ಸೂರ್ಯನ ಹೂಜಿ ಸಸ್ಯವು ಸರಳ ಹೂಜಿ ಸಸ್ಯ, ಯಾವಾಗಲೂ ಹಿಮ ಹಾಗೂ ನೀರಿನ ಹನಿಗಳಿಂದ ಮುಚ್ಚಿಕೊಂಡಿರುತ್ತದೆ. ಇದರ ಜೀವಿತದಲ್ಲಿ ಬಿಸಿಲಿಗೆ ಒಡ್ಡಿಕೊಳ್ಳುವುದು ಅಲ್ಪ ಅವಧಿಗೆ ಮಾತ್ರ. ಇದರಿಂದಾಗಿ ಸಸ್ಯಕ್ಕೆ ಲವಣಗಳ ಕೊರತೆಯಾಗಿ ಬೆಳವಣಿಗೆ ಕುಂಠಿತವಾಗುತ್ತದೆ.

ಇದರ ಎಲೆಗಳು ೬೦ ಸೆಂ.ಮೀ.ನಷ್ಟು ಉದ್ದವಿದ್ದು, ಎಲೆಯ ಉದ್ದಕ್ಕೆ ಅಂಚುಗಳು, ಕಿರಾಣಿ ಸಾಮಾನುಗಳನ್ನು ಹಾಕುವ ಪೊಟ್ಟಣ/ಪುಡಿಕೆಯಂತೆ, ಒಂದರ ಮೇಲೊಂದು ಜೋಡಣೆಯಾಗಿರುತ್ತವೆ. ಹೀಗಾಗಿ ಎಲೆಯು ಒಂದು ದಪ್ಪವಾದ ನಳಿಕೆಯಂತೆ ಕಾಣುತ್ತದೆ. ಎಲೆಯ ಮೇಲ್ಭಾಗದಲ್ಲಿ, ಮಧ್ಯ ನಾಳವು ಕೆಂಪಾದ ಬಾಯಿವುಳ್ಳ ಹೆಡೆಯಂತೆ ಮಾರ್ಪಟ್ಟಿದೆ. ಹೂಜಿಯ ಬಾಯಿಯಲ್ಲಿ ಮಧುವನ್ನು ಉತ್ಪತ್ತಿಮಾಡುವ ಹಲವಾರು ಗ್ರಂಥಿಗಳಿವೆ. ಹೂಜಿಯಲ್ಲಿ ಯಾವಾಗಲೂ ದ್ರವ ತುಂಬಿರುತ್ತದೆ. ಹೂಜಿಯ ತುಂಬ ನೀರನ್ನು ತುಂಬಿ ಎತ್ತಿ ಹಿಡಿದರೆ ಬಹಳ ಭಾರವಾಗಿ, ಭಾರಕ್ಕೆ ಹೂಜಿ ಹರಿದು ಹೋಗುವುದೇನೋ ಎಂದೆನಿಸುತ್ತದೆ. ಆದರೆ ಹೂಜಿಯ ಬಾಯಿಯಿಂದ ಕೆಳಗಡೆ ೨-೩ ಸೆಂ.ಮಿ. ನಷ್ಟು ಎಲೆಯ ಅಂಚುಗಳು ಜೋಡಣೆಯಾಗಿರುವುದಿಲ್ಲ. ಆದ್ದರಿಂದ ಹೂಜಿಯಲ್ಲಿ ಹೆಚ್ಚು ದ್ರವ ಸಂಗ್ರಹವಾಗದೆ ಹೊರಗೆ ಹರಿದು ಹೋಗುತ್ತದೆ. ಕೆಲವು ಹೂಜಿ ಸಸ್ಯಗಳ ಪ್ರಭೇದಗಳಲ್ಲಿ ಬಾಯಿಯ ಅಂಚಿನ ಕೆಳಗೆ ರಂದ್ರಗಳಿದ್ದು ಅವುಗಳ ಮುಖಾಂತರ ಹೆಚ್ಚಿನ ದ್ರವ ಹೊರಹೋಗುತ್ತದೆ.

ಸಸ್ಯದ ‘ಮಧು’ವಿನ ಸುಗಂಧಭರಿತ ವಾಸನೆಗೆ ಆಕರ್ಷಿತವಾದ ನೊಣ ಹಾಗೂ ಸೊಳ್ಳೆಗಳು ಹೂಜಿ ಸಸ್ಯದ ಹೆಡೆಯ ಮೇಲೆ ಕುಳಿತುಕೊಳ್ಳುತ್ತವೆ. ಮತ್ತಷ್ಟು ಮಧುವನ್ನು ಅರಸಿ ಈ ಕೀಟಗಳು ಹೆಡೆಯಿಂದ ಕೆಳಗಿಳಿದು ನಳಿಕೆಯಲ್ಲಿ ಪ್ರವೇಶಿಸುತ್ತವೆ. ನಳಿಕೆಯಲ್ಲಿ ಉದ್ದವಾದ, ಜಾರುವ ಹಾಗೂ ಕೆಳಗೆ ಮುಖ ಮಾಡಿರುವ ರೋಮಗಳಿವೆ. ಕೀಟಗಳು ರೋಮಗಳ ಮೇಲೆ ಬಂದು ಕುಳಿತುಕೊಂಡ ಕೂಡಲೇ ಕೆಳಗೆ ಜಾರಿ ಬೀಳುತ್ತವೆ. ಹೂಜಿಯ ಕೆಳಗಿನ ಭಾಗ ರೋಮರಹಿತವಾಗಿದ್ದು, ನುಣುಪು ಹಾಗೂ ತೈಲಮಯವಾಗಿರುತ್ತದೆ. ಹೀಗಾಗಿ ಕೀಟಗಳು ಜಾರಿ ನೇರವಾಗಿ ದ್ರವದಲ್ಲಿ ಬೀಳುತ್ತವೆ. ದ್ರವದಲ್ಲಿಯ ಬ್ಯಾಕ್ಟೀರಿಯಾ ಕೀಟಗಳನ್ನು ವಿಘಟಿಸಲು ಸಹಾಯ ಮಾಡಿ, ತಾವೂ ಸ್ವಲ್ಪ ಪಾಲುದಾರರಾಗುತ್ತವೆ. ಉಳಿದ ಪೋಷಕಗಳನ್ನು ಹೂಜಿ ಹೀರಿಕೊಳ್ಳುತ್ತದೆ.