ನೆಪೆಂಥಿಸ್ ಹೂಜಿ ಸಸ್ಯ ಚಿಕ್ಕ ಏರು ಬಳ್ಳಿ. ಈ ಎಲೆಗಳ ಪತ್ರ ಪೀಠವು ರೆಕ್ಕೆಯ ಹಾಗೆ ; ತೊಟ್ಟು ಉದ್ದನೆಯ ನುಲಿ ಬಳ್ಳಿಯಂತಿದ್ದು, ಬಳ್ಳಿ ಏರಲು ಸಹಾಯ ಮಾಡುತ್ತದೆ. ಪತ್ರದ ಅಲಗಿನ ಅಂಚು ಕೂಡಿಕೊಂಡು ಹೂಜಿಯಾಗಿರುತ್ತದೆ. ಹಾಗೂ ಎಲೆಯ ತುದಿಯು ಮುಚ್ಚಳದಂತೆ ಮಾರ್ಪಾಟಾಗಿದೆ.

ಎಲೆಗಳು ೩೦-೬೦ ಸೆ.ಮೀ. ಉದ್ದ ಹಾಗೂ ೩.೫ – ೯.೦೦ ಸೆ.ಮೀ.ಗಳಷ್ಟು ಅಗಲ ಇವೆ. ಒಂದೊಂದು ಹೂಜಿಯೂ ೧೦ – ೧೮ X ೩ ಸೆ.ಮಿ.ಗಳಷ್ಟು ದೊಡ್ಡವು. ಹೂಜಿಯ ಬಣ್ಣ ಹಸಿರಾಗಿದ್ದು ಮುಚ್ಚಳದ ಕಡೆಗೆ ಕೆಂಪಾಗಿದೆ. ಮುಚ್ಚಳ ಹಾಗೂ ಹೂಜಿ ನೋಡಲು ಆಕರ್ಷಕವಾಗಿದ್ದು, ಹೂಜಿಯೊಳಗಿನ ‘ಮಧು’ವಿನ ಸುವಾಸನೆಯು ಕೀಟಗಳನ್ನು ಆಕರ್ಷಿಸುತ್ತವೆ.

ಹೂಜಿಯೊಳಗೆ, ಅದರ ಬಾಯಿಯಿಂದ ಕೆಳಮುಖವಾಗಿ ಜೋತುಬಿದ್ದ ಅಸಂಖ್ಯಾತ ನುಣುಪಾದ ಹಾಗೂ ಮೊನಚಾದ ರೋಮಗಳಿವೆ. ಹೂಜಿಯೊಳಗಿನ ಎಲೆಯ ಭಾಗದ ಮೇಲೆ ಪಾಚಕ ಗ್ರಂಥಿಗಳಿವೆ. ಹಾಗೂ ಹೂಜಿಯ ತಳಭಾಗದಲ್ಲಿ ಒಂದು ಬಗೆಯ ದ್ರವವೂ ತುಂಬಿಕೊಂಡಿರುತ್ತದೆ. ಹೂಜಿಯ ಬಾಯಿಯ ಅಂಚು ಬಹಳ ನುಣುಪಾಗಿದೆ. ಹೂಜಿಯಿಂದ ಆಕರ್ಷಿತ ಕೀಟವು ಹೂಜಿಯ ಬಾಯಿಯ ಮೇಲೆ ಬಂದು ಕುಳಿತಾಗ, ಕಾಲು ಜಾರಿಯೋ/ಆಯ ತಪ್ಪಿಯೋ ಹೂಜಿಯೊಳಗೆ ಬೀಳುತ್ತದೆ. ಕೀಟವು ಹೊರ ಹೋಗಲು ಪ್ರಯತ್ನಿಸಿದರೆ ಅದಕ್ಕೆ ಸಾಧ್ಯವಾಗುವುದಿಲ್ಲ. ಕೊನೆಗೆ ಕೀಟವು ದ್ರವದಲ್ಲಿ ಮುಳುಗಿ ಸಾಯುತ್ತದೆ.

ಹೂಜಿಯೊಳಗಿನ ಗ್ರಂಥಿಗಳು ‘ಟ್ರೆಪ್ಸಿನ್’ ಎಂಬ ಕಿಣ್ವವನ್ನು ಸ್ರವಿಸುತ್ತವೆ. ಕಿಣ್ವವು ಕೀಟದ ದೇಹದಲ್ಲಿಯ ಪ್ರೋಟೀನ್‌ಗಳನ್ನು ಅಮೈನುಗಳಾಗಿ ಮಾರ್ಪಡಿಸುತ್ತವೆ. ಅಮೈನುಗಳು ಹೂಜಿಯೊಳಗೆ ಹೀರಿಕೆಯಾಗುತ್ತವೆ. ಅನಂತರ ಸಸ್ಯದ ಇತರ ಭಾಗಗಳಿಗೆ ಸರಬರಾಜಾಗುತ್ತವೆ.

ಆಂಗ್ಲ ಸಸ್ಯ ವಿಜ್ಞಾನಿ ಜೋಶಫ್ ಡಾಲ್ಟನ್ ಹುಕರ್, ಹೂಜಿ ಸಸ್ಯದ ಕೆಲವು ಪ್ರಭೇದಗಳಲ್ಲಿ ಪಕ್ಷಿಗಳ ಎಲುಬಿನ ಹಂದರವನ್ನು ಕಂಡಿದ್ದನು. ಆದ್ದರಿಂದಲೇ ನರಭಕ್ಷಕ ಸಸ್ಯಗಳ ಬಗ್ಗೆ ಕತೆಗಳು ಹುಟ್ಟಿಕೊಂಡಿರಬಹುದು.