ಬಟರ್ವರ್ಟ್ಸ ಕೂಡ ಇಬ್ಬನಿ ಸಸ್ಯದಂತೆ ಚಿಕ್ಕ ಮೂಲಿಕೆ. ಇದರ ಎಲೆಗಳು ವೃತ್ತಾಕಾರದಲ್ಲಿ ಜೋಡಣೆಯಾಗಿವೆ. ಎಲೆಗಳು ಮಾಂಸಲವಾಗಿದ್ದು, ಅನೇಕ ಗ್ರಂಥಿಗಳಿಂದ ಆವೃತವಾಗಿವೆ. ಎಲೆಯ ಬಣ್ಣ ಹಳದಿ ಮಿಶ್ರಿತ ಹಸಿರು. ಗಾತ್ರ ೩.೫ X ೪ ಸೆ.ಮೀ. ಈ ಸಸ್ಯಗಳಲ್ಲಿ ಬೇರುಗಳು ಚೆನ್ನಾಗಿ ಅಭಿವೃದ್ಧಿಯಾಗಿಲ್ಲ. ಎಲೆಗಳಿಗೆ ಪತ್ರಕಾಂಡ/ ಎಲೆಯ ತೊಟ್ಟು ಇಲ್ಲ. ಇದರ ಮೇಲೆ ಉದ್ದವಾದ ರೋಮಗಳೂ ಇಲ್ಲ. ಎಲೆಯ ಮೇಲ್ಮೈಮೇಲೆ ಎರಡು ತರಹದ ಗ್ರಂಥಿಗಳಿವೆ. ಒಂದು ಬಗೆಯ ಗ್ರಂಥಿಯು ಅಂಟಂಟಾದ ದ್ರವವನ್ನೂ, ಇನ್ನೊಂದು ಬಗೆಯದು ಪಾಚಕ ಸಹಕಾರಿಯಾಗುವ ದ್ರವವನ್ನೂ ಸ್ರವಿಸುತ್ತವೆ.

ಕೀಟವು ಎಲೆಯ ಮೇಲೆ ಕುಳಿತಾಗ, ಅಂಟಂಟಾದ ದ್ರವದಲ್ಲಿ ಸಿಕ್ಕು ಬೀಳುತ್ತದೆ. ಅದು ಅಲ್ಲಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸಿದಾಗ, ಎಲೆಯ ಅಂಚುಗಳು ಎರಡೂ ಬದಿಯಿಂದ ಒಳಮುಖವಾಗಿ ಸುತ್ತು ಹೋಳಿಗೆಯಂತೆ ಸುತ್ತಿಕೊಳ್ಳುತ್ತವೆ. ಕೀಟವು ಎಲೆಯ ಒಳಗೆ ಬಂಧಿಯಾಗಿ, ಪಚನಕ್ರಿಯೆಗೆ ಒಳಗಾಗಿ ಸಾವನ್ನಪ್ಪುತ್ತದೆ. ಕೆಲವು ಸಮಯದನಂತರ ಎಲೆಗಳು ಮೊದಲಿನ ಸ್ಥಿತಿಗೆ ಬಂದು, ಕೀಟಗಳನ್ನು ಹಿಡಿಯಲು ಸಿದ್ಧವಾಗುತ್ತವೆ.