“ನರ ಭಕ್ಷಕ” ಸಸ್ಯಗಳ ಬಗ್ಗೆ ಕಥೆಗಳನ್ನು ಕೇಳಿದ್ದೇವೆ. ಚಲನಚಿತ್ರಗಳನ್ನೂ ನೋಡಿದ್ದೇವೆ. ಕೀಟ ತಿನ್ನುವ ಸಸ್ಯಗಳು ಹೆಚ್ಚೆಂದರೆ ಚಿಟ್ಟೆ, ಶತಪದಿ, ಮರಗಪ್ಪೆಗಳನ್ನು ತಿನ್ನಬಹುದು.

ಕೀಟಾಹಾರಿ ಸಸ್ಯಗಳು ಸ್ವಪಾರೆಗಳು. ಇವು ನೈಟ್ರೋಜನ್‌ಯುತ ಪೋಷಕಗಳನ್ನು ಪಡೆಯಲು ಕೀಟಾಹಾರಿಗಳಾಗಿವೆ. ಯಾಕೆಂದರೆ ಈ ಸಸ್ಯಗಳು ಆಮ್ಲಯುಕ್ತ, ವಿಷಯುಕ್ತ, ನ್ಯೂನಪೋಷಕ ಪ್ರದೇಶ ಹಾಗೂ ಜೌಗು ಭೂಮಿಯಲ್ಲಿ ಬೆಳೆಯುವುದರಿಂದ ಇವುಗಳ ಬೇರುಗಳು ಅಗತ್ಯ ಲವಣಗಳನ್ನು ಹೀರಿಕೊಳ್ಳಲಾರವು.

ಕೀಟಾಹಾರಿ ಸಸ್ಯಗಳು ಹುಟ್ಟಿನಿಂದಲೇ ಮಾನವನ ಗಮನವನ್ನು ಸೆಳೆದಿವೆ. ಈ ಸಸ್ಯಗಳು ಕೀಟಗಳನ್ನು ಹಿಡಿಯುವ ವಿಧಾನಗಳು, ಬಂಧಿಕೀಟವು ಪಚನಗೊಳ್ಳುವ ಬಗೆ, ಇತ್ಯಾದಿಗಳನ್ನು ಇಲ್ಲಿ ವಿವರಿಸಲಾಗಿದೆ. ಕೀಟಾಹಾರಿ ಸಸ್ಯಗಳು ಸಸ್ಯಶಾಸ್ತ್ರಜ್ಞರ ಕೌತುಕವನ್ನು ಕೆಣಕಿವೆ. ಆದ್ದರಿಂದಲೇ ಕೀಟಾಹಾರಿ ಸಸ್ಯಗಳನ್ನು “ಸಸ್ಯಲೋಕದ ಅಚ್ಚರಿ” ಗಳೆಂದು ಚಾರ್ಲಸ್ ಡಾರ್ವಿನ್ ಕರೆದಿದ್ದಾನೆ.

ಈ ಪುಸ್ತಕವು ತಯಾರಿಕೆಯ ಹಂತದಲ್ಲಿರುವಾಗ ಅದಕ್ಕೆ ಒಂದು ಒಳ್ಳೆಯ ಸಂಸ್ಕಾರ ಕೊಟ್ಟ ಪ್ರೊ. ಎಂ.ಆರ್. ನಾಗರಾಜು ಅವರಿಗೆ, ಅಂದವಾದ ಮುಖಪುಟ ವಿನ್ಯಾಸ ಮಾಡಿದ ಶ್ರೀ ಪಿ.ಎ.ಬಿ. ಈಶ್ವg, ರಾಯಚೂರು ಅವರಿಗೆ, ಈ ಪುಸ್ತಕ ಪ್ರಕಟಣೆಗೆ ಅವಕಾಶ ಮಾಡಿಕೊಟ್ಟ ಡಾ.ಎಚ್.ಎಸ್. ನಿರಂಜನಾರಾಧ್ಯ, ಅಧ್ಯಕ್ಷರು, ಕರಾವಿಪ ಬೆಂಗಳೂರು ಹಾಗೂ ಪ್ರಕಟಣಾ ಸಮಿತಿಯ ಅಧ್ಯಕ್ಷರಾದ ಶ್ರೀ ಎಂ.ಎಫ್. ನಾಯ್ಕರ್ ಹಾಗೂ ಸದಸ್ಯರಿಗೆ, ಕರಾವಿಪ ಕಾರ್ಯಕಾರಿ ಸಮಿತಿಯ ಎಲ್ಲ ಗೌರವಾನ್ವಿತ ಸದಸ್ಯರಿಗೆ ಹಾಗೂ ಕರಾವಿಪದ ಪ್ರಕಟಣಾ ವಿಭಾಗವನ್ನೂ ಅತ್ಯಂತ ಶಿಸ್ತಿನಿಂದ ನಿರ್ವಹಿಸುತ್ತಿರುವ ಶ್ರೀ ಬಿ.ಎಸ್.ಎನ್. ಮೂರ‍್ತಿ ಅವರಿಗೆ ನನ್ನ ಪ್ರೀತಿಯ ವಂದನೆಗಳು. ಕೆಲವು ಫೋಟೋಗಳನ್ನು ಕೊಟ್ಟ ಪ್ರೊ. ವೇದವ್ಯಾಸ ಹಾಗೂ ಪ್ರೊ. ನಾಗರಾಜ. ಬಿ. ಅವರಿಗೆ ಋಣಿ.

ವೈಜ್ಞಾನಿಕ ಮನೋಭಾವವನ್ನು ಹರಡುವ ನನ್ನ ಪ್ರಯತ್ನಕ್ಕೆ ಸದಾ ನೀರುಣಿಸುತ್ತಿರುವ ಪತ್ನಿ ವಿಜಯಲಕ್ಷ್ಮಿಗೆ ಹಾಗೂ ಚಿರಂಜೀವಿಗಳಾದ ಶಿರೀಷಗೌಡ ಮತ್ತು ಸೌಜನ್ಯ ಇವರಿಗೆ ನಾನು ಋಣಿ.

ಪ್ರೊ. ಸಿ.ಡಿ. ಪಾಟೀಲ
ರಾಯಚೂರು                                            
ಫೆಬ್ರವರಿ ೨೦೦೮