ಕೀಟ ತಿನ್ನುವ ಸಸ್ಯಗಳಲ್ಲಿ ಪಚನಗೊಂಡ ಪದಾರ್ಥಗಳು ಸಸ್ಯದ ಇತರೆ ಭಾಗಗಳಿಗೆ ಸರಬರಾಜಾಗುತ್ತವೆ ಎಂಬುದನ್ನು ಸಮಸ್ಥಾಯ ಕಾರ್ಬನ್-೧೪ನ್ನು ಉಪಯೋಗಿಸಿ ವಿಜ್ಞಾನಿಗಳು ತೋರಿಸಿದ್ದಾರೆ. ‘ವೀನಸ್’ ನೊಣ-ಹಿಡುಕ ಸಸ್ಯದ ಎಲೆಯ ಮೇಲ್ಮೈ ಯಾವಾಗಲೂ ಒಣಗಿದ್ದು, ಕೀಟವು ಅದರ ಮೇಲೆ ಕುಳಿತಾಗ ಗ್ರಂಥಿಗಳು ಚುರುಕಾಗಿ ದ್ರವವನ್ನು ಸ್ರವಿಸುತ್ತವೆ. ನೀರುಗುಳ್ಳೆ ಸಸ್ಯವು ಜಲಸಸ್ಯವಾಗಿದ್ದು ಕೀಟದ ಪ್ರಚೋದನೆ ದೊರೆತಾಗ ಮಾತ್ರ ಗ್ರಂಥಿಗಳು ಪಾಚಕ ರಸಗಳನ್ನು ಸ್ರವಿಸುತ್ತವೆ. “ವೀನಸ್ ನೊಣ ಹಿಡುಕ”ದಲ್ಲಿಯ ಗ್ರಹಣಾಂಗಗಳನ್ನು ಗಾಜಿನ ಗಣಿಕೆಯಿಂದ ಮುಟ್ಟಿದಾಗ ಎಲೆಯು ಮಾತ್ರ ಮುಚ್ಚಿಕೊಳ್ಳುತ್ತದೆ. ಆದರೆ ಪಾಚಕ ರಸಗಳು ಸ್ರವಿಸುವುದಿಲ್ಲ. ಅಂದರೆ ಇಬ್ಬನಿ ಸಸ್ಯ ಹಾಗೂ ವೀನಸ್ ಹುಳಹಿಡುಕಗಳಲ್ಲಿಯ ಗ್ರಂಥಿಗಳು ರಸಾಯನಿಕ ಹಾಗೂ ತಾಂತ್ರಿಕ ಪ್ರಚೋದನೆಗಳನ್ನು ಗುರುತಿಸುತ್ತವೆ.

ಕೀಟ ತಿನ್ನುವ ಸಸ್ಯಗಳ ಗ್ರಂಥಿಗಳು ಅನೇಕ ರೀತಿಯಲ್ಲಿ ಪ್ರಾಣಿಗಳ ಗ್ರಂಥಿಗಳನ್ನು ಹೋಲುವುದರಿಂದ ಈ ಸಸ್ಯಗಳು, ಸಸ್ಯ ಹಾಗೂ ಪ್ರಾಣಿಗಳ ನಡುವಿನ ಕೊಂಡಿ ಎಂದು ನಂಬಲಾಗಿದೆ.

ಹೀಗೆ ಯಾವುದೋ ಒಂದು ಪ್ರಶ್ನೆಗೆ ಉತ್ತರ ದೊರೆತಾಗ ಅದರ ಸಂಗಡ ನೂರಾರು ಪ್ರಶ್ನೆಗಳು ಉದ್ಭವಿಸುತ್ತವೆ. ಇಂಥ ಪ್ರಶ್ನೆಗಳಿಗೆ ಉತ್ತರ ಹುಡುಕುವುದು ವಿಜ್ಞಾನಿಗಳ ಕೆಲಸ.

ಏನೇ ಇರಲಿ ಪ್ರಕೃತಿಯಲ್ಲಿ ಕಂಡುಬರುವ ಇಂಥ ಸೋಜಿಗಗಳೆಲ್ಲ ಯಾರದೋ ಮನವನ್ನು ರಂಜಿಸಲು ಉಂಟಾದುದಲ್ಲ, ಅವು ಆಯಾ ಪರಿಸರಕ್ಕೆ ಅಥವಾ ಜೀವನ ಕ್ರಮಕ್ಕೆ ತಕ್ಕಂತೆ ರೂಪಗೊಂಡಿರುವ ರೀತಿ ಮಾತ್ರ.