್ಲಿಯ ಜನರು ಕಾಡಿಗೆ ಉರುವಲು ತರಲು ಅಥವಾ ದನಕರುಗಳನ್ನು ಮೇಯಿಸಲು ಹೋದಾಗ ನರಭಕ್ಷಕ-ಸಸ್ಯಗಳು ಜನರನ್ನು ಹಾಗೂ ದನಕರುಗಳನ್ನು ಭಕ್ಷಿಸುತ್ತಿದ್ದವು. ಈ ವಿಷಯವನ್ನು ಬುಡಕಟ್ಟು ಜನರು ಕೋನನ್‌ಗೆ ತಿಳಿಸುತ್ತಾರೆ. ಕೋನನ್ ನರಭಕ್ಷಕ-ಸಸ್ಯಗಳನ್ನು ನಾಶಮಾಡಲು ಹೋಗುತ್ತಾನೆ. ಆದರೆ ಒಂದು ನರಭಕ್ಷಕ-ಸಸ್ಯವು ಕೋನನ್ ಅನ್ನೇ ಬಂಧಿಸುತ್ತದೆ.

ಕೋನನ್ ಅದರಿಂದ ಬಿಡಿಸಿಕೊಳ್ಳಲು ಪ್ರಯತ್ನಿಸುತ್ತಾನೆ. ನರಭಕ್ಷಕ ಸಸ್ಯದ ಹಿಡಿತ ಇನ್ನೂ ಬಿಗಿಯಾಗುತ್ತದೆ. ಕೊನೆಗೆ ಕೋನನ್ ತನ್ನ ನಡುಪಟ್ಟಿಯಲ್ಲಿಯ ಖಡ್ಗವನ್ನು ಹಿರಿದು ನರಭಕ್ಷಕ ಸಸ್ಯದ ಒಂದೊಂದೇ ಭಾಗಗಳನ್ನು ಕತ್ತರಿಸುತ್ತಾನೆ. ಹೀಗೆ ಕೋನನ್ ಅಲ್ಲಿರುವ ಎಲ್ಲ ನರಭಕ್ಷಕ ಸಸ್ಯಗಳನ್ನು ಸಂಹರಿಸುತ್ತಾನೆ. ಬುಡಕಟ್ಟು ಜನರು ಕೋನನ್‌ನನ್ನು ಹಾಡಿ ಹೊಗಳುತ್ತಾರೆ.

ಮಹಾಬಲಿ ಶಾಕಾ, ದಿ ಗ್ರೇಟ್ ಕೋನನ್ ಹಾಗೂ ಜುಮಾಂಜಿಗಳಂಥ ಚಲನ ಚಿತ್ರಗಳನ್ನು ನೀವು ನೋಡಿರಬಹುದು. ಅಥವಾ ನಿಮ್ಮ ಅಜ್ಜನೋ/ಅಜ್ಜಿಯೋ ಹೇಳಿದ ನರಭಕ್ಷಕ ಸಸ್ಯಗಳ ಬಗ್ಗೆ ಕತೆಗಳನ್ನು ಕೇಳಿರಬಹುದು.

ಕೀಟ ತಿನ್ನುವ ಸಸ್ಯಗಳು ಹೆಚ್ಚೆಂದರೆ ಚಿಟ್ಟೆ , ದೊಡ್ಡ ಕೀಟ, ಶತಪದಿ, ಚೇಳು, ಮರಗಪ್ಪೆ ಅಥವಾ ಚಿಕ್ಕ ಇಲಿಗಳನ್ನು ತಿನ್ನಬಹುದು. ಆದರೆ ನರಭಕ್ಷಕ ಸಸ್ಯಗಳನ್ನು ಸಸ್ಯಲೋಕದಲ್ಲಿ ಇನ್ನೂ ಹುಡುಕಬೇಕಿದೆ.

ಎಲ್ಲ ಪ್ರಾಣಿಗಳು ತಮ್ಮ ಉದರ ಪೋಷಣೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ ಸಸ್ಯಗಳನ್ನೇ ಅವಲಂಬಿಸಿವೆ. ಆದರೆ ಕೆಲವು ಸಸ್ಯಗಳು ತಮ್ಮ ಬೆಳವಣಿಗೆಗೆ ಅಗತ್ಯವಿರುವ ಕೆಲವು ಪೋಷಕಗಳನ್ನು ಪಡೆಯಲು ಚಿಕ್ಕ ಪ್ರಾಣಿಗಳನ್ನು ಅವಲಂಬಿಸಿರುವುದು ಕುತೂಹಲಕಾರಿ.

ಸಸ್ಯ ಸಾಮ್ರಾಜ್ಯದಲ್ಲಿ ಕೀಟ ತಿನ್ನುವ ಸುಮಾರು ೬೦೦ ಸಸ್ಯ ಪ್ರಭೇದಗಳನ್ನು ಗುರುತಿಸಿದ್ದಾರೆ. ಕೀಟ ತಿನ್ನುವ ಸಸ್ಯಗಳು ಇತರ ಹಸಿರು ಸಸ್ಯಗಳಂತೆ ತಮ್ಮ ಆಹಾರವನ್ನು ತಾವೇ ತಯಾರಿಸಿಕೊಳ್ಳುತ್ತವೆ. ಆಹಾರ ತಯಾರಿಸಲು ಬೇಕಾದ ನೀರು ಹಾಗೂ ಇತರ ಲವಣಗಳನ್ನು ಅವು ಬೆಳೆದಿರುವ ಭೂಮಿಯಿಂದ ನೀರಿನ ಮೂಲಕ ಪಡೆಯುತ್ತವೆ. ಆದರೆ ಸಾವಯವ ನೈಟ್ರೋಜನ್‌ಯುತ ಪೋಷಕಗಳನ್ನು ಪಡೆಯಲು ಕೀಟಗಳನ್ನು ಹಿಡಿದು ತಿನ್ನುತ್ತವೆ. ಯಾಕೆಂದರೆ ಕೀಟಭಕ್ಷಕ ಸಸ್ಯಗಳು ಆಮ್ಲಯುಕ್ತ, ವಿಷಯುಕ್ತ, ನ್ಯೂನಪೋಷಕ ಪ್ರದೇಶ ಹಾಗೂ ಜೌಗು ಭೂಮಿಯಲ್ಲಿ ಬೆಳೆಯುವುದರಿಂದ ಅವುಗಳ ಬೇರುಗಳು ಅಗತ್ಯ ಲವಣಗಳನ್ನು ಹೀರಿಕೊಳ್ಳಲಾರವು.

ಇವುಗಳಿಗೆ ಕೀಟಾಹಾರಿ, ಮಾಂಸಾಹಾರಿ, ಕೊಲೆಗಡುಕ ಅಥವಾ ‘ಹಂತಕ’ ಸಸ್ಯಗಳೆಂದೂ ಕರೆಯಬಹುದು. ಕೀಟ ತಿನ್ನುವ ಸಸ್ಯಗಳು, ಹುಟ್ಟಿನಿಂದಲೇ ಮಾನವನ ಗಮನವನ್ನು ಸೆಳೆದಿವೆ. ಚಾರ್ಲಸ್ ಡಾರ್ವಿನ್‌ನ ಕಾಲದಿಂದ ಹಿಡಿದು ಇಂದಿನ ವಿಜ್ಞಾನಿಗಳನ್ನು ಹಾಗೂ ಶ್ರೀಸಾಮಾನ್ಯರನ್ನು ಅಚ್ಚರಿಗೊಳಿಸಿವೆ. ಈ ಸಸ್ಯಗಳು ಕೀಟಗಳನ್ನು ಹಿಡಿಯುವ ವಿಧಾನಗಳಾವುವು ? ಹಾಗೂ ಬಂಧಿ ಕೀಟವು ಪಚನಗೊಳ್ಳುವ ಬಗೆ ಹೇಗೆ? ಕೀಟಾಹಾರಿ ಸಸ್ಯಗಳು ಕೀಟಗಳನ್ನು ತಿನ್ನದೇ ಬದುಕಬಲ್ಲವೇ? ಹೀಗೆ ಹತ್ತು ಹಲವಾರು ಪ್ರಶ್ನೆಗಳು ಜೀವ ವಿಜ್ಞಾನಿಗಳನ್ನು ಹಾಗೂ ಸಸ್ಯಶಾಸ್ತ್ರಜ್ಞರ ಕೌತುಕವನ್ನು ಕೆಣಕಿವೆ. ಆದ್ದರಿಂದಲೇ ಕೀಟ ತಿನ್ನುವ ಸಸ್ಯಗಳನ್ನು ಸಸ್ಯಲೋಕದ ಅಚ್ಚರಿಗಳೆಂದು ಚಾರ್ಲಸ್ ಡಾರ್ವಿನ್ ಕರೆದಿದ್ದಾನೆ.