‘ನಾನು ಕಪ್ಪಗಿದ್ದೇನೆ, ನನ್ನ ತಂಗಿಯರೆಲ್ಲ ಬೆಳ್ಳಗಿದ್ದಾರೆ. ಬೇರೆಯವರು ಇರಲಿ ನನ್ನ ಅಪ್ಪ, ಅಮ್ಮನೇ ನನ್ನನ್ನು ತಿರಸ್ಕಾರದಿಂದ ನೋಡುತ್ತಾರೆ. ನಾನು ಉಳಿದವರಿಗಿಂತ ಹೆಚ್ಚು ಕೆಲಸ ಮಾಡಿಕೊಡುತ್ತೇನೆ. ಆಟೋಟಗಳಲ್ಲಿ ಪ್ರೈಜ್‌ಗಳನ್ನು ತೆಗೆದುಕೊಂಡಿದ್ದೇನೆ. ಒಳ್ಳೆಯ ವಿದ್ಯಾರ್ಥಿನಿ ಎಂದು  ಹೆಸರು ಪಡೆದಿದ್ದೇನೆ. ಎಲ್ಲ ಗುಣಗಳನ್ನು ಒಂದು ಮಸಿ ನುಂಗಿತು ಎನ್ನುವ ಹಾಗೆ, ನನ್ನ ಮೈ ಬಣ್ಣ ನನ್ನ ಆತ್ಮ ವಿಶ್ವಾಸವನ್ನು ತಿಂದು ಹಾಕಿಬಿಟ್ಟಿದೆ ಸರ್. ನನ್ನ ಮದುವೆಮಾಡುವುದು ಕಷ್ಟವಂತೆ. ಕಪ್ಪಗಿರುವ ಹುಡುಗಿಯನ್ನು ಮೆಚ್ಚಿ ಮದುವೆಯಾಗಲು ಕಪ್ಪನೆಯ ಹುಡುಗರೂ ತಯಾರಿರುವುದಿಲ್ಲವಂತೆ. ನಾನು ನಮ್ಮ ಮನೆಗೆ ಹೊರೆಯಾಗುತ್ತೇನಂತೆ. ಈ ಮಾತನ್ನು ದಿನಕ್ಕೆ ಒಂದು ಸಲವಾದರೂ ನನ್ನ ತಾಯಿ ಮತ್ತು ಅಜ್ಜಿ ಹೇಳುತ್ತಲೇ ಇರುತ್ತಾರೆ. ಜಿಗುಪ್ಸೆ ಬಂದು ಆತ್ಮಹತ್ಯೆ ಮಾಡಿಕೊಳ್ಳಲೇಬೇಕೆನಿಸಿಬಿಡುತ್ತದೆ. ಎಂದು ಕಣ್ಣೀರು ಹಾಕಿದಳು ವಿಜಯ.

‘ನಾನು ಐದಡಿ ಎತ್ತರ ಇದ್ದೇನೆ. ನನಗಿಂತ ಎರಡು ವರ್ಷ ಚಿಕ್ಕವನಾದ ನನ್ನ ತಮ್ಮ ನನಗಿಂತ ಆರು ಅಗುಲ ಹೆಚ್ಚು ಎತ್ತರವಾಗಿದ್ದಾನೆ. ಗುಂಗುರು ಕೂದಲು, ಲಕ್ಷಣವಾಗಿದ್ದಾನೆ. ನಾವು ಜೊತೆಯಾಗಿ ಹೋದರೆ ಎಲ್ಲರೂ ಅವನನ್ನು ಗಮನಿಸಿ ಮಾತಾಡಿಸುತ್ತಾರೆಯೇ ಹೊರತು ನನ್ನನ್ನು ಮಾತಾಡಿಸುವುದೇ ಇಲ್ಲ. ನಾನು ದಿವೂ ಜಿಮ್‌ಗೆ ಹೋಗುತ್ತೇನೆ. ಜಾಗಿಂಗ್ ಮಾಡುತ್ತೇನೆ. ಈಜುತ್ತೇನೆ. ನನ್ನ ಶರೀರ ಕಂಡು ನನಗೆ ಬೇಜಾರಾಗುತ್ತದೆ. ಮುಖ ಮರೆಸಿಕೊಂಡು ಎಲ್ಲಿಯಾದರೂ ಓಡಿ ಹೋಗೋಣ ಎನಿಸುತ್ತದೆ ಎಂದ ಬಾಬುರಾವ್.

‘ಕೆಳ ಜಾತಿಯಲ್ಲಿ ಹುಟ್ಟಿ, ಸಣ್ಣ ಹಳ್ಳಿಯೊಂದರಲ್ಲಿ ಬದುಕುವುದು ಬಹಳ ಕಷ್ಟ. ಅಸ್ಪೃಶ್ಯತೆ ನಿವಾರಣೆ ಮಾಡಲು ಸರ್ಕಾರ ಕಾನೂನು ಮಾಡಿದೆ. ಏನು ಪ್ರಯೋಜನ. ಹೋಟೆಲ್‌ಗೆ ಹೋಗಿ ನೋಡಿ. ಮೇಲ್ಜಾತಿಯವರಿಗೆ ಸ್ಟೀಲ್ ಲೋಟದಲ್ಲಿ ಕಾಫಿ, ಟೀ ಕೊಟ್ಟರೆ, ನಮಗೆ ಪ್ಲಾಸ್ಟಿಕ್ ಲೋಟದಲ್ಲಿ ಕೊಡುತ್ತಾರೆ. ಅಂಗಡಿಯಲ್ಲಿ ಸಾಮಾನು ತೆಗೆದುಕೊಳ್ಳುವಾಗ ನಾವು ಒಂದು ಪಕ್ಕಕ್ಕೆ ನಿಲ್ಲಬೇಕು. ನನ್ನ ತರಗತಿಯಲ್ಲಿ ನಾನೇ ಯಾವಾಗಲೂ ಫಸ್ಟ್ ಅಥವಾ ಸೆಕೆಂಡ್ ಬರುತ್ತೇನೆ. ಹೆಚ್ಚಿನ ಟೀಚರ್, ಮನಃಪೂರ್ವಕವಾಗಿ ಅಭಿನಂದನೆ ಹೇಳುವುದಿಲ್ಲ. ಯಾಕೆ ಇಷ್ಟು ಕಷ್ಟಪಡುತ್ತಿದ್ದೇಯಾ, ೫೦ ಅಥವಾ ೬೦ ಪರ್ಸೆಂಟ್ ಮಾರ್ಕ್ಸ್ ತೆಗೆದರೆ ಸಾಕು, ನಿಮಗೆ ರಿಸರ್ವೇಶನ್ ಪಾಲಿಸಿಯಿಂದ ಕೇಳಿದ ಸೀಟು, ಉದ್ಯೋಗ ದೊರೆಯುತ್ತದೆ ಎನ್ನುತ್ತಾರೆ. ನಮ್ಮ ಹತ್ತಿರ ಬರಲು, ಮಾತಾಡಲು ಯಾರಿಗೂ ಇಷ್ಟವಿಲ್ಲ. ಈ ಅನಿಷ್ಟ ಜಾತಿ ಪದ್ಧತಿ ಯಾವಾಗ ಹೋಗುತ್ತದೋ ಎಂದ ಬಲರಾಮ.

‘ನಾವು ಬಡವರಾಗಿರುವುದೇ ಒಂದು ಅಪರಾಧವಾಗಿಬಿಟ್ಟಿದೆ ಸರ್. ಎಲ್ಲಿಯೂ ನಮಗೆ ಗೌರವ ಸಿಗುವುದಿಲ್ಲ. ಅಂಗಡಿಯಲ್ಲಿ ಸಾಮಾನು ತರಲು ಹೋದರೆ, ‘ದುಡ್ಡಿದೆಯಾ, ನಮ್ಮಲ್ಲಿ ಸಾಲದೊರೆಯುವುದಿಲ್ಲ ಎಂದು ಅಂಗಡಿಯವರು ಹೇಳುತ್ತಾರೆ. ಸಭೆ,ಸಮಾರಂಭಗಳಿಗೆ ಹೋದರೆ ಕುರ್ಚಿಗಳು ಖಾಲಿ ಇದ್ದರೂ, ನಾವು ನಿಂತುಕೊಂಡಿರಬೇಕು. ಅಕಸ್ಮಾತ್ ಕುಳಿತಿದ್ದರೆ, ಏಳು, ಏಳು ದೊಡ್ಡ ಮನುಷ್ಯರು ಬರುತ್ತಾರೆ. ಅವರು ನಿನ್ನ ಪಕ್ಕದಲ್ಲಿ ಕುಳಿತುಕೊಳ್ಳುತ್ತಾರೆಯೇ ಎಂದು ಸಂಘಟಕರು ಎಬ್ಬಿಸುತ್ತಾರೆ. ದುಡ್ಡಿದ್ದರೆ ದೊಡ್ಡಪ್ಪ, ದುಡ್ಡಿಲ್ಲದಿದ್ದರೆ ಏನೂ ಅಲ್ಲ. ಇದು ನ್ಯಾಯವೇ? ದುಡ್ಡಿಲ್ಲದ ನಾವು ಕೀಳು ಎಂದು ಪ್ರತಿ ನಿಮಿಷ ಪ್ರತಿದಿನ ನಮಗೆ ಮನವರಿಕೆ ಮಾಡಿಕೊಡುತ್ತಲೇ ಇರುತ್ತಾರೆ ಎಂದ ಸಿದ್ದೇಶ.

ಹೀಗೆ ಅಸಂಖ್ಯಾತ ಜನ ನಾನಾಕಾರಣಗಳಿಂದ ಕೀಳರಿಮೆಯಿಂದ ಬಳಲುತ್ತಾರೆ. ಆರ್ಲಫ್ರೆಡ್ ಆಡ್ಲರ್ ಎನ್ನುವ ಮನೋವಿಜ್ಞಾನಿಯ ಪ್ರಕಾರ ಪ್ರತಿಯೊಬ್ಬ ವ್ಯಕ್ತ್ತಿ ಹುಟ್ಟಿನಂದಿನಿಂದಲೇ ಕೀಳರಿಮೆಯನ್ನೂ ಅನುಭವಿಸುತ್ತಾನೆ. ಏಕೆಂದರೆ ಮಾನವ ಶಿಶು ಅತ್ಯಂತ ಅಸಹಾಯಕ ಪ್ರಾಣಿ, ತನ್ನ ಕಾಲಮೇಲೆ ನಿಲ್ಲಲು ಅದಕ್ಕೆ ಎಂಟೊಂಭತ್ತು ತಿಂಗಳು ಬೇಕಾಗುತ್ತದೆ. ತನ್ನ ಅನ್ನ ಸಂಪಾದಿಸಲು ಇಪ್ಪತ್ತು ವರ್ಷ ಕಾಯಬೇಕಾಗುತ್ತದೆ.

ಅಸಹಾಯಕ ಮತ್ತು ಪರಾವಲಂಬಿಯಾದ ಶಿಶು ತಾನು ಕೀಳು ಎಂದುಕೊಳ್ಳುವುದರಲ್ಲಿ ಅಸಹಜತೆ ಏನೂ ಇಲ್ಲ. ಮೇಲರಿಮೆ(Supeerior)  ಯನ್ನು ಸಾಧಿಸುವುದೇ ಪ್ರತಿಯೊಂದು ಜೀವಿಯ ಆಶಯ, ಗುರಿಯಾಗುತ್ತದೆ. ಇದಕ್ಕೆ ವ್ಯಕ್ತಿ ಹಲವು ವಿಧಿವಿಧಾನಗಳನ್ನು ಅನುಸರಿಸುತ್ತಾನೆ/ಳೆ.

೧. ಸುಂದರ, ಆಕರ್ಶಕ ಶರೀರವನ್ನು ಪಡೆಯುವುದು.

೨. ಶರೀರವನ್ನು ಅಲಂಕಾರಿಕ ವಸ್ತುಗಳಿಂದ ಅಲಂಕರಿಸುವುದು

೩. ಶಾಲಾಕಾಲೇಜಿನಲ್ಲಿ ಹೆಚ್ಚಿನ ಅಂಕಗಳನ್ನು ತೆಗೆಯುವುದು

೪. ಹಾಡು, ನೃತ್ಯ, ಅಭಿನಯ, ಸಾಹಿತ್ಯ ಸೃಷ್ಟಿ, ಸೃಜನಶೀಲ ಚಟುವಟಿಕೆಗಳು, ಕ್ರೀಡೆಗಳಲ್ಲಿ ಪ್ರತಿಭೆಯನ್ನು ತೋರಿಸುವುದು.

೫. ಇತರರು ಮೆಚ್ಚುವ, ಹೊಗಳುವ ನಡೆ-ನುಡಿಗಳನ್ನು ಪ್ರಕಟಿಸುವುದು.

೬. ದಾನ-ಧರ್ಮ, ಪರೋಪಕಾರದಲ್ಲಿ ತೊಡಗುವುದು.

೭. ಪ್ರಶಸ್ತಿ, ಪುರಸ್ಕಾರ, ಬಹುಮಾನಗಳನ್ನು ಪಡೆಯುವುದು.

೮. ಯಾವುದೇ ಕೆಲಸ, ಕರ್ತವ್ಯವನ್ನು ಅಚ್ಚುಕಟ್ಟಾಗಿ, ಚೆನ್ನಾಗಿ ಮಾಡುವುದು.

೯. ಕೆಟ್ಟ ಹೆಸರು ಬರದಂತೆ ಎಚ್ಚರ ವಹಿಸುವುದು.

ಈ ವಿಧಿವಿಧಾನಗಳಲ್ಲಿ ಸಫಲವಾದರೆ, ಕೀಳರಿಮೆ ಹೋಗುತ್ತದೆ. ಅಥವಾ ಕಡಿಮೆಯಾಗುತ್ತದೆ. ವಿಫಲವಾದರೆ ಕೀಳರಿಮೆ ಮತ್ತಷ್ಟು ಹೆಚ್ಚುತ್ತದೆ.

 

ಯಾವುದೇ ವ್ಯಕ್ತಿಯಲ್ಲಿ ಕೀಳರಿಮೆ ತೀವ್ರಮಟ್ಟದಲ್ಲಿರಲು ಅಥವಾ ಹೆಚ್ಚಾಗಲು ಸಾಮಾನ್ಯ ಕಾರಣಗಳಿವು:

೧. ಸುಂದರವಲ್ಲದ ಕುರೂಪಿ ಶರೀರ ಅಥವಾ ಅಂಗವೈಕಲ್ಯಗಳು. ವಿಪರೀತ ದಪ್ಪ ಅಥವಾ ವಿಪರೀತ ಸಣ್ಣ, ಅತಿ ಎತ್ತರ ಅಥವಾ ಅತಿ ಕುಳ್ಳ, ಅತಿ ಕಪ್ಪು ಬಣ್ಣ ಇತ್ಯಾದಿ.

೨. ತಂದೆ, ತಾಯಿ, ಪೋಷಕರ ಪ್ರೀತಿ, ವಾತ್ಸಲ್ಯ ಕಡಿಮೆ, ಅವರ ಟೀಕೆ, ತಿರಸ್ಕಾರ, ಹೀನಾಯ ಹೆಚ್ಚು, ಬೇಡದ ಮಗುವಾಗಿ ಬೆಳೆಯುವುದು.

೩. ಶಾಲೆ-ವಿದ್ಯಾಭ್ಯಾಸದಲ್ಲಿ, ಕಲಿಕೆಯಲ್ಲಿ ಹಿಂದುಳಿಯುವುದು.

೪. ಯಾವುದೇ ಪ್ರತಿಭೆ ಇಲ್ಲದಿರುವುದು ಅಥವಾ ಇದ್ದರೂ ಅದರ ಪ್ರಕಟಣೆಗೆ ಅವಕಾಶ, ಪ್ರೋತ್ಸಾಹ ಇಲ್ಲದಿರುವುದು.

೫. ಕೆಳವರ್ಗ, ಜಾತಿ ಅಥವಾ ಮೈನಾರಿಟಿ ಗುಂಪಿಗೆ ಸೇರಿರುವುದು.

೬. ತಂದೆ-ತಾಯಿ ಶಾರೀರಕ ದುಡಿಮೆ ಮಾಡುವ ಶ್ರಮಿಕ ವರ್ಗಕ್ಕೆ ಸೇರಿರುವುದು.

೭. ಸಾಮಾಜಿಕ ಕಳಂಕವನ್ನುಂಟುಮಾಡುವ ಕಾಯಿಲೆಗಳು ತನಗೆ ಅಥವಾ ಮನೆಯವರಿಗೆ ಇರುವುದು. ಉದಾ, ಕುಷ್ಠರೋಗ, ತೊನ್ನು-ಬಿಳಿ ಮಚ್ಚೆಗಳು, ಸೋರಿಯಾಸಿಸ್ ಎಕ್ಸೀಮಾ ಇತ್ಯಾದಿ ಚರ್ಮರೋಗಗಳು, ಫಿಟ್ಸ್, ಹುಚ್ಚುಕಾಯಿಲೆ, ಸಿಫಿಲಿಸ್ ಮತ್ತು ಏಯ್ಡ್ಸ್‌ನಂತಹ ಲೈಂಗಿಕ ರೋಗಗಳು ಇತ್ಯಾದಿ.

೮. ಅಪರಾಧ ಮಾಡಿ, ಪೊಲೀಸ್ ಸ್ಟೇಷನ್ ವಾಸ ಅಥವಾ ಜೈಲಾಗಿರುವುದು.

೯. ಬಹಿರಂಗ ಅಥವಾ ಸಾಮಾಜಿಕ ಅವಮಾನ ಬಹಿಷ್ಕಾರಕ್ಕೆ ತುತ್ತಾಗಿರುವುದು.

೧೦. ಆರ್ಥಿಕವಾಗಿ, ಸಾಮಾಜಿಕವಾಗಿ ಸುಸ್ಥಿತಿಯಲ್ಲಿದ್ದ ಕುಟುಂಬ ಇದ್ದಕ್ಕಿದ್ದಂತೆ ದುಸ್ಥಿತಿಗೆ ಇಳಿಯುವುದು, ಇತ್ಯಾದಿ.

ಕೀಳರಿಮೆ ಹೀಗೆ ಮನಸ್ಸಿಗೆ ಬಹಳ ಹಿಂಸೆಯನ್ನುಂಟುಮಾಡುತ್ತದೆ. ವ್ಯಕ್ತಿಯಲ್ಲಿ ಉತ್ಸಾಹ, ಲವಲವಿಕೆ, ಆಶಾವಾದ ಸ್ವಲ್ಪವೂ ಇರುವುದಿಲ್ಲ. ಆತ/ಆಕೆ ಯಾವುದೇ ಸನ್ನಿವೇಶ, ಸಂದರ್ಭದಲ್ಲಿ ಮುನ್ನುಗ್ಗುವ ಬದಲು, ಹಿಂಜರಿಯಲು ತೆರೆಮರೆಯಲ್ಲಿರಲು ಇಷ್ಟಪಡುತ್ತಾನೆ. ಸ್ಪರ್ಧೆಯಲ್ಲಿ ಪಾಲ್ಗೊಳ್ಳಲು, ಜನರೊಂದಿಗೆ ಬೆರೆಯಲು ಇಷ್ಟಪಡುವುದಿಲ್ಲ. ಪ್ರಯತ್ನ ಮಾಡುವ ಮೊದಲೇ ಸೋಲೊಪ್ಪಿಕೊಳ್ಳುತ್ತಾನೆ. ತನ್ನ ಹಕ್ಕುಗಳನ್ನು ಚಲಾಯಿಸುವುದಿಲ್ಲ. ಇದು ಹರೆಯದವರಿಗೆ ಒಂದು ಶಾಪವಾಗುತ್ತದೆ.

ಆದ್ದರಿಂದ ಕೀಳರಿಮೆಯನ್ನು ನಿಭಾಯಿಸಬೇಕು, ಆತ್ಮವಿಶ್ವಾಸವನ್ನು ಬೆಳೆಸಿಕೊಳ್ಳಬೇಕು. ಈ ಕೆಳಗಿನ ಸೂತ್ರಗಳನ್ನು ಪಾಲಿಸಿ.

೧. ಪ್ರಕೃತಿ ನಿರ್ಮಿಸಿದ ನಿಮ್ಮ ಶರೀರ ಮತ್ತು ಹಿನ್ನೆಲೆಯನ್ನು, ಯಾವುದೇ ಷರತ್ತಿಲ್ಲದೆ ಒಪ್ಪಿಕೊಳ್ಳಿ. ನಿಮ್ಮ ಶರೀರದ ಎತ್ತರ, ಅಂದಚಂದ, ನ್ಯೂನತೆಗಳಿಗೆ ನೀವು ಹೊಣೆ ಅಲ್ಲ. ನಿಮ್ಮ ಹುಟ್ಟಿನ ಹಿನ್ನೆಲೆಗೆ ನೀವು ಜವಾಬ್ದಾರರಲ್ಲ.

೨. ಲಭ್ಯವಿರುವ ಉಡುಗೆತೊಡುಗೆಗಳಿಂದ ಅಲಂಕಾರಿಕ ವಸ್ತುಗಳಿಂದ ನಿಮ್ಮ ದೇಹವನ್ನು ಅಲಂಕರಿಸಿ, ಸದಭಿರುಚಿಯ ಅಲಂಕಾರ ನಿಮಗೆ ಶೋಭೆಯನ್ನು ತರುತ್ತದೆ.

೩. ನಿಮ್ಮ ನಡೆ-ನುಡಿ, ಜ್ಞಾನ-ಕೌಶಲಗಳನ್ನು ಹೆಚ್ಚಿಸಿಕೊಳ್ಳಿ. ಸರಳವಾಗಿ, ಸುಂದರವಾಗಿ, ಸ್ಪಷ್ಟವಾಗಿ, ಕೇಳುವುದಕ್ಕೆ ಹಿತವಾಗಿರುವಂತೆ ಮಾತನಾಡಿ, ನಿಮ್ಮ ಭಾಷಾ ಸಾಮರ್ಥ್ಯವನ್ನು ಹೆಚ್ಚಿಸಿಕೊಳ್ಳಿ. ಒಂದಕ್ಕಿಂತ ಹೆಚ್ಚಿನ ಭಾಷೆಗಳನ್ನು ಕಲಿಯಿರಿ. ಯಾವುದೇ ಸನ್ನಿವೇಶ-ಸಂದರ್ಭವಿರಲಿ ಪ್ರತಿಯೊಬ್ಬರೊಡನೆ, ಅವರು ದೊಡ್ಡವರಿರಲಿ, ಚಿಕ್ಕವರಿರಲಿ, ಅಧಿಕಾರದಲ್ಲಿರುವವರಾಗಲಿ, ಶ್ರೀಮಂತರಾಗಲಿ, ಬಡವರಾಗಲೀ, ಪ್ರೀತಿ, ಗೌರವಗಳಿಂದ ಮಾತನಾಡಿಸಿ, ಸರಳ ಸಂಭಾಷಣೆಯನ್ನು ಮಾಡಲು ಶಕ್ತರಾಗಿ, ಮಾತುಬಲ್ಲವನನ್ನ ಜನ ಮೆಚ್ಚುತ್ತಾರೆ. ಹಾಗೇ ಹೆಚ್ಚು ತಿಳುವಳಿಕೆಯುಳ್ಳವರನ್ನು ಹೆಚ್ಚು ಕೌಶಲವುಳ್ಳವರನ್ನು ಜನ ಗೌರವಿಸುತ್ತಾರೆ. ಸಣ್ಣಪುಟ್ಟ ರಿಪೇರಿಗಳನ್ನು ಮಾಡುವುದನ್ನು ಕಲಿತುಕೊಳ್ಳಿ. ಎಲೆಕ್ಟ್ರಿಕ್ ಸಾಮಾನುಗಳು, ರೇಡಿಯೋ, ಟೀವಿ, ಫ್ರಿಜ್, ಫ್ಯಾನ್, ಸೈಕಲ್, ಸ್ಕೂಟರ್, ಇತ್ಯಾದಿ ವಸ್ತುಗಳನ್ನು ರಿಪೇರಿ ಮಾಡುವುದನ್ನು ಕಲಿಯಿರಿ. ಜನ ನಿಮ್ಮನ್ನು ಹುಡುಕಿಕೊಂಡ ಬರುತ್ತಾರೆ. ಸಮಾಜಸೇವೆಯೂ ಆಗುತ್ತದೆ. ಸಂಪಾದನೆಯೂ ಆಗುತ್ತದೆ.

೪. ಯಾವುದಾದರೊಂದು ಹವ್ಯಾಸವನ್ನು ಬೆಳೆಸಿಕೊಳ್ಳಿ. ಸಂಗೀತ, ಹಾಡುಗಾರಿಕೆ, ನೃತ್ಯ, ಚಿತ್ರಕಲೆ, ರಂಗೋಲಿ, ಸ್ಟಾಂಪ್ ಕಲೆಕ್ಷನ್ ಯಾವುದಾದರೂ ಅಪೂರ್ವ ವಸ್ತುಗಳನ್ನು ಸಂಗ್ರಹಿಸುವುದು. ಒಳಾಂಗಣ ಅಥವಾ ಹೊರಾಂಗಣ ಕ್ರೀಡೆ, ಮಿಮಿಕ್ರಿ, ಅಭಿನಯ ಇತ್ಯಾದಿ. ಜನಗಳಿಗೆ ಮನರಂಜನೆಯನ್ನು ನೀಡಬಲ್ಲ ಯಾವುದೇ ಹವ್ಯಾಸ, ಕಲೆ ನಿಮಗೆ ಜನಪ್ರಿಯತೆಯನ್ನು ತಂದು ಕೊಡುತ್ತದೆ. ನಿಮ್ಮ ಕೊರತೆ ನ್ಯೂನತೆಗಳನ್ನು ಅದು ಪರಿಣಾಮಕಾರಿಯಾಗಿ ಮುಚ್ಚಿಹಾಕುತ್ತದೆ.

೫. ಸಹಾಯ, ಸೇವೆ, ಸಹಾನುಭೂತಿ, ದಯೆ, ಅನುಕಂಪ ಇವನ್ನು ಮಾನವೀಯ ಗುಣಗಳು ಎನ್ನುತ್ತಾರೆ. ಇವನ್ನು ಪ್ರದರ್ಶಿಸುವ ವ್ಯಕ್ತಿಯನ್ನು, ಜನರು ದೇವರ ಸಮಾನ ಎಂದು ಗುರುತಿಸುತ್ತಾರೆ. ಮರ‍್ಯಾದೆ,ಗೌರವ, ಮಾನ್ಯತೆಯನ್ನು ನೀಡಲು ಮುಂದಾಗುತ್ತಾರೆ. ಅದಕ್ಕಿಂತ ಮುಖ್ಯವಾಗಿ, ನಾವು ಕಷ್ಟ ನೋವಿನಲ್ಲಿರುವ ವ್ಯಕ್ತಿ-ವ್ಯಕ್ತಿಗಳಿಗೆ ನಮ್ಮ ಕೈಲಾದ ಕಿಂಚಿತ್ ಸಹಾಯವನ್ನು ಮಾಡಿದರೆ, ದಯೆ ಸಹಾನುಭೂತಿಯನ್ನು ತೋರಿಸಿದರೆ ನಮ್ಮ ಸ್ವಾಭಿಮಾನ, ಆತ್ಮವಿಶ್ವಾಸ ದ್ವಿಗುಣಗೊಳ್ಳುತ್ತದೆ.

೬. ಯಾವುದೇ ಕೆಲಸ ಚಟುವಟಿಕೆಯನ್ನು ಅಚ್ಚುಕಟ್ಟಾಗಿ ಮಾಡಿ ವಿಶೇಷ ರೀತಿಯಲ್ಲಿ ಮಾಡಿ ಆಗ ಅದನ್ನು ಯಾರಾದರೂ ಮೆಚ್ಚುತ್ತಾರೆ. ಶ್ಲಾಘಿಸುತ್ತಾರೆ. ಹಾಗೇ ನೀವೂ ನಿಮ್ಮನ್ನು ಶ್ಲಾಘಿಸಿಕೊಳ್ಳುವ ಅಭ್ಯಾಸ ಮಾಡಿ. ಪ್ರತಿ ಶ್ಲಾಘನೆ/ಮೆಚ್ಚುಗೆಯಿಂದ ಕೀಳರಿಮೆ ಕರಗುತ್ತದೆ. ಸ್ವಾಭಿಮಾನ ಹೆಚ್ಚುತ್ತದೆ.

೭. ನಿಮ್ಮಿಂದ ಯಾವುದೇ ತಪ್ಪು, ಅಚಾತುರ್ಯವಾಗದಂತೆ ಎಚ್ಚರವಹಿಸಿ. ಆಕಸ್ಮಿಕವಾಗಿ ತಪ್ಪು, ಅಚಾತುರ್ಯವಾದಾಗ, ಸಂಬಂಧಪಟ್ಟವರ ಬೆಷರತ್ ಕ್ಷಮೆಯಾಚಿಸಿ. ಅದು ನಿಮಗಿರುವ ಗೌರವವನ್ನು ಹೆಚ್ಚಿಸುತ್ತದೆ. ತಪ್ಪಿತಸ್ಥ ಭಾವನೆಯನ್ನು ನಿಮ್ಮಿಂದ ದೂರ ಮಾಡುತ್ತದೆ.