ಕಾಡುಪ್ರಾಣಿಗಳು ಸ್ವಸಾಮರ್ಥ್ಯದಿಂದ ಸಂಚುವಂಚನೆಗಳ ಜಾಣ್ಮೆಯಿಂದ ತಮ್ಮ ಮಿಕಗಳನ್ನು ಬೇಟೆಯಾಡುವುದು ಸಾಹಸಗಾಥೆ. ಆದರೆ, ಇರುವಲ್ಲೇ ಬೇರೂರಿ ತಮ್ಮ ಗುರಿ ಕೀಟಗಳನ್ನು ತಮ್ಮ ಬಳಿಗೆ ಆಕರ್ಷಿಸಿ ಬಂದ ಅತಿಥಿಗಳನ್ನೇ ‘ಸ್ವಾಹ’ ಮಾಡುವ ಕೀಟಾಹಾರಿ ಸಸ್ಯಗಳು ಪುರಾಣದ ಪಾತ್ರವಾದ ಇಲ್ವಲ*ನನ್ನು ನೆನಪಿಸುವಂತಹವು ! ಈ ಕೀಟಾಹಾರಿ ಸಸ್ಯಗಳು ಹಾರುವ ಕೀಟಗಳನ್ನು ಸೆರೆವಿಡಿದು ಸತ್ತ್ವ ಹೀರುವ ‘ಬೇಟೆ’ – ಸೋಜಿಗಗಾಥೆ.

ಸಸ್ಯಸಂಪತ್ತು ತಯಾರಿಸಿಕೊಳ್ಳುವ ಆಹಾರವನ್ನು ಲೂಟಿ ಮಾಡಿ ಬದುಕುವ ಪ್ರಾಣಿಗಳ ಬದುಕು ಸಸ್ಯಾವಲಂಬಿ. ಆದರೆ ಪ್ರಾಣಿಗಳಿಗೆಲ್ಲ ಅನ್ನ ಉಣಬಡಿಸಿ ಆಹಾರ ಪೂರೈಕೆ ಮಾಡುವ ಅನ್ನಪೂರ್ಣೇಶ್ವರಿ ಸಸ್ಯವರ್ಗದ ನಡುವೆಯೂ ಕೀಟಗಳನ್ನು ಲೂಟಿ ಮಾಡುವ ಹಂತಕಸಸ್ಯಗಳಿವೆ. ಹೀಗಾಗಿ ಈ ವಿಷಯವೇ ಸೋಜಿಗದ ಸೂಜಿಗಲ್ಲು. ವಿಶೇಷವಾಗಿ ಮಕ್ಕಳನ್ನೂ ಅಥವಾ ಹಿರಿಯರೊಳವಿತಿರುವೆ ‘ಮಗುತನ’ವನ್ನೂ ತಣಿಸಬಲ್ಲ ಬೆರಗು ಈ ವಿಷಯಕ್ಕಿದೆ.

‘ಉದಾರಿ’ ಸಸ್ಯಗಳ ನಡುವೆ ದಾರಿ ದರೋಡೆಕೋರ ಸಸ್ಯಗಳು ರೂಪು- ಗೊಂಡಿದ್ದಾದರೂ ಹೇಗೆ ? ಹೀಗೆ ಮಾಡಬೇಕಾದ ಅನಿವಾರ್ಯಕ್ಕೆ ಕಾರಣವಾದರೂ ಏನು ? ಈ ಬೇಟೆಯ ಹೊಂಚಿನ ಕ್ರಮ ತಂತ್ರ ಹಾಗೂ ತಂತ್ರನಗಳೇನು ? ಇವೇ ಮೊದಲಾದ ಪ್ರಶ್ನೆಗಳನ್ನು ಏಳಿಸುವ, ಆ ಪ್ರಶ್ನೆಗಳಿಗೆ ಭಾಗಶಃ ಉತ್ತರಿಸುವ ಪ್ರಶ್ನೆಗಳ ಗುಂಗನ್ನು ಉಳಿಸುವ ಪ್ರಯತ್ನವನ್ನು ಈ ಕೃತಿಯ ಲೇಖಕರೂ ಕರಾವಿಪದ ಗೌರವ ಕಾರ್ಯದರ್ಶಿಯವರಾದ ಪ್ರೊ||ಸಿ.ಡಿ. ಪಾಟೀಲರು ಕೈಗೊಂಡಿದ್ದಾರೆ. ಅಡುಗೆಯ ಸಾರ್ಥಕತೆ ಪಡೆದವರು ಉಂಡು ತೇಗಿದಾಗ ತಾನೆ ! ‘ಸುವರ್ಣ ಕರ್ನಾಟಕ’ ಸಂಭ್ರಮದಲ್ಲಿ ಬಿಡುಗಡೆ ಆಗುತ್ತಿರುವುದು ಕನ್ನಡಮ್ಮನಿಗೆ ನುಡಿ ಪುಸ್ತಕದ ಪುಷ್ಪಾರ್ಪಣೆ ಅದಕ್ಕಾಗಿ ಅವರನ್ನು ಅಭಿನಂದಿಸುತ್ತೇನೆ. ಈ ಕೃತಿಯ ಪ್ರಕಾಶನವನ್ನು ಕೈಗೊಂಡ ಕರಾವಿಪವನ್ನು ಅಭಿನಂದಿಸದಿರಲಾರೆ.

ವೈವಿಧ್ಯಮಯ ಕೃತಿಗಳ ಮಹಾಪೂರವೇ ಬರಬೇಕಾಗಿರುವ ಈ ಸಂದರ್ಭದಲ್ಲಿ ಕನ್ನಡ ಲೇಖಕರಿಗೆ ಈ ಕೃತಿ ಸ್ಫೂರ್ತಿಯಾಗಲಿ.

ಪ್ರೊ|| ಎಮ್.ಆರ್. ನಾಗರಾಜು
ಬೆಂಗಳೂರು
೩೦-೮-೨೦೦೭
ಎಫ್-೩, ಎಸ್ ಎಫ್ ಎಸ್ ವಾಸಗಳು
೭ನೇ ಬಿ ಅಡ್ಡರಸ್ತೆ ,
ಯಲಹಂಕ ಉಪನಗರ
ಬೆಂಗಳೂರು – ೫೬೦ ೦೬೪.


* ಗಮನಿಸಿ : ಇಲ್ವಲ ವಾತಾಪಿ ಎಂಬುವರ ಇಬ್ಬರು ರಾಕ್ಷಸರಿದ್ದರು. ವಾತಾಪಿ ಮೇಕೆಯ ರೂಪ ಧರಿಸುತ್ತಿದ್ದ. ಇಲ್ವಲ ಮನೆಗೆ ಅತಿಥಿಗಳನ್ನು ಆಹ್ವಾನಿಸಲು ಸೌಮ್ಯರೂಪ ಧರಿಸುತ್ತಿದ್ದ. ಮನೆಗೆ ಬಂದ ಅತಿಥಿಗಳಿಗೆ ವಾತಾಪಿಯನ್ನು ಕೊಂದು ಮೇಕೆ ಮಾಂಸದ ಅಡುಗೆ ಬಡಿಸುತ್ತಿದ್ದ. ಅತಿಥಿಗಳು ಊಟ ಮಾಡಿದ ಮೇಲೆ ವಾತಾಪಿ ತನ್ನ ಮಂತ್ರಶಕ್ತಿಯಿಂದ ಮತ್ತೆ ರಾಕ್ಷಸನಾಗಿ ಅತಿಥಿಗಳ ಹೊಟ್ಟೆ ಒಡೆದು ಹೊರಗೆ ಬರುತ್ತಿದ್ದ. ಆಗ ಇಲ್ವಲ ಮತ್ತು ವಾತಾಪಿ ಅತಿಥಿಯ ಶವವನ್ನು ತಿನ್ನುತ್ತಿದ್ದರು ! ಒಮ್ಮೆ ಅಗಸ್ತ್ಯನನ್ನು ತಿನ್ನುವ ಸಲುವಾಗಿ ವಾತಾಪಿಯನ್ನು ಮೇಕೆ ಆಗಿಸಿ ಇಲ್ವಲನು ಅದರ ಮಾಂಸ ಉಡಾಬಡಿಸಿದ. ಆದರೆ ಅಗಸ್ತ್ಯ ತನ್ನ ತಪೋಬಲದಿಂದ ವಾತಾಪಿಯನ್ನು ಜೀರ್ಣಿಸಿಕೊಂಡುಬಿಟ್ಟ !