ನೀರ್ಗಾಲಿ ಸಸ್ಯ ಬೇರುಗಳಿಲ್ಲದ ಜಲವಾಸಿ. ಸಿಹಿ ಹಾಗೂ ಉಪ್ಪು ನೀರಿನಲ್ಲಿ ಬೆಳೆಯಬಲ್ಲದು. ಇದರ ಕಾಂಡವು ತಂತಿಯಂತಿದ್ದು, ಕಾಂಡದ ಮೇಲೆ ಚಿಕ್ಕ ಎಲೆಗಳು ಗುಂಪಾಗಿ ಬೆಳೆಯುತ್ತವೆ. ಈ ಸಸ್ಯದ ಎಲೆಗಳು “ವೀನಸ್ ನೊಣ-ಹಿಡುಕ” ಸಸ್ಯದ ಎಲೆಗಳಂತೆ ಕಾಣುತ್ತವೆ. ಎಲೆಗಳ ಮೇಲೆ ಹಾಗೂ ಅಂಚಿಗೆ ಚಿಕ್ಕ ಹಲ್ಲಿನಾಕಾರದ ಮತ್ತು ಬಿರುಸಾದ ಸಂವೇದನಾಶೀಲ ರೋಮಗಳಿವೆ. ಎಲೆಯು ತೆರೆದ ಪುಸ್ತಕದಂತೆ ಕಾಣುತ್ತದೆ. ಎಲೆಯ ಮಧ್ಯನಾಳದ ಮೇಲೆ ಸಂವೇದನಾ ರೋಮಗಳಿವೆ. ಕೀಟವು ಎಲೆಯ ಮೇಲೆ ಬಂದು ಕುಳಿತರೆ ಕ್ಷಣಾರ್ಧದಲ್ಲಿ ಎಲೆಯ ಎರಡು ಭಾಗಗಳು ತೆರೆದ ಪುಸ್ತಕ ಮುಚ್ಚಿದಂತೆ ಮುಚ್ಚಿಕೊಳ್ಳುತ್ತವೆ. ಹೀಗಾಗಿ ಜಲವಾಸಿ ಕೀಟವು ಎಲೆಯ ನಡುವೆ ಸಿಕ್ಕು ಜಜ್ಜಿಹೋಗುತ್ತದೆ. ಎಲೆಯ ಮೇಲಿನ ಹಲವಾರು ಗ್ರಂಥಿಗಳು ಪಾಚಕ ರಸಗಳನ್ನು ಸ್ರವಿಸುತ್ತವೆ. ಕೀಟವು ಈ ರಸಗಳಲ್ಲಿ ವಿಘಟನೆಯಾಗಿ, ಕೆಲವು ಸಸ್ಯ ಪೋಷಕಗಳು ಎಲೆಯ ಮುಖಾಂತರ ಸಸ್ಯದ ಇತರ ಭಾಗಗಳಿಗೆ ಸರಬರಾಜಾಗುತ್ತವೆ.

 

ಸಸ್ಯ