ತೋಳ – ಕರಡಿಯಂತೆ – ಬಿಗಿ ಮುಷ್ಠಿಯ ಹಿಡಿತ “ವೀನಸ್ ನೊಣ ಹಿಡುಕ”ಕ್ಕಿದೆ. ಇದರ ಒಂದೊಂದು ಹಸಿರು ಎಲೆಯು ತೆರೆದ ಪುಸ್ತಕದಂತೆ ಕಾಣುತ್ತದೆ. ಅಂದರೆ ಎಲೆಗೆ ಎರಡು “ದವಡೆ”ಗಳಿವೆ. ಅವು ಮೂತ್ರಪಿಂಡದಂತಿವೆ ಹಾಗೂ ಮಧ್ಯದಲ್ಲಿ ಕೆಂಪಾಗಿವೆ. ದವಡೆಗಳ ಅಂಚಿನಗುಂಟ ಹಲವಾರು ಉದ್ದವಾದ ಹಾಗೂ ಚೂಪಾದ ಹಲ್ಲುಗಳಂತೆ ಕಾಣುವ ಮೊಳೆಗಳಿವೆ. ಎಲೆಯ ದವಡೆಗಳ ಮೇಲೆ ಎರಡು ಅಥವಾ ಹೆಚ್ಚು ಜೊತೆ ಬಿರುಸಾದ ಗ್ರಹಣಾಂಗಗಳಿವೆ. ಎರಡಕ್ಕಿಂತ ಹೆಚ್ಚು ಗ್ರಹಣಾಂಗಗಳಿಗೆ ಕೀಟವು ತಾಗಿದರೆ ತಕ್ಷಣವೇ “ದವಡೆ”ಗಳು, ತೆರೆದ ಪುಸ್ತಕ ಮುಚ್ಚಿದಂತೆ ಮುಚ್ಚಿಕೊಂಡು ಕೀಟವನ್ನು ಬಂಧಿಸುತ್ತವೆ. ಹಲ್ಲುಗಳಂತೆ ಕಾಣುವ ಮೊಳೆಗಳು ಪರಸ್ಪರ ತೊಡರಿಕೊಳ್ಳುವುದರಿಂದ ಕೀಟವು ತಪ್ಪಿಸಿಕೊಳ್ಳಲು ಸಾಧ್ಯವೇ ಇಲ್ಲ.

   

ಎಲೆಯ ಮೇಲಿನ ಗ್ರಂಥಿಗಳು ಅನೇಕ ಪಾಚಕ ರಸ / ಕಿಣ್ವಗಳನ್ನು ಸ್ರವಿಸುವುದರಿಂದ ಬಂಧಿಯಾದ ಕೀಟವು ವಿಘಟಣೆಗೊಂಡು ನೈಟ್ರೋಜನ್ ಹಾಗೂ ರಂಜಕಯುತ ಪದಾರ್ಥಗಳು ಎಲೆಯೊಳಗೆ ಸೇರಿ ಸಸ್ಯದ ಎಲ್ಲ ಭಾಗಗಳಿಗೆ ಹಂಚಿಹೋದ ಮೇಲೆ, ಮತ್ತೊಂದು ಕೀಟ ಹಿಡಿಯಲು ಸಸ್ಯದ ಎಲೆಗಳು ತೆರೆದುಕೊಂಡು ನಿಲ್ಲುತ್ತವೆ. ಕೀಟವಿಲ್ಲದೆ ಎಲೆಯು ಮುಚ್ಚಿಕೊಂಡರೆ ಇಪ್ಪತ್ತು ನಿಮಿಷಗಳಲ್ಲಿ ಮತ್ತೆ ಅದು ತೆರೆದುಕೊಳ್ಳುತ್ತದೆ ಹಾಗೂ ೨೪ ಗಂಟೆಗಳಲ್ಲಿ ಹೊಸ ಬೇಟೆಗೆ ಸಿದ್ಧವಾಗುತ್ತದೆ. ಎಲೆಗಳು ಕಪ್ಪಾಗಿ ನಿಷ್ಕ್ರಿಯವಾಗುವುದಕ್ಕಿಂತ ಮೊದಲು ಅವು ಕೇವಲ ಮೂರು ಸಲ ಬೇಟೆಯಾಡುತ್ತವೆ.

 

ಎಲೆಯ ಮೇಲೆ ನೊಣ

ಗ್ರಹಣಾಂಗ

“ವೀನಸ್ ನೊಣ-ಹಿಡುಕ”ದ ಎಲೆಗಳು ಕ್ಷಣಾರ್ಧದಲ್ಲಿ ಮುಚ್ಚಿಕೊಳ್ಳುವುದನ್ನು ವಿಜ್ಞಾನಿಗಳು ಅಭ್ಯಾಸ ಮಾಡುತ್ತಿದ್ದಾರೆ. ಯಾರೋ ನಿಮ್ಮ ಕೈಮೇಲಿನ ಒಂದೆರಡು ಕೂದಲುಗಳನ್ನು ಹಿಡಿದು ಜಗ್ಗಿದರೆ ತಕ್ಷಣ ನೀವು ಅಲ್ಲಿಗೆ ನಿಮ್ಮ ಇನ್ನೊಂದು ಕೈಯನ್ನು ಒಯ್ಯುತ್ತೀರಿ. ಯಾರೋ ನಿಮ್ಮ ಕೂದಲನ್ನು ಕೀಳುತ್ತಿರುವುದು ಮೊದಲು ಮಿದುಳಿಗೆ ವಿಷಯ ತಿಳಿಯುತ್ತದೆ. ಹಾಗೆಯೇ, ನೊಣವು ಎಲೆಯ ಮೇಲೆ ಕುಳಿತಾಗ ಆ ವಿಷಯವು ಎಲೆಯ ಮಧ್ಯನಾಳಕ್ಕೆ ಮೊದಲು ತಿಳಿಯುತ್ತದೆ. ಅನಂತರ ಮಧ್ಯನಾಳದಲ್ಲಿಯ ಜೀವಕೋಶಗಳು ಪ್ರತಿಕ್ರಿಯಿಸಿ ಎಲೆಯ ದವಡೆಗಳು ಮುಚ್ಚಿಕೊಳ್ಳುತ್ತವೆ. ಎಲೆಯಲ್ಲಾಗುವ “ವಿದ್ಯುದ್ವಿಭವ”ದಿಂದ ಈ ಕ್ರಿಯೆ ನಡೆಯುತ್ತದೆ ಎಂದು ವಿಜ್ಞಾನಿಗಳ ಅಭಿಮತ. ಮಧ್ಯ ನಾಳವು “ತಿರುಗಣಿ” ಯಂತೆ ವರ್ತಿಸಿದಾಗ ಎಲೆಯು ಮುಚ್ಚಿಕೊಳ್ಳುತ್ತದೆ.