ತುತ್ತೂರಿ ಹೂಜಿ ಸಸ್ಯದ ಹೆಡೆಯು ಸ್ವಲ್ಪ ದೊಡ್ಡದಿದ್ದು ವಿವಿಧ ಬಣ್ಣಗಳಿಂದಾಗಿದೆ. ದೂರದಿಂದ ನೋಡಿದರೆ ಇದೊಂದು ಹೂವೇನೋ ಎಂದು ಭಾಸವಾಗುತ್ತದೆ. ಹೆಡೆಯ ತುಂಬ “ಮಧು”ವಿನ ಗ್ರಂಥಿಗಳಿವೆ. ಇವು ಬಿಸಿಲಿನಲ್ಲಿ ಹೊಳೆಯುತ್ತವೆ. ಹೂಜಿಯಲ್ಲಿಯ ದ್ರವವು ಸೂಕ್ಷ್ಮಜೀವಿಗಳ ಸಹಾಯವಿಲ್ಲದೆ ಕೀಟಗಳನ್ನು ಪಚನ ಮಾಡುವ ಸಾಮರ್ಥ್ಯದವು.

ಬೇಟೆಗಾರನ ಬಟ್ಟಲುಎಂಬ ತುತ್ತೂರಿ ಹೂಜಿ ಸಸ್ಯವು ಮೊದಲು ನೆಲದಗುಂಟ ಬೆಳೆದು ಅನಂತರ ಮೇಲೇಳುತ್ತದೆ. ಆಗ ಅದು ಬೇಟೆಯ ಕೊಂಬಿನಂತೆ ಕಾಣುತ್ತದೆ. ಹಳದಿ ತುತ್ತೂರಿಯಾಕಾರದ ಹೂಜಿ ಸಸ್ಯವು ಸ್ವಲ್ಪ ದೊಡ್ಡದು. ಇದರ ಎಲೆಯು ೯೦ ಸೆ.ಮೀ,ಗಳಷ್ಟು ಉದ್ದ ಇದೆ. ಇದರ ತುಂಬ ಕೀಟಗಳು ಬಂಧಿಯಾಗಿರುತ್ತವೆ.

ಕೆಲವು ತುತ್ತೂರಿಯಾಕಾರದ ಹೂಜಿಯಲ್ಲಿ ಚಿಕ್ಕ ಕಪ್ಪೆಗಳು ಅವಿತುಕೊಂಡು ಕುಳಿತಿರುತ್ತವೆ. ಹೂಜಿಯ ಆಕರ್ಷಣೆಯಿಂದ ಆಕರ್ಷಿತವಾದ ಕೀಟಗಳ ಬರುವನ್ನೇ ನೋಡುತ್ತಿರುತ್ತವೆ. ಕೀಟಗಳು ಬಂದು ಕುಳಿತು, ಹೂಜಿಯಲ್ಲಿ ಜಾರಿ ಬೀಳುವುದರೊಳಗಾಗಿ ಅವು ಕಪ್ಪೆಯ ಉದರವನ್ನು ಸೇರುತ್ತವೆ. ಕಪ್ಪೆಯು ಹೂಜಿಯಲ್ಲಿ ಅಡಗಿ ಕುಳಿತಾಗ ಅದಕ್ಕೆ ಏನೂ ಆಗುವುದಿಲ್ಲವೇ ಎಂದು ಕೇಳಿದಿರಾ ? ಕಪ್ಪೆಯು ಕಾಲು ಜಾರಿ ಹೂಜಿಯಲ್ಲಿಯ ದ್ರವದಲ್ಲಿ ಬೀಳದಿದ್ದರೆ ಏನೂ ಆಗುವುದಿಲ್ಲ. ಬಿದ್ದರೆ ಸಸ್ಯಕ್ಕೆ ಮೃಷ್ಟಾನ್ನ ಭೋಜನ ದೊರೆಯುತ್ತದೆ. ಆಗ ಸಸ್ಯಕ್ಕೆ ವರ್ಷವಿಡೀ ಕೀಟಗಳು ದೊರೆಯದಿದ್ದರೂ ಪರವಾಗಿಲ್ಲ.