ಭಾರತದ  ಇತರ ರಾಜ್ಯಗಳಿಗೆ ಹೋಲಿಸಿದರೆ ಕರ್ನಾಟಕ ಜಾನಪದದ ಸಂಗ್ರಹ ಅಧ್ಯಯನ ಮತ್ತು ಪ್ರಕಟಣೆಗಳು ಮುಂಚೂಣಿಯಲ್ಲಿವೆ ಎಂಬ ಮಾತನ್ನು ವಿದ್ವಾಂಸರು ಹೇಳುತ್ತಾರೆ.  ಕನ್ನಡ ಜಾನಪದ ಒಳಗೊಳ್ಳುವ ಮೌಖಿಕ ಸಾಹಿತ್ಯ, ಭೌತಿಕ ಸಂಸ್ಕೃತಿಕ, ಸಾಮಾಜಿಕ ಸಂಪ್ರದಾಯಗಳು ಮತ್ತು ರಂಗ ಪ್ರದರ್ಶನ ಕಲೆಗಳು ಈ ವರ್ಗಗಳಲ್ಲಿ ವ್ಯವಸ್ಥಿತವಾದ ಅಧ್ಯಯನ ನಡೆದಿರುವುದು ನಿಜ. ಕನ್ನಡದ ಜನಪದ ಮಹಾಕಾವ್ಯಗಳು, ತುಳುವಿನ ಸಿರಿ ಮಹಾಕಾವ್ಯ ಹಾಗೂ ಧಾರ್ಮಿಕ ರಂಗಭೂಮಿ ಸಂಪ್ರದಾಯಗಳಿಗೆ ಸಂಬಂಧಪಟ್ಟಂತೆ ಮಹತ್ವದ ಗ್ರಂಥಗಳು ಪ್ರಕಟವಾಗಿವೆ. ಹೀಗೆ ಕರ್ನಾಟಕ ಜಾನಪದ ಸಂಗ್ರಹ ಮತ್ತು ಅಧ್ಯಯನ ಮುಂಚೂಣಿಯಲ್ಲಿದೆ ಎಂದು ಹೇಳುತ್ತಿರುವಾಗಲೇ ಶ್ರೀಮತಿ ಯು.ವರಮಹಾಲಕ್ಷ್ಮೀ ಹೊಳ್ಳ ಅವರು ಸಂಪಾದಿಸಿ ಕೊಟ್ಟಿರುವ “ಅಕ್ಕ ಕುಂಕುಮದಕ್ಕ” ಕೃತಿಯನ್ನು ನೋಡಿದಾಗ ಜಾನಪದ ಹಾದಿಯಲ್ಲಿ ನಾವು ಇನ್ನಷ್ಟು ದೂರ ಸಾಗಬಹುದಾಗಿದೆ ಎಂಬ ಸಂತೋಷದ ಸೂಚನೆ ದೊರೆಯುತ್ತದೆ.

ಕುಂದನಾಡಿನ ಸುಂದರ ಹಾಡುಗಳ ಈ ಸಂಗ್ರಹವನ್ನು ಓದಿದಾಗ ಕರ್ನಾಟಕದಲ್ಲಿ ಇಂತಹ ಸಾಂಸ್ಕೃತಿಕವಾಗಿ ಮತ್ತು ಸಾಹಿತ್ಯಕವಾಗಿ ಸಂಪದ್ಭರಿತವಾದ ಅಂದದ, ಕುಂದದ ಜಗತ್ತು ಇನ್ನೆಷ್ಟು ಇರಬಹುದು ಎಂಬ ಅಚ್ಚರಿ ಮೂಡುತ್ತದೆ.  ನಮ್ಮ ನಾಡಿನ ಪ್ರಾದೇಶಿಕ ಜನಪದ ಸಾಹಿತ್ಯದ ಐಸಿರಿಯ ಸೊಬಗನ್ನು ಕಣ್ಣಿಗೆ ಕಟ್ಟುವಂತೆ ಈ ಸಂಕಲನದ ಹಾಡುಗಳು ಎತ್ತಿ ತೋರಿಸುತ್ತಿವೆ.

ಕುಂದಾಪೂರ ಪರಿಸರದ ಜಾನಪದ ಮತ್ತು ಸಂಸ್ಕೃತಿ ಅಧ್ಯಯನಕ್ಕೆ ಅದರದ್ದೇ ಆದ ವಿಶಿಷ್ಟ ಸ್ಥಾನವಿದೆ. ಗುಂಡ್ಮಿ ಚಂದ್ರಶೇಖರ ಐತಾಳ, ಕನರಾಡಿ ವಾದಿರಾಜ ಭಟ್ಟ, ಎ.ವಿ.ನಾವಡ, ಶ್ರೀಮತಿ ಗಾಯತ್ರಿ ನಾವಡ ಮೊದಲಾದವರು ಕುಂದ ಪರಿಸರದ ಹಾಡುಗಳನ್ನು ಸಂಗ್ರಹಿಸಿ ಪ್ರಕಟಿಸಿದ್ದಾರೆ.  ಹಾಡುಗಳು ಪಠ್ಯಗಳ ಜೊತೆಗೆ ಸಾಂದರ್ಭಿಕ ವಿವರಗಳನ್ನು, ಕಲಾವಿದ ಕೇಂದ್ರಿತ ಮಾಹಿತಿಗಳನ್ನು ನೀಡಿ ಅಚ್ಚುಕಟ್ಟಾದ ರೀತಿಯಲ್ಲಿ ಗ್ರಂಥಗಳನ್ನು ಪ್ರಕಟಿಸಿದ್ದಾರೆ.  ಸಾಂಸ್ಥಿಕವಾಗಿ ನೋಡುವುದಾದರೆ ಬಸ್ರೂರಿನ ಶಾರದಾ ಕಾಲೇಜು, ಕುಂದಾಪೂರದ ಭಂಡಾರ್ಕಾರ್ಸ್ ಕಾಲೇಜು ಮತ್ತು ಕುಂದ ಅಧ್ಯಯನ ಕೇಂದ್ರವನ್ನು ವಿಶೇಷವಾಗಿ ಉಲ್ಲೇಖಿಸಬಹುದು. ಕುಂದಾಪೂರ ಪರಿಸರದ ಜಾನಪದ ಜಗತ್ತಿನ ಸಾಂಸ್ಕೃತಿಕ ವಿವರಗಳನ್ನು ಸಂಗ್ರಹಿಸಿ ಅಧ್ಯಯನದ ಈ ಪರಂಪರೆಯನ್ನು ಸಮರ್ಪಕವಾಗಿ ಮುನ್ನಡೆಸುತ್ತಿರುವ ಕುಂದ ಅಧ್ಯಯನ ಕೇಂದ್ರದ ನಿರ್ದೇಶಕಿ ಶ್ರೀಮತಿ ಯು.ವರಮಹಾಲಕ್ಷ್ಮೀ ಹೊಳ್ಳ ಅವರು ನಮ್ಮೆಲ್ಲರ ಅಭಿಮಾನಕ್ಕೆ ಪಾತ್ರರಾಗಿದ್ದಾರೆ.  ಪ್ರಾದೇಶಿಕ ಅಧ್ಯಯನವು ಮಹತ್ವವನ್ನು ಪಡೆದುಕೊಳ್ಳುತ್ತಿರುವ ಇಂದಿನ ಸಂದರ್ಭದಲ್ಲಿ “ಅಕ್ಕ ಕುಂಕುಮದಕ್ಕ” ಕೃತಿಗೆ ಅನನ್ಯವಾದ ಸ್ಥಾನವಿದೆ.  ಕನ್ನಡ ನಾಡಿನಲ್ಲಿ ಬಹು ಭಾಷೆಗಳು, ಬಹು ಸಂಸ್ಕೃತಿಗಳು, ಬಹು ಜೀವನ ವಿಧಾನಗಳು ಯಾವತ್ತೂ ಪ್ರಚಲಿವೂ, ಜೀವಂತವೂ ಆಗಿರುವ ಸನ್ನಿವೇಶಗಳನ್ನು ಇಲ್ಲಿನ ಕುಂದನಾಡಿನ ಹಾಡುಗಳು ಭಾಷಿಕ ಸೊಗಸು ಮತ್ತು ಅಭಿವ್ಯಕ್ತಿ ವಿಧಾನಗಳು ನಮ್ಮ ಗಮನಕ್ಕೆ ತರುತ್ತವೆ.

“ಅಕ್ಕ ಕುಂಕುಮದಕ್ಕ”  ಹೆಸರು ಲಯಬದ್ಧವೂ, ಅರ್ಥಪೂರ್ಣವೂ ಆಗಿದೆ.  ಈ ಹೆಸರು  ತಾಯ್ತನದ ಎಲ್ಲಾ ಹಂಬಲ ಮತ್ತು ಕನಸುಗಳನ್ನು ಒಂದು ರೂಪಕವಾಗಿ ಮುಂದಿಡುತ್ತದೆ. ಈ ಸಂಕಲನದಲ್ಲಿ ಮುಖ್ಯವಾಗಿ ಮಹಿಳಾ ಜಗತ್ತಿನ ಸಂವೇದನೆಗಳಿವೆ.  ಮಹಿಳೆಯರ ಬದುಕು, ವೃತ್ತಿ, ಹಬ್ಬ ಹರಿದಿನಗಳು, ಕೌಟುಂಬಿಕ ಸಂಬಂಧಗಳ ಹಿನ್ನೆಲೆಯಲ್ಲಿ, ಒಟ್ಟಾರೆ ಮಹಿಳೆಯರ ಲೋಕದೃಷ್ಟಿ ಪ್ರಕಟವಾಗಿರುವುದನ್ನು ನಾವು ಕಾಣುತ್ತೇವೆ.  ಹೆಣ್ಣಿನ ಅಸಹಾಯಕತೆ ಮತ್ತು ಪ್ರತಿಭಟನೆಯನ್ನು, ಪ್ರೀತಿ ಮತ್ತು ದ್ವೇಷವನ್ನು, ಅಂತರಂಗ ಮತ್ತು ಬಹಿರಂಗವನ್ನು ಪುರಾಣ ಮತ್ತು ವಾಸ್ತವವನ್ನು ಏಕ ಕಾಲಕ್ಕೆ ಇಲ್ಲಿನ ಹಾಡುಗಳು ಬಿಚ್ಚಿಡುತ್ತವೆ.  ಪುರುಷ ಪ್ರಧಾನ ವ್ಯವಸ್ಥೆಯಲ್ಲಿ ಹೆಣ್ಣಿನ ಬದುಕು ಸುಲಭವೂ ಅಲ್ಲ, ಸರಳವೂ ಅಲ್ಲ ಎಂಬ ಸತ್ಯವನ್ನು ಇಡಿಯ ಸಂಕಲನವು ತಾತ್ವಿಕತೆಯ ರೂಪದಲ್ಲಿ ಮುಂದಿಡುತ್ತದೆ. ಹೆಣ್ಣಿನ ನೋವು, ನಿರಾಶೆ, ಅಸಹಾಯಕತೆಗಳು ಮಿಡಿಯುತ್ತಿದ್ದರೂ ಬದುಕಿನ ಸಂಭ್ರಮ ಮತ್ತು ತಾಯ್ತನದ ಪ್ರೀತಿಯನ್ನು ಇಲ್ಲಿನ ಬಹುತೇಕ ಹಾಡುಗಳು ಒಂದು ದರ್ಶನವಾಗಿ ಮುಂದಿಡುತ್ತವೆ.  ಹೆಣ್ಣಿನ ಸಾಂಸ್ಕೃತಿಕ ಬದುಕಿನ ಈ ತಾತ್ವಿಕತೆ ಮತ್ತು ದರ್ಶನವನ್ನು ಗ್ರಹಿಸುವಲ್ಲಿ ಸಂಪಾದಕಿ ಸಂಪೂರ್ಣ ಯಶಸ್ವಿಯಾಗಿದ್ದಾರೆ.

ಕುಂದನಾಡಿನ ಹಾಡುಗಳ ಸೊಗಸು ಮರೆಯಾಗುತ್ತಿದೆ ಎಂಬ ಆತಂಕದಿಂದಲೇ, ಶ್ರೀಮತಿ ಹೊಳ್ಳ, ಸಂಗ್ರಹದ ಈ ಕೆಲಸವನ್ನು ಕೈಗೆತ್ತಿಕೊಂಡಿದ್ದಾರೆ. ಹೀಗೆ ಮಾಡುವಾಗ ಅತಿಯಾದ ವೈಭವೀಕರಣದ ಅಪಾಯಕ್ಕೆ ಒಳಗಾಗದೆ, ಲೇಖಕಿಯೂ ಕಥೆಗಾರ್ತಿಯೂ ಆಗಿರುವ ಸಂಪಾದಕಿ ಸ್ತ್ರೀಪರ ಚಿಂತನೆಯ ಒಂದು ಎಚ್ಚರದಿಂದಲೇ ಈ ಕಾರ್ಯವನ್ನು ನಿರ್ವಹಿಸಿದ್ದಾರೆ. ಈ ಜವಾಬ್ದಾರಿಯ ಭಾಗವಾಗಿಯೇ ಅವರು ಹೊರ ತಂದಿರುವ ಜನಪದ ಹಾಡುಗಳು ಧ್ವನಿಸುರುಳಿಗಳನ್ನು ಗಮನಿಸಬಹುದು.

ಹಾಡುಗಳ ಪಠ್ಯ ಮತ್ತು ವಿಶ್ಲೇಷಣಾತ್ಮಕ ಮಾಹಿತಿಗಳ ದೃಷ್ಟಿಯಿಂದ ಈ ಸಂಕಲನದಲ್ಲಿ ಎರಡು ಭಾಗಗಳಿವೆ. ಆರಂಭದ ಪೀಠಿಕೆಯ ಭಾಗದಲ್ಲಿ ಸಂಪಾದಕಿ ಇಡಿಯ ಸಂಕಲನದ ಹಾಡುಗಳನ್ನು ಗ್ರಹಿಸಬೇಕಾದ ನೆಲೆಗಟ್ಟಿನ ಕುರಿತಂತೆ ಪ್ರವೇಶಿಕೆಯ ಮಾತುಗಳನ್ನು ಹೇಳಿದ್ದಾರೆ. ಕುಂದನಾಡಿನ ಚಾರಿತ್ರಿಕತೆ, ಜನಪದ ಹಾಡುಗಳ ವಸ್ತು- ವೈವಿಧ್ಯ, ಭಾಷೆಯ ಚೆಲುವು, ಸಾಮಾಜಿಕ ಹಾಗು ಪೌರಾಣಿಕ ಕಥಾನಕಗಳು, ಜೀವನಾವರ್ತನ ಆಚರಣೆಯಲ್ಲಿ ಬಹಳ ಮುಖ್ಯವಾಗಿರುವ ಮದುವೆಯ ಹಾಡುಗಳು ಮೊದಲಾದ ಅಂಶಗಳಿಗೆ ಸಂಬಂಧಪಟ್ಟ ಹಾಡುಗಳ ಭಾವನಾತ್ಮಕ ವಿವೇಚನೆಯನ್ನು ಸಂಪಾದಕಿ ನಡೆಸಿದ್ದಾರೆ. ಪೌರಾಣಿಕ ಪ್ರಸಂಗಗಳು ಕುಂದ ಮನಸ್ಸುಗಳಲ್ಲಿ ಮರು ಜೀವ ಪಡೆಯುವ ಪ್ರಕ್ರಿಯೆಯನ್ನು ವಿವೇಚಿಸಿದ್ದಾರೆ.  ಹೆಣ್ಣಿನ ದುರಂತವನ್ನು ಮತ್ತು ಪ್ರೀತಿಯ ಉನ್ನತಿಕೆಯನ್ನು ಪ್ರಸ್ತುತ ಪಡಿಸುವ ಕಥಾರೂಪದ ಹಾಡುಗಳನ್ನು ಚರ್ಚಿಸಿರುವ ಬಗೆಯೂ ಸೂಕ್ತವಾಗಿದೆ.  ಒಂದು ದೃಷ್ಟಿಯಲ್ಲಿ ಕಥೆ ಮತ್ತು ಹಾಡುಗಳಿಗೆ ಸಾಂದರ್ಭಿಕ ಟಿಪ್ಪಣಿಗಳಂತಿರುವ ವಿವರಣೆಯು ಓದುಗರಿಗೆ ವಿಶಿಷ್ಟ ಭಾಷಾಭಿವ್ಯಕ್ತಿಯನ್ನು ಅರ್ಥಮಾಡಿಕೊಳ್ಳಲು ಸಹಾಯಕವಾಗುವಂತಿದೆ. ಇಲ್ಲಿನ ಹಾಡುಗಳ ಭಾಷೆ ಮತ್ತು ಭಾವ ಸಂಪತ್ತು ಕುಂದ ಪರಿಸರದ ಜನರಂತೆ, ಅವರ ತಿಂಡಿ ತಿನಿಸುಗಳಂತೆ ಸಮೃದ್ಧ, ಸ್ವಾದಿಷ್ಟ.

ವಸ್ತುವಿನ ದೃಷ್ಟಿಯಿಂದ ಪ್ರಧಾನವಾಗಿ ಇಲ್ಲಿನ ಹಾಡುಗಳನ್ನು ಮದುವೆಯ ಹಾಡುಗಳು (ಹೆಣ್ಣು ಕೇಳಲು ಹೋಗುವ ಹಾಡು, ಅಕ್ಕನನ್ನು ತಮ್ಮ ಮದುವೆಗೆ ಕರೆಯ ಹೋಗುವ ಹಾಡು, ಕೊಡ ನೀರ-ಬಳುಮೀಸುವ ಹಾಡು, ಒನಕೆ ನೀರಾಟದ ಹಾಡು, ದೂರುವ ಹಾಡು, ಧಾರೆ ಹಾಡು, ಮಗಳನ್ನು ಗಂಡನ ಮನೆಯಲ್ಲಿ ಬಿಡುವ ಹಾಡು, ಹೆಣ್ಣು ಕಳುಹಿಸುವ ಹಾಡು, ಸಮ್ಮಾನದ ಹಾಡು, ಜವಂತಿ ಆದಾಗ ಹಾಡುವ ಹಾಡು, ಬಸುರಿಯ ಹಾಡು, ಬಯಕೆ ಹಾಡು, ತೊಟ್ಟಿಲ ಹಾಡು ಇತ್ಯಾದಿ), ಕೌಟುಂಬಿಕ ನೆಲೆಯ ಹಾಡುಗಳು (ಅತ್ತೆ ಸೊಸೆ, ಭಾವ ಮೈದಿನ, ಒಡಹುಟ್ಟು ಹಾಡು ಇತ್ಯಾದಿ), ವೃತ್ತಿ ಸಂಬಂಧಿ ಹಾಡುಗಳು (ನುರಿ ನುರಿ ಭತ್ತವೆ ಹಾಡು, ಬೀಜ ಬಿತ್ತುವ ಹಾಡು ಇತ್ಯಾದಿ), ಪೌರಾಣಿಕ ಹಾಡುಗಳು (ಮಹಾಭಾರತ , ಕೃಷ್ಣ ಪಾರಿಜಾತ, ರಾಮಾಯಣ ಇತ್ಯಾದಿ), ಮತ್ತು ಕಥನಾತ್ಮಕ ಹಾಡುಗಳು (ಪಟ್ಟಣ ಶೆಟ್ಟಿ  ಹೊನ್ನಮ್ಮ, ಗಿರಿಜಾಬಾಲಿ, ಕುಸುಮ ಬಾಲೆ, ಕೆರೆಗೆ ನರಬಲಿ, ಕಂಪಲುರಾಯ, ಹುಲಿದೇವರ ಹಾಡು, ಕೊರತಿ ಕೊರಮ ಇತ್ಯಾದಿ), ವಿಂಗಡಿಸಬಹುದು.  ಆದರೆ ಇಲ್ಲಿನ ಎಲ್ಲ ರಚನೆಗಳನ್ನು ಪೋಣಿಸಿ ಪೋಷಿಸುತ್ತ ಬಂದುದು ಹೆಣ್ಣಿನ ಮನಸ್ಸು ಎಂಬುದು ಮುಖ್ಯ.  ಹಾಗಾಗಿ ಮದುವೆ, ಕುಟುಂಬ, ವೃತ್ತಿ, ಅಧಿಕಾರ, ಸಾಂಸ್ಕೃತಿಕ ವೀರರು, ಮೊದಲಾದ ಪರಿಕಲ್ಪನೆಗಳ ಕುರಿತ ಮಹಿಳೆಯರ ಲೋಕದೃಷ್ಟಿಯನ್ನು ತಿಳಿಯಬಹುದು. ಈ ಹಿನ್ನಲೆಯಲ್ಲಿ ಈ ಸಂಕಲನಕ್ಕೆ ಸಾಂಸ್ಕೃತಿಕ ಮಹತ್ವವಿದೆ.

ಸದಾ ಪೋಷಿಸುವ ಮತ್ತು ಸಂರಕ್ಷಿಸುವ ಹಂಬಲವು ಹೆಣ್ಣಿನ ಅನನ್ಯ ಗುಣ ಎಂದು ಒಪ್ಪಿಕೊಳ್ಳುವುದಾದರೆ, ಇದೇ ಹಂಬಲದಿಂದ  “ಅಕ್ಕ ಕುಂಕುಮದಕ್ಕ”  ಸಂಕಲನವನ್ನು ಸಂಪಾದಿಸಿಕೊಟ್ಟಿರುವ ಶ್ರೀಮತಿ ಯು.ವರಮಹಾಲಕ್ಷ್ಮೀ ಹೊಳ್ಳ ಅವರ ಜಾನಪದ ಆಸಕ್ತಿ ಮತ್ತು ಸಂಸ್ಕೃತಿ ಪ್ರೀತಿ ಕುಂದನಾಡಿನಲ್ಲಿ ಕುಂದದಿರಲಿ ಎಂದು ಮನಸಾ ಹಾರೈಸುತ್ತೇನೆ. ಕುಂದಜಗತ್ತಿನ ಜಾನಪದ ಸೊಬಗು ಎಲ್ಲ ವೈವಿದ್ಯಗಳೊಂದಿಗೆ ಶ್ರೀಮತಿ ಹೊಳ್ಳ ಅವರ ಮುಂದಿನ ಸಂಸ್ಕೃತಿ ಸಂಬಂಧಿ ಕೆಲಸಗಳಲ್ಲಿ ಅನಾವರಣಗೊಳ್ಳಲಿ ಎಂದು ಆಶಿಸುತ್ತೇನೆ.

ದಿನಾಂಕ : 14-10-2004
ಮಂಗಳ ಗಂಗೋತ್ರಿ

ಪ್ರೋ. ಕೆ.ಚಿನ್ನಪ್ಪಗೌಡ,
ಅಧ್ಯಕ್ಷರು, ಕನ್ನಡ ವಿಭಾಗ,
ಮಂಗಳೂರುವ ವಿಶ್ವವಿದ್ಯಾನಿಲಯ