ಭಾರಲೋಹಯುತ ಪ್ರದೇಶದಲ್ಲಿ ನಾಗ ಲಿಲಿಯ ನೆಲೆ. ಇದರ ಎಲೆಯ ರಚನೆ ಅದ್ವಿತೀಯ. ಎಲೆ ನಾಳದಂತಿದ್ದು, ಕೀಟಗಳನ್ನು ಪಚನಮಾಡಿಕೊಳ್ಳುವ ಸಲುವಾಗಿ ರಸವನ್ನು ಸಂಗ್ರಹಿಸಿರುತ್ತದೆ. ಎಲೆಯ ಮೇಲ್ಭಾಗವು ಕೀಟಗಳನ್ನು ಹಿಡಿಯುವ ಸಲುವಾಗಿ ಮಾರ್ಪಾಟಾಗಿದೆ. ಎಲೆಯ ತುದಿಯು ಹಾವಿನ ಹೆಡೆಯಂತೆ ಮಾರ್ಪಾಟಾಗಿರುವುದರಿಂದ ಈ ಸಸ್ಯಕ್ಕೆ “ನಾಗ ಲಿಲಿ” ಎಂಬ ಹೆಸರು ಬಂದಿದೆ. ಸುರುಳಿಯಾಕಾರದಂತಿರುವ ಪ್ರವೇಶದ್ವಾರದ ಮುಖಾಂತರ ಕೀಟವು ಹೆಡೆಯನ್ನು ಪ್ರವೇಶಿಸುತ್ತದೆ. ಹೆಡೆಯಲ್ಲಿ ಬಾವುಟದಂತಹ ಎರಡು ಅಂಗಗಳಿವೆ. ಅವುಗಳಲ್ಲಿ ಕೀಟಗಳಿಗೆ ಬೇಕಾದ ಸಿಹಿಯನ್ನು ಸ್ರವಿಸುವ ಗ್ರಂಥಿಗಳಿವೆ. ಅಲ್ಲದೆ ‘ಹೆಡೆ’ಯಲ್ಲಿ ಮಧುವನ್ನು ಸ್ರವಿಸುವ ಹಲವಾರು ಗ್ರಂಥಿಗಳಿವೆ. ಹೀಗಾಗಿ ಕೀಟಗಳು “ಮಧು”ವನ್ನರಸಿ ‘ಹೆಡೆ’ಯನ್ನು ಪ್ರವೇಶಿಸುತ್ತವೆ.

ಬಿಸಲಿನಲ್ಲಿ ಈ ಸಸ್ಯವು ಚೆನ್ನಾಗಿ ಬೆಳೆಯುತ್ತದೆ. ಎಲೆಗಳು ನಸುಗೆಂಪು ಉದಾ ಬಣ್ಣಕ್ಕೆ ತಿರುಗುವುದರಿಂದ ಕೀಟಗಳು ಆಕರ್ಷಿತಗೊಳ್ಳುತ್ತವೆ. ‘ಹೆಡೆ’ಯಲ್ಲಿ ಅರೆಪಾರದರ್ಶಕ ಸ್ಥಳಗಳಿವೆ. ಅವುಗಳಿಂದ ಹೂಜಿ ಸೇರಿದ ಕೀಟಗಳು ಗೊಂದಲಕ್ಕೀಡಾಗಿ, ಹೂಜಿಯಲ್ಲಿ ಸಿಕ್ಕುಬಿದ್ದು, ಸತ್ತು ಪಚನಗೊಳ್ಳುತ್ತವೆ.