“ಎಂಥಾ ಔಷಧ ಹೊಡೆದರೂ ಕೀಡಿ ಸಾಯವಲ್ಲುವು” -ಇದು ಸಾಮಾನ್ಯವಾಗಿ ಎಲ್ಲ ರೈತರ ಬಾಯಿಂದ ಬರುವ ಮಾತು. ರಾಸಾಯನಿಕ ಕೀಟನಾಶಕಗಳು ಕೊನೆಯ ಅಸ್ತ್ರ. ಇದನ್ನು ಗಮನಿಸದೆ, ರೈತರು ಕೀಟನಾಶಕಗಳು ಮಾತ್ರ ಕೀಟಗಳನ್ನು ನಾಶಮಾಡಬಲ್ಲವು ಎಂಬ ನಂಬಿಕೆಯಿಂದ ಸಿಕ್ಕ- ಸಿಕ್ಕ ಕೀಟನಾಶಕಗಳನ್ನು ಬಳಸುತ್ತಿದ್ದಾರೆ. ಇದರಿಂದಾಗಿ ನಿಸರ್ಗದಲ್ಲಿ ಹಾಗೂ ಕೀಟ ಪ್ರಪಂಚದಲ್ಲಿ ಅಸಮತೋಲನವಾಗಿದೆ.

ರಾಸಾಯನಿಕ ಕೀಟನಾಶಕಗಳು ಕೀಟಗಳನ್ನು ಸಂಪೂರ್ಣವಾಗಿ ನಾಶಮಾಡಲಾರವು. ರಾಸಾಯನಿಕ ಕೀಟನಾಶಕಗಳ ಬದಲಾಗಿ ಜೈವಿಕ ಕೀಟ ಹತೋಟಿ ವಿಧಾನಗಳನ್ನು ಅನುಸರಿಸಬೇಕು ಮತ್ತು ಜೈವಿಕ ಕೀಟನಾಶಕಗಳನ್ನು ಬಳಸಬೇಕು. ಸಾವಿರಾರು ವರ್ಷಗಳಿಂದ ನಮ್ಮ ರೈತರೆ ಸ್ವತಃ ಕಂಡುಕೊಂಡಿರುವ ಹಲವಾರು ಕೀಟ ಹತೋಟಿ ವಿಧಾನಗಳು ಪರಿಣಾಮಕಾರಿಯಾಗಿ ಕೀಟಗಳ ಹತೋಟಿ ಮಾಡಬಲ್ಲವು. ಅಂತಹ ಪಾರಂಪರಿಕ ಕೀಟ ಹತೋಟಿ ವಿಧಾನಗಳು ಹೀಗಿವೆ;

1) ಮಾಗಿ ಉಳುಮೆ ಮಾಡುವುದು 2) ಹಂಗಾಮಿಗನುಸರಿಸಿ ಬೆಳೆ ಮಾಡುವುದು 3) ಹದ, ಬೆದೆ ನೋಡಿ ಗಳೇ ಹೊಡೆಯುವುದು ಮತ್ತು ಬಿತ್ತನೆ ಮಾಡುವುದು 4) ಸಾವಯವ ಗೊಬ್ಬರ ಬಳಕೆ 5) ಪರ್ಯಾಯ ಬೆಳೆ ಮಾಡುವುದು 6) ಮಿಶ್ರಬೆಳೆ ಬೇಸಾಯ 7) ಕೀಟಗಳನ್ನು ಕೈಯಿಂದ ಆರಿಸುವದು 8} ಗಿಡಗಳನ್ನು ಜಾಡಿಸಿ ಕೀಟಗಳನ್ನು ಜಲ್ಲಿಯಲ್ಲಿ ಸಂಗ್ರಹಿಸುವುದು 9) ಪಕ್ಷಿಗಳನ್ನು ಕೀಟಗಳತ್ತ ಆಕರ್ಷಿಸುವಂತೆ ಮಾಡುವುದು 10) ಚರಗದಂತಹ ಆಚರಣೆ 11) ಕೋಳಿಗಳನ್ನು ಬಿಡುವುದು 12) ಸಂಗಾತಿ ಬೆಳೆ ಮಾಡುವುದು.

– ಇವು ಪ್ರಮುಖವಾಗಿ ನಮ್ಮ ರೈತರು ಪಾರಂಪರಿಕವಾಗಿ ರೂಢಿಸಿಕೊಂಡು ಬಂದಿರುವ ಕೆಲವು ಜೈವಿಕ ಕೀಟ ಹತೋಟಿ ಕ್ರಮಗಳು. ಈಗ ಇವುಗಳನ್ನು ಒಂದೊಂದಾಗಿ ಕೂಲಂಕಷವಾಗಿ ನೋಡೋಣ;

1) ಮಾಗಿ ಉಳುಮೆ: ಹಿಂಗಾರಿ ಬೆಳೆ ಕಟಾವಾದ ಕೂಡಲೇ ಗಳೇ(ಉಳುಮೆ) ಹೊಡೆಯಬೇಕು. ಬಹಳ ದಿನಗಳ ತನಕ ಹೊಲವನ್ನು ಗಳೇ ಹೊಡೆಯದೆ ಇಡಬಾರದು. ಹೊಲದಲ್ಲಿರುವ ಹಿಂದಿನ ಬೆಳೆಯ ಗಿಡ, ಸಸಿಗಳನ್ನು ಕಿತ್ತು, ರಂಟೆ ಅಥವಾ ನೇಗಿಲು ಹೊಡೆಯಬೇಕು. ಹಾಗೆ ಮಾಡುವುದರಿಂದ ಹಿಂದಿನ ಬೆಳೆಯಲ್ಲಿದ್ದ ಕೀಟಗಳ ಕೋಶಗಳು, ತತ್ತಿಗಳು ವಂಶಾಭಿವೃದ್ಧಿಯಾಗಲು ಸಾಧ್ಯವಾಗಲಾರದು. ಅದೂ ಅಲ್ಲದೆ, ಉಳುಮೆಯಿಂದ ಭೂಮಿಯ ಕೆಳಮಣ್ಣು ತೆರೆದು ಬೀಳುವುದರಿಂದ ಬಿಸಿಲಿಗೆ ಮಣ್ಣಿನಲ್ಲಿರುವ ಕೀಟಗಳು ಹಾಗೂ ಕೋಶಾವಸ್ಥೆಯಲ್ಲಿರುವ ಕೀಟಗಳು ನಾಶವಾಗುವುವು.

2) ಹಂಗಾಮಿಗನುಸರಿಸಿ ಬೆಳೆ: ಹಂಗಾಮಿಗನುಸರಿಸಿ ಬೆಳೆ ಮಾಡುವುದರಿಂದ ಕೀಟಗಳ ನಿಯಂತ್ರಣ ಸಾಧ್ಯವಿದೆ. ಉದಾಹರಣೆಗೆ; ಹಿಂಗಾರಿ ಹಂಗಾಮಿನಲ್ಲಿ ಚಳಿಗಾಲವಿದ್ದು, ನೀಲಾಕಾಶವಿದ್ದು, ಮೋಡ ಕವಿದ ವಾತಾವರಣ ಇಲ್ಲದ್ದರಿಂದ ಕೀಟಗಳ ಕಾಟ ಕಡಿಮೆಯಾಗುವುದು. ಹತ್ತಿ, ಬದನೆ, ತೊಗರಿ ಮತ್ತು ಕಡಲೆಯಂಥ ಬೆಳೆಗಳು ಮುಂಗಾರಿಗಿಂತ ಹಿಂಗಾರಿಯಲ್ಲಿ ಕೀಟದ ಕಾಟದಿಂದ ಮುಕ್ತವಾಗಿ ಬೆಳೆಯುತ್ತವೆ. ಇದೇ ಬೆಳೆಗಳನ್ನು ಮುಂಗಾರಿಯಲ್ಲಿ ಬೆಳೆದರೆ, ಮೋಡ ಕವಿದ ವಾತಾವರಣವಿದ್ದು, ಮಳೆಗಾಲವೂ ಇರುವುದರಿಂದ ಕೀಟಗಳ ವೃದ್ಧಿಯಾಗುವುದು. ಹೀಗಾಗಿ ಬೆಳೆಗಳು ಕೀಟಗಳ ಕಾಟದಿಂದ ಮುಕ್ತವಾಗಿ ಚೆನ್ನಾಗಿ ಬೆಳೆಯಲಾರವು.

3) ಹದ, ಬೆದೆ ನೋಡಿ ಗಳೇ ಹೊಡೆದು, ಬಿತ್ತನೆ: ಹದ ನೋಡಿ ಹರಗಬೇಕು, ರಂಟೆ ಹೊಡೆಯಬೇಕು. ಬೆದೆ ನೋಡಿ ಬಿತ್ತಬೇಕು. ಹೀಗೆ ಮಾಡುವುದರಿಂದ ಹೊಲದ ಮಣ್ಣು ಮೃದು ಆಗುವುದು. ಬೀಜಗಳು ಚೆನ್ನಾಗಿ ನಾಟುತ್ತವೆ. ಬೆಳೆಗಳು ಸದೃಢವಾಗಿ ಬೆಳೆಯುತ್ತವೆ.

4) ಸಾವಯವ ಗೊಬ್ಬರ ಬಳಕೆ: ಸಾವಯವ ಗೊಬ್ಬರದ ಬಳಕೆಯಿಂದ ಬೆಳೆಗಳು ನಿಧಾನವಾಗಿ ಬೆಳೆಯುತ್ತವೆ ಆದರೆ, ಆರೋಗ್ಯವಾಗಿ ಸದೃಢವಾಗಿ ಬೆಳೆಯುತ್ತವೆ. ಅದೇ ರಾಸಾಯನಿಕ ಗೊಬ್ಬರ ಬಳಸಿದಾಗ ಬೆಳೆಗಳು ಬೇಗನೆ ಬೆಳೆದರೂ, ರೋಗ ಬಾಧೆಗೆ ತುತ್ತಾಗುತ್ತವೆ.

5) ಪರ್ಯಾಯ ಬೆಳೆ: ಹಿಂದಿನ ರೈತರು ‘ಕಾಲಗೈ’ ಪದ್ಧತಿ ಅನುಸರಿಸುತ್ತಿದ್ದರು. ಒಂದು ಬೆಳೆಯನ್ನು ಪದೇ- ಪದೇ ಅದೇ ಹೊಲದಲ್ಲಿ ಬೆಳೆಯಬಾರದು. ನಾಲ್ಕು ವರ್ಷಕ್ಕೊಮ್ಮೆ ಪರ್ಯಾಯ ಬೆಳೆ ಮಾಡಬೇಕು. ಈ ವರ್ಷ ಹತ್ತಿ ಬಿತ್ತಿದ ಹೊಲಕ್ಕೆ ಬರುವ ಎರಡು ಮೂರು ವರ್ಷ ಶೇಂಗಾ, ಹೆಸರು, ಜೋಳದಂತಹ ಬೆಳೆ ಮಾಡಬೇಕು. ಹೀಗೆ ಮಾಡುವುದರಿಂದ ಕಾಯಿಕೊರಕದಂತಹ ಕೀಟದ ಸಂತತಿಯ (ವಂಶಚಕ್ರದ) ಪ್ರಕ್ರಿಯೆ ನಿಂತು, ಕೀಟಗಳ ಹತೋಟಿ ಸಾಧ್ಯಾವಾಗುವುದು.

6) ಮಿಶ್ರಬೆಳೆ: ಹಿಂದಿನ ರೈತರು ಅಕ್ಕಡಿ ಬೆಳೆ ಮಾಡುತ್ತಿದ್ದರು. ಕೇವಲ ಹತ್ತಿ ಅಥವಾ ತೊಗರಿ, ಇಲ್ಲವೆ ಹೆಸರಿನಂತಹ ಒಂದೇ ಬೆಳೆಯ ಬದಲಾಗಿ ಮಿಶ್ರ ಬೆಳೆ ಮಾಡಬೇಕು. ಉದಾಹರಣೆಗೆ; ಎರಡು ಸಾಲು ಶೇಂಗಾ ಒಂದು ಸಾಲು ಹತ್ತಿ. ನಾಲ್ಕು ಸಾಲು ಜೋಳ ಒಂದು ಸಾಲು ತೊಗರಿ, ಹೀಗೆ ಅಕ್ಕಡಿ ಬೆಳೆ ಮಾಡಬೇಕು. ಹೀಗೆ ಮಾಡುವುದರಿಂದ ಬೆಳೆಗಳ ಆಯಾ ಹಂತಗಳಲ್ಲಿ ಒಂದೊಂದು ಬೆಳೆಗೆ ಅಲ್ಪ- ಸ್ವಲ್ಪ ಮಾತ್ರ ಕೀಟ ಬಾಧೆ ಆಗುವುದು. ಕೀಟಗಳ ವಂಶಾಭಿವೃದ್ಧಿಗೆ ತಡೆ ಆಗುವುದು. ಇದರಿಂದ ಮುಖ್ಯ ಬೆಳೆಯು ಕೀಟ ಮುಕ್ತವಾಗುವುದು.

7) ಕೀಟಗಳನ್ನು ಕೈಯಿಂದ ಆರಿಸುವುದು: ಕೀಟಗಳು ಗಾತ್ರದಲ್ಲಿ ದೊಡ್ಡವಾಗಿದ್ದರೆ ಎಂಥ ವಿಷಕಾರಿ ರಾಸಾಯನಿಕ ಕೀಟನಾಶಕ ಬಳಸಿದರೂ ಸಾಯುವುದಿಲ್ಲ. ಅಷ್ಟೇ ಏಕೆ ಕೀಟಗಳನ್ನು ವಿಷದಲ್ಲಿ ಮುಳಗಿಸಿದರೂ ಸಾಯಲಾರವು. ಅಂತಹ ಸಂದರ್ಭದಲ್ಲಿ ಕೀಟಗಳನ್ನು ಕೈಯಿಂದ ಆರಿಸಿ ಸಂಗ್ರಹಿಸಿ ಹೊಲದಿಂದ ಬೇರೆ ಕಡೆ ಒಯ್ದು ಚೆಲ್ಲಬೇಕು. ದೊಡ್ಡವರಾಗಲಿ, ಸಣ್ಣ ಹುಡುಗರಾಗಲಿ ಪ್ಲಾಸ್ಟಿಕ್ ಡಬ್ಬಿಗಳಲ್ಲಿ ಕೀಟಗಳನ್ನು ಸಂಗ್ರಹಿಸಿಕೊಂಡು ಸರೋವರ ಅಥವಾ ಹಳ್ಳದ ದಂಡೆಯಲ್ಲಿ ಹುಗಿಯಬೇಕು(ಹೂತುಹಾಕು). ಇದೇ ರೀತಿ ವಾರಕ್ಕೊಂದು ಸಲ ಮಾಡಿದರೆ ಕೀಟಗಳ ನಿಯಂತ್ರಣ ಸಾಧ್ಯವಿದೆ. ಕೇವಲ ಐದಾರು ಜನ ಒಂದು ಎಕರೆ ಹೊಲದಲ್ಲಿರುವ ಕೀಟಗಳನ್ನು ಆರಿಸಿ ತೆಗೆಯಬಲ್ಲರು.

8} ಕೈಯಿಂದ ಕೀಟಗಳನ್ನು ಜಾಡಿಸುವುದು: ತೊಗರಿ ಗಿಡಗಳ ಟೊಂಗೆಗಳನ್ನು ಮೆಲ್ಲಗೆ ಬಾಗಿಸಿ ಕೆಳಗಡೆ ಜಲ್ಲಿ (ದೊಡ್ಡ ಬುಟ್ಟಿ) ಇಟ್ಟು ಜಾಡಿಸಬೇಕು. ಜಲ್ಲಿಯಲ್ಲಿ ಕೀಟಗಳು ಸಂಗ್ರಹವಾಗುತ್ತವೆ. ಆ ಕೀಟಗಳನ್ನು ಹೊಲದಿಂದ ದೂರ ಒಯ್ದು ನೆಲದಲ್ಲಿ ಹುಗಿಯಬೇಕು. ಇದೇ ರೀತಿ ವಾರಕ್ಕೊಮ್ಮೆಯಂತೆ ನಾಲ್ಕು ಸಲ ಜಾಡಿಸಿದರೆ, ತೊಗರಿ ಕಾಯಿಕೊರಕ ಕೀಟಗಳ ನಿಯಂತ್ರಣ ಸಾಧ್ಯವಿದೆ. ಇದರಿಂದ ತೊಗರಿ ಹೂವು, ಮಿಡಿ, ಕಾಯಿ ಉದುರುವುದಿಲ್ಲ. ಅಕ್ಕಡಿ ಬೆಳೆಯಾದರೆ ಒಂದು ಎಕರೆ ಹೊಲದ ತೊಗರಿ ಬೆಳೆಯಲ್ಲಿರುವ ಕೀಟಗಳನ್ನು ಒಬ್ಬನೇ ವ್ಯಕ್ತಿ ಜಾಡಿಸಬಹುದು.

9) ‘ಚರಗ’ ಚೆಲ್ಲುವದು ಅಥವಾ ಪಕ್ಷಿಗಳನ್ನು ಆಕರ್ಷಿಸುವುದು: ಗುಬ್ಬಿ, ಬೆಳ್ಳಕ್ಕಿ ಮೊದಲಾದ ಪಕ್ಷಿಗಳು ಕೀಟಗಳನ್ನು ತಿನ್ನುತ್ತವೆ. ಈ ಪಕ್ಷಿಗಳನ್ನು ಕೀಟಗಳತ್ತ ಆಕರ್ಷಿಸಲು ಬೆಳೆಗಳಿಗೆ ಕೀಟನಾಶಕ ಬಳಸಬಾರದು. ಬದಲಾಗಿ ಚುರುಮರಿ, ಅಕ್ಕಿನುಚ್ಚು, ಇಲ್ಲವೆ ಸಾವೆ ಕಾಳುಗಳನ್ನು ಹೊಲದಲ್ಲಿ ಅಲ್ಲಲ್ಲಿ ಚೆಲ್ಲಬೇಕು. ಇದರಿಂದ ಪಕ್ಷಿಗಳು ಹೊಲದತ್ತ ಕಾಳು ತಿನ್ನಲು ಬರುತ್ತವೆ. ಆಗ ಬೆಳೆಗಳಲ್ಲಿದ್ದ ಕಾಯಿಗಳನ್ನು ತಿನ್ನುತ್ತಿರುವ ಕೀಟಗಳ ವಾಸನೆ ಪಕ್ಷಿಗಳಿಗೆ ಬಡಿಯುತ್ತದೆ. ಹೀಗಾಗಿ ಕೀಟಗಳನ್ನು ತಿನ್ನುತ್ತವೆ. ಕೀಟಗಳ ಹತೋಟಿಗೆ ಪಕ್ಷಿಗಳ ಆಕರ್ಷಣೆ ಮಾಡುವುದು ಜೈವಿಕ ಕೀಟ ಹತೋಟಿ ವಿಧಾನ ಎನಿಸಿದೆ.

ಶೀಗಿ ಹುಣ್ಣಿಮೆಗೆ, ಎಳ್ಳಮವಾಸೆಗೆ, ಕೆರ್ಯಾಬಲಿ (ನಾಗರ ಪಂಚಮಿ) ಹಾಗೂ ಜೋಕುಮಾರನ ಹಬ್ಬದ ದಿವಸ ಚರಗ ಮತ್ತು ಅಳ್ಳಾಂಬಲಿ ಚೆಲ್ಲುವ ಸಂಪ್ರದಾಯ ರೈತ ಸಮುದಾಯದಲ್ಲಿದೆ. ವಿಧ- ವಿಧವಾದ ಭಕ್ಷ್ಯ ಭೋಜನದ ಪದಾರ್ಥಗಳನ್ನು ಮಾಡಿ ನೈವೇದ್ಯ ಅರ್ಪಿಸಿ ಬೆಳೆಯ ಆಯಾ ಹಂತಗಳಲ್ಲಿ ಹೊಲದಲ್ಲಿ ಚೆಲ್ಲುವ (ಹರಡು) ಸಂಪ್ರದಾಯ ಇವು.

10) ಕೋಳಿಗಳನ್ನು ಬಿಡುವುದು: ಕಡಲೆ ಬೆಳೆಯಲ್ಲಿರುವ ಸಣ್ಣ ಅಥವಾ ದೊಡ್ಡ ಕೀಟಗಳನ್ನು ತಿನ್ನಲು ಕೋಳಿಗಳನ್ನು ಬಿಡಬೇಕು. ಕಡಲೆ ಬೆಳೆಯು ಕೋಳಿಗಳ ಬಾಯಿಗೆ ನಿಲುಕುವಷ್ಟೇ ಎತ್ತರ ಬೆಳೆದಿರುತ್ತದೆ. ಕೋಳಿಗಳು ಕೀಟಗಳನ್ನು ಆರಿಸಿ ತಿನ್ನಲು ಅನುಕೂಲವಾಗುವುದು. ಕೋಳಿಗಳನ್ನು ಹೊಲಕ್ಕೆ ಒಯ್ದು ಬಿಡಬೇಕು. ಅವು ಸಾಲು ಹಿಡಿದು ಕೀಟಗಳನ್ನು ತಿನ್ನುತ್ತವೆ. ನಂತರ ಅವುಗಳನ್ನು ಒಯ್ದು ಕೋಳಿಗಳ ಮಾಲೀಕರಿಗೆ ಮುಟ್ಟಿಸಿದರಾಯಿತು. ಕೀಟ ಹತೋಟಿ ಸುಲಭಸಾಧ್ಯ.

11) ಬೇಲಿ ಬೆಳೆ ಅಥವಾ ಸಂಗಾತಿ ಬೆಳೆ: ಹತ್ತಿ ಬೆಳೆಯ ಸುತ್ತಲೂ ಗುರೆಳ್ಳು ಬೆಳೆಯಬೇಕು. ಗುರೆಳ್ಳ ಹೂವಿನ ಅರಿಷಿಣ ಬಣ್ಣಕ್ಕೆ ಕೀಟಗಳು ಆಕರ್ಷಿತವಾಗುತ್ತವೆ. ಅದೇ ರೀತಿ ಅಲಸಂದೆಯನ್ನು ಹತ್ತಿ ಬೆಳೆಯ ಸುತ್ತಲೂ ಬೆಳೆದರೆ, ಅಲಸಂದೆ ಬೆಳೆಗೆ ಕೀಟಬಾಧೆ ಆಗುವುದು, ಹತ್ತಿ ಬೆಳೆಗೆ ಕೀಟದ ಕಾಟದಿಂದ ರಕ್ಷಣೆ ಸಿಗುವುದು. ಹತ್ತಿ ಬೆಳೆಯ ಸಾಲಿನಲ್ಲಿ ಅಲ್ಲಲ್ಲಿ ಬೆಂಡೆ ಬೆಳೆದರೆ ಬೆಂಡೆಕಾಯಿಗೆ ಕೀಟಗಳು ಆಕರ್ಷಿತವಾಗಿ ಬೆಂಡೆಕಾಯಿ ತಿನ್ನುತ್ತವೆ. ಹತ್ತಿಕಾಯಿ ತಿನ್ನಲಾಗದು. ಇದರಿಂದ ಕಾಯಿಕೊರಕ ಕೀಟಗಳ ಕಾಟ ನಿಯಂತ್ರಣ ಸಾಧ್ಯವಾಗುವುದು.

12) ಜೈವಿಕ ಕೀಟನಾಶಕ ಬಳಕೆ: ರಾಸಾಯನಿಕ ಕೀಟನಾಶಕಗಳ ಬದಲಾಗಿ ಜೈವಿಕ ಕೀಟನಾಶಕಗಳನ್ನು ಬಳಕೆ ಮಾಡಬೇಕು. ಹೊಲದ ಬದುವುಗಳಲ್ಲಿ ಬೆಳೆದ ಸೀತಾಫಲ, ಹುಲುಗಲ, ಎಕ್ಕೆಯಂತಹ ಬೆಳೆಗಳಿಂದ ಸಸ್ಯಜನ್ಯ ಕೀಟನಾಶಕ ತಯಾರಿಸಿ ಸಿಂಪಡಿಸಬೇಕು. ಬೇವಿನ ಬೀಜದ ಕಷಾಯ ಸಿಂಪಡಿಸಬೇಕು. ಬೆಳ್ಳುಳ್ಳಿ, ಹಸಿಮೆಣಸಿನಕಾಯಿ ಕಷಾಯ ತಯಾರಿಸಿ ಸಿಂಪಡಿಸಬೇಕು. ದನಗಳ ಮೂತ್ರ, ಸಗಣಿ ಮತ್ತು ಮಜ್ಜಿಗೆಯನ್ನು ಕೀಟನಾಶಕವಾಗಿ ಬಳಸಬೇಕು. ಈ ಸಸ್ಯಜನ್ಯ ಹಾಗೂ ಪ್ರಾಣಿಜನ್ಯ ಕೀಟನಾಶಕಗಳು ಕೈಯಳತೆಯಲ್ಲೇ ಲಭ್ಯವಿದ್ದು ಇವುಗಳ ಕಷಾಯ ಮಾಡಿ ನೀರಿನಲ್ಲಿ ಬೆರೆಸಿ ರಾಸಾಯನಿಕ ಕೀಟನಾಶಕಗಳಿಗೆ ಪರ್ಯಾಯವಾಗಿ ಬಳಸಬಹುದಾಗಿದೆ.

ಮೇಲೆ ವಿವರಿಸಿದ ಎಲ್ಲ ಕೀಟ ಹತೋಟಿ ವಿಧಾನಗಳು ಪರಿಸರ ಸ್ನೇಹಿ. ಖರ್ಚಿಲ್ಲದೆ, ಬಂಡವಾಳ ಹೂಡದೆ, ಸುಲಭವಾದ ವಿಧಾನಗಳೆನಿಸಿವೆ. ಜನರ ಮತ್ತು ಜಾನುವಾರಗಳ ಆರೋಗ್ಯಕ್ಕೆ ಹಾನಿಕರ ಅಲ್ಲ. ಉಪಕಾರಿ ಕೀಟಗಳನ್ನು ರಕ್ಷಿಸಬಲ್ಲ ವಿಧಾನಗಳಿವು! ಸ್ವಾವಲಂಬಿ ಕೃಷಿಗೆ ಪೂರಕ. ಬೆಳೆಗಳು ಹೂ ಬಿಡುವ ಹಂತದಲ್ಲಿ ಪರಾಗಸ್ಪರ್ಶ ಕ್ರಿಯೆಗೆ ಸಹಕಾರಿಯಾದ ದುಂಬಿ, ಜೇನು, ಪಾತರಗಿತ್ತಿಯಂತಹ ಉಪಕಾರಿ ಕೀಟಗಳು ರಾಸಾಯನಿಕ ಕೀಟನಾಶಕಗಳಿಂದ ಸತ್ತುಹೋಗುತ್ತವೆ.

ಇದಲ್ಲದೆ ಸೃಷ್ಟಿಯಲ್ಲಿ ಒಂದನ್ನೊಂದು ಕೊಂದು ತಿಂದು ಬದುಕುವ ಸಮತೋಲನ ಸೂತ್ರವಿದೆ. ಕೀಟ ಪ್ರಪಂಚದಲ್ಲಿ ಭಕ್ಷಕ ಹಾಗೂ ರಕ್ಷಕ ಕೀಟಗಳಿವೆ. ಭಕ್ಷಕ ಕೀಟಗಳು ಬೇಡವಾದವು. ರಕ್ಷಕ ಕೀಟಗಳು ಬೇಕಾದವು. ರಾಸಾಯನಿಕ ಕೀಟನಾಶಕಗಳಿಂದ ಬೇಕಾದ ಕೀಟಗಳು ಬೇಗನೆ ಸಾಯುತ್ತವೆ. ಬೇಡವಾದ ಕೀಟಗಳು ಸಾಯಲಾರವು. ‘ಬೆಕ್ಕು ಇಲ್ಲದ ಮನೆಯಲ್ಲಿ ಇಲಿಯ ಚೆಲ್ಲಾಟ’ ಎಂಬ ಮಾತಿನಂತೆ ಬೇಡವಾದ ಕೀಟಗಳ ಸಂತತಿ ರಕ್ತ ಬೀಜಾಸುರನಂತೆ ವೃದ್ಧಿಯಾಗಲು ಕಾರಣವಾಗುತ್ತದೆ. ಇದನ್ನು ತಪ್ಪಿಸಲು ಬೇಕಾದ ಕೀಟಗಳ ಸಂತತಿ ಹೆಚ್ಚಿಸಿ ಬೇಡವಾದ (ಕಾಯಿಕೊರಕ) ಕೀಟಗಳನ್ನು ನಾಶಪಡಿಸುವ ವಿಧಾನಗಳಿವು.

ವಿಪರೀತವಾಗಿ ದುಬಾರಿ ಬೆಲೆ ತೆತ್ತು ಪೆರಿಥ್ರಾಯಿಡ್ ಕೀಟನಾಶಕಗಳನ್ನು ಪದೇ- ಪದೇ ಬಳಸಿ ಕೀಟಗಳು ಸಾಯಲಾರದ ಸ್ಥಿತಿಗೆ ತಲುಪಿವೆ. ಕೀಟಗಳ ಅಟ್ಟಹಾಸ ತಡೆಯಲು ರಾಸಾಯನಿಕ ಕೀಟನಾಶಕ ಬಳಸಿದ್ದರಿಂದ ಕೀಟಗಳು ಹೆಚ್ಚುತ್ತಿವೆ. ಬೆಳೆದ ಫಸಲು ಕೈಗೆ ಬಂದದ್ದು ಬಾಯಿಗೆ ಬರುತ್ತಿಲ್ಲ. ಕೀಟ ಪ್ರಪಂಚದಲ್ಲೂ ಅಸಮಾನತೆ ಉಂಟಾಗಿದೆ. ಇಂಥ ಸಂದರ್ಭದಲ್ಲಿ ಮೇಲೆ ವಿವರಿಸಿದ ಕೀಟ ಹತೋಟಿ ವಿಧಾನಗಳು ಹೆಚ್ಚು ಪರಿಣಾಮಕಾರಿ ಹಾಗೂ ಮಿತವ್ಯಯ ಎನಿಸುವೆ. ಪರಿಸರ ಸ್ನೇಹಿ ವಿಧಾನಗಳ ಅಳವಡಿಕೆಯಿಂದ ಮಾತ್ರ ರೈತರು ಫಸಲನ್ನು ಕೀಟಗಳ ಕಾಟದಿಂದ ರಕ್ಷಿಸಿಕೊಳ್ಳಬಹುದಾಗಿದೆ.