ಕೀಟಾಹಾರಿ ಸಸ್ಯಗಳ ಎಲೆಗಳು/ಎಲೆಯ ಭಾಗಗಳು ಕೀಟಗಳನ್ನು ಬಂಧಿಸುವ ಸಲುವಾಗಿ ಬಗೆಬಗೆಯಾಗಿ ಮಾರ್ಪಾಟಾಗಿವೆ.

ಹೀಗಾಗಿ ಕೀಟಾಹಾರಿ ಸಸ್ಯಗಳು ವಿವಿಧ ರೀತಿಯ ಜಾಲ/ಪಾಶಗಳನ್ನು ಬಳಸಿ, ಕೀಟಗಳಿಗೆ ಮೋಸಮಾಡಿ ತಮ್ಮ ಉದರವನ್ನು ತುಂಬಿಕೊಳ್ಳುತ್ತವೆ. ಅಂದರೆ ಉದರ ನಿಮಿತ್ತಂ ಬಹುಕೃತ ವೇಷಂ ಎಂಬಂತೆ.

ಕೀಟ ಹಿಡಿಯುವ ಯಾವುದೇ ಸಸ್ಯವನ್ನು ಕುರಿತು ಅರಿಯುವಾಗ ಆ ಬಗೆಯ ಸಸ್ಯಗಳ ವಿಶಿಷ್ಟವಾದ ವಿವರಗಳನ್ನು ತಿಳಿಯಬೇಕು. ಆ ವಿವರಗಳೆಂದರೆ,

೧) ಆಮಿಷ : ಕೀಟಗಳನ್ನು ಆಕರ್ಷಿಸುವ ಸಲುವಾಗಿ ಕೀಟಾಹಾರಿ ಸಸ್ಯವು ಗಮನ ಸೆಳೆಯಲು ಹೂಡುವ ತಂತ್ರನ, ಅದು ಆಕರ್ಷಕ ವಿನ್ಯಾಸವೊ, ಮಧುವೊ, ಸುಗಂಧವೊ, ಬಣ್ಣವೊ ಆಗಿರುವುದು. (ಇವುಗಳಲ್ಲಿ ಕೆಲವು ಈ ಎಲ್ಲವೂ ಇರಬಹುದು)

೨) ಬಾಹುಬಂಧನ : ಕೀಟವೊಂದು ಬಂದೊಡನೆಯೇ ತನ್ನ ಬಾಹುಗಳನ್ನು ಚಾಚಿ ಉಂಟುಮಾಡುವ ಬಾಹುಬಂಧನ ವ್ಯವಸ್ಥೆ.

೩) ಜಾರು ವ್ಯವಸ್ಥೆ : ಕೀಟದ ಭಾರದಿಂದಾಗಿಯೋ ಕೀಟವು ಕೆಳಗೆ ಸಾಗುವಂತೆ ಮಾಡುವ (ಖೆಡ್ಡಾದಲ್ಲಿ ಆನೆ ಹಿಡಿಯುವ ಹಾಗೆ) ಒಂದು ವಿಧಾನ.

೪) ಅಂಟು : ಕಾಗದವನ್ನು ಬಂಧಿಸಿಡಲು ದಾರವನ್ನು ಇಲ್ಲವೆ ಅಂಟನ್ನು ಬಳಕೆ ಮಾಡುತ್ತೇವೆ. ಕೀಟಾಹಾರಿ ಸಸ್ಯಗಳು ಈ ಎರಡೂ ವಿಧಾನಗಳನ್ನು ಬಳಕೆಮಾಡುವುದನ್ನು ಕಾಣಬಹುದು.

ಗಮನಿಸಿ : ಕೀಟಾಹಾರಿ ಸಸ್ಯಗಳನ್ನು ಕೊಲೆಗಡುಕ ಸಸ್ಯಗಳೆಂದು ಬಣ್ಣಿಸಿದರೂ ಅವು ಅಟ್ಟಿಸಿಕೊಂಡು ಹೋಗಿ ಕೊಲ್ಲುವುದಿಲ್ಲ. ಬಡಪಾಯಿಗಳನ್ನು, ಬರುವಂತೆ ಆಕರ್ಷಿಸಿ ಬಂದ ಬಡಪಾಯಿಗಳನ್ನು ನುಂಗುತ್ತವೆ.